ದಿನೇಶ್ ಹಾಗೂ ಅವರ ಹೆಂಡತಿ ಸುಶೀಲಾ 3 ತಿಂಗಳ ಹಿಂದಷ್ಟೇ ಮದುವೆಯಾದ ತಮ್ಮ ಮಗಳ ಗೃಹಸ್ಥ ಜೀವನವನ್ನು ಕಣ್ಣಾರೆ ಕಾಣಲು ಶಿವಮೊಗ್ಗಕ್ಕೆ ಹೊರಟಿದ್ದರು. ಅವರ ಪ್ರಯಾಣದಲ್ಲಿನ ಒಟ್ಟಾರೆ ಮಾತುಕಥೆಯ ವಿಷಯ ಮಗಳು ತನ್ನ ಕೌಟುಂಬಿಕ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತಿರಬಹುದು ಎಂಬುದಾಗಿತ್ತು. ಮದುವೆಗೆ ಮುಂಚೆ ಆಕೆಗೆ ಓದು ಬಿಟ್ಟು ಬೇರಾವುದಕ್ಕೂ ಹೆಚ್ಚಿನ ಸಮಯ ಸಿಗುತ್ತಿರಲಿಲ್ಲ. ಅವರು ಮಗಳಿಗೆ ಏನೆಲ್ಲವನ್ನು ಕಲಿಸಿದ್ದರು. ಆದರೆ ತಿಳಿದುಕೊಳ್ಳುವುದರಲ್ಲಿ ಮತ್ತು ಜವಾಬ್ದಾರಿ ನಿಭಾಯಿಸುವುದರಲ್ಲಿ ವ್ಯತ್ಯಾಸವಿದೆ. ಇದೇ ವ್ಯತ್ಯಾಸ ಅವರನ್ನೀಗ ಕಂಗೆಡೆಸಿಬಿಟ್ಟಿತ್ತು. ತಾವು ಅಲ್ಲಿ ಹೋಗಿ ಏನೇನು ನೋಡಬೇಕಾಗುತ್ತದೆ ಎಂಬ ಆತಂಕ ಅವರನ್ನು ಕಾಡುತ್ತಿತ್ತು. ಆದರೆ ಅಲ್ಲಿಗೆ ಹೋಗಿ ನೋಡುತ್ತಿದ್ದಂತೆ ಅವರಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ! ಮಗಳು ಸೀಮಾಳ ಮನೆ ಬಹಳ ವ್ಯವಸ್ಥಿತವಾಗಿ ಕಾಣುತ್ತಿತ್ತು. ಅದಕ್ಕೆ ಕಾರಣ ಬಹುಬೇಗ ಅವರ ಗಮನಕ್ಕೆ ಬಂತು. ಮನೆಗೆಲಸಗಳನ್ನು ಮಗಳು ಎಷ್ಟು ಅರಿತಿದ್ದಳೊ, ಅಳಿಯ ಕೂಡ ಅಷ್ಟೇ ಚೆನ್ನಾಗಿ ತಿಳಿದುಕೊಂಡಿದ್ದ. ಮನೆಯ ಜವಾಬ್ದಾರಿ ಕೇವಲ ಸೀಮಾಳದ್ದಷ್ಟೇ ಆಗಿರಲಿಲ್ಲ, ಅಳಿಯ ಕೂಡ ಅದನ್ನು ಸಮನಾಗಿ ಹಂಚಿಕೊಂಡು ಮಾಡುತ್ತಿದ್ದ.
