ನಶೆಯ ಗುಂಗಿನಲ್ಲಿ ಬಾಲಿವುಡ್
ಸುಶಾಂತ್ ಸಿಂಗ್‌ನ ಆತ್ಮಹತ್ಯೆಯ ಪ್ರಕರಣದಲ್ಲಿ ರಿಯಾ ಚಕ್ರರ್ತಿಯ ಹೆಸರು ಇನ್ನಷ್ಟು ಸಿಕ್ಕಾಗಿ ಗೋಜಲಾಗಿ ಕೇಳಿಬರುತ್ತಿದೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ….. ಡ್ರಗ್ ಡೀಲಿಂಗ್ ಮಾಫಿಯಾ! ಈಕೆ ಸುಶಾಂತನಿಗೆ ಡ್ರಗ್ಸ್ ಒದಗಿಸುತ್ತಿದ್ದಳು ಎಂಬುದೇ ಹೊಸ ಆರೋಪ. ಬಾಲಿವುಡ್ (ಇದೀಗ ಇಂದ್ರಜಿತ್ ಲಂಕೇಶ್‌ರ ಮುಖಾಂತರ ಸ್ಯಾಂಡಲ್ ವುಡ್ ಸ್ಟಾರ್‌ಗಳೂ ಕಡಿಮೆಯೇನಲ್ಲ ಎಂದು ಮೀಡಿಯಾ ಹೇಳುತ್ತಿದೆ!) ಸ್ಟಾರ್‌ಗಳಿಗೂ ಡ್ರಗ್ಸ್ ಡೀಲಿಂಗ್‌ಗೂ ಅನಾದಿಕಾಲದ ನಂಟು. ಸೆಲೆಬ್ರಿಟಿ ಬರ್ತ್ ಡೇ ಪಾರ್ಟಿಗಳು ನಡುರಾತ್ರಿ ದಾಟುತ್ತಿದ್ದಂತೆ ರೇವ್ ಪಾರ್ಟಿಗಳಾಗುವುದು ಹೊಸದೇನಲ್ಲ. ಕಣ್ಣು ಕುಕ್ಕು ಗ್ಲಾಮರ್ ಬೆಡಗಿನ ಲೋಕದ ಮಧ್ಯೆ ಇದೇನೇನೂ ದೊಡ್ಡ ವಿಷಯವಲ್ಲ, ಸಾಮಾನ್ಯ ಜನರಿಗೆ ತಿಳಿದಾಗ ಬೆಚ್ಚಿಬೀಳುತ್ತಾರಷ್ಟೆ. ಸಿನಿಮಾವನ್ನು ಸಮಾಜದ ಕೈಗನ್ನಡಿಯಾಗಿಸುವ ಈ ಮಹಾನ್ ತಾರೆಯರು ಸಾಮಾಜಿಕ ಶಾಪವಾಗಿರುವ ನಶೆಯಲ್ಲಿ ಎಷ್ಟು ಮುಳುಗಿಹೋಗಿದ್ದಾರೆಂದರೆ ಅವರು ಮತ್ತೆ ಮಾಮೂಲಿ ಆಗುತ್ತಾರೆಯೇ ಎನಿಸುವಂತಾಗಿದೆ.
ಅರ್ಜುನನನ್ನು ನೆಪೋ ಪ್ರಾಡಕ್ಟ್ ಎನ್ನುತ್ತಿರುವವರು ಯಾರು?
