ಕಮಲಿ ಹೊಸದಾಗಿ ಕಂಪ್ಯೂಟರ್‌ ಕೋರ್ಸಿಗೆ ಸೇರಿದ್ದಳು. ಸಂಜೆ ಯಾವನೋ ಬೀದಿ ಕಾಮಣ್ಣ ಅವಳನ್ನೇ ಹಿಂಬಾಲಿಸುತ್ತಾ ಬಂದು ಚುಡಾಯಿಸಿದ. ಅವನತ್ತ ತಿರುಗಿದ ಕಮಲಿ ಕನಲಿ ಕೆಂಡಾಮಂಡಲವಾಗಿ, “ಏಯ್‌… ಪೆನ್‌ ಡ್ರೈವ್ ‌ಮುಚ್ಚಳದಂತೆ ಇದ್ದೀಯ, ಲೈನ್‌ ಹೊಡಿತೀಯಾ? ಹುಟ್ಟಿನಿಂದಲೇ ಎರರ್‌ ನೀನು, ಮೈ ತುಂಬಾ ವೈರಸ್‌ ತುಂಬಿಕೊಂಡು ಎಕ್ಸೆಲ್ ‌ಕರಪ್ಟ್ ಫೈಲ್‌ಗಿಂತ ಹೀನಾಯವಾಗಿದ್ದೀಯ…. ಒಂದೇ ಕ್ಲಿಕ್‌ನಲ್ಲಿ ಒದ್ದರೆ ನೀನು ನೆಲದಿಂದ ಡೆಲಿಟ್‌ ಆಗಿ ಸಮಾಧಿಯಲ್ಲಿ ಹೋಗಿ ಡೌನ್‌ಲೋಡ್ ಆಗಿರ್ತೀಯ. ನಿನ್ನ ಆತ್ಮ ಪರಲೋಕಕ್ಕೆ ಅಪ್‌ಲೋಡ್‌ ಆಗುವ ಮೊದಲು ಇಲ್ಲಿಂದ ಕಳಚಿಕೋ!”

ಕಮಲಿಯನ್ನು ನೋಡಿ ಭಯವಾಗದಿದ್ದರೂ ಅವಳ ಭಾಷಾ ವೈಖರಿಗೆ ತತ್ತರಿಸಿದ ಅವನು ಮತ್ತೆಂದೂ ಕಾಣಿಸಲೇ ಇಲ್ಲ.

 

ಒಬ್ಬ ರೋಡ್‌ ರೋಮಿಯೋ ಅದೇ ಕಮಲಿಯನ್ನು ಕಂಡು ಕಿಸ್ಕಕನೇ ನಗುತ್ತಾ, “ಕಮ್ಲಿ, ಐ ಲವ್ ಯೂ… ಕರಿ ಮೋಡದ ಆಣೆ….” ಎಂದು ಹಾಡತೊಡಗಿದ.

ಕಂಪ್ಯೂಟರ್‌ ಭಾಷೆ ಸಾಕೆನಿಸಿ ಕಮಲಿ ಹೊಸ ವರಸೆಯಲ್ಲಿ ಬಗ್ಗಿ ತನ್ನ ಚಪ್ಪಲಿ ತೋರಿಸುತ್ತಾ, “ನನ್ನ ಸ್ಯಾಂಡಲ್ ಸೈಜ್‌ ಗೊತ್ತಿದೆ ತಾನೇ….” ಎಂದಳು.

ಅವನು ಸ್ವಲ್ಪವೂ ಬೇಸರಿಸದೆ, “ಇದೇನು ಈಗಿನ ಕಾಲದ ಹುಡ್ಗೀರಪ್ಪಾ…. ಲವ್ ಆಯ್ತೋ ಇಲ್ಲವೋ, ಆಗಲೇ ಗಿಫ್ಟ್ ಕೇಳಲು ಶುರು ಮಾಡಿಬಿಡ್ತೀರೀ!” ಎನ್ನುವುದೇ?