ಅಳಿಯ ಮಗಳು ಸೇರಿ ಕುಟುಂಬದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವುದನ್ನು ನೋಡಿ ಸುಶೀಲಾ ಬೆರಗಾಗಿ ಹೋಗಿದ್ದರು. ಮಹಿಳೆಗೆ ಇಂತಿಂಥ ಜವಾಬ್ದಾರಿ, ಪುರುಷನ ಹೊಣೆಗಾರಿಕೆ ಇಂಥದು ಎಂದು ವರ್ಗೀಕರಣ ಮಾಡುವುದರ ಬದಲು ಯಾರಿಗೆ ಯಾವ ಕೆಲಸ ಬರುತ್ತೋ ಅವರು ಅದನ್ನು ಮಾಡುತ್ತಾರೆ, ಯಾವುದನ್ನು ಮಾಡಲು ಬರುವುದಿಲ್ಲವೋ, ಅದನ್ನು ಮಾಡಲು ಕಲಿತು ಇಬ್ಬರು ಕೂಡ ಸಮರ್ಪಕವಾಗಿ ನಿಭಾಯಿಸುತ್ತಾರೆ. ಮಗಳು ಒಂದು ಕಡೆ ಗಾಡಿ ತೊಳೆದು ಅದರ ಸರ್ವಿಸಿಂಗ್‌ಮಾಡುತ್ತಿದ್ದರೆ, ಇತ್ತ ಅಳಿಯ ಕಸ ಗುಡಿಸಿ ಬಳಿಕ ತರಕಾರಿ ಹೆಚ್ಚುವುದರಲ್ಲಿ ಮಗ್ನರಾಗಿರುವುದನ್ನು ಕಂಡರು.
ಪತಿ ಮಾತ್ರವಲ್ಲ ಸಂಗಾತಿ ಕೂಡ
ರವಿ ಆರಂಭದಿಂದಲೇ ತರಬೇತಿಯಿಂದಾಗಿ ಹಾಗೂ ನೌಕರಿಯ ಕಾರಣದಿಂದಾಗಿ ಸದಾ ಕುಟುಂಬದಿಂದ ಹೊರಗೇ ಇರುತ್ತಿದ್ದ. ಅವನಿಗೆ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಬೇಕಾಗಿ ಬರುತ್ತಿತ್ತು. ಹೊರಗೆ ಊಟ ತಿಂಡಿ ತಿನ್ನಲು ಇಷ್ಟವಿಲ್ಲದೆ ತನಗೆ ಬೇಕಾದ ಆಹಾರನ್ನು ತಾನೇ ಸಿದ್ಧಪಡಿಸಿಕೊಳ್ಳುತ್ತಿದ್ದ. ಸೀಮಾಳೊಂದಿಗೆ ಮದುವೆಯ ಬಳಿಕ ಆದ ಒಂದು ಒಳ್ಳೆಯ ವಿಷಯವೆಂದರೆ, ಸರಿಯಾದ ಅರ್ಥದಲ್ಲಿ ಅವನು ಅವಳ ಸಂಗಾತಿಯಾದ. ಸೀಮಾಳ ತಂದೆತಾಯಿಯರು ಗಂಡಹೆಂಡತಿಯ ರೂಪದಲ್ಲಿ ಇಂತಹ ಜೋಡಿಯೊಂದನ್ನು ಕಲ್ಪನೆ ಮಾಡಿಕೊಳ್ಳಲು ಕೂಡ ಸಾಧ್ಯವಿರಲಿಲ್ಲ. ಅವರು ಖುಷಿಯಾಗಿರುವುದನ್ನು ನೋಡಿ ದಿನೇಶ್‌ತಮಗೆ ಈ ಯೋಚನೆ ಏಕೆ ಹೊಳೆಯಲಿಲ್ಲ ಎಂದು ವಿಚಾರ ಮಾಡತೊಡಗಿದರು.
ಪರಿವರ್ತನೆ ಎನ್ನುವುದು ಸಮಾಜದ ಒಂದು ನಿರ್ದಿಷ್ಟ ವ್ಯವಸ್ಥೆ ಅಥವಾ ಸ್ವರೂಪದಿಂದ ಬರುವುದಿಲ್ಲ. ಬದಲಾಗಿ ಅಲ್ಲಿನ ಸದಸ್ಯರ ಬದಲಾವಣೆಯ ಬೇಡಿಕೆಯನ್ನು ಇಡುತ್ತದೆ. ಒಂದುವೇಳೆ ಈ ಹೊಸ ಭೂಮಿಕೆಯ ಪ್ರಕಾರ ಅಳವಡಿಸಿಕೊಂಡರೆ ಜೀವನ ಸರಳ, ಸಹಜ ಮತ್ತು ಸುಲಭವಾಗುತ್ತದೆ.
