ಕಥೆ – ಜಿ.ಎನ್. ಪವಿತ್ರಾ
ವಾದ್ಯದ ಸದ್ದು ಹತ್ತಿರವಾಗುತ್ತಿರುವುದನ್ನು ಕೇಳಿ ನಿಶಾ ಸೀರೆ ಸರಿಪಡಿಸಿಕೊಂಡು ಕುಳಿತಳು. ಅವಳ ತಂದೆತಾಯಿಯರು ವರನನ್ನು ಎದುರುಗೊಂಡು ಸ್ವಾಗತಿಸಲು ಆರತಿಯೊಡನೆ ನಿಂತಿದ್ದರು. ವರ ಪವನ್‌ನನ್ನು ತೋಳು ಹಿಡಿದು ನಡೆಸಿಕೊಂಡು ಬರುತ್ತಿರುವುದನ್ನು ನೋಡಿ ವೆಂಕಟರಮಣರಿಗೆ ಆತಂಕವಾಯಿತು. `ಆರೋಗ್ಯ ಸರಿ ಇಲ್ಲವೇ…?’ ಎಂದು ಮನಸ್ಸಿನಲ್ಲೇ ಚಿಂತಿಸಿದರು.
ಹೆಂಗಳೆಯರು ಆರತಿ ಬೆಳಗಿದ ನಂತರ ಮಂಟಪದತ್ತ ಕರೆದೊಯ್ಯುವಾಗ ಅವರಿಗೆ ವಿಷಯ ಅರ್ಥವಾಯಿತು. ವರ ಮಹಾಶಯ ಕಂಠಪೂರ್ತಿ ಕುಡಿದಿದ್ದ ಎಂದು. ಹಾಗಾಗಿ ಅವನ ನಡಿಗೆಯಲ್ಲಿ ತೂರಾಟವಿತ್ತು. ವರನ ಜೊತೆಯವರು ಹೇಗೋ ಮಾಡಿ ಅವನನ್ನು ಸ್ಟೇಜ್ ಮೇಲೆ ಹತ್ತಿಸಿ ಕುರ್ಚಿಯಲ್ಲಿ ಕುಳ್ಳಿರಿಸಿದರು. ತಂದೆಯ ಮುಖದಲ್ಲಿ ಮೂಡಿದ್ದ ಚಿಂತೆಯ ರೇಖೆಗಳನ್ನು ಕಂಡು ಅವರ ಹಿರಿಯ ಮಗ ಸಮಾಧಾನ ಮಾಡುತ್ತಾ, “ಅಂಥದ್ದೇನೂ ಆಗಿಲ್ಲ ಅಪ್ಪಾ…. ಖುಷಿಗೆ ಸ್ನೇಹಿತರ ಜೊತೆ ಸ್ವಲ್ಪ ಜಾಸ್ತಿ ಕುಡಿದಿರಬಹುದು….” ಎಂದ.
ಅಷ್ಟರಲ್ಲಿ ಪುರೋಹಿತರು ಮದುಮಗಳನ್ನು ಕರೆತರಲು ಆದೇಶಿಸಿದರು. ಸರ್ವಾಲಂಕೃತಳಾದ ನಿಶಾಳನ್ನು ಅವಳ ಸೋದರಮಾವ ಕೈಹಿಡಿದು ಕರೆತಂದರು. ವಧೂವರರು ಹೂಮಾಲೆ ಬದಲಾಯಿಸುವ ಶಾಸ್ತ್ರವಿಧಿಗಾಗಿ ಪವನ್ ಕುರ್ಚಿಯಿಂದ ಮೇಲೆದ್ದ. ಮರುಕ್ಷಣವೇ ನಿಲ್ಲಲಾರದೆ ಧೊಪ್ಪನೆ ಕುಸಿದು ಕುಳಿತ. ಅವನ ಅಕ್ಕಪಕ್ಕದಲ್ಲಿ ನಿಂತಿದ್ದ ಇಬ್ಬರು ಅವನನ್ನು ಹಿಡಿದೆತ್ತಿ ನಿಲ್ಲಿಸಿದರು.
ಅವನು ನಿಶಾಳಿಗೆ ಹೂಮಾಲೆ ಹಾಕಲು ಕೈಯೆತ್ತಿದ. ಆದರೆ ಅವನ ಕೈಗಳು ಅವಳ ಕೊರಳನ್ನು ತಲುಪಲಾರದೆ ಗಾಳಿಯಲ್ಲಿ ಆಡಿ ಹಿಂದೆ ಬಂದವು. 2-3 ಸಲ ಇದೇ ಪುನರಾವರ್ತನೆಯಾದಾಗ ಸುತ್ತಲಿದ್ದವರು ಪರಸ್ಪರ ಮುಖ ನೋಡಿಕೊಂಡರು. ಕಿವಿಯಲ್ಲಿ ಗುಸುಗುಸು ಮಾತನಾಡಿಕೊಂಡರು.
ಎದುರಿಗೇ ನಿಂತಿದ್ದ ನಿಶಾಳಿಗೆ ಪರಿಸ್ಥಿತಿ ಅರಿವಾಯಿತು. ಮದ್ಯದ ವಾಸನೆ ಮೂಗಿಗೆ ಬಡಿಯುತ್ತಿತ್ತು. ಅವಳು ಅತೀ ಕೋಪದಿಂದ ಹೂಮಾಲೆಯನ್ನು ನೆಲಕ್ಕೆ ಅಪ್ಪಳಿಸಿ, “ಇಂಥ ಕುಡುಕನನ್ನು ನಾನು ಮದುವೆಯಾಗುವುದಿಲ್ಲ!” ಎಂದು ಹೇಳಿ ಸರಸರನೆ ಮಂಟಪದಿಂದ ಹೊರ ನಡೆದಳು. ನಾಟಕದಂತೆ ನಡೆದ ಘಟನೆಯನ್ನು ಕಂಡು ಅತಿಥಿಗಳು ಬೆರಗಾಗಿ ಕುಳಿತರು.
