ಗುಂಜನ್‌ ಗೌಡ್‌ರನ್ನು ಭೇಟಿಯಾದಾಗ ಮನಸ್ಸಿಗೆ ಹೊಳೆಯುವ 2 ಶಬ್ದಗಳೆಂದರೆ, ಆತ್ಮವಿಶ್ವಾಸ ಮತ್ತು ಲವಲವಿಕೆ. ದೆಹಲಿಯಲ್ಲಿ ಹುಟ್ಟಿ ಬೆಳೆದ ಗುಂಜನ್‌ ಪ್ರಸ್ತುತ ಬ್ಯೂಟಿ ಹಾಗೂ ಫ್ಯಾಷನ್‌ ಜಗತ್ತಿನ ಚಿರಪರಿಚಿತ ಹೆಸರಾಗಿದ್ದಾರೆ.

ತಮ್ಮ ಕ್ರಿಯಾಶೀಲತೆ, ಶ್ರದ್ಧೆ ಮತ್ತು ಕಠಿಣ ಪರಿಶ್ರಮದ ಬಲದಿಂದ ಅವರು ಪರ್ಮನೆಂಟ್‌ ಬ್ಯೂಟಿ ಎಕ್ಸ್ ಪರ್ಟ್‌ ಹಾಗೂ ಆ್ಯಪ್ಸ್ ಕಾಸ್ಮೆಟಿಕ್‌ ಕ್ಲಿನಿಕ್‌ ಅಂಡ್‌ ಅಕಾಡೆಮಿಯ ಎಗ್ಸಿಕ್ಯೂಟಿವ್ ‌ಡೈರೆಕ್ಟರ್‌ ಆಗಿದ್ದಾರೆ.ಈ ಹಂತದ ತನಕ ಅವರು ಹೇಗೆ ತಲುಪಿದರು, ಅವರ ಜೀವನ ಹೇಗಿದೆ ಎಂಬುದರ ಬಗ್ಗೆ ಹೀಗೆ ವಿವರಿಸುತ್ತಾರೆ, “ನನ್ನ ತವರೂರು ದೆಹಲಿ. ಹೋಲಿ ಚೈಲ್ಡ್ ಶಾಲೆಯಲ್ಲಿ ನನ್ನ ಶಿಕ್ಷಣ ಶುರುವಾಗಿ ಲೇಡಿ ಇರ್ವಿನ್‌ ಕಾಲೇಜಿನಲ್ಲಿ ಮುಂದಿನ ಶಿಕ್ಷಣ ಪೂರೈಸಿದೆ. ಮದುವೆಗೂ ಮುನ್ನ ನನ್ನ ಕುಟುಂಬದಲ್ಲಿ 4 ಜನರಿದ್ದರು. ಮದುವೆಯ ಬಳಿಕ 7 ಜನರಾದೆವು.

“ಮದುವೆಗೆ ಮುನ್ನ ನನಗೆ ಒಬ್ಬಳೇ ತಂಗಿ ಇದ್ದಳು. ಮದುವೆ ಬಳಿಕ ನಾದಿನಿಯರ ರೂಪದಲ್ಲಿ ನನಗೆ 3 ಜನ ತಂಗಿಯರು ದೊರೆತರು. ಎಲ್ಲರಿಗಿಂತ ದೊಡ್ಡವಳಾದ ಕಾರಣದಿಂದ ನಾನು ನನ್ನ ಕರ್ತವ್ಯ ನಿಭಾಯಿಸಿದೆ. ಮೂವರಿಗೂ ಒಳ್ಳೆಯ ಮನೆತನ ನೋಡಿ ಮದುವೆಯ ಕಾರ್ಯ ಪೂರೈಸಿದೆ. ಕೊನೆಯ ನಾದಿನಿಯನ್ನು ನನ್ನ ಮಗಳ ಹಾಗೆ ಭಾವಿಸಿ ಮದುವೆಯಲ್ಲಿ ಕನ್ಯಾದಾನ ಕೂಡ ಮಾಡಿದೆ.”

