ಕಳೆದ ರಾತ್ರಿ ಪತಿ ನವೀನ್‌ ನಡೆದುಕೊಂಡ ರೀತಿಯಿಂದ ಆಶಾ ಬಹಳ ಕೋಪಗೊಂಡಿದ್ದಳು. ಅವಳು ಮುಖ್ಯಮಂತ್ರಿಗಳ ಪ್ರಮುಖ ಪಿ.ಎ ಆಗಿದ್ದಳು. ಅವರ ಪ್ರೆಸ್‌ ಕಾನ್‌ಫರೆನ್ಸ್ ಇರುವಾಗ, ಜನ ಸಂಪರ್ಕ ಅಧಿಕಾರಿಯಾಗಿ ಪಬ್ಲಿಕ್‌ಗೆ ಜವಾಬು ನೀಡಲಾಗದೆ, ಗಂಡ ಫೋನ್‌ ಮಾಡಿ ಕರೆದನೆಂದು ತಕ್ಷಣ ಮನೆಗೆ ಓಡಿಬರಲಾಗುವುದೇ?

ಆದರೆ ನವೀನನಿಗೆ ಇಂಥದ್ದನ್ನೆಲ್ಲ ಕೇಳಿಸಿಕೊಳ್ಳಲು ಸ್ವಲ್ಪ ಸಹನೆ ಇರಲಿಲ್ಲ. ಅಂತೂ ಅವಳು ಕೆಲಸ ಮುಗಿಸಿ ಮನೆಗೆ ಬಂದು ಇಳಿಯುವಷ್ಟರಲ್ಲಿ 11 ಗಂಟೆ ದಾಟಿತ್ತು. ಅವಳು ಏನು ತಾನೇ ಮಾಡಿಯಾಳು? ಮುಖ್ಯಮಂತ್ರಿಗಳಿಗೆ ವಿದಾಯ ಕೋರಿ ಹೊರಡುವಷ್ಟರಲ್ಲಿ 10 ದಾಟಿತ್ತು. ಬೆಂಗಳೂರಿನ ಈ ಹಾಳು ಟ್ರಾಫಿಕ್‌ ಮಧ್ಯೆ ಸಿಕ್ಕಿಕೊಂಡು ಕಾರಿನಲ್ಲಿ ಮನೆಗೆ ಬಂದು ಸೇರಲು 1 ಗಂಟೆ ಕಾಲ ಬೇಡವೇ?

ನವೀನ್‌ ನಡುನಡುವೆ ಕೋಪಗೊಂಡು ಸಿಡುಕುತ್ತಾ ಫೋನ್‌ ಮಾಡುತ್ತಿದ್ದ. ಪ್ರೆಸ್‌ ಮೀಟ್‌ ಮುಗಿದು ಊಟ ಇದ್ದರೂ, ಅವಳಿಗೆ ಒಂದು ತುತ್ತೂ ಗಂಟಲಲ್ಲಿ ಇಳಿಯದೆ ಬೇಗ ಎದ್ದು ಹೊರಟಿದ್ದಳು. ದಿನವಿಡೀ ದುಡಿದು ಸಾಕಾಗಿ, ಹಸಿದ ಹೊಟ್ಟೆಯಲ್ಲಿ ಅವಳು ನಡುರಾತ್ರಿ ಮನೆ ಸೇರಿದರೆ ಅವನ ಸಿಡುಕಾಟಕ್ಕೆ ಉತ್ತರಿಸಬೇಕಿತ್ತು.

ಇದೇ ಮದುವೆಗೆ ಮೊದಲಾಗಿದ್ದಿದ್ದರೆ ಅಷ್ಟು ತಡವಾಗಿ ಮನೆಗೆ ಬಂದ ಮಗಳನ್ನು ತವರಿನಲ್ಲಿ ಅಮ್ಮ ಎಷ್ಟು ಪರಿಯಲ್ಲಿ ಸಂತೈಸುತ್ತಿದ್ದರು….. ಅಪ್ಪಾಜಿ ಎಷ್ಟೋ ಸಲ ಹೊರಗಿನ ಮೀಟಿಂಗ್‌ ಸ್ಪಾಟ್‌ಗೆ ಬಂದು, ಕಾದು ಅವಳನ್ನು ಮನೆಗೆ ಕರೆತರುತ್ತಿದ್ದರು. ಹಸಿವಿಲ್ಲ ಬೇಡ ಎಂದರೂ ಕೇಳದೆ, ತಾಯಿ ಮೊಸರನ್ನ ಕಲಸಿ ಕೈಗೆ ತುತ್ತು ಹಾಕುತ್ತಿದ್ದರು. ಆದರೆ ಇಲ್ಲಿ…..?

ಬಾಗಿಲು ತೆರೆದವನೇ ಪತಿ ಸಿಡುಕಿದ್ದ, “ಇದಾ ಮನೆಗೆ ಬರುವ ಹೊತ್ತು? ರಾತ್ರಿ 12 ಗಂಟೆ ಆಗಿದೆ ಎಂಬ ಅರಿವಿದೆಯೇ?”

“ಇವತ್ತು ಸಿ.ಎಂ ಅವರ ಪ್ರೆಸ್‌ ಕಾನ್‌ಫರೆನ್ಸ್ ಇತ್ತು ಅನ್ನೋದು ನಿಮಗೆ ಚೆನ್ನಾಗೇ ಗೊತ್ತಿದೆಯಲ್ಲವೇ? ನಿಮ್ಮ ಕೋಪಕ್ಕೆ ಹೆದರಿ ನಾನು ಅಲ್ಲಿ ಊಟ ಸಹ ಮಾಡದೆ ಹಾಗೇ ಓಡಿ ಬಂದೆ ಗೊತ್ತಾ? ಇಲ್ಲಿ ನೀವು ನೋಡಿದರೆ…… ಒಳ್ಳೆ…..” ಆಶಾಳಿಗೆ ಅಳು ಬಂದುಬಿಟ್ಟಿತ್ತು.

