ನೀಳ್ಗಥೆ – ಚಂದ್ರಿಕಾ ಸುಧೀಂದ್ರ
ತುಂಬು ಮನೆಯ ಆದರ್ಶ ಸೊಸೆ ಎನಿಸಿದ ನಂದಿತಾ, ಹಿರಿಯರ ನಿಧನಾನಂತರ ತಾನೇ ಮುಂದೆ ನಿಂತು ನಾದಿನಿಯ ಮದುವೆ ಮಾಡಿಸಿದಳು. ನಂತರ ಗಂಡನನ್ನು ಕಳೆದುಕೊಂಡ ತಂಗಿಗೂ ಆಸರೆಯಾದಳು. ಇವರಿಬ್ಬರ ಮಕ್ಕಳ ಬದುಕು ಹೇಗೆ ಮುಂದುವರಿಯಿತು….. ಪಲ್ಲವಿ ಬದಲಾದಳೆ….? ನಂದಿತಾ ಏನಾದಳು…….?
ಕಳೆದ ಸಂಚಿಕೆಯ ಕಥೆ :
ಮಧ್ಯಮ ವರ್ಗದ ಕುಟುಂಬದ ಹಿರಿಯ ಮಗಳಾದ ನಂದಿತಾ ತನ್ನ ಸೌಂದರ್ಯ, ಸದ್ಗುಣಗಳಿಂದ ಎಲ್ಲರ ಬಳಿ ಆದರ್ಶ ಹೆಸರು ಗಳಿಸಿದ್ದಳು. ಇದರಿಂದ ಸದಾ ಅಸೂಯೆಗೆ ಗುರಿಯಾಗುತ್ತಿದ್ದ ಅವಳ ತಂಗಿ ಪಲ್ಲವಿ ಅಕ್ಕನಿಗೆ ಒಳ್ಳೆಯ ಕಡೆ ಮದುವೆ ಗೊತ್ತಾಗದಂತೆ ಆ ಸಂಬಂಧಗಳನ್ನು ತಪ್ಪಿಸುತ್ತಿದ್ದಳು. ಮುಂದೆ ಅವಳ ಅನುಪಸ್ಥಿತಿಯಲ್ಲಿ ನಂದಿತಾಳ ಮದುವೆ ವಿನಯನೊಂದಿಗೆ ಗೊತ್ತಾಯಿತು. ಅನುಕೂಲಸ್ಥರ ಮನೆಯ ಸೊಸೆಯಾದ ನಂದಿತಾ ಅತ್ತೆಮನೆಯಲ್ಲಿ ಎಲ್ಲರ ಕಣ್ಮಣಿ ಎನಿಸಿದಳು. ತಂಗಿ ಪಲ್ಲವಿ ಆಸ್ತಿವಂತನೆಂದು ನಂಬಿಸಿದ್ದ ಮೋಹನನ ಕೈಹಿಡಿದು ಏಮಾರಿದಳು. ಸಾಧಾರಣ ಬದುಕಿನ ಪಲ್ಲವಿ ಅಕ್ಕನ ಸುಖೀ ಸಂಸಾರ ಕಂಡು ಕರುಬುತ್ತಿದ್ದಳು. ಬದುಕಿನ ಏರುಪೇರು ಇವರನ್ನು ಎಲ್ಲಿಗೆ ಕೊಂಡೊಯ್ಯಿತು…?
ಮುಂದೆ ಓದಿ……..
ತೀರ್ಥಯಾತ್ರೆಗೆಂದು ಹೋಗಿದ್ದ ವಿನಯ್ ತಂದೆ ತಾಯಿ ಹಿಂದಿರುಗುವಾಗ ಬಸ್ದುರಂತಕ್ಕೆ ಸಿಲುಕಿ ಮಾರ್ಗ ಮಧ್ಯದಲ್ಲೇ ಇಬ್ಬರೂ ಅಸುನೀಗಿದರು. ವಿಚಾರ ತಿಳಿದ ವಿನಯ್, ನಂದಿತಾ, ಜ್ಯೋತಿಗೆ ಆಘಾತವಾಗಿ ಚೇತರಿಸಿಕೊಳ್ಳಲಾಗಲಿಲ್ಲ. ನಂದಿತಾ ಜ್ಯೋತಿಯನ್ನು ಎಷ್ಟು ಸಮಾಧಾನಪಡಿಸಿದರೂ ಆಗಲಿಲ್ಲ. ನಂದಿತಾಳ ತಾಯಿ ಮಮತೆ, ಅಣ್ಣನ ತಂದೆಯ ಪ್ರೀತಿಯ ಬಂಧನದಿಂದ ಜ್ಯೋತಿ ತಾಯಿ ತಂದೆಯ ಅಗಲಿಕೆಯನ್ನು ಅಣ್ಣ ಅತ್ತಿಗೆಯರಲ್ಲಿ ಕಂಡಳು. ಅದಾದ ಒಂದೆರಡು ತಿಂಗಳಲ್ಲಿ ನಂದಿತಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ತನ್ನ ಮಗುವಿಗಾಗಿ ಹಂಬಲಿಸುತ್ತಿದ್ದ ಅತ್ತೆ ಮಾವನನ್ನು ನೆನೆದು ನಂದಿತಾ ಕಣ್ಣೀರಿಟ್ಟಳು. ಮಗುವಿನ ಆಗಮನದಿಂದ ಹಳೆಯ ನೋವು ದುಗುಡದಿಂದ ಎಲ್ಲರೂ ಹೊರಬಂದರು.