ಯಾರಾದರೂ ಬಂದು ತಡೆಯುವ ಮೊದಲೇ ನಿಶಾ ಕೋಣೆಗೆ ಹೋಗಿ ಅಗುಳಿ ಹಾಕಿಕೊಂಡಳು. ಎರಡೂ ಕಡೆಯವರು ಕಕ್ಕಾಬಿಕ್ಕಿಯಾಗಿ ನಿಂತರು. ಮದುವೆಯ ಮನೆಯಲ್ಲಿ ಗುಲ್ಲು ಪ್ರಾರಂಭವಾಯಿತು.
ನಿಶಾಳ ತಂದೆ ತಾಯಿ “ನಿಶಾ… ನಿಶಾ…” ಎಂದು ಕರೆದು ಬಾಗಿಲು ತಟ್ಟುತ್ತಾ, “ಬಾಗಿಲು ತೆರೆ ನಿಶಾ…..” ಎಂದು ಕರೆದರು.
ಯಾವುದಕ್ಕೂ ಪ್ರತಿಕ್ರಿಯಿಸದೆ ಕುಳಿತಿದ್ದ ನಿಶಾ ಸ್ವಲ್ಪ ಹೊತ್ತಿನ ನಂತರ, “ನನ್ನ ತೀರ್ಮಾನವನ್ನು ಬದಲಾಯಿಸೋದಕ್ಕೆ ಒತ್ತಾಯ ಮಾಡುವುದಿಲ್ಲ ಅಂದರೆ ಮಾತ್ರ ಬಾಗಿಲು ತೆರೆಯುತ್ತೇನೆ,” ಎಂದು ಷರತ್ತು ಹಾಕಿ ನಂತರವೇ ಬಾಗಿಲು ತೆರೆದಳು. ಮದುಮಗಳ ಉಡುಗೆತೊಡುಗೆಯನ್ನೆಲ್ಲ ಕಳಚಿ ಹಾಕಿ ಸಾಧಾರಣ ಉಡುಪಿನಲ್ಲಿ ನಿಂತಿದ್ದ ಅವಳನ್ನು ಕಂಡು ಎಲ್ಲರೂ ಸ್ತಂಭೀಭೂತರಾದರು.
ನಿಶಾಳ ಈ ಅವತಾರವನ್ನು ನೋಡಿ ಅವಳ ತಾಯಿ ಕೋಪದಿಂದ, “ನಿನಗೇನು ತಲೆ ಕೆಟ್ಟಿದೆಯೇನೇ…? ಮದುವೆಯನ್ನು ನಿಲ್ಲಿಸಿ ಬಿಡೋದಕ್ಕೆ ಆಗುತ್ತೇನು? ಎಷ್ಟು ಕಷ್ಟಪಟ್ಟು ಇಷ್ಟೆಲ್ಲ ರೆಡಿ ಮಾಡಿದ್ದೇವೆ. ನೀನು ಎಲ್ಲವನ್ನೂ ಹಾಳು ಮಾಡೋದಕ್ಕೆ ಹೊರಟಿದ್ದೀಯಾ…. ಎಷ್ಟು ಹಣ ಖರ್ಚಾಗಿದೆ ಅಂತ ನಿನಗೆ ಗೊತ್ತಿದೆ ತಾನೇ? ನಿಮ್ಮ ಅಪ್ಪ ಇಷ್ಟು ಹಣವನ್ನು ಎಲ್ಲಿಂದ ತರುತ್ತಾರೆ? ಈ ಮದುವೆಗೋಸ್ಕರ ಜನ ಎಷ್ಟೆಷ್ಟು ದೂರದಿಂದ ಬಂದಿದ್ದಾರೆ. ನೆಂಟರಿಗೆಲ್ಲ ನಾವು ಮುಖ ತೋರಿಸೋದು ಹೇಗೆ ಅಂತೀನಿ….. ಈಗ ಏನೋ ಹೆಚ್ಚು ಕಡಿಮೆ ಆಗಿದೆ…. ಆಮೇಲೆ ಎಲ್ಲ ಸರಿಹೋಗುತ್ತದೆ….. ನೀನು ಹೀಗೆ ಆಡಿಕೊಂಡು ಕುಳಿತರೆ…. ಮುಂದೆ ಬೇರೆ ಸಂಬಂಧ ಸಿಗೋದೂ ಕಷ್ಟ ಆಗಿಬಿಡುತ್ತೆ…. ತಿಳಿದುಕೊ….” ಎಂದು ಕಿರುಚಿದರು.
