ಗುಂಡ-ಪುಟ್ನಂಜಿ ಘನಘೋರ ಜಗಳವಾಡಿದರು. ಆಗ ಅವಳು ಕೆಂಡದಂಥ ಸಿಟ್ಟಿನಿಂದ ತವರಿಗೆ ಹೊರಟೇಬಿಟ್ಟಳು. 15 ದಿನಗಳಾದ ಮೇಲೆ ಗುಂಡ ಮಾವನ ಮನೆಗೆ ಫೋನ್ ಮಾಡಿದ.
ಅತ್ತೆ : ಎಷ್ಟು ಸಲ ಕಣಯ್ಯ ನಿನಗೆ ಹೇಳೋದು…. ಅವಳು ನಿನ್ನ ಮನೆಗೆ ಬರೋಲ್ಲ ಅಂದ್ರೆ ಬರೋಲ್ಲ! ಮತ್ತೆ ಮತ್ತೆ ಫೋನ್‌ಮಾಡಬೇಡ.
ಗುಂಡ : ಆಹಾ….. ಈ ಮಾತನ್ನು ಪದೇ ಪದೇ ಕೇಳಬೇಕೆಂದೇ ಫೋನ್ ಮಾಡೋಣ ಅನ್ಸುತ್ತೆ.
ಒಂದು ಖ್ಯಾತ ಖಾಸಗಿ ಸಂಸ್ಥೆಯ 60 ವರ್ಷ ವಯಸ್ಸಿನ ಮಾಲೀಕ ಒಬ್ಬ ಮಿಟಕಲಾಡಿ ಮಿನ್ನಿಯನ್ನು ಸೆಕ್ರೆಟರಿ ಆಗಿ ಕೆಲಸಕ್ಕೆ ನೇಮಿಸಿಕೊಂಡ. ಅದೇನಾಯಿತೋ ಏನೋ…. 10 ದಿನಗಳ ನಂತರ ಆತ ತನ್ನ ಕಟ್ಟಡದ 27ನೇ ಮಹಡಿಯಿಂದ ಧುಮುಕಿ ಪ್ರಾಣ ಬಿಡುವುದೇ? ತನಿಖೆಗೆ ಪೊಲೀಸರು ಬಂದರು.
ಪೊಲೀಸ್ : ಈ ಕೋಣೆಯಲ್ಲಿ ಆ ಹೊತ್ತು ಯಾರು ಯಾರು ಇದ್ದಿರಿ?
ಮಿನ್ನಿ : ನಾನು ಮಾತ್ರ ಸಾರ್…..
ಪೊಲೀಸ್ : ಅಂಥದ್ದೇನಾಯಿತು? ಇಷ್ಟು ಎತ್ತರದಿಂದ ನಿಮ್ಮ ಬಾಸ್ ಏಕೆ ಜಿಗಿದರು?
ಮಿನ್ನಿ : ಸಾರ್, ಅವರಂತೂ ತುಂಬಾನೇ ಒಳ್ಳೆಯವರು. ಒಂದು ದಿನ ಅವರು ನನಗೆ 2 ಲಕ್ಷ ರೂ. ಬೆಲೆ ಬಾಳುವ ರೇಷ್ಮೆ ಸೀರೆ ಕೊಡಿಸಿದರು. ನಾನು ಅಂಥ ದುಬಾರಿ ಗಿಫ್ಟ್ ಪಡೆದದ್ದು ಇದೇ ಮೊದಲು! ಅದಾದ ಕೆಲವು ದಿನಗಳ ನಂತರ 15 ಲಕ್ಷ ರೂ. ಬೆಲೆಯ ನೆಕ್‌ಲೇಸ್ ಕೊಡಿಸಿದರು. ಮೊನ್ನೆ 5 ಲಕ್ಷ ರೂ.ಗಳ ವಜ್ರದುಂಗುರ ಕೊಡಿಸಿದರು. ನೋಡಿ, ಅದಿನ್ನೂ ನನ್ನ ಬೆರಳಲ್ಲೇ ಇದೆ…..
ಪೊಲೀಸ್ : ಮತ್ತೆ ಏನಾಯ್ತು?
ಮಿನ್ನಿ : ಇವತ್ತು ಅವರು ನನ್ನನ್ನು ಮದುವೆ ಆಗ್ತೀಯಾ ಅಂತ ಪ್ರಪೋಸ್ ಮಾಡಿದರು.
ಪೊಲೀಸ್ : ಮತ್ತೆ ಏನಾಯ್ತು?
