ಜನರು ಫಿಟ್ ಆಗಿರಲು ಸಪ್ಲಿಮೆಂಟ್‌ಗಳ ಮೊರೆ ಹೋಗುತ್ತಾರೆ. ಆದರೆ ನಿಮಗೆ ತಿಳಿದಿರಲೇಬೇಕಾದ ಒಂದು ಸಂಗತಿಯೆಂದರೆ, ಯಾವುದೇ ಸಪ್ಲಿಮೆಂಟ್ ಸರಿಯಾದ ಡಯೆಟ್ ಅಥವಾ ಟ್ರೇನಿಂಗ್ ಪ್ರೋಗ್ರಾಮ್ ನ ಜಾಗ ಪಡೆದುಕೊಳ್ಳಲಾರದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಒಂದು ಸಪ್ಲಿಮೆಂಟ್ ವ್ಯಾಯಾಮ ರಹಿತ ಪ್ರೊಗ್ರಾಮ್ ನಿಂದ ಕೆಲಸ ಮಾಡಲಾರದು.
ತೂಕ ಕಡಿಮೆ ಮಾಡುವಲ್ಲಿ ಇದರ ಪಾತ್ರ
ಯಾವುದೇ ಡಯೆಟ್‌ಗೆ ಸಂಬಂಧಪಟ್ಟಂತೆ ಸಪ್ಲಿಮೆಂಟ್‌ನ್ನು ಕೊಬ್ಬು ಕರಗಿಸುವಲ್ಲಿ ಸಹಾಯಕ ಎಂದು ಹೇಳಲಾಗುತ್ತದೆ. ಆದರೆ ಇದು ವಾಸ್ತವಕ್ಕೆ ವಿರುದ್ಧವಾಗಿದೆ. ಹಲವು ಸ್ವತಂತ್ರ ಕ್ಲಿನಿಕ್ ಪರೀಕ್ಷೆಗಳಿಂದ ಕಂಡುಬಂದ ಸಂಗತಿಯೆಂದರೆ, ಫ್ಯಾಟ್ ಬರ್ನರ್ ಅಥವಾ ಕೊಬ್ಬು ಕರಗಿಸುವ ಸಪ್ಲಿಮೆಂಟ್‌ಗಳು ಯಾವುದೇ ಫಲಿತಾಂಶ ನೀಡುವುದಿಲ್ಲ.
ಸಪ್ಲಿಮೆಂಟ್ ಉತ್ಪಾದಿಸುವ ಕಂಪನಿಗಳು ತಮ್ಮ ಉತ್ಪಾದನೆಗಳನ್ನು ಮಾರಾಟ ಮಾಡಲು ಒಬ್ಬ ವ್ಯಕ್ತಿ ಸಪ್ಲಿಮೆಂಟ್ ತೆಗೆದುಕೊಳ್ಳುವ ಮುಂಚೆ ಎಷ್ಟು ದಪ್ಪಗಿದ್ದಳು, ಸಪ್ಲಿಮೆಂಟ್ ಸೇವನೆಯ ಬಳಿಕ ಎಷ್ಟು ತೆಳ್ಳಗಾದಳು ಎಂದು ಬಿಂಬಿಸಲು ಚಿತ್ರಗಳನ್ನು ತೋರಿಸುತ್ತವೆ. ಆದರೆ ಅಧ್ಯಯನಗಳಿಂದ ತಿಳಿದುಬಂದ ಸಂಗತಿಯೇನೆಂದರೆ, ಈ ಫ್ಯಾಟ್ ಬರ್ನರ್‌ಗಳು ಯಾವಾಗ ಕೆಲಸ ಮಾಡುತ್ತವೆಯೆಂದರೆ ಒಬ್ಬ ವ್ಯಕ್ತಿ ಡಯೆಟ್ ಮತ್ತು ವ್ಯಾಯಾಮವನ್ನು ತನ್ನ ದೈನಂದಿನ ಜೀವನಶೈಲಿಯಲ್ಲಿ ರೂಢಿಸಿಕೊಂಡಾಗ ಮಾತ್ರ.
