ಡಿಂಪಲ್ ಯಾದವ್ ಉತ್ತರಾಖಂಡ ರಾಜ್ಯದ ನಿವಾಸಿ. ಅವರ ಪಾಲನೆ ಪೋಷಣೆ ನಡೆದದ್ದೆಲ್ಲ ಲಖ್ನೌನಲ್ಲೇ. ಅವರ ತಾಯಿ ಚಂಪಾ ರಾವತ್ ಅಪ್ಪಟ ಗೃಹಿಣಿ ಹಾಗೂ ತಂದೆ ಆರ್.ಸಿ. ರಾವತ್ ಆರ್ಮಿಯಲ್ಲಿ ಕರ್ನಲ್ ಆಗಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿ ಹುಟ್ಟಿದ ಡಿಂಪಲ್ ಕಟ್ಟುನಿಟ್ಟಾದ ಮಿಲ್ಟ್ರಿ ಗರಡಿಯಲ್ಲಿ ಬೆಳೆದವರು. ಆಕೆಯ ಆರಂಭದ ಕಲಿಕೆ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಆಯಿತು. ನಂತರ ಆಕೆ ಲಖ್ನೌನ ವಿ.ವಿ.ಯಲ್ಲಿ ಬಿ.ಕಾಂ. ಪದವಿ ಪಡೆದರು. ಅಲ್ಲಿಯೇ ಅವರು ಅಖಿಲೇಶ್ ಯಾದವ್‌ರನ್ನು ಭೇಟಿಯಾದದ್ದು. ಇಬ್ಬರ ಸ್ನೇಹ ಪ್ರೇಮದಲ್ಲಿ ಬದಲಾಗಿ 1999ರಲ್ಲಿ ಮದುವೆಯಲ್ಲಿ ಮುಗಿಯಿತು. ಇವರಿಗೆ ಮೂರು ಮಕ್ಕಳು ಅದಿತಿ, ಟೀನಾ ಹಾಗೂ ಅರ್ಜುನ್.
ರಾಜಕೀಯದ ಕೆರಿಯರ್ನ ಆರಂಭ
ಡಿಂಪಲ್ ಯಾದವ್ 2009ರಲ್ಲಿ ತಮ್ಮ ರಾಜಕೀಯದ ಕೆರಿಯರ್‌ನ್ನು ಆರಂಭಿಸಿದಾಗ, ಅದಾಗಲೇ ವೈವಾಹಿಕ ಜೀವನದ 10 ವಸಂತಗಳನ್ನು ದಾಟಿದ್ದರು. ಫಿರೋಜಾಬಾದ್ ಲೋಕಸಭೆಯ ಸೀಟ್‌ನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜ್ ಬಬ್ಬರ್‌ಹಾಗೂ ಡಿಂಪಲ್ ಯಾದವ್‌ರ ಪೈಪೋಟಿ ಬಲು ಜೋರಾಗಿತ್ತು. ರಾಜ್ ಬಬ್ಬರ್ ಜನಪ್ರಿಯ ಹಿಂದಿ ನಟ, ಜನರ ನಡುವೆ ಒಳ್ಳೆಯ ಕಾಂಟ್ಯಾಕ್ಟ್ ಇತ್ತು. ಆ ಆಕರ್ಷಣೆಯ ಕಾರಣ ಆತ ಗೆದ್ದಾಗ, ಡಿಂಪಲ್ ತಮ್ಮ ಮೊದಲ ಸೋಲನ್ನು ಅನುಭವಿಸಬೇಕಾಯ್ತು.
ಅಖಿಲೇಶ್ ಯಾದವ್ ರಾಜೀನಾಮೆ ನೀಡಿದ್ದರಿಂದ ಫಿರೋಜಾಬಾದ್ ಸಂಸದೀಯ ಸೀಟು ಖಾಲಿ ಆಗಿತ್ತು. ಅಖಿಲೇಶ್, ಫಿರೋಜಾಬಾದ್ ಮತ್ತು ಕನೌಜ್‌ನ 2 ಸಂಸದೀಯ ಸೀಟುಗಳಿಂದ ಲೋಕಸಭೆಯ ಚುನಾಣೆಯಲ್ಲಿ ಜಯ ಗಳಿಸಿದ್ದರು. ಕನೌಜ್‌ಸೀಟ್‌ನ್ನು ತಮ್ಮದಾಗಿರಿಸಿಕೊಂಡ ಅಖಿಲೇಶ್, ಫಿರೋಜಾಬಾದ್‌ಸೀಟನ್ನು ಬಿಟ್ಟುಕೊಟ್ಟರು. ಈ ಕಾರಣ ಉಪಚುನಾವಣೆ ನಡೆಯಿತು, ಅದರಲ್ಲಿ ಡಿಂಪಲ್ ಸೋತರು. ಆದರೆ ಈ ಸೋಲು ಅವರ ಉತ್ಸಾಹ ತಗ್ಗಿಸಲಿಲ್ಲ. ಅವರು ಜನತೆಯ ಮಧ್ಯೆ ಎಂದಿನಂತೆ ಸಕ್ರಿಯರಾಗಿ ಇರತೊಡಗಿದರು.