 

ಕಿರಣ್‌ ಬಹಳ ಹೊತ್ತಿನಿಂದ ಫೇಸ್‌ಬುಕ್‌ನಲ್ಲಿ ಮುಳುಗಿಹೋಗಿದ್ದ. ಅಮ್ಮ ಹಲವಾರು ಸಲ ಅವನನ್ನು ಊಟಕ್ಕೆ ಕರೆದಿದ್ದರು, “ಕಿರಣ್‌, ಬೇಗ ಬಂದು ಊಟ ಮಾಡು….” ಆದರೆ ಅವನು ಕಿವಿಗೊಟ್ಟಿದ್ದರೆ ತಾನೇ?

ನಂತರ ಅವನ ತಂದೆ ಮೊಬೈಲ್ ತೆಗೆದುಕೊಂಡು ಆನ್‌ ಲೈನ್‌ ಚ್ಯಾಟ್‌ ಮಾಡಿದರು, “ಊಟ ಆರಿ ಅಕ್ಷತೆ ಆಗಿದೆ. ಕೆಳಗಿಳಿದು ಬರ್ತೀಯಾ ಅಥವಾ ಮೇಲಕ್ಕೆ ಕಳಿಸಬೇಕಾ?”

ಕಿರಣ್‌ ತಕ್ಷಣ ಚ್ಯಾಟಿಂಗ್‌ನಲ್ಲೇ ಉತ್ತರಿಸಿದ, “ಇಲ್ಲಿಗೇ ಕಳಿಸಿ…. ಇನ್ನೂ ಹಲವಾರು ಫ್ರೆಂಡ್ಸ್ ಜೊತೆ ಆನ್‌ ಲೈನ್‌ ಚ್ಯಾಟಿಂಗ್ ನಡೀತಿದೆ.”

 

ಹಿಂದೆ ತನ್ನನ್ನು ಓಟದ ಸ್ಪರ್ಧೆಯಲ್ಲಿ ಸೋಲಿಸಿದ್ದ ಆಮೆಯ ಮೇಲೆ ಕೋಪ ಉಕ್ಕಿ ಬಂದು ಮೊಲರಾಯ ಒಂದು ಬಾಂಬ್‌ ಹಿಡಿದು ಮೃಗಾಲಯಕ್ಕೆ ನುಗ್ಗಿದ.

“ಎಲ್ಲರೂ ಸರಿಯಾಗಿ ಕೇಳಿಸಿಕೊಳ್ಳಿ! ಇನ್ನು ಒಂದೇ ಒಂದು ನಿಮಿಷ ಟೈಂ ಕೊಡ್ತೀನಿ, ಅಷ್ಟರಲ್ಲಿ ಎಲ್ಲರೂ ತಪ್ಪಿಸಿಕೊಳ್ಳಿ. ಇಲ್ಲದಿದ್ದರೆ ಈ ಬಾಂಬ್‌ ಸಿಡಿಸಿಬಿಡ್ತೀನಿ!”

“ಏಯ್‌ ಸ್ಟುಪಿಡ್‌, ನಾನೇ ನಿನ್ನ ಟಾರ್ಗೆಟ್‌ ಅಂತ ಗೊತ್ತು, ಎಲ್ಲರಿಗೂ ಯಾಕೆ ಟೆನ್ಶನ್‌ ಕೊಡ್ತೀಯ?” ಆಮೆ ಗುಡುಗಿದ.

 

ರಾಜು ತನ್ನ ಗರ್ಲ್ ಫ್ರೆಂಡ್‌ ಕಾಂತಿಯ ಜೊತೆ ವೇಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮೆಜೆಸ್ಟಿಕ್‌ನಲ್ಲಿ ಘೋರವಾದ ಅಪಘಾತವಾಯಿತು. ತಕ್ಷಣ ಅವನು ಆ್ಯಂಬುಲೆನ್ಸ್ ಗೆ ಫೋನ್‌ ಮಾಡಿದ. “ನನ್ನ ಗರ್ಲ್ ಫ್ರೆಂಡ್‌ ಕಾಂತಿಗೆ ಆ್ಯಕ್ಸಿಡೆಂಟ್‌ ಆಗಿದೆ. ಅವಳಿಗೆ ಪ್ರಜ್ಞೆ ಇಲ್ಲ. ನಾವೀಗ ಮೆಜಿಸ್ಟಿಕ್‌ನ ಉಪ್ಪಾರಪೇಟೆ ಪೊಲೀಸ್‌ ಸ್ಟೇಷನ್‌ ಬಳಿ ಇದ್ದೇವೆ. ಪ್ಲೀಸ್‌ ಬೇಗ ಇಲ್ಲಿಗೆ ಬನ್ನಿ.”