ಇತ್ತೀಚೆಗೆ ಒಂದು ಅನಾಮಿಕ ಚಿತ್ರಕ್ಕೆ ಅರ್ಜುನ್ ಕಪೂರ್‌ನನ್ನು ನಾಯಕನೆಂದು ಘೋಷಿಸಲಾಯಿತು. ಚಿತ್ರೀಕರಣ ಶುರುವಾಗುವುದಿರಲಿ, ಮೀಡಿಯಾದಲ್ಲಿ ಈ ಘೋಷಣೆ ಬರುತ್ತಿದ್ದಂತೆಯೇ ಟ್ರೋಲಿಗರು ಸಕ್ರಿಯರಾದರು. ಅರ್ಜುನ್ ಕುರಿತಾಗಿ ವ್ಯಂಗ್ಯಾತ್ಮಕ ಮೀವ್ಸ್ ಪುಂಖಾನುಪುಂಖವಾಗಿ FBನಲ್ಲಿ ಹರಿದಾಡತೊಡಗಿತು. ಎಲ್ಲೆಲ್ಲೂ ಮಕ್ಕಳನ್ನು ಪೋಷಿಸಿಕೊಳ್ಳುವ ಗಾಡ್ ಫಾದರ್‌ಗಳ ಈ ಝಮಾನದಲ್ಲಿ ಅರ್ಜುನನಿಗೆ ಅವಕಾಶ ನೀಡಿದ ನಿರ್ಮಾಪಕರು ಅನಾಡಿಗಳಾಗಿರಬೇಕು ಅಥವಾ ಗಟ್ಟಿ ಗುಂಡಿಗೆಯವರು ಎಂದೂ ಟೀಕಿಸಿದರು. ಅರ್ಜುನನನ್ನು ನಂಬಿದರೆ ಚಿತ್ರ ಗೋತಾ ಎಂದು ಈಗಾಗಲೇ ಹಲವು ಸಲ ಸಾಬೀತಾಗಿದೆ. ಕೆಲವರಂತೂ ಇವನನ್ನು ನೆಪೋ ಪ್ರಾಡಕ್ಟ್ ಎಂದು ಕಟಕಿಯಾಡಿದ್ದಾರೆ. ಮಲೈಕಾ ಅರೋರಾಳ (ಇವನಿಗಿಂತಲೂ ಹಿರಿಯವಳಾದ, ಸಲ್ಮಾನ್‌ನ ಮಾಜಿ ಅತ್ತಿಗೆ, ಡೈವೋರ್ಸಿ) ಜೊತೆ ಇವನ ಅಫೇರ್ ಟ್ರೋಲಿಗರ ವ್ಯಂಗ್ಯಕ್ಕೆ ಕಾರಣವಾಗಿತ್ತು. ಈಗ ಕಳೆ ಮೇಲೆ ಮಳೆ ಎಂಬಂತೆ ಇದೂ ಸೇರಿಕೊಂಡಿತು!
ಗೃಹ ಹಿಂಸೆಗೆ ಬಲಿಯಾದ ಟಿವಿ ಸ್ಟಾರ್
ಟಿವಿ ಧಾರಾವಾಹಿ `ಕುಂಕುಂ ಭಾಗ್ಯ’ ನಾಯಕಿ ನಟಿ ತೃಪ್ತಿ ಶಂಖಧರ್, ಇತ್ತೀಚೆಗೆ FBಗೆ ತನ್ನ ಹಲವಾರು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾಳೆ. ಅದರಲ್ಲಿ ಅವಳ ತಂದೆ ಸ್ವಂತ ಮಗಳನ್ನೇ ಹೊಡೆದೂ ಬಡಿದೂ ಸಾಯಿಸಿಬಿಡುವೆ ಎನ್ನುವ ಘೋರ ಬೆದರಿಕೆಗಳಿವೆ! ತಂದೆ ತನ್ನನ್ನು ತಾನು ತೋರಿಸಿದ ವರನನ್ನೇ ತಕ್ಷಣ ಮದುವೆಯಾಗುವೆ, ಮದುವೆಯಾಗುವೆ ಎಂದು ಶೋಷಿಸುತ್ತಿದ್ದಾರೆಂದು ಅವಲತ್ತುಕೊಂಡಿದ್ದಾಳೆ. ಇದು ಸುಳ್ಳೋ ನಿಜವೋ ಕೆಲವೇ ದಿನಗಳಲ್ಲಿ ಗೊತ್ತಾಗೇ ಆಗುತ್ತದೆ. ಇದರಿಂದ ಸ್ಪಷ್ಟವಾಗುವ ಒಂದು ಅಂಶವೆಂದರೆ ಸುಶಿಕ್ಷಿತ, ಅನುಕೂಲಸ್ಥ ಪರಿವಾರದ ಕಲಿತು, ಸಂಪಾದಿಸುವ ಹೆಣ್ಣುಮಕ್ಕಳೂ ಸಹ ಇಂದಿನ ಕಾಲದಲ್ಲೂ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದು. ಈ ಘಟನೆ ಖಂಡನೀಯ, ಸಮಾಜದ ಕರಾಳ ಮುಖ ತೋರಿಸುತ್ತದೆಂಬುದೂ ನಿಜ, ಆದರೆ ಸುಶಾಂತನಿಗೆ ಸಿಕ್ಕಂತೆ ಕರುಣಾ ಪ್ರವಾಹದ ನೆಪದಿಂದ ಟಿವಿ ಚಾನೆಲ್ ಸುಧಾರಿಸುವ ಇನ್ನೊಂದು ಹುನ್ನಾರ ಆಗಬಾರದು.
