ಭಾರತೀಯ ಅಡುಗೆಯಲ್ಲಿ ಮಸಾಲೆ ಪದಾರ್ಥಗಳ ಬಳಕೆ ಸಾವಿರಾರು ವರ್ಷಗಳಿಂದ ನಡೆದುಬಂದಿದೆ. ಇನ್ನು ಬಳಸುವ ಉದ್ದೇಶ, ಕೇವಲ ವ್ಯಂಜನಗಳ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಅವುಗಳಲ್ಲಿನ ಲೋಪದೋಷ ಅಡಗಿಸಿ, ಗುಣಾಂಶ ಹೆಚ್ಚಿಸುತ್ತವೆ. ಜೊತೆಗೆ ಅನಾರೋಗ್ಯಕ್ಕೆ ಸಂಬಂಧಿಸಿದ ಸಣ್ಣಪುಟ್ಟ ತೊಂದರೆಗಳನ್ನೂ ನಿವಾರಿಸುವಲ್ಲಿ ಹಿರಿಯ ಪಾತ್ರ ವಹಿಸುತ್ತವೆ.
ಪ್ರಸ್ತುತ ಹೆಚ್ಚು ಹೆಲ್ತ್ ಕಾನ್ಶಿಯಸ್ ಆಗಿರುವ ಜನ ಸಂಬಾರ ಪದಾರ್ಥ, ಎಣ್ಣೆ ತುಪ್ಪದಂಥ ಜಿಡ್ಡಿನ ಸಾಮಗ್ರಿ ಬಳಸುವುದು ದಿನೇ ದಿನೇ ಕಡಿಮೆಯಾಗುತ್ತಿದೆ. ಕ್ಯಾಲೋರಿ ಪ್ರಮಾಣ ಹಾಗೂ ವ್ಯಂಜನಗಳ ಪೌಷ್ಟಿಕತೆ ಆಹಾರದ ಗುರುತಾಗಿದೆ. ಆದರೆ ನಿರಂತರ ನಡೆಯುತ್ತಿರುವ ಸಂಶೋಧನೆಗಳ ಪ್ರಕಾರ, ಯಾವುದೇ ಬಗೆಯ ಮಸಾಲೆಗಳನ್ನು ನಿಯಮಿತವಾಗಿ ನಮ್ಮ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಬಳಸುತ್ತಿದ್ದರೆ, ಅದರಿಂದೇನೂ ಹಾನಿಯಿಲ್ಲ, ಬದಲಿಗೆ ಆರೋಗ್ಯಕ್ಕೆ ಒಳ್ಳೆಯದು. ಬನ್ನಿ, ಕೆಲವು ಪ್ರಚಲಿತ ಮಸಾಲೆಗಳ ಬಗ್ಗೆ ಅವನ್ನು ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಬಳಸಿದರೆ ರುಚಿ ಹಾಗೂ ಆರೋಗ್ಯಕ್ಕೆ ಪೂರಕ ಎಂದು ತಿಳಿಯೋಣ.
ದಾಲ್ಚಿನ್ನಿ ಚಕ್ಕೆ ಅಥವಾ ದಾಲ್ಚಿನ್ನಿ
ಉಷ್ಣ ಗುಣಾಂಶವುಳ್ಳ, ಮಸಾಲೆ ಪದಾರ್ಥ. ಪಲಾವ್ ಮಾಡುವಾಗ ಅದಕ್ಕೆ ಬಳಸುವ ಇತರ ಮಸಾಲೆ ಪದಾರ್ಥಗಳ ಜೊತೆ ಇದು ಅಗತ್ಯವಾಗಿ ಬೇಕು. ಪಲಾವ್ ಜೊತೆಗಿನ ರಾಯ್ತಾಗಾಗಿ ಇದರ 1-2 ಚಿಟಕಿ ಸೇರಿಸಿದರೆ ರುಚಿ ಹೆಚ್ಚುತ್ತದೆ. ಬ್ರೆಡ್ ಸ್ಲೈಸ್ ಮೇಲೆ ಬೆಣ್ಣೆ ಸವರಿದ ನಂತರ ಇದರ ಪುಡಿಯನ್ನು ಚಿಟಕಿ ಉದುರಿಸಬೇಕು. ಅದೇ ತರಹ ಕೋಲ್ಡ್ ಕಾಫಿ ಸವಿಯುವ ಮುನ್ನ ಮೇಲೊಂದು ಚಿಟಕಿ, ಹಾಗೇ ಚಾಪ್ಸ್ ತಯಾರಿಸುವಾಗಲೂ ಮೇಲಷ್ಟು ಉದುರಿಸಿ. ಸೇಬಿನ ಖೀರು ಅಥವಾ ಮಿಲ್ಕ್ ಶೇಕ್ ತಯಾರಿಸುವಾಗಲೂ ಇದರ ಪುಡಿ ತುಸು ಉದುರಿಸಿದರೆ ರುಚಿ ಹೆಚ್ಚು.
