ಸಮಕಾಲೀನ ನೃತ್ಯ ಪ್ರಕಾರಗಳಲ್ಲೊಂದಾದ `ಇಂಡಿಯನ್‌ ಕಂಟೆಂಪರರಿ ಸ್ಟೈಲ್’  ನೃತ್ಯವನ್ನು ದೇಶ ವಿದೇಶಗಳಲ್ಲಿ ಪ್ರದರ್ಶಿಸಿ ಪ್ರಚುರಪಡಿಸಿದ ಕೀರ್ತಿಗೆ ಭಾಜನರಾಗಿರುವ ಮಯೂರಿ ಉಪಾಧ್ಯ, ನೃತ್ಯವನ್ನೇ ಬದುಕಿನ ಉಸಿರಾಗಿಸಿಕೊಂಡಿರುವ ಅಪ್ಪಟ ಕಲಾವಿದೆ. 6 ವರ್ಷ ವಯಸ್ಸಿನಲ್ಲಿದ್ದಾಗೀ ನೃತ್ಯ ಗುರುಗಳಾದ ಇಂದಿರಾ ಕಾದಂಬಿಯವರಿಂದ ಭರತನಾಟ್ಯವನ್ನು ಕಲಿತ ಇವರು ತದನಂತರ ಕಥಕ್‌, ಒಡಿಸ್ಸಿ, ಕಲರಿಪಟ್ಟು ಹಾಗೂ ಜಾನಪದ ನೃತ್ಯವನ್ನು ಕಲಿತು ಕರಗತ ಮಾಡಿಕೊಂಡರು. ಜೊತೆಗೆ ಶೋಭನಾ ಜಯಸಿಂಗ್‌ ಡ್ಯಾನ್ಸ್ ಕಂಪನಿ ಲಂಡನ್‌ನಲ್ಲಿ ಕೆಲವು ಕಾಲ ನೃತ್ಯಾಭ್ಯಾಸ ಮಾಡಿ `ಗ್ರಹಮ್’ ಹಾಗೂ ಇತರೇ ಹಲವಾರು ನೃತ್ಯ ಪಟ್ಟುಗಳನ್ನು ಕಲಿತುಕೊಂಡರು. ರಾಷ್ಟ್ರೀಯ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ‌ನಲ್ಲಿ ಪ್ರದರ್ಶನ ನೀಡಿರುವ ಮಯೂರಿ ಹಾಗೂ ಸಂಗಡಿಗರು ಈಗಾಗಲೇ `ದಿ ಅದರ್‌ ಫೆಸ್ಟಿವಲ್‌,’ `ಮೈಸೂರು ದಸರಾ,’ `ಬೆಂಗಳೂರು ಹಬ್ಬ,’ `ಇಂಟರ್‌ ನ್ಯಾಷನಲ್ ಫೆಸ್ಟಿವಲ್ ‌ಆಫ್‌ ಮೂಮೆಂಟ್‌ ಆರ್ಟ್ಸ್’ ಹೀಗೆ ಹತ್ತು ಹಲವಾರು ಪ್ರದರ್ಶನ ನೀಡಿರುವ ಹೆಗ್ಗಳಿಕೆಯನ್ನು ಗಳಿಸಿದ್ದಾರೆ. ಅಲ್ಲದೆ, ಮಿಸ್‌ ಇಂಡಿಯಾ 2003-04ನೇ ಫೈನ್‌ ಪ್ರದರ್ಶನ, ಲ್ಯಾಕ್ಮೆ ಇಂಡಿಯಾ ಫ್ಯಾಷನ್‌ ಶೋನಲ್ಲಿ ನೃತ್ಯ ಪ್ರದಶಿಸಿದ್ದು, ಎಲ್ಲರೂ ಹೆಮ್ಮೆ ಪಡುವಂತಹ ವಿಚಾರ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ `ಡ್ಯಾನ್ಸಿಂಗ್‌ ಸ್ಟಾರ್‌’ ಕಾರ್ಯಕ್ರಮದಲ್ಲಿ `ಜಡ್ಜ್’ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಯೂರಿ ಉಪಾಧ್ಯ, ರಾಜ್ಯದ ಮೂಲೆ ಮೂಲೆಯಲ್ಲೂ ಮನೆ ಮಾತಾಗಿದ್ದಾರೆ. ಭಾರತೀಯ ಸಮಕಾಲೀನ ನೃತ್ಯ ಪ್ರಕಾರವನ್ನು ವಿಶ್ವದಾದ್ಯಂತ ಪರಿಚಯಿಸುವ ಇವರ ಕನಸಿಗೆ ಬೆಂಬಲ ನೀಡಿದ ಪತಿ ಹಿನ್ನೆಲೆ ಗಾಯಕ ರಘು ದೀಕ್ಷಿತ್‌ ಹಾಗೂ ಸಹೋದರಿ ಮಾಧುರಿ ಪ್ರಶಂಸಾರ್ಹರು. ನೃತ್ಯ ಸಂಯೋಜನೆ `ನೃತರುತ್ಯ’ ಸಂಸ್ಥೆಯ ಜವಾಬ್ದಾರಿ, ವರ್ಕ್‌ಶಾಪ್‌, ರಿಯಾಲಿಟಿ ಶೋ… ಹೀಗೆ ಹಲವಾರು ವೈವಿಧ್ಯಮಯ ಚಟುವಟಿಕೆಗಳ ಕುರಿತು `ಗೃಹಶೋಭಾ’ದೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.

