ಕಥೆ – ವಸುಂಧರಾ ಭಟ್
ಸುಧಾ ಇನ್ನೂ ಬಾಗಿಲತ್ತಲೇ ದಿಟ್ಟಿಸುತ್ತಿದ್ದರು. ರಮ್ಯಾ ಮತ್ತು ಅವಳ ಪತಿ ಆಗ ತಾನೇ ಹೊರ ಹೋಗಿದ್ದರು. ಹಳದಿ ಸೀರೆ, ಸಡಿಲವಾಗಿ ಹೆಣೆದ ಜಡೆ, ಹಣೆಯ ಮೇಲೆ ಕುಂಕುಮ, ಕೈಯಲ್ಲಿ ಬಳೆಗಳು, ಕುತ್ತಿಗೆಯಲ್ಲಿ ಮಾಂಗಲ್ಯ ಸರ…. ಇವುಗಳೆಲ್ಲ ಸೇರಿ ರಮ್ಯಾ ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸುತ್ತಿದ್ದಳು. ಕಂಕುಳಲ್ಲಿದ್ದ ಮಗು ಸ್ತ್ರೀಗೆ ಮಾತೆಯ ರೂಪವನ್ನಿತ್ತು ಶೋಭೆಯನ್ನು ಒದಗಿಸಿತ್ತು.
ಸುಧಾ ತಲೆಯನ್ನು ಕುರ್ಚಿಗೆ ಒರಗಿಸಿ ಕಣ್ಣು ಮುಚ್ಚಿದರು. 34 ವರ್ಷಗಳ ಹಿಂದೆ ರಮ್ಯಾಳ ತಂದೆ ತಾಯಿ ಅವಳನ್ನು ಕೌನ್ಸೆಲಿಂಗ್‌ಗಾಗಿ ಸುಧಾಳ ಬಳಿಗೆ ಕರೆತಂದ ದೃಶ್ಯಗಳೆಲ್ಲ ಚಲನಚಿತ್ರದಂತೆ ಅವರ ಕಣ್ಣು ಮುಂದೆ ಓಡತೊಡಗಿತು.
ಸುಧಾ ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬ ಮನೋವಿಜ್ಞಾನಿ. ಜೊತೆಗೆ ಕೌನ್ಸೆಲರ್ ಕೂಡ. ಆಸ್ಪತ್ರೆಯ ಕೆಲಸ ಕಾರ್ಯಗಳ ಜೊತೆಗೆ ಸೋಶಿಯಲ್ ಕೌನ್ಸೆಲಿಂಗ್ ಮಾಡುತ್ತಿದ್ದರು. ಜೀವನದಲ್ಲಿ ನೊಂದು ಹತಾಶೆ ನಿರಾಶೆಗಳಿಂದ ಕುಸಿದಿರುವ ಜನರನ್ನು ಮೇಲೆತ್ತಿ ಅವರಿಗೆ ಪುನಃ ಬದುಕಿನಲ್ಲಿ ಉತ್ಸಾಹ ಮೂಡಿಸುವುದು ಅವರ ಏಕಮಾತ್ರ ಉದ್ದೇಶವಾಗಿತ್ತು.
ಒಮ್ಮೆ ರಮ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಳು. ಅದನ್ನು ಕಂಡು ಅವಳ ತಾಯಿ ಅವಳನ್ನು ಆಸ್ಪತ್ರೆಗೆ ಕರೆತಂದಿದ್ದರು. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಕಿದ್ದರಿಂದ ರಮ್ಯಾ ಬದುಕುಳಿದಳು. ಅವಳ ಶರೀರಕ್ಕಿಂತ ಹೆಚ್ಚಾಗಿ ಮನಸ್ಸು ಘಾಸಿಗೊಂಡಿದೆ ಎಂದು ಅವಳನ್ನು ನೋಡಿದ ಕೂಡಲೇ ಸುಧಾ ಅರ್ಥ ಮಾಡಿಕೊಂಡರು.
ನಿಜ ಸಂಗತಿಯನ್ನು ತಿಳಿಯಲು ರಮ್ಯಾಳ ತಾಯಿ ಕಾಂತಿಯೊಡನೆ ಸುಧಾ ಮಾತನಾಡಿದರು. ಆದರೆ ಆ ಬಗ್ಗೆ ಮಾತನಾಡಲು ಕಾಂತಿ ಹಿಂಜರಿದರು. ಸುಧಾ, ವಿಷಯವನ್ನು ಗೌಪ್ಯವಾಗಿಡುವ ಹಾಗೂ ಅವರಿಗೆ ಸಹಾಯ ಮಾಡುವ ಆಶ್ವಾಸನೆ ಕೊಟ್ಟ ಮೇಲೆ ಕಾಂತಿ ನಿಧಾನವಾಗಿ ಆ ಬಗ್ಗೆ ಹೇಳತೊಡಗಿದರು.