ಮೆಣಸು
ಇದು ಸಂಬಾರ ಪದಾರ್ಥಗಳ ಮುಖ್ಯ ವಸ್ತು. ಖಾರಕ್ಕಾಗಿ ಇದನ್ನು ಬಹುತೇಕ ಎಲ್ಲಾ ವ್ಯಂಜನಗಳಿಗೂ ಬಳಸುತ್ತಾರೆ. ಕೆಲವೊಮ್ಮೆ ಇಡಿಯಾಗಿ ಅಥವಾ ಸಲಾಡ್ ಇತ್ಯಾದಿಗಳಿಗೆ ಪುಡಿ ರೂಪದಲ್ಲಿ ಬಳಸುತ್ತಾರೆ. ಮೆಣಸು 2 ಬಗೆಯಲ್ಲಿ ಲಭ್ಯ. ಒಂದರಲ್ಲಿ ಇದರ ಅರ್ಧ ಮಾಗಿದ ಕಾಳನ್ನು ಒಣಗಿಸಿ ಇಟ್ಟರೆ, ಅದು ಕಪ್ಪಾಗುತ್ತದೆ. ಇನ್ನೊಂದರಲ್ಲಿ ಇದರ ಕಾಳು ಚೆನ್ನಾಗಿ ಮಾಗಿದ ಮೇಲೆ ಬಿಡಿಸಿ ಒಣಗಿಸಲಾಗುತ್ತದೆ. ಆಗ ಇದರ ಮೇಲ್ಭಾಗದ ಸಿಪ್ಪೆ ತಾನಾಗಿ ಉದುರುತ್ತದೆ. ಚೆನ್ನಾಗಿ ಮಾಗಿದ ಮೇಲೆ ಕಪ್ಪು ಮೆಣಸಿಗಿಂತ ಬಿಳಿ ಮೆಣಸು ಹೆಚ್ಚು ತೀಕ್ಷ್ಣ ರುಚಿ ಹೊಂದಿ, ದುಬಾರಿ ಎನಿಸುತ್ತದೆ.
ಪಕೋಡ ಮಿಶ್ರಣ ಕಲಸುವಾಗ ಕಪ್ಪು ಬಿಳಿ ಎರಡೂ ಬಗೆಯ ಮೆಣಸಿನ ಪೌಡರ್ ಬೆರೆಸಬೇಕು. ರೊಟ್ಟಿಗೆ ತೊವ್ವೆ (ದಾಲ್) ಮಾಡಿಕೊಳ್ಳುವಾಗ ತರಿತರಿಯಾಗಿ ಕುಟ್ಟಿದ 4-5 ಕಾಳನ್ನು ಹಾಕಬೇಕು, ಆಗ ರುಚಿ ಹೆಚ್ಚುತ್ತದೆ. ಬೇಸನ್ ಲಡ್ಡು ಮಾಡುವಾಗಲೂ ಬ್ಲ್ಯಾಕ್‌ವೈಟ್ ಪೆಪ್ಪರ್ ಪೌಡರ್ ಬೆರೆಸಬೇಕು.
