ಶೀತಲ್ ಶೆಟ್ಟಿ ಅರಳು ಹುರಿದಂತೆ ಮಾತನಾಡುವ ಯುವತಿ. ವಿಶಿಷ್ಟ ಶೈಲಿಯ ಸುದ್ದಿ ವಾಚನ, ಕನ್ನಡದ ಸ್ಪಷ್ಟ ಉಚ್ಚಾರದಿಂದ  ಅವರು ಆರಂಭದಲ್ಲಿಯೇ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿದ್ದ `ಜಸ್ಟ್ ಬೆಂಗಳೂರ್‌’ ಸುದ್ದಿ ಸಮಯ ಅವರನ್ನು ಮನೆ ಮಾತಾಗುವಂತೆ ಮಾಡಿಬಿಟ್ಟಿತು. ಅವರ ಚುರುಕಿನ ಮಾತಿನ ವೈಖರಿಗೆ ಬೆರಗಾದ ಹಲವು ನಿರ್ಮಾಪಕರು ಆಗಲೇ ಇವರಿಗೆ ಸಿನಿಮಾದಲ್ಲಿ ನಟಿಸಲು ಆಫರ್‌ ಕೊಟ್ಟಿದ್ದರು. ಆದರೆ ಆಗ ಸಿನಿಮಾ ಮೋಹಕ್ಕೆ ಒಳಗಾಗದೆ ಶೀತಲ್ ನಿರೂಪಣೆಯಲ್ಲಿಯೇ ಭವಿಷ್ಯ ಕಂಡುಕೊಳ್ಳಲು ನಿರ್ಧರಿಸಿದರು.

ಟಿ.ವಿ ಮಾಧ್ಯಮದಲ್ಲಿ 7 ವರ್ಷಗಳ ನಿರೂಪಣೆ ಆ ರಂಗದಲ್ಲಿ ಅವರು ಮತ್ತಷ್ಟು ಕಲಿತುಕೊಳ್ಳಲು ಸಾಧ್ಯವಾಯಿತು. ತಮ್ಮ ವಾಕ್ಚಾತುರ್ಯದಿಂದ ಅವರು ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುತ್ತಿದ್ದ ಮುಖ್ಯ ವಾರ್ತೆ ಓದಲು ಅವಕಾಶ ಕೊಡಿ ಎಂದು ಪಟ್ಟುಹಿಡಿದು ಅದರಲ್ಲಿ ಯಶಸ್ವಿಯಾಗಿದ್ದರು. ಈ ಎಲ್ಲ ಕಾರಣಗಳಿಂದ ಅವರ ಜನಪ್ರಿಯತೆ ಹೆಚ್ಚುತ್ತಲೇ ಹೊರಟಿತ್ತು.

ನಿರ್ಮಾಪಕರು ಸಿನಿಮಾದಲ್ಲಿ ನಟಿಸಿ ಎಂದು ಅವರಿಗೆ ದುಂಬಾಲು ಬೀಳುತ್ತಲೇ ಇದ್ದರು.

