ದೆಹಲಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಮುಂಬೈನಲ್ಲಿ ಬೆಳೆದು ಕಲಿತ ತಿಶಾ, ಬಲು ಜೋವಿಯೆಲ್ ಮೂಡ್‌ನ, ಶಾಂತ ಸ್ವಭಾವದ ವ್ಯಕ್ತಿ. ತಮ್ಮ ಸತತ ಬಿಡುವಿಲ್ಲದ ಕೆಲಸದ ಮಧ್ಯೆ ತುಸು ಪುರಸತ್ತು ದೊರೆತಾಗ, ಆಕೆ ಕುಶಲ ಗೃಹಿಣಿಯಾಗಿ ತಮ್ಮ ಕರ್ತವ್ಯ ನಿಭಾಯಿಸುತ್ತಾರೆ. ತಾಯಿಯಿಂದ ಕಲಿತ ಸಾಂಪ್ರದಾಯಿಕ ಪಾರ್ಸಿ ರೆಸಿಪೀಸ್ ತಯಾರಿಸುವುದರ ಜೊತೆ, ತಿಶಾರಿಗೆ ಬೇಕಿಂಗ್‌ನ ಖಯಾಲಿಯೂ ಇದೆ. ತಿಶಾ ಎಷ್ಟೋ ಸಲ ತಮ್ಮ ಜೀವನದ ಅತಿ ಕಷ್ಟಕರ ಕ್ಷಣಗಳನ್ನು ಎದುರಿಸಿದ್ದಾರೆ. ತಮ್ಮ ತಂದೆ ತೀರಿಕೊಂಡ ನಂತರ, ಸಂಪೂರ್ಣ ಮನೋಸ್ಥೈರ್ಯ ಕಳೆದುಕೊಂಡಿದ್ದ ತಿಶಾ, ತಮ್ಮನ್ನು ತಾವು ಸಂಭಾಳಿಸಿಕೊಂಡಿದ್ದಲ್ಲದೆ ತಮ್ಮ ಮನೆತನದ ಬಿಸ್‌ನೆಸ್‌ನಲ್ಲೂ ಒಳ್ಳೆಯ ಹೆಸರು ಪಡೆದರು.
ತಮ್ಮ ಕುಟುಂಬದ ಕುರಿತಾಗಿ ಹೇಳುತ್ತಾ ತಿಶಾ, “ನನ್ನ ತರೂರು ದೆಹಲಿ. ಇಲ್ಲಿನ ಮಾಡರ್ನ್ ಸ್ಕೂಲ್‌ನಿಂದ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಆರಂಭಿಸಿದೆ. ಕೆಲವು ವರ್ಷಗಳ ನಂತರ ನಾವು ಮುಂಬೈಗೆ ಶಿಫ್ಟ್ ಆದೆ. ಅಲ್ಲಿ ನಾನು ಬಾಂಬೆ ಸ್ಕಾಟಿಶ್ ಹೈಸ್ಕೂಲಿಗೆ ಸೇರಿದೆ. ನಂತರ ಎಚ್.ಆರ್. ಕಾಲೇಜಿನಿಂದ ಪದವಿ ಪಡೆದೆ. ನಂತರ ಅಡ್ವರ್ಟೈಸಿಂಗ್, ಸೇಲ್ಸ್ ಪ್ರಮೋಶನ್, ಸೇಲ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಅಡ್ವಾನ್ಸ್ ಡಿಪ್ಲೋಮಾ ಪಡೆದೆ. ಮುಂದೆ ನಾನು ಎಕನಾಮಿಕ್ಸ್ ನಲ್ಲಿ ಪಿ.ಜಿ. ಮಾಡಿದೆ.”