ವಿನಯ್ ನಂದಿತಾ ಇಬ್ಬರೂ ಜ್ಯೋತಿಯ ಅಪೇಕ್ಷೆಯಂತೆ ಮಗುವಿಗೆ ಅಪೇಕ್ಷಾ ಎಂದು ನಾಮಕರಣ ಮಾಡಿದರು. ಜ್ಯೋತಿಯಂತೂ ಮಗುವನ್ನು ಬಿಟ್ಟಿರುತ್ತಿರಲಿಲ್ಲ. ಅದರ ಲಾಲನೆ ಪಾಲನೆಯಲ್ಲಿ ಕಾಲ ಕಳೆಯುತ್ತಾ ತನ್ನ ನೋವನ್ನು ಮರೆತಳು.
ತುಂಬು ಗರ್ಭಿಣಿಯಾದ ಪಲ್ಲವಿಯನ್ನು ತಾಯಿ ಮನೆಗೆ ಕರೆಸಿಕೊಂಡರು. ಆದರೆ ಅವಳ ಬೇಕು ಬೇಡಗಳನ್ನು ಪೂರೈಸುವಷ್ಟು ಆರ್ಥಿಕವಾಗಿ ಸಮರ್ಥರಾಗಿರಲಿಲ್ಲ. ಅಲ್ಲದೆ ಹೆರಿಗೆ ಕಷ್ಟವಾಗಿ ತಾಯಿ, ಮಗುವನ್ನು ಉಳಿಸಲು ನಂದಿತಾ ಅವಳನ್ನು ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ಸೇರಿಸಿ ಹಣವನ್ನು ಧಾರಾಳವಾಗಿ ಖರ್ಚು ಮಾಡಿ ತಾಯಿ, ಮಗುವನ್ನು ಉಳಿಸಿಕೊಂಡಳು. ಪಲ್ಲವಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು.
ಪಲ್ಲವಿಗೆ ಅಕ್ಕನ ಈ ಧಾರಾಳ ಸ್ವಭಾವವನ್ನು ಕಂಡು ತನ್ನ ನಡವಳಿಕೆ ಬಗ್ಗೆ ನಾಚಿಕೆ ಉಂಟಾಯಿತು. ಜೊತೆಗೆ ಅವಳ ಸ್ವಭಾವದಲ್ಲಿ ಸ್ವಲ್ಪ ಸ್ವಲ್ಪವಾಗಿ ಬದಲಾವಣೆಯಾಗತೊಡಗಿತು. ಈ ಮಧ್ಯೆ ಮೋಹನ ಕಾಯಿಲೆಯಿಂದ ಬಳಲಿ ಬದುಕುಳಿಯಲಾರದ ಪರಿಸ್ಥಿತಿ ಬಂದಾಗ ಪಲ್ಲವಿ ನಂದಿತಾಳ ಮನೆಗೆ ಸಹಾಯ ಕೇಳಲು ಬಂದಳು. ನಂದಿತಾಳಿಗೆ ಆಶ್ಚರ್ಯ ಮತ್ತು ಸಂತೋಷ ಏಕಕಾಲಕ್ಕಾಯಿತು. ಅವಳು ನಿರ್ಮಲವಾದ ಮನಸ್ಸಿನಿಂದ ತಂಗಿಯನ್ನು ಆದರಿಸಿದಳು. ರೂಮಿಗೆ ಬಂದ ಪಲ್ಲವಿ ಅಕ್ಕನ ಕಾಲನ್ನು ಹಿಡಿದುಕೊಂಡು, “ನನ್ನನ್ನು ಕ್ಷಮಿಸಕ್ಕಾ, ನಿನಗೆ ನಾನು ಸಾಕಷ್ಟು ಕೇಡು ಬಗೆದೆ. ಯಾವ ತಂಗಿಯೂ ಮಾಡದಂತಹ ಕೆಡುಕನ್ನೆಲ್ಲಾ ಮಾಡಿದೆ,” ಎಂದು ಕಣ್ಣೀರಿಟ್ಟಳು.
“ನೀನೇ ನನ್ನ ಮದುವೆಯನ್ನು ತಪ್ಪಿಸಲು ಪ್ರಯತ್ನಿಸಿದ್ದು ಎಂದು ನನಗೆ ಯಾವಾಗಲೋ ಗೊತ್ತು ಪಲ್ಲವಿ,” ಎಂದು ನಂದಿತಾ ಹೇಳಿದಾಗ ಆಶ್ಚರ್ಯ ನಾಚಿಕೆಯಿಂದ ಅಕ್ಕನನ್ನು ನೋಡಿದಳು ಪಲ್ಲವಿ.
“ವಿನಯ್ನೆಂಟರೊಬ್ಬರು ನಿನ್ನನ್ನು ತೋರಿಸಿ, `ಈ ಹುಡುಗಿಯೇ ನಂದಿತಾಳ ಬಗ್ಗೆ ಅಪಪ್ರಚಾರ ಮಾಡಿದ್ದು,’ ಎಂದು ವಿನಯ್ಗೆ ಹೇಳಿದರಂತೆ. ಈ ವಿಚಾರ ವಿನಯ್ ನನ್ನ ಬಳಿ ಆಶ್ಚರ್ಯದಿಂದ ಸ್ವಂತ ಅಕ್ಕನ ನಡತೆಗೆ ಮಸಿ ಬಳಿಯುವ ತಂಗಿಯ ನಡತೆ ನನಗೆ ನಿಜವಾಗಿಯೂ ಒಂದೆಡೆ ಕೋಪ ತರಿಸಿತು ಎಂದರು.
“ನಾನೇ ಅವರಿಗೆ ಕೆಲವರು ತಮ್ಮ ಮನಸ್ಸಿನಲ್ಲಿ ಕೀಳರಿಮೆ ಬೆಳೆಸಿಕೊಂಡಿರುತ್ತಾರೆ. ಆಗ ಅವರು ಸ್ವಂತದವರು, ಗೆಳೆಯರು, ಬಂಧು ಬಳಗ ಯಾವುದನ್ನೂ ಯೋಚಿಸದೆ ಈ ರೀತಿಯಾಗಿ ವರ್ತಿಸುತ್ತಾರೆ. ಇದಕ್ಕೆ ನಮ್ಮ ಪಲ್ಲವಿ ಹೊರತಲ್ಲ, ಎಂದು ಸಮಾಧಾನಪಡಿಸಿದೆ,” ಎಂದಳು.