2012ರಲ್ಲಿ ಉ.ಪ್ರ.ದ ವಿಧಾನಸಭೆಯ ಚುನಾವಣೆ ನಡೆದಾಗ, ಸಮಾಜವಾದಿ ಪಾರ್ಟಿ ಬಹುಮತದಿಂದ ಸರ್ಕಾರ ರಚಿಸಿತು, ಅಖಿಲೇಶ್ ಯಾದವ್ ಆ ರಾಜ್ಯದ ಮುಖ್ಯಮಂತ್ರಿ ಆದರು. ಸಿ.ಎಂ. ಆದಮೇಲೆ ಅಖಿಲೇಶ್, ಕನೌಜ್ ಲೋಕಸಭೆಯ ಸೀಟ್‌ಗೆ ರಾಜೀನಾಮೆ ಕೊಡಬೇಕಾಯಿತು. ಆ ಕಾರಣ ಕನೌಜ್ ಲೋಕಸಭೆಯ ಸೀಟ್‌ಗಾಗಿ ಡಿಂಪಲ್ ಯಾದವ್ ಚುನಾವಣೆಯಲ್ಲಿ ಸ್ಪರ್ಧಿಸಿದರು.
ಡಿಂಪಲ್ ದೇಶದಲ್ಲೇ 44ನೇ ಅವಿರೋಧ ಸಂಸದೆಯಾಗಿ ಆರಿಸಲ್ಪಟ್ಟರು. ಉ.ಪ್ರ.ದಲ್ಲಂತೂ ಆಕೆ ಪ್ರಪ್ರಥಮ ಅವಿರೋಧ ಸಂಸದೆಯಾಗಿ ಆರಿಸಲ್ಪಟ್ಟಿದ್ದರು. 2014ರ ಲೋಕಸಭೆಯ ಚುನಾಣೆಯನ್ನೂ ಡಿಂಪಲ್ ಕನೌಜ್‌ನಿಂದಲೇ ಸ್ಪರ್ಧಿಸಿ ವಿಜೇತರಾದರು. ಫಿರೋಜಾಬಾದ್ ಚುನಾವಣೆಯ ಸೋಲಿನಿಂದ ಎಂದೂ ಆಕೆ ಉತ್ಸಾಹ ಕಳೆದುಕೊಂಡಿರಲಿಲ್ಲ. ಅದರಲ್ಲೂ ಮೊದಲ ಚುನಾವಣೆಯ ಸೋಲು ಎಂಥವರನ್ನೂ ನಡುಗಿಸಿಬಿಡುತ್ತದೆ, ಆದರೆ ಡಿಂಪಲ್ ಮಾತ್ರ ಈ ಮೊದಲ ಸೋಲನ್ನು ತಮ್ಮ ಮುಂದಿನ ಗೆಲುವಿನ ಸೋಪಾನವಾಗಿ ಮಾಡಿಕೊಂಡರು.
ಶಿಸ್ತಿನ ಮಹತ್ವ ರಾಜಕೀಯ ಪರಿವಾರದ ಸೊಸೆ, 3 ಮಕ್ಕಳ ತಾಯಿ, ಮುಖ್ಯಮಂತ್ರಿಯ ಪತ್ನಿ, ಯಶಸ್ವೀ ರಾಜಕಾರಣಿ ಇತ್ಯಾದಿ ವಿಭಿನ್ನ ಪಾತ್ರಗಳನ್ನು ಏಕೀಕರಿಸಿ, ಡಿಂಪಲ್ ತಮ್ಮ ವ್ಯಕ್ತಿತ್ವ ನಿಭಾಯಿಸುತ್ತಾರೆ. ಹಾಗಿರುವಾಗ ಕಟ್ಟುನಿಟ್ಟಾದ ಶಿಸ್ತುಬದ್ಧ ಜೀವನಕ್ರಮ ಮಾತ್ರ ಅವರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಸಹಾಯ ಮಾಡಬಲ್ಲ.