ಆ್ಯಂಬುಲೆನ್ಸ್ ಗೆ ಸಂಬಂಧಿಸಿದ ಸಿಬ್ಬಂದಿ ಕೇಳಿದರು, “ಪ್ಲೀಸ್‌, ಮೆಜೆಸ್ಟಿಕ್‌ನ ಸ್ಪೆಲ್ಲಿಂಗ್‌ ಹೇಳಿ. ಇಲ್ಲಿ ಸಿಸ್ಟಮ್ ಗೆ ಫೀಡ್ ಮಾಡಬೇಕು.”

ಎಷ್ಟೋ ಹೊತ್ತಿನ ನಂತರ ಅದೇ ಸಿಬ್ಬಂದಿ ಮತ್ತೆ ಕೇಳಿದರು, “ಏನ್ರಿ, ನನ್ನ ಧ್ವನಿ ಕೇಳಿಸ್ತಿದ್ಯಾ?”

ರಾಜು ತಕ್ಷಣ ಹೇಳಿದ, “ಹೂಂ ಸಾರ್‌. ನನಗೆ ಮೆಜೆಸ್ಟಿಕ್‌ ಸ್ಪೆಲಿಂಗ್‌ ಗೊತ್ತಿಲ್ಲ. ಅದಕ್ಕೆ ಕಾಂತಿಯನ್ನು ಹೇಗೋ ಎಳೆದುಕೊಂಡು ನನ್ನ ಬೈಕ್‌ನಲ್ಲಿ ಎಂ.ಜಿ. ರೋಡ್‌ಗೆ ಬಂದಿದ್ದೀನಿ. ನೀವೀಗ ಅದರ ಸ್ಪೆಲ್ಲಿಂಗ್‌ ಬರೆದುಕೊಂಡು ತಕ್ಷಣ ಇಲ್ಲಿಗೇ ಬನ್ನಿ.”

 

ಪಿ.ಯು.ಸಿ. ಕಲಿಯುತ್ತಿದ್ದ ಗುಂಡ ಫೇಸ್‌ಬುಕ್‌ನಲ್ಲಿ ಸ್ಟೇಟಸ್‌ ಅಪ್‌ಡೇಟ್‌ ಮಾಡಿದ, `ಇಲ್ಲೀಗ ಬೋರಿಂಗ್‌ ಫಿಸಿಕ್ಸ್ ಕ್ಲಾಸ್‌ನಡೆಯುತ್ತಿದೆ. ನಾನೀಗ ಆನ್‌ ಲೈನ್‌ನಲ್ಲಿದ್ದೀನಿ….’

ಫಿಸಿಕ್ಸ್ ಲೆಕ್ಟರರ್‌ ತಕ್ಷಣ ಕಮೆಂಟ್‌ ಮಾಡಿದರು, `ಯಾಕಪ್ಪ ಗುಂಡ ಕ್ಲಾಸ್‌ ಟೆಸ್ಟ್ ನಲ್ಲಿ ಸೊನ್ನೆ ಬಂದಿದೆ? ಇಲ್ಲಿ ಬಂದು ಪೇಪರ್‌ ತಗೋತೀಯಾ ಅಥವಾ ಅದನ್ನೂ ಟ್ಯಾಗ್‌ ಮಾಡಲೋ?’

 

ಟೀಚರ್‌ಗುಂಡನನ್ನು ಯದ್ವಾತದ್ವಾ ರೇಗಾಡುತ್ತಿದ್ದರು, “ಲೋ ಗಂಡ… ನಿನಗೆ ಅತ್ತ ಕನ್ನಡ ಬರೋಲ್ಲ, ಇತ್ತ ಇಂಗ್ಲೀಷೂ ಬರೋಲ್ಲ. ಗಣಿತದಲ್ಲಿ ಸೊನ್ನೆ, ವಿಜ್ಞಾನದಲ್ಲಿ 2. ಹಾಗಿದ್ದರೆ ನಿನಗೆ ಏನು ತಾನೇ ಬರುತ್ತೆ?”