ರಾಜೀನಾಮೆ ನಿರ್ಧಾರ

ಅದೊಂದು ಸಲ ಅವರಿಗೆ ಎಂತಹದೊಂದು ಆಫರ್‌ ಬಂದಿತ್ತೆಂದರೆ, ಆ ಸಿನಿಮಾದ ಪಾತ್ರ ಟಿ.ವಿ. ರಿಪೋರ್ಟರ್‌ಗಳ ಪಾತ್ರ. ಈ ಸಲ ಶೀತಲ್‌ಗೆ ಆ ಪಾತ್ರವನ್ನು ತಿರಸ್ಕರಿಸುವ ಮನಸ್ಸಾಗಲಿಲ್ಲ. ತಾನೇ ಆ ಪಾತ್ರವನ್ನು ಮಾಡಲೇಬೇಕು ಎಂದು ಅವರು ನಿರ್ಧರಿಸಿಯೇ ಬಿಟ್ಟರು. ತಾನು ಕೆಲಸ ಮಾಡುತ್ತಿದ್ದ ಟಿ.ವಿ. ಚಾನೆಲ್‌‌ನ ಆಡಳಿತ ಮಂಡಳಿಗೂ 20 ದಿನದ ರಜೆ ಕೋರಿ ಅರ್ಜಿ ಸಲ್ಲಿಸಿದರು. ಆದರೆ ಆಡಳಿತ ಮಂಡಳಿ ಚಲನಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಡುವುದಿಲ್ಲ ಎಂದು ಹೇಳಿ ಆಕೆಯ ಅರ್ಜಿಯನ್ನು ತಿರಸ್ಕರಿಸಿಬಿಟ್ಟಿತು. ಆಗ ಶೀತಲ್ ಉಪಾಯ ಕಾಣದೆ ನಿರೂಪಣೆಯ ಹುದ್ದೆಗೆ ರಾಜೀನಾಮೆ ಕೊಟ್ಟು ಹೊರಬಂದರು.

ಶೀತಲ್ ದಿಢೀರ್‌ ನಿರ್ಧಾರದ ಬಗ್ಗೆ ಬಹಳಷ್ಟು ಜನರು ತಮಾಷೆ ಮಾಡಿ ನಕ್ಕಿದ್ದರು. ಇಂಥ ಒಳ್ಳೆಯ ನಿರೂಪಕಿಯ ಹುದ್ದೆ ಬಿಟ್ಟು ಅಸ್ಥಿರತೆಯ ಸಿನಿಮಾ ರಂಗಕ್ಕೆ ಹೋಗಿದ್ದು ಸರಿಯಲ್ಲ ಎಂದು ಟೀಕಿಸಿದರು. ಆದರೆ ಶೀತಲ್ ಆಯಾ ಮಾತುಗಳಿಗೂ ತಲೆ ಕೆಡಿಸಿಕೊಂಡಿರಲಿಲ್ಲ.

ಶೀತಲ್ ಮನಸ್ಸನ್ನು ಸೆಳೆದಿದ್ದ ಆ ಚಿತ್ರದ ಹೆಸರು `ಉಳಿದವರು ಕಂಡಂತೆ.’ ರಕ್ಷಿತ್‌ ಶೆಟ್ಟಿ ನಿರ್ದೇಶನದ ಆ ಚಿತ್ರದಲ್ಲಿ ಶೀತಲ್ ಪತ್ರಕರ್ತೆಯ ಪಾತ್ರ ಮಾಡಿದ್ದರು. ಮೊದಲ ಚಿತ್ರದಲ್ಲಿಯೇ ಶೀತಲ್‌ಗೆ ಒಳ್ಳೆಯ ಹೆಸರು ಬಂತು. ಹತ್ತು ಹಲವು ಕಾರಣಗಳಿಂದ `ಉಳಿದವರು ಕಂಡಂತೆ’ ವಿಭಿನ್ನ ಚಿತ್ರವೊಂದು ಮನ್ನಣೆ ಪಡೆಯಿತು.

ಪ್ರಥಮ ಚಿತ್ರದ ಯಶಸ್ಸಿನ ಬಳಿಕ ಅವರ ನಟನಾ ಬದುಕು ಕ್ರಿಯಾಶೀಲವಾಗಿ ಸಾಗಿತು. ನಿರೂಪಣೆಯಿಂದ ನಟನೆಗೆ ಇಳಿದ ಶೀತಲ್ ಶೆಟ್ಟಿಯವರ ಜೀವನದ ಆರಂಭಿಕ ಸಂಘರ್ಷರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣವೇ…..?