“ಅಕ್ಕಾ, ನಿನ್ನ ತ್ಯಾಗ, ತಾಳ್ಮೆಯನ್ನು ಅರಿಯದೆ ನಿನ್ನ ಒಳ್ಳೆಯತನವನ್ನು ಅಪಾರ್ಥ ಮಾಡಿಕೊಂಡು ಹೆಜ್ಜೆ ಹೆಜ್ಜೆಗೂ ನಿನಗೆ ಅನ್ಯಾಯ ಮಾಡಿದ್ದರ ಫಲವಾಗಿ ಈಗ ನರಕ ಅನುಭವಿಸುತ್ತಿದ್ದೇನೆ. ಬೇರೆಯವರಿಗೆ ಕೆಡುಕು ಮಾಡಿದರೆ ಈ ಜನ್ಮದಲ್ಲೇ ಎಲ್ಲವನ್ನೂ ಅನುಭವಿಸಬೇಕೆನ್ನುವುದಕ್ಕೆ ನಾನು ಅನುಭವಿಸುತ್ತಿರುವ ವೇದನೆಯೇ ಸಾಕ್ಷಿ,” ಎಂದು ಕಣ್ಣೀರಿಟ್ಟು ಹೇಗಾದರೂ ಮಾಡಿ ನನ್ನ ಗಂಡನ ಆರೈಕೆಗೆ ಸಹಾಯ ಮಾಡು ಎಂದು ಬೇಡಿಕೊಂಡಳು.
“ನೋಡು ಪಲ್ಲವಿ, ನಾವಿಬ್ಬರೂ ಒಂದೇ ಬಳ್ಳಿಯ ಹೂಗಳು. ಎಲ್ಲಾ ಸಂಬಂಧಕ್ಕಿಂತ ರಕ್ತಸಂಬಂಧ ಗಟ್ಟಿಯಾದದ್ದು. ನನಗೆ ನಿನ್ನ ಮೇಲೆ ಬೇಸರವಾಗಲೀ, ಕೋಪವಾಗಲೀ ಇಲ್ಲ. ನೀನು ಏನೇ ಕೆಡುಕು ಮಾಡಿದರೂ ನನಗೆ ಒಳ್ಳೆಯದೇ ಆಯಿತು. ಮುತ್ತಿನಂಥ ಗಂಡ, ಒಳ್ಳೆಯ ಮನೆ ಸೇರಿದೆ. ನೀನೂ ಕೇಳಿದ್ದೀಯಲ್ಲ `ಧರ್ಮವೇ ಜಯ, ಎಂಬ ದಿವ್ಯ ಮಂತ್ರ’ ಎನ್ನುವ ದಾಸರ ಹಾಡು. ಆದ್ದರಿಂದ ನಾವು ಇತರರಿಗೆ ಸಹಾಯ ಮಾಡಿದರೆ ಅದು ನಮ್ಮನ್ನು ಕಡೆಯವರೆಗೂ ಕಾಪಾಡುತ್ತದೆ,” ಎಂದು ತಂಗಿಗೆ ಬುದ್ಧಿ ಹೇಳಿ ಸಹಾಯ ಮಾಡುವುದಾಗಿ ಭರವಸೆ ನೀಡಿದಳು.
ಅವಳಿಗೆ ಸೀರೆಗಳನ್ನು ತೆಗೆಸಿಕೊಟ್ಟು, ಅವಳ ಮನೆಗೆ ಅವಶ್ಯಕವಾದ ದಿನಸಿ ಖರೀದಿಸಿದಳು. ತನ್ನ ಮನೆಯ ಹತ್ತಿರದಲ್ಲೇ ಅವಳಿಗೆ ಮನೆ ಮಾಡಿಕೊಟ್ಟಳು. ಪಲ್ಲವಿಗೆ ಮಗು ಹುಟ್ಟಿದ ಎರಡೇ ತಿಂಗಳಲ್ಲಿ ಮೋಹನನ ಕಾಯಿಲೆ ಉಲ್ಬಣವಾಗಿ ಬದುಕುಳಿಯಲಿಲ್ಲ. ಪಲ್ಲವಿ ಮಗುವನ್ನು ನೋಡಿ ನತದೃಷ್ಟ ಮಗು ಎಂದು ಕಣ್ಣೀರಿಟ್ಟಳು.
“ಯಾಕೆ ಹಾಗಂತಿ…. ಒಂದು ಕಡೆ ಗಂಡನಿಲ್ಲ ಎಂಬ ಕೊರಗಿದ್ದರೂ, ಈ ಮಗು ಇದೆಯ್ಲಾ ದುಃಖ ಮರೆತು ಅದರ ಲಾಲನೆ ಪಾಲನೆಯಲ್ಲಿ ನಿನ್ನ ಸುಖ ಕಾಣು,” ಎಂದಳು.
ನಂದಿತಾ ತನ್ನ ತಂಗಿಯ ಮಗಳು ಅಮೂಲ್ಯಾಳನ್ನು ತನ್ನ ಮಗುವಿನಂತೆ ಅಕ್ಕರೆಯಿಂದ ನೋಡಿಕೊಂಡಳು. ಮಕ್ಕಳಿಬ್ಬರಿಗೂ ಭೇದಭಾವವಿಲ್ಲದೆ ನೋಡಿಕೊಳ್ಳುತ್ತಿದ್ದ ಅಕ್ಕನನ್ನು ಕೃತಜ್ಞತೆಯಿಂದ ನೋಡುತ್ತಿದ್ದಳು ಪಲ್ಲವಿ.