ಹಿಂದಿನ ಕಾಲದಲ್ಲಿ ಏನಿತ್ತೋ, ಇಂದಿನ ಆಧುನಿಕ ಯುಗದಲ್ಲಿ ಏನಿದೆಯೊ ಅದು ಬಹಳಷ್ಟು ವ್ಯತ್ಯಾಸಗಳನ್ನು ಹೊಂದಿದೆ. ಮೊದಲು ಕುಟುಂಬಗಳಲ್ಲಿ ಮಹಿಳೆಯರ ಸಂಖ್ಯೆ ಎಷ್ಟು ಹೆಚ್ಚಿಗೆ ಇರುತ್ತಿತ್ತೆಂದರೆ, ಅವರಿಗೆ ಆಗ ಪುರುಷರ ನೆರವು ಪಡೆಯುವ ಅಗತ್ಯವೇ ಬೀಳುತ್ತಿರಲಿಲ್ಲ. ಮನೆಯ ಕೆಲಸ ಕಾರ್ಯಗಳಿಂದ ಅವರನ್ನು ದೂರವೇ ಇಡಲಾಗುತ್ತಿತ್ತು. ಸಣ್ಣ ಪುಟ್ಟ ಅಡೆತಡೆಗಳನ್ನು, ಕೌಟುಂಬಿಕ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳುತ್ತಿದ್ದರು. ಅವು ಪುರುಷರ ತನಕ ಹೋಗುತ್ತಲೇ ಇರಲಿಲ್ಲ.
ತಮ್ಮ ಕೆಲಸ ತಾವೇ ಮಾಡುವ ಅಭ್ಯಾಸ
ಅದಕ್ಕೆ ತದ್ವಿರುದ್ಧ ಎಂಬಂತೆ ಈಗ ಕುಟುಂಬದ ಜವಾಬ್ದಾರಿ ಗಂಡಹೆಂಡತಿ ಇಬ್ಬರೂ ಸೇರಿಯೇ ನಿಭಾಯಿಸುತ್ತಿದ್ದಾರೆ. ಯಾರ ಸಹಾಯ ದೊರೆಯದೆ ಇದ್ದಾಗ, ಯಾರ ಸಲಹೆಯೂ ದೊರೆಯದಿದ್ದಾಗ ಹೆಂಡತಿ ಗಂಡ ತನಗೆ ನೆರವಾಗಬೇಕೆಂದು ಅಪೇಕ್ಷಿಸುತ್ತಾಳೆ. ಆದರೆ ನನಗೆ ಈ ಎಲ್ಲ ಕೆಲಸಗಳು ಗೊತ್ತಿಲ್ಲ ಎಂದು ಗಂಡ ಸಿಡಿಮಿಡಿಗೊಳ್ಳುತ್ತಾನೆ.
ಅದೆಷ್ಟೋ ಹಿರಿಯರು ಹೇಳುತ್ತಿರುತ್ತಾರೆ. ಇಂದಿನ ನವ ವಿವಾಹಿತರನ್ನು ನೋಡು, ಮದುವೆ ಆಗುತ್ತಿದ್ದಂತೆ ಜಗಳ ಶುರು ಹಚ್ಚಿಕೊಂಡಿದ್ದಾರೆ. ನಾವು ಮದುವೆಯಾಗಿ 10 ವರ್ಷಗಳಾದರೂ ಪರಸ್ಪರರಿಗೆ ಎತ್ತರದ ಧ್ವನಿಯಲ್ಲಿ ಮಾತನಾಡಿರಲಿಲ್ಲ.