nritharuthya---mayuri-1

ನಿಮ್ಮ ಕನಸಿನ ಕೂಸು `ನೃತರುತ್ಯ ಬಗ್ಗೆ ಹೇಳಿ?

`ನೃತರುತ್ಯ’ ಇದು ಪ್ರಾರಂಭವಾದದ್ದು 2000ನೇ ವರ್ಷದಲ್ಲಿ. ಇದೊಂದು ಪ್ರೀಮಿಯರ್‌ ಸಂಸ್ಥೆಯಾಗಿದೆ. ನಾವು ಮಾಡುವುದು ಸಮಕಾಲೀನ ನೃತ್ಯ. ಇದರಲ್ಲಿ ನಾವು ಭಾರತೀಯ ನೃತ್ಯ ಪ್ರಕಾರದ ಕುರಿತಾಗಿ ಹೆಚ್ಚಿನ ಮಹತ್ವ ನೀಡುತ್ತೇವೆ. ಇದರ ಮೂಲಕವೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ನೃತ್ಯ ಪ್ರದರ್ಶನಗಳನ್ನು ನೀಡಿದ್ದೇವೆ. ನಮ್ಮ ನೃತ್ಯ ಪ್ರದರ್ಶನವನ್ನು ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಒಟ್ಟಾರೆ `ನೃತರುತ್ಯ’ ಎನ್ನುವುದು ನನ್ನ ಫ್ಯಾಮಿಲಿ ಇದ್ದಂತೆ. ಇತ್ತೀಚೆಗೆ ಇದರ ಮೂಲಕವೇ ಅನೇಕ ದೊಡ್ಡ ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತೇವೆ. ಇಂಗ್ಲೆಂಡಿನ ರಾಣಿಯ ಸಮ್ಮುಖದಲ್ಲಿ ಬಾಲಿವುಡ್‌ ಹಿರಿಯ ನಟ ಅಮಿತಾಬ್ ‌ಬಚ್ಚನ್‌ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿಯವರ ಎದುರಿನಲ್ಲಿಯೂ ಪ್ರದರ್ಶನ ನೀಡಿದ್ದೇವೆ. ಕೊರಿಯಾಗ್ರಫಿಗಾಗಿ ಅಂತಾರಾಷ್ಟ್ರೀಯ ಪುರಸ್ಕಾರವನ್ನೂ ಪಡೆದುಕೊಂಡಿದ್ದೇನೆ. ನಮ್ಮಲ್ಲಿನ ಕೊರಿಯಾಗ್ರಫಿಗಾಗಿ ದಕ್ಷಿಣ ಕೊರಿಯಾ ಕೊರಿಯಾಗ್ರಫಿ ಪ್ರಶಸ್ತಿ ಸಿಕ್ಕಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ `ಪಾಟಾ’ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮೇಳದಲ್ಲಿಯೂ ಪ್ರದರ್ಶನ ನೀಡಿದ್ದೇವೆ.

nritharuthya---mayuri-3

ನಿಮ್ಮ ಬಾಲ್ಯ, ನೃತ್ಯದ ಕುರಿತಾಗಿ ನಿಮ್ಮ ಆಸಕ್ತಿ ಬೆಳೆಯಲು ಕಾರಣವಾದ ಸನ್ನಿವೇಶದ ಕುರಿತು ತಿಳಿಸಿ.