20191019_104337

ಆರಂಭಿಕ ಜೀವನ

ಶೀತಲ್ ಶೆಟ್ಟಿಯವರ ಕುಟುಂಬದವರು ಮೂಲತಃ ದಕ್ಷಿಣ ಕನ್ನಡದವರು, ಆದರೆ ವಾಸವಾಗಿದ್ದುದು ಶಿವಮೊಗ್ಗದಲ್ಲಿ. ಶೀತಲ್ ಕಮಲಾ ನೆಹರು ಹಾಸ್ಟೆಲ್‌ನಲ್ಲಿದ್ದುಕೊಂಡು ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದರು. ತಂದೆಯ ಸಾವಿನ ಬಳಿಕ ಶೀತಲ್ ಅಜ್ಜಿಯ ಊರು ಬ್ರಹ್ಮಾವರಕ್ಕೆ ಹೋದರು. ಕುಟುಂಬಕ್ಕೆ ಏನಾದರೂ ಮಾಡಲೇಬೇಕೆಂದು ನಿರ್ಧರಿಸಿ ಶೀತಲ್ ಬೆಂಗಳೂರಿಗೆ ಹೊರಟರು.

ದೊಡ್ಡಪ್ಪನ ಮನೆಯಲ್ಲಿದ್ದುಕೊಂಡು ಶೀತಲ್ ಕೆಲಸ ಹುಡುಕತೊಡಗಿದರು. ಅದೊಂದು ದಿನ ಶೀತಲ್‌ಗೆ ಶಿಕಾರಿಪುರದ ಕಾಲೇಜು ಸ್ನೇಹಿತೆ ಗೀತಾಳ ಕರೆ ಬಂತು. ಅದೇ ಆಗ ಶುರುವಾಗಿದ್ದ ಟಿ.ವಿ. 9 ಚಾನೆಲ್‌‌ನಲ್ಲಿ ನಿರೂಪಕಿ ಹುದ್ದೆಗೆ ಸಂದರ್ಶನದ ಜಾಹೀರಾತು ಅದಾಗಿತ್ತು.

`ನೀನು ಅದಕ್ಕೆ ಪ್ರಯತ್ನಿಸು’ ಎನ್ನುವುದು ಗೆಳತಿಯ ಕೋರಿಕೆಯಾಗಿತ್ತು.

ಶೀತಲ್ ಆ ಹುದ್ದೆಗೆ ಅರ್ಜಿ ಏನೋ ಸಲ್ಲಿಸಿದರು. ಆದರೆ ಸಂದರ್ಶನದ ದಿನ ಆ ಕಛೇರಿಯ ಮುಂದಿನ ಸರದಿ ಸಾಲು ನೋಡಿ, “ತನಗಿಲ್ಲಿ ಕೆಲಸ ಸಿಗೋದು ಕನಸಿನ ಮಾತು, ಮನೆಗೆ ವಾಪಸ್‌ ಹೋಗುವುದೇ ವಾಸಿ,” ಎಂದು ತನ್ನಣ್ಣನ ಮುಂದೆ ಹೇಳಿದರು. ನಿಶಾಂತ್‌ ಶೆಟ್ಟಿ ಅವರಿಗೆ ತಿಳಿಹೇಳಿ ನೀನು ಒಳಗೆ ಹೋಗಿ ಅವರು ಕೇಳಿದ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸು ಅಷ್ಟೇ ಸಾಕು ಎಂದು ಹೇಳಿದರು. ಶೀತಲ್, ಸಂದರ್ಶಕರ ಪ್ರಶ್ನೆಗೆ ಅರಳು ಹುರಿದಂತೆ ಉತ್ತರಿಸಿ ನಿರೂಪಕಿಯಾಗಿ ನೇಮಕಗೊಂಡರು.