ಆ ಕುರಿತಾಗಿ ಡಿಂಪಲ್, “ನಾನು ಬೆಳೆದು ಬಂದ ಹಾಗೂ ಈಗ ಇರುವಂಥ ಪರಿವಾರದಲ್ಲಿ, ಸಮಾಜವನ್ನೂ ಕುಟುಂಬದ ಭಾಗದಂತೆಯೇ ಕಾಣಲಾಗುತ್ತದೆ. ಹೆಣ್ಣು ತನ್ನ ತವರು ಹಾಗೂ ಪತಿಯ ಎರಡೂ ಕುಟುಂಬಗಳ ಸಂಸ್ಕಾರವನ್ನು ರೂಢಿಸಿಕೊಂಡೇ ಮುಂದಿನ ಪೀಳಿಗೆಗೆ ಅದನ್ನು ದಾಟಿಸುತ್ತಾಳೆ. ನನಗೆ ಜೀವನದಲ್ಲಿ ಶಿಸ್ತುಬದ್ಧ ಕ್ರಮ ಎಂದರೆ ಬಹಳ ಇಷ್ಟ. ನಾನು ನಿಷ್ಠೆಯಿಂದ ಅದನ್ನು ಪಾಲಿಸುತ್ತೇನೆ ಹಾಗೂ ಅತ್ತೆಮನೆಯಲ್ಲೂ ಈ ನನ್ನ ನಡವಳಿಕೆ ಸೈ ಎನಿಸಿದೆ,” ಎನ್ನುತ್ತಾರೆ.
ರಚನಾತ್ಮಕ ಹವ್ಯಾಸಗಳು
ಮಹಿಳೆಯರ ಸಂಪೂರ್ಣ ಪ್ರಗತಿಗಾಗಿ, ಪ್ರತಿ ಕ್ಷಣ ಕ್ರಿಯೇಟಿವ್ ಸಲಹೆಗಳನ್ನು ನೀಡುವುದರ ಜೊತೆ ಜೊತೆಯಲ್ಲೇ ಡಿಂಪಲ್‌ಗೆ ಬಿಡುವಿನ ವೇಳೆಯಲ್ಲಿ ಕಾದಂಬರಿ ಓದು, ಪೇಂಟಿಂಗ್ ಕಲೆಯ ಹವ್ಯಾಸಗಳಿವೆ. ಆಕೆ ಇಂಡಿಯನ್‌ಚೈನೀಸ್, ಎರಡೂ ಬಗೆಯ ಪಾಕಕಲೆಯಲ್ಲಿ ನಿಪುಣರು. ತಮ್ಮ ಮಕ್ಕಳನ್ನು ಅತಿ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಅವರಿಗೆ ಪಾಠ ಹೇಳಿಕೊಡುವ ಜವಾಬ್ದಾರಿಯೂ ಇವರದ್ದೇ! ಆದರೆ ಈ ಎಲ್ಲಾ ಕೆಲಸಗಳಿಗೂ ಬಿಡುವು ಮಾಡಿಕೊಳ್ಳುವುದು ಬಹಳ ಕಷ್ಟವೇ ಸರಿ. ಹಾಗಿದ್ದೂ ಅವರು ಎಲ್ಲವನ್ನೂ ಸರಿದೂಗಿಸಿಕೊಳ್ಳುತ್ತಾರೆ.
ಡಿಂಪಲ್ ಹೇಳುತ್ತಾರೆ, “ನಾನು ಮುಂಚಿನಿಂದಲೇ ಸಮಯಕ್ಕೆ ಮೊದಲೇ ಕೆಲಸ ಮುಗಿಸುವ ಕಲೆಯಲ್ಲಿ ಪರಿಣಿತಳು. ಇದರಿಂದ ನನಗೆ ಎಲ್ಲೂ ಏನೂ ತೊಂದರೆ ಕಾಡಲಿಲ್ಲ, ಮುಂದೆಯೂ ಹಾಗೆ ನಿಭಾಯಿಸುತ್ತೇನೆ. ನಾನು ಮಕ್ಕಳಿಗೆ ಸಾಧ್ಯವಾದಷ್ಟೂ ಹೆಚ್ಚು ಸಮಯ ಸಿಗುವಂತೆ ನೋಡಿಕೊಳ್ಳುವೆ. ಇದರಿಂದ ಮಕ್ಕಳು ಹೆಚ್ಚು ಹೊತ್ತು ನನ್ನ ಬಳಿ ಇದ್ದಂತಾಗುವುದಲ್ಲದೆ, ಅವರು ಹೆಚ್ಚು ಹೆಚ್ಚು ಕಲಿಯಲು ನಾನು ಸಹಾಯ ಮಾಡಿದಂತಾಗುತ್ತದೆ.”