ತಮ್ಮ ಬಯೋಪಿಕ್ ತಾವೇ ತಯಾರಿಸಿಕೊಳ್ಳುತ್ತಿದ್ದಾರೆ!
ತಮ್ಮ ಕೆಲಸಗಳಿಗಿಂತ ಹೆಚ್ಚಾಗಿ ವಿವಾದಗಳಿಂದಾಗಿಯೇ ಖ್ಯಾತನಾಮರಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸುದ್ದಿಯಲ್ಲಿರಲು ಸದಾ ಏನಾದರೂ ಮಾಡುತ್ತಲಿರುತ್ತಾರೆ. `ಸತ್ಯ, ಸರ್ಕಾರ್, ಡರ್‌ನಾ ಮನಾ ಹೈ, ಡರ್‌ನಾ ಝರೂರಿ ಹೈ’ ಇತ್ಯಾದಿ ದೆವ್ವದ ಸಿನಿಮಾಗಳಿಂದಲೇ ನೆಗೆಟಿವ್ ಪಬ್ಲಿಸಿಟಿ ಗಳಿಸಿದ್ದ ಈ ಭೂಪತಿ ಇದೀಗ ತನ್ನದೇ ಆತ್ಮಕಥೆಯ ಬಯೋಪಿಕ್ ಚಿತ್ರ ತಯಾರಿಸಲು ಹೊರಟಿರುವುದು ನಿಜಕ್ಕೂ ವಿಡಂಬನೆಯೇ ಸರಿ! ಒಬ್ಬರ ಸಾಧನೆ ಗುರುತಿಸಿ ಬೇರೆಯವರು ಅವರ ಬಯೋಪಿಕ್ ಮಾಡುವುದು ಲೋಕಾರೂಢಿ, ಆದರೆ ಈತ ತನ್ನ ಬಗ್ಗೆ ತಾನೇ ಟಾಂಟಾಂ ಸಾರುತ್ತಿರುವುದು ಯಾಕೋ ಅತಿ ಎನಿಸುತ್ತದೆ ಎಂದು FBನಲ್ಲಿ ಟ್ರೋಲಿಗರು ಕೆರಳಿದ್ದಾರೆ. ಇದಕ್ಕೂ ಭಯಂಕರ ವಿಷಯ ನಿಮಗೆ ಗೊತ್ತೇ? ಈ ಕರ್ಮಕಾಂಡಕ್ಕೆ ಪಾರ್ಟ್ ಬರುತ್ತದಂತೆ….! ಈ ಮೊದಲ ಭಾಗದಲ್ಲಿ ಅಂಥ ವಿಶೇಷವೇನಿದೆ ಎಂದು ತಿಳಿಯಲು ನೀವು ತುಸು ಕಾಯಲೇಬೇಕು. ತನ್ನ ಬಯೋಪಿಕ್‌ನಿಂದ ಹಲವಾರು ವಿವಾದಗಳು ಎದುರಾಗಲಿವೆ ಎಂದು ಚೆನ್ನಾಗಿಯೇ ಗೊತ್ತಿದೆ.
ನಾನು ಮತ್ತೆ ಹಳೆಯ ಪಾತ್ರ ನಿರ್ವಹಿಸಲಾರೆ!