ಪತ್ನಿಯ ವಾಕ್ ಪ್ರವಾಹನ್ನು ತಡೆಯುತ್ತಾ, “ನೀನು ಸ್ವಲ್ಪ ಸುಮ್ಮನಿರು. ನಿಶಾಳ ತೀರ್ಮಾನ ಸರಿಯಾಗೇ ಇದೆ. ಇಷ್ಟೆಲ್ಲ ನೋಡಿದ ಮೇಲೆ ಮಗಳ ತಲೆ ಮೇಲೆ ಚಪ್ಪಡಿ ಎಳೆಯೋದಕ್ಕೆ ಆಗುತ್ತೇನು? ಇಂಥ ಪ್ರಮುಖವಾದ ದಿವಸವೇ ಇಷ್ಟೊಂದು ಕುಡಿದಿದ್ದಾನೆ ಎಂದರೆ ಅವನು ಮದ್ಯದ ಚಟಕ್ಕೆ ಬಲಿಯಾಗಿಲ್ಲ ಅಂತ ನಂಬುವುದಕ್ಕೆ ಆಗಲ್ಲ….. ನನ್ನ ಮಗಳು ವಿದ್ಯಾವಂತೆ. ಅವಳ ಜೀವನದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಅವಳಿಗೆ ಸಂಪೂರ್ಣ ಹಕ್ಕಿದೆ. ನಾನು ಹುಡುಗನ ಮನೆಯವರ ಜೊತೆ ಮಾತನಾಡುತ್ತೇನೆ. ಆಮೇಲೆ ನೋಡೋಣ…..” ಎಂದರು ವೆಂಕಟರಮಣ.
“ಇವಳ ಜೊತೆಗೆ ನಿಮ್ಮ ಬುದ್ಧಿಗೂ ಗರ ಬಡಿದಿರಬೇಕು. ಅವಳಿಗೇನೋ ತಿಳಿವಳಿಕೆ ಇಲ್ಲ…. ನೀವಾದರೂ ಯೋಚನೆ ಮಾಡಿ ಮುಂದಿನದನ್ನು ನೋಡಬಾರದೆ…..” ಪತ್ನಿ ಆಕ್ರೋಶದಿಂದ ಹೇಳಿದರು.
“ಅಮ್ಮಾ, ನನ್ನ ಪ್ರಾಣ ಹೋದರೂ ಇಂಥ ಕುಡುಕನ ಜೊತೆ ಮದುವೆ ಆಗೋದಿಲ್ಲ. ನನ್ನ ಸ್ನೇಹಿತೆಯರೆಲ್ಲ ನನ್ನನ್ನು ತಮಾಷೆ ಮಾಡಿ ನಗುತ್ತಾರೆ ಅಷ್ಟೆ. ಎಷ್ಟು ಸಲ ನಾನು ಪಾನಮತ್ತನಾಗಿರೋ ವ್ಯಕ್ತಿಯ ಆ್ಯಕ್ಟಿಂಗ್ ಮಾಡಿ ಅವರನ್ನೆಲ್ಲ ನಗಿಸಿದ್ದೇನೆ….. ಅಂಥವರ ವಿರೋಧವಾಗಿ ಭಾಷಣ ಮಾಡಿದ್ದೇನೆ. ಈಗ ನನ್ನ ಪತಿ ಆಗುವವನೇ ಹೀಗೆ ಅಂದರೆ……” ನಿಶಾ ಅಳುತ್ತಾ ಅಳುತ್ತಾ ಕುಸಿದು ಕುಳಿತಳು.
ಮಗಳ ಮಾತು ಕೇಳಿ ನಿಶಾಳ ತಾಯಿ ತಮ್ಮ ಪತಿಯತ್ತ ನೋಡುತ್ತಾ, “ಇನ್ನೊಂದಿಷ್ಟು ತಲೆ ಮೇಲೆ ಕುಳ್ಳಿರಿಸಿಕೊಳ್ಳಿ…… ನಾನು ಎಷ್ಟು ಸಲ ಹೇಳಿದೆ ಹೆಣ್ಣು ಹುಡುಗಿಗೆ ಇಷ್ಟೊಂದು ಓದಿಸುವುದು ಬೇಡ ಅಂತ….. ಆದರೆ ನನ್ನ ಮಾತು ಕೇಳಿದಿರಾ….? ಈಗ ಅನುಭವಿಸಿ…..” ಎಂದರು.
ಅಷ್ಟರಲ್ಲಿ ಹುಡುಗನ ಅಣ್ಣ ಬಂದು, ”ನಮ್ಮ ತಂದೆ ಕರೆಯುತ್ತಿದ್ದಾರೆ,” ಎಂದು ಹೇಳಿದ್ದರಿಂದ ಮಾತು ಅಲ್ಲಿಗೇ ನಿಂತಿತು.
ನಿಶಾಳ ಅಣ್ಣ ಮತ್ತು ಸೋದರಮಾವನೊಂದಿಗೆ ವೆಂಕಟರಮಣ ವರನ ಬಿಡಾರದತ್ತ ಹೋದರು. ವರನ ತಂದೆ ತಾಯಿ ಅವಮಾನದಿಂದ ತಲೆತಗ್ಗಿಸಿ ಕುಳಿತಿದ್ದರು. ಕೊಂಚ ಹೊತ್ತು ಮೌನ ನೆಲೆಸಿತ್ತು.