ಅರ್ಜುನ ವೃಕ್ಷ ಸಿಪ್ಪೆ
ಸಂಬಾರ ಪದಾರ್ಥಗಳ ಚಕ್ಕೆ ತರಹವೇ ಇವರು ಈ ಒಣಸಿಪ್ಪೆ ಉ. ಭಾರತದಲ್ಲಿ `ಅರ್ಜುನ್ ಕೀ ಛಾಲ್’ ಎಂದೇ ಪ್ರಸಿದ್ಧ. ಇದು ಹಿಮಾಲಯದ ತಲಹಟಿ, ಉ.ಪ್ರದೇಶ, ಮ.ಪ್ರದೇಶ, ಬಿಹಾರ, ಬಂಗಾಳ, ಮಹಾರಾಷ್ಟ್ರದಲ್ಲಿ ಹೇರಳವಾಗಿ ಸಿಗುತ್ತದೆ. ಈ ಮರದ ಸಿಪ್ಪೆ ಬಹಳಷ್ಟು ಪ್ರಯೋಜನಕಾರಿ. ಇದರ ಮೇಲಿನ ಸಂಶೋಧನೆಗಳಿಂದ ಇದು ವಿಟಮಿನ್ `ಈ’ ತರಹ ಆ್ಯಂಟಿ ಆಕ್ಸಿಡೆಂಟ್‌ನ ಕೆಲಸ ಮಾಡುತ್ತದೆ ಎಂದು ದೃಢಪಟ್ಟಿದೆ. ಹೀಗಾಗಿ ಇದನ್ನು ಪುಡಿ ಮಾಡಿ ಅಡುಗೆಯಲ್ಲಿ ಬಳಸುತ್ತಾರೆ. 1 ಲೀ. ನೀರಿಗೆ 1-2 ಚಮಚ ಇದರ ಪುಡಿ ಬೆರೆಸಿ, ನೀರು ಅರ್ಧ ಭಾಗ ಹಿಂಗುವವರೆಗೂ ಕುದಿಸಬೇಕು. ಇದು ಆರಿ ತಣ್ಣಗಾದ ಮೇಲೆ ದಿನಕ್ಕೆ 2 ಸಲ ಅರ್ಧರ್ಧ ಲೋಟದಂತೆ ಕುಡಿಯಿರಿ. ಇದಲ್ಲದೆ, ಇದನ್ನು ಟೊಮೇಟೊ ಜೂಸ್, ಹಾಲು, ಚಹಾದಲ್ಲಿ ಬೆರೆಸಿಯೂ ಕುಡಿಯಬಹುದು. ಇದರಿಂದ ಅಜೀರ್ಣ, ಹುಳಿತೇಗು, ಮಲಬದ್ಧತೆ ಇತ್ಯಾದಿ ದೂರಾಗುತ್ತದೆ.
ಈರುಳ್ಳಿ ಬೀಜ (ಕಲೌಂಜಿ)
ಇದು ಸಾಸುವೆ ತರಹ ಇರುತ್ತದೆ. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಉತ್ತಮ ರೀತಿಯಲ್ಲಿ ಬೆರೆತಿದೆ. ಇಷ್ಟು ಮಾತ್ರವಲ್ಲ ಕ್ಯಾಲ್ಶಿಯಂ, ಪೊಟ್ಯಾಶಿಯಂ, ಮೆಗ್ನೀಶಿಯಂ ಇತ್ಯಾದಿಗಳೂ ಇರುತ್ತವೆ. ಇದರ ರುಚಿ ಈರುಳ್ಳಿ, ಮೆಣಸು, ಓರಿಗೇನೋ ಇತ್ಯಾದಿಗಳ ಸಂಗಮದಂತಿದ್ದು, ಮಾಮೂಲಿ ವ್ಯಂಜನದ ರುಚಿ ಹೆಚ್ಚಿಸುತ್ತದೆ. ಹಾಗಾಗಿಯೇ ಹಲವು ಬಗೆಯ ಉಪ್ಪಿನಕಾಯಿಗೆ ಇದು ಕಡ್ಡಾಯ. ಜೊತೆಗೆ ಇದನ್ನು ನಾನ್, ತಂದೂರಿ ರೊಟ್ಟಿ, ಪೂರಿ, ಬಟೂರಾ ಇತ್ಯಾದಿಗಳಿಗೆ ತುಸು ಸೇರಿಸಿದರೆ ರುಚಿ ಹೆಚ್ಚುತ್ತದೆ. ಅದೇ ತರಹ ಇದರ ಕೆಲವು ಕಾಳು ಹಾಕಿ ಬಿಸಿ ನೀರಲ್ಲಿ ಕುದಿಸಿ ಚಹಾ ತಯಾರಿಸಿದರೆ, ಮಾನಸಿಕ ಒತ್ತಡ ಎಷ್ಟೋ ಕಡಿಮೆಯಾಗುತ್ತದೆ. ಇದರ ಎಣ್ಣೆ ಸಹ ಅನೇಕ ವಿಧದಲ್ಲಿ ಪ್ರಯೋಜನಕಾರಿ. ಮುಂದಿನ ಸಲ ದಾಲ್ ಮಾಡುವಾಗ ಇದರಿಂದ ಸ್ಪೆಷಲ್ ಒಗ್ಗರಣೆ ಕೊಡಿ, ರುಚಿ ತಾನಾಗಿ ಹೆಚ್ಚುತ್ತದೆ.