ಮಿನ್ನಿ : ಅದೇ ಸಮಯಕ್ಕೆ ನನ್ನ ತಂದೆ ಫೋನ್ ಮಾಡಬೇಕೇ?
ಪೊಲೀಸ್ : ಅದರಿಂದ ಏನೀಗ?
ಮಿನ್ನಿ : ನನ್ನ ತಂದೆಯ ಕಾಲ್ ರಿಸೀವ್ ಮಾಡಿಕೊಂಡು ನಾನು ನನ್ನ ಬಾಸ್ ಬಗ್ಗೆ ಸಿಕ್ಕಾಪಟ್ಟೆ ಹೊಗಳಿದೆ. ಅಪ್ಪ, ನೀವು ಇಲ್ಲಿದ್ದು ಇದನ್ನು ಕಣ್ಣಾರೆ ನೋಡಬೇಕಿತ್ತು. ನನ್ನ ಬಾಸ್ ನನ್ನನ್ನು ಎಷ್ಟು ಲವ್ ಮಾಡ್ತಾರೆ ಗೊತ್ತಾ…. ಅಂತೆಲ್ಲ ಅವರಿಗೆ ಹೇಳುತ್ತಿದ್ದೆ.
ಪೊಲೀಸ್ : ಮತ್ತೆ ಏನಾಯ್ತು?
ಮಿನ್ನಿ : ಆಮೇಲೆ ಅಪ್ಪಂಗೆ ಹೇಳಿದೆ, ಮತ್ತೆ ಯಾವಾಗ್ಲೂ ನೀವು ನನ್ನನ್ನು ಬೈತಾ ಇರ್ತೀರಿ, ಪಪ್ಪು…. ಹೀಗೆಲ್ಲ ಹುಡುಗಿ ತರಹ ಡ್ರೆಸ್ ಮಾಡಿಕೊಂಡು ಹೊರಗಡೆ ತಿರುಗಾಡಬೇಡ ಅಂತ.
ಪೊಲೀಸ್ : ಆ…..ಮೇ….ಲೆ…..
ಮಿನ್ನಿ : ಪಾಪ, ಅದನ್ನು ಕೇಳಿ ನಮ್ಮ ಬಾಸ್ ಕಿಟಕಿಯಿಂದ ಧುಮುಕಿ ಬಿಡುವುದೇ……?
ಕೇಳಿಸಿಕೊಳ್ಳುತ್ತಿದ್ದ ಪೊಲೀಸ್ ಅಲ್ಲೇ ತಲೆಸುತ್ತಿ ಬಿದ್ದುಹೋದನಂತೆ!
ಬೀದಿಯಲ್ಲಿ ಆ್ಯಂಬುಲೆನ್ಸ್ ಹೊರಟಿರಲಿ ಅಥವಾ ಮದುವೆಯ ದಿಬ್ಬಣ, ತಕ್ಷಣ ಅದು ಮುಂದೆ ಹೋಗಲು ದಾರಿ ಬಿಟ್ಟುಕೊಡಿ. ಇಬ್ಬರೂ ಜೀವನ್ಮರಣದ ಹೋರಾಟಕ್ಕೆ ಹೊರಟಿದ್ದಾರೆ ಎಂಬುದನ್ನು ಮರೆಯದಿರಿ.
ಪುಟ್ನಂಜಿ ಗುಂಡನ ಜೊತೆ ಜಗಳವಾಡಿದಾಗೆಲ್ಲ ಸಮಾಧಾನವಾಗಿ ಒಂದು ಮಾತು ಹೇಳುತ್ತಾಳೆ, “ನೋಡಿ…. ನಾನಾಗಿರೋ ಹೊತ್ತಿಗೆ ಆಯ್ತು. ನನ್ನಂಥ ಸಾಧು ಜೀವಿ ನಿಮಗೆ ಬೇರೆಲ್ಲಿ ಸಿಗಬೇಕು? ಬೇರೆಯವಳಾಗಿದ್ದರೆ ಉಗ್ರಕಾಳಿಯಾಗಿ ಸಿಡಿದು ನಿಂತಿರೋಳು. ಆಗ ನಿಮ್ಮ ಗತಿ ಏನೂಂತ…..?”
ಅದನ್ನು ಕೇಳಿಸಿಕೊಂಡಾಗೆಲ್ಲಾ ಗುಂಡ ಬೆಚ್ಚಿಬೀಳುತ್ತಾನೆ. `ಈ ಮಹಾತಾಯಿಯೇ ಸಾಧುಜೀವಿ ಆದರೆ ಆ ಉಗ್ರಕಾಳಿ ಇನ್ನೆಂಥವಳೋ…?’