ನಂತರ ವರನ ತಂದೆ ಮೌನ ಮುರಿಯುತ್ತ, “ಕ್ಷಮಿಸಿ, ನನ್ನ ಮಗ ನಿಮಗೆ ಮುಖ ತೋರಿಸದಂತೆ ಮಾಡಿಬಿಟ್ಟ. ಅವನಿಗೆ ಸ್ವಲ್ಪ ಕುಡಿಯುವ ಅಭ್ಯಾಸವಿತ್ತು. ಆದರೆ ಈ ಶುಭಕಾರ್ಯದಲ್ಲಿ ಇಷ್ಟರಮಟ್ಟಿಗೆ ಕುಡಿದು ನಮ್ಮನ್ನು ಅವಮಾನ ಪಡಿಸುತ್ತಾನೆಂದು ನಾವು ಭಾವಿಸಿರಲೇ ಇಲ್ಲ. ನಿಜ ಹೇಳಬೇಕೆಂದರೆ ಅವನ ಸ್ನೇಹಿತರಿಂದ ಅವನು ಹೀಗಾಗಿದ್ದಾನೆ. ಈಗಿನ ಕಾಲದ ಮಕ್ಕಳ ಲೈಫ್ ಸ್ಟೈಲ್‌ನಿಮಗೇ ಗೊತ್ತಲ್ಲ…. ಮದುವೆ ಆದ ಮೇಲೆ ಇಂಥ ಪ್ರಸಂಗ ಬರೋದಿಲ್ಲ ಅಂತ ನಾನು ನಿಮಗೆ ಮಾತು ಕೊಡುತ್ತೇನೆ. ದಯವಿಟ್ಟು ಮದುವೆ ನಡೆಸಿಕೊಡಿ. ಇದರಿಂದ ಎರಡೂ ಕುಟುಂಬಕ್ಕೂ ಒಳ್ಳೆಯದಾಗುತ್ತದೆ.” ಎಂದರು ಸಂಕೋಚದಿಂದ.
ವೆಂಕಟರಮಣ, “ನೋಡಿ, ಯಾವುದರಿಂದ ಒಳ್ಳೆಯದಾಗುತ್ತದೆ ಅಂತ ನಾನೂ ಯೋಚನೆ ಮಾಡಿದ್ದೇನೆ. ಇಂಥ ಮದ್ಯ ವ್ಯಸನಿಯನ್ನು ಅಳಿಯನನ್ನಾಗಿ ಮಾಡಿಕೊಳ್ಳೋದಕ್ಕೆ ನಾನು ಸಿದ್ಧನಿಲ್ಲ. ನೀವು ಈ ವಿಷಯವವನ್ನು ಮೊದಲೇ ಹೇಳದೆ ನನಗೆ ಮೋಸ ಮಾಡಿದ್ದೀರಿ. ತಾಳಿ ಕಟ್ಟುವುದಕ್ಕೆ ಮೊದಲೇ ವಿಷಯ ಗೊತ್ತಾಗಿದ್ದಕ್ಕೆ ಸರಿಹೋಯಿತು. ಇಲ್ಲದಿದ್ದರೆ ನನ್ನ ಮಗಳ ಬಾಳು ಹಾಳಾಗಿಬಿಟ್ಟಿರುತ್ತಿತ್ತು. ಈಗ ಹಾಳಾಗಿರುವ ನಮ್ಮ ಹಣ, ಮಾನಮರ್ಯಾದೆಗಳನ್ನೆಲ್ಲ ಹೇಗೆ ತುಂಬಿಸಿಕೊಳ್ಳೋದು….? ನಿಮ್ಮ ಮಗನಿಂದಾಗಿ ನಮ್ಮ ಮಗಳ ಮನಸ್ಸಿಗೆ ಆಗಿರುವ ಪೆಟ್ಟಿಗೆ ನಿಮ್ಮಲ್ಲಿ ಏನಾದರೂ ಪರಿಹಾರವಿದೆಯೇ…?” ಎಂದು ಬಿಗುವಾಗಿ ಕೇಳಿದರು.
“ನಾನು ಮತ್ತೆ ನಿಮ್ಮ ಕ್ಷಮೆ ಕೇಳುತ್ತೇನೆ. ಮದುವೆ ಆದ ಮೇಲೆ ಅವನು ಸರಿಹೋಗುತ್ತಾನೆ ಅಂದುಕೊಂಡೆ…..” ಅವರ ಮಾತನ್ನು ಮಧ್ಯದಲ್ಲಿ ತಡೆಯುತ್ತಾ ನಿಶಾಳ ಸೋದರಮಾವ, “ರೀ ಸ್ವಾಮಿ…. ಅವನನ್ನು ಸರಿ ಮಾಡೋದಕ್ಕೆ ನಮ್ಮ ಮಗಳೇ ಸಿಕ್ಕಿದಳೇನು ನಿಮಗೆ? ನಿಮ್ಮ ಸ್ವಾರ್ಥಕ್ಕಾಗಿ ಆ ಹುಡುಗಿಯ ಕನಸಿಗೆ ಕೊಳ್ಳಿ ಇಟ್ಟುಬಿಟ್ಟಿರಿ. ಇನ್ನು ಈ ಮದುವೆ ಸಾಧ್ಯವಿಲ್ಲ ಬಿಡಿ…. ಒಡವೆ ವಸ್ತ್ರದ ಕೊಡು ಕೊಳ್ಳುವಿಕೆಯ ಲೆಕ್ಕಾ ಏನಿದೆಯೋ ಅದನ್ನು ಮಾಡಿಬಿಡಿ….” ಎಂದರು ನಿಷ್ಠುರವಾಗಿ.
ಪವನ್‌ಗೆ ಅಷ್ಟು ಹೊತ್ತಿಗೆ ಬುದ್ಧಿ ತಿಳಿಯಾಗಿತ್ತು. ತಲೆ ತಗ್ಗಿಸಿ ಅಲ್ಲೇ ಕುಳಿತಿದ್ದ. ಅವನನ್ನು ಅವನ ತಂದೆ ಎಬ್ಬಿಸಿಕೊಂಡು ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೊರಟುಹೋದರು. ಅವರ ಮನೆಯವರು ಬೇರೆ ಯಾರ ಕಡೆಗೂ ತಿರುಗಿ ನೋಡದೆ ಮತ್ತೊಂದು ಮಗದೊಂದು ವಾಹನಗಳಲ್ಲಿ ಹಿಂಬಾಲಿಸಿದರು.