“ನನ್ನ ಮಗಳು ಅತ್ಯಾಚಾರಕ್ಕೆ ಬಲಿಯಾಗಿದ್ದಾಳೆ. ಅದೂ ತನ್ನ ತಂದೆಯ ಸ್ನೇಹಿತರಿಂದ. ಅವರ ಕಡೆಯ ಮಗಳು ಮತ್ತು ರಮ್ಯಾ ಗೆಳತಿಯರು. ಒಂದೇ ಕ್ಲಾಸ್‌ನಲ್ಲಿ ಓದುತ್ತಿದ್ದರು. ಒಂದು ದಿನ ರಮ್ಯಾ ಯಾವುದೋ ಪುಸ್ತಕಕ್ಕಾಗಿ ಅವರ ಮನೆಗೆ ಹೋಗಿದ್ದಳು. ಆ ಹುಡುಗಿ ತನ್ನ ತಾಯಿಯ ಜೊತೆ ಹೊರಗೆ ಹೋಗಿದ್ದಳು. ಅವಳ ತಂದೆ ಮಾತ್ರ ಮನೆಯಲ್ಲಿದ್ದರು. ಅವರು ರಮ್ಯಾಳಿಗೆ, ` ನಿನ್ನ ಗೆಳತಿಯ ಬ್ಯಾಗ್ ಒಳಗೆ ರೂಮಿನಲ್ಲಿದೆ. ಹೋಗಿ ನಿನಗೇನು ಬೇಕೋ ತೆಗೆದುಕೊ,’ ಎಂದರು.
“ಅವರ ಮನೆಯಿಂದ ಹಿಂದಿರುಗಿದ ರಮ್ಯಾ ಕೋಣೆಯೊಳಗೆ ಹೋಗಿ ಮಾತಿಲ್ಲದೆ ಮಲಗಿಬಿಟ್ಟಳು. ಮಾರನೆಯ ದಿನ ಬೆಳಗ್ಗೆ ಎದ್ದಾಗ ಅವಳಿಗೆ ಜ್ವರದ ತಾಪದಿಂದ ಮೈ ಸುಡುತ್ತಿತ್ತು. ನಾವು ಅದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಿಲ್ಲ. ಅದಾದ ಮೇಲೆ ಅವಳು ಕಾಲೇಜಿಗೂ ಹೋಗುತ್ತಿರಲಿಲ್ಲ. ಕ್ಲಾಸ್‌ಗಳು ಮುಗಿದಿರಬಹುದು ಎಂದು ಭಾವಿಸಿದೆವು.
“ಇದಾದ ಮೇಲೆ ಒಂದು ದಿನ ಅವಳ ತಂದೆಯ ಸ್ನೇಹಿತ ಮನೆಗೆ ಬಂದರು. ಯಾವಾಗಲೂ ಅವರೊಡನೆ ಚಟಪಟನೆ ಮಾತನಾಡುತ್ತಾ ತಿಂಡಿ, ಕಾಫಿ ಕೊಡುತ್ತಿದ್ದ ರಮ್ಯಾ ಕೋಣೆಗೆ ಹೋಗಿ ಬಚ್ಚಿಟ್ಟುಕೊಂಡಳು. ಆಗ ನನ್ನ ಮನಸ್ಸಿನಲ್ಲಿ ಸಂದೇಹ ಸುಳಿದಾಡಿತು. ನಾನು ಅವಳ ತಲೆ ನೇವರಿಸಿ, ಮೃದುವಾಗಿ ವಿಚಾರಿಸಿದಾಗ, ಅವಳು ಬಿಕ್ಕಳಿಸುತ್ತಾ ಈ ಅಸಹ್ಯಕರ ಘಟನೆಯ ಬಗ್ಗೆ ಹೇಳಿದಳು. ಅದನ್ನು ಕೇಳಿ ನನ್ನ ಮೈ ಉರಿಯಿತು.
“ಕೂಡಲೇ ಪೊಲೀಸರಿಗೆ ದೂರು ಕೊಡೋಣವೆಂದು ಅವಳ ತಂದೆಗೆ ಹೇಳಿದೆ. ಆದರೆ ಅವರು ನನ್ನನ್ನು ಸಮಾಧಾನಪಡಿಸಿ, `ಪೊಲೀಸರಿಗೆ ದೂರು ಕೊಟ್ಟು ಕೇಸ್ ಹಾಕುವುದು ಸುಲಭ. ಆದರೆ ಅದನ್ನು ಮುಂದುವರಿಸುವುದು ಬಹಳ ಕಷ್ಟ. ಮೊದಲನೆಯದಾಗಿ ನ್ಯಾಯಾಲಯದಲ್ಲಿ ಅಪರಾಧವನ್ನು ಸಾಬೀತು ಮಾಡುವುದು ಹೇಗೆ? ಏಕೆಂದರೆ ಇಂತಹ ಘಟನೆಗಳಲ್ಲಿ ಯಾರೂ ಸಾಕ್ಷಿ ಇರುವುದಿಲ್ಲ. ಜೊತೆಗೆ ಪ್ರತಿಯೊಂದು ಹಿಯರಿಂಗ್‌ನಲ್ಲಿ ವಕೀಲರು ಎಂತಹ ಚುಚ್ಚು ಮಾತಿನ ಪ್ರಶ್ನೆಗಳನ್ನು ಕೇಳುತ್ತಾರೆಂದರೆ…… ಸೂಕ್ಷ್ಮ ಮನಸ್ಸಿನ ನಮ್ಮ ಮಗು ಮತ್ತೆ ಮತ್ತೆ ಆ ದುರ್ಘಟನೆಯನ್ನು ನೆನೆಸಿಕೊಳ್ಳಬೇಕಾಗುತ್ತದೆ. ಈಗ ಈ ವಿಷಯ ನಮಗಷ್ಟೇ ಗೊತ್ತು. ಸಮಾಜಕ್ಕೆ ಈ ಸುದ್ದಿ ತಿಳಿದರೆ, ಅವಳು ಬದುಕು ನಡೆಸುವುದೇ ಕಷ್ಟವಾಗುತ್ತದೆ. ಅವಳು ಬಾಳಿ ಬದುಕಬೇಕಾದವಳು. ಅವಳನ್ನು ಯಾರು ಮದುವೆಯಾಗುತ್ತಾರೆ?’ ಎಂದರು.”