ಜ್ಯೋತಿ ಇತ್ತೀಚೆಗೆ ಏನೋ ಒಂದು ರೀತಿ ಇರುತ್ತಿದ್ದುದ್ದನ್ನು ನಂದಿತಾ ಗಮನಿಸಿದಳು. ಯಾವಾಗಲೂ ಮಗುವಿನ ಬಳಿ ಇರುತ್ತಿದ್ದ ಜ್ಯೋತಿ ತನ್ನ ರೂಮಿನಲ್ಲೇ ಯೋಚನೆ ಮಾಡುತ್ತಾ ಮಂಕಾಗಿ ಕುಳಿತಿರುತ್ತಿದ್ದಳು. ಜ್ಯೋತಿಗೂ ಮದುವೆ ವಯಸ್ಸಾಗುತ್ತಿದೆ. ತಕ್ಕ ವಯಸ್ಸಿಗೆ ಅವಳಿಗೆ ಮದುವೆ ಮಾಡಬೇಕು ಎಂದುಕೊಂಡಳು ನಂದಿತಾ.
ಅವಳ ರೂಮಿಗೆ ಹೋಗಿ ಪುಸ್ತಕಗಳನ್ನು ಜೋಡಿಸಿಡುವಾಗ, ಕಂಪ್ಯೂಟರ್ ಪುಸ್ತಕದಲ್ಲಿ ಒಂದು ಹುಡುಗನ ಫೋಟೋ ನೋಡಿ ಆಶ್ಚರ್ಯಚಕಿತಳಾದಳು. ಜೊತೆಗೆ ಅವಳ ಬಗ್ಗೆ ಆತಂಕ ಆಯಿತು. `ಈ ಹುಡುಗಿ ತನಗೂ ತಿಳಿಸದೆ ಏನಾದರೂ ತೊಂದರೆ ತಂದುಕೊಂಡಿದ್ದಾಳಾ?’ ಎನ್ನುವ ಸಂದೇಹವಾಯಿತು. ವಿಷಯವನ್ನು ವಿನಯ್ ಬಳಿ ತಿಳಿಸಿದಳು. ಅವನೂ ಆತಂಕಗೊಂಡು, “ನೀನೇ ನಿಧಾನವಾಗಿ ಅವಳ ಬಳಿ ವಿಚಾರಿಸು. ಹೇಗಿದ್ದರೂ ನಿನ್ನ ಬಳಿ ನಿನ್ನ ನಾದಿನಿಗೆ ಸಲಿಗೆ ಜಾಸ್ತಿ. ನಂತರ ಯಾವ ಹುಡುಗ ಎಂದು ವಿಚಾರಿಸೋಣ,” ಎಂದ.
ಅಂದು ರಾತ್ರಿ ನಂದಿತಾ, ಜ್ಯೋತಿಯ ಬಳಿ ಮಾತನಾಡುತ್ತಾ ನೇರವಾಗಿ, “ಏಕೆ ಜ್ಯೋತಿ ನೀನು ಇತ್ತೀಚೆಗೆ ಒಂಥರಾ ಇರ್ತೀಯಾ…? ಅದೂ ಅಲ್ಲದೆ ನಿನ್ನ ಪುಸ್ತಕದಲ್ಲಿ ಈ ಹುಡುಗನ ಫೋಟೋ ನೋಡಿದೆ. ಯಾರು ಈ ಹುಡುಗ?” ಎಂದಳು.
“ನಾನು ದಿನಾ ಕಂಪ್ಯೂಟರ್ ಕ್ಲಾಸ್ಗೆ ಹೋಗುವಾಗ ಈ ಹುಡುಗನ ಪರಿಚಯವಾಯಿತು. ಇವನ ಹೆಸರು ಅಜಯ್. ಬಹಳ ಒಳ್ಳೆಯ ಹುಡುಗ. ನನ್ನನ್ನು ಇಷ್ಟಪಟ್ಟಿರುವುದಾಗಿ ಹೇಳಿದ್ದಾನೆ. ಅವನು ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ನಾನು ಅವನು ಇಬ್ಬರೂ ಒಂದೆರಡು ಬಾರಿ ಹೋಟೆಲ್ಗೆ ಹೋಗಿದ್ದೇವೆ ಅಷ್ಟೆ. ಈ ವಿಚಾರ ಅಣ್ಣನಿಗೆ ನಿಮಗೆ ಹೇಗೆ ತಿಳಿಸುವುದು? ನೀವು ಹೇಗೆ ಈ ವಿಚಾರ ತೆಗೆದುಕೊಳ್ಳುತ್ತೀರೋ ಎಂಬ ಅನುಮಾನದಿಂದ ಧೈರ್ಯ ಸಾಲದೆ ತೊಳಲಾಡುತ್ತಿದ್ದೇನೆ,” ಎಂದಳು ಜ್ಯೋತಿ.
ನಂದಿತಾ ಅವಳ ಕೈ ಮೇಲೆ ತನ್ನ ಕೈ ಇಟ್ಟು ಭರವಸೆ ನೀಡಿ, “ನೀನೂ ಅವನನ್ನು ಇಷ್ಟಪಟ್ಟಿದ್ದೀಯಾ?” ಎಂದು ಕೇಳಿದಳು.
ಜ್ಯೋತಿ `ಹೌದು’ ಎಂಬಂತೆ ತಲೆಯಾಡಿಸಿ ಅಜಯ್ ಮನೆಯ ಬಗ್ಗೆ ವಿವರಿಸಿದಳು.
