ಶಶಿರೇಖಾ ತನ್ನ 5 ವರ್ಷದ ಮಗನೊಂದಿಗೆ ಸ್ನೇಹಿತೆಯ ಮನೆಗೆ ಹೋದಳು. ಅಲ್ಲಿ ತಲುಪುತ್ತಿದ್ದಂತೆ ಶಶಿರೇಖಾ ಹಾಗೂ ಮಗನಿಗೆ ಬಗೆಬಗೆಯ ಉಪಚಾರಗಳು ದೊರೆಯಲಾರಂಭಿಸಿದವು. ತಟ್ಟೆಯಲ್ಲಿ ಇಟ್ಟಿದ್ದ ಆಹಾರ ವಸ್ತುಗಳನ್ನು ಮಗು ತನ್ನ ಜೇಬಿಗೆ ಹಾಕಿಕೊಳ್ಳಲಾರಂಭಿಸಿತು. ಬಳಿಕ ಶಶಿರೇಖಾಳ ಗೆಳತಿಯ 4 ವರ್ಷದ ಮಗುವನ್ನು ನೂಕಿತು. ಶಶಿರೇಖಾ ಮಗುವನ್ನು ಗದರಿದಾಗ ಅದು ಪ್ರತಿಯಾಗಿ ಏನೇನೋ ಕೂಗಾಡಿತು. ಮಗುವಿನ ಈ ರೀತಿಯ ವರ್ತನೆಯಿಂದ ಶಶಿರೇಖಾಗೆ ಬಹಳ ಇರಸುಮುರಸಾಯಿತು.
ನೀವು ನಿಮ್ಮ ಮಗುವನ್ನು ಕರೆದುಕೊಂಡು ಯಾರ ಮನೆಗಾದರೂ ಹೋದರೆ, ಅದು ಯಾವ ರೀತಿಯಲ್ಲಿ ವರ್ತಿಸಬಹುದು ಎಂದು ಹೇಳಲು ಸಾಧ್ಯವಿಲ್ಲ. ಎಷ್ಟೋ ಸಲ ಮಗು ಮನೆಯಲ್ಲಿ ಚೆನ್ನಾಗಿ ವರ್ತಿಸುತ್ತದೆ. ಆದರೆ ಹೊರಗೆ ಹೋದಾಗ ಅದು ವಿಚಿತ್ರವಾಗಿ ವರ್ತಿಸುತ್ತದೆ.
ಈ ಕುರಿತಂತೆ ಮನೋತಜ್ಞ ಡಾ. ಅನಿಲ್ ಅವರು ಹೀಗೆ ಹೇಳುತ್ತಾರೆ, “ಮಗು ಹೇಗೆಯೇ ವರ್ತಿಸಲಿ, ಅದನ್ನೆಲ್ಲ ಅದು ಕುಟುಂಬದವರಿಂದಲೇ ಕಲಿತುಕೊಳ್ಳುತ್ತದೆ. ನೀವು ಮನೆಯಲ್ಲಿ ಯಾರೊಂದಿಗೆ ಹೇಗೆ ವರ್ತಿಸುತ್ತೀರೊ ಮಗು ಅದನ್ನು ಅನುಕರಣೆ ಮಾಡುತ್ತದೆ. ಎಷ್ಟೋ ಸಲ ಅದು ಗಮನ ಸೆಳೆಯಲು ಹೇಗ್ಹೇಗೊ ಮಾತನಾಡುತ್ತದೆ.