ಅವನ ಪಕ್ಕ ಕುಳಿತಿದ್ದ ಕಿಟ್ಟಿ ತಕ್ಷಣ ಹೇಳಿದ, “ಟೀಚರ್‌, ಇವನಿಗೆ ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಕೈಕಾಲು ನಡುಕ ಬಂದು, ಮೈಯೆಲ್ಲ ಬೆವರುತ್ತೆ!”

 

ಒಂದು ಕೋಳಿ ತನ್ನ ಮೊಟ್ಟೆಯ ಫೋಟೋವನ್ನು ಫೇಸ್‌ ಬುಕ್‌ ವಾಲ್ ‌ಮೇಲೆ ಪೋಸ್ಟ್ ಮಾಡಿತು. ಅದರ ಫ್ರೆಂಡ್ ಅದನ್ನು ನೋಡಿ ಲೈಕ್‌ ನೀಡಿದ, ಜೊತೆಗೊಂದು ಕಮೆಂಟ್‌ ಹೀಗಿತ್ತು : `ಏ ಕರ್ಗಿ, ಬಾಲ್ಯದಲ್ಲಿ ನೀನು ಅದೆಷ್ಟು ಬೆಳ್ಳಗೆ ದುಂಡು ದುಂಡಾಗಿದ್ದಿ…. ವೆರಿ ಕ್ಯೂಟ್‌!’

 

ಟೀಚರ್‌ : ಕ್ರಿಮಿನಲ್ ಎಂದು ಯಾವುದಕ್ಕೆ ಹೇಳುತ್ತಾರೆ?

ಗುಂಡ : `ನ್‌’ (ನಾಲಾಯಕ್‌) ಆಗಿದ್ದರೂ ಯಾವ ಕ್ರಿಮಿ ಎಲ್ಲರನ್ನೂ ಕೊಲ್ಲಬಲ್ಲದೋ ಅಂಥದೇ ಕ್ರಿಮಿನಲ್!

 

ಪಿಕ್‌ ಪಾಕೆಟ್‌ ಮಾಡಿ ಸಿಕ್ಕಿಬಿದ್ದ ಕಳ್ಳನನ್ನು ಲಾಕಪ್‌ ನಲ್ಲಿ ಹಿಗ್ಗಾಮುಗ್ಗಾ ಥಳಿಸಲಾಯಿತು. ಆದರೂ ಅವನು ನಸುನಗುತ್ತಾ ಸಮಾಧಾನವಾಗಿದ್ದ.

ಆಗ ಪೇದೆ ಅವನನ್ನು ಸಿಡುಕುತ್ತಾ ರೇಗಿದ, “ಇಷ್ಟು ಒದೆ ಬಿದ್ರೂ ನಗ್ತಾ ಇದ್ದೀಯಲ್ಲ…. ಅದು ಹೇಗೆ?”

ಅದಕ್ಕೆ ಕಳ್ಳ, “ಎಷ್ಟೇ ಕಷ್ಟ ಬಂದರೂ ನಸುನಗುತ್ತಾ ಇರಬೇಕು ಅಂತ ಹಿರಿಯರು ಹೇಳಿದ್ದಾರೆ,”  ಎನ್ನುವುದೇ?

 

ಒಬ್ಬ ಉತ್ಸಾಹಿ ಮರಿ ರಿಪೋರ್ಟರ್‌ ಟಿ.ವಿ. ಕ್ಯಾಮೆರಾ ಸಮೇತ ಅಪಘಾತ ನಡೆದಿದ್ದ ಜಾಗಕ್ಕೆ ಧಾವಿಸಿ ಕೇಳಿದಳು, “ ಬಾಂಬ್‌ಕೆಳಗೆ ಬೀಳುತ್ತಲೇ ಜೋರಾಗಿ ಸಿಡಿಯಿತೇ ಅಥವಾ”

ಮೈಯೆಲ್ಲಾ ಗಾಯವಾಗಿದ್ದ ವ್ಯಕ್ತಿ ನರಳುತ್ತಾ ಹೇಳಿದ, “ಇಲ್ಲ ರೀ ಮೇಡಂ… ಅದು ನಿಧಾನವಾಗಿ ಉರುಳುತ್ತಾ ಬಂದು ಪಟಾಕಿ ತರಹ ಠುಸ್‌ ಆಯಿತು.”