`ಜಸ್ಟ್ ಬೆಂಗಳೂರು’ ಶೀತಲ್ ಶೆಟ್ಟಿಗೆ ಸ್ಟಾರ್‌ ವ್ಯಾಲ್ಯೂ ತಂದುಕೊಟ್ಟ ಕಾರ್ಯಕ್ರಮ. `ವಾರಂಟ್‌, ಫಿಲ್ಮಿಫಂಢಾ. ನಮ್ಮೂರು’ ಕಾರ್ಯಕ್ರಮಗಳಿಂದ ಪ್ರೈಮ್ ಟೈಮ್ ತನಕದ ನ್ಯೂಸ್‌ ಬುಲೆಟಿನ್‌ ತನಕ ಹತ್ತು ಹಲವು ಕಾರ್ಯಕ್ರಮಗಳಿಂದ ನಿರೂಪಕಿಯರು ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುತ್ತಾರೆ ಎಂಬುದನ್ನು ಶೀತಲ್ ತೋರಿಸಿಕೊಟ್ಟರು.

ಉಳಿದವರು ಕಂಡಂತೆ

`ಉಳಿದರು ಕಂಡಂತೆ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಅಲೆಯನ್ನು ಸೃಷ್ಟಿಸಿತು. ಶೀತಲ್‌ಗೂ ಅದು ವಿಶಿಷ್ಟ ಛಾಪನ್ನು ಮೂಡಿಸಿತು. ಅಲ್ಲಿಂದ ಶುರುವಾದ ಅವರ ಚಿತ್ರ ಜೀವನದ ಹತ್ತು ಹಲವು ಪಾತ್ರಗಳು ವಿಭಿನ್ನ ಅನುಭವ ನೀಡಿದ. `ಪತಿ ಬೇಕು ಡಾಟ್‌ ಕಾಮ್’ ಮಹಿಳಾ ಪ್ರಧಾನ ಚಿತ್ರ. ಅದು ಅಷ್ಟೇನೂ ಯಶಸ್ವಿಯಾಗದಿದ್ದರೂ ಜನರು ಅವರನ್ನು ಗುರುತಿಸುವಂತೆ ಮಾಡಿತು. ಕೆಂಡಸಂಪಿಗೆ, 96, ಚೆಸ್‌, ಎಸ್ಕೇಪ್‌, ಪ್ರೇಮಾ ಗೀಮಾ ಜಾನೇದೊ, ಲಿಫ್ಟ್ ಮ್ಯಾನ್‌, ಅವರ ಇತರೆ ಚಿತ್ರಗಳು. ಜಗ್ಗೇಶ್‌ ಪುತ್ರ ಗುರು ಜೊತೆಗೆ ಇತ್ತೀಚೆಗೆ `ರಂಗ ಶಂಕರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರ `ಮೂಕ ನಾಯಕ’ ಚಿತ್ರದಲ್ಲಿ ಶೀತಲ್‌ಗೆ ಅಭಿನಯಿಸಲು ಅವಕಾಶ ಸಿಕ್ಕಿದ್ದು ಅವರಿಗೆ ಬಹಳ ಖುಷಿ ಕೊಟ್ಟ ಸಂಗತಿ.