ಕಾಂತಿ ಮಾತು ನಿಲ್ಲಿಸಿ, ಒಂದು ದೀರ್ಘ ಉಸಿರೆಳೆದುಕೊಂಡು ಮುಂದೆ ಹೇಳತೊಡಗಿದರು, “ಮಗಳ ಸ್ಥಿತಿ ನೋಡಿದಾಗ, ಆ ಕ್ರೂರಿಯನ್ನು ಕೊಂದುಬಿಡಬೇಕು ಅನ್ನಿಸುತ್ತಿತ್ತು. ಆದರೆ ಪತಿಯ ಮಾತಿನಲ್ಲೂ ಸತ್ಯವಿತ್ತು. ಮಗಳ ವರ್ತಮಾನ ಹಾಳಾಗಿ ಹೋಗಿದೆ. ಕಡೆಗೆ ಅವಳ ಭವಿಷ್ಯವಾದರೂ ಹಾಳಾಗದಿರಲಿ ಎಂಬ ಆಲೋಚನೆಯಿಂದ ನಾವು ಮನಸ್ಸನ್ನು ಗಟ್ಟಿ ಮಾಡಿಕೊಂಡೆವು. ಅವಳಿಗೆ ಎಷ್ಟೆಷ್ಟೋ ತಿಳಿ ಹೇಳಿ ಕಾಲೇಜಿಗೆ ಹೋಗಲು ಒಪ್ಪಿಸಿದೆವು. ಅವಳ ಅಣ್ಣನೇ ಅವಳನ್ನು ಕಾಲೇಜಿಗೆ ಬಿಡುವ ಮತ್ತು ಕರೆತರುವ ಕೆಲಸ ಮಾಡುತ್ತಿದ್ದ. ನಾನು ದಿನವಿಡೀ ಅವಳ ಹಿಂದೆ ಮುಂದೆಯೇ ಇರುತ್ತಿದ್ದೆ. ಆದಷ್ಟೂ ಅವಳ ಮನಸ್ಸುನ್ನು ಬೇರೆ ಕಡೆ ವಾಲಿಸಲು ಮಾತನಾಡಿಸುತ್ತಿದ್ದೆ. ಆದರೆ ಅವಳ ಬೇಸರ, ನೋವನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ಒಂದು ದಿನ ಪಕ್ಕದಲ್ಲಿದ್ದ ಅಂಗಡಿಗೆ ಹೋಗಿದ್ದೆ. ಆ ಸಮಯದಲ್ಲಿ ಇವಳು ಹೀಗೆ ಮಾಡಿಕೊಂಡಿದ್ದಳು,” ಎಂದರು.
ಕಾಂತಿ ಹೇಳಿದ್ದನ್ನೆಲ್ಲಾ ಸುಧಾ ಗಮನವಿಟ್ಟು ಕೇಳಿದರು. ಆ ಘಟನೆಗಳೆಲ್ಲಾ ಕಣ್ಮುಂದೆ ನಡೆದಂತೆ ಅವರಿಗೆ ಭಾಸವಾಯಿತು. ರಮ್ಯಾಳನ್ನು ತಮ್ಮ ಮನೆಗೆ ಕರೆತರುವಂತೆ ಕಾಂತಿಗೆ ಹೇಳಿದರು. ಮೊದಲ ಸಲ ಬಂದಾಗ ರಮ್ಯಾ ಬಾಯಿ ಬಿಡಲಿಲ್ಲ. ಸುಮ್ಮನೆ ನೆಲ ನೋಡುತ್ತಾ ಕುಳಿತಿದ್ದಳು. ಎರಡನೆಯ ಸಲ ಹೀಗೆ ಆಯಿತು. ವ್ಯತ್ಯಾಸವೆಂದರೆ ಈ ಸಲ ಅವಳು ಕಣ್ಣೆತ್ತಿ ಸುಧಾರನ್ನು ನೋಡಿದಳು. ಇದೇ ರೀತಿ ಇನ್ನೆರಡು ಸಿಟ್ಟಿಂಗ್‌ಗಳಾದವು. ಸುಧಾ ಅವಳನ್ನು ಮಾತನಾಡಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಅವಳು ಮಾತ್ರ ಗೋಡೆಯತ್ತ ದೃಷ್ಟಿಯಿಟ್ಟು ಕುಳಿತಿರುತ್ತಿದ್ದಳು.