“ಪೇರೆಂಟಿಂಗ್’ ಅಂದರೆ ಮಗುವಿನ ಸಮಂಜಸ ಅಸಮಂಜಸ ಬೇಡಿಕೆಗಳನ್ನು ಈಡೇರಿಸುವುದಷ್ಟೇ ಅಲ್ಲ, ಮಗುವನ್ನು ಗಮನದಲ್ಲಿಟ್ಟುಕೊಂಡು ಅದರದ್ದೇ ಆದ ರೀತಿಯಲ್ಲಿ ಅದು ನಿಮ್ಮ ಸರಿಯಾದ ಮಾತನ್ನು ಇಷ್ಟಪಡುವ ರೀತಿಯಲ್ಲಿ ತಿಳಿಸಿ ಹೇಳುವುದಾಗಿದೆ. ನೀವು ನಿಮ್ಮ ಮಕ್ಕಳಿಗೆ ಒಳ್ಳೆಯದು ಕೆಟ್ಟದರ ಬಗ್ಗೆ ಅರಿವು ಮೂಡಿಸುತ್ತೀರಾ? ಆದರೆ ಆ ಮಗುವಿಗೆ ಚಿಕ್ಕವರು ದೊಡ್ಡವರ ಜೊತೆ ಹೇಗೆ ಸಂಯಮದಿಂದ ನಡೆದುಕೊಳ್ಳಬೇಕು ಎಂಬುದನ್ನು ಕಲಿಸಲು ಮರೆತುಬಿಡುತ್ತೀರಾ. ಈ ಕಾರಣದಿಂದಾಗಿ ಮಗು ಯಾರ ಜೊತೆಗೆ ಯಾವಾಗ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿತುಕೊಳ್ಳುವುದಿಲ್ಲ.
ನಿಮ್ಮನ್ನು ಬದಲಿಸಿಕೊಳ್ಳಿ….
ನಿಮ್ಮ ಮಗುವನ್ನು ಉತ್ತಮ ವರ್ತನೆಗೆ ಪ್ರೇರೇಪಿಸಲು ಎಲ್ಲಕ್ಕೂ ಮೊದಲು ನಿಮ್ಮನ್ನು ನೀವು ಬದಲಿಸಿಕೊಳ್ಳಬೇಕಾಗುತ್ತದೆ. ನೀವು ನಿಮ್ಮ ಕುಟುಂಬದವರೊಂದಿಗೆ ಹೇಗೆ ವರ್ತಿಸುತ್ತೀರೋ, ಮಗು ಅದನ್ನೇ ಅನುಕರಣೆ ಮಾಡುವುದನ್ನು ಕಲಿತುಕೊಳ್ಳುತ್ತದೆ. ನಿಮ್ಮ ಪ್ರೀತಿಯ ಪುತ್ರ ಕುಟುಂಬದವರನ್ನು ಗೌರವಿಸಬೇಕು, ಯಾರೊಂದಿಗೂ ಜೋರು ಧ್ವನಿಯಲ್ಲಿ ಮಾತನಾಡಬಾರದೆಂದು ನೀವು ಬಯಸುವಿರಾದರೆ, ನೀವು ಮೊದಲು ನಿಮ್ಮ ಕುಟುಂಬದವರನ್ನು ಗೌರವಿಸಬೇಕು. ಅವರೊಂದಿಗೆ ಏರಿದ ಧ್ವನಿಯಲ್ಲಿ ಮಾತನಾಡಬಾರದು. ನಿಮ್ಮ ಅತ್ತೆ ಮಾವ ಹಾಗೂ ಕುಟುಂಬದ ಇತರೆ ಸದಸ್ಯರ ಜೊತೆ ಸ್ನೇಹಪೂರ್ವಕ ಹಾಗೂ ಗೌರವಪೂರ್ಕವಾಗಿ ವರ್ತಿಸಬೇಕು. ನೀವು ಮಗುವಿಗೆ ದೊಡ್ಡವರೊಂದಿಗೆ ಚೆನ್ನಾಗಿ ವರ್ತಿಸು, ಸುಳ್ಳು ಹೇಳಬೇಡ ಎಂದೆಲ್ಲ ಹೇಳಿದರೆ ಅದು ನಿಮ್ಮ ಮಾತನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳದು. ಮಗುವಿಗೆ ಸರಿಯಾಗಿ ಮನದಟ್ಟಾಗಲು ನಿಮ್ಮಲ್ಲಿ ನೀವು ಪರಿವರ್ತನೆ ತಂದುಕೊಳ್ಳಬೇಕಾಗುತ್ತದೆ. ಏಕೆಂದರೆ ಮಗುವಿನ ಬುದ್ಧಿ ಅಷ್ಟೊಂದು ಬೆಳವಣಿಗೆ ಆಗಿರುವುದಿಲ್ಲ. ನೀವು ಹೇಳಿದಂತೆ ಅದನ್ನು ಅನುಷ್ಠಾನಕ್ಕೆ ತರುವುದು ಅದಕ್ಕೆ ಗೊತ್ತಾಗುವುದಿಲ್ಲ. ನೀವು ಮಗುವಿನ ಮುಂದೆಯೇ ಯಾರಿಗಾದರೂ ಸುಳ್ಳು ಹೇಳುತ್ತಿದ್ದರೆ, ಮಗು ಸುಳ್ಳು ಹೇಳಬಾರದೆಂದು ನೀವು ಅಪೇಕ್ಷಿಸುವುದು ತಪ್ಪು.