ಸರಳತೆ ನನ್ನ ಗುರುತು

ಯಶಸ್ಸಿನ ಬಗ್ಗೆ ನಮಗೆ ಅಹಂಕಾರ ಇದ್ದರೆ ಅದು ನಮ್ಮ ಬಳಿ ಹೆಚ್ಚು ದಿನ ನಿಲ್ಲುವುದಿಲ್ಲ ಎಂದು ಹೇಳುವ ಗುಂಜನ್‌, ಎಷ್ಟೇ ಉನ್ನತ ಯಶಸ್ಸಿನ ಶಿಖರ ತಲುಪಿದರೂ, ಸರಳತೆಯೆಂಬ ಸೂತ್ರವನ್ನು ಮರೆಯಲಿಲ್ಲ.

“ಒಂದು ಮರ ಎಷ್ಟು ಹೆಚ್ಚು ಹಣ್ಣುಗಳಿಂದ ತುಂಬಿರುತ್ತೋ, ಅದು ಭೂಮಿಯ ಕಡೆಗೇ ಹೆಚ್ಚು ವಾಲಿರುತ್ತೆ, ಎಂಬುದನ್ನು ನಾನು ಚಿಕ್ಕವಳಿದ್ದಾಗಿನಿಂದ ಕೇಳುತ್ತ ಬಂದಿರುವೆ. ಅದು ನನ್ನ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದೆ. ಅದರಂತೆಯೇ ನಾನು ಪಾಲಿಸುತ್ತಾ ಬಂದಿರುವೆ. ನಾನು ಎಷ್ಟೇ ಉನ್ನತ ಶಿಖರ ತಲುಪಿದರೂ ನನ್ನ ಕಾಲುಗಳು ಮಾತ್ರ ನೆಲದ ಮೇಲೆಯೇ ಇರುತ್ತವೆ. ಸರಳತೆಯೇ ನನ್ನ ಹೆಗ್ಗುರುತು.”

ಉದ್ಯಮಿಯಾದದ್ದು ಹೀಗೆ….

ಗುಂಜನ್‌ಗೆ  ಬಾಲ್ಯದಿಂದಲೇ ಏನನ್ನಾದರೂ ಹೊಸತನ್ನು ಮಾಡಬೇಕೆಂಬ ಉತ್ಸಾಹ ಇತ್ತು. ಬಿಡುವಿದ್ದಾಗ ಅವರು ಯಾವುದಾದರೂ ಕಲಾತ್ಮಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಇದೇ ನಡೆ ಅವರನ್ನು ಮುಂದೆ ಬ್ಯೂಟಿ  ಬಿಸ್‌ನೆಸ್‌ನತ್ತ ಬರುವಂತೆ ಮಾಡಿತು. ಈ ಕುರಿತಂತೆ ಅವರು ಹೇಳುವುದು ಹೀಗೆ, “ನನ್ನನ್ನು ನಾನು ಯಾವಾಗಲೂ ಕ್ರಿಯಾಶೀಲಳಾಗಿಟ್ಟುಕೊಳ್ಳಲು ಪ್ರಯತ್ನಿಸಿದೆ. ಆ ನನ್ನ ಆಕಾಂಕ್ಷೆಯೇ ಈ ಹಂತದ ತನಕ ಮುಟ್ಟಲು ಸಾಧ್ಯವಾಯಿತು. ಇದರ ಹೊರತಾಗಿ ಓದುವುದು ಹಾಗೂ ಕಲಿಸುವುದು ನನ್ನ ಬಾಲ್ಯದ ಹವ್ಯಾಸ. ಅದನ್ನು ನಾನು ಈಗಲೂ ವೃತ್ತಿಪರಳಾಗಿಯೂ ನಿಭಾಯಿಸುತ್ತ ಬಂದಿರುವೆ.