ಆಕೆ ಮುಂದೆ ಹೇಳುತ್ತಾರೆ, “ನಮ್ಮ ಕುಟುಂಬದಲ್ಲಿ ನನ್ನ ಅಕ್ಕ, ತಾಯಿ ಇದ್ದಾರೆ. 7 ವರ್ಷಗಳ ಹಿಂದೆಯೇ ನನ್ನ ತಂದೆ ತೀರಿಕೊಂಡರು. ನಾನು ಅರ್ಜುನ್ ಖುರಾನಾರನ್ನು ಮದುವೆಯಾದೆ, ನನ್ನ ಅತ್ತೆಮನೆ ಈಗ ದೆಹಲಿಯಲ್ಲಿದೆ. ಇದೀಗ ನಾನು ನನ್ನನ್ನು ಈ ಬಿಸ್‌ನೆಸ್‌ನಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದೇನೆ.”
ಕೆರಿಯರ್‌ನ ಆರಂಭ
ತಿಶಾ ಬಿಸ್‌ನೆಸ್ ಕುಟುಂಬದಲ್ಲಿ ಹುಟ್ಟಿದ್ದರೂ, ಮೊದಲಿನಿಂದಲೂ ಆಕೆಗೆ ದೊಡ್ಡ ಉದ್ಯಮಿ ಆಗಬೇಕೆಂಬ ದೊಡ್ಡ ಗುರಿಯೇನೂ ಇರಲಿಲ್ಲ.
“ನಾನು ಪಕ್ಕಾ ಉದ್ಯಮಿ ಕುಟುಂಬದಲ್ಲಿ ಹುಟ್ಟಿದ್ದರೂ, ನನಗೆ ಬಿಸ್‌ನೆಸ್‌ನಲ್ಲಿ ಅಂಥ ಆಳವಾದ ಅಭಿರುಚಿ ಏನೂ ಇರಲಿಲ್ಲ. ಬಾಲ್ಯದಿಂದ ನಾನು ಡಾಕ್ಟರ್ ಆಗಬೇಕೆಂದು ಬಯಸಿದ್ದೆ, ಆದರೆ ರಸ್ತೆ ಅಪಘಾತಗಳಲ್ಲಿನ ರಕ್ತ ಕಂಡು ಹೆದರುತ್ತಿದ್ದೆ. ಕಲಿಕೆಯ ನಂತರ ಟೈಮ್ಸ್ ಆಫ್ ಇಂಡಿಯಾದ ಇಂಟರ್ ನ್ಯಾಷನಲ್ ಮೀಡಿಯಾ ಮಾರ್ಕೆಟಿಂಗ್ ಟೀಮ್ ನಲ್ಲಿ ಕೆಲಸ ಮಾಡಲು ಶುರುಮಾಡಿದೆ. ಈ ಮೂಲಕ ನನಗೆ ಸಾಕಷ್ಟು ಪ್ರವಾಸ ಮಾಡಬೇಕಾಯ್ತು. ಇದಾದ ನಂತರ ನಾನು ಈಜಿಪ್ಶಿಯನ್ ಟೂರಿಸಂ ಬೋರ್ಡ್ ಸೇರಿದೆ. ಆ ಮೂಲಕ ನಾನು ನಮ್ಮಕ್ಕನ ಜೊತೆಗೂಡಿ ಬಿಜ್ಜರೆ ಬಾಜಾರ್ ಎಂಬ ಕಂಪನಿ ಶುರುಮಾಡಿದೆ. ಅದು ಸಾಕಷ್ಟು ಯಶಸ್ವಿಯಾಯ್ತು.”