ಸಪ್ಲಿಮೆಂಟ್ V/S ಆಹಾರ ಪದಾರ್ಥಗಳು
ಸಪ್ಲಿಮೆಂಟ್‌ಗಳು ಎಂದೂ ಆಹಾರ ಪದಾರ್ಥಗಳಾದ ಹಣ್ಣು, ತರಕಾರಿ ಮತ್ತು ಕಾಳುಗಳಲ್ಲಿರುವ ಪೋಷಕಾಂಶಗಳ ಸಮೃದ್ಧ ಮಟ್ಟ ತಲುಪಲು ಸಾಧ್ಯವಿಲ್ಲ. ಒಂದುವೇಳೆ ನಿಮ್ಮ ಆಹಾರ ಸೇವನೆಯ ಅಭ್ಯಾಸ ಸಮರ್ಪಕವಾಗಿದ್ದರೆ, ಡಯೆಟ್‌ಗೆ ಸಂಬಂಧಪಟ್ಟ ಸಪ್ಲಿಮೆಂಟ್ಸ್ ಸೇವಿಸುವ ಅವಶ್ಯಕತೆಯೇ ಬೀಳದು.
ಸಪ್ಲಿಮೆಂಟ್‌ಗಳಿಗೆ ಹೋಲಿಸಿದಲ್ಲಿ ಪರಿಪೂರ್ಣ ಆಹಾರ ಪದಾರ್ಥಗಳಿಂದ 3 ಲಾಭಗಳಿವೆ.
ಅತಿಹೆಚ್ಚು ಪೋಷಕಾಂಶ : ಪರಿಪೂರ್ಣ ಆಹಾರ ಪದಾರ್ಥಗಳು ಸಾಕಷ್ಟು ಜಟಿಲವಾಗಿರುತ್ತವೆ. ಅದು ದೇಹಕ್ಕೆ ಹಲವು ಬಗೆಯ ಪೋಷಕಾಂಶಗಳನ್ನು ಒದಗಿಸುತ್ತವೆ. ಉದಾಹರಣೆಗೆ ಕಿತ್ತಳೆ ಹಣ್ಣನ್ನೇ ತೆಗೆದುಕೊಂಡರೆ, ಅದು ನಮ್ಮ ದೇಹಕ್ಕೆ ವಿಟಮಿನ್ `ಸಿ’ಯನ್ನು ನೀಡುತ್ತದೆ. ಇದರ ಜೊತೆ ಜೊತೆಗೆ ದೇಹಕ್ಕೆ ಬೀಟಾ ಕೆರೊಟಿನ್, ಕ್ಯಾಲ್ಸಿಯಂ ಹಾಗೂ ಬೇರೆ ಪೋಷಕಾಂಶಗಳನ್ನೂ ಒದಗಿಸುತ್ತದೆ. ನೀವು ವಿಟಮಿನ್‌ಯುಕ್ತ ಸಪ್ಲಿಮೆಂಟ್‌ಗಳನ್ನು ಸೇವಿಸಿದರೆ ಬೇರೆ ಪೋಷಕಾಂಶಗಳು ಕೂಡ ದೊರೆಯುತ್ತವೆ.
ಅಗತ್ಯ ಫೈಬರ್ : ಪರಿಪೂರ್ಣ ಆಹಾರ ಪದಾರ್ಥಗಳಾದ ಹಣ್ಣು, ತರಕಾರಿಗಳು, ಕಾಳುಗಳು ಮತ್ತು ಬೀಜಗಳು ಸಾಕಷ್ಟು ನಾರಿನಂಶ ಪೂರೈಸುತ್ತವೆ. ಅತ್ಯುತ್ತಮ ಗುಣಮಟ್ಟದ ನಾರಿನಂಶವುಳ್ಳ ಆಹಾರದಲ್ಲಿ ಬೇರೆ ಪೋಷಕಾಂಶಗಳು ಕೂಡ ಇರುತ್ತವೆ. ಆರೋಗ್ಯಕರ ಡಯೆಟ್‌ನಲ್ಲಿ ಫೈಬರ್ ಇರುವುದರಿಂದ ಅವು ಡಯಾಬಿಟಿಸ್ ಟೈಪ್ ಮತ್ತು ಹೃದಯ ಸಂಬಂಧಿ ರೋಗಗಳನ್ನು ಪಡೆಯಲು ನೆರವು ನೀಡುತ್ತವೆ. ಅಷ್ಟೇ ಅಲ್ಲ, ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯಕವಾಗಿವೆ.
ಸುರಕ್ಷಿತ ಪದಾರ್ಥ : ಪರಿಪೂರ್ಣ ಆಹಾರದಲ್ಲಿ ಕೆಲವು ಪದಾರ್ಥಗಳಿಂದ ದೇಹಕ್ಕೆ ಹಲವು ಬಗೆಯ ರೋಗಗಳಿಂದ ರಕ್ಷಣೆ ದೊರೆಯುತ್ತದೆ. ಉದಾಹರಣೆಗಾಗಿ ಹೇಳಬೇಕೆಂದರೆ, ಹಣ್ಣು ಹಾಗೂ ತರಕಾರಿಗಳಲ್ಲಿ ನೈಸರ್ಗಿಕವಾಗಿ ಫೈಟೊ ಕೆಮಿಕಲ್ಸ್ ಇರುತ್ತವೆ. ಅವು ಕ್ಯಾನ್ಸರ್, ಮಧುಮೇಹ, ಅತಿರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವಲ್ಲಿ ನೆರವಾಗುತ್ತವೆ. ಇದರ ಜೊತೆಗೆ ಹಲವು ಪದಾರ್ಥಗಳು ಆ್ಯಂಟಿ ಆಕ್ಸಿಡೆಂಟ್‌ನಿಂದ ತುಂಬಿರುತ್ತವೆ. ಅ ನೈಸರ್ಗಿಕವಾಗಿ ಟಿಶ್ಯೂ ಮತ್ತು ಜೀವಕೋಶಗಳಿಗೆ ಹಾನಿಯನ್ನುಂಟು ಮಾಡುವ ಆಕ್ಸಿಡೇಶನ್ ಪ್ರಕ್ರಿಯೆಯನ್ನು ಮಂದಗೊಳಿಸುತ್ತವೆ.
ಯಾರಿಗೆ ಸಪ್ಲಿಮೆಂಟ್ಗಳು ಅವಶ್ಯಕ?
ನೀವು ಆರೋಗ್ಯದಿಂದಿದ್ದು, ನಿಮ್ಮ ಡಯೆಟ್‌ನಲ್ಲಿ ವಿವಿಧ ಬಗೆಯ ಹಣ್ಣು, ತರಕಾರಿ, ಧಾನ್ಯಗಳು, ಕಾಯಿಗಳು ಹಾಗೂ ಕಡಿಮೆ ಕೊಬ್ಬುಯುಕ್ತ ಹಾಲು ಹಾಗೂ ಅದರಿಂದ ತಯಾರಿಸಲಾದ ಉತ್ಪನ್ನಗಳು ಕೊಬ್ಬುರಹಿತ ಮಾಂಸ ಮತ್ತು ಮೀನು ಮುಂತಾದವನ್ನು ಸೇರ್ಪಡೆಗೊಳಿಸಿದ್ದರೆ ನಿಮಗೆ ಯಾವುದೇ ಸಪ್ಲಿಮೆಂಟ್‌ನ ಅವಶ್ಯಕತೆಯಿಲ್ಲ.
ಸಪ್ಲಿಮೆಂಟ್ ಅಥಾ ಪೋರ್ಟಿಫೈಡ್ ಆಹಾರವನ್ನು ಈ ಸ್ಥಿತಿಯಲ್ಲಿ ಸೇವಿಸಲು ಸಲಹೆ ನೀಡಲಾಗುತ್ತದೆ.