ರಮ್ಯಾ ಪ್ರತಿಸಲ ಮಾತನಾಡದೆ ಕುಳಿತಿದ್ದಾಗ ಸುಧಾ ಅವಳಿಗೆ ಹಿಂದೆ ನಡೆದುದನ್ನು ಮರೆತು ಮುಂದೆ ಬದುಕಬೇಕೆಂದು ಸಮಾಧಾನ, ಬುದ್ಧಿವಾದ ಹೇಳುತ್ತಿದ್ದರು. ಒಂದು ದಿನ ರಮ್ಯಾ ಅವರಿಗೆ ಮೆಲ್ಲಗೆ, “ಆಗಿದ್ದನ್ನು ಮರೆಯಬೇಕು ಅಂತ ಬಾಯಲ್ಲಿ ಹೇಳುವುದು ಸುಲಭ. ಮಣ್ಣಿನ ಮೇಲೆ ಬರೆದ ಚಿತ್ರವನ್ನಾದರೆ ನೀರಿನಿಂದ ತೊಳೆದು ಅಳಿಸಬಹುದು. ಆದರೆ ಇದು ನನ್ನ ಜೀವನದಲ್ಲಿ ನಡೆದಿರುವ ಘಟನೆ, ಅಳಿಸಲಾರದಂಥದ್ದು. ನಾನು ಎಂತಹ ನೋವನ್ನು ಅನುಭವಿಸಿದ್ದೇನೆ ಅನ್ನೋದು ನಿಮಗೆ ಅರ್ಥವಾಗುವುದಿಲ್ಲ….. ಈ ನೋವು ಕೊಟ್ಟವರು ನಮ್ಮವರೇ ಆದಾಗ ದೇಹಕ್ಕಿಂತ ಹೆಚ್ಚಾಗಿ ಮನಸ್ಸು ಒದ್ದಾಡಿಬಿಡುತ್ತದೆ,” ಹೀಗೆ ಹೇಳುತ್ತಾ ರಮ್ಯಾ ಬಿಕ್ಕಿ ಬಿಕ್ಕಿ ಅಳತೊಡಗಿದಳು.
ಸುಧಾ ತಮ್ಮ ಕುರ್ಚಿಯಿಂದ ಎದ್ದು ಬಂದು ರಮ್ಯಾಳ ಪಕ್ಕದಲ್ಲಿ ಕುಳಿತು ಅವಳನ್ನು ತಮ್ಮ ತೋಳಿನಲ್ಲಿ ಬಳಸಿ ಹಿಡಿದು, “ಈ ನೋವನ್ನು ನನಗಿಂತ ಚೆನ್ನಾಗಿ ಯಾರು ಅರ್ಥ ಮಾಡಿಕೊಳ್ಳಬಲ್ಲರು ರಮ್ಯಾ,” ಎನ್ನುತ್ತಾ ಅವಳ ತಲೆ ನೇವರಿಸಿದರು.
ರಮ್ಯಾ ಆಶ್ಚರ್ಯದಿಂದ ಸುಧಾರತ್ತ ನೋಡಿದಳು. ಅವರ ಒದ್ದೆಯಾದ ಕಣ್ಣುಗಳನ್ನು ನೋಡಿ ತನ್ನ ಅಳುವನ್ನು ಮರೆತೇಬಿಟ್ಟಳು. ಸುಧಾ 20 ವರ್ಷಗಳ ಹಿಂದಿನ ತಮ್ಮ ಗತ ಜೀವನದ ಕಥೆಯ ಪುಸ್ತಕವನ್ನು ಅವಳ ಮುಂದೆ ತೆರೆದಿಟ್ಟರು.
“ಕಾಲೇಜ್ ಡೇ ಪ್ರೋಗ್ರಾಂ ಮುಗಿಸಿ ಕೊಂಡು ಬರುವಾಗ ಬಹಳ ತಡವಾಗಿತ್ತು. ನನ್ನ ಗೆಳತಿ ರೂಪಾ ಮತ್ತು ನಾನು ಸರಸರನೆ ನಡೆದು ಹೋಗುತ್ತಿದ್ದೆವು. ಆಗ ಒಂದು ಕಾರು ನಮ್ಮ ಹತ್ತಿರ ಬಂದು ನಿಂತಿತು. ಯಾರು ಏನು ಎಂದು ನಾವು ನೋಡುವಷ್ಟರಲ್ಲಿ ಕಾರಿನಲ್ಲಿದ್ದ ಇಬ್ಬರು ಗೂಂಡಾಗಳು ನನ್ನನ್ನು ಕಾರಿನೊಳಕ್ಕೆ ಎಳೆದುಕೊಂಡರು. ರೂಪಾ ಆ ಕತ್ತಲಿನಲ್ಲಿ ಮರೆಯಾಗಿ ಓಡಿಹೋದಳು. ಹೇಗೋ ಮಾಡಿ ನನ್ನ ಮನೆಗೆ ಸುದ್ದಿ ಮುಟ್ಟಿಸಿದಳು.