“ಬಿಡು ಬಿಡು….. ನಿನಗೆಲ್ಲಿಯ ಹಸಿವು….. ಅಲ್ಲಿ ನಿನ್ನನ್ನು ಕಂಡು ಅಭಿಮಾನಿಸುವವರ ಸಂಖ್ಯೆ ಅಪಾರವಾಗಿರುವಾಗ ಹೊಟ್ಟೆಯ ಹಸಿವಿಗೆ ಅಕಾಶವೆಲ್ಲಿ? ನಾನೂ ಬೇಕಾದಷ್ಟು ಪ್ರೆಸ್‌ ಕಾನ್‌ಫರೆನ್ಸ್ ಅಟೆಂಡ್‌ ಮಾಡಿದ್ದೀನಿ ಬಿಡು, ಹೆಂಗಸರನ್ನು ಅದರಲ್ಲಿ ಯಾಕೆ ಸೇರಿಸಿಕೊಳ್ಳುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ…… ಆ ಸಭೆಯ ಶೋಪೀಸ್‌ ಆಗಿದ್ದೆ ಅನ್ನು……”

“ಥೂ….. ಇಂಥ ನೀಚ ಮಾತುಗಳನ್ನು ಆಡುವುದಕ್ಕೆ ನಿಮಗೆ ಹೇಗಾದರೂ ಮನಸ್ಸು ಬರುತ್ತದೆ? ಕಟ್ಟಿಕೊಂಡ ಹೆಂಡತಿ ಅನ್ನುವ ಅಭಿಮಾನವಿಲ್ಲದೆ ಬಾಯಿಗೆ ಬಂದಂತೆ ಮಾತನಾಡಬೇಡಿ….. ಕೆಲಸಕ್ಕೆ ಅಂತ ಹೊರಗೆ ಹೋದ ಮೇಲೆ ಸಮಯದ ಕಂಟ್ರೋಲ್ ನಮ್ಮ ಕೈಯಲ್ಲಿರುತ್ತೇನು…..?” ಒಲ್ಲದ ಗಂಡ ಸದಾ ಮೊಸರಿನಲ್ಲಿ ಕಲ್ಲು ಹುಡುಕುವವನೆಂದು ವಾದ ಬೆಳೆಸದೆ ಒಳಗೆ ಹೋದಳು.

ಇಂಥ ವ್ಯಂಗ್ಯದ ಮಾತುಗಳಿಂದಾಗಿ ಅವಳ ಹಸಿವು ಅಲ್ಲೇ ಸತ್ತುಹೋಯಿತು. ಸಿಡಿಯುತ್ತಿದ್ದ ತಲೆ ಒತ್ತಿಕೊಳ್ಳುತ್ತಾ ಒಂದಿಷ್ಟು ಬಿಸಿ ಬಿಸಿ ಕಾಫಿ ಮಾಡಿ, ಕೈಯಲ್ಲಿ ಕಪ್‌ ಹಿಡಿದು ಮಕ್ಕಳ ಕೋಣೆಗೆ ಹೋದಳು. ಇಬ್ಬರು ಮಕ್ಕಳೂ ಗಾಢ ನಿದ್ದೆಯಲ್ಲಿ ಮುಳುಗಿದ್ದರು. ಆಗ ಆಶಾಳಿಗೆ ಉಸಿರು ಬಂತು. ನವೀನನ ಕೋಪ, ಸಿಟ್ಟು ದಿನೇದಿನೇ ಮಿತಿಮೀರುತ್ತಿತ್ತು. ಯಾವುದೇ ಅಫಿಶಿಯಲ್ ಕಾಲ್ ‌ಇರಲಿ, ಅಕಸ್ಮಾತ್‌ ಅವನು ಮನೆಯಲ್ಲಿದ್ದರೆ, ಇವಳ ಮೊಬೈಲ್‌ನ್ನು ತಾನೇ ತೆಗೆದುಕೊಂಡು ಕಾಲ್ ‌ಮಾಡಿದವರ ಜಾತಕ ಜಾಲಾಡಿಬಿಡುತ್ತಿದ್ದ. ಯಾರು? ಎಲ್ಲಿಂದ? ಯಾವಾಗ? ಎನ್ನುತ್ತಿದ್ದ. ಫೋನ್‌ ಮಾಡಿದವರು ಯಾಕಾಗಿ ಮಾಡಿದೆವೋ ಎಂದು ಮತ್ತೊಮ್ಮೆ ಮಾಡುತ್ತಲೇ ಇರಲಿಲ್ಲ.

ಕಷ್ಟ ಸುಖ ಅರಿತವರು ಸುಮ್ಮನಾಗುತ್ತಿದ್ದರು. ಆದರೆ ಕೆಲವರು ವ್ಯಂಗ್ಯವಾಡಬೇಕೆಂದೇ,’ ಈ ಮೇಡಂಗೆ ಮಾತ್ರ ಫೋನ್‌ಮಾಡಬಾರದಪ್ಪ…… ಯಜಮಾನ್ರು ಕ್ಲಾಸ್‌ ತಗೊಂತಾರೆ ಕ್ಲಾಸು!’ ಎಂದು ಎಲ್ಲರಿಗೂ ಕೇಳಿಸುವಂತೆ ಹೇಳುವರು. ನವೀನ್‌ ಇವಳ ಜೇಲರ್‌ ಎಂಬಂತೆ ಲೇವಡಿ ಮಾಡುವರು, ಕೆಲವರು ಅಯ್ಯೋ ಪಾಪ ಎಂಬಂತೆ ನೋಡುವರು.

ಗಂಡ ಇಷ್ಟೆಲ್ಲ ಕೂಗಾಡಿದ ಮಾತುಗಳನ್ನು ಮಕ್ಕಳು ಕೇಳಿಸಿಕೊಂಡಿದ್ದರೆ ಏನು ಗತಿ ಎಂದು ದಿಗ್ಭ್ರಮೆಗೊಳಗಾಗುತ್ತಿದ್ದಳು. ಅವರ ದೃಷ್ಟಿಯಲ್ಲಿ ಇವಳ ಸ್ಥಿತಿ ಏನಾಗಬೇಡ? ಇದೇ ರೀತಿ ಮುಂದುವರಿದರೆ ಅವಳ ಮೇಲೆ ನಡೆಯುತ್ತಿದ್ದ ಶೋಷಣೆಗೆ ಮಕ್ಕಳು ಮೂಕಪ್ರೇಕ್ಷಕರಾಗಿ ಸಾಕ್ಷಿಯಾಗುವುದು ತಪ್ಪದು. ಕಾಫಿ ಗುಟುಕರಿಸುತ್ತಾ ಅವಳೊಂದು ನಿರ್ಧಾರಕ್ಕೆ ಬಂದಳು, ಸಹನೆಗೊಂದು ಮಿತಿ ಇದೆ, ಸಾಕು ಈ ಸಂಸಾರ!

ಈ ಮನುಷ್ಯನ ಜೊತೆ ಇನ್ನೂ ಏಗಿ ಏಗಿ ತಾನು ಅನ್ನಿಸಿಕೊಳ್ಳುವುದು ಸಾಕು. ಗಂಡ ಆದ ಮಾತ್ರಕ್ಕೆ ಈ ರೀತಿ ಮೃಗೀಯವಾಗಿ ವರ್ತಿಸುವುದೇ? ತನ್ನ ಪ್ರತಿಯೊಂದು ಪ್ರಾಮಾಣಿಕ ವ್ಯವಹಾರಕ್ಕೂ ಮನೆಗೆ ಬಂದು ಇಲ್ಲಿ ವಿವರಣೆ ನೀಡಬೇಕಿತ್ತು. ತನ್ನನ್ನು ಪ್ರತಿಸಲ ಕೆಳಮಟ್ಟದಲ್ಲಿ ನಿಲ್ಲಿಸಲು ಎಲ್ಲದಕ್ಕೂ ಪ್ರಶ್ನೆ ಮೇಲೆ ಪ್ರಶ್ನೆ…… ಮಕ್ಕಳೆದುರು ತನ್ನನ್ನು ಖಳನಾಯಕಿಯಂತೆ ನಿಲ್ಲಿಸಿಬಿಡುತ್ತಿದ್ದ. ಇದೇ ಆಲೋಚನೆಗಳಲ್ಲಿ ಅವಳಿಗೆ ಯಾವಾಗ ನಿದ್ದೆ ಬಂತೋ ತಿಳಿಯಲೇ ಇಲ್ಲ.