“ಉದ್ಯಮಿಯಾಗಲು ವಯಸ್ಸಿನ ಯಾವುದೇ ನಿರ್ಬಂಧವಿಲ್ಲ. ವಿದ್ಯಾಭ್ಯಾಸದ ಬಳಿಕ ಅಮ್ಮನ ಜೊತೆ ಕೆಲಸ ಮಾಡ್ತಾ ಮಾಡ್ತಾ ನನಗೆ ಆತ್ಮವಿಶ್ವಾಸ ಹಾಗೂ ಅನುಭವ ಎರಡೂ ಏಕಕಾಲಕ್ಕೆ ದೊರೆತ. ಕಂಪನಿಯೊಂದನ್ನು ನಡೆಸಲು ಬೇಕಾಗುವ ಅರ್ಹತೆಗಳು ನನಗೆ ಬಾಲ್ಯದಿಂದಲೇ ದೊರೆಯುತ್ತ ಬಂದವು. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ನಾನು ಪ್ರತಿಯೊಂದು ಹಂತದಲ್ಲಿ ಕೆಲಸ ಮಾಡಿದೆ.”

ಜೀವನದ ಬಗೆಗಿನ ದೃಷ್ಟಿಕೋನ

ಗುಂಜನ್‌ ಜೀವನವನ್ನು ಸಹಜವಾಗಿ ಜೀವಿಸಲು ಇಷ್ಟಪಡುತ್ತಾರೆ. ಸುಖವೇ ಇರಲಿ, ದುಃಖವೇ ಇರಲಿ ಅವರು ಜೀವನದ ಆ ಕ್ಷಣಗಳನ್ನು ವಿಶ್ವಾಸಪೂರ್ವಕವಾಗಿ ಜೀವಿಸಲು ಬಯಸುತ್ತಾರೆ. ತಮ್ಮ ಜೀವನ ಹಾಗೂ ಅದರಲ್ಲಿ ಬಂದ ಬದಲಾವಣೆಗಳ ಕುರಿತಂತೆ ಅವರು ಹೀಗೆ ಹೇಳುತ್ತಾರೆ, “ತಾಯಿಯಾದ ಬಳಿಕ ನನ್ನಲ್ಲಿ ಸಾಕಷ್ಟು ಬದಲಾವಣೆಗಳು ಆದವು. ನನ್ನ ಮಗ ತನ್ನ ತಾಯಿಯ ಬಗ್ಗೆ ಹೆಮ್ಮೆ ಪಡುವಂತಾಗಬೇಕು ಎಂಬ ವಿಚಾರ ಸರಣಿಯಲ್ಲಿ ನಾನು ಕೆಲಸ ಮಾಡುತ್ತಿರುತ್ತೇನೆ.”

ನಾವು ಯಾರನ್ನಾದರೂ ಸುಂದರಗೊಳಿಸುತ್ತೇವೆಂದರೆ, ಆ ಸಮಯದಲ್ಲಿ ಅವರ ಮನಸ್ಸಿನಲ್ಲಿ ಫೀಲ್ ‌ಗುಡ್‌ ಫ್ಯಾಕ್ಟರ್‌ ಮತ್ತು ಆತ್ಮವಿಶ್ವಾಸ ಅವರ ಮೈ ಮನಸ್ಸಿನಲ್ಲಿ ತುಂಬಿರುತ್ತದೆ ಎಂಬುದು ಇವರ ಅನಿಸಿಕೆ. ಈ ಆತ್ಮವಿಶ್ವಾಸದೊಂದಿಗೆ ನಾವು ಯಾವದೇ ಕೆಲಸ ಮಾಡಿದರೂ ಅದರಲ್ಲಿ ನಿಶ್ಚಿತ ಯಶಸ್ಸು ದೊರೆಯುತ್ತದೆ. ನಮ್ಮ ಯಶಸ್ಸಿನ ಸಡಗರವನ್ನು ಆಚರಿಸಿಕೊಳ್ಳುವಾಗ ಅದು ನಿಜಕ್ಕೂ ಅಮೂಲ್ಯ ಕ್ಷಣ ಎನಿಸಿಕೊಳ್ಳುತ್ತದೆ,” ಎಂದು ಹೇಳುವ ಅವರು, “ಈ ಸಂಗತಿಯೇ ನನ್ನನ್ನು ಈ ಕ್ಷೇತ್ರದೊಂದಿಗೆ ನಿಕಟತೆ ಬೆಳೆಸಿದೆ. ಮುಂದೆಯೂ ಆ ನಿಕಟತೆ ಇನ್ನೂ ಹೆಚ್ಚಲಿದೆ,” ಎಂದು ಹೇಳುತ್ತಾರೆ.