ಒಂದು ವೇಳೆ ಮದುವೆಯಾಗುತ್ತಿದ್ದಂತೆ ಜಗಳವಾಡುವ ಕಾರಣಗಳ ಬಗ್ಗೆ ಅವಲೋಕಿಸಿದಾಗ, ಅವರು ಜಗಳವಾಡುತ್ತಿರುವುದು ಚಿಕ್ಕಪುಟ್ಟ ಕಾರಣಗಳಿಗೆ. ಉದಾಹರಣೆಗೆ, `ನೀನು ಬಟ್ಟೆಗಳನ್ನು ಏಕೆ ಅಷ್ಟೊಂದು ಚೆಲ್ಲಾಪಿಲ್ಲಿ ಮಾಡ್ತೀಯಾ? ನೀನಿಂದು ಕೇವಲ ಒಂದೇ ಪಲ್ಯ ಏಕೆ ಮಾಡಿದ್ದೀಯಾ? ನೀನು ನಲ್ಲಿ ಬಂದ್‌ಮಾಡಿಲ್ಲ. ನೀನು ಶರ್ಟ್ ಇಸ್ತ್ರೀ ಮಾಡಿಲ್ಲ? ನಾನ್ಯಾಕೆ ಈರುಳ್ಳಿ ಹೆಚ್ಚಬೇಕು?’
ಇಂದು ಎಂತಹ ಒಂದು ಸ್ಥಿತಿಯೆಂದರೆ, ಮಹಿಳೆ ಚಿಕ್ಕಪುಟ್ಟ ಜವಾಬ್ದಾರಿಗಳಿಂದ ಹೈರಾಣಾಗಿ ಹೋಗಿದ್ದಾಳೆ. ಪುರುಷ ಅವಳ ಸ್ಥಿತಿಯನ್ನು ಅರಿತುಕೊಳ್ಳಲು ಸಿದ್ಧನಿಲ್ಲ. ಅವಳು ಹೈರಾಣಾಗಿದ್ದರೆ ನಾನೇನು ಮಾಡಲು ಸಾಧ್ಯ? ಅದು ಅವಳ ಕರ್ತವ್ಯ. ಅವಳ ಅಮ್ಮನು ಇದೇ ಕೆಲಸ ಮಾಡ್ತಿದ್ದಳು. ಈಗ ಈಕೆಗೆ ಮಾಡಲು ಏನು ತೊಂದರೆ? ಎಂದು ಪ್ರಶ್ನೆ ಮಾಡುತ್ತಾನೆ. ಅವಳ ತಾಯಿ ಏಕಾಂಗಿಯಾಗಿ ಅಷ್ಟೆಲ್ಲ ಕೆಲಸವನ್ನು ಮಾಡುತ್ತಿರಲಿಲ್ಲ. ಅವಳ ಜೊತೆಗೆ ಚಿಕ್ಕಮ್ಮ, ಅಜ್ಜಿ, ಅತ್ತಿಗೆ ಹೀಗೆ ಎಲ್ಲರೂ ಕೈಗೂಡಿಸಿ ಕೆಲಸ ಮಾಡುತ್ತಿದ್ದರು. ಈಗಲೂ ಕೂಡ ಹೆಚ್ಚಿನ ಹುಡುಗಿಯರು, ಮನೆ ಕುಟುಂಬಕ್ಕೆ ಸಂಬಂಧಪಟ್ಟ ಹೈಟೆಕ್ ಜ್ಞಾನದೊಂದಿಗೆ ಅತ್ತೆಮನೆಗೆ ಬರುತ್ತಾರೆ. ಮಗಳಿಗೆ ಉನ್ನತ ಶಿಕ್ಷಣ ಕೊಡಿಸುವುದರ ಜೊತೆ ಜೊತೆಗೆ ಅವಳಿಗೆ ವ್ಯಾವಹಾರಿಕ ಜ್ಞಾನವನ್ನು ಕೂಡ ಕೊಡಿಸುತ್ತಾರೆ. ಅದರಲ್ಲಿ ಮನೆಗೆಲಸಗಳು ಸೇರಿದಂತೆ ಉನ್ನತ ಸಂಸ್ಕಾರಗಳೂ ಸೇರಿಕೊಂಡಿರುತ್ತವೆ.