ಸ್ವಲ್ಪ ಸಮಯದ ಹಿಂದೆ ಬಗೆಬಗೆಯ ಅಲಂಕಾರಗಳಿಂದ, ವಾದ್ಯ ಧ್ವನಿಯಿಂದ, ಜನರ ಹರ್ಷ ಕಲರವದಿಂದ ಸಜೀವವಾಗಿದ್ದ ಕಲ್ಯಾಣ ಮಂಟಪದಲ್ಲಿ ಮಸಣ ಮೌನ ಆವರಿಸಿತ್ತು. ಅದೇ ಮೌನ ಅಡುಗೆಮನೆಯನ್ನೂ ಮುತ್ತಿತ್ತು. ವಧುವಿನ ಪರಿವಾರದವರ ಮನಸ್ಸಿನಂತೆ ಅಡುಗೆ ಒಲೆಯೂ ತಣ್ಣಗಾಗಿತ್ತು. ಮಾಡಿದ ಅಡುಗೆಯನ್ನು ಕೇಳುವವರಿರಲಿಲ್ಲ. ಅಲ್ಲಿ ಆಗೊಮ್ಮೆ ಈಗೊಮ್ಮೆ ಇಣುಕಿದ ಮಕ್ಕಳನ್ನು ಅಡುಗೆಯವರೇ ಕರೆದು ಸಿಹಿ ತಿಂಡಿಗಳನ್ನು ತಿನ್ನಿಸಿ ಕಳುಹಿಸುತ್ತಿದ್ದರು. ಬಂದಿದ್ದ ನೆಂಟರಿಷ್ಟರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಾ ಎದ್ದು ಹೊರಟರು.
ಕೋಣೆಯಲ್ಲಿ ಮಂಚದ ಮೇಲೆ ನಿಶಾ ಮಂಡಿಯಲ್ಲಿ ಮುಖವಿರಿಸಿಕೊಂಡು ಕುಳಿತಿದ್ದಳು. ಅದೇ ಮಂಚದ ಮತ್ತೊಂದು ತುದಿಯಲ್ಲಿ ಅವಳ ತಂದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಇನ್ನೊಂದು ಮಂಚದ ಮೇಲೆ ಅವಳ ತಾಯಿ ಕಣ್ಣುಮುಚ್ಚಿ ಉರುಳಿಕೊಂಡಿದ್ದರು. ಅವಳ ಅಣ್ಣ ಮತ್ತು ಸೋದರಮಾವ ಬಾಡಿಗೆಗೆ ತಂದಿದ್ದ ಸಾಮಾನುಗಳನ್ನು ಹಿಂದಿರುಗಿಸುವ ವ್ಯವಸ್ಥೆ ಮಾಡುತ್ತಿದ್ದರು.
ನಡೆದ ಘಟನೆ ಪವನ್‌ಗೆ ಬಹು ದೊಡ್ಡ ಆಘಾತವನ್ನುಂಟು ಮಾಡಿತ್ತು. ಅವನು ವಿದ್ಯಾವಂತ. ಒಂದು ದೊಡ್ಡ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಕೆಟ್ಟ ಸ್ನೇಹಿತರ ಸಹವಾಸದಿಂದ ಅವನು ಮದ್ಯಪಾನದ ಚಟಕ್ಕೆ ಬಲಿಯಾಗಿದ್ದ. ತನ್ನದೇ ಮದುವೆಯ ಶುಭ ಸಂದರ್ಭದಲ್ಲಿಯೂ ಈ ಸ್ನೇಹಿತರು ತನ್ನನ್ನು ಇಂತಹ ಪರಿಸ್ಥಿತಿಗೆ ಗುರಿಮಾಡುತ್ತಾರೆಂಬ ಕಲ್ಪನೆ ಕೂಡ ಅವನಿಗಿರಲಿಲ್ಲ. ಅಂದು ತಾನಿದ್ದಿರಬಹುದಾದ ಸ್ಥಿತಿ, ತಾನು ನಡೆದುಕೊಂಡಿದ್ದ ರೀತಿಯನ್ನು ಊಹಿಸಿ ಅವನಿಗೆ ತನ್ನ ಬಗ್ಗೆಯೇ ಅಸಹ್ಯವಾಯಿತು. ತನ್ನ ದುರ್ನಡತೆಯಿಂದ ತಂದೆ ತಾಯಿಯ ಮತ್ತು ಮನೆಯವರ ಮರ್ಯಾದೆಗೆ ಮಸಿ ಬಳಿದುದಕ್ಕಾಗಿ ತನ್ನನ್ನೇ ತಿರಸ್ಕರಿಸಿಕೊಳ್ಳುತ್ತಾ ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯತೊಡಗಿದ. ತನ್ನ ಈ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲೇಬೇಕೆಂದು ಮನಸ್ಸಿನಲ್ಲಿಯೇ ಪ್ರತಿಜ್ಞೆ ಮಾಡಿಕೊಂಡ.