ಮಾರನೇ ಬೆಳಗ್ಗೆ ಎಂದಿನಂತೆ ದಿನಚರಿ ಆರಂಭ. ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಕಳುಹಿಸಿದ್ದಾಯಿತು. ಹಿಂದಿನ ರಾತ್ರಿ ಏನೂ ನಡೆಯಲೇ ಇಲ್ಲವೆಂಬಂತೆ ನವೀನ್‌ ಮಾಮೂಲಿಯಾಗಿದ್ದ. ಆಶಾ ಮಾತ್ರ ಬಿಗುವಾಗೇ ಇದ್ದಳು.

9 ಗಂಟೆ ಆದರೂ ಆಶಾ ಆಫೀಸಿಗೆ ಸಿದ್ಧಳಾಗದೆ ಹಾಗೇ ಇದ್ದದ್ದು ಕಂಡು ಕೇಳಿದ, “ಇದೇನು ಇವತ್ತು ಆಫೀಸಿಗೆ ಹೋಗುವುದಿಲ್ಲವೇ? ರಜಾ ಯಾಕೆ ಹಾಕಿದೆ?”

“ನಾನೇ ರಜಾ ಹಾಕಿದ್ದೀನಿ!”

“ನಿನ್ನ ಆರೋಗ್ಯ ಸರಿಯಾಗೇ ಇದೆ…… ಮತ್ತೇಕೆ ರಜೆ ಹಾಕಬೇಕು?”

“ಮೈ ಚೆನ್ನಾಗಿದ್ದರೆ ಸಾಲದು…… ಮನಸ್ಸೂ ಸರಿ ಇರಬೇಕು.”

“ಗೊತ್ತಾಯ್ತು ಬಿಡು…… ನಿನ್ನ ಮನಸ್ಸು ಏನು ಲೆಕ್ಕ ಹಾಕುತ್ತಿದೆ ಅಂತ. ಯಾಕೆ ಸುಮ್ಮನೆ ಒಂದು ರಜೆ  ಹಾಳು ಮಾಡಿಕೊಳ್ತೀಯಾ? ಬೇಗ ರೆಡಿಯಾಗು, ನಾನೇ ಡ್ರಾಪ್‌ ಮಾಡ್ತೀನಿ,” ಎಂದ.

“ಖಂಡಿತಾ ಬೇಡ! ಇವತ್ತು ನಾನು ಆಫೀಸಿಗೆ ಹೋಗುವ ಮೂಡ್‌ನಲ್ಲಿ ಇಲ್ಲ……” ಅವಳ ದನಿಯಲ್ಲಿದ್ದ ಖಾತ್ರಿ ಗಮನಿಸಿ ಅವನು ಕಾರಿನ ಕೀ ಕೈಗೆತ್ತಿಕೊಳ್ಳುತ್ತಾ, “ಸರಿ, ನಿನ್ನಿಷ್ಟ……” ಎಂದು ಹೊರಟುಬಿಟ್ಟ.

ಎಲ್ಲರೂ ಹೊರಟ ಮೇಲೆ ಅವಳು ಮನೆಯ ಕಾಂಪೌಂಡ್‌ನಲ್ಲಿ ಶತಪಥ ಹೆಜ್ಜೆ ಹಾಕಿದಳು. ಅವಳ ಮನಸ್ಸು ಯಾವ ನಿರ್ಧಾರಕ್ಕೂ  ಬರಲಾಗಲಿಲ್ಲ. ಗಂಡನ ಕಿರಿಕಿರಿಯಿಂದ ಕೆಲಸ ಬಿಟ್ಟು ಮನೆಯಲ್ಲೇ ಉಳಿದರೆ….. ನಾಳೆ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ದೊಡ್ಡ ಮೊತ್ತದ ಹಣ ಬೇಕೇ ಬೇಕಲ್ಲ…..? ಅಷ್ಟಕ್ಕೂ ತಾನು ಕೆಲಸ ಬಿಟ್ಟ ಮೇಲೆ ನವೀನ್‌ ಸ್ವಭಾವ ಬದಲಾಗುತ್ತೆ ಎಂದು ಏನು ಗ್ಯಾರಂಟಿ? ಕೆಲಸಕ್ಕೆ ಲಾಯಕ್ಕಿಲ್ಲದವಳು ಅಂತ ತಿನ್ನುವ ಅಗುಳಗುಳಿಗೂ ಲೆಕ್ಕ ಹಾಕುತ್ತಾ ಕೂತರೆ? ಬಾಣಲೆಯಿಂದ ಬೆಂಕಿಗೆ ಜಾರಿದ ಸ್ಥಿತಿಯಾಗುತ್ತದಷ್ಟೆ. ಬೇಕೆಂದೇ ಜಗಳ ತೆಗೆಯುವವರಿಗೆ ನೆಪ ಸಹ ಬೇಡವಂತೆ. ನವೀನನ ತಂದೆಯ ಇಂಥದೇ ಗುಣದಿಂದಾಗಿ ತನ್ನತ್ತೆ ಎಷ್ಟು ಕಷ್ಟಪಡುತ್ತಾ ಜೀವನ ಸವೆಸಿದ್ದರು ಎಂದು ಅವಳಿಗೆ ಚೆನ್ನಾಗಿ ನೆನಪಿದೆ. ಒಂದೊಂದು ಪೈಸೆಗೂ ಆಕೆಯ ಕಣ್ಣೀರಿಳಿಸುತ್ತಿದ್ದರು. ತಮಗೆ ಬೇಕೆನಿಸಿದಾಗ ಮಾತ್ರ ಸಾವಿರಾರು ರೂ. ಬೇಕಾಬಿಟ್ಟಿ ಖರ್ಚು ಮಾಡಿಬಿಡುವರು.