ಅವರ ಜೀವನದಲ್ಲಿ ಮೈಲಿಗಲ್ಲು ಆಗಿದ್ದು ಏನು ಎಂಬ ಪ್ರಶ್ನೆಗೆ ಅವರು, “ಜೀವನ ಅಮೂಲ್ಯ. ಇಲ್ಲಿ ನಾವಿಟ್ಟ ಒಂದೊಂದು ಹೆಜ್ಜೆ ಕೂಡ ಒಂದು ಮೈಲಿಗಲ್ಲು ಎಂಬಂತೆ ಸಾಬೀತಾಗುತ್ತದೆ. ಆದರೆ ನನ್ನ ಜೀವನದಲ್ಲಿ ಎಲ್ಲಕ್ಕೂ ದೊಡ್ಡ ಮೈಲಿಗಲ್ಲು ಯಾವುದಾಗಬಹುದು ಎಂಬ ನಿರೀಕ್ಷೆಯಲ್ಲಿ ನಾನಿನ್ನೂ ಇದ್ದೇನೆ.”

ಇತರರಿಗೆ ಸ್ಪಂದಿಸುವ ಗುಣ

ಜೀವನವನ್ನು ಮುಕ್ತವಾಗಿ ಜೀವಿಸುವಲ್ಲಿ ವಿಶ್ವಾಸವಿಟ್ಟಿರುವ ಗುಂಜನ್‌, `ಟೀ ಟೈಮ್’ನ್ನು ಚೆನ್ನಾಗಿ ಎಂಜಾಯ್‌ ಮಾಡುತ್ತಾರೆ. ಬಿಡುವಿನ ಸಮಯದಲ್ಲಿ ನೀವು ಏನನ್ನು ಮಾಡುತ್ತೀರಿ?

`ನನಗೆ ಬಿಡುವು ಸಿಕ್ಕರೆ ನಾನು ಮನಸೋಕ್ತ ಈಜಲು ಬಯಸುತ್ತೇನೆ. ಸ್ನೇಹಿತರ ಜೊತೆ ಸಂಭಾಷಿಸಬೇಕೆಂಬ ಮೂಡ್‌ ಇದ್ದರೆ ಚ್ಯಾಟ್‌ ಮಾಡಲು ಇಷ್ಟಪಡುತ್ತೇನೆ. ನಾನು ಆರಂಭದಿಂದಲೇ ಬೇರೆಯವರ ಸಮಸ್ಯೆಗಳಿಗೆ ಸ್ಪಂದಿಸುವವಳು ಎಂದು ಚಿರಪರಿಚಿತಳಾಗಿದ್ದೇನೆ. ನನ್ನ ಈ ಗುಣದಿಂದಾಗಿಯೇ ಸ್ನೇಹಿತರು ನನ್ನನ್ನು ಇಷ್ಟಪಡುತ್ತಾರೆ.’