ಗೆಳೆಯರ ಸಹವಾಸದಿಂದಾಗಿ ತನಗೆ ಈ ಗತಿ ಬಂದಿದೆ. ತಾನಿನ್ನು ಬುದ್ಧಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ಮದ್ಯವನ್ನು, ಮದ್ಯಪಾನಿ ಸ್ನೇಹಿತರನ್ನು ಶಾಶ್ವತವಾಗಿ ದೂರ ಮಾಡಬೇಕು ಎಂದು ಪವನ್ ದೃಢ ನಿರ್ಧಾರ ಮಾಡಿದ. ತಂದೆ ತಾಯಿಯರ ಕಾಲಿಗೆ ಬಿದ್ದು ತಾನು ಇನ್ನೆಂದೂ ಮದ್ಯವನ್ನು ಮುಟ್ಟುವುದಿಲ್ಲವೆಂದು ಅಳುತ್ತಾ ಪ್ರಮಾಣ ಮಾಡಿದ. ಅವಮಾನದ ದುಃಖದಿಂದ ಸಂಕಟಪಡುತ್ತಿದ್ದ ಅವರು ಮಗನ ಮಾತಿಗೆ ಏನೂ ಉತ್ತರಿಸಲಾರದೆ ಹೋದರು.
ನಿಶಾಳಿಗೂ ತನ್ನ ನಿರ್ಧಾರವನ್ನು ತಿಳಿಸಬೇಕೆಂಬ ತವಕ ಪವನ್‌ಗಿತ್ತು. ಆದರೆ ಅವಳ ಎದುರಿಗೆ ನಿಲ್ಲುವ ಧೈರ್ಯವಿಲ್ಲದೆ ಮೊಬೈಲ್‌ನ ಮೊರೆಹೋದ. `ನನ್ನ ನಡತೆಯಿಂದ ನಾನೇ ಲಜ್ಜಿತನಾಗಿದ್ದೇನೆ. ಅದಕ್ಕಾಗಿ ಪ್ರಾಯಶ್ಚಿತ್ತವನ್ನೂ ಮಾಡಿಕೊಳ್ಳುತ್ತೇನೆ. ಸಾಧ್ಯವಾದರೆ ಅದನ್ನು ನಿರೀಕ್ಷಿಸುತ್ತಿರು,’ ಎಂದು ಅವಳಿಗೆ ಮೆಸೇಜ್ ಮಾಡಿದ. ನಿಶಾ ಅದಕ್ಕೆ ಪ್ರತಿಕ್ರಿಯಿಸಲಿಲ್ಲ.
ತನ್ನ ನಿರ್ಧಾರದಂತೆ ಪವನ್ ಗೆಳೆಯರನ್ನು ದೂರ ಮಾಡಿದ. ತನ್ನ ಮದ್ಯಪಾನ ಚಟದ ಸಮಸ್ಯೆಗೆ ವೈದ್ಯರನ್ನು ಸಮಾಲೋಚಿಸಿ ಅವರಿಂದ ಸೂಕ್ತ ಚಿಕಿತ್ಸೆ ಪಡೆಯಲು ಪ್ರಾರಂಭಿಸಿದ. ಆಫೀಸ್ ಮುಗಿದ ನಂತರ ಗೆಳೆಯರೊಂದಿಗೆ ಕಳೆಯುತ್ತಿದ್ದ ಸಮಯವನ್ನೆಲ್ಲ ಈಗ ಕುಟುಂಬದವರೊಂದಿಗೆ ಕಳೆಯತೊಡಗಿದ. ಪಾರ್ಟಿಗಳಿಗೆ ಹೋಗುವುದನ್ನು ಸಂಪೂರ್ಣ ನಿಲ್ಲಿಸಿದ.
ಪ್ರಾರಂಭದಲ್ಲಿ ಪವನ್ ಬಹಳವೇ ಕಷ್ಟಪಡಬೇಕಾಯಿತು. ಕ್ರಮೇಣ ಅವನಲ್ಲಿ ಬದಲಾವಣೆ ಆಗತೊಡಗಿತು. ಅವನ ಈ ದೃಢ ನಿಲುವನ್ನು ಕಂಡು ತಂದೆತಾಯಿಯರು ಬೆರಗಾದರು. ನಿಶಾ ಅವನನ್ನು ಮದುವೆಯಾಗಲು ನಿರಾಕರಿಸಿದ್ದರಿಂದಲೇ ಮಗನಲ್ಲಿ ಪರಿವರ್ತನೆ ಕಂಡುಬರುತ್ತಿದೆ ಎಂದು ಅರಿತು ಅವರು ಮನಸ್ಸಿನಲ್ಲಿಯೇ ನಿಶಾಳಿಗೆ ಧನ್ಯವಾದ ಅರ್ಪಿಸಿದರು. ಮಗನ ಸುಖ ಭವಿಷ್ಯದ ಬಗ್ಗೆ ಅವರಿಗೆ ಭರವಸೆ ಮೂಡತೊಡಗಿತು. ನಿಶಾಳೇ ತಮ್ಮ ಸೊಸೆಯಾಗಿ ಬರಬಹುದೆಂಬ ಕಲ್ಪನೆಯೂ ಬಂದಿತು. ಆದರೆ ಮರುಕ್ಷಣವೇ ಅವಳು ಪವನ್‌ನನ್ನು ಒಪ್ಪದಿದ್ದರೆ ಎಂಬ ಆಲೋಚನೆಯೂ ಮೂಡಿತು.