 

ಅಜಯ್‌ : ನಿನಗೊಂದು ಪ್ರಶ್ನೆ, ನದಿಯ ಮಧ್ಯದಲ್ಲಿ ಒಂದು ನಿಂಬೆಮರ ಇದೆ ಅಂದುಕೊ. ಆಗ ಆ ನಿಂಬೆ ಹಣ್ಣುಗಳನ್ನು ಹೇಗೆ ಕೀಳ್ತೀಯಾ?

ವಿಜಯ್‌ : ಹೂಂ….. ಹಕ್ಕಿಯಾಗಿ ಹಾರಿ ಹೋಗಿ ಕೀಳ್ತೀನಿ.

ಅಜಯ್‌ : ಆದರೆ… ನಿನ್ನನ್ನು ಹಕ್ಕಿಯಾಗಿ ಯಾರು ಮಾಡ್ತಾರೆ?

ವಿಜಯ್‌ : ಯಾವ ಮಹಾಶಯರು ನದಿ ಮಧ್ಯೆ ಮರ ನೆಟ್ಟಿದ್ದರೋ ಅವರೇ!

 

ಕಿಟ್ಟಿ ಗರ್ಲ್ ಫ್ರೆಂಡ್‌ ಜೊತೆ ಪಾರ್ಕಿನಲ್ಲಿ ಸುತ್ತಾಡುವಷ್ಟರಲ್ಲಿ ಕತ್ತಲಾಯಿತು. ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾ ಅವನು ಹೇಳಿದ, “ಆಹಾ…. ಈ ತಂಪಾದ ಪರಿಸರ, ಈ ಗಾಳಿ, ಈ ಹುಣ್ಣಿಮೆ, ಈ ವಾತಾವರಣ….”

ಅವಳಿಗೆ ಬೋರ್‌ ಆಯ್ತು. ಆಕಳಿಸುತ್ತಾ, “ಛೇ ಛೇ….. ಲವ್ ಬಗ್ಗೆ 4 ಮಾತು ಆಡಲು ಬರದಿದ್ರೆ ಬೇಡ, ಹೀಗೆ ಎನ್‌ವಾರ್ಯ್‌ಮೆಂಟ್‌ ಸೈನ್ಸ್ ಬಗ್ಗೆ ಕೊರೆಯಬೇಡ,” ಎನ್ನುವುದೇ?

 

ಪ್ರಕಾಶ್‌ ಬೇಕೆಂದೇ ತನ್ನ ಗೆಳೆಯ ಸತೀಶನನ್ನು ಗರ್ಲ್ ಫ್ರೆಂಡ್‌ ಮುಂದೆ ಮಟ್ಟ ಹಾಕಲೆಂದು ಉಡಾಫೆಯಿಂದ, “ನನ್ನ ಹತ್ತಿರ ಆಡಿ ಕಾರ್‌ ಇದೆ, ಪಲ್ಸರ್‌ ಬೈಕ್‌ ಇದೆ. ನಿನ್ನ ಬಳಿ ಏನಿದೆ?” ಎಂದು ವ್ಯಂಗ್ಯವಾಡಿದ.

ಆಗ ಸತೀಶ್‌ ತಕ್ಷಣ ಹೇಳಿದ, “ನಿನ್ನ ಗಾಡಿಗಳನ್ನು ಪಾರ್ಕಿಂಗ್‌ ಮಾಡಲು ಸೈಟ್‌ ಇದೆ.”

 

ಶಾಲೆಯ ಹಿಂದೆ ಇದ್ದ ನದಿಯಲ್ಲಿ ಇದ್ದಕ್ಕಿದ್ದಂತೆ ಜೋರಾಗಿ ಪ್ರವಾಹ ಉಕ್ಕಿಬಂದಿತು. ಆಗ ಪ್ರಿನ್ಸಿಪಾಲರು ಅದರಲ್ಲಿ ದಾಟಲು ಹೋಗಿ ಮುಳುಗುತ್ತಿರುವುದನ್ನು ಕಂಡ ಗುಂಡ ಕಿರುಚಿದ, “ನಾಳೆ ಶಾಲೆಗೆ ರಜಾ….ರಜಾ!”

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