ಜಾಯಿಕಾಯಿ – ಜಾಪತ್ರೆ
ಇವೆರಡೂ ಗರಂ ಮಸಾಲಾದ ಪ್ರಮುಖ ಅಂಶಗಳು. ಇವನ್ನು ವಿಶಿಷ್ಟ ವ್ಯಂಜನಗಳಿಗಾಗಿ ಬಳಸಲಾಗುತ್ತದೆ. ಹಾಗೇ ಔಷಧಿ, ಮನೆಮದ್ದಿನ ರೂಪದಲ್ಲೂ ಇದರ ಬಳಕೆ ಹೆಚ್ಚು. ಜಾಯಿಕಾಯಿ ಸುಗಂಧ ಭರಿತ ಆಗಿರುತ್ತದೆ. ಇದರಲ್ಲಿನ ಭಾರಿ ಗಾತ್ರದ ವೆರೈಟಿ ಹೆಚ್ಚು ಜನಪ್ರಿಯ. ಜಾಯಿಕಾಯಿಯ ಹಣ್ಣಿನ ಹೊರಭಾಗದ ಸಿಪ್ಪೆಯೇ ಜಾಪತ್ರೆ ಎನಿಸಿದೆ.
ಸಣ್ಣ ಮಕ್ಕಳಿಗೆ ಜ್ವರ ಇತ್ಯಾದಿ ಕಾಡಿಸಿದಾಗ, ಒಂದು ಚಿಕ್ಕ ಮಣೆ ಮೇಲೆ (ಗ್ರಂಧಿಗೆ ಅಂಗಡಿಗಳಲ್ಲಿ ಲಭ್ಯ) ಇದನ್ನು ತೇದು, 1-2 ಚಮಚ ಹಾಲಲ್ಲಿ ಬೆರೆಸಿ ಕುಡಿಸಿದರೆ, ಜ್ವರ ದೂರಾಗುತ್ತದೆ. ಅನಿದ್ರೆ ಸಮಸ್ಯೆ ಕಾಡಿದಾಗ ಬಿಸಿ ಹಾಲಿಗೆ ತುಸು ಜಾಯಿಕಾಯಿ ಪುಡಿ, ಕೇಸರಿ ಹಾಗೂ ಏಲೆಕ್ಕಿಪುಡಿ ಹಾಕಿ ಕದಡಿ, ಮಲಗುವ ಮುನ್ನ ಸೇವಿಸಿದರೆ, ಸುಖವಾಗಿ ನಿದ್ದೆ ಬರುತ್ತದೆ. ಯಾವುದೇ ವ್ಯಂಜನಕ್ಕೆ ಮಸಾಲೆ ಇಡಿಯಾಗಿ ಬಳಸುವಾಗ, ಜೊತೆಗೆ ಜಾಪತ್ರೆಯ ಸಣ್ಣ ಚೂರು ಸೇರಿಸಿದರೆ ಉತ್ತಮ ರುಚಿ ಮೂಡುತ್ತದೆ.
ಜೀರಿಗೆ
ಅಡುಗೆಮನೆಗೆ ಬೇಕಾಗುವ ಮುಖ್ಯ ಸಂಬಾರ ಪದಾರ್ಥಗಳಲ್ಲಿ ಜೀರಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಇದು ತೀಕ್ಷ್ಣ ಹಾಗೂ ಸಿಹಿ ಸುಗಂಧ ಹೊಂದಿದೆ. ಭಾರತೀಯ ವ್ಯಂಜನಗಳಲ್ಲಿ ಮಾತ್ರವಲ್ಲದೆ, ಮೆಕ್ಸಿಕನ್ ವ್ಯಂಜನಗಳಲ್ಲೂ ಜೀರಿಗೆ ಹೆಚ್ಚಾಗಿ ಬಳಕೆಯಾಗುತ್ತದೆ. ಜೀರಿಗೆಯಲ್ಲಿ ಹೆಚ್ಚು ಕಬ್ಬಿಣಾಂಶವಿದೆ. ನಮ್ಮ ಜೀರ್ಣಶಕ್ತಿ ವರ್ಧಿಸುವಲ್ಲಿ ಇದು ಹೆಚ್ಚು ಸಹಾಯಕ.