ವ್ಯಕ್ತಿತ್ವ ವಿಕಸನದ ಬಗ್ಗೆ ಗಮನ
ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು ಎಂಬ ಸಾಮಾನ್ಯ ಸಂಗತಿಯನ್ನು ಪೋಷಕರು ತಮ್ಮ ಗಂಡು ಮಕ್ಕಳಿಗೆ ಹೇಳಿ ಕೊಡುವುದಿಲ್ಲ. ಅವನ ಅವಶ್ಯಕತೆಗಳನ್ನು ಅಮ್ಮ, ಅಕ್ಕ, ತಂಗಿ ಮುಂತಾದವರೇ ಈಡೇರಿಸುತ್ತಾರೆ. ಬಟ್ಟೆಗಳಿಂದ ಹಿಡಿದು ಶೂ, ಸಾಕ್ಸ್ ಗಳ ಬಗ್ಗೆ ಮದುವೆಯ ಹಿಂದಿನ ದಿನದವರೆಗೂ ಅಮ್ಮ, ಅಕ್ಕ, ತಂಗಿಯರೇ ನಿಭಾಯಿಸುತ್ತಾರೆ. ಮದುವೆಯ ಬಳಿಕ ಈ ಕೆಲಸ ಕಾರ್ಯಗಳನ್ನು ಸೊಸೆ ಮಾಡುತ್ತಾಳೆ ಎಂಬ ಕಾರಣದಿಂದ ಅವರು ಈ ಕೆಲಸ ಮಾಡುತ್ತಾರೆ.
ಪಾರಂಪರಿಕ ಯೋಚನೆ ಎನ್ನುವುದು ಮರಳಿನಂತೆ. ಅದರ ಮೇಲೆ ಕೇವಲ ನಾವು ನಡೆಯುವುದಿಲ್ಲ. ಹಿಂದೆ ಹೆಜ್ಜೆ ಗುರುತುಗಳನ್ನು ಬಿಡುತ್ತೇವೆ. ಯಾವುದೇ ಮಹಿಳಾ ಮಂಡಳಿಯಲ್ಲಿ ಚರ್ಚಿಸುವ ಒಂದು ಸಾಮಾನ್ಯ ವಿಷಯವೆಂದರೆ, ತನ್ನ ಪತಿ/ಮಗ ವ್ಯಾಪಾರ ವಹಿವಾಟಿನಲ್ಲಿ ಮಗ್ನನಾಗಿ ಮನೆಯ ಕೆಲಸ ಕಾರ್ಯಗಳ ಬಗ್ಗೆ ಒಮ್ಮೆಯೂ ಯೋಚಿಸುವುದಿಲ್ಲ ಎಂಬುದು.