ವಿನಯ್ ಹಾಗೂ ನಂದಿತಾ ಅಜಯ್ ಮನೆಗೆ ಹೋದರು. ಅಜಯ್ತಂದೆ ತಾಯಿ ಈಗಿನ ಕಾಲಕ್ಕೆ ಒಗ್ಗಿಕೊಂಡಿದ್ದು ಒಳ್ಳೆಯ ಮನೆತನದವರೂ ಆಗಿದ್ದರು. ಇವರಿಬ್ಬರನ್ನೂ ಆದರಿಂದ ಸ್ವಾಗತಿಸಿ ಆತ್ಮೀಯತೆಯಿಂದ ಸತ್ಕರಿಸಿದರು. ಅಜಯ್ ಸಹ ಹೊರಗಿನಿಂದ ಬಂದ. ಅವನು ಲಕ್ಷಣವಾದ ಸುಸಂಸ್ಕೃತ ಹುಡುಗ, ನಮ್ಮ ಜ್ಯೋತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ಭರವಸೆ ನಂದಿತಾ ಮತ್ತು ವಿನಯ್ಗೆ ಉಂಟಾಯಿತು. ಅಜಯ್ ತಂದೆ ತಾಯಿ ಬಳಿ ಜ್ಯೋತಿಯ ವಿಷಯ ತಿಳಿಸಿದರು. ಅವನು ಈಗಾಗಲೇ ತಂದೆ ತಾಯಿಯ ಬಳಿ ಈ ವಿಚಾರ ತಿಳಿಸಿದ್ದರಿಂದ ಅವರೂ ಸಹ ಜ್ಯೋತಿಯನ್ನು ನೋಡಲು ಇಚ್ಚಿಸಿದರು. ಸಂತೋಷದಿಂದ ಒಪ್ಪಿದ ನಂದಿತಾ ವಿನಯ್ ಅವರನ್ನು ಮನೆಗೆ ಆಹ್ವಾನಿಸಿದರು.
ಅಜಯ್ತಂದೆ ತಾಯಿ ಜ್ಯೋತಿಯನ್ನು ನೋಡಲು ಬರುವ ದಿನ ನಂದಿತಾ, ನಾದಿನಿಯನ್ನು ಎಷ್ಟು ರೇಗಿಸಿದರೂ ಸಾಲದು, “ಇನ್ನೆಲ್ಲಿ ನಾವೆಲ್ಲ ಜ್ಞಾಪಕದಲ್ಲಿರುತ್ತೇವೆ…. ಏನಿದ್ದರೂ ನಿನ್ನ ಕಣ್ಮುಂದೆ ಬರುವುದು ಅಜಯ್ ತಾನೇ?” ಎಂದೆಲ್ಲ ರೇಗಿಸಿದಳು.
ಅವರು ತಿಳಿಸಿದಂತೆ ಅಜಯ್ ಹಾಗೂ ಅವನ ತಂದೆ ತಾಯಿ ಇಬ್ಬರೂ ಜ್ಯೋತಿಯನ್ನು ನೋಡಲು ಹೂವು, ಹಣ್ಣು, ಸಿಹಿಯೊಂದಿಗೆ ಬಂದರು. ನಂದಿತಾ ಅವರೆಲ್ಲರನ್ನೂ ಆತ್ಮೀಯವಾಗಿ ಆದರಿಸಿ ಅತಿಥಿ ಸತ್ಕಾರ ಮಾಡಿದಳು. ಉಪಚಾರದ ನಂತರ ಜ್ಯೋತಿಯನ್ನು ನೋಡಿ ಅಜಯ್ ತಂದೆ ತಾಯಿ ಒಪ್ಪಿಗೆ ನೀಡಿ, “ನಮ್ಮ ಮಗನ ಸುಖ, ಸಂತೋಷ ನಮಗೆ ಮುಖ್ಯ. ಒಳ್ಳೆಯ ಲಗ್ನ ನೋಡಿ ಮದುವೆ ಮಾಡೋಣ,” ಎಂದರು.
ನಂದಿತಾ ಸಂತೋಷದಿಂದ ನಿರಾಳವಾಗಿ ಉಸಿರಾಡಿದಳು. ಸಧ್ಯ ಅಜಯ್ ತಂದೆ ತಾಯಿ ಏನು ಹೇಳುತ್ತಾರೋ ಎನ್ನುವ ಸಂಶಯವಿತ್ತು. ಅಜಯ್ಗೆ ಕೆಲಸದ ಒತ್ತಡ ನಿಮಿತ್ತ ವಿನಯ್ ನಂದಿತಾಗೆ, “ನಾನು ಬೇರೆ ರಾಜ್ಯಕ್ಕೆ ಹೋಗಬೇಕು. ಆದ್ದರಿಂದ ಒಂದು ತಿಂಗಳಲ್ಲಿ ಮದುವೆ ಮಾಡಿಕೊಡಿ,” ಎಂದು ಕೇಳಿಕೊಂಡ. ಅವನ ಇಚ್ಛೆಯಂತೆ ಅವರಿಬ್ಬರ ಅಂತಸ್ತಿಗೆ ತಕ್ಕಂತೆ ವಿಶಾಲವಾದ ಛತ್ರದಲ್ಲಿ ವಿಜೃಂಭಣೆಯಿಂದ ಅಜಯ್ ಜ್ಯೋತಿ ಮದುವೆಯನ್ನು ಯಾವುದೇ ಲೋಪವಿಲ್ಲದೆ ಮಾಡಿಕೊಟ್ಟರು. ಜ್ಯೋತಿ ಅತ್ತಿಗೆ ಕಾಲಿಗೆ ನಮಸ್ಕರಿಸಿ, “ನೀವು ತಾಯಿಗಿಂತ ಹೆಚ್ಚಾಗಿ ನನ್ನ ಇಚ್ಛೆಯಂತೆ ಒಳ್ಳೆಯ ಮನೆ ಸೇರಿಸಿದಿರಿ. ನಿಮ್ಮ ಋಣ ಎಷ್ಟು ತೀರಿಸಿದರೂ ಸಾಲದು,” ಎಂದು ಭಾವುಕಳಾಗಿ ಹೇಳಿದಳು.