ಗರ್ಭಿಣಿಯರಿಗೆ ನೈಸರ್ಗಿಕ ಆಹಾರದಿಂದ ದೊರೆಯುವ ಪೆಲೆಟ್‌ನ ಹೊರತಾಗಿ ಪೋರ್ಟಿಫೈಡ್ ಆಹಾರ ಅಥವಾ ಸಪ್ಲಿಮೆಂಟ್‌ನಿಂದ ಪ್ರತಿದಿನ 400 ಮಿಲಿಗ್ರಾಂ ಪೇಲಿಕ್ ಆ್ಯಸಿಡ್ ತೆಗೆದುಕೊಳ್ಳಬೇಕು.
ಗರ್ಭಿಣಿಯರು ಹೆರಿಗೆಗೆ ಮೊದಲು ಸೇವಿಸುವ ವಿಟಮಿನ್‌ಗಳಲ್ಲಿ ಐರನ್ ಇರಬೇಕು. ಇಲ್ಲವೇ ಪ್ರತ್ಯೇಕವಾಗಿ ಐರನ್ ಸಪ್ಲಿಮೆಂಟ್ ಸೇವಿಸಬೇಕು.
50 ಅಥವಾ ಅದಕ್ಕೂ ಹೆಚ್ಚು ವಯಸ್ಸಿನ ಮಹಿಳೆಯರು ವಿಟಮಿನ್ ಬಿ12 ಯುಕ್ತ ಪೋರ್ಟಿಫೈಡ್ ಆಹಾರ ಅಂದರೆ ಪೋರ್ಟಿಫೈಡ್ ಧಾನ್ಯ ಅಥವಾ ಮಲ್ಟಿ ವಿಟಮಿನ್ಸ್ ಅದರಲ್ಲಿ ಬಿ12 ಇರಬೇಕು. ಪ್ರತ್ಯೇಕವಾಗಿ ಬಿ12 ಸಪ್ಲಿಮೆಂಟ್‌ಗಳನ್ನು ಸೇವಿಸಬೇಕು.
ಸಪ್ಲಿಮೆಂಟ್ಗಳನ್ನು ಸೇವಿಸುವುದಿದ್ದರೆ
ಒಂದಕ್ಕಿಂತ ಹೆಚ್ಚು ಹರ್ಬಲ್ ಪದಾರ್ಥಗಳಿಂದ ಕೂಡಿದ ಸಪ್ಲಿಮೆಂಟ್‌ಗಳನ್ನು ಬಳಸಬೇಡಿ. ಏಕೆಂದರೆ ಇದರಿಂದ ಯಾವ ಪದಾರ್ಥ ನಿಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ತಿಳಿಯುವುದು ಕಷ್ಟವಾಗುತ್ತದೆ.
ಒಂದುವೇಳೆ ನೀವು ವೈದ್ಯರ ಪರಾಮರ್ಶೆಯಿಂದ ಯಾವುದಾದರೂ ಔಷಧಿ ಸೇವಿಸುತ್ತಿದ್ದರೆ ಅಥವಾ ಯಾವುದಾದರೂ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದರೆ ಅವುಗಳಿಂದ ಯಾವುದಾದರೂ ಹಾನಿ ಆಗಬಹುದಾ ಎಂದು ವೈದ್ಯರನ್ನು ಕೇಳಿ ತಿಳಿದುಕೊಳ್ಳಿ.
ಸಪ್ಲಿಮೆಂಟ್‌ನ್ನು ಇಂಟರ್‌ನೆಟ್‌ನಲ್ಲಿ ಖರೀದಿಸದೆ ರೀಟೇಲ್ ಅಂಗಡಿಗಗಳಲ್ಲೇ ಖರೀದಿಸಿ.
ಒಂದು ವೇಳೆ ಯಾವುದಾದರೂ ಸಪ್ಲಿಮೆಂಟ್‌ನಿಂದ ಅಡ್ಡ ಪರಿಣಾಮಗಳು ಉಂಟಾದರೆ ತಕ್ಷಣವೇ ಅದರ ಬಳಕೆಯನ್ನು ನಿಲ್ಲಿಸಿ ಹಾಗೂ ವೈದ್ಯರ ಸಲಹೆ ಪಡೆಯಿರಿ.
– ಪಿ. ನಾಗರತ್ನಾ