ಸ್ವಾವಲಂಬಿ ಆಗಬೇಕು
ಹೆಂಡತಿ ಉದ್ಯೋಗಸ್ಥೆಯಾಗಿರಬಹುದು ಅಥವಾ ಗೃಹಿಣಿ, ಗಂಡ ತನ್ನ ಕೆಲವು ಕೆಲಸಗಳನ್ನು ತಾನೇ ಮಾಡಲು ಕಲಿತುಕೊಂಡರೆ ಅಂದರೆ ಬಟ್ಟೆ, ಟವೆಲ್, ಟೈ ಮುಂತಾದವುಗಳನ್ನು ತಾನೇ ಎತ್ತಿಟ್ಟುಕೊಂಡರೆ ಅದೆಷ್ಟೋ ಸಮಸ್ಯೆಗಳು ತಂತಾನೇ ನಿವಾರಣೆ ಆಗುತ್ತವೆ. ಹೀಗಾದರೆ ಪುರುಷರಿಗೂ ಒಂದಿಷ್ಟು ಆತ್ಮವಿಶ್ವಾಸ ಬರುತ್ತದೆ. ಮಹಿಳೆಯರಿಗೆ ತಮಗಾಗಿ ಒಂದಿಷ್ಟು ಸಮಯ ಮೀಸಲಿಟ್ಟುಕೊಳ್ಳಲು ಅವಕಾಶ ದೊರೆಯುತ್ತದೆ. `ನನ್ನದೇನು, ಏನನ್ನಾದರೂ ತಿಂತಿನಿ, ಏನನ್ನಾದರೂ ಧರಿಸ್ತೀನಿ,’ ಎಂಬ ಭಾವನೆಯೊಂದಿಗೆ ಅವರು ತಮ್ಮ ವ್ಯಕ್ತಿತ್ವ ವಿಕಾಸದ ಬಗ್ಗೆ ಗಮನಕೊಡುತ್ತಾರೆ.
ಈ ಸಂದರ್ಭದಲ್ಲಿ ಕಾವೇರಿಯ ಉದಾಹರಣೆ ಬಗ್ಗೆ ಹೇಳಲು ಸೂಕ್ತ ಎನಿಸುತ್ತದೆ. ಗಂಡಹೆಂಡತಿ ಇಬ್ಬರೂ ವೈದ್ಯರು. ಇಬ್ಬರೂ ಒಂದೇ ಕ್ಷೇತ್ರದಲ್ಲಿದ್ದರೆ ಅವರಲ್ಲಿ ಹೊಂದಾಣಿಕೆ ಚೆನ್ನಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕಾವೇರಿ ಬಾಬತ್ತಿನಲ್ಲಿ ಹೀಗಾಗುತ್ತಿಲ್ಲ. ಅವರ ಪತಿ ಪ್ರತಿಯೊಂದು ಸಣ್ಣಪುಟ್ಟ ಅವಶ್ಯಕತೆಗಳಿಗೂ ಕಾವೇರಿಯನ್ನು ಅವಲಂಬಿಸಿದ್ದಾರೆ. ಅವರಿಗೆ ಸ್ವಚ್ಛತೆ ಅಂದರೆ ಬಹಳ ಇಷ್ಟ. ಹೀಗಾಗಿ ಬಾಗಿಲುಗಳ ಮೇಲೆ ಧೂಳನ್ನು ಕಂಡರೆ ಏಕೆ ಹೀಗೆ ಎನ್ನುತ್ತಾರೆ. ಆದರೆ ತಾವೇ ಸ್ವತಃ ಡಸ್ಟರ್‌ಹಿಡಿಯಲು ಇಷ್ಟಪಡುವುದಿಲ್ಲ.