ಯುವಶಕ್ತಿಯ ಉತ್ಸಾಹದ ಹೊಸ ವಿಚಾರ
ಉ.ಪ್ರ.ದ ಸಮಾಜವಾದಿ ಸರ್ಕಾರ ಮಹಿಳೆಯರ, ಹೆಣ್ಣುಮಕ್ಕಳ ಸುರಕ್ಷತೆ, ಗೌರವಾದರ, ಶಿಕ್ಷಣ, ಉದ್ಯೋಗಾವಕಾಶ ಇತ್ಯಾದಿಗಳಿಗೆ ಗಮನಕೊಡುತ್ತಾ ಬಹಳಷ್ಟು ಕೆಲಸಗಳನ್ನು ಮಾಡಿದೆ. ಇದರ ಹೆಚ್ಚಿನ ಲಾಭವನ್ನು ಆ ರಾಜ್ಯದ ಸ್ತ್ರೀ ವರ್ಗ ಪಡೆದಿದೆ. ಮಹಿಳೆಯರಿಗೆ ಗೌರವಾದರ ನೀಡುತ್ತಾ ಅವರ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಮಾಜವಾದಿ ಪಾರ್ಟಿ ಸತತ ಕೆಲಸ ಮಾಡುತ್ತಿದೆ. ಈ ಎಲ್ಲಾ ಯೋಜನೆಗಳನ್ನೂ ಸುಸೂತ್ರವಾಗಿ ನಡೆಸಿಕೊಂಡು ಹೋಗುವಲ್ಲಿ ಅಖಿಲೇಶ್‌ರ ಜೊತೆ ಡಿಂಪಲ್‌ರ ಯುವಚಿಂತನೆಗಳೂ ಅಡಗಿವೆ.
ಸಮಾಜವಾದಿ ಪಾರ್ಟಿ ಇದೀಗ ಆಕೆಗೆ ಪಾರ್ಟಿಯ ಪ್ರಚಾರದ ಸಂಪೂರ್ಣ ಜವಾಬ್ದಾರಿ ನೀಡಲು ಹೊರಟಿರುವುದು, ಡಿಂಪಲ್‌ರ ಜನಪ್ರಿಯತೆಗೆ ಮತ್ತೊಂದು ಸಾಕ್ಷಿಯಾಗಿದೆ. ಉ.ಪ್ರ.ದಲ್ಲಿ ಮುಂದಿನ ವರ್ಷ ವಿಧಾನಸಭೆಯ ಚುನಾವಣೆ ನಡೆಯಲಿದೆ. ಇದಕ್ಕಾಗಿ ಪಾರ್ಟಿಯ ಪ್ರಚಾರ ಹಾಗೂ ಸರ್ಕಾರದಿಂದ ಮಾಡಲಾಗಿರುವ ಕೆಲಸಗಳನ್ನು ಜನತೆಯ ಮನೆಮನೆಗೂ ತಲುಪಿಸಬೇಕಿದೆ. ಚುನಾವಣೆ ಎದುರಿಸಲಿರುವ ಪಾರ್ಟಿಯ ಪ್ರತಿ ಅಭ್ಯರ್ಥಿ, ಚುನಾವಣೆಯ ಪ್ರಚಾರಕ್ಕಾಗಿ ಎಲ್ಲರಿಗಿಂತ ಹೆಚ್ಚಾಗಿ ಡಿಂಪಲ್‌ರನ್ನೇ ಕೇಳುತ್ತಾರಂತೆ! ಸಂಸತ್ತಿನಲ್ಲೂ ಈಕೆಯ ಯೋಗ್ಯತೆ ಗಮನಿಸಿ ವಿಭಿನ್ನ ಬಗೆಯ ಜವಾಬ್ದಾರಿಗಳನ್ನು ನೀಡಲಾಗಿದೆ. ಡಿಂಪಲ್ ವಾಟರ್ ರಿಸೋರ್ಸಸ್ ಕಮಿಟಿಯ ಸಕ್ರಿಯ ಸದಸ್ಯರು. ಇದರ ಜೊತೆ ಈಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸಂಸದೀಯ ಸಮಿತಿಯ ಆ್ಯಕ್ಟಿವ್ ಮೆಂಬರ್ ಕೂಡ ಹೌದು!
– ಸಿ. ಶೈಲಜಾ