ek-safar-aise-bhi-story2

ನವೀನ್‌ ದೃಷ್ಟಿಯಲ್ಲಿ ತಂದೆಯೇ ಪರಮ ಗುರು. ತಂದೆಯ ಮಾತಿಗೆ ಚಾಚೂ ತಪ್ಪದೆ ನಡೆದುಕೊಳ್ಳುವ ತಾಯಿಯನ್ನು ಕಂಡೇ ಬೆಳೆದಿದ್ದ ನವೀನ್‌ಗೆ ಹೆಣ್ಣೆಂದರೆ ಸದಾ ದಾಸಿಯಾಗಿರತಕ್ಕವಳು ಎಂಬ ಕೀಳರಿಮೆ ಇತ್ತು.  ಮುಂದೇನು ಕ್ರಮ ಕೈಗೊಳ್ಳಲಿ ಎಂದು ಅವಳು ಯೋಚಿಸಿದಷ್ಟೂ ಸಮಸ್ಯೆ ಇನ್ನಷ್ಟು ಸಿಕ್ಕಾಗುತ್ತಿತ್ತು. ತಾನು ಇದೇ ರೀತಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದರೆ ಆದಷ್ಟು ಬೇಗ ಹುಚ್ಚಿಯಾಗುತ್ತೇನೆ ಎನಿಸಿತು. ಸಮಾಜದ ಪ್ರತಿ ಮೂಲೆಯಲ್ಲೂ ಗೌರವಿಸಿ ಆದರಿಸಲ್ಪಡುತ್ತಿದ್ದ ಆಶಾ ತನ್ನ ಮನೆಯಲ್ಲಿ ಮಾತ್ರ ಗಂಡನಿಂದ ಸದಾ ನಿರ್ಲಕ್ಷ್ಯ, ಅವಹೇಳನಗಳಿಗೆ ಗುರಿಯಾಗುತ್ತಿದ್ದಳು. ಹೀಗೆ ಅನಗತ್ಯವಾಗಿ ತಾನು ಅವಮಾನಕ್ಕೆ ಒಳಗಾಗಬೇಕು ಏಕೆ ಎಂದು ಅಸಹಾಯಕತೆಯಿಂದ ಅವಳಿಗೆ ಕಣ್ತುಂಬಿ ಬಂತು.

ಹೀಗೆ ದೀರ್ಘಾಲೋಚನೆಯಲ್ಲಿ ಮುಳುಗಿದ್ದವಳು ಗಡಿಯಾರ ನೋಡುತ್ತಾಳೆ…. ಅದಾಗಲೇ ಮಧ್ಯಾಹ್ನ 1 ಗಂಟೆ ಆಗಿಹೋಗಿತ್ತು. ದಡಬಡಾಯಿಸಿ ಎದ್ದು ಮೊದಲು ಸ್ನಾನ ಮುಗಿಸಿ ಬಂದಳು. ಮಕ್ಕಳ ಮುಂದೆ ಅವಳು ತನಗಾಗುವ ಅಪಮಾನದ ಸುಳಿವು ಕೊಡುತ್ತಿರಲಿಲ್ಲ. ಸಾಧಾರಣ ಕಾಟನ್‌ ಸೀರೆಯುಟ್ಟು ಅಲಂಕರಿಸಿಕೊಂಡು ಮಕ್ಕಳಿಗಾಗಿ ತರಕಾರಿ, ಹಣ್ಣಿನ ಸಲಾಡ್‌, ನಿಂಬೆ ಪಾನಕ ಮಾಡಿಟ್ಟಳು.

ಮಕ್ಕಳಿಬ್ಬರೂ ಮಧ್ಯಾಹ್ನ ಮನೆಗೆ ಬಂದಾಗ ಅಮ್ಮ ಮನೆಯಲ್ಲೇ ಇರುವುದನ್ನು ಕಂಡು ಸಂತೋಷಪಟ್ಟರು. ರಜೆ ಇಲ್ಲದಿದ್ದ ದಿನ ಅಮ್ಮ ಮನೆಯಲ್ಲಿದ್ದರೆ ಅದು ಅವರಿಗೆ ಒಂದು ಹಬ್ಬದಂತೆ! ಮೂವರೂ ಊಟ ಮುಗಿಸಿದ ನಂತರ, ಸ್ವಲ್ಪ ಹೊತ್ತು ಟಿವಿ ನೋಡಿ, ಹೋಮ್ ವರ್ಕ್‌ ಮಾಡಲು ಕುಳಿತರು.

ಅದೆಲ್ಲ ಮುಗಿದ ಮೇಲೆ ಮಕ್ಕಳು ಸಂಜೆ ಆಟ ಮುಗಿಸಿಕೊಂಡು ಬಂದರು. ಅಷ್ಟರಲ್ಲಿ ಆಶಾ ಲೈಬ್ರೆರಿಗೆ ಹೋಗಿ ತನಗೆ ಬೇಕಾದ 2-3 ಕಾದಂಬರಿ ತಂದಿದ್ದಳು. ಆಮೇಲೆ ಮಕ್ಕಳಿಗೆ ಹಾಲು ಬೆರೆಸಿಕೊಟ್ಟು, ತಾನು ಕಾಫಿ ಕುಡಿಯುತ್ತಾ ಟಿವಿ ಆನ್‌ ಮಾಡಿದಳು. ಯಾವುದೋ ಸಿನಿಮಾ ಬರುತ್ತಿತ್ತು. ಅಲ್ಲಿಯೂ ನಾಯಕಿ ಗಂಡನ ಉಪೇಕ್ಷೆಗೆ ಒಳಗಾಗಿ ಹಿಂಸೆ ತಾಳಲಾರದೆ ಗರ್ಭವತಿ ಆಗಿದ್ದಳು ಮುಂದೆ ಮಗುವಿನ ಜವಾಬ್ದಾರಿ ತನಗೆ ಇರಲಿ ಎಂದು ಮನೆ ಬಿಟ್ಟು ಹೊರಟುಬಿಡುತ್ತಾಳೆ…. ಆಗ ಗಂಡ ಶಾಕ್‌ ಆಗಿ ನಿಂತುಬಿಡುತ್ತಾನೆ.

ಚಿತ್ರ ನೋಡುತ್ತಿದ್ದ ಹಿರಿಯ ಮಗ ಅಪೂರ್ವ ಹೇಳಿದ, “ಅಮ್ಮಾ, ಇಂಥ ಗೋಳು ಸಿನಿಮಾ ನೋಡಬೇಡಮ್ಮ…. ಇದರಿಂದ ಮನಸ್ಸಿಗೆ ಬೇಸರವಾಗುತ್ತದೆ.”

“ಬೇಸರವಾಗುತ್ತೆ ಅನ್ನುವ ಕಾರಣಕ್ಕೆ ಇಂಥ ಸಿನಿಮಾ ನೋಡಬಾರದು ಅಂತೀಯಾ?” ತಾಯಿ ಕೇಳಿದಳು.

“ಇಂಥವೆಲ್ಲ ನಿಜಕ್ಕೂ ವೇಸ್ಟ್ ಐಡಿಯಾಗಳು…..” ಅಪೂರ್ವ ಬೇಸರದಿಂದ ಗೊಣಗಿದ.

“ಆದ್ದರಿಂದ ಇಂಥವನ್ನು ನೋಡಲೇಬಾರದು.”