ಜ್ಯೋತಿಯನ್ನು ಅಜಯ್ ಜೊತೆ ಕಳುಹಿಸಿಕೊಟ್ಟ ಮೇಲೆ ನಂದಿತಾ ವಿನಯ್ಗೆ ಮನೆ ಬಿಕೋ ಎನ್ನುವಂತೆ ಆಗಿ ಬೇಸರವೆನಿಸಿತು. ಯಾವತ್ತಿದ್ದರೂ ಹೆಣ್ಣುಮಕ್ಕಳು ಬೇರೆ ಮನೆ ಬೆಳಗಲು ಹೋಗಲೇಬೇಕು. ಒಳ್ಳೆಯ ಹುಡುಗನ ಕೈ ಹಿಡಿದು ಸುಖವಾಗಿರುತ್ತಾಳೆಂದು ಸಮಾಧಾನಪಟ್ಟಕೊಂಡರು.
ಇತ್ತ ಪಲ್ಲವಿ ಮಗುವನ್ನೂ ತನ್ನ ಮಗುವಿನಂತೆ ಬೆಳೆಸಿದಳು. ಮಕ್ಕಳಿಬ್ಬರೂ ದೊಡ್ಡವರಾಗಿದ್ದೇ ಗೊತ್ತಾಗಲಿಲ್ಲ. ಮಕ್ಕಳಿಗೆ ಸರಳ ಬದುಕು ಅಭ್ಯಾಸವಾಗಲೆಂದು ಮನೆಯಲ್ಲಿ ಕಾರಿದ್ದರೂ ಬಸ್ಸಿನಲ್ಲೇ ಶಾಲಾ ಕಾಲೇಜಿಗೆ ಓಡಾಡುವಂತೆ ಮಾಡಿದ್ದಳು ನಂದಿತಾ.
ಪಲ್ಲವಿಯ ಜೀವನಕ್ಕಾಗಿ ಮಹಿಳಾ ಸಮಾಜ ಹಾಗೂ ಅನಾಥಾಶ್ರಮದ ಮೇಲುಸ್ತುವಾರಿ ವಹಿಸಿದರು. ಪಲ್ಲವಿ ತಾನು ಕಲಿತಿದ್ದ ಯೋಗಾಭ್ಯಾಸ ಹೇಳಿಕೊಡುವುದರ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಳು. ಅದಲ್ಲದೆ ಮಕ್ಕಳಿಗೆ ಟ್ಯೂಷನ್ ಹೇಳಿಕೊಟ್ಟು ಬರುವ ಹಣದಲ್ಲಿ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದಳು.
ಅಮೂಲ್ಯಾ ಮತ್ತು ಅಪೇಕ್ಷಾರಿಗೆ ಸ್ಪೋರ್ಟ್ಸ್ ನಲ್ಲಿ ಬಹಳ ಆಸಕ್ತಿ ಇತ್ತು. ಎಲ್ಲಾ ಸ್ಪರ್ಧೆಗಳಲ್ಲಿ ಗೆದ್ದು ಸಾಕಷ್ಟು ಪದಕಗಳನ್ನು ಗೆದ್ದುಕೊಂಡಿದ್ದರು.
`ತಾನು ಸಾಕಿದ್ದರೆ ಖಂಡಿತಾ ನನ್ನ ಮಗಳಿಗೆ ಇಷ್ಟು ಒಳ್ಳೆಯ ವಿದ್ಯಾಭ್ಯಾಸ ಕೊಡಿಸಲು ಆಗುತ್ತಿರಲಿಲ್ಲ,’ ಎಂದುಕೊಂಡಳು ಪಲ್ಲವಿ. ನಿಜವಾಗಿ ನಂದಿತಾ ತನ್ನ ಪಾಲಿಗೆ ದೇವತೆ! ಇಂದು ತಾನು ತಿನ್ನುತ್ತಿರುವ ಅನ್ನ, ನನ್ನ ಅಕ್ಕನ ಕೃಪೆ ಎಂದುಕೊಳ್ಳುತ್ತಿದ್ದಳು. ಮಕ್ಕಳಿಬ್ಬರೂ ಅಂತಿಮ ಪದವಿಗೆ ಬಂದರು. ಅಮೂಲ್ಯಾ ನಂದಿತಾಳನ್ನು ದೊಡ್ಡಮ್ಮ ಎಂದು ಕರೆಯದೆ ಅಮ್ಮ ಎಂದೇ ಕರೆಯುತ್ತಿದ್ದಳು. ಅವಳಿಗೆ ತಂದೆಯ ಮರಣಾಂತರ ತನಗೆ ವಿದ್ಯಾಭ್ಯಾಸ ಕೊಡಿಸಿ ತನ್ನನ್ನು ಒಂದು ಮಟ್ಟಕ್ಕೆ ಬೆಳೆಸಿದ ನಂದಿತಾಳ ಬಗ್ಗೆ ಅಪಾರ ಗೌರವ. ಅವಳು ಏನು ಹೇಳಿದರೂ ಎದುರಾಡದೆ ಅವಳ ಮಾತಿಗೆ ಬೆಲೆ ಕೊಡುತ್ತಿದ್ದಳು. ನಂದಿತಾಗೆ ಮಕ್ಕಳಿಬ್ಬರಿಗೂ ಗಂಡು ನೋಡಿ ಮದುವೆ ಮಾಡಬೇಕೆನಿಸಿ ಗಂಡನ ಬಳಿ, “ನಮಗೂ ವಯಸ್ಸಾಗುತ್ತಿದೆ. ನಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳಬೇಕು. ಮಕ್ಕಳಿಬ್ಬರೂ ಬೆಳೆದು ದೊಡ್ಡವರಾಗಿದ್ದಾರೆ. ಅವರಿಗೆ ಮದುವೆ ಮಾಡೋಣ,” ಎಂದಳು.