“ಆದರೆ ಮನೆಯವರು ನನ್ನನ್ನು ಹುಡುಕಿಕೊಂಡು ಬರುವಷ್ಟರಲ್ಲಿ ಆ ಗೂಂಡಾಗಳು ನನ್ನ ಶೀಲಹರಣ ಮಾಡಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನನ್ನನ್ನು ರಸ್ತೆಯ ಬದಿಗೆ ಬಿಸಾಡಿ ಹೊರಟುಹೋಗಿದ್ದರು.
“ಆ ಘಟನೆಯ ನಂತರ ನಾನು ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟೆ. ನನ್ನ ಮೇಲೆಯೇ ನನಗೆ ಅಸಹ್ಯ ಹುಟ್ಟಿತು. ಬಾತ್‌ರೂಮಿನಲ್ಲಿ ಗಂಟೆಗಟ್ಟಲೆ ನನ್ನ ದೇಹವನ್ನು ಉಜ್ಜಿ ಉಜ್ಜಿ ತೊಳೆಯುತ್ತಿದ್ದೆ. ಆದರೂ ಆ ಅಸಹ್ಯಕರ ಸ್ಪರ್ಶದ ನೆನಪಿನಿಂದ ಮುಕ್ತಳಾಗಲು ನನಗೆ ಆಗುತ್ತಿರಲಿಲ್ಲ. ನೂರಾರು ಚೇಳುಗಳು ನನ್ನ ಶರೀರದ ಮೇಲೆಲ್ಲ ಹರಿದಾಡುತ್ತಿರುವಂತೆ ಭಾಸವಾಗುತ್ತಿತ್ತು.
“ನಂತರ ಆ ಘಟನೆಯ ಅಂಶ ನನ್ನ ಶರೀರದಲ್ಲಿ ರೂಪುಗೊಳ್ಳುತ್ತಿದೆ ಎಂಬ ವಿಷಯ ನನಗೆ ಅರಿವಾಗತೊಡಗಿತು. ನನಗೆ ಏನು ಮಾಡಬೇಕೆಂದು ತೋರಲಿಲ್ಲ. ದಾರಿ ಕಾಣದೆ ನಾನು ನಿನ್ನಂತೆ ಪ್ರಾಣ ಕಳೆದುಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಸಾಯುವುದು ಸುಲಭವಲ್ಲ ತಾನೇ? ಆ ಆತಂಕದ ಸಮಯದಲ್ಲಿ ನನ್ನ ತಾಯಿ ನನ್ನ ಜೊತೆಗಿದ್ದರು. ಅವರು ನನಗೆ ಬಗೆಬಗೆಯಾಗಿ ಬುದ್ಧಿ ಹೇಳಿದರು, `ನಿನ್ನದಲ್ಲದ ತಪ್ಪಿಗೆ ನೀನೇಕೆ ಶಿಕ್ಷೆ ಕೊಟ್ಟುಕೊಳ್ಳುತ್ತೀಯಾ? ಅವಮಾನ ಪಟ್ಟುಕೊಳ್ಳಬೇಕಾದುದು ನೀನಲ್ಲ, ಇಂತಹ ನೀಚ ಕೆಲಸ ಮಾಡಿದ ಆ ಪಾಪಿಗಳು…’
“ಅಮ್ಮ ನನ್ನನ್ನು ತಮ್ಮ ಪರಿಚಯದ ಒಬ್ಬ ಡಾಕ್ಟರ್ ಬಳಿಗೆ ಕರೆದೊಯ್ದರು. ಅಲ್ಲಿ ನನಗೆ ಆ ಪಾಪದ ಪಿಂಡದಿಂದ ಬಿಡುಗಡೆ ದೊರೆಯಿತು. ನನಗೆ ಒಂದು ಹೊಸ ಜನ್ಮ ದೊರೆತಂತಾಯಿತು. ಆ ದಿನವೇ, `ಇಂದಿನಿಂದ ನಾನು ನನಗಾಗಿ ಅಲ್ಲ. ನನ್ನಂಥವರಿಗಾಗಿ ಬದುಕುತ್ತೇನೆ,’ ಎಂದು ನಾನೊಂದು ತೀರ್ಮಾನ ತೆಗೆದುಕೊಂಡೆ.”