ಮಗನ ಮನಸ್ಸನ್ನು ಅರಿಯಲು ಆಶಾ ಕೇಳಿದಳು, “ಅಪ್ಪು, ಇದೇ ತರಹ ನಾನೂ ಈ ಮನೆ ಬಿಟ್ಟು ಹೊರಟರೆ ನೀನು ಯಾರ ಜೊತೆಗೆ ಇರ್ತೀಯಾ?”

“ಅಮ್ಮಾ….. ಇದೆಂಥ ತಲೆಬಾಲ ಇಲ್ಲದ ಪ್ರಶ್ನೆ ಕೇಳ್ತಿದ್ದೀಯಾ….?” ಅಪೂರ್ವ ಕೋಪದಿಂದ, “ನೀನು ಯಾಕೆ ಹಾಗೆ ಮಾಡಬೇಕು?” ಎಂದು ಕೇಳಿದ.

“ಇರಲಿ, ಒಂದು ಪಕ್ಷ ನಾನೂ ನಿಮ್ಮಪ್ಪನ ಜೊತೆ ಈ ಮನೆಯಲ್ಲಿ ಇರಲಾಗದು ಅಂತ ಹೊರಡಬೇಕಾದ ಸಂದರ್ಭ ಬಂದರೆ…. ಆಗ ನೀನು ಯಾರ ಜೊತೆ ಇರ್ತೀಯಾ?”

“ಹೋಗಮ್ಮ….. ನಿನ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡಲೇಬೇಕು ಅಂತ ಏನಿಲ್ಲ,” 13ರ ಅಪೂರ್ವ ತನ್ನ ವಯಸ್ಸಿಗಿಂತ ಎಷ್ಟೋ ಬುದ್ಧಿವಂತನಾಗಿದ್ದ.

“ಸರಿ, ಈಗ ಅನೂಷಾಳನ್ನು ಕೇಳೋಣ…… ನೀನು ಹೇಳು ಮರಿ, ಆಗ ನೀನು ಯಾರ ಜೊತೆಗಿರ್ತೀಯಾ?” ಆಶಾ ಕಿರಿಯಳಾದ ಮಗಳ ಅಭಿಪ್ರಾಯ ಕೇಳಿದಳು.

ಅಮ್ಮನ ಮುಂದೆ ತಾನು ಅಣ್ಣನಿಗಿಂತ ಮೇಲು ಎಂದು ತೋರಿಸಿಕೊಳ್ಳಲು ಈಗ ಅನೂಷಾಳಿಗೊಂದು ಅವಕಾಶ ಸಿಕ್ಕಿತು. “ನನಗಂತೂ ನೀನೂ ಅಪ್ಪ ಸದಾ ಜೊತೆಗಿರಬೇಕು ಅಂತ ಆಸೆ. ಆದರೂ ನೀನು ಮನೆ ಬಿಟ್ಟು ಹೋಗಲೇಬೇಕು ಅಂದ್ರೆ, ನಾನು ನಿನ್ನ ಜೊತೆಗಿರುತ್ತೇನೆ ಅಮ್ಮ. ನೀನು ಅಂದ್ರೆ ನಂಗೆ ತುಂಬಾ ಇಷ್ಟ.”

ಆಗ ಅಪೂರ್ವ, “ಹೋಗೆ ಸುಳ್ಳಿ…. ಇಲ್ಲಿ ಅಮ್ಮನ ಬದಲು ಅಪ್ಪ ಇದೇ ಪ್ರಶ್ನೆ ಕೇಳಿದ್ದರೂ ಇವಳು ಇದೇ ಉತ್ತರ ಕೊಡುತ್ತಿದ್ದಳಮ್ಮ,” ಎಂದ.

“ಹಾಗೇನಿಲ್ಲಮ್ಮ….. ಈ ಅಣ್ಣ ಯಾವಾಗ್ಲೂ ಅಪ್ಪನ ಕಡೆ. ಅಪ್ಪ ತುಂಬಾ ರೇಗ್ತಾರಪ್ಪ, ಅಮ್ಮ ತುಂಬಾ ಮುದ್ದು ಮಾಡ್ತಾರೆ. ನಾನು ಸದಾ ಅಮ್ಮನ ಜೊತೆಗಿರ್ತೀನಿ,” ಎಂದು ಅನೂಷಾ ಬಂದು ಅಮ್ಮನ ಕುತ್ತಿಗೆಗೆ ಜೋತುಬಿದ್ದಳು.

“ನಾನೂ ಒಮ್ಮೊಮ್ಮೆ ರೇಗಾಡ್ತೀನಲ್ಲ…. ಆಗ ನೀನು ನನ್ನ ಬಿಟ್ಟು ದೂರ ಹೋಗ್ತೀಯಾ?” ಆಶಾ ಮಗಳನ್ನು ಕೇಳಿದಳು.

“ನೀನು ನಮಗೆ ಬಯ್ದು ಬುದ್ಧಿ ಹೇಳ್ತೀಯಮ್ಮ…. ಅಪ್ಪ ಹಾಗಲ್ಲ…. ಮತ್ತೆ ನಮಗೆ ಬೇಕಾದ ತಿಂಡಿ, ಊಟ ನೀನು ಮಾಡಿಕೊಡ್ತೀಯ. ಅಪ್ಪಂಗೆ ಅದೆಲ್ಲ ಏನೂ ಬರೋಲ್ಲ!”

“ನನ್ನ ಮುದ್ದು ಅವನು…. ಇರಲಿ, ಅಪ್ಪು ಈಗ ನೀನು ಹೇಳು,” ಎನ್ನುತ್ತಾ ಮಗನ ಬೆನ್ನು ತಟ್ಟುತ್ತಾ ಅವನ ಮನಸ್ಸನ್ನು ಮತ್ತೆ  ಕೆದಕಿದಳು.

ಅಮ್ಮನ ಮುಂದೆ ಈಗ ನೆಟ್ಟಗೆ ನಿಂತ ಅಪೂರ್ವ ಹೇಳಿದ, “ಅಮ್ಮಾ, ನಿನಗೆ ಉತ್ತರ ಬೇಕೇ ಬೇಕಲ್ಲವೇ? ಹಾಗಾದರೆ ಕೇಳು…. ನಾನು ಯಾವಾಗಲೂ ನಿಮ್ಮಿಬ್ಬರ ಜೊತೆ ಇರಲು ಇಷ್ಟಪಡ್ತೀನಿ.”

ಮಗನನ್ನು ಕಣ್ಣು ಮಿಟುಕಿಸದೆ ದಿಟ್ಟಿಸುತ್ತಾ, “ಅರೆ…. ಹಾಗೇಕೆ ಹೇಳ್ತೀಯಾ?” ಎಂದು ಕೇಳಿದಳು.