ಕಾವೇರಿ ಕೈಯಾರೆ ಮಾಡಿದ ಅಡುಗೆಯ ರುಚಿಯೇ ಬೇರೆ ಎಂದು ಹೇಳುತ್ತಾ ಅಲ್ಲಿ ಯಾರೊಬ್ಬ ಕೆಲಸಗಾರರೂ ಸುಳಿಯದಂತೆ ಮಾಡುತ್ತಾರೆ. ಪತಿಯ ಈ ಬೇಡಿಕೆಗಳನ್ನು ಕಾವೇರಿ ಈಡೇರಿಸುತ್ತಾ ಅದೆಷ್ಟು ಮಗ್ನಳಾಗಿ ಹೋದಳೆಂದರೆ, ಆಕೆ ತನ್ನ ವೈದ್ಯಕೀಯ ವೃತ್ತಿಯ ಕಡೆ ಹೋಗದಂತೆ ಆಯಿತು. ಅವನ ಫ್ರೆಂಡ್ ಒಂದು ಸಲ, “ನಿನ್ನ ಹೆಂಡತಿಗೆ ನೀನು ಒಂದಿಷ್ಟಾದರೂ ನೆರವಾಗಬಾರದಾ?” ಎಂದು ಕೇಳಿದರೆ,
“ನನಗೇನೂ ಬರೋದೆ ಇಲ್ಲವೇ,” ಎಂದು ಹೇಳುತ್ತಾನೆ. ಮನೆಯ ಜವಾಬ್ದಾರಿಗಳನ್ನು ನಿಭಾಯಿಸಲು ಒಂದಿಷ್ಟು ಸಹಕಾರ ನೀಡಿದ್ದರೆ, ಮನೆ ವ್ಯವಸ್ಥಿತವಾಗಿ ಇರುವುದಷ್ಟೇ ಅಲ್ಲ, ಕಾವೇರಿ ಕೂಡ ಒಬ್ಬ ಯಶಸ್ವಿ ಡಾಕ್ಟರ್ ಆಗುತ್ತಿದ್ದಳು.
ಒಂದು ಅಭಿಪ್ರಾಯವೇನೆಂದರೆ, ಅಗತ್ಯವಿದ್ದರೆ ಯಾವುದೇ ಪರಂಪರೆಯನ್ನು ಯಾವಾಗ ಬೇಕೆಂದಾಗ ಶುರು ಮಾಡಬಹುದು. ಹೊಸ ಯುಗದ ನವ ನೂತನ ಮಣ್ಣಿನಲ್ಲಿ ಬೀಜಾರೋಪಣಕ್ಕೆ ಇದೇ ಸೂಕ್ತ ಸಮಯ. ಮಗಳು ಅಥವಾ ಮಗ ಆಗಿರಬಹುದು, ಉನ್ನತ ಕೆರಿಯರ್‌ನ ಹೊರತಾಗಿ ಭಾವೀ ಕೌಟುಂಬಿಕ ಜೀವನಕ್ಕೆ ಈಗ ಮಗಳ ಹಾಗೆ ಮಗನನ್ನು ಕೂಡ ಸಿದ್ಧರಾಗಿಸಬೇಕು.
ಸಂಸ್ಕಾರಗಳುಳ್ಳ ಸೊಸೆ ನಮಗೆ ಬೇಕು. ಅದೇ ರೀತಿ ಮಗನಲ್ಲೂ ಕೂಡ ಸಂಸ್ಕಾರ ಬೆಳೆಸುವ ಕೆಲಸವನ್ನು ನಾವು ಮೊದಲಿನಿಂದಲೇ ಮಾಡಬೇಕು. ನಾವು ಮಗಳನ್ನು ಎಲ್ಲ ಕ್ಷೇತ್ರಗಳಲ್ಲೂ ಸ್ವಾವಲಂಬಿಯಾಗಿರುವಂತೆ ನೋಡಿಕೊಳ್ಳುತ್ತೇವೆ. ಆದರೆ ಮಗನನ್ನು ಹಾಗೆ ಏಕೆ ನೋಡಲು ಇಷ್ಟಪಡುವುದಿಲ್ಲ? ಈಗ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಯಶಸ್ಸಿನ ಬಾವುಟ ಹಾರಿಸುತ್ತಿದ್ದಾರೆ. ಆದರೆ ಪುರುಷರು ಮನೆಗೆಲಸದ ಜವಾಬ್ದಾರಿಯಿಂದ ಏಕೆ ಅವರನ್ನು ದೂರ ಇಡಲಾಗುತ್ತಿದೆ? ಕುಟುಂಬದ ಜವಾಬ್ದಾರಿಯಿಂದ ಹಿಡಿದು ಆಫೀಸಿನ ತನಕ ಇಬ್ಬರೂ ಸ್ವಾವಲಂಬಿಗಳಾಗುವುದು ಅತ್ಯವಶ್ಯ.
– ಮಾಳವಿಕಾ