ನಿಯಮಗಳಿಗೆ ಬದ್ಧರಾಗಿರಿ
ನೀವು ನಿಮ್ಮ ಮಗುವಿಗಾಗಿ ಕೆಲವೊಂದು ನಿಯಮಗಳನ್ನು ರೂಪಿಸಿರಬಹುದು. ಉದಾಹರಣೆಗಾಗಿ ಅದಕ್ಕೆ ವಾರದಲ್ಲಿ ಎರಡೇ ದಿನ ಚಾಕ್ಲೇಟ್ ತಿನ್ನಬೇಕು ಅಥವಾ ದಿನಕ್ಕೆ 2 ಗಂಟೆ ಮಾತ್ರ ತನ್ನ ಮೆಚ್ಚಿನ ಕಾರ್ಟೂನ್ ಶೋ ನೋಡಬೇಕು ಎಂದು ನೀವು ಇಚ್ಛಿಸುವುದಾದರೆ, ನೀವು ರೂಪಿಸಿದ ನಿಯಮಗಳಿಗೆ ನೀವು ಬದ್ಧರಾಗಿರಬೇಕಾಗುತ್ತದೆ. ನೀವು ಯಾವುದಾದರೂ ಕೆಲಸದಲ್ಲಿ ಮಗ್ನರಾಗಿರಬಹುದು ಅಥವಾ ನಿಮಗೆ ಮೂಡ್ ಇಲ್ಲವೆಂದು ನೀವು ನಿಯಮಗಳಲ್ಲಿ ಸಡಿಲ ನೀತಿ ಅನುಸರಿಸುವಂತಾಗಬಾರದು.
ನೀವು ಮನೆಯಲ್ಲಿ ಯಾವುದೋ ಮಹತ್ವದ ಕೆಲಸದಲ್ಲಿ ಮಗ್ನರಾಗಿರುವಿರಿ. ಮಗು ನಿಮಗೆ ಡಿಸ್ಟರ್ಬ್ ಮಾಡುತ್ತಿದೆ. ಅದರ ಮನಸ್ಸನ್ನು ಬೇರೆ ಕಡೆ ತಿರುಗಿಸಲು ನೀವು ಅದಕ್ಕೆ ಟಿ.ವಿ. ನೋಡಲು ಅವಕಾಶ ಕೊಟ್ಟರೆ ಅದು ಗೊಂದಲಕ್ಕೀಡಾಗುತ್ತದೆ. ಅದು ಅದರ ಟಿ.ವಿ. ನೋಡುವ ಸಮಯವೇ ಆಗಿರುವುದಿಲ್ಲ. ನೀವು ಯಾವ ನಿಯಮಗಳನ್ನು ರೂಪಿಸುತ್ತೀರೋ, ಅದಕ್ಕೆ ಬದ್ಧರಾಗಿರಿ. ಒಂದು ವೇಳೆ ನೀವು ಒಟ್ಟು ಕುಟುಂಬದಲ್ಲಿ ವಾಸವಾಗಿದ್ದರೆ, ಕುಟುಂಬದ ಇತರೆ ಸದಸ್ಯರ ಜೊತೆ ಚರ್ಚೆ ನಡೆಸಿ. ಅವರು ಮಗುವಿನ ನಿಯಮಗಳ ಪಾಲನೆಯಲ್ಲಿ ನೆರವಾಗಬೇಕೇ ಹೊರತು ನಿಯಮಗಳನ್ನು ಮುರಿಯುವುದಕ್ಕಲ್ಲ.