ನಾನು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸದಲ್ಲಿ ತೊಡಗಿದೆ. ಪ್ರಾರಂಭದಲ್ಲಿ ಭರತನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದೆ. ಸ್ಕೂಲ್‌ನಲ್ಲಿಯೂ ಡ್ಯಾನ್ಸ್ ಪ್ರೋಗ್ರಾಮ್ ಗಾಗಿ ನನ್ನನ್ನು ಆಗಾಗ ಬೇರೆ ಬೇರೆ ಸ್ಥಳಗಳಿಗೆ ಕಳಿಸುತ್ತಿದ್ದರು. ನನ್ನ ತಂದೆ ತಾಯಿ ನನ್ನನ್ನು ತಪ್ಪದೆ ನಿತ್ಯ ಡ್ಯಾನಸ್ ಕ್ಲಾಸ್‌ ಗಾಗಿ ಕಳಿಸುತ್ತಿದ್ದರು. ತಂದೆ ತಾಯಿಗಳು ಪ್ರೋತ್ಸಾಹ ನನಗೆ ಬಹಳವೇ ಇತ್ತು. ಅವರೆಂದೂ ನೀನು ಎಂಜಿನಿಯರ್‌ ಅಥವಾ ಮೆಡಿಕಲ್ ಓದಬೇಕೆಂದು ಒತ್ತಾಯಿಸಲಿಲ್ಲ. ನಾನು ಓದಿದ್ದು ಶ್ರೀವಾಣಿ ಎಜುಕೇಷನ್ ಸ್ಕೂಲ್‌. ಅಲ್ಲಿ ನಡೆಯುತ್ತಿದ್ದ ಎಲ್ಲಾ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನನ್ನದೊಂದು ಪ್ರದರ್ಶನವಿರುತ್ತಿತ್ತು. ಪ್ರತಿ ವರ್ಷ ರಿಪಬ್ಲಿಕ್‌ ಡೇ ಕಾರ್ಯಕ್ರಮಕ್ಕಾಗಿ ಸತತ 3-4 ತಿಂಗಳ ಕಾಲ ಅಭ್ಯಾಸ ನಡೆಸಬೇಕಾಗುತ್ತಿತ್ತು. ಆಗೆಲ್ಲ ನನ್ನ ಶಾಲೆಯವರು ಯಾವ ಕಂಡೀಶನ್ಸ್ ಹಾಕದೆ ಅಭ್ಯಾಸಕ್ಕಾಗಿ ಕಳಿಸುತ್ತಿದ್ದರು. ಒಟ್ಟಾರೆ ಶಾಲೆಯಲ್ಲಿ ಒಳ್ಳೆಯ ಕಲ್ಚರ್‌ ಎನ್‌ಕರೇಜ್‌ಮೆಂಟ್‌ ನೀಡುತ್ತಿದ್ದರು. ಪ್ರೆಸಿಡೆಂಟ್‌ ಪೆರೇಡ್‌ಗಳಲ್ಲಿ ಸಹ ನನ್ನ ನೃತ್ಯ ಪ್ರದರ್ಶನಗಳನ್ನು ನೀಡುತ್ತಿದ್ದೆ. ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿಯೂ ಭಾಗಹಿಸುತ್ತಿದ್ದೆ, ಸ್ಕೂಲ್‌ನವರನ್ನೆಲ್ಲಾ ಒಂದಾಗಿಸಿ ಕೊರಿಯಾಗ್ರಫಿ ಮಾಡುವುದು ಹೇಗೆ ಎನ್ನುವುದನ್ನು ನಾನು ಆ ದಿನಗಳಿಂದಲೇ ಕಲಿತೆ.