“ನೀನು, ಅಪ್ಪ ಮದುವೆ ಆಗಿ 15 ವರ್ಷ ಆದರೂ, ಈಗ ಒಟ್ಟಿಗೆ ಇರಲು ಸಾಧ್ಯವಿಲ್ಲ ಅಂತೀಯ…. ನಾನು ಹುಟ್ಟಿ 13 ವರ್ಷ ಆಗಿದೆ. ಮತ್ತೆ ನನ್ನ ಮೇಲೂ ಕೋಪಗೊಂಡರೆ ಏನು ಮಾಡಲಿ? ನೀವಿಬ್ಬರೂ ಬೇರೆ ಬೇರೆ ಇರಲು ನಿರ್ಧರಿಸಿದರೆ ನಮ್ಮಿಬ್ಬರನ್ನೂ ಬೋರ್ಡಿಂಗ್‌ ಸ್ಕೂಲಿಗೆ ಸೇರಿಸಿಬಿಡು. ನಾವು ಯಾರ ಬಳಿಗೂ ಬರುವುದಿಲ್ಲ…..”

“ನಿನಗೇನು ಹುಚ್ಚೇ? ನಾನೇಕೆ ನಿಮ್ಮನ್ನು ಬೋರ್ಡಿಂಗ್‌ ಶಾಲೆಗೆ ಸೇರಿಸಲಿ?” ಆಶಾ ಕೇಳಿದಳು.

“ಮತ್ತೆ ಇನ್ನೇನು….? ಖಂಡಿತಾ ನನಗೆ ಹುಚ್ಚಿಲ್ಲ. ಇಷ್ಟು ವರ್ಷಗಳ ಜೊತೆ ಜೊತೆಯಲ್ಲಿದ್ದರೂ ನಿಮ್ಮಿಬ್ಬರಿಗೂ ಪರಸ್ಪರ ಆದರಿಸುವುದು, ಗೌರವಿಸುವುದು, ನಮ್ಮವರೆಂದು ಒಪ್ಪಿಕೊಳ್ಳುವುದು ಗೊತ್ತಿಲ್ಲ. ಮತ್ತೆ ನಮ್ಮನ್ನು ಹೇಗೆ ನೋಡಿಕೊಳ್ತಿಯಾ?

“ಅಪ್ಪ ನಿನ್ನನ್ನು ಸರಿಯಾಗಿ ಆದರಿಸುವುದಿಲ್ಲ, ಹೀಗಾಗಿ ನೀನು ಮನೆ ಬಿಟ್ಟರೆ ಅವರು ತಲೆ ಕೆಡಿಸಿಕೊಳ್ಳಲ್ಲ. ಇಷ್ಟು ವರ್ಷಗಳಾದರೂ ಈ ಮನೆ, ಅಪ್ಪನನ್ನು ನೀನೂ ಅರ್ಥ ಮಾಡಿಕೊಳ್ಳಲಿಲ್ಲ. ಅದಕ್ಕೆ ಮನೆ ಬಿಟ್ಟು ಹೋಗ್ತೀನಿ ಅವನ್ನು ಮಾತನಾಡುತ್ತಿದ್ದೀಯಾ……

“ಅದಕ್ಕೆ ಒಬ್ಬರ ಬಳಿ ಇದ್ದು ಇನ್ನೊಬ್ಬರನ್ನು ನೋಡದಿದ್ದರೆ ಸರಿ ಇಲ್ಲ ಅಂತ ನಮ್ಮಿಬ್ಬರನ್ನೂ ಬೋರ್ಡಿಂಗ್‌ ಶಾಲೆಗೆ ಸೇರಿಸಲು ಹೇಳಿದ್ದು. ನಿಮ್ಮಿಬ್ಬರ ಬಳಿ ಆಮೇಲೆ ನಾವು ಬರೋದೇ ಇಲ್ಲ ಬಿಡು….” ಅಪೂರ್ವ ಮುಖದಲ್ಲಿ ರೋಷ ಉಕ್ಕುತ್ತಿತ್ತು.

ಆಶಾ ಮಗನ ಭುಜವನ್ನು ಗಟ್ಟಿಯಾಗಿ ಒತ್ತಿಹಿಡಿದಳು. ತನ್ನ ಮಗ ಇಷ್ಟು ಬುದ್ಧಿವಂತನಾಗಿ ಬೆಳೆದಿರುತ್ತಾನೆ ಎಂದು ಅವಳಿಗೆ ಗೊತ್ತೇ ಇರಲಿಲ್ಲ. ಗಂಡನಿಂದ ದೂರವಾದ ಮೇಲೆ ತಾನು ಮಗನ ದೃಷ್ಟಿಯಲ್ಲಿ ಹೀನವಾಗುತ್ತೇನೆಯೇ ಎನಿಸಿಬಿಟ್ಟಿತು. ನವೀನ್ ತನಗೆ ಆದರ ನೀಡುತ್ತಿಲ್ಲ ಎಂದಲ್ಲವೇ ಸೇಡು ತೀರಿಸಿಕೊಳ್ಳಲು ತಾನೂ ಹಾಗೇ ಮಾಡಿ ಮನೆ ಬಿಡುತ್ತಿರುವುದು…. ಈ ರೀತಿ ಮಾಡಿ ತಾನು ಗಂಡನನ್ನು ಅಪಮಾನಿಸಬೇಕು ಎಂದಲ್ಲವೇ ಐಡಿಯಾ? ಸಂಸಾರ ಮುರಿಯುತ್ತಿದೆ, ಮಕ್ಕಳು ಬ್ಯಾಲೆನ್ಸ್ ತಪ್ಪುತ್ತಾರೆ ಎಂದು ತಾನೇಕೆ ಯೋಚಿಸಲಿಲ್ಲ? ಈಗ ನವೀನ್‌ ಬಳಿ ಬೇರೆ ರೀತಿಯಲ್ಲೇ ಮಾತನಾಡಿ ಸರಿ ಮಾಡಬೇಕಿದೆ ಎಂದುಕೊಂಡಳು.

ಯಾವಾಗ ಜಗಳವಾದರೂ ನವೀನ್‌ ದಿನ ತಡವಾಗಿ ಮನೆಗೆ ಬರುತ್ತಿದ್ದ. ಆಫೀಸ್‌ನಲ್ಲಿ ಹೆಚ್ಚು ಕೆಲಸ ಎಂದು ಬೇಕೆಂದೇ ತಡ ಮಾಡಿ ಬರುತ್ತಿದ್ದ. ಆಶಾ ಅವನ ಮನಃಸ್ಥಿತಿಯನ್ನು ಚೆನ್ನಾಗಿ ಅರಿತಿದ್ದಳು.

ಏನನ್ನೋ ನಿರ್ಧರಿಸಿ ಆಶಾ ಆಫೀಸಿಗೆ 2 ವಾರಗಳ ರಜೆ ಪಡೆದಳು. ಆಶಾಳ ಚಟುವಟಿಕೆಗಳನ್ನು ನವೀನ್‌ ಗಮನಿಸುತ್ತಿದ್ದ. ನಂತರ ರೋಸಿ ಹೋಗಿ ಕೇಳಿದ, “ಇದೇನಿದು…. ತಲೆ ಬಾಲ ಇಲ್ಲದೆ ಲೀವ್ ‌ಹಾಕಿ ಮನೆಯಲ್ಲೇ ಕುಳಿತಿದ್ದೀಯಾ?”