ಹೊಡೆಯುವುದಕ್ಕೆ ಗುಡ್‌ಬೈ ಹೇಳಿ
ನೀವು ಕಾರಣವಿಲ್ಲದೆಯೇ ಅಥವಾ ಸಣ್ಣಪುಟ್ಟ ಕಾರಣಗಳಿಗೆ ಮಗುವನ್ನು ಹೊಡೆಯುವ ಅಭ್ಯಾಸ ಹೊಂದಿದವರಾಗಿದ್ದರೆ, ನೀವು ತಕ್ಷಣವೇ ಆ ಒಂದು ದುರಭ್ಯಾಸದಿಂದ ಹೊರಬನ್ನಿ. ಹಾಗೆ ಮಾಡುವುದರ ಮೂಲಕ ನೀವು ಸಂಬಂಧಗಳನ್ನು ಹಾಳುಗೆಡಹುತ್ತಿದ್ದೀರಿ. ಒಂದುವೇಳೆ ನಿಮಗೆ ಮಗುವಿನ ಯಾವುದಾದರೂ ಕೃತ್ಯದ ಬಗ್ಗೆ ಕೋಪ ಬರುತ್ತಿದ್ದರೆ, ಅದಕ್ಕೆ ಹೊಡೆಯುವ ಬದಲು ಪ್ರೀತಿಯಿಂದ ಅದರ ತಪ್ಪಿನ ಬಗ್ಗೆ ತಿಳಿಸಿ ಹೇಳಿ. ಮಗುವಿಗೆ ಗದರುವ ಸಂದರ್ಭದಲ್ಲಿ ಕೆಟ್ಟ ಶಬ್ದಗಳನ್ನು ಪ್ರಯೋಗಿಸಬೇಡಿ.
ನೀವು ಕಾರಣವಿಲ್ಲದೆಯೇ, ಮಗುವಿನ ಮೇಲೆ ಕೈ ಎತ್ತುತ್ತಿದ್ದರೆ, ಬೈಗುಳದ ಭಾಷೆ ಬಳಸುತ್ತಿದ್ದರೆ ಮಗುವಿನ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ. ಚಿಕ್ಕವರೇ ಇರಬಹುದು, ದೊಡ್ಡವರೇ ಆಗಿರಬಹುದು, ಎಲ್ಲರಿಗೂ ತಮ್ಮದೇ ಆದ ಗೌರವವಿರುತ್ತದೆ. ನಿಮ್ಮ ಬೈಗುಳದ ಭಾಷೆ, ಹೊಡೆತ ಇವು ಅದರ ಮನಸ್ಸಿನಲ್ಲಿ ವಿರೋಧದ ಭಾವನೆಯನ್ನು ಮೂಡಿಸಬಹುದು. ನಿಮ್ಮ ಮಗು ಕುಟುಂಬದ ಎಲ್ಲರಿಗೂ ಗೌರವ ಕೊಡಬೇಕೆಂದು ನೀವು ಬಯಸುತ್ತೀರಾದರೆ, ನೀವು ಮಗುವಿಗೆ ಅದರದ್ದೇ ಆದ ರೀತಿಯಲ್ಲಿ ಗೌರವ ಕೊಡಿ.
ಅಲ್ಲಸಲ್ಲದ ಬೇಡಿಕೆ ಈಡೇರಿಸಬೇಡಿ
ನೀವು ನಿಮ್ಮ ಮಗುವನ್ನು ಪ್ರೀತಿಸುತ್ತೀರಿ ಎಂಬುದು ಒಳ್ಳೆಯ ಸಂಗತಿಯೇ ಸರಿ. ಆದರೆ ಅದು ಹಠ ಮಾಡಿ ಕೇಳುವ ಪ್ರತಿಯೊಂದು ಬೇಡಿಕೆಯನ್ನು ಈಡೇರಿಸಬೇಕೆಂದಿಲ್ಲ. ನೀವೆಲ್ಲಾದರೂ ಹೊರಗೆ ಖರೀದಿಗೆ ಹೋದಾಗ, ಯಾರದ್ದಾದರೂ ಮನೆಗೆ ಸಮಾರಂಭಕ್ಕೆ ಹೋದಾಗ ಮಗು ಅದು ಬೇಕು, ಇದು ಬೇಕು ಎಂದು ಹಠ ಮಾಡತೊಡಗುತ್ತದೆ. ಒಂದು ವೇಳೆ ನೀವು ಅದು ಕೇಳಿದ್ದನ್ನೆಲ್ಲ ಕೊಡಿಸುತ್ತ ಹೋದರೆ, ಅದರ ಹಠ ಮಾಡುವ ಧೋರಣೆ ಹೆಚ್ಚುತ್ತಾ ಹೋಗುತ್ತದೆ. ಅದು ಸಂಯಮದಿಂದ ಕೂಡಿದ ಬೆಳವಣಿಗೆಗೆ ಪೂರಕವಲ್ಲ. ಹೀಗಾಗಿ ಮಗು ಹಠ ಮಾಡಿದಾಗ ಅದರ ಬಗ್ಗೆ ಹೆಚ್ಚು ಗಮನ ಕೊಡಲು ಹೋಗಬೇಡಿ. ಬಳಿಕ ಅದಕ್ಕೆ ಹಠ ಮಾಡುವುದರಿಂದ ಏನೂ ಲಾಭವಿಲ್ಲ ಎನ್ನುವುದು ಅರಿವಾಗುತ್ತದೆ.