ನಂತರ ನಾನು ಮಲ್ಲೇಶ್ವರದಲ್ಲಿರುವ ಮೈಸೂರು ಎಜುಕೇಷನ್‌ ಸೊಸೈಟಿ ಕಾಲೇಜಿಗೆ ಸೇರಿದೆ. ಅದು ಅತ್ಯುತ್ತಮ ಕಾಲೇಜಾಗಿದ್ದು ಕೇವಲ 90% ಅಂಕ ಗಳಿಸಿದವರಿಗೆ ಮಾತ್ರ ಅಲ್ಲಿ ಪ್ರವೇಶ ಸಿಗುತ್ತಿತ್ತು. ಅಲ್ಲಿಯೂ ನನ್ನ ನೃತ್ಯ ಪ್ರದರ್ಶನಕ್ಕೆ ಒಳ್ಳೆಯ ಪ್ರೋತ್ಸಾಹ ದೊರೆಯಿತು. ಅದುವರೆಗೆ ಕೇವಲ ಅಂಕ ಗಳಿಕೆಯಿಂದ ಸುದ್ದಿಯಾಗಿದ್ದ ಕಾಲೇಜು ಇದೀಗ ಸಾಂಸ್ಕೃತಿಕ ಚಟುವಟಿಕೆಗಳಿಂದಲೂ ಪ್ರಸಿದ್ಧವಾಗುತ್ತಿತ್ತು. ಇದು ಕಾಲೇಜು ಆಡಳಿತ ಮಂಡಳಿಯವರಿಗೂ ಹೆಮ್ಮೆಯ ವಿಚಾರ. ನಾನು ಕಾಲೇಜಿನಲ್ಲಿದ್ದಾಗಲೇ ನೃತ್ಯ ಪ್ರದರ್ಶನಗಳ ಸಲುವಾಗಿ ವಿದೇಶಕ್ಕೂ ತೆರಳಿದ್ದೆ.  ಅದಕ್ಕಾಗಿ ಕಾಲೇಜು, ತರಗತಿಗಳನ್ನು ತಿಂಗಳುಗಟ್ಟಲೆ ಮಿಸ್ ಮಾಡಿಕೊಂಡದ್ದೂ ಉಂಟು! ಆಗೆಲ್ಲ ಕಾಲೇಜಿನ ಯಾರೊಬ್ಬರೂ ನನ್ನ ಗೈರುಹಾಜರಿಗಾಗಿ ನನ್ನನ್ನು ದೂಷಿಸುತ್ತಿರಲಿಲ್ಲ. ನಾನು ಏನಿದ್ದರೂ ಮ್ಯಾನೇಜ್‌ ಮಾಡಿಕೊಂಡು ಹೋಗಬಲ್ಲೇ ಎನ್ನುವುದು ಅವರಿಗೂ ತಿಳಿದಿತ್ತು. ಕಾಲೇಜು ಮುಗಿಸಿದ ಬಳಿಕ ನನ್ನದೇ ಡ್ಯಾನ್ಸ್ ಕಂಪನಿಯನ್ನು ಪ್ರಾರಂಭಿಸಿದೆ.

nritharuthya---mayuri-5

ನಿಮ್ಮ ಪ್ರದರ್ಶನೆಗಳೆಲ್ಲ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿರುತ್ತವೆ. ಬೆಂಗಳೂರು ಅಥವಾ ಕರ್ನಾಟಕದಲ್ಲಿ ಕಡಿಮೆ ಏಕೆ?