ಮನೆಯಲ್ಲಿ ಮದುವೆಯ ಬಗ್ಗೆ ಮಾತೆತ್ತಿದರೆ ನಿಶಾ ಆ ಜಾಗ ಬಿಟ್ಟು ಹೋಗಿಬಿಡುತ್ತಿದ್ದಳು. ಅವಳಿಗೆ ಮಾನಸಿಕವಾಗಿ ಆಘಾತವಾಗಿತ್ತು. ನಿಶ್ಚಿತಾರ್ಥದ ನಂತರ ಅವಳು ಆಗಾಗ ಪವನ್‌ನನ್ನು ಭೇಟಿಯಾಗುತ್ತಿದ್ದುದು, ದಿನ ಅವನೊಡನೆ ಫೋನ್‌ನಲ್ಲಿ ಮಾತನಾಡುತ್ತಿದ್ದುದು ಎಲ್ಲ ನೆನಪಾಯಿತು. ಅವನು ಮದ್ಯ ವ್ಯಸನಿ ಎಂದು ಮೊದಲೇ ತಿಳಿದಿದ್ದರೆ ಅವಳು ಪವನ್‌ನಿಂದ ದೂರವಿರುತ್ತಿದ್ದಳು. ತಾನು ಮದುವೆಯಾಗಲು ಮಾನಸಿಕವಾಗಿ ಸಿದ್ಧಳಿಲ್ಲವೆಂದು ಅವಳು ತಂದೆತಾಯಿಯರೊಡನೆ ಹೇಳಿಬಿಟ್ಟಳು ಆಫೀಸ್‌ನಿಂದ ಬಂದ ಮೇಲೆ ಉಳಿದ ವೇಳೆಯಲ್ಲಿ ಸುಮ್ಮನೆ ಕುಳಿತಿರಲಾರದೆ ಅವಳು ಹಾಬಿ ಕ್ಲಾಸ್‌ಗಳಿಗೆ ಸೇರಿದಳು. ಅವಳ ತಂದೆ ತಾಯಿ ಅವಳನ್ನು ಯಾವುದಕ್ಕೂ ಅಡ್ಡಿಪಡಿಸಲಿಲ್ಲ.
ಸಮಯ ಸರಿಯಿತು. ಸುಮಾರು 1 ವರ್ಷದ ನಂತರ ಪವನ್ ಧೈರ್ಯಗೂಡಿಸಿಕೊಂಡು ನಿಶಾಳ ಆಫೀಸ್‌ಗೆ ಹೋದನು. ಇದ್ದಕ್ಕಿದ್ದಂತೆ ಬಂದ ಅವನನ್ನು ನೋಡಿ ನಿಶಾ ಗಲಿಬಿಲಿಗೊಂಡಳು.
“ನೀವು ಇಲ್ಲಿಗೇಕೆ ಬಂದಿರಿ? ನಿಮ್ಮ ಜೊತೆ ಯಾವುದೇ ಸಂಪರ್ಕ ಇರಿಸಿಕೊಳ್ಳಲು ನನಗೆ ಇಷ್ಟವಿಲ್ಲ,” ನಿಶಾ ಬಿಗುವಾಗಿ ಹೇಳಿದಳು.
“ಪ್ಲೀಸ್…. ಒಂದು ನಿಮಿಷ ನನ್ನ ಮಾತು ಕೇಳಿ. ನಾನೀಗ ಬದಲಾಗಿದ್ದೇನೆ. ನನ್ನ ದುರಭ್ಯಾಸಗಳನ್ನು ಬಿಟ್ಟುಬಿಟ್ಟಿದ್ದೇನೆ,” ಎಂದ ಪವನ್. ಆದರೆ ನಿಶಾ ಅವನ ಮಾತನ್ನು ಕೇಳಲು ಸಿದ್ಧಳಿರಲಿಲ್ಲ. ಅವಳು ಹೀಗೆಯೇ ಪ್ರತಿಕ್ರಿಯಿಸಬಹುದೆಂದು ಪವನ್ ಮೊದಲೇ ನಿರೀಕ್ಷಿಸಿದ್ದ.
ಒಂದು ವಾರದ ನಂತರ ಪವನ್ ಪುನಃ ಅವಳನ್ನು ಮಾತನಾಡಿಸಲು ಹೋದ, “ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಬಯಸುತ್ತೇನೆ,” ಎಂದ.
ಈ ಸಲ ನಿಶಾ ಅವನ ಮಾತಿಗೆ ಕಿವಿಗೊಡದೆ ಹಿಂದಿನಂತೆಯೇ ಉತ್ತರವಿತ್ತಳು. ಆದರೆ ಪವನ್ ನಿರಾಶನಾಗಲಿಲ್ಲ. ಅವನು ತನ್ನ ಪ್ರಯತ್ನವನ್ನು ಮುಂದುವರಿಸಿದ. ಅವನು ಮತ್ತೆ ಮತ್ತೆ ನಿಶಾಳನ್ನು ಭೇಟಿಯಾಗಲು ಬರುತ್ತಲೇ ಇದ್ದುದರಿಂದ ಕ್ರಮೇಣ ಅವಳ ಮನಸ್ಸು ಕರಗತೊಡಗಿತು.
ಒಂದು ದಿನ ಪವನ್, “ನಿಶಾ, ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ. ನೀನಿಲ್ಲದ ಜೀವನವನ್ನು ನಾನು ಕಲ್ಪಿಸಿಕೊಳ್ಳಲಾರೆ.”