ಟರ್ನಿಂಗ್ ಪಾಯಿಂಟ್
ಕೆಲವೊಂದು ಸಲ ಜೀವನದ ಕೆಲವು ತಿರುವುಗಳು ನಮ್ಮ ಇಡೀ ಜೀವನಶೈಲಿಯನ್ನೇ ಬದಲಿಸಬಲ್ಲಂಥ. ತಿಶಾರ ಜೊತೆಯೂ ಹೀಗೇ ಆಯಿತು. ಆ ಕುರಿತಾಗಿ ಆಕೆ, “ನಾನು ಆರಂಭದಿಂದಲೇ ಏನಾದರೊಂದು ಕೆಲಸ ಮಾಡಲೇಬೇಕು ಅಂದುಕೊಳ್ಳುತ್ತಿದ್ದೆ. ನಮ್ಮೆಲ್ಲರ ಜೀವನದಲ್ಲಿ ಏನಾದರೊಂದು ಘಟನೆಗಳು ನಡೆದು ನಮ್ಮ ಇಡೀ ಜೀವನವನ್ನೇ ಬದಲಿಸಿಬಿಡುತ್ತವೆ. 7 ವರ್ಷಗಳ ಹಿಂದೆ ನನ್ನ ತಂದೆ ತೀರಿಕೊಂಡಾಗ ನನ್ನ ಜೀವನದಲ್ಲೂ ಹಾಗೇ ಆಯ್ತು. ಆ ಸಂಕಟದ ಕ್ಷಣಗಳು ನನ್ನನ್ನು ಅಸಹಾಯಕಳನ್ನಾಗಿ ಮಾಡಿದರೂ, ನಾನು ನನ್ನ ಜೀವನಶೈಲಿ ಬದಲಿಸಿಕೊಳ್ಳುವ ನಿರ್ಧಾರಕ್ಕೆ ಬಂದೆ.
“ನಂತರ ಅರ್ಜುನ್‌ರನ್ನು ಮದುವೆಯಾಗಿ ನಾನು ಮುಂಬೈನಿಂದ ದೆಹಲಿಗೆ ಬಂದೆ. ಆಗ ನನಗೆ ಜೀವನದಲ್ಲಿ ಏನಾದರೂ ಹೊಸತನ್ನು ಮಾಡಲೇಬೇಕು ಎನಿಸಿತು.
“ಆಗ ಅರ್ಜುನ್ ಒಂದು ಖ್ಯಾತ ಫಾರ್ಮಾಸ್ಯುಟಿಕ್ ಕಂಪನಿಯಲ್ಲಿ ಕೆಲಸದಲ್ಲಿದ್ದರು ಹಾಗೂ ಹಲವಾರು ಇತರ ಕಂಪನಿಗಳೊಂದಿಗೆ ವ್ಯವಹರಿಸುತ್ತಿದ್ದರು. ಆಗ ನನಗೆ, ನಾವೇಕೆ ಒಂದು ನ್ಯಾಚುರಲ್ ಆರ್ಗ್ಯಾನಿಕ್ ಕಾಸ್ಮೆಟಿಕ್ ಬ್ರಾಂಡ್‌ನ್ನು ಭಾರತಕ್ಕೆ ತರಬಾರದು ಎನಿಸಿತು. ಏಕೆಂದರೆ ಅಂಥ ಪ್ರಾಡಕ್ಟ್ ಗೆ ಇಲ್ಲಿ ಅಪಾರ ಬೇಡಿಕೆ ಇತ್ತು. ಈ ಯೋಜನೆ ನನಗೆ `ಬೋಟೇಗಾ ಡೀ ಲುಂಗಾವಿಟಾ’ ಬ್ರಾಂಡ್‌ನ್ನು ಭಾರತಕ್ಕೆ ತರಿಸುವ ಐಡಿಯಾ ನೀಡಿತು.
“ಆದರೆ ಅದನ್ನು ಈಗಷ್ಟೇ ಪ್ರಾರಂಭಿಸಿದ್ದೇನೆ, ಅದರಲ್ಲಿ ಮುಂದೆ ಇನ್ನೂ ಬೇಕಾದಷ್ಟು ಸಾಧಿಸಬೇಕಿದೆ. ನನ್ನ ಅಭಿಪ್ರಾಯದಲ್ಲಿ ಎಲ್ಲರೂ ಸದಾ ಸಂತೋಷವಾಗಿರಬೇಕು, ತಮಗೆ ಮೆಚ್ಚುಗೆಯಾದ ಕೆಲಸವನ್ನೇ ಮಾಡಬೇಕು, ಬೇರೊಬ್ಬರ ಸಂತೋಷಕ್ಕೆ ಕಾರಣವಾಗುವುದೇ ಯಶಸ್ಸಿನ ಮೂಲ.”