ಪ್ರೀತಿಯ ಮಾತುಗಳು
ಮಕ್ಕಳ ಸರಿಯಾದ ಪಾಲನೆ ಪೋಷಣೆಗಾಗಿ ಅದರೊಂದಿಗೆ ಸಾಕಷ್ಟು ಮಾತನಾಡಿ. ಅದು ಶಾಲೆಯಿಂದ ಮನೆಗೆ ಬರುತ್ತಿದ್ದಂತೆ ನಿನಗೆ ಶಾಲೆಯಲ್ಲಿ ಏನು ತೊಂದರೆಯಾಗಲಿಲ್ಲ ತಾನೇ, ಶಾಲೆಯಲ್ಲಿ ಯಾವ ಸಂಗತಿ ಇಷ್ಟವಾಯ್ತು, ಯಾವುದು ಇಷ್ಟವಾಗಲಿಲ್ಲ ಎನ್ನುವುದನ್ನು ಕೇಳಿ ತಿಳಿದುಕೊಳ್ಳಿ. ಈ ನಿಮ್ಮ ಧೋರಣೆ ಮಗುವಿಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಸಾಮಾನ್ಯವಾಗಿ ಮಗು ತಪ್ಪು ಮಾಡುವುದು ನಿಮ್ಮ ಗಮನ ಸೆಳೆಯಲು. ಇಂತಹ ಸ್ಥಿತಿ ಬರದೇ ಇರಲು ಅದು ಒಳ್ಳೆಯ ಕೆಲಸ ಮಾಡಿದಾಗೆಲ್ಲ ಅದಕ್ಕೆ ನಾಲ್ಕು ಪ್ರಶಂಸೆಯ ಮಾತುಗಳನ್ನು ಆಡಲು ಮರೆಯಬೇಡಿ. ಮಗುವನ್ನು ಪ್ರೀತಿಯಿಂದ ಮಾತನಾಡಿಸಿ. ಅದಕ್ಕೆ ಪ್ರೀತಿಯ ಅಪ್ಪುಗೆಯ ಖುಷಿ ಕೊಡಿ. ಮಗುವಿಗೆ ಸುರಕ್ಷತೆಯ ಅನುಭೂತಿ ದೊರೆಯುತ್ತದೆ. ಆ ಬಳಿಕ ಅದು ಸರಿಯಾಗಿ ವರ್ತಿಸಲು ಕಲಿತುಕೊಳ್ಳುತ್ತದೆ.
ಈ ಸಂಗತಿಗಳ ಬಗ್ಗೆ ಗಮನವಿರಲಿ
ಮಗು ಸರಿಯಾಗಿ ವರ್ತಿಸಲು ನೀವು ಮಾಡಬೇಕಾದ ಮೊದಲ ಕೆಲಸವೆಂದರೆ, ನೀವು ಅದರ ಗೌರವದ ಬಗ್ಗೆ ಗಮನಿಸಿ.
ಒಂದುವೇಳೆ ಅದರಿಂದ ಯಾವುದಾದರೂ ತಪ್ಪಾಗಿದ್ದರೆ, ಎಲ್ಲರ ಎದುರು ಗದರಿಸುವ ಬದಲು ಏಕಾಂತದಲ್ಲಿರುವಾಗ ತಿಳಿಸಿ ಹೇಳುವ ಪ್ರಯತ್ನ ಮಾಡಿ.