ವಿನಯ್ಗೆ ಹೆಂಡತಿ ಏನೇ ಮಾಡಿದರೂ, ಏನೇ ಹೇಳಿದರೂ ಒಪ್ಪಿಗೆ. ಎಲ್ಲರ ಒಳಿತನ್ನು ಬಯಸುವ ಹೆಂಡತಿಯ ಗುಣ ಅವನಿಗೆ ಮೆಚ್ಚುಗೆ ಆದ್ದರಿಂದ, “ನೀನು ಹೇಳಿದಂತೆ ಆಗಲಿ,” ಎಂದ.
ಆರ್ಕಿಟೆಕ್ಟ್ ಆಗಿ ಒಳ್ಳೆಯ ಗುಣವಂತನಾದ ವಿನೋದ್ ವಿನಯ್ನ ಗೆಳೆಯನ ಮಗ. ಅವನು ಅಪೇಕ್ಷಾಳನ್ನು ನೋಡಿ ಒಪ್ಪಿಗೆ ತಿಳಿಸಿದ. ಅಮೂಲ್ಯಾ ನಂದಿತಾಳ ಬಳಿ ತಾನು ತನ್ನ ಸ್ಪೋರ್ಟ್ಸ್ ಇನ್ಸ್ಟ್ರಕ್ಟರ್ ಕೇಶವ್ ನನ್ನು ಮದುವೆಯಾಗುವುದಾಗಿ ತಿಳಿಸಿದಳು. ಮಕ್ಕಳು ಸುಖವಾಗಿರುವುದು ಮುಖ್ಯ ಎನಿಸಿ ಅಮೂಲ್ಯಾಳ ಇಚ್ಛೆಯಂತೆ ಹುಡುಗನ ಮನೆಯವರನ್ನು ಕರೆಸಿ ಮದುವೆ ನಿಶ್ಚಯಿಸಿದಳು ನಂದಿತಾ.
ಇಬ್ಬರ ಮದುವೆಯನ್ನು ಎರಡು ದಿನಗಳ ಅಂತರದಲ್ಲಿ ವಿಜೃಂಭಣೆಯಿಂದ ವಿನಯ್ ಮತ್ತು ನಂದಿತಾ ಧಾರೆ ಎರೆದುಕೊಟ್ಟರು. ಪಲ್ಲವಿಗೆ ತನ್ನ ಮಗಳು ಇಷ್ಟು ಒಳ್ಳೆಯ ಕಡೆ ಸೇರುತ್ತಾಳೆಂದು ನಿರೀಕ್ಷಿಸಿರಲಿಲ್ಲ. ಕಾರಣ ತಾನು ಅಕ್ಕನ ಪೈಪೋಟಿಗೆ ನಿಂತು ವೈಭವವಾಗಿ ಬಾಳಬೇಕೆಂದು ಆಸೆಪಟ್ಟು ಸೋತು ಈಗ ಈ ರೀತಿಯ ಜೀವನ ಮಾಡುತ್ತಿದ್ದಳು. ಆದರೆ ನಂದಿತಾಳ ಒಳ್ಳೆಯ ಗುಣದಿಂದ ತನ್ನ ಮಗಳನ್ನು ಒಳ್ಳೆಯ ಕಡೆ ಸೇರಿಸಿದ್ದಾಳೆ ಎನಿಸಿತು.
ಆ ವರ್ಷದ ದೀಪಾವಳಿಗೆ ಇಬ್ಬರು ಮಕ್ಕಳು, ಅಳಿಯಂದಿರಿಂದ ಮನೆ ತುಂಬಿ ಹೋಗಿತ್ತು. ಜ್ಯೋತಿ, ಅವಳ ಗಂಡ, ಮಕ್ಕಳು ಸಹ ಬಂದಿದ್ದರು. ನಂದಿತಾಳಿಗಂತೂ ಸಂಭ್ರಮವೋ ಸಂಭ್ರಮ! ಅಡುಗೆಯವರಿಂದ ಬಗೆ ಬಗೆಯ ಭಕ್ಷ್ಯ ಭೋಜನಗಳನ್ನು ಮಾಡಿಸಿ, ತಾನೇ ಎಲ್ಲರಿಗೂ ಬಡಿಸಲು ನಿಂತಳು.
“ನಂದಿತಾ, ನೀನು ಸುಮ್ಮನೆ ಆಯಾಸ ಮಾಡಿಕೊಳ್ತೀಯಾ. ಒಂದೇ ಸಮ ಓಡಾಡುತ್ತಿದ್ದೀಯಾ ರೆಸ್ಟ್ ತೆಗೆದುಕೊಳ್ಳಬಾರದಾ?” ಎಂದು ವಿನಯ್ ಪ್ರೀತಿಯಿಂದ ಹೇಳಿದ.
“ಮಕ್ಕಳು, ಅಳಿಯಂದಿರು ದಿನಾ ಬರುತ್ತಾರಾ? ಇದೊಂದು ಸಂದರ್ಭ. ಇನ್ನು ಅವರು ಊರಿಗೆ ಹೋದರೆ ನಾವಿಬ್ಬರೇ ಇರಬೇಕು. ಇವತ್ತಾದರೂ ಸಂತೋಷವಾಗಿ ನನ್ನ ಕೈಯಾರೆ ಬಡಿಸುತ್ತೇನೆ,” ಎಂದಳು ಸಂಭ್ರಮದಿಂದ.