ಕಿರುಚಿತ್ರ ನಿರ್ದೇಶನ

ಸಿನಿಮಾ ನಟನೆಯ ಜೊತೆಗೆ ಶೀತಲ್‌ ಎರಡು ಕಿರು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಅದರಲ್ಲಿ ಮೊದಲನೆಯದು `ಸಂಗಾತಿ.’ ತಾವೇ ಬರೆದ ಕಥೆಯನ್ನು ಅವರು ರಕ್ಷಿತ್‌ ಶೆಟ್ಟಿಯವರಿಗೆ ಕಳಿಸಿದ್ದರು. `ಶಾರ್ಟ್‌ ಮೂವಿ’ ಮಾಡು ಎಂದು ರಕ್ಷಿತ್‌ ಹೇಳಿದ್ದರು. ಏಕಾಂಗಿ ಹೆಣ್ಣೊಬ್ಬಳ ತುಮುಲವನ್ನು ವಿವರಿಸುವ ಕಥೆ ಕಿರುಚಿತ್ರವಾಗಿ ಹೊರಬಂದಾಗ ಅದು ಬರಗೂರರಿಗೂ ಬಹಳ ಇಷ್ಟವಾಗಿ, ಅವರು ತಮ್ಮ `ಮೂಕ ನಾಯಕ’ ಚಿತ್ರದಲ್ಲಿ ಶೀತಲ್‌ಗೆ ಅವಕಾಶ ಕೊಡುವಂತಾಯಿತು. ಶೀತಲ್‌ ನಿರ್ದೇಶನದ ಎರಡನೇ ಕಿರುಚಿತ್ರ `ಕಾಡು.’ ಶೀತಲ್ ಮುಂಚೆ ಟಿ.ವಿ. ಚಾನೆಲ್‌‌ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾಗ ಬರಗೂರು ಅವರು ಆಕೆಯ ಕನ್ನಡ ಭಾಷೆಯ ಸ್ಪಷ್ಟ ಉಚ್ಚಾರಣೆ ಬಗ್ಗೆ ಹೊಗಳಿ, ಮೆಚ್ಚುಗೆಯ ಸಂದೇಶ ಕಳುಹಿಸಿಕೊಟ್ಟಿದ್ದರು. ಇದು ಶೀತಲ್ ಜೀವನದ ಸ್ಮರಣಾರ್ಹ ಘಳಿಗೆ.

ನಿರ್ದೇಶನದತ್ತ ಹೆಜ್ಜೆ

ಶೀತಲ್ 9 ಜನರ ತಂಡ ಕಟ್ಟಿಕೊಂಡು ಸಿನಿಮಾ ನಿರ್ದೇಶನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಹೆಣ್ಣೊಬ್ಬಳ ಕೊಲೆಯ ರಹಸ್ಯವನ್ನು ಭೇದಿಸುವ ಥ್ರಿಲ್ಲರ್‌ ಸಿನಿಮಾ `ವಿಂಡೋ ಸೀಟ್‌’ನ್ನು ಶೀತಲ್ ನಿರ್ದೇಶಿಸುತ್ತಿದ್ದಾರೆ.

`ನಟನೆ ಬಿಟ್ಟು ಖಾಯಂ ಆಗಿ ನಿರ್ದೇಶನದ ಕಡೆಗೆ ಹೆಜ್ಜೆ ಹಾಕುತ್ತಿದ್ದೀರಾ?’ ಎಂಬ ಪ್ರಶ್ನೆಗೆ, “ನನ್ನಲ್ಲಿ ನಟಿಯೂ ಇದ್ದಾಳೆ, ನಿರ್ದೇಶಕಿಯೂ ಇದ್ದಾಳೆ. ಒಳ್ಳೆಯ ಅವಕಾಶ ಸಿಕ್ಕಾಗ ನಟಿಸುತ್ತೇನೆ. ಆದರೆ ನಾನೇ ನಿರ್ದೇಶಿಸುವ ಸಿನಿಮಾದಲ್ಲಿ ಖಂಡಿತ ಅಭಿನಯಿಸುವುದಿಲ್ಲ,” ಎಂದು ಶೀತಲ್ ಹೇಳುತ್ತಾರೆ.

ವರ್ಗೀಕರಣ ಬೇಡ

ಮಹಿಳಾ ನಿರ್ದೇಶಕಿ ಅಂತಾ ನಮ್ಮನ್ನು ಪ್ರತ್ಯೇಕಿಸಬೇಡಿ. ನಮ್ಮನ್ನು ಪುರುಷ ನಿರ್ದೇಶಕರ ಹಾಗೆ ಸಮಾನತೆಯಿಂದ ಪರಿಗಣಿಸಿ, ಮಹಿಳಾ ನಿರ್ದೇಶಕಿಯರಿಗೆ ಪುರುಷರಿಗಿಂತ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಚಿತ್ರವೊಂದಕ್ಕೆ ಅಂದದ ರೂಪ ಕೊಡುವುದು, ಪ್ರೇಕ್ಷಕರನ್ನು ಥಿಯೇಟರ್‌ ತನಕ ಸೆಳೆಯುವುದು ಸಣ್ಣ ಸಂಗತಿಯಲ್ಲ ಎನ್ನುವುದು ಶೀತಲ್ ಅಭಿಪ್ರಾಯ.