ಸಮತೋಲನ ಅತ್ಯಗತ್ಯ

“ಜೀವನವನ್ನು ಯಶಸ್ವಿಗೊಳಿಸಲು ನಮ್ಮ ಕೆಲಸ ಹಾಗೂ ವಿಚಾರಗಳಲ್ಲಿ ಸಮತೋಲನ ಇರುವುದು ಅತ್ಯಗತ್ಯ. ಪ್ರತಿಯೊಬ್ಬ ಮಹಿಳೆಯಲ್ಲೂ ಸಕಾರಾತ್ಮಕ ವಿಚಾರ, ಪ್ರಾಮಾಣಿಕತೆ, ಪರಿಶ್ರಮ ಹಾಗೂ ಜೀವನವನ್ನು ಬ್ಯಾಲೆನ್ಸ್ ಆಗಿಟ್ಟುಕೊಳ್ಳುವ ಗುಣ ಇರಬೇಕು. ಇವೆಲ್ಲ ಇರುವುದರಿಂದ ಆಕೆ ಸದಾ ಆತ್ಮವಿಶ್ವಾಸದಿಂದಿರುತ್ತಾಳೆ. ಜೊತೆಗೆ ನೈಸರ್ಗಿಕವಾಗಿ, ಸುಂದರವಾಗಿ ಗೋಚರಿಸುತ್ತಾಳೆ.” ಇದು ತಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ ಎಂದು ಗುಂಜನ್‌ ಹೇಳುತ್ತಾರೆ.

ಸ್ಮರಣಾರ್ಹ ಕ್ಷಣ

ತಮ್ಮ ನಡೆನುಡಿಯ ಹಾಗೆ ತಮ್ಮ ಸ್ಮರಣಾರ್ಹ ಕ್ಷಣಗಳ ಬಗೆಗೂ ಅವರು ಪರಿಚಯ ಮಾಡಿಕೊಡುತ್ತ ಹೀಗೆ ಹೇಳುತ್ತಾರೆ, “ಯಾವ ರೀತಿಯಲ್ಲಿ ಸುಖ ನಮ್ಮ ಜೀವನದೊಂದಿಗೆ ನಂಟು ಹೊಂದಿದೆಯೋ, ಅದೇ ರೀತಿ ದುಃಖ ಕೂಡ ನಂಟು ಹೊಂದಿದೆ. ಹೀಗಾಗಿ ನನ್ನ ದೃಷ್ಟಿಯಲ್ಲಿ ಯಾವುದೂ ಕೆಟ್ಟದ್ದು ಅಲ್ಲ, ನನ್ನ ಮಗ ತುಶಾನ್‌ನ ಜನ್ಮ ನನ್ನ ದೃಷ್ಟಿಯಲ್ಲಿ ಸ್ಮರಣಾರ್ಹ ಕ್ಷಣ. ಪ್ರತಿಯೊಬ್ಬ ಮಹಿಳೆಗೂ ಹೊಸ ಜೀವನವೊಂದಕ್ಕೆ ಜನ್ಮ ಕೊಡುವುದು ಸ್ಮರಣಾರ್ಹ ಗಳಿಗೆಯೇ ಹೌದು ಎನ್ನುವುದು ನನ್ನ ಭಾವನೆ.”

ಏನನ್ನಾದರೂ ಮಾಡಿಯೇ ತೀರಬೇಕೆಂದು ಅಪೇಕ್ಷೆಯುಳ್ಳ ಮಹಿಳೆಯರಿಗೆ ಗುಂಜನ್‌ ನೀಡುವ ಸಲಹೆಯೆಂದರೆ, ಪ್ರತಿಯೊಬ್ಬ ಮಹಿಳೆ ತನ್ನ ಮಹತ್ವವನ್ನು ಅರಿತಿರಬೇಕು. ಅದರಲ್ಲೂ ವಿಶೇಷವಾಗಿ ತಮ್ಮ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಮಹತ್ವ ಏನೆಂದು ತಿಳಿಸಿಕೊಡಬೇಕು. ಹೆಣ್ಣು ಮಕ್ಕಳಿಗೆ ಗೌರವಿಸುವುದನ್ನು ಅವರಿಗೆ ಕಲಿಸಿಕೊಡಬೇಕು. ಆಗಲೇ ಅವರು ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