ಕಾಮಿಡಿ ವಿತ್ ಕಪಿಲ್ ಶರ್ಮ ಶೋನಲ್ಲಿ `ಗುತ್ತಿ’ಯಾಗಿ ಸೀರೆ ಉಟ್ಟುಕೊಂಡು ಹುಚ್ಚು ಡಾಕ್ಟರಾಗಿ ಎಲ್ಲರನ್ನೂ ಮನರಂಜಿಸುತ್ತಿದ್ದ ಸುನೀಲ್ ಗ್ರೋವರ್, ಕಪಿಲ್‌ನೊಂದಿಗಿನ ವೈಯಕ್ತಿಕ ಜಗಳದಿಂದಾಗಿ, ಆ ಶೋ ವೀಕ್ಷಕರು ಅಪಾರ ನಿರಾಸೆಗೆ ಒಳಗಾಗುವಂತೆ, ಅದರಿಂದ ಹೊರಬಿದ್ದಿರುವ ಸಂಗತಿ ಹಳೆಯದು. ಕಪಿಲ್ ಅಂತೂ ಇಂತೂ ಏನೋ ಮಾಡಿ ತನ್ನ ಶೋ ಪುನಃ ಆರಂಭಿಸಿದ. ಆದರೆ ಅವನ ಸೋದರತ್ತೆ ಪಾತ್ರ ನಿರ್ವಹಿಸುತ್ತಿದ್ದ ಉಪಾಸನಾ ಸಿಂಗ್, ಸುನೀಲ್‌ರಂಥ ಘಟಾನುಘಟಿಗಳು ಶೋ ಬಿಟ್ಟದ್ದು ಕಪಿಲ್‌ಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಪ್ರೇಕ್ಷಕಕರ ಒತ್ತಾಯದ ಮೇರೆಗೆ ನೀನೇಕೆ ಆ ಶೋಗೆ ಮರಳಬಾರದು ಎಂದು ಸುದ್ದಿಗಾರರು ಕೇಳಿದಾಗ, ಆ ಹಳೆಯ `ಗುತ್ತಿ’ ಪಾತ್ರ ಮತ್ತೆ ನಿರ್ವಹಿಸಲಾರೆ ಎನ್ನುವ ಸುನೀಲ್, ಭಾಭೀಜಿ ಖ್ಯಾತಿಯ ಶಿಲ್ಪಾ ಶಿಂಧೆ ಜೊತೆ ಬೆರೆತು ನಿಂತು ಹೋಗಿದ್ದ ತನ್ನದೇ ಹಳೆಯ ಶೋ `ಗ್ಯಾಂಗ್ಸ್ ಆಫ್ ಫಿಲ್ಮಿಸ್ತಾನ್’ ಪುನಃ ಆರಂಬಿಸಲಿದ್ದಾನೆ! ಮುಂದೆಂದೂ ಕಪಿಲ್ ಜೊತೆ ಕೈ ಜೋಡಿಸುವುದೇ ಇಲ್ಲವೇ ಎಂದು ಮತ್ತೆ ಮತ್ತೆ ಕೇಳಿದ್ದಕ್ಕೆ ಸದ್ಯಕ್ಕಿಲ್ಲ….. ಮುಂದೆ ನನ್ನನ್ನು ವಿಧಿ ಹಾಗೇ ಜೋಡಿಸಿದರೆ ಏನು ಮಾಡಲಾದೀತು…. ಎಂದು ಅಡ್ಡ ಗೋಡೆ ಮೇಲೆ ದೀಪವಿಡುವ ಮಾತನಾಡುತ್ತಾನೆ ಸುನೀಲ್.
ತಾಪಸಿಗೆ ದಿಢೀರ್ ಎಂದು ರಿಚ್ ಡಯೆಟ್‌ನ ವ್ಯಾಮೋಹವೇಕೆ?