ನೀವು ಮಗುವಿನಿಂದ ಯಾವ ರೀತಿಯ ವರ್ತನೆ ಬಯಸುತ್ತೀರೋ, ನೀವು ಮಗುವಿನ ಜೊತೆಗೆ ಅದೇ ರೀತಿ ವರ್ತಿಸಿ. ಮಗು ಬಹುದೊಡ್ಡ ಕಾಪಿಕ್ಯಾಟ್ ಆಗಿದೆ ಎಂದರೆ ಅದು ತಪ್ಪೇನಲ್ಲ. ಮಗುವಿನಲ್ಲಿ ಓದುವ ಗುಣ ವಿಕಾಸಗೊಳ್ಳಬೇಕೆಂದು ನೀವು ಬಯಸುತ್ತೀರಾದರೆ, ನೀವು ಸ್ವತಃ ಓದುವ ಪ್ರವೃತಿ ಬೆಳೆಸಿಕೊಳ್ಳಬೇಕು.
ಯಾವುದಾದರೂ ಒಳ್ಳೆಯ ಸಂಗತಿಗೆ ಧನ್ಯವಾದ ಹೇಳಲು ಹಾಗೂ ತಪ್ಪಿನ ಅನುಭೂತಿ ಮಾಡಿಕೊಳ್ಳಲು `ಥ್ಯಾಂಕ್ಯೂ’ ಮತ್ತು `ಸಾರಿ’ಯಂತಹ ಶಬ್ದಗಳ ಮಹತ್ವವನ್ನು ಮಗುವಿಗೆ ಮನವರಿಕೆ ಮಾಡಿಕೊಡಿ. ಮಗು ಯಾವುದಾದರೂ ಒಳ್ಳೆಯ ಕೆಲಸ ಮಾಡಿದಾಗ, ನೀವು ಅದಕ್ಕೆ `ಥ್ಯಾಂಕ್ಯೂ’ ಹೇಳುವುದನ್ನು ಮರೆಯಬೇಡಿ. ತಪ್ಪು ಮಾಡಿದಾಗ ಅದಕ್ಕೆ `ಸಾರಿ’ ಹೇಳಲು ಮುಜುಗರ ಎನಿಸಬಾರದು. ನಿಮ್ಮಿಂದ ಆದ ಈ ಚಿಕ್ಕಪುಟ್ಟ ಪ್ರಯತ್ನಗಳು ಮಗುವಿನ ಒಳ್ಳೆಯ ವರ್ತನೆಗೆ ನೆರವಾಗಬಹುದು. ಲೈಂಗಿಕ ಶಿಕ್ಷಣ
ಮಗುವಿನ ಸಮರ್ಪಕ ಬೆಳವಣಿಗೆಗಾಗಿ ಅದರ ಜೀವನದಲ್ಲಿ ಯಾವುದೇ ಕಹಿ ಘಟನೆಗಳು ನಡೆಯದಂತೆ ಎಚ್ಚರವಹಿಸಿ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಆಗಾಗ ಸೆಕ್ಸ್ ಗೆ ಸಂಬಂಧಪಟ್ಟ ಮಾಹಿತಿ ಕೊಡುತ್ತಾ ಇರಿ. ಮಗುವಿನ ಗುಪ್ತಾಂಗವನ್ನು ಯಾರಾದರೂ ಸ್ಪರ್ಶಿಸಲು ಪ್ರಯತ್ನಿಸಿದರೆ ಅದರ ಬಗೆಗೆ ನಿಮಗೆ ಮಾಹಿತಿ ನೀಡಲು ತಿಳಿಸಿ. ಮಗು ಯಾವುದೇ ವಿಷಯದ ಬಗ್ಗೆ ಮುಚ್ಚುಮರೆ ಇಲ್ಲದೆ ನಿಮಗೆ ತಿಳಿಸುವಂತಹ ವಾತಾವರಣ ಸೃಷ್ಟಿಸಿ.
– ಎಸ್. ರಾಜಲಕ್ಷ್ಮಿ