ಇಷ್ಟು ಹೇಳಿ ಸುಧಾ ರಮ್ಯಾಳ ಕೈ ಹಿಡಿದು, “ಈಗ ನಿನಗೆ ಬದುಕುವ ದಾರಿಯನ್ನು ಕಲಿಸಲು ಸಾಧ್ಯವಾದರೆ ನನಗೆ ಸಂತೋಷವಾಗುತ್ತದೆ,” ಎಂದರು.
“ನಿಮಗೆ ಸಮಾಜದ ಭಯ ಇರಲಿಲ್ಲವೇ?” ರಮ್ಯಾ ಆಶ್ಚರ್ಯದಿಂದ ಕೇಳಿದಳು.
“ಎಂಥ ಭಯ? ಯಾವ ಸಮಾಜ…..? ನಾನು ಎಲ್ಲ ಭಯದಿಂದ ಮುಕ್ತಳಾಗಿದ್ದೆ. ಕಳೆದುಕೊಳ್ಳುವುದಕ್ಕೆ ನನ್ನಲ್ಲಿ ಏನು ಉಳಿದಿತ್ತು? ನಾನು ಕಳೆದುಕೊಂಡಿದ್ದನ್ನು ವಾಪಸ್ ಪಡೆದುಕೊಳ್ಳಬೇಕಿತ್ತು.”
“ಆಮೇಲೆ ಏನಾಯಿತು….? ಅಂದರೆ, ನೀವು ಈ ಮಟ್ಟವನ್ನು ಹೇಗೆ ಮುಟ್ಟಿದಿರಿ?” ಸುಧಾರ ಮಾತಿನಲ್ಲಿ ರಮ್ಯಾಳಿಗೆ ಇನ್ನೂ ವಿಶ್ವಾಸ ಹುಟ್ಟಿರಲಿಲ್ಲ.
“ಆ ಘಟನೆಯನ್ನು ಮರೆಯುವುದಕ್ಕಾಗಿ ನಾನು ಆ ಊರನ್ನೇ ಬಿಟ್ಟುಬಿಟ್ಟೆ. ಹಾಸ್ಟೆಲ್‌ನಲ್ಲಿ ಇದ್ದುಕೊಂಡು ನನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದೆ. ಆಗ ನನ್ನ ಏಕಮಾತ್ರ ಗುರಿ ಏನೆಂದರೆ ಮಾನಸಿಕ ವಿಜ್ಞಾನದಲ್ಲಿ ಮಾಸ್ಟರ್ ಡಿಗ್ರಿ ಪಡೆಯಬೇಕೆಂಬುದು. ಆ ಮೂಲಕ ನಾನು ನೊಂದವರ ಮನಸ್ಸಿನಾಳಕ್ಕೆ ಇಳಿದು ಅವರ ನೋವು, ದುಃಖ, ಹತಾಶೆಗಳನ್ನು ಹೋಗಲಾಡಿಸಬಹುದೆಂಬುದು ನನ್ನ ಇಚ್ಛೆಯಾಗಿತ್ತು. ನನ್ನ ಮೂಕರೋದನವನ್ನೇ ನನ್ನ ಶಕ್ತಿಯಾಗಿಸಿಕೊಂಡು ನಾನು ಹೋರಾಡಿದೆ ಮತ್ತು ಜಯಶಾಲಿಯಾದೆ.”
ಸುಧಾ ಸ್ವಲ್ಪ ಹೊತ್ತು ಮಾತು ನಿಲ್ಲಿಸಿ ರಮ್ಯಾಳ ಹೆಗಲ ಮೇಲೆ ಕೈಯಿಟ್ಟು ಮತ್ತೆ ಮುಂದುವರಿಸಿದರು, “ರಮ್ಯಾ, ಭಗವಂತ ನಿನಗೆ ಈ ಬಾಳನ್ನು ಕೊಟ್ಟಿರುವುದು ಬದುಕಲೆಂದು. ಯಾರೋ ಎಸಗಿದ ಪಾಪ ಕಾರ್ಯಕ್ಕೆ ನಮ್ಮನ್ನು ನಾವೇಕೆ ಶಿಕ್ಷಿಸಿಕೊಳ್ಳಬೇಕು? ನೀನೂ ಸಹ ಧೈರ್ಯದಿಂದ ಹೋರಾಡಬೇಕು. ನಿನ್ನದಿನ್ನೂ ಚಿಕ್ಕ ವಯಸ್ಸು…. ಮೊದಲು ನಿನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸು…. ಆಮೇಲೆ ನಿನ್ನ ಮದುವೆಗೆ ನನ್ನನ್ನು ಕರೆಯಬೇಕು.”
“ನೀವೇಕೆ ಮದುವೆ ಮಾಡಿಕೊಳ್ಳಲಿಲ್ಲ?” ರಮ್ಯಾ ಧೈರ್ಯ ಮಾಡಿ ಪ್ರಶ್ನಿಸಿದಳು.