ಆ ದಿನವಿಡೀ ನಿಶಾ ಪವನ್ ಮಾತಿನ ಬಗ್ಗೆಯೇ ಚಿಂತಿಸಿದಳು. ಅವಳಿಗೆ ಪವನ್‌ನ ಕುರಿತು ಸಕಾರಾತ್ಮಕವಾಗಿ ಯೋಚಿಸುವಂತಾಯಿತು. ನಂತರದ ದಿನಗಳಲ್ಲಿ ಇಬ್ಬರೂ ಭೇಟಿಯಾಗತೊಡಗಿದರು. ಕಡೆಗೊಮ್ಮೆ ಅವಳಿಗೆ ಪವನ್ ಬಗ್ಗೆ ಸಂಪೂರ್ಣ ವಿಶ್ವಾಸ ಹುಟ್ಟಿತು. ಅವಳು ತನ್ನ ತಂದೆ ತಾಯಿಯರಿಗೆ ಎಲ್ಲ ವಿಷಯವನ್ನೂ ತಿಳಿಸಿ, “ನಿಮಗೆ ಸರಿ ಎನಿಸಿದರೆ ಪವನ್ ಮನೆಗೆ ಹೋಗಿ ಅವರ ತಂದೆ ತಾಯಿಯರನ್ನು ಕಂಡು ಮಾತನಾಡಿ ನಿಜಸ್ಥಿತಿಯನ್ನು ತಿಳಿದು ಬನ್ನಿ,” ಎಂದಳು ನಿಶಾ.
“ಮದುವೆಯಾದ ಮೇಲೆ ಅವನು ಮತ್ತೆ ಕುಡಿಯಲು ಪ್ರಾರಂಭಿಸುವುದಿಲ್ಲ ಅಂತ ಯಾವ ಗ್ಯಾರಂಟಿ?” ನಿಶಾಳ ತಂದೆ ಅನುಮಾನದಿಂದ ಕೇಳಿದರು.
“ಅಪ್ಪಾ…. ಮುಂದೆ ಏನಾಗುತ್ತದೆ ಅಂತ ಯಾರಿಗೆ ಗೊತ್ತು? ನಾವು ಏನಿದ್ದರೂ ಇಂದಿನ ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಬಹುದು ಅಷ್ಟೆ. ಕೆಲವರು ಮದುವೆಗೆ ಮೊದಲು ಕುಡಿಯದೆ ಇದ್ದರೂ, ಮದುವೆಯಾದ ಮೇಲೆ ಕುಡಿತ ಪ್ರಾರಂಭಿಸುತ್ತಾರೆ ಅಲ್ಲವೇ?” ಮಗಳ ಮಾತನ್ನು ಕೇಳಿ ಅವರಿಗೆ ಬಹಳ ಸಂತೋಷವಾಯಿತು.
ಪವನ್‌ನ ತಂದೆತಾಯಿಗೆ ವೆಂಕಟರಮಣ ಮತ್ತು ಅವರ ಮನೆಯವರು ತಮ್ಮಲ್ಲಿಗೆ ಬರಲಿರುವ ವಿಷಯ ತಿಳಿದು ಬಹಳ ಸಂತೋಷವಾಯಿತು. ಅತಿಥಿಗಳನ್ನು ಸತ್ಕರಿಸಲು ಸಿದ್ಧತೆ ಮಾಡತೊಡಗಿದರು. ಪವನ್‌ಗೆ ತನ್ನ ಪ್ರಾಯಶ್ಚಿತ್ತ ಫಲ ನೀಡಿದೆ ಎಂದು ಭಾಸವಾಯಿತು. ಎರಡು ಕುಟುಂಬದವರೂ ಭೇಟಿಯಾದಾಗ ಸಂತಸದಿಂದ ಪರಸ್ಪರ ಕ್ಷೇಮ ಸಮಾಚಾರವನ್ನು ವಿಚಾರಿಸಿಕೊಂಡರು.
ಪವನ್‌ನ ತಾಯಿತಂದೆ, “ನಾವು ನಿಮ್ಮ ಮಗಳ ಋಣಗಾರರಾಗಿದ್ದೇವೆ. ನಮ್ಮ ಮಗನನ್ನು ತಿದ್ದಲು ನಮಗೆ ಆಗಿರಲಿಲ್ಲ. ಆದರೆ ನಿಶಾ ಆ ಕೆಲಸವನ್ನು ಮಾಡಿದ್ದಾಳೆ,” ಎಂದು ಮನತುಂಬಿ ಹೇಳಿದರು.
“ಹೌದು. ನಿಶಾ ಈ ವಿಷಯ ಹೇಳಿದಾಗ ನನಗೆ ನಂಬುವುದಕ್ಕೇ ಆಗಿರಲಿಲ್ಲ…?” ವೆಂಕಟರಮಣ ಹೇಳಿದರು.
“ಈಗ ಎಲ್ಲರಿಗೂ ಸಮಾಧಾನ ಆಗಿದೆಯಲ್ಲ. ಮುಂದಿನದನ್ನು ನೋಡೋಣ….”
“ಖಂಡಿತ ಶುಭಸ್ಯ ಶೀಘ್ರಂ.”
“ಆದರೆ, ನನ್ನದೊಂದು ಷರತ್ತು,” ಪವನ್‌ನ ತಂದೆಯ ಮಾತು ಕೇಳಿ ವೆಂಕಟರಮಣ ಆಶ್ಚರ್ಯದಿಂದ ನೋಡಿದರು. ಪವನ್ ಸಹ ಬೆರಗಾಗಿ ತಂದೆಯತ್ತ ತಿರುಗಿದನು.
“ಈ ಸಲ ಮದುವೆಯ ಎಲ್ಲ ಖರ್ಚು ನಮ್ಮದು,” ತಂದೆಯ ಮಾತಿಗೆ ಪವನ್, “ಸೂಪರ್” ಎಂದ.
ಪವನ್ ಮತ್ತು ನಿಶಾ ಪರಸ್ಪರ ಮುಖ ನೋಡಿ ಮುಗುಳ್ನಕ್ಕರು.