ಪತ್ನಿ : ರೀ, ಅದ್ಹೇಗ್ರಿ ನನ್ನ ಬರ್ತ್‌ಡೇ ಡೇಟ್ ಮರೆತೇಬಿಟ್ರಿ?
ಪತಿ : ಇಲ್ಲ ಚಿನ್ನ…. ಅದನ್ನು ಮರೆಯುವುದುಂಟೇ? ನಿನ್ನ ಫಿಗರ್ ನೋಡುತ್ತಿದ್ದರೆ ನಿನಗೆ ಹಿಂದಿನ ವರ್ಷಕ್ಕಿಂತ 1 ವರ್ಷ ವಯಸ್ಸು ಜಾಸ್ತಿ ಆಗಿದೆ ಅಂತ ಹೇಳುವುದಾದರೂ ಹೇಗೆ?
ಪತ್ನಿ : ಎಷ್ಟು ಒಳ್ಳೆಯವರು ಕಣ್ರಿ ನೀವು….! ಇರಿ, ಕ್ಯಾರೆಟ್ ಹಲ್ವ ತಂದುಕೊಡ್ತೀನಿ.
ಪತಿ : ಅಬ್ಬಾ…. ಬದುಕಿದೆಯಾ ಬಡ ಜೀವವೇ! (ಸ್ವಗತದಲ್ಲಿ)
ಪತಿಯ ರೊಮ್ಯಾಂಟಿಕ್ ಮೂಡ್‌ನ ಪರಮಾವಧಿ : ಅಲ್ಲ ಚಿನ್ನ, ನಿನ್ನ ಹರಡಿರುವ ಕೂದಲು ಎಷ್ಟು ಸುಂದರವಾ ಎಲ್ಲೆಡೆ ಸುಳಿಯುತ್ತಿದೆ ಎಂದರೆ ಒಮ್ಮೆ ಸಾರಿನಲ್ಲಿ… ಒಮ್ಮೆ ಪಲ್ಯದಲ್ಲಿ…. `ಎಲ್ಲೆಲ್ಲೂ ನೀನೇ…. ಎಲ್ಲಿರುವೆ ಜಾಣೆ……’
ಆಧುನಿಕ ಟೆಕ್ನಾಲಜಿ ಯಾವ ಸ್ಥಿತಿ ತಂದಿದೆ ನೋಡಿ…..ಸುಂದ್ರಿ ಸುಬ್ಬಿ ಬೆಳಗ್ಗೆ ಎದ್ದವಳೇ ಬೇಗ ಬೇಗ ತನ್ನ ಮೇಕಪ್ ಬಾಕ್ಸ್ ಹುಡುಕಾಡಿ, ಅದರಿಂದ ಮೇಕಪ್ ಮಾಡಿಕೊಳ್ಳತೊಡಗಿದಳು. ಆಗ ಅವಳ ಗಂಡ ಸುಬ್ಬು ಕೂಡ ಎಚ್ಚರಗೊಂಡ.
ಸುಬ್ಬು : ಇದೇನು ಹುಚ್ಚು ನಿಂದು? ಬೆಳಗ್ಗೆ 5 ಘಂಟೆಗೆ ಹೀಗಾ ಮೇಕಪ್ ಮಾಡಿಕೊಳ್ಳೋದು?
ಸುಬ್ಬಿ : ಬಾಯಿ ಮುಚ್ಚಿಕೊಂಡು ಬಿದ್ದುಕೊಳ್ರಿ… ನಾನೀಗ ತಕ್ಷಣ ಫೋನ್ ಲಾಕ್ ಕೋಡ್ ತೆರೆದು ಕಾಲ್ ಮಾಡಬೇಕಿದೆ. ಅದು ನೀಟಾಗಿ ಮೇಕಪ್ ಮಾಡಿಕೊಂಡಿರುವ ನನ್ನ ಮುಖವನ್ನು ಮಾತ್ರ ಗುರುತಿಸಬಲ್ಲದು…. ನಾನು ಈ ಅವತಾರದಲ್ಲಿ ಅದನ್ನು ಅನ್‌ಲಾಕ್ ಮಾಡಲು ಸಾಧ್ಯವೇ?
ಗಂಡ-ಹೆಂಡತಿ ಬೆಳಗಿನ ಪೇಪರ್ ಓದುತ್ತಾ ಕಾಫಿ ಗುಟುಕರಿಸುತ್ತಾ ಕುಳಿತಿದ್ದರು. ಒಂದು ಸುದ್ದಿ ಓದಿದ ಆಕೆ, “ನೋಡ್ರಿ…. 80 ವರ್ಷದ ಅವಿವಾಹಿತ ತಾತಾ ಒಬ್ಬರು ಮದುವೆ ಮಾಡಿಕೊಂಡರಂತೆ. ಹೀಗೂ ಉಂಟೆ…..?”
“ಪಾಪ! ಆ ತಾತಾ ಇಡೀ ಜೀವನ ಬುದ್ಧಿವಂತಿಕೆಯಿಂದ ಕಳೆದರು. ವೃದ್ಧಾಪ್ಯದಿಂದ ಅರಳು ಮರುಳು ಹೆಚ್ಚಾಗಿರಬೇಕು!”
ಮಾದ ನೊಣ ಹಾರುತ್ತಾ ಹೋಗಿ ಸಿಂಗಳೀಕಯ್ಯನ ಬೋಳು ತಲೆಯ ಮೇಲೆ ಏರಿ ಕುಳಿತ. ಅದನ್ನು ನೋಡಿ ಎಂಕ ನೊಣ ಆಶ್ಚರ್ಯಗೊಂಡ.
ಎಂಕ : ಆಹಾ…. ನಿನಗೆ ಎಂಥ ಮನೆ ಸಿಕ್ಕಿದೆ!
ಮಾದ : ಇಲ್ಲ…. ಇಲ್ಲ… ಬರೀ ಫ್ಲಾಟ್ ಮಾತ್ರ ಸಿಕ್ಕಿದೆ.
ಹೊಸದಾಗಿ ಮದುವೆಯಾಗಿದ್ದ ಗುಂಡ ಸರಿಯಾಗಿ ಅಡುಗೆ ಮಾಡಲು ಬಾರದ ಹೆಂಡತಿಯನ್ನು ಸದಾ ಸಿಡುಕುತ್ತಿದ್ದ. ಅವಳೂ ಸಹ `ಡೋಂಟ್ ಕೇರ್’ ಎಂದು ನೆಮ್ಮದಿಯಾಗಿದ್ದಳು.
ಗುಂಡ : 2 ಗಂಟೆಗಳ ಕಾಲ ಒಂದೇ ಸಮ ನೋಡ್ತಿದ್ದೀಯಲ್ಲ ಇದೆಂಥ ಕಾರ್ಯಕ್ರಮ?
ಗುಂಡಿ : ಇದು ಹೊಸ ರುಚಿಗಳ ಕುಕರಿ ಶೋ!
ಗುಂಡ : ಬಡ್ಕೊಂಡ್ರು…. ಇಷ್ಟು ಕಾರ್ಯಕ್ರಮ ನೋಡಿ ಏನು ಲಾಭ? ಒಂದು ದಿನ ಚೆನ್ನಾಗಿ ಅಡುಗೆ ಮಾಡಿದ್ದೀಯಾ…?
ಗುಂಡಿ : ನೀವು `ಯಾರಾಗುವಿರಿ ಕೋಟ್ಯಾಧಿಪತಿ’ ಕಾರ್ಯಕ್ರಮ ನೋಡ್ತಾನೇ ಇರ್ತೀರಿ…. ಬಡ್ಕೊಂಡ್ರು ನಿಮ್ಮ ಸಂಪಾದನೆಗೆ…. ಆ ಬಗ್ಗೆ ನಾನು ಯಾವತ್ತಾದರೂ ಏನಾದರೂ ಹೇಳಿದ್ದೀನಾ?
ಗುಂಡ ಏನೂ ಹೇಳಲಾಗದೆ ಅವಳು ಬಡಿಸಿದ್ದನ್ನು ತಿಂದ!
ಪಪ್ಪು ತಡ ರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ಮರಳಿದ. ಮಾರನೆ ದಿನ ಅವನ ಗೆಳೆಯರು ಕೇಳಿದರು, “ಏನಪ್ಪ….ನಿನ್ನ ಹೆಂಡ್ತಿ ಏನೂ ಹೇಳಲ್ಲಿಲ್ಲವೇ?”
“ಹಾಗೇನಿಲ್ಲ… ನನಗೆ ಹೇಗೂ ಮುಂದಿನ ಈ 2 ಹಲ್ಲು ತೆಗೆಸಬೇಕಾಗಿತ್ತು…..”