ಒಂದು ನಿಡಿದಾದ ಉಸಿರೆಳೆದುಕೊಂಡ ಸುಧಾ, “ಇಲ್ಲಿ ನಾನು ಹಿಂದೆ ಉಳಿದೆ. ನನ್ನೊಂದಿಗೆ ಓದುತ್ತಿದ್ದ ಡಾ. ನರೇಂದ್ರ ನನಗೆ ಮದುವೆಯ ಪ್ರಸ್ತಾಪ ಇತ್ತರು. ನನಗೂ ಅವರು ಇಷ್ಟವಾಗಿದ್ದರು. ನಾನು ಅವರಿಗೆ ನನ್ನ ಬಗ್ಗೆ ಮುಚ್ಚುಮರೆ ಇಲ್ಲದೆ ಎಲ್ಲವನ್ನೂ ತಿಳಿಸಿದೆ. ನನ್ನ ಬಿಚ್ಚು ಮಾತು ಅವರಿಗೆ ಇಷ್ಟವಾಗಲಿಲ್ಲ. ಅವರ ಪುರುಷ ಜಾತಿಯ ಅಹಂ ಮುಂದೆ ಬಂದಿತು. ಅವರು ಮದುವೆಗೆ ಬೇಡ ಎನ್ನಲಿಲ್ಲ. ಆದರೆ ನಾನೇ ಹಿಂಜರಿದೆ. ಅವರ ಪ್ರೀತಿಯಲ್ಲಿ ದಯೆಯ ಛಾಯೆ ತೋರತೊಡಗಿತು. ನನ್ನ ಗುರಿಯನ್ನು ಮುಟ್ಟಿದ ಮೇಲೆ ಇನ್ನೊಬ್ಬರ ದಯೆಗೆ ಪಾತ್ರಳಾಗಲು ನನಗಿಷ್ಟವಾಗಲಿಲ್ಲ. ಇಂದಲ್ಲ, ನಾಳೆ ಈ ಪ್ರೀತಿಯೂ ಸಹಾನುಭೂತಿಯಾಗಿ ಬದಲಾಗುವ ಸ್ಥಿತಿಗೆ ಒಡ್ಡಿಕೊಳ್ಳಲು ನಾನು ಒಪ್ಪಲಿಲ್ಲ.”
“ಮತ್ತೆ ನೀವು ನನಗೆ ಮದುವೆ ಮಾಡಿಕೊಳ್ಳಲು ಹೇಳುತ್ತಿರುವಿರಲ್ಲ…..”
“ನಾನು ಮಾಡಿದ ತಪ್ಪನ್ನೇ ನೀನೂ ಮಾಡಬಾರದೆಂದು ನಾನು ನಿನಗೆ ತಿಳಿಸಿ ಹೇಳುತ್ತಿದ್ದೇನೆ. ನಮ್ಮ ಸಮಾಜದಲ್ಲಿನ ಒಂದು ಕಟು ಸತ್ಯವೆಂದರೆ ಹಲವಾರು ಗರ್ಲ್ ಫ್ರೆಂಡ್‌ಗಳೊಡನೆ ತಿರುಗಾಡುವ ಪುರುಷರು ತಾವು ಮದುವೆಯಾಗುವ ಹುಡುಗಿ ವರ್ಜಿನ್ ಆಗಿರಬೇಕೆಂದು ಬಯಸುತ್ತಾರೆ. ನೀನು ಯಾರಿಗೂ ನಿನ್ನ ಬಗ್ಗೆ ಹೇಳುವ ಅಗತ್ಯವಿಲ್ಲ. ನೀನಾಗಿ ಹೇಳದಿದ್ದರೆ ಇತರರಿಗೆ ನಿನಗೆ ಸಂಭವಿಸಿದ ಕೇಡಿನ ಬಗ್ಗೆ ತಿಳಿಯುವುದಿಲ್ಲ.”
“ಆದರೆ, ಇದು ಮೋಸ ಮಾಡಿದಂತೆ ಆಗುವುದಿಲ್ಲವೇ?” ರಮ್ಯಾ ಇನ್ನೂ ಅರೆ ಮನಸ್ಸಿನಲ್ಲಿದ್ದಳು.
“ಮೋಸ ಮಾಡಿದ್ದು ನೀನಲ್ಲ. ನಿನ್ನ ತಂದೆಯ ಸ್ನೇಹಿತ… ನಿಮ್ಮ ತಂದೆಗೆ, ಅವರ ಸ್ನೇಹಕ್ಕೆ ಮೋಸ ಮಾಡಿದ್ದಾನೆ. ತನ್ನ ಸಂಸಾರಕ್ಕೆ ಮೋಸ ಮಾಡಿದ್ದಾನೆ….. ನಿನ್ನ ಮುಗ್ಧತೆಗೆ ಮತ್ತು ಮಾನವೀಯತೆಗೆ ಮೋಸ ಮಾಡಿದ್ದಾನೆ.