ತಾಪಸಿ ಪನ್ನು ಇತ್ತೀಚೆಗೆ ಹೆಚ್ಚಾಗಿ ಕಾರ್ಬೋಹೈಡ್ರೇಟ್ ರಿಚ್ ಡಯೆಟ್ ಆಹಾರವನ್ನಷ್ಟೇ ಸೇವಿಸುತ್ತಿದ್ದಾಳಂತೆ! ಇವಳಿಗೇಕಪ್ಪ ಈ ವ್ಯಾಮೋಹ ಎಂದು ನೀವು ಯೋಚಿಸಿದರೆ ತಪ್ಪಲ್ಲ. ಏಕೆಂದರೆ ಈ ಅಮ್ಮಣ್ಣಿ ಇದೀಗ ತನ್ನ ಮುಂದಿನ `ರಶ್ಮಿ ರಾಕೆಟ್’ ಚಿತ್ರಕ್ಕಾಗಿ ಭಾರಿ ತಯಾರಿ ನಡೆಸಿದ್ದಾಳಂತೆ. ಈ ಚಿತ್ರದಲ್ಲಿ ಅವಳು ಒಬ್ಬ ವೇಗದ ಓಟಗಾರ್ತಿಯ ಪಾತ್ರ ನಿರ್ವಹಿಸುತ್ತಿದ್ದಾಳೆ. ಅಥ್ಲೀಟ್‌ನಂಥ ಬಾಡಿ ಹೊಂದಲಿಕ್ಕಾಗಿಯೇ ಈಕೆ ಹೀಗೆ ತಿನ್ನುತ್ತಿದ್ದಾಳಂತೆ. ಆಹಾ ಇದೇನಮ್ಮ ತಾಪಸಿ, ನೀನು ಪಾತ್ರಕ್ಕಾಗಿ ಪರಕಾಯ ಪ್ರವೇಶ ಮಾಡುತ್ತಿರುವುದೇನೋ ಸರಿ, ಆದರೆ ನಿಜವಾದ ಓಟಗಾರರು ಒಲಿಂಪಿಕ್ಸ್ ನಲ್ಲಿ ಬೇಸ್ತುಬಿದ್ದಾರು, ಹುಷಾರ್ ಎನ್ನುತ್ತಿದ್ದಾರೆ ಹಿತೈಷಿಗಳು.
ಇದೀಗ ಇಮ್ರಾನ್ ಮಾಡಲಿದ್ದಾನೆ ಕಾಮಿಡಿ
ಕಿಸ್ಸಿಂಗ್ ಕಿಂಗ್ ಇಮ್ರಾನ್ ಹಾಶ್ಮಿಯನ್ನು ಇದುವರೆಗೂ ನೀವು ಗಂಭೀರ, ಗ್ರೇ ಶೇಡ್ಸ್ ನ ಪಾತ್ರಗಳಲ್ಲಿ ಮಾತ್ರ ನೋಡಿರುತ್ತೀರಿ, ಆದರೆ ಸುದ್ದಿಗಾರರ ಪ್ರಕಾರ ಆತ ಸದ್ಯದಲ್ಲೇ ಕಾಮಿಡಿ, ಡ್ರಾಮಾ ಬಾಝಿ ತುಂಬಿರುವ `ಸಬ್ ಫಸ್ಟ್ ಕ್ಲಾಸ್ ಹೈ’ ಚಿತ್ರದಲ್ಲಿ ಪ್ರೇಕ್ಷಕರನ್ನು ನಗಿಸುವ ಪಾತ್ರದಲ್ಲಿ ಕಾಣಸಲಿದ್ದಾನಂತೆ. ಸದಾ ಸೀರಿಯಲ್ ಕಿಸ್ಸರ್ ಆಗಿದ್ದ ತನ್ನ ಇಮೇಜ್‌ನ್ನು ಬಿಟ್ಟು ತುಟಿಗೆ ತುಟಿ ಬಿಗಿಯುವ ಪಾತ್ರವಲ್ಲದೆ ಬೇರೆ ಗಟ್ಟಿ ಪಾತ್ರಗಳಲ್ಲೂ ತಾನು ಮಿಂಚಬಲ್ಲೇ ಎಂದು ಸಾಬೀತು ಪಡಿಸಲು ಅಹರ್ನಿಶಿ ಹೋರಾಡುತ್ತಿದ್ದಾನೆ. ಆದರೆ ಫಾರ್ಮುಲಾ ಪ್ರಿಯ ಪ್ರೇಕ್ಷಕರು ಇನ್ನೂ ಅವನನ್ನು ಹಾಗೇ ಲಿಪ್ ಲಾಕ್ ದೃಶ್ಯಗಳಲ್ಲೇ ನೋಡಬಯಸುತ್ತಾರೆ ಎಂಬುದು ಬೇರೆ ಮಾತು. ಒಂದು ಸಲ ಒಂದು ಇಮೇಜ್ ಬಂದುಬಿಟ್ಟ ಮೇಲೆ ಅದರಿಂದ ಹೊರಬರುವುದು ಬಲು ಕಷ್ಟ ಮಾತ್ರವಲ್ಲ ಅಸಾಧ್ಯ ಕೂಡ ಎನ್ನುತ್ತಾರೆ ಹಿತೈಷಿಗಳು. ಕಾಮಿಡಿ ಪಾತ್ರ ಗೆಲ್ಲುವಂತಾಗಲಿ, ಆಲ್ ದಿ ಬೆಸ್ಟ್ ಇಮ್ರಾನ್‌ಎನ್ನೋಣವೇ?
ಕೊರೋನಾದಿಂದ ಕೊರಗುತ್ತಿರುವ ಶೋಷಿತೆ ಶಿಲ್ಪಾ
ಕಿರುತೆರೆಯ ಕಾಮಿಕ್ ರೋಲ್ಸ್ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಟಿ ಎಂದರೆ ಶಿಲ್ಪಾ ಶಿಂಧೆ. ಇತ್ತೀಚೆಗೆ ಆಕೆ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಶೋ ನಿರ್ಮಾಪಕರ ವಿರುದ್ಧ ಗಂಭೀರ ಆರೋಪ ಹೊರಿಸಿದಳು. ಕೊರೋನಾ ಹೆಸರಿನಲ್ಲಿ ನಷ್ಟದ ಬಾಬತ್ತು ತೋರಿಸಿ ನಿರ್ಮಾಪಕರು ಧಾರಾವಾಹಿಯ ಸಿಬ್ಬಂದಿಗೆ ಸೋಡ ಚೀಟಿ ನೀಡುತ್ತಿರುವುದಲ್ಲದೆ, ಸಂಭಾವನೆಗೂ ಮನ ಬಂದಂತೆ ಕತ್ತರಿ ಹಾಕುತ್ತಿದ್ದಾರೆ ಎಂಬುದು ಈಕೆಯ ಆರೋಪ. ಆಕೆ ಹೇಳಿದ್ದೆಂದರೆ, ಲಾಕ್ ಡೌನ್ ನೆಪದಲ್ಲಿ ಹಳೆಯ ಜನಪ್ರಿಯ ಕಂತುಗಳನ್ನೇ ಮತ್ತೆ ಮತ್ತೆ ಪ್ರಸಾರ ಮಾಡಿ ನಿರ್ಮಾಪಕರು ಜಾಹೀರಾತು ಮೂಲಕ ಧಾರಾಳ ಹಣ ಬಾಚಿಕೊಂಡರು, ನಷ್ಟ ಎಳ್ಳಷ್ಟೂ ಇಲ್ಲ! ಹಾಗಿರುವಾಗ ನಮ್ಮಂಥ ಮಧ್ಯಮ ವರ್ಗದ ಕಲಾವಿದರ ಹೊಟ್ಟೆ ಮೇಲೆ ಹೊಡೆಯುವ ಹುನ್ನಾರವೇಕೆ ಎಂದು ಕೆರಳಿದ್ದಾರೆ. ಶಿಲ್ಪಾ, ಸ್ವಲ್ಪ ಹುಷಾರಾಗಿ ಮಾತನಾಡಮ್ಮ…. ಏಕೆಂದರೆ ಎಲ್ಲೆಲ್ಲೂ ನ್ಯಾಯ ಕೇಳುವವರ ಬಳಿ ಅವರ ಮಾತುಗಳು ಮಾತ್ರ ಉಳಿಯುತ್ತಿಯೇ ಹೊರತು ಇದ್ದ ಕೆಲಸವಲ್ಲ ಎಂಬುದು ಹಿತೈಷಿಗಳ ಸಲಹೆ.
ಛೋಟಾ ನವಾಬ್‌ನ ಹೊಸ ಪುಸ್ತಕ
ಹಾಗೆ ನೋಡಿದರೆ ಪಟೌಡಿ ಶರ್ಮಿಳಾರ ಮಗ ಸೈಫ್ ಅಲಿಖಾನ್‌ನ ಜೀವನದಲ್ಲಿ ಈಗೀಗ ಏನೇನೋ ನಡೆಯುತ್ತಿದೆ. ಅಂದ್ರೆ ಕರೀನಾ ಇದೀಗ 2ನೇ ಸಲ ಪ್ರೆಗ್ನೆಂಟ್, ತಾನೇ ಫಿಲ್ಮಿ ರಾಜಕೀಯಕ್ಕೆ ಬಲಿ ಆಗುತ್ತಿರುವುದು…. ಇತ್ಯಾದಿ. ಅದೆಲ್ಲ ಬಿಡಿ, ಇದೀಗ ಈತ ತನ್ನ ಆಟೋಬಯೋಗ್ರಫಿ ಹಿಡಿದು ಕುಳಿತಿದ್ದಾನೆ! ಅದಾವ ಪ್ರಕಾಶಕ ಧುತ್ತೆಂದು ಇವನ ಮುಂದೆ ಬಂದು ಇವನ ಆತ್ಮಚರಿತ್ರೆಯ ಪುಸ್ತಕ ಪ್ರಕಟಿಸುತ್ತೇನೆಂದು ಮಾತು ಕೊಟ್ಟನೋ, FBನಲ್ಲಿ ಟ್ರೋಲಿಗರು ಇನವ ಬೆನ್ನಟ್ಟಿ ವ್ಯಂಗ್ಯಭರಿತ ಮೀವ್ಸ್‌ನ ಮಹಾಪೂರ ಹರಿಸುತ್ತಿದ್ದಾರೆ. ತಾನು ಎರಡನೇ ಸಲ ಕರೀನಾಳ ಮಗುವಿಗೆ ತಂದೆ ಆಗುತ್ತಿದ್ದೇನೆ ಎಂದು ಇವನು ಘೋಷಿಸಿದಾಗಲೂ ಹೀಗೇ ಆಗಿತ್ತು. ಇದಕ್ಕೇಕೆ ಈ ಛೋಟಾ ನವಾಬ್ ಬೇಸರಪಡಬೇಕು, ನೆಗೆಟಿವ್ ಪಬ್ಲಿಸಿಟಿಯೇ ಆಗಲಿ…. ಪ್ರಚಾರ ತಾನೇ ಮುಖ್ಯ?
ಎಲ್ಲಿದ್ದಾಳೆ ಯಾಮಿನಿ?
ಬಾಲಿವುಡ್‌ನಲ್ಲಂತೂ ಇದೀಗ ಬಗೆ ಬಗೆಯ ಪರಮಾಶ್ಚರ್ಯಗಳೇ ನಡೆದುಹೋಗುತ್ತಿವೆ, ಈ ಮಧ್ಯೆ ಯಾಮಿನಿ ಗೌತಮ್ ಕಾಣೆಯಾಗಿರುವುದು ತಕ್ಷಣ ಯಾರ ಗಮನಕ್ಕೂ ಬರಲಿಲ್ಲ. ಅವಳೂ ಈ ಚಿತ್ರವಿಚಿತ್ರಗಳ ಸುಳಿಯಲ್ಲಿ ಸಿಲುಕಲಿ ಎಂಬುದು ಹಿತೈಷಿಗಳ ಆಶಯವಾಗಿತ್ತು, ಆದರ ಕನಿಷ್ಠ ತಾನೆಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ, ಬದುಕಿಯೇ ಇದ್ದೇನಾ ಎಂಬುದನ್ನಾದರೂ ಹೇಳಬೇಕಲ್ಲವೇ? ಬೇರೆ ಕಲಾವಿದರು ಮಾಡುತ್ತಿರುವುದೂ ಅದೇ! ಕೊರೋನಾ ಕಾರಣ ಸುದ್ದಿಗಾರರ ಕ್ಯಾಮೆರಾ ಆಫ್ ಆದದ್ದೇ, ಯಾಮಿನಿಯಂಥ ಭಾಮಿನಿಯವರು ಅದೆಲ್ಲಿ ಮಾಯವಾದರೋ ಗೊತ್ತಿಲ್ಲ. ಆದರೂ ಈ ಅಮ್ಮಣ್ಣಿ ಬಗ್ಗೆ ದೊರೆತ ಸುದ್ದಿ ಎಂದರೆ, ಆಕೆ ಶಾದ್ ಅಲಿಯ ಮುಂದಿನ ಚಿತ್ರದಲ್ಲಿ ದಿಲ್ ಜೀತ್ ದೋ ಸಾಂರ್ (ಪಂಜಾಬಿ ಹೀರೋ) ಜೊತೆ ರೊಮಾನ್ಸ್ ನಡೆಸುವ ಸಾಧ್ಯತೆಗಳಿವೆಯಂತೆ. ಕಳೆದ ವರ್ಷ ಆಯುಷ್ಮಾನ್ ಜೊತೆ ಈಕೆ `ಬಾಲಾ’ದಲ್ಲಿ ಕಾಣಿಸಿದ್ದೇ ಕೊನೆ ಚಿತ್ರವಾಗಿತ್ತು. ಅಂದಹಾಗೆ ದಕ್ಷಿಣದ ಚಿತ್ರಗಳಲ್ಲಿ ಒಂದಿಷ್ಟು ಅವಕಾಶಗಳು ಸಿಗುತ್ತಿವೆಯಂತೆ, ಆ ಅಂತೆ ಕಂತೆ ನಂಬಬಹುದೋ ಇಲ್ಲವೋ ಅವಳೇ ತಿಳಿಸಬೇಕಷ್ಟೆ…..