“ನನ್ನ ಈ ಹಕ್ಕಿನ ರಜೆಗಳು ಮುಗಿದು ಹೋದರೆ ಹಾಫ್‌ ಪೇ ರಜೆ ಪಡೆಯುತ್ತೇನೆ. ಕೆಲಸಕ್ಕೆ ಹೋಗುವ ಮೂಡೇ ಇಲ್ಲದಿರುವಾಗ ಈ ರಜೆಗಳಿದ್ದು ಏನಾಗಬೇಕು?”

“ಏನು? ಕೆಲಸ ಬಿಟ್ಟುಬಿಡಬೇಕು ಅಂತ ಡಿಸೈಡ್‌ ಮಾಡಿದೆಯಾ?” ಅವನಿಗೆ ಕೋಪ ಬಂತು.

“ಈ ಕಾಲದಲ್ಲಿ ಕೆಲಸ ಸಿಕ್ಕೋದೇ ಕಷ್ಟ, ಅಂಥದ್ರಲ್ಲಿ ಸರ್ಕಾರಿ ಕೆಲಸ ಬಿಡುವ ಮಾತನಾಡ್ತೀಯಾ?”

“ಮತ್ತೇನು ಮಾಡಲಿ?” ಆಶಾ ಸ್ಪಷ್ಟವಾಗಿ ಹೇಳಿದಳು, “ಷರತ್ತುಗಳನ್ನು ಅಳವಡಿಸಿ ಅದರ ಪ್ರಕಾರವೇ ಕೆಲಸ ಮಾಡಬೇಕು ಅಂದ್ರೆ ನನ್ನಿಂದಾಗದು!”

“ಎಂಥ ಷರತ್ತು? ಹೇರಿದ್ದು ಯಾರು?”

“ತಡವಾಗಿ ಮನೆಗೆ ಬರುವುದು, ಸಂಪರ್ಕಾಧಿಕಾರಿ ಆಗಿರುವುದರಿಂದ ಸಾರ್ವಜನಿಕರ ಸತತ ಸಂಪರ್ಕ ಹೊಂದಿರುವುದು….. ಇವೆಲ್ಲ ನಿಮಗೆ ಇಷ್ಟವಿಲ್ಲ. ಕೆರಿಯರ್‌ ಅಥವಾ ಸಂಸಾರ, ಯಾವುದಾದರೂ ಒಂದನ್ನೇ ಆರಿಸಿಕೊಳ್ಳಬೇಕು ಅಂದಾಗ ನಾನು ನನ್ನ ಸಂಸಾರ ಉಳಿಸಿಕೊಳ್ಳುವುದೇ ಮುಖ್ಯ ಎಂದು ಭಾವಿಸಿದೆ. ಆ ಕಾರಣದಿಂದಲೇ ನಾನು ನನ್ನ ಕೆಲಸ ಬಿಡೋಣ ಅಂತ ನಿರ್ಧರಿಸಿದ್ದೀನಿ,” ಆಶಾ ದೃಢವಾಗಿ ಹೇಳಿದಳು.

“ಇದೇನಿದು…. ಒಳ್ಳೆ ಮಕ್ಕಳ ಹಾಗೆ ಹಠ ಹೂಡಿದ್ದಿ….. ಒಬ್ಬನ ಸಂಬಳದಲ್ಲಿ ಈ ಸಂಸಾರ ತೂಗಿಸಲು, ಮಕ್ಕಳ ವಿದ್ಯಾಭ್ಯಾಸ, ದಿನೇದಿನೇ ಏರುತ್ತಿರುವ ಬೆಲೆ, ಸೈಟ್‌ಗೆ ಕಟ್ಟುತ್ತಿರುವ ಕಂತು… ಇದೆಲ್ಲ ಆಗುತ್ತೆ ಅಂದುಕೊಂಡಿದ್ದೀಯಾ? ಇರುವ ಕೆಲಸ ಬಿಟ್ಟು ಇಡೀ ದಿನ ಮನೆಯಲ್ಲಿ ಕುಳಿತು ನೊಣ ಹೊಡೆಯುತ್ತೀಯಾ?” ಯಾವ ರೀತಿ ಅವಳ ನಿರ್ಧಾರ ಬದಲಾಯಿಸುವುದೋ ಅವನಿಗೆ ಅರ್ಥವಾಗಲಿಲ್ಲ.

“ಅದೇ…. ಮನೆಯಲ್ಲಿರುವ ಗೃಹಿಣಿಯರಿಗೆ ಹೇಗೆ ಹೊತ್ತು ಹೋಗುತ್ತೋ ಹಾಗೆ….. ಟಿವಿ, ವಿಡಿಯೋ, ಲೇಡೀಸ್‌ ಕ್ಲಬ್‌, ಕಾರ್ಡ್ಸ್, ತಂಬೋಲಾ, ಕಿಟೀ ಪಾರ್ಟಿ, ಕುಕಿಂಗ್‌, ಗಾರ್ಡನಿಂಗ್‌ ಇತ್ಯಾದಿ. ಎಲ್ಲರಂತೆ ನನಗೂ ಟೈಂಪಾಸ್‌ ಆಗುತ್ತದೆ. ಇದರಲ್ಲೇನಿದೆ ಸಮಸ್ಯೆ?”

“ಹೊರಗೆ ಸಮಾಜದಲ್ಲಿ ನಿನಗೆ ಎಷ್ಟು ಗೌರವಾದರಗಳಿವೆ ಅಂತ ಮರೆತುಬಿಟ್ಟೆಯಾ? ನಮ್ಮಿಬ್ಬರ ಸರ್ಕಲ್ ನಲ್ಲಿ ನಾವಿಬ್ಬರೂ ದುಡಿಯುತ್ತಿರುವುದರಿಂದ ಎಂಥ ಒಳ್ಳೆ ಪ್ರೆಸ್ಟೀಜ್‌ ಇದೆ ಗೊತ್ತಾ….. ನಮ್ಮ ಸ್ಟೇಟಸ್‌ ಸಿಂಬಲ್ ಹಾಳಾಗಬೇಕೇ?”

“ಅದಕ್ಕೆ ಅಂತ ನನ್ನ ಮನೆಯಲ್ಲಿ ದಿನಾ ಜಗಳವಾಡಿ ಬಾಳು ನರಕ ಮಾಡಿಕೊಳ್ಳಲೇ? ಪ್ರತಿಯೊಂದು ಮಾತು, ಪ್ರತಿಯೊಂದು ನಡೆಗೂ ನಿಮಗೆ ವಿವರಣೆ ಕೊಡುತ್ತಾ ನಿಲ್ಲಲೇ…. ಏನೂ ಮಾಡದಿದ್ದರೂ ಅಪರಾಧಿಯಂತೆ ತಲೆ ತಗ್ಗಿಸಿಕೊಂಡಿರಬೇಕೇ?