ಜೀರಿಗೆ ಹಲವು ವಿಧದಲ್ಲಿ ಬಳಕೆಯಾಗುತ್ತದೆ. ಯಾವುದೇ ವ್ಯಂಜನಕ್ಕೆ ಒಗ್ಗರಣೆ ನೀಡಲು, ಜೀರಿಗೆ ಮೆಣಸಿನ ತಿಳಿಸಾರು ಮಾಡಲು, ಅಕ್ಕಿ ರಾಗಿ ರೊಟ್ಟಿಗೆ ಮಿಶ್ರಣ ಕಲಸುವಾಗ, ದೈನಂದಿನ ಮೆಣಸಿನ ಪುಡಿಗೆ, ಹುರಿದು ಪುಡಿ ಮಾಡಿ ಮಜ್ಜಿಗೆ, ರಾಯ್ತಾ, ಮೊಸರುವಡೆ ಇತ್ಯಾದಿಗೆ ಬೆರೆಸಿಕೊಳ್ಳಲು ಬೇಕೇ ಬೇಕು. ಕೇರಳದಲ್ಲಿ ಕುಡಿಯುವ ನೀರಿಗೆ ಇದನ್ನು ಬೆರೆಸಿ, ಕುದಿಸಿ, ಆರಿದ ನಂತರ ಪ್ರತಿದಿನ ಸೇವಿಸುತ್ತಾರೆ. ಕುಡಿಯುವ ನೀರಿಗೆ ತುಸು ಬಣ್ಣ ಬಂದರೂ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಧುಮೇಹಿಗಳು, ಮಲಬದ್ಧತೆಯುಳ್ಳವರು ಇದರ ಕಷಾಯವನ್ನು ನಿಯಮಿತವಾಗಿ ಸೇವಿಸಿದರೆ, ಬಹಳ ಲಾಭಕಾರಿ.
ಸಾಸುವೆ
ಯಾವ ವ್ಯಂಜನ ಇದರ ಒಗ್ಗರಣೆ ಇಲ್ಲದೆ ಆಗಲಾರದು. ಉಪ್ಪಿನಕಾಯಿಗಳಲ್ಲಿ ಇತರ ಮಸಾಲೆಗಳ ಜೊತೆಗೆ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದರ ಬಳಕೆಯಿಂದ ಹೊಟ್ಟೆ, ಕರುಳಿನ ಕಾರ್ಯಶಕ್ತಿ ಹೆಚ್ಚುತ್ತದೆ. ಹೀಗಾಗಿ ಹಸಿವಾಗದಿರುವಿಕೆಯ ಸಮಸ್ಯೆ ತಗ್ಗುತ್ತದೆ. ಇದರಲ್ಲೂ ಕಪ್ಪು, ನಸುಹಳದಿ ಬಣ್ಣ ಲಭ್ಯ. ದ.ಭಾರತದಲ್ಲಿ ಇದರ ಬಳಕೆ ಹೆಚ್ಚು. ಉ. ಭಾರತದಲ್ಲಿ ಇದರ ಸೊಪ್ಛು, ಎಣ್ಣೆ ಹೆಚ್ಚು ಬಳಸುತ್ತಾರೆ. ಹಳದಿ ಸಾಸುವೆಯನ್ನು ಪುಡಿ ಮಾಡಿ, ಸಾಸುವೆ ಎಣ್ಣೆ ಸಮೇತ ಆಂಧ್ರಶೈಲಿಯ ಮಾವಿನ ಉಪ್ಪಿನಕಾಯಿ (ಆವಗಾಯಿ), ರಾಯ್ತಾ, ಚಟ್ನಿ, ಕಷಾಯ ಇತ್ಯಾದಿಗಳಿಗೆ ಬಳಸುತ್ತಾರೆ. ಮೀನು, ಸೀಫುಡ್ಸ್, ಜೊತೆ ಸಾಸುವೆ ಬೆಂದಾಗ ಸಹಜವಾಗಿ ಒಮೇಗಾ-3 ಅಂಶ ಹೆಚ್ಚುತ್ತದೆ. ಢೋಕ್ಲಾ, ಖಾಂಡ್ವಿ, ತೇಫ್ಲಾ ಇತ್ಯಾದಿ ಗುಜರಾತಿ ವ್ಯಂಜನಗಳಿಗೆ ಹಳದಿ ಸಾಸುವೆಯ ಒಗ್ಗರಣೆ ರುಚಿ ಹೆಚ್ಚಿಸುತ್ತದೆ.
ಓಮ
ಇದು ರುಚಿಕರ, ಜೀರ್ಣಕ್ಕೆ ಒದಗುವ, ಉಷ್ಣತೆಯುಳ್ಳ ತೀಕ್ಷ್ಣ ಗುಣಗಳನ್ನು ಹೊಂದಿದೆ. ಇದರ ಸೇವನೆಯಿಂದ ಗ್ಯಾಸ್, ಗಂಟಲಿನ ಕೆರೆತ ಗುಣವಾಗುತ್ತದೆ. ಓಮದಲ್ಲಿ ಮೆಣಸು, ಸಾಸುವೆಯ ಉಷ್ಣದ ಗುಣಗಳು ಅಡಗಿದ್ದು, ಒಂದಿಷ್ಟು ಕಹಿ, ಇಂಗಿನ ಉತ್ತಮ ಅಂಶಗಳೂ ಇವೆ. ಅಜವಾನ ಎಂದೂ ಕರೆಯಲ್ಪಡುವ ಇದರ ಒಗ್ಗರಣೆ ವ್ಯಂಜನದ ರುಚಿ ಹೆಚ್ಚಿಸಿ ಸುಗಂಧವನ್ನು ಸುಧಾರಿಸುತ್ತದೆ. ಇದು ಎಲ್ಲಾ ಮಸಾಲೆಗಳಲ್ಲೂ ಶ್ರೇಷ್ಠ ಎನಿಸಿದೆ, ಏಕೆಂದರೆ ಹಬ್ಬ ಅಥವಾ ವಿಶೇಷ ಸಮಾರಂಭಗಳಲ್ಲಿ ಸುಗ್ರಾಸ ಭೋಜನ ಸವಿದಾಗ, ಜೊತೆಗೆ ಇದರ 4-6 ಕಾಳು ಬಾಯಿಗೆ ಹಾಕಿ ಅಗಿದು, ನೀರು ಕುಡಿದರೆ, ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.
ಸೀಮೆಗೆಡ್ಡೆ, ಬಾಳೆಕಾಯಿ, ಗೋರಿಕಾಯಿ, ಮರಗೆಣಸು ಇತ್ಯಾದಿಗಳ ವ್ಯಂಜನಗಳಿಗೆ ಇದರ ಒಗ್ಗರಣೆ ಕೊಟ್ಟಾಗ, ಅದರ ರುಚಿ ಹೆಚ್ಚುತ್ತದೆ, ಜೊತೆಗೆ ವಾತಮೂಲದ ಗೆಡ್ಡೆ ಗೆಣಸು ಸುಲಭವಾಗಿ ಜೀರ್ಣವಾಗುತ್ತದೆ. ಅದೇ ತರಹ ರಾಜ್ಮಾ ಮಸಾಲೆ ಗ್ರೇವಿಗೆ, ಕಸೂರಿಮೇಥಿ ಜೊತೆ ಓಮದ ಒಗ್ಗರಣೆ ಕೊಟ್ಟರೆ ಬಲು ಸ್ವಾದಿಷ್ಟ ಎನಿಸುತ್ತದೆ. ಹಾಗೆಯೇ ಗ್ರೀನ್ ಪೀಸ್ ಕರಿ, ಕಾಬೂಲ್ ಕಡಲೆಕಾಳಿನ ಗ್ರೇವಿ ಇತ್ಯಾದಿಗಳಿಗೂ ಇದರ ಪುಡಿ ಬಳಸಬಹುದು. ಮಾಮೂಲು ಪರೋಟಾಗಳಿಗೆ ಬಳಸಿದರೂ ರುಚಿ ಆರೋಗ್ಯ ಎರಡೂ ಸುಧಾರಿಸುತ್ತದೆ.
ಫ್ಲ್ಯಾಕ್ಸ್ ಸೀಡ್ಸ್
ಅಗಸೆ ಬೀಜ ಅಥವಾ ಫ್ಲ್ಯಾಕ್ಸ್ ಸೀಡ್ಸ್ ನ ಮಹತ್ವ ತೀರಾ ಇತ್ತೀಚೆಗೆ ಬೆಳಕಿಗೆ ಬಂತು. ಹಿಂದೆಲ್ಲ ಕೇವಲ ಇದರ ಸೊಪ್ಪನ್ನು ಮಾತ್ರ ಅಡುಗೆಗೆ ಬಳಸುತ್ತಿದ್ದರು, ಅಥವಾ ದನಗಳಿಗೆ ಹಾಕಿಬಿಡುತ್ತಿದ್ದರು. ಇತ್ತೀಚಿನ ಸಂಶೋಧನೆಗಳ ಪ್ರಕಾರ ಇದರಲ್ಲಿ ಒಮೇಗಾ-3 ಫ್ಯಾಟಿ ಆ್ಯಸಿಡ್ಸ್ ಧಾರಾಳವಾಗಿದ್ದು, ಹಿಂದೆಲ್ಲ ಮೀನಿನಲ್ಲಿ ಮಾತ್ರ ಲಭ್ಯ ಎಂದು ತಿಳಿದಿದ್ದೆ. ಹೀಗಾಗಿ ಸಸ್ಯಾಹಾರಿಗಳಿಗೆ ಇದರ ಸೇವನೆ ಕಡ್ಡಾಯ. ಇದನ್ನು ಬರಿದೇ ಲಘುವಾಗಿ ಹುರಿದು, ಪುಡಿ ಮಾಡಿಡಿ. ನಂತರ ಇದನ್ನು ಸಲಾಡ್, ಪಲ್ಯ, ಕೋಸಂಬರಿ ಅಥವಾ ಯಾವುದೇ ಗೊಜ್ಜಿಗೂ ಬಳಸಿಕೊಳ್ಳಬಹುದು. ರಾಯ್ತಾ ಮೇಲೆ ಉದುರಿಸಿದರೆ ಸೊಗಸಾಗಿರುತ್ತದೆ. ಯಾವುದೇ ಬಗೆಯ ಹಿಟ್ಟು ಕಲಸಿ ರೊಟ್ಟಿ ತಟ್ಟುವಾಗ, ಅಗತ್ಯವಾಗಿ ಇದರ 2 ಚಮಚ ಅದಕ್ಕೆ ಬೆರೆಸಿಕೊಳ್ಳಿ. ಬೆಳಗ್ಗೆ ಬರಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಮಲಗುವ ಮುನ್ನ 2-2 ಚಮಚಕ್ಕೆ ಬಿಸಿ ನೀರು ಬೆರೆಸಿ ಕುಡಿದರೆ, ಕೊಲೆಸ್ಟ್ರಾಲ್ ಮಟ್ಟ ಎಷ್ಟೋ ತಗ್ಗುತ್ತದೆ. ಮುಖ್ಯವಾಗಿ ಸಂಧಿವಾತ, ಮಂಡಿನೋವು ಇರುವ ಮಹಿಳೆಯರಿಗೆ ಇದರ ಸೇವನೆಯಿಂದ ಬಹಳ ಲಾಭವಿದೆ.
ಕೇಸರಿ
ದುಬಾರಿ ಮಸಾಲೆಗಳಲ್ಲಿ ಕೇಸರಿ ಮುಖ್ಯವಾದುದು. ಚಳಿ ಮಳೆಗಾಲಗಳಲ್ಲಿ ಕೆಮ್ಮು ನೆಗಡಿ ಕಾಡಿದಾಗ, ಇದನ್ನು ಬಿಸಿ ಹಾಲಲ್ಲಿ ಕದಡಿ ಕುಡಿಯಬೇಕು. ಬೆಳೆಯುವ ಮಕ್ಕಳಿಗೆ, ಗರ್ಭಿಣಿಯರಿಗೆ ಬಿಸಿ ಹಾಲಿಗೆ ಬಾದಾಮಿ, ಗೋಡಂಬಿ, ದ್ರಾಕ್ಷಿ, ಖರ್ಜೂರದ ಜೊತೆ ಇದನ್ನು ಬೆರೆಸಿಕೊಟ್ಟರೆ ಪುಷ್ಟಿಯಾಗಿರುತ್ತದೆ, ಗರ್ಭಸ್ಥ ಶಿಶುವಿನ ಬಣ್ಣ ತೇಲುತ್ತದೆ. ಇದನ್ನು ತಣ್ಣನೆ ಹಾಲು, ಖೀರು, ಪಾಯಸಕ್ಕೆ ಬೆರೆಸಿದರೆ ತಂಪಾಗಿಯೂ, ಅದೇ ಬಿಸಿ ಪದಾರ್ಥಗಳಿಗೆ ಬೆರೆಸಿದರೆ ಉಷ್ಣದ ಗುಣವನ್ನೂ ಕೊಡುವುದು ಇದರ ವೈಶಿಷ್ಟ್ಯ. ಇದನ್ನು ಮಲ್ಟಿ ವೆಜ್ ಗ್ರೇವಿ, ಜಾಫ್ರಾನಿ ಪಲಾವ್, ಬಿರಿಯಾನಿ ಇತ್ಯಾದಿಗಳಿಗೂ ಬಳಸುತ್ತಾರೆ. ಇದನ್ನು ತುಸು ಹೊತ್ತು ಹಾಲಲ್ಲಿ ನೆನೆಸಿ ನಂತರ ಬಳಸುವುದು ಸೂಕ್ತ. ರುಚಿ, ಸುವಾಸನೆ ಎರಡನ್ನೂ ಹೆಚ್ಚಿಸುತ್ತದೆ.
ಸೋಂಪು
ನಮ್ಮ ಮಸಾಲೆಗಳಲ್ಲಿ ಸೋಂಪು ಚೆನ್ನಾಗಿ ಬಳಕೆಯಾಗುತ್ತದೆ. ಬಾಯಿ ಶುದ್ಧಿಯಾಗಿರಲೆಂದು ಊಟದ ನಂತರ 4 ಕಾಳು ಹಾಕಿಕೊಳ್ಳುವ ಹಾಗೇ ಒಗ್ಗರಣೆಗೂ ಒದಗುತ್ತದೆ. ಇದು ಜೀರ್ಣಶಕ್ತಿಗೂ ಹಿತಕರ. ಮುಖ್ಯವಾಗಿ ಉ. ಭಾರತದ ಸಾಂಪ್ರದಾಯಿಕ ವ್ಯಂಜನಗಳಲ್ಲಿ ಇದು ಅತಿ ಅಗತ್ಯ. ಜೊತೆಗೆ ಉಪ್ಪಿನಕಾಯಿಗಳಿಗೂ ಸಹ. ಇದರಲ್ಲಿ 2 ಬಗೆ. ಒಂದು, ದಪ್ಪ ಸೋಂಪು, ಊಟದ ನಂತರ ಬಳಸಲು. ಇನ್ನೊಂದು ಸಣ್ಣ ಸೋಂಪು, ಅಡುಗೆಗೆ ಬಳಸಲು. ಇದರ ಸೇವನೆಯಿಂದ ಮಲಬದ್ಧತೆ, ಹೊಟ್ಟೆನೋವು, ಗಂಟಲಿನ ಕೆರೆತ, ಪಿತ್ತ ಜ್ವರ, ಕೈಕಾಲುಗಳ ಉರಿ ಇತ್ಯಾದಿ ತಗ್ಗುತ್ತದೆ. ಇದನ್ನು ಹಾಗಲ, ಪಡವಲ, ಹೂಕೋಸು, ಎಲ್ಲಾ ಬಗೆಯ ಉಪ್ಪಿನಕಾಯಿಗಳ ಜೊತೆ ಬಳಸಬಹುದು. ವ್ಯಂಜನದ ರುಚಿ, ಆರೋಗ್ಯ ಹೆಚ್ಚಿಸಲು ಇದು ಅತ್ಯಗತ್ಯ.
ಲವಂಗದ ಎಲೆ
ಪಲಾವ್ ಎಲೆ ಎಂದೂ ಕರೆಯಲ್ಪಡುವ ಇದು ಮುಖ್ಯವಾಗಿ ಲವಂಗ, ಚಕ್ಕೆ, ಏಲಕ್ಕಿ ತರಹ ಸುವಾಸನೆ ನೀಡುತ್ತದೆ. ಇದನ್ನು ಬಳಸಿ ತಯಾರಿಸಿದ ವ್ಯಂಜನಗಳ ಸೇವನೆಯಿಂದ ಕಫ ಪ್ರಧಾನ ರೋಗ, ಅಜೀರ್ಣದ ಸಮಸ್ಯೆ ಇತ್ಯಾದಿ ತಗ್ಗುತ್ತದೆ. ಇದರ ಹಳೆಯದಾದ ಎಲೆಗಳನ್ನು ಬಳಸಬೇಡಿ. ಯಾವುದೇ ವ್ಯಂಜನಕ್ಕೂ ಇಡಿಯಾದ ಮಸಾಲೆ ಹಾಕಿ ಹುರಿಯುವಾಗ ಅಗತ್ಯ ಇದನ್ನು ಬೆರೆಸಿಕೊಳ್ಳಿ. ಮಸಾಲೆ ಪುಡಿ ಬಳಸುವ ಹಾಗಿದ್ದರೆ, ಅದಕ್ಕೆ ಮೊದಲು ಇದನ್ನು ಹಾಕಿ ಒಗ್ಗರಣೆ ಕೊಡಬೇಕು.
ಇಷ್ಟು ಮಾತ್ರವಲ್ಲದೆ ಲವಂಗ, ಮೆಂತ್ಯ, ಗಸಗಸೆ, ಇಂಗು, ಒಣಮೆಣಸಿನಕಾಯಿ, ಧನಿಯಾ, ಅರಿಶಿನ ಇತ್ಯಾದಿ ಎಲ್ಲ ಮುಖ್ಯ. ಕೆಲವು ಅಪರೂಪದ್ದನ್ನು ಮಾತ್ರ ಇಲ್ಲಿ ತಿಳಿಸಲಾಗಿದೆ.
– ನೀರಜಾ