ಹವ್ಯಾಸಗಳು
ತಿಶಾ ಸದಾ ಆನಂದವಾಗಿರಲು ಬಯಸುತ್ತಾರೆ. ಅವರ ಹವ್ಯಾಸ, ಖಯಾಲಿಗಳೂ ಅದಕ್ಕೆ ಸಂಬಂಧಪಟ್ಟಂತಿವೆ.
“ನಾನು ಫ್ರೀ ಆಗಿದ್ದಾಗೆಲ್ಲ, ನನ್ನ ಫ್ರೆಂಡ್ಸ್ ನ ಭೇಟಿಯಾಗ್ತೀನಿ. ನಾವು ಒಟ್ಟೊಟ್ಟಿಗೆ ನಾಟಕ, ಸಿನಿಮಾ ಎಂದು ಸುತ್ತಾಡುತ್ತೇವೆ. ಅರ್ಜುನ್ ಜೊತೆ ನನಗೆ ಹೊಸ ಹೊಸ ರೆಸ್ಟೋರೆಂಟ್‌ಗಳಲ್ಲಿ ಎಂಜಾಯ್ ಮಾಡುವುದೆಂದರೆ ಇಷ್ಟ. ಅಮ್ಮ ಹೇಳಿಕೊಟ್ಟಂಥ ಪಾರ್ಸಿ ರೆಸಿಪಿಗಳನ್ನು ಟ್ರೈ ಮಾಡುವುದೆಂದರೆ ಬಲು ಖುಷಿ! ಇದಲ್ಲದೆ ದೇಶ ವಿದೇಶಗಳ ನೋಡದೆ ಇರುವ ಜಾಗಗಳಿಗೆ ಪ್ರವಾಸ ಹೊರಡುವುದೆಂದರೆ ಬಹಳ ಥ್ರಿಲ್ಲಿಂಗ್ ಅನ್ಸುತ್ತೆ.”
ನಿಮ್ಮ ಫಿಟ್‌ನೆಸ್‌ನ ರಹಸ್ಯವೇನು ಎಂದು ವಿಚಾರಿಸಿದರೆ, “ಫಿಟ್‌ನೆಸ್ ವಿಷಯದಲ್ಲಿ ನಾನು ತುಸು ಸೋಮಾರಿ. ನಾನು ಜಿಮ್ ಗೆ ಹೋಗುವುದು ಮುಂತಾದ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಮನೆಯ ಹತ್ತಿರವೇ ಲಾಂಗ್ ವಾಕ್ ಹೋಗುತ್ತೇನೆ ಅಥವಾ ಟ್ರೆಡ್ ಮಿಲ್‌ನಲ್ಲಿ ಜಾಗಿಂಗ್ ಮಾಡ್ತೀನಿ. ಲೋ ಕ್ಯಾಲೋರಿ ದಯೆಟ್ ಫಾಲೋ ಮಾಡ್ತೀನಿ, ದಪ್ಪ ಸಣ್ಣ ಆಗ್ತಾ ಇರ್ತೀನಿ,” ಎಂದು ಪ್ರಾಮಾಣಿಕವಾಗಿ ಹೇಳುತ್ತಾರೆ.