“ನಾವು ಸ್ತ್ರೀಯರು ಈಗ ಸ್ವಲ್ಪ ಸ್ವಾರ್ಥಿಗಳಾಗಬೇಕಾಗಿದೆ….. ಬದುಕಿನ ಕಾಮನಬಿಲ್ಲಿಗೆ ಬಣ್ಣವನ್ನು ಸ್ವತಃ ತುಂಬಬೇಕಿದೆ. ಈಗ ಹೇಳು. ನಿನ್ನ ಮೋಸಗಾರ ಅಂಕಲ್ ಯಾರಿಗೂ ಏನನ್ನೂ ಹೇಳದೆ ಸಮಾಜದಲ್ಲಿ ಸೋಗು ಹಾಕಿಕೊಂಡು ಮೆರೆಯುತ್ತಿಲ್ಲವೇ? ಮತ್ತೆ, ನೀನು ಯಾಕೆ ಹಾಗಿರಬಾರದು? ಬಂಗಾರದ ಆಭರಣಕ್ಕೆ ಒಂದಿಷ್ಟು ಕೆಸರು ತಗುಲಿದರೆ, ಅದರ ಶುದ್ಧತೆಗೆ ಕೊಂಚವೂ ಲೋಪ ಉಂಟಾಗುವುದಿಲ್ಲ. ನೀನೂ ಕೂಡ ಈ ಘಟನೆಯನ್ನು ಒಂದು ಕೆಟ್ಟ ಕನಸು ಅಂತ ಭಾವಿಸಿ ಮರೆಯಬೇಕು.”
“ಅಂಕಲ್ ನನಗೆ ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಹೊರಟರೆ…..?” ರಮ್ಯಾ ತನ್ನ ಅನುಮಾನ ವ್ಯಕ್ತಪಡಿಸಿದಳು.
“ಅವರು ಹಾಗೆ ಮಾಡುವುದಿಲ್ಲ. ಏಕೆಂದರೆ ಅದರಿಂದ ಅವರ ಹೆಸರು ಬಹಿರಂಗವಾಗುತ್ತದೆ. ತಮ್ಮ ಕುಟುಂಬ ಮತ್ತು ಸಮಾಜದ ಮುಂದೆ ಕೆಟ್ಟವರಾಗಿ ನಿಲ್ಲುವುದಕ್ಕೆ ಯಾರೂ ಸಿದ್ಧರಿರುವುದಿಲ್ಲ,” ಸುಧಾ ತಮ್ಮ ಅನುಭವದ ಆಧಾರದಿಂದ ಹೇಳಿದರು.
ಸುಧಾ ಹೇಳಿದ್ದೆಲ್ಲ ರಮ್ಯಾಳಿಗೆ ಅರ್ಥವಾಯಿತು. ಅವಳು ಆತ್ಮವಿಶ್ವಾಸದಿಂದ ಎದ್ದು ನಿಂತು ಸುಧಾರ ಚೇಂಬರ್‌ನಿಂದ ಹೊರನಡೆದಳು. ಅವಳ ಪರೀಕ್ಷೆಯ ಟೈಮ್ ಟೇಬಲ್ ಪ್ರಕಟವಾಗಿತ್ತು. ಮನಸ್ಸಿಟ್ಟು ಅಭ್ಯಾಸ ಮಾಡಿ ಅವಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದಳು. ನಂತರ ಅವಳು ಕಂಪ್ಯೂಟರ್ ಕೋರ್ಸ್ ಮಾಡಿಕೊಂಡು ಉದ್ಯೋಗ ಪಡೆದುಕೊಂಡಳು.
ವರ್ಷ ತುಂಬುವಷ್ಟರಲ್ಲಿ ಅವಳ ಮದುವೆಯೂ ಆಯಿತು. ಮದುವೆಯ ನಂತರ ಈಗ ರಮ್ಯಾ ಮತ್ತೊಮ್ಮೆ ಸುಧಾರನ್ನು ಭೇಟಿ ಮಾಡಲು ಮತ್ತು ತನ್ನ ಮಗುವಿನ ನಾಮಕರಣಕ್ಕೆ ಆಮಂತ್ರಿಸಲು ಬಂದಿದ್ದಳು.
ಇಷ್ಟೆಲ್ಲ ಆಗುವಾಗ ಸುಧಾ ನಿರಂತರವಾಗಿ ಕಾಂತಿಯ ಸಂಪರ್ಕದಲ್ಲಿದ್ದರು. ಹೆಜ್ಜೆಹೆಜ್ಜೆಗೂ ಮಾರ್ಗದರ್ಶನ ನೀಡುತ್ತಿದ್ದರು. ರಮ್ಯಾ ಸ್ವತಃ ಎದ್ದು ನಿಂತಿದ್ದನ್ನು ನೋಡಿ, ಮತ್ತೊಂದು ಮೊಗ್ಗು ಮುದುಡುವುದನ್ನು ತಾವು ತಪ್ಪಿಸಿದುದಕ್ಕಾಗಿ ತೃಪ್ತರಾದರು. ರಮ್ಯಾಳನ್ನು ಮನದಲ್ಲೇ ಅಭಿನಂದಿಸುತ್ತಾ ಪುಟ್ಟ ಪಾಪುವಿಗೆ ಉಡುಗೊರೆ ತರಲು ಅಂಗಡಿಯತ್ತ ಹೊರಟರು.