ಹೌದು, ನಮ್ಮ ದೇಶದಲ್ಲಿ ಹೆಚ್ಚಾಗಿ ಮುಂಬೈ, ದೆಹಲಿಗಳಲ್ಲಿ ನನ್ನ ನೃತ್ಯ ಕಾರ್ಯಕ್ರಮವಿರುತ್ತದೆ. ಇನ್ನು ಅಮೆರಿಕಾ, ಯುಎಇ, ಯುಕೆ, ಸಿಂಗಾಪುರ್‌ನಂಥ ದೇಶಗಳಲ್ಲಿಯೂ ಪ್ರದರ್ಶನ ನೀಡಿದ್ದೇನೆ. ಆದರೆ ಬೆಂಗಳೂರಿನಲ್ಲಿ ಸಾಮಾನ್ಯ ಜನರಿಗಾಗಿ ಪ್ರದರ್ಶನ ಏರ್ಪಡಿಸಿದ್ದು ಬಹಳ ಕಡಿಮೆ. ಕಾರ್ಪೋರೇಟ್‌ ವಲಯದವರಷ್ಟೇ ಕೆಲವು ಕಾರ್ಯಕ್ರಮಕ್ಕೆ ಆಫರ್‌ ನೀಡುತ್ತಾರೆ. ಸ್ಥಳೀಯವಾಗಿ  ನಮ್ಮ ತಂಡದ ಕಾರ್ಯಕ್ರಮಗಳು ಅಷ್ಟು ಜನಪ್ರಿಯವಾಗದಿರಲು ನಾವು ಬಾಲಿವುಡ್‌ ಡ್ಯಾನ್ಸ್ ಮಾಡದಿರುವುದು, ತೀರಾ ಕ್ಲಾಸಿಕ್ ಡ್ಯಾನ್ಸ್ ಮಾಡುತ್ತಿರುವುದೂ ಕಾರಣವಿರಬೇಕು.

nritharuthya---mayuri-4

ರಿಯಾಲಿಟಿ ಶೋ `ಡ್ಯಾನ್ಸಿಂಗ್ಸ್ಟಾರ್‌’ ಜರ್ನಿ ಹೇಗಿದೆ?

ಕಿರುತೆರೆಯ ರಿಯಾಲಿಟಿ ಶೋನಲ್ಲಿ ನಾನು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು, ಇಲ್ಲಿಯವರೆಗೂ ತುಂಬಾನೆ ಎಂಜಾಯ್ ಮಾಡಿದ್ವಿ. ಅದು ಮುಗೀತಾ ಇರೋದೆ ನಮಗೆಲ್ಲಾ ಬೇಜಾರು. ಪ್ರೋಗ್ರಾಮ್ ಸ್ಟಾರ್ಟ್‌ಆಗೋಕ್ಕೂ ಕೆಲವು ದಿನಗಳ ಹಿಂದೆ ಪರಮ್ ಸರ್‌ (ಪರಮೇಶ್ವರ ಗುಂಡ್ಕಲ್), ನಾನೂ ವಾಕಿಂಗ್‌ ಹೋಗುತ್ತಿರ ಬೇಕಾದರೆ, ಫೋನ್‌ ಮಾಡಿ ನನ್ನನ್ನು ಈ ಕಾರ್ಯಕ್ರಮದ ತೀರ್ಪುಗಾರಳಾಗುವಂತೆ ಕೇಳಿದರು. ಮೊದಲಿಗೆ ನನಗೆ ಈ ಟಿವಿ ರಿಯಾಲಿಟಿ ಶೋ ಬಹಳ ಹೊಸತಾಗಿರೋದ್ರಿಂದ ಸ್ವಲ್ಪ ಗಾಬರಿ ಇತ್ತು. ಮತ್ತೆ ಇಂತಹ ಕಾರ್ಯಕ್ರಮಗಳೆಲ್ಲ ಪ್ರಿಸೆಟಪ್‌ ಅಂತ ಅಂದುಕೊಂಡಿದ್ದೆ. ಅಲ್ಲದೆ, ನನ್ನ ಡೇಲಿ ಷೆಡ್ಯೂಲ್ ನಲ್ಲಿ ಬಿಡುವು ಮಾಡ್ಕೊಂಡು ಬರೋದು ಹೇಗಂತಾನೂ ಚಿಂತೆ ಇತ್ತು.

ರವಿಚಂದ್ರನ್ಹಾಗೂ ಪ್ರಿಯಾಮಣಿ ಜೊತೆಗಿನ ನಿಮ್ಮ ಅನುಭವ?