ಸಿಹಿಕಹಿ ನೆನಪುಗಳು
ಪ್ರತಿಯೊಬ್ಬರ ಜೀವನದಲ್ಲೂ ಸಿಹಿಕಹಿ ನೆನಪುಗಳು ಇದ್ದೇ ಇರುತ್ತವೆ. ತಮ್ಮ ಕುಟುಂಬದೊಂದಿಗೆ ಇವರ ನೆನಪುಗಳು ಕೂಡಿವೆ. ಅದನ್ನು ಸ್ಮರಿಸುತ್ತಾ ಹೇಳುತ್ತಾರೆ, “ನನ್ನ ಜೀವನದಲ್ಲಿ ಸಿಹಿ ನೆನಪುಗಳು ಹೆಚ್ಚಿಗೇನಿಲ್ಲ. ಅರ್ಜುನ್ ಜೊತೆ ನನ್ನ ಮದುವೆ ನನ್ನ ಜೀವನದ ಅತಿ ಮಧುರಾತಿ ಮಧುರ ಕ್ಷಣ! ಆತ ಬಹಳ ಕಾಳಜಿ ವಹಿಸುವ, ಕೇರಿಂಗ್‌ಸ್ಪೋರ್ಟಿವ್ ವ್ಯಕ್ತಿ. ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು? ನಾನು ತವರಿಗೆ ಹೋಗುವುದೇ ಕಡಿಮೆ. ಅಪರೂಪಕ್ಕೊಮ್ಮೆ ಹೋಗಿ ಅಮ್ಮನಿಗೆ ಸರ್‌ಪ್ರೈಸ್‌ಕೊಟ್ಟಾಗ, ಅವರ ಮುಖದಲ್ಲಿ ಮೂಡುವ ಸಂತೋಷ ನನಗೆ ಸದಾ ಸಿಹಿ ಎನಿಸುತ್ತದೆ. ನಮ್ಮ ತಂದೆಯ ಮರಣ ನನ್ನ ಬದುಕಿನ ಅತಿ ಕಹಿ ಘಳಿಗೆ. ಅವರು ನನ್ನ ಬೆಸ್ಟ್ ಫ್ರೆಂಡ್, ಫಿಲಾಸಫರ್ ಗೈಡ್ ಆಗಿದ್ದರು.”
ತಿಶಾ ಪ್ರಕಾರ ಇಂದಿನ ಪ್ರತಿ ಹುಡುಗಿಯಲ್ಲೂ ಸೆಲ್ಫ್ ಅವೇರ್‌ನೆಸ್, ಸೆಲ್ಫ್ ಕಾನ್ಛಿಡೆನ್ಸ್ ಹಾಗೂ ಸೆಲ್ಫ್ ಬಿಲೀಫ್ ಇರಲೇಬೇಕು. ಇದೆಲ್ಲಕ್ಕೂ ಮುಖ್ಯವಾಗಿ ಅವರು ತಮ್ಮ ಬದುಕಿನ ಗುರಿ ಏನು ಎಂದರಿತಿರಬೇಕು, ಅದನ್ನು ಪಡೆಯಲು ಹೋರಾಡಬೇಕು. ಪ್ರತಿಯೊಬ್ಬ ಹುಡುಗಿಯೂ ತನ್ನನ್ನು ತಾನು ಸ್ವತಂತ್ರಳಾಗಿ ಇರಿಸಿಕೊಳ್ಳಬೇಕು.
ಪ್ರಗತಿಪರ ಮಹಿಳೆಯರಿಗೆ ಸಂದೇಶ ನೀಡುತ್ತಾ ತಿಶಾ ಹೇಳುತ್ತಾರೆ, “ದೊಡ್ಡವರು ಚಿಕ್ಕವರು ಯಾರೇ ಇರಲಿ, ನಾನು ಪ್ರತಿಯೊಬ್ಬ ಹೆಣ್ಣನ್ನೂ ಪ್ರೋತ್ಸಾಹಿಸ ಬಯಸುತ್ತೇನೆ. ಪ್ರತಿಯೊಬ್ಬ ಮಹಿಳೆಯೂ ತಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಬೇಕು. ಈ ವಿಷಯವನ್ನು ಕೆಲವರು ಬೇಗ ಅರಿತರೆ, ಹಲವರು ಬಹಳ ತಡವಾಗಿ ಅರಿಯುತ್ತಾರೆ. ಗಂಡ, ಮನೆ, ಮಕ್ಕಳು ನಿಮ್ಮ ಬೆಂಬಲಕ್ಕೆ ನಿಲ್ಲಬೇಕೇ ಹೊರತು ನಿಮ್ಮ ಕನಸಿಗೆ ಅಡ್ಡಿಯಾಗಬಾರದು. ಯಾರು ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಮನಃಪೂರ್ವಕ ಬೆಂಬಲ ನೀಡುತ್ತಾರೋ ಅಂಥವನನ್ನು ಮಾತ್ರ ಸಂಗಾತಿಯನ್ನಾಗಿ ಆರಿಸಿಕೊಳ್ಳಿ.”
– ಗಿರಿಜಾ