ಹುಡುಗಿಯರ ಸ್ವಾತಂತ್ರ್ಯದ ದುರ್ದೆಸೆ ಎಲ್ಲಿಯತನಕ?
ಹೆಚ್ಚುತ್ತಿರುವ ನಿರುದ್ಯೋಗದ ಒಂದು ಪರಿಣಾಮ ಏನಾಗಿದೆಯೆಂದರೆ, ಹುಡುಗಿಯರು ಓದು ಮುಗಿಸುತ್ತಿದ್ದಂತೆಯೇ ಕೆರಿಯರ್ ಕಾರಣದಿಂದಾಗಿ ಕೆಲವು ವರ್ಷ ಮನೆಯಿಂದ ಹೊರಗೆ ಇರುತ್ತಿದ್ದರು. ಆ ಅವಧಿಯಲ್ಲಿ ಇಷ್ಟವಾದವರೊಂದಿಗೆ ಪ್ರೀತಿ, ಸೆಕ್ಸ್ ಹಾಗೂ ವಿವಾಹ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಮನೆಯಲ್ಲಿಯೇ ಇದ್ದಾರೆ ಹಾಗೂ ಮನೆಯವರ ಮದುವೆಯ ಒತ್ತಡವನ್ನು ಎದುರಿಸಬೇಕಾಗಿ ಬರುತ್ತಿದೆ. ತಂದೆತಾಯಿ ಎಷ್ಟೇ ಉದಾರಿಗಳಾದರೂ, ಮಗಳು ದುಡಿಯುತ್ತಿಲ್ಲವೆಂದರೆ ಆಕೆಗೆ ಸೂಕ್ತ ವರ ಸಿಗುವುದಿಲ್ಲ ಎಂದು ಭಾವಿಸುತ್ತಾರೆ.
ಪೋಷಕರ ಒತ್ತಡ ಅವರಿಗೆ ಅಪ್ರಿಯ ಎನಿಸುತ್ತದೆ. ಏಕೆಂದರೆ ಹಳ್ಳಿಗಳಲ್ಲಿ, ಪುಟ್ಟ ನಗರಗಳಲ್ಲಿ ವಾಸಿಸುವ ಹೆಚ್ಚಿನ ಹುಡುಗರು ಅರೆಬರೆ ಓದಿದವರು ಹಾಗೂ ಅಷ್ಟಿಷ್ಟು ಯಶಸ್ವಿಯಾದರು. ಯಶಸ್ವಿ ಮತ್ತು ಸ್ಮಾರ್ಟ್ ಯುವಕರಂತೂ ದೊಡ್ಡ ದೊಡ್ಡ ನಗರಗಳಲ್ಲಿ ನೌಕರಿಗೆಂದು ಹೊರಟು ಹೋಗಿರುತ್ತಾರೆ. ಹುