ಸಂಜನಾ ಹಾಬಿ

ಸಂಜನಾ `ಗಂಡ ಹೆಂಡ್ತಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದಂಥ ಗ್ಲಾಮರಸ್‌ ತಾರೆ. ಇಂದು ತೆಲುಗು ಚಿತ್ರರಂಗದಲ್ಲೂ ಹೆಸರು ಮಾಡಿರುವ ಸಂಜನಾ `ಬಿಗ್‌ಬಾಸ್‌’ ಮನೆಗೆ ಹೋಗಿ ಬಂದ ಮೇಲಂತೂ ಇನ್ನಷ್ಟು ಜನಪ್ರಿಯಳಾದಳು. ಛಾಲೆಂಜಿಂಗ್‌ರೋಲ್ಸ್ ಗಳನ್ನು ಇಷ್ಟಪಡುವ ಸಂಜನಾ, ತೆಲುಗಿನಲ್ಲಿ  `ಸರ್ದಾರ್‌ ಗಬ್ಬರ್‌ ಸಿಂಗ್‌’ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಶಿವಣ್ಣ ಅವರ ಜೊತೆ `ಸಂತೆಯಲ್ಲಿ ನಿಂತ ಕಬೀರ’ ಚಿತ್ರದಲ್ಲೂ ಪ್ರಮುಖ ಪಾತ್ರವಿದೆ. ಇದೆಲ್ಲದರ ಜೊತೆ ಯೋಗಾಭ್ಯಾಸವನ್ನು ರೂಢಿಸಿಕೊಂಡಿರುವ ಸಂಜನಾಳಿಗೆ ಹಾಬಿ ಏನು ಗೊತ್ತೇ? ಶೂಗಳನ್ನು ಖರೀದಿಸೋದು! ಒಟ್ಟಿಗೆ ಇಪ್ಪತ್ತು ಜೊತೆ ತನಗಿಷ್ಟವಾದಂಥ ಚಪ್ಪಲಿ, ಶೂಗಳನ್ನು ಖರೀದಿಸಿಬಿಡುತ್ತಾಳೆ. ಸಂಜನಾ ಬಳಿ ಒಟ್ಟು 133 ಜೊತೆ ಶೂಗಳಿವೆಯಂತೆ. ಅದನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದಾಳೆ.

ಫಸ್ಟ್ ರಾಂಕ್ಪಡೆದ ಚಿತ್ರ

ವಿದ್ಯೆ ಇದ್ದರೆ ಸಾಕೆ…… ? ಬುದ್ಧಿ ಬೇಡವೇ…..? ಈ ಕಾನ್ಸೆಪ್ಟ್ ಎಲ್ಲರಿಗೂ ಹೊಳೆದರೂ ಅದನ್ನು ಸಿನಿಮಾ ಮಾಡುವ ಸಾಹಸಕ್ಕೆ ಹೋಗಿರಲಿಲ್ಲ. ಪ್ರೇಕ್ಷಕರು ಏನನ್ನು ಇಷ್ಟಪಡುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವ ಬದಲು ಪ್ರೇಕ್ಷಕರು ಖಂಡಿತ ಇಷ್ಟಪಡುತ್ತಾರೆ ಅಂತ ಪ್ರಯತ್ನಕ್ಕೆ ಕೈ ಹಾಕಿದ `ಫಸ್ಟ್ ರಾಂಕ್‌ ರಾಜು’ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು. ಮಂಜುನಾಥ್‌, ಬದ್ರಿನಾಥ್‌ ಈ ಸಹೋದರರು ಒಳ್ಳೆ ಸಿನಿಮಾ ಮಾಡಬೇಕೆಂದು ಬಂದರು. ಅವರ ಜೊತೆ ಸೇರಿದವರು ನಿರ್ದೇಶಕ ನರೇಶ್‌ ಕುಮಾರ್‌ ಮತ್ತು ಗುರುನಂದನ್‌. ಗಾಂಧಿನಗರದ ಯಾವುದೇ ಫಾರ್ಮುಲಾ ಬಗ್ಗೆ ತಲೆ ಕೆಡಿಸಿಕೊಳ್ಳದೇ ತಾವು ಅಂದುಕೊಂಡಂತೆ ಸಿನಿಮಾ ಮಾಡಿದರು. `ಫಸ್ಟ್ ರಾಂಕ್‌ ರಾಜು’ ಯಶಸ್ವಿಯಾಗಿ ಓಡುತ್ತಿದೆ. ಸಿನಿಮಾಗೆ ಫಸ್ಟ್ ರಾಂಕ್‌ ಸಿಕ್ಕಿದೆ. ಸಂತೋಷವನ್ನು ಹಂಚಿಕೊಳ್ಳುತ್ತಾ, ಮತ್ತೊಂದು ಹೊಸ ಕಾನ್ಸೆಪ್ಟ್ ಇರುವ ಚಿತ್ರ ಮಾಡುವುದಾಗಿ ಇದೇ ತಂಡ ಹೇಳಿಕೊಂಡಿತು. ರಾಜು ಉರ್ಫ್‌ ಗುರುನಂದನ್‌ ಈಗಾಗಲೇ ಬೇಡಿಕೆ ನಾಯಕ. ಆಫರ್ಸ್‌ ಬರುತ್ತಿವೆ. ಮಲ್ಟಿಪ್ಲೆಕ್ಸ್ ನಲ್ಲಿ ಇಂದೂ ಹೌಸ್‌ ಫುಲ್ ಶೋ ಕಾಣುತ್ತಿರುವ `ಫಸ್ಟ್ ರಾಂಕ್‌ ರಾಜು’ ಚಿತ್ರವನ್ನು ಕನ್ನಡದ ಎಲ್ಲ ಹೀರೋಗಳು ನೋಡಿ ಹೊಗಳುತ್ತಿದ್ದಾರೆ.

ಎಲ್ಲರ ಮನಗೆದ್ದ ನಿಖಿಲ್

ಸ್ಟಾರ್‌ ಮಕ್ಕಳು ನಟರಾಗುತ್ತಾರೆ. ರಾಜಕಾರಣಿಗಳ ಮಕ್ಕಳು ರಾಜಕೀಯ ರಂಗದಲ್ಲೇ ಮುಂದುವರಿಯುತ್ತಾರೆ ಎನ್ನುವ ಕಾಲವೊಂದಿತ್ತು. ಆದರೆ ಇಂದು ರಾಜಕಾರಣಿಗಳ ಮಕ್ಕಳು ಸಿನಿಮಾರಂಗದತ್ತ ಹೆಜ್ಜೆ ಹಾಕುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್‌ `ಜಾಗ್ವಾರ್‌’ ಚಿತ್ರದ ಮೂಲಕ ಹೀರೊ ಆಗುತ್ತಿದ್ದಾನೆ. ಇತ್ತೀಚೆಗೆ ಈ ಚಿತ್ರದ ಟೈಟಲ್ ರಿಲೀಸ್‌ ಅದ್ಧೂರಿಯಾಗಿ ಕಂಠೀರವ ಸ್ಟೇಡಿಯಂನಲ್ಲಿ ನಡೆಯಿತು. ಕನ್ನಡ ಸಿನಿಮಾರಂಗದಲ್ಲಿ ಮೆರೆದಂಥ ಮೇರು ಕಲಾವಿದರನ್ನು ಸನ್ಮಾನಿಸುವ ಮೂಲಕ ನಿಖಿಲ್‌ನನ್ನು ಸಿನಿಮಾರಂಗಕ್ಕೆ ಕುಮಾರಸ್ವಾಮಿಯವರು ಪರಿಚಯಿಸಿದರು. ನಿಖಲ್‌ ನಾಯಕನಾಗಲು ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದಾನೆ. ಫೈಟಿಂಗ್‌ ತರಬೇತಿ ಪಡೆಯುತ್ತಿರುವ ಝಲಕ್‌ ತೆರೆ ಮೇಲೆ ಬಂದುಹೋಯಿತು. ಫೈಟು, ಡಬ್ಬಿಂಗ್‌, ಅಭಿನಯ ಎಲ್ಲನ್ನೂ ಪರ್ಫೆಕ್ಟಾಗಿ ಕಲಿತ ನಂತರವೇ ಹೀರೊ ಆಗಲು ಹೊರಟಂಥ ನಿಖಿಲ್‌ನ `ಜಾಗ್ವಾರ್‌’ಗೆ ಎಲ್ಲ ಹಿರಿಯ ಕಲಾವಿದರೂ ಶುಭ ಕೋರಿದರು.

ರಿಕ್ಕಿಯ ಮೋಡಿ

ಎಸ್‌.ವಿ. ಬಾಬು ನಿರ್ಮಾಣದ ರಿಷಬ್‌ ಶೆಟ್ಟಿ ನಿರ್ದೇಶನದ `ರಿಕ್ಕಿ’ ಚಿತ್ರ ಹಲವು ಕಾರಣಗಳಿಂದ ಕುತೂಹಲ ಕೆರಳಿಸುತ್ತಿದೆ. ರಕ್ಷಿತ್‌ಶೆಟ್ಟಿ, ಹರಿಪ್ರಿಯಾ ಜೋಡಿಯ ಈ ಚಿತ್ರ ಮಾಮೂಲಿ ಕಮರ್ಷಿಯಲ್ ಚಿತ್ರವಾಗಿರದೆ ಏನೋ ಹೊಸ ಕಥಾವಸ್ತುವಿನೊಂದಿಗೆ ತೆರೆ ಮೇಲೆ ತರಲು ಹೊರಟಿದ್ದಾರೆ. ನಾವು ಮಾಡುವ ಪಾತ್ರ ನಮಗೆ ಇಷ್ಟವಾಗಬೇಕು, ಆಗಲೇ ಜನರಿಗೂ ಇಷ್ಟವಾಗೋದು ಎಂದು ನಂಬಿರೋನು ನಾನು. `ರಿಕ್ಕಿ’ ವಿಭಿನ್ನವಾದ ಕಥೆ ಹೊಂದಿದೆ. ನಿರೂಪಣೆಯಲ್ಲಿ ಹೊಸತನವಿರುತ್ತದೆ. ಜನ ಇಷ್ಟಪಡುತ್ತಾರೆ ಅಂತ ನಂಬಿದ್ದೇನೆ ಎನ್ನುತ್ತಾರೆ ರಕ್ಷಿತ್‌. ಈ ಚಿತ್ರದ ನಾಯಕಿ ಹರಿಪ್ರಿಯಾ ನಕ್ಸಲ್ ಗೆಟಪ್‌ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು ಈಗಾಗಲೇ ಎಲ್ಲರ ಗಮನಸೆಳೆದಿದೆ. ಹೊಸ ವರ್ಷದ ಹೊಸ ಹುರುಪಿನಲ್ಲಿರುವ ಕನ್ನಡ ಚಿತ್ರರಂಗದಲ್ಲಿ `ರಿಕ್ಕಿ’ ಒಂದು ಅಪರೂಪದ ಕೊಡುಗೆಯಾಗಬಹುದೇ…… ಕಾದು ನೋಡೋಣ.

ಆಸ್ಪತ್ರೆಯಲ್ಲಿ ಅದಿತಿ

ನಾರ್ವೆಯಲ್ಲಿ ಮೊದಲ ಕನ್ನಡ ಚಿತ್ರದ ಚಿತ್ರೀಕರಣ ಎಂದು ಹೆಮ್ಮೆ ಪಡೆದಿರುವ `ಅಕಿರಾ’ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದೆ. ಇತ್ತೀಚೆಗೆ ಈ ಚಿತ್ರದ ನಾಯಕಿ ಅದಿತಿ ರಾವ್ ‌ಗೆ ಆಘಾತವೊಂದು ಸಂಭವಿಸಿತು. ನಾರ್ವೆಯಲ್ಲಿ ಶೂಟಿಂಗ್‌ ನಡೆಯುತ್ತಿದ್ದಾಗ ಕ್ಯಾಮೆರಾ ಬ್ರಿಡ್ಜ್ ಗೆ ತಗುಲಿ ನೀರು ಪಾಲಾಗಿ ಮತ್ತೊಮ್ಮೆ ಶೂಟಿಂಗ್‌ ಶುರುವಾದಾಗ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಅದಿತಿ ರಾವ್‌ ತುಂಬಾ ಸುಸ್ತಾಗಿ ಕುಸಿದುಬಿದ್ದಳಂತೆ. ಹೌದು, ನಾರ್ವೆಯಲ್ಲಿ ತುಂಬಾನೆ ಚಳಿ ಇತ್ತು. ಅದರಲ್ಲಿ ನಾವು ಡ್ಯಾನ್ಸ್ ಮಾಡಬೇಕಿತ್ತು. ಶಾಟ್‌ ಮುಗಿದ ಕೂಡಲೇ ಓಡಿಹೋಗಿ ಕಾರಿನೊಳಗೆ ಕುಳಿತುಕೊಳ್ಳಬೇಕಿತ್ತು. ಮತ್ತೊಮ್ಮೆ ಶೂಟಿಂಗ್‌ ನಡೆದಾಗ ನಾವು ಸುಸ್ತಾಗಿದ್ದೆ. ರೀ ಶೂಟ್‌ ಅನಿವಾರ್ಯವಾಗಿತ್ತು. ಸುಸ್ತಾಗಿ ನಾನು ಕುಸಿದುಬಿದ್ದೆ. ನಮ್ಮ ತಂಡ ನಮ್ಮನ್ನು ಆಸ್ಪತ್ರೆಗೆ ಸೇರಿಸಿತು. ಎರಡು ದಿನ ಜ್ವರದಿಂದ ಬಳಲಿದೆ. ಇಷ್ಚೆಲ್ಲಾ ಆದಮೇಲೆ ಹಾಡು ಹೇಗೆ ಮೂಡಿ ಬಂದಿರಬಹುದು ಅಂತ ಲ್ಯಾಬ್‌ನಲ್ಲಿ ನೋಡಿದಾಗ ಖುಷಿಯಾಯ್ತು. ಕಷ್ಟಪಟ್ಟಿದ್ದಕ್ಕೂ ಸಾರ್ಥಕವಾಯಿತು ಎಂದು ನಾವೆಲ್ಲರೂ ಅಂದುಕೊಂಡೆ ಎಂದು ಅದಿತಿ ಹೇಳುತ್ತಾಳೆ.

ಹೊಸ ವರುಷ ಗಣೇಶ್ಹ್ಯಾಪಿ

ಬಹುಶಃ ಈ ಹೊಸ ವರ್ಷ ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಅದೃಷ್ಟ ತರುವಂತಿದೆ. ಗಣೇಶ್‌ ದ್ವಿಪಾತ್ರದಲ್ಲಿ ಅಭಿನಯಿಸಿರುವ ಪಿ.ಸಿ. ಶೇಖರ್‌ ನಿರ್ದೇಶನದ `ಸ್ಟೈಲ್ ಕಿಂಗ್‌’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಹೊಸ ರೀತಿಯಲ್ಲಿ ಅದ್ಧೂರಿಯಾಗಿ ನಡೆಯಿತು. `ಪಟಾಕಿ,’ `ಜೂಮ್’ ಚಿತ್ರಗಳು ಪೂರ್ಣಗೊಳ್ಳುತ್ತಿವೆ. ಚಿತ್ರದ ಟೀಸರ್‌ ರಿಲೀಸ್‌ ಮಾಡೋದು ಇತ್ತೀಚಿನ ಹೊಸ ಟ್ರೆಂಡ್‌. `ಸ್ಟೈಲ್ ಕಿಂಗ್‌’ ಚಿತ್ರದ ಟೀಸರ್‌ ಸದ್ಯದಲ್ಲೇ ಹೊರಬರಲಿದೆ. ಅದರ ಹಿಂದೆಯೇ `ಜೂಮ್’ ಕ್ಯೂನಲ್ಲಿ ನಿಂತಿದೆ. ಇದಲ್ಲದೆ, ಗಣೇಶ್‌ ಕೈಯಲ್ಲಿ ಇನ್ನೂ ಮೂರು ಚಿತ್ರಗಳಿವೆ. `ಮುಂಗಾರುಮಳೆ-2′ ಶೂಟಿಂಗ್‌ ನಡೆದಿದೆ. ಶಶಾಂಕ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಹೊಸ ವರ್ಷದಲ್ಲಿ ಗಣೇಶ್‌ ನಟನೆಯ ಒಟ್ಟು ಐದು ಚಿತ್ರಗಳು ತೆರೆ ಕಾಣಲಿವೆ ಎಂದು ಸುದ್ದಿ ಮೂಲಗಳು ಹೇಳುತ್ತಿವೆ.

ಕಾಡಿನಲ್ಲಿ ಶಿವಣ್ಣ

`ಕಿಲ್ಲಿಂಗ್‌ ವೀರಪ್ಪನ್‌’ ರಾಮ್ ಗೋಪಾಲ್ ವ‌ರ್ಮ ಅವರ ಮೊದಲ ನಿರ್ದೇಶನದ ಕನ್ನಡ ಚಿತ್ರ. ಈಗಾಗಲೇ ಬಿಡುಗಡೆಯಾಗಿ ಎಲ್ಲರಿಂದ  ಪ್ರಶಂಸೆಗೊಳಗಾಗಿದೆ. ಶಿವರಾಜ್‌ ಕುಮಾರ್‌ ಅಭಿನಯಕ್ಕೆ, ಅವರು ನಿರ್ವಹಿಸಿದ ಹೊಸ ರೀತಿಯ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗುತ್ತಿದೆ. `ಕಿಲ್ಲಿಂಗ್‌ ವೀರಪ್ಪನ್‌’ ಕಾಡಿನಲ್ಲಿ ಚಿತ್ರೀಕರಣಗೊಂಡಂಥ ಚಿತ್ರ. ಮರೆಯಲಾಗದ ಅನುಭವದ ಬಗ್ಗೆ ಕೇಳಿದಾಗ ಶಿವಣ್ಣ ಹೇಳಿದ್ದು ಹೀಗಿತ್ತು, ನಿಜಕ್ಕೂ ರೋಮಾಂಚನವಾಗುವಂಥ ಸನ್ನಿವೇಶಗಳು. ವೀರಪ್ಪನ್‌ನನ್ನು ಹುಡುಕಾಡಲು ಕಾಡಿನಲ್ಲಿ ಕ್ಯಾಂಪ್‌ ಹೂಡುವಂಥ ದೃಶ್ಯ. ಅಲ್ಲಿ ನಾವೇ ಅಡುಗೆ ಮಾಡಿಕೊಳ್ಳುವ ದೃಶ್ಯದ ಚಿತ್ರೀಕರಣ. ಆಗ ನಾನೇ ರಿಯಲ್ ಆಗಿ ಅಡುಗೆ ಮಾಡಿದ್ದೇನೆ. ಮಳೆ ಬರುತ್ತಿದ್ದರೂ ಲೆಕ್ಕಿಸದೇ ಶೂಟಿಂಗ್‌ ಮಾಡಿದೆ. ವರ್ಮ ಅವರ ಶೂಟಿಂಗ್‌ ಪ್ಲಾನಿಂಗ್‌ಅದ್ಭುತವಾಗಿತ್ತು. ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಗಾಯವಾಗಿದ್ದರೂ ಅದರ ಬಗ್ಗೆ ಕೇರ್‌ ಮಾಡದೇ ಎಲ್ಲರೂ ಕ್ಯಾಮೆರಾ ಎದುರಿಸಿದರು. ಇಂಥ ಪಾತ್ರಗಳ ಸಿನಿಮಾ ಅಪರೂಪ….. ನಟಿಸುವಾಗ ಖುಷಿಯಾಗುತ್ತೆ, ಎನ್ನುತ್ತಾರೆ ಶಿವಣ್ಣ.

ಕಾಶ್ಮೀರದ ಚೆಲುವೆ

ಕಾಶ್ಮೀರದ ಒಂದು ಸಣ್ಣ ಹಳ್ಳಿ. ಬಾಂಬು, ಗುಂಡು ಶಬ್ದ ಕೇಳಿ ಬೆಳೆದಂಥ ಹುಡುಗಿ ಸಿನಿಮಾ, ಡ್ಯಾನ್ಸ್, ಮ್ಯೂಸಿಕ್‌ ಎಂದು ಮನೆಯಿಂದಾಚೆಯ ಇಂಥ ವಾತಾವರಣದಲ್ಲಿ ಬೆಳೆದ ಹುಡುಗಿ ಇಂದು `ಪ್ರೀತಿಯಲ್ಲಿ ಸಹಜ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾಳೆ ಅಂದರೆ ಆಶ್ಚರ್ಯವಾಗುತ್ತೆ ಅಲ್ವಾ? ವಿದ್ಯಾಭ್ಯಾಸಕ್ಕೇನು ಅಡ್ಡಿ ಇರಲಿಲ್ಲವಾದರೂ ಫ್ಯಾಷನ್‌ ಡಿಸೈನರ್‌ಆಗಬೇಕೆಂದಾಗ ವಿರೋಧವಿತ್ತು. ಅಣ್ಣನ ಜೊತೆ ಬೆಂಗಳೂರಿಗೆ ಬಂದು ಆಡಿಯಾಲಜಿ ಓದಿದಳು. ಕಾಶ್ಮೀರದ ಚೆಲುವೆಗೆ ಬೆಂಗಳೂರಿಗೆ ಹೊಂದಿಕೊಳ್ಳಲು ದಿನಗಳೇ ಹಿಡಿಯಿತು. ಡ್ಯಾನ್ಸ್ ಕಲಿತಳು, ರೂಪದರ್ಶಿಯಾದಳು. ನಿರ್ದೇಶಕ ರತ್ನಜ ಅವರ ಫೋನ್‌ ಬಂದಾಗ ಯಾರೋ ತಮಾಷೆ ಮಾಡುತ್ತಿದ್ದಾರೆಂದೇ ತಿಳಿದಿದ್ದ ಕಾಶ್ಮೀರದ ಚೆಲುವೆಯನ್ನು ಒಪ್ಪಿಸಿ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದರು. ಇಂದು ಈ ಚಿತ್ರದ ಸ್ಟಿಲ್‌ಗಳಿಂದಲೇ ಎಲ್ಲರಿಗೂ ಮೋಡಿ ಮಾಡುತ್ತಿರುವ ಈ ಚೆಲುವೆಯೇ ಅಕ್ಸಾ ಭಟ್‌. ರತ್ನಜ ಕನ್ನಡ ಕಲಿಸಿದರು, ಕನ್ನಡ ಸಿನಿಮಾಗಳನ್ನು ತೋರಿಸಿದರು, ತಿದ್ದಿ ತೀಡಿ ನನ್ನನ್ನು ನಟಿಯಾಗಿ ರೂಪಿಸಿದರು ಎಂದು ಹೇಳಿಕೊಳ್ಳುವ ಅಕ್ಸಾ ಭಟ್‌ ನಟಿಸಿರುವ `ಪ್ರೀತಿಯಲ್ಲಿ ಸಹಜ’ ಸದ್ಯದಲ್ಲೇ ಬಿಡುಗಡೆ ಕಾಣಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