ಹೆಂಡತಿಯ ಆಸೆಗೆ ಅಡ್ಡಿಪಡಿಸದೆ ವಿನಯ್ ಸುಮ್ಮನಾದ. ಎಲ್ಲರೂ ಊಟ ಮುಗಿಸಿ, ಕೇರಂ ಆಡುತ್ತಾ, ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದರು. ಸ್ವಲ್ಪ ಸುಸ್ತು ಎನಿಸಿ ನಂದಿತಾ ರೂಮಿಗೆ ಬಂದು ಹಾಸಿಗೆಯ ಮೇಲೆ ಮಲಗಿದಳು. ಹೆಂಡತಿ ಒಳಹೋಗಿದ್ದನ್ನು ಕಂಡ ವಿನಯ್ ಸಹ ಅವಳ ಹಿಂದೆಯೇ ರೂಮಿಗೆ ಬಂದು ಅವಳ ತಲೆ ಸವರುತ್ತಾ, “ನೀನು ವಿಪರೀತ ಆಯಾಸ ಮಾಡಿಕೊಂಡೆ. ನಿನ್ನ ಆರೋಗ್ಯದ ಕಡೆ ನಿನಗೆ ಗಮನವೇ ಇಲ್ಲ,” ಎಂದ.
ನಂದಿತಾ ತುಂಬು ನಗೆಯಿಂದ ಗಂಡನ ಕಡೆ ನೋಡಿ ಏನೂ ಮಾತನಾಡದೆ ಗಂಡನಿಗೆ ಹತ್ತಿರ ಕುಳಿತುಕೊಳ್ಳುವಂತೆ ಸನ್ನೆ ಮಾಡಿದಳು. ಗಾಬರಿಗೊಂಡ ವಿನಯ್ ಅವಳ ಬಳಿ ಕುಳಿತುಕೊಂಡ. ಅವನ ತೊಡೆಯ ಮೇಲೆ ತಲೆ ಇಟ್ಟ ನಂದಿತಾ ಅವನ ಕಡೆಯೇ ನೋಡುತ್ತಾ, `ನನ್ನ ಕೆಲಸವೆಲ್ಲ ಮುಗಿಯಿತು. ನನಗೆ ಅಪ್ಪಣೆ ಕೊಡಿ,’ ಎನ್ನುವಂತೆ ಸಂತೃಪ್ತಿಯಿಂದ ಕಣ್ಣು ಮುಚ್ಚಿದಳು.
ವಿನಯ್ ಜೋರಾಗಿ, “ನಂದಿತಾ…..” ಎಂದು ಕೂಗಿಕೊಂಡ. ಎಲ್ಲರೂ ಅವರತ್ತ ಧಾವಿಸಿ ಬಂದರು. ಆಗಲೇ ಅವಳ ಪ್ರಾಣಪಕ್ಷಿ ಹಾರಿಹೋಗಿತ್ತು. ಯಾವ ಸಂಕಟವಿಲ್ಲದೆ, ಕೊರಗಿಲ್ಲದೆ, ಎಲ್ಲರನ್ನೂ ಬಿಟ್ಟು ಹೋಗಿದ್ದಳು ನಂದಿತಾ. ಎಲ್ಲರಿಗೂ ಅವಳ ಸಾವು ಆಘಾತವಾಗಿತ್ತು. ಎಲ್ಲರೂ ಗೋಳಾಡುತ್ತಿದ್ದರು. ವಿನಯ್ನಂತೂ ಮೌನವಾಗಿ ಒಬ್ಬಂಟಿಯಾಗಿ ದುಃಖಿಸುತ್ತಿದ್ದ. ಪಲ್ಲವಿಗೆ ಅಕ್ಕನ ಮರಣ ಅತೀ ವೇದನೆಯಾಗಿತ್ತು. ಬಹುಶಃ ದೇವರು ಒಳ್ಳೆಯವರನ್ನು ಭೂಮಿಯ ಮೇಲೆ ಹೆಚ್ಚು ದಿನ ಉಳಿಯಲು ಬಿಡುವುದಿಲ್ಲ. ತ್ಯಾಗ ಮೂರ್ತಿಯಾದ ಅಕ್ಕ ಹೋಗುವ ಬದಲು ಪಾಪಿಷ್ಟೆ ತಾನು ಹೋಗಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು ಎಂದು ರೋದಿಸಿದಳು. ಅಕ್ಕನನ್ನು ನೆನೆದು ಕಣ್ಣೀರಿಟ್ಟ ಪಲ್ಲವಿ ನಾನು ಎಷ್ಟು ಕೇಡು ಬಯಸಿದರೂ ನನ್ನ ಜೀವನಕ್ಕೆ ನೆಲೆ ತೋರಿಸಿದ ಆ ತ್ಯಾಗಮಯಿಯ ಮುಂದೆ ತಾನು ಬಹಳ ಚಿಕ್ಕವಳಾಗಿಬಿಟ್ಟೆ. ಅವಳ ಪ್ರತಿಮೆಯ ಮುಂದೆ ನೆರೆದಿರುವ ಅನಾಥಾಶ್ರಮದ ಮಕ್ಕಳು, ಮಹಿಳೆಯರು, ಅಂಧ ಮಕ್ಕಳು ಮಾಲಾರ್ಪಣೆ ಮಾಡಲು ಸಾಲಾಗಿ ನಿಂತಿದ್ದರು. ಪಲ್ಲವಿ ದುಃಖದಿಂದ, `ಇವರೆಲ್ಲರ ಮುಂದೆ ನಾನು ಕನಿಷ್ಠಳಾಗಿ ಹೋದೆ. ಅಕ್ಕಾ ಸಾಧ್ಯವಾದರೆ ನನ್ನನ್ನು ಕ್ಷಮಿಸು,’ ಎಂದು ನಂದಿತಾಳ ಪ್ರತಿಮೆಯ ಬಳಿ ಕುಸಿದಳು.