ಬಿಗ್‌ಬಾಸ್‌ ಮನೆಗೆ ಶೀತಲ್ ಶೆಟ್ಟಿ

ತಮ್ಮ ವ್ಯಕ್ತಿತ್ವದ ಹೊಳಪಿನಿಂದಾಗಿ ಬಿಗ್‌ಬಾಸ್‌ ಮನೆಗೂ ಹೋಗಿ ಬಂದರು. ಅಲ್ಲಿ ಇರುವಷ್ಟು ದಿನ ಚುರುಕಿನ ಮಾತುಗಳಿಂದ ಗಮನ ಸೆಳೆದಿದ್ದರು. “ಬಿಗ್‌ಬಾಸ್‌ ಮನೆಯಲ್ಲಿದ್ದಷ್ಟು ದಿನ ನನಗೆ ವಿಶೇಷ ಅನುಭವ ನೀಡಿತು. ಅದರಿಂದ ನಾನು ಕಲಿತದ್ದೇನೂ ಇಲ್ಲ, ಅದೊಂದು ಜಸ್ಟ್ ಆಟವಷ್ಟೇ,” ಎಂದು ಶೀತಲ್ ಹೇಳುತ್ತಾರೆ.

ಸಿಕ್ಕ ಅವಕಾಶ ಅಪ್ಪಿಕೊಳ್ಳಿ

`ನಮ್ಮ ಇಂದಿನ ಯುವತಿಯರಿಗೆ, ಉದಯೋನ್ಮುಖ ನಿರೂಪಕಿಯರಿಗೆ ಏನು ಹೇಳಲು ಇಚ್ಛಿಸುವಿರಿ?’ ಎಂಬ ಪ್ರಶ್ನೆಗೆ, “ನಿಮಗೆ ಸಿಕ್ಕ ಅವಕಾಶವನ್ನು ಮೊದಲು ಅಪ್ಪಿಕೊಳ್ಳಿ. ಆ ಬಳಿಕ ಅದರಲ್ಲಿ ಪೂರ್ವ ಸಿದ್ಧತೆಯೊಂದಿಗೆ ನಿಮ್ಮ ಪ್ರಾವೀಣ್ಯತೆ ತೋರಿಸಿ. ಚಾನೆಲ್‌‌ಗಳಲ್ಲಿ ಧ್ವನಿ ಕೊಡುವುದನ್ನು ಒಂದು ಸಣ್ಣ ವಿಷಯ ಎಂಬಂತೆ ಭಾವಿಸಬೇಡಿ. ಅದೇ ಮುಂದೆ ನಿಮಗೆ ಹೊಸ ತಿರುವು ಕೊಡಬಹುದು.

“ನಿಮಗೇನು ಇಷ್ಟವಾಗುತ್ತೋ ಅದನ್ನೇ ಮಾಡಿ. ಅವರಿವರ ಅರ್ಥವಿಲ್ಲದ ಮಾತುಗಳಿಗೆ ಅಡೆತಡೆಗಳಿಗೆ ಹಿಂಜರಿಯಬೇಡಿ. ನಾವು ಇತರರಿಗೆ ಜೀವನವಿಡೀ ಕ್ಯಾರೆಕ್ಟರ್‌ ಸರ್ಟಿಫಿಕೇಟ್‌ ಕೂಡಾ ಕೊಡಬೇಕಿಲ್ಲ,” ಎಂದು ಶೀತಲ್ ಇಂದಿನ ಆಧುನಿಕ ಯುವತಿಯರಿಗೆ ಕಿವಿ ಮಾತು ಹೇಳುತ್ತಾರೆ.

– ಅಶೋಕ ಚಿಕ್ಕಪರಪ್ಪಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