ಮಿರ್ಜಾಪುರ್‌ಗೆ ಮುಸೀಬತ್ ಆಗಲಿರುವ ಗುಡ್ಡು ಭೈಯಾ
ವೆಬ್ ಸೀರೀಸ್ `ಮಿರ್ಜಾಪುರ್’ ಸರಣಿಯ ಗುಡ್ಡು ಬೈಯಾ ಪಾತ್ರಧಾರಿ ಅಲಿಫಝರ್ ನಿಮಗೆ ನೆನಪಿರಬೇಕಷ್ಟೆ. ಈ ಸರಣಿಯ ಮೊದಲ ಭಾಗದಲ್ಲಿ ಕೆಲಸ ಮಾಡಿ ಈತ ಪ್ರೇಕ್ಷಕರ ಮಧ್ಯೆ ಚರ್ಚೆಯ ಕೇಂದ್ರಭಾಗವಾಗಿದ್ದ, ಏಕೆಂದರೆ ಇವನ ಪಾತ್ರ ನಿರ್ವಹಣೆ ಅಷ್ಟು ಪ್ರಬಲವಾಗಿತ್ತು. ಆದರೆ ಅದೇ ಸರಣಿಯ ಸೆಕೆಂಡ್ ಸೀಸನ್ ಬರುವ ಮೊದಲೇ, ಈತ ಮತ್ತೆ ಚರ್ಚೆಗೆ ಸಿಲುಕಿದ್ದಾನೆ. ಆದರೆ ಈ ಬಾರಿ ಈತ ಚರ್ಚೆಗೆ ಗ್ರಾಸವಾಗಿರುವ ವಿಷಯ ಈ ವೆಬ್‌ಸೀರೀಸ್‌ನ ನಿರ್ಮಾಪಕರಿಗೆ ಭಾರಿ ದಂಡ ತೆರಬೇಕಾದ ಸ್ಥಿತಿ ಬಂದಿದೆ. ಅಸಲಿಗೆ ಅಲಿಯ ಕಾನೂನಿಗೆ ವಿರುದ್ಧವಾಗಿ FBನಲ್ಲಿ ಹಲವು ಸಲ ಕೆಂಡ ಕಾರಿದ್ದಾನೆ. ಆದರೆ ಭಗವಾ ಅನುಯಾಯಿಗಳು ಬಿಟ್ಟಾರೆಯೇ? ಈತ ತಾನು ಸೀರೀಸ್‌ನ ಸೆಕೆಂಡ್ ಸೀಸನ್‌ನಲ್ಲಿಯೂ ಪಾತ್ರ ವಹಿಸುತ್ತೇನೆ ಎಂದಿದ್ದೇ ತಡ, ಅವರೆಲ್ಲ ಈ ಸೀರೀಸ್‌ನ್ನು ಬಾಯ್ ಕಟ್ ಮಾಡಲೇಬೇಕೆಂದು ಆಗ್ರಹ ಪಡಿಸತೊಡಗಿದರು. ಇತ್ತೀಚೆಗೆ ನಮ್ಮ ದೇಶದಲ್ಲಿ ಯಾರು ತಮ್ಮ ಮಾತನ್ನು ಒತ್ತಿ ಹೇಳುತ್ತಾರೋ ಅವರೇ ದೇಶದ್ರೋಹಿಗಳೆಂದು ಗುರುತಿಸಲ್ಪಡುತ್ತಾರೆ ಎಂಬುದನ್ನು ಅಲಿ ಮರೆತಂತಿದೆ.