ತುಂಬಾನೆ ಚೆನ್ನಾಗಿತ್ತು. ಟೋಟಲಿ ಕಲರ್ಸ್‌ ಚಾನೆಲ್ ‌ಟೀಮ್ ಈಸ್‌ ವೆರಿ ಯಂಗ್‌ ಟೀಮ್! ಸೆಟ್‌ನಲ್ಲಿ ಒಂದು ಎಂಥೂಸಿಯಾಸಮ್ ಇದೆ. ನಾವೆಲ್ಲ ನಮ್ಮ ಕೆಲಸವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೆವು. ನಾವು ಮೂವರೂ ಬೇರೆ ಬೇರೆ ಕ್ಯಾಟಗರಿಯಿಂದ ಬಂದವರು. ಸೆಟ್‌ನಲ್ಲಿ ಸೇರಿದಾಗ ತುಂಬಾನೆ ತಮಾಷೆ ಮಾಡ್ತಿದ್ವಿ, ಎಲ್ಲಿಲ್ಲದ ಚರ್ಚೆ ಮಾಡ್ತಿದ್ವಿ.

ನಿಮ್ಮ ಎಲ್ಲಾ ಕೆಲಸಗಳಿಗೆ ನಿಮ್ಮ ಪತಿ ರಘು ದೀಕ್ಷಿತ್ ಸಹಕಾರ ಹೇಗಿತ್ತು?

ಅವರು ತುಂಬಾನೆ ಸಪೋರ್ಟಿವ್‌. ಅವರ ಅಪೇಕ್ಷೆಗೆ ಬೆಲೆ ಕೊಟ್ಟು ನಾನು ಈ ಕಾರ್ಯಕ್ರಮದ ತೀರ್ಪುಗಾರಳಾದೆ. ಪಾರ್ಟ್‌ನರ್‌ಆಗಿ ರಘು ತುಂಬಾನೆ ಸಪೋರ್ಟ್‌ ಮಾಡ್ತಿದ್ದಾರೆ. ಈಗಲೂ ಕಾರ್ಯಕ್ರಮ ನೋಡಿ ತಮ್ಮ ಸಲಹೆ ಸೂಚನೆ ನೀಡುತ್ತಾರೆ.

ನಿಮ್ಮ ಸಹೋದರಿ ಮಾಧುರಿಯವರ ಬಗ್ಗೆ……

ಮಾಧುರಿ ನಮ್ಮ ತಂಡದ ಬೆನ್ನೆಲುಬಿದ್ದಂತೆ. ಅವರು ಪೇಂಟರ್‌ ಹಾಗೂ ಡ್ಯಾನ್ಸರ್‌ ಎರಡೂ ಆಗಿದ್ದಾರೆ. ನಮ್ಮ ಸಂಸ್ಥೆಯ ಎಲ್ಲಾ ಎಜುಕೇಷನ್‌ ಬೇಸ್‌ ಕೆಲಸಗಳನ್ನು ಅವರು ನೋಡಿಕೊಳ್ಳುತ್ತಿದ್ದಾರೆ. ಒಬ್ಬ ಯಶಸ್ವಿ ವ್ಯಕ್ತಿ ಎನಿಸಲು ಕುಟುಂಬ, ಒಡಹುಟ್ಟಿದವರು ಎಲ್ಲರ ಸಹಕಾರ ತುಂಬಾನೆ ಮುಖ್ಯ. ಅದು ನನಗೆ ದೊರೆತಿದೆ.

ಇಂದಿನ ನೃತ್ಯ ಶೈಲಿ ನಿಮಗೆ ತೃಪ್ತಿ ತಂದಿದೆಯೇ?

ನೀವಂದುಕೊಂಡಂತೆ ರಿಯಾಲಿಟಿ ಶೋಗಳಲ್ಲಿ ಗೆದ್ದರೆ ಅದೇ ಯಶಸ್ಸು ಎನಿಸದು. ಹಾರ್ಡ್‌ ವರ್ಕ್‌ ಈಸ್‌ ಮೋರ್‌ ಇಂಪಾರ್ಟೆಂಟ್! ನೃತ್ಯವಾಗಲಿ, ಇನ್ನಾವುದೇ ಕಲೆಯಾಗಲಿ ಕಲಿತು ಮುಗಿಯಿತು ಎನ್ನುವಂತಿಲ್ಲ. ಡಿಗ್ರಿ ಸಿಕ್ಕಿದ ನಂತರ ಓದಬೇಕಾಗಿಲ್ಲ ಎನ್ನುವುದು ಸರಿಯಲ್ಲ. ಇನ್ಸ್ ಟೆಂಟ್‌ ಸಕ್ಸಸ್‌ ಈಸ್‌ ನಾಟ್‌ ಪರ್ಮನೆಂಟ್‌! ಎಲ್ಲಾ ಕಲೆಗಳಲ್ಲಿಯೂ ಕ್ವಾಲಿಟಿ ಅತ್ಯಂತ ಪ್ರಮುಖ ಅಂಶವಾಗಿರುತ್ತದೆ.

ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿ.

ಮುಂದಿನ ದಿನಗಳಲ್ಲಿ ಒಂದು ಬಾಲಿವುಡ್‌ ಡ್ಯಾನ್ಸ್ ಪ್ರಾಜೆಕ್ಟ್ ಮಾಡಲಿದ್ದೇನೆ. ಅದು ಬಹಳ ದೊಡ್ಡ ಪ್ರಾಜೆಕ್ಟ್ ಆಗಿದೆ. ಮತ್ತೆ ಅದು ಬಾಲಿವುಡ್‌ಗೆ ಸಂಬಂಧಿಸಿದರೂ ನಾವಲ್ಲಿ ಬಾಲಿವುಡ್‌ ಡ್ಯಾನ್ಸ್ ಮಾಡಲ್ಲ. ಬದಲಿಗೆ ನಮ್ಮದೇ ನೃತ್ಯ ಪ್ರದರ್ಶನ ನೀಡುತ್ತೇವೆ. ಅದೇ ಅಲ್ಲಿನ ಸ್ಪೆಷಾಲಿಟಿ!

ನಿಮಗೆ ಸಿನಿಮಾ ಕೊರಿಯಾಗ್ರಫಿ ಮಾಡುವುದಕ್ಕಾಗಿ ಬಾಲಿವುಡ್ಅಥಾ ಇನ್ನಾವ ಭಾಷೆಯಿಂದಾದರೂ ಆಹ್ವಾನ ಬಂದಿತ್ತೆ?

ಬಹಳಷ್ಟು ಬಂದಿತ್ತು. ರೆಗ್ಯುಲರ್‌ ವರ್ಕ್ಸ್ ನಿಂದಾಗಿ ಆಹ್ವಾನಗಳನ್ನು ನಾನು ಒಪ್ಪಿಕೊಳ್ಳಲಿಲ್ಲ. ನನಗೆ ಸಿನಿಮಾದ ಕಥೆ ಇಷ್ಟವಾಗಬೇಕು ಮತ್ತು ಕೊರಿಯಾಗ್ರಫಿಯಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಆಗ ಮಾತ್ರ ನಾನು ಸಿನಿಮಾಗೆ ಕೊರಿಯಾಗ್ರಫಿ ಮಾಡಲು ಒಪ್ಪುತ್ತೇನೆ. ಮಾಮೂಲಿ ಐಟಮ್ ಸಾಂಗ್‌ಗಳಿಗಾಗಿ ನೃತ್ಯ ಕಂಪೋಸ್‌ ಮಾಡೋಕೆ ನಾನು ಕೈಹಾಕಲ್ಲ. ಅದನ್ನು ಮಾಡೋಕೆ ಬೇಕಾದಷ್ಟು ಜನ ಸಿಕ್ತಾರೆ. ನನ್ನ ದಾರೀನೇ ಬೇರೆ. ಇದುವರೆಗೂ ಅಂತಹ ಯಾವ ಅವಕಾಶ ಸಿಕ್ಕಿಲ್ಲ.

ನಿಮ್ಮ ನೃತ್ಯ ಕಾರ್ಯಕ್ರಮ, ಕಂಪೋಸಿಂಗ್ಎಲ್ಲವನ್ನೂ ಬಿಟ್ಟು, ನಿಮ್ಮ ವಿರಾಮದ ವೇಳೆಯಲ್ಲಿ ಏನು ಮಾಡುತ್ತೀರಿ?

ನಿಜವಾಗಿ ನನಗೆ ವಿರಾಮವೇ ಸಿಗಲ್ಲ. ಒಂದು ವೇಳೆ ಸಿಕ್ಕಿದಲ್ಲಿ ಗಾರ್ಡ್‌ನಿಂಗ್‌ ಮಾಡ್ತೀನಿ, ಮೂವೀಸ್‌ ನೋಡೋದು, ಬುಕ್ಸ್ ಓದೋದು ಮಾಡ್ತೀನಿ.