“ಇಷ್ಟು ವರ್ಷಗಳಿಂದ ಇದೇ ತರಹದ ಟೀಕೆ, ನಿಂದನೆಗಳನ್ನು ಸಹಿಸಿಕೊಂಡು ಸಾಕಾಗಿದೆ. ಯಾಕಾಗಿ ಸಹಿಸಿಕೊಳ್ಳಬೇಕು? ಈ ಕೆಲಸದ ಹಂಗಿಲ್ಲದೆ ನನ್ನ ಮನೆಯಲ್ಲಿ ನಾನು ಗೌರವವಾಗಿ ಬದುಕಬಲ್ಲೇ….. ನನ್ನ ಗಂಡ, ನನ್ನ ಮಕ್ಕಳು ಅಂತ ನೆಮ್ಮದಿಯಾಗಿ ಇರಬಲ್ಲೇ….” ಯಾವ ಟೆನ್ಷನ್‌ ಇಲ್ಲದೆ ಹಾಯಾಗಿ ಹೇಳಿದಳು.

“ಆಶಾ…. ಆಶಾ…. ಐ ಆ್ಯಮ್ ವೆರಿ ಸಾರಿ….. ನಿನ್ನನ್ನು ಅಮಾನಿಸಬೇಕು ಅಂತ ನನ್ನ ಉದ್ದೇಶ ಆಗಿರಲಿಲ್ಲ…. ನೀನು ತಡವಾಗಿ ಬಂದಾಗೆಲ್ಲ ನನ್ನ ಮನಸ್ಸು ಹಲವು ಆತಂಕ, ಉದ್ವೇಗಕ್ಕೆ ಈಡಾಗುತ್ತಿತ್ತು. ಅದೇ ಟೆನ್ಷನ್‌ನಲ್ಲಿ ನಾನು ನಿನಗೆ ಏನೇನೋ ಉಲ್ಟಾಸೀದಾ ಹೇಳಿಬಿಡುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡು. ನನ್ನ ಉದ್ದೇಶ ಖಂಡಿತಾ ನಿನಗೆ ನೋವು ಕೊಡಬೇಕು, ನಿನಗೆ ಅವಮಾನ ಮಾಡಬೇಕು ಅಂತಲ್ಲ….” ನವೀನ್‌ ಮುಖದಲ್ಲಿ ಈ ಸಲ ಪಶ್ಚಾತ್ತಾಪದ ಭಾವವಿತ್ತು.

“ಸರಿ, ಹಾಗಿದ್ದರೆ ನಾಳೆಯಿಂದ ಕೆಲಸಕ್ಕೆ ಹೋಗುತ್ತೀನಿ. ಆದರೆ ನೀವು ಒಂದು ಮಾತು ನೆನಪಿಡಿ. ಹಿಂದಿನ ತರಹ ಅತಿ ಅನುಮಾನದ ದೃಷ್ಟಿಯಲ್ಲಿ ನೋಡುವುದು, ಎಲ್ಲದಕ್ಕೂ ಸಂದೇಹ ಪಡುವುದು, ಫೋನ್‌ ಚೆಕ್‌ ಮಾಡುವುದು, ಕಾಲ್ ಮಾಡಿದವರ ತಪಾಸಣೆ ಮಾಡುವುದು….. ಇದೆಲ್ಲ ಇಟ್ಟುಕೊಳ್ಳಬೇಡಿ!

“ನಾನು ಹೊರಗೆ ಕೆಲಸ ಮಾಡುತ್ತೇನೆ ಅಂದ್ರೆ ನನಗೂ ಸಮಯದ ಬೆಲೆ ಗೊತ್ತಿದೆ. ಯಾವಾಗ ಮನೆಗೆ ಹೋಗಿ ಸೇರ್ತೀನೋ ಅಂತ ಚಡಪಡಿಕೆ ಇರುತ್ತದೆ. ನೀವು ಕೆಲಸದಲ್ಲಿ ತಡವಾದಾಗ, ಪರಸ್ಥಳಕ್ಕೆ ಹೋಗಬೇಕಾದಾಗ ನಾನೂ ಅದೇ ರೀತಿ ಸಂದೇಹ ಪಡ್ತೀನಾ….?”

“ಆಯ್ತು ಮಹರಾಯ್ತಿ…. ಹೇಳಿದೆನಲ್ಲ ಇನ್ನು ಮುಂದೆ ಅಂಥದ್ದೆಲ್ಲ ಬಂದ್‌! ಕೋಪವಿದ್ದರೆ ನನ್ನ ಕೆನ್ನೆಗೆ ಎರಡೇಟು ಹಾಕಿಬಿಡು,” ಎಂದು ಅವಳ ಕೈ ಹಿಡಿದುಕೊಂಡು ಕೆನ್ನೆಗೆ ಒತ್ತಿಕೊಂಡ.

ಅವನಿಂದ ಕೈ ಬಿಡಿಸಿಕೊಳ್ಳುತ್ತಾ ನಸುನಕ್ಕಳು. ಸಂಸಾರ ಮುರಿಯುವುದು ಸುಲಭ, ಅದನ್ನು ಸರಿಪಡಿಸುವುದು ಎಷ್ಟು ಕಷ್ಟ….. ತನ್ನದು ತಪ್ಪು ನಿರ್ಧಾರ ಅಂತ ಮಗ ಎಷ್ಟು ಸೂಕ್ಷ್ಮವಾಗಿ ತಿಳಿಸಿಕೊಟ್ಟ….. ಅವನ ಮಾತು ತನ್ನ ಸಮಸ್ಯೆಗೆ ಎಷ್ಟು ಸುಲಭದ ಪರಿಹಾರ ಸೂಚಿಸಿದೆ ಎಂದು ಈಗ ಅವಳಿಗೆ ಮಗನ ಬಗ್ಗೆ ಹೆಮ್ಮೆ ಎನಿಸಿತು.

ಅಂದಿನಿಂದ ಆ ಮನೆಯಲ್ಲಿ ಅಪೂರ್ವ ಶಾಂತಿ, ನೆಮ್ಮದಿ ನೆಲೆಸಿತು. ಪರಸ್ಪರ ಅರ್ಥ ಮಾಡಿಕೊಂಡು ಸಹನೆಯಿಂದ ವರ್ತಿಸಿದರೆ ದಂಪತಿಗಳಲ್ಲಿ ಸೌಹಾರ್ದ ವಾತಾವರಣ ಇರುತ್ತದೆ ಎಂಬುದು ನಿಜವಾಯಿತು. ತನ್ನ ಸಂಸಾರ ಉಳಿಯಿತು ಎಂದು ಆಶಾ ಹೆಮ್ಮೆಪಟ್ಟಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