ನೀವು ನಡೆಸಿಕೊಂಡು ಬರುತ್ತಿರುವ ಡ್ಯಾನ್ಸ್ ವರ್ಕ್ಶಾಪ್ಬಗ್ಗೆ ಹೇಳಿ.

ಅದು ಸಹ ನಮ್ಮ ಟ್ರೂಪ್‌ನವರೇ ಮಾಡೋದು. ಜಯನಗರ, ವೈಟ್‌ಫೀಲ್ಡ್ ಗಳಲ್ಲಿ ರೆಗ್ಯುಲರ್‌ ಡ್ಯಾನ್ಸ್ ವರ್ಕ್‌ ಶಾಪ್‌ಗಳು ನಡೆಯುತ್ತವೆ. ಇಲ್ಲಿ ವರ್ಕ್‌ಶಾಪ್‌ ಎಂದರೆ ರೆಗ್ಯುಲರ್‌ ಕ್ಲಾಸಸ್‌ ಆಗಿರುತ್ತೆ. ಮಕ್ಕಳಿಗೆ ಮಾತ್ರ ವರ್ಕ್‌ ಶಾಪ್‌ ಮಾಡುತ್ತೇವೆ. ಆದರೆ ಮುಂದಿನ ದಿನದಲ್ಲಿ ಮಕ್ಕಳಿಗೂ ರೆಗ್ಯುಲರ್‌ ಆಗಿ ಕ್ಲಾಸಸ್‌ ಪ್ರಾರಂಭಿಸಬೇಕೆನ್ನುವ ಉದ್ದೇಶವಿದೆ. ಇದಕ್ಕೆ ತುಂಬಾನೇ ಬೇಡಿಕೆ ಇದೆ. ನಮಗೆ ಹದಿನೈದು ವರ್ಷ ಮೇಲ್ಪಟ್ಟ ಮಕ್ಕಳು ಬೇಕು. ಏಕೆಂದರೆ ದೇರ್‌ ಬಾಡಿ ಈಸ್‌ ಪ್ರಿಪೇರ್ಡ್ ಟು ಚಾಲೆಂಜ್‌! ಕ್ಲಾಸ್‌ತುಂಬಾನೆ ಫಿಸಿಕಲಿ ಡಿಮ್ಯಾಂಡಿಂಗ್‌ ಆಗಿರುತ್ತದೆ. ನಮ್ಮ ಕ್ಲಾಸ್‌ನಲ್ಲಿ ಬರೋ ಮಕ್ಕಳಿಗೆ ಯೋಗ, ಮಾರ್ಷಲ್ ಆರ್ಟ್‌, ಕ್ಲಾಸಿಕ್‌ಡ್ಯಾನ್ಸ್, ಬಾಡಿ ಕಂಡೀಶನಿಂಗ್‌ ಒಳಗೊಂಡಿರುತ್ತದೆ. ಫಿಟ್ನೆಸ್‌ ಲೆವೆಲ್ ‌ಡ್ಯಾನ್ಸಿಂಗ್‌ಗೆ ನಮ್ಮಲ್ಲಿ ಬಹಳ ಮಹತ್ವ ನೀಡುತ್ತೇವೆ. ನಮ್ಮ ಕ್ಲಾಸ್‌ನಲ್ಲಿ ಒಂದು ಕಂಟೆಂಪರರಿ ಡ್ಯಾನ್ಸ್ ಸಿಲೆಬಸ್‌ನ್ನು ಫಾಲೋ ಮಾಡುತ್ತೇವೆ.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚುತ್ತಿರುವ ಮಯೂರಿ, ಕನ್ನಡನಾಡಿಗೆ ಇನ್ನೂ ಹೆಚ್ಚಿನ ಹಿರಿಮೆ ತರಲೆಂದು ಅವರ ಕನಸುಗಳು ಕೈಗೂಡಲೆಂದು ಗೃಹಶೋಭಾ ಹಾರೈಸುತ್ತಾಳೆ.

– ಅಶೋಕ್‌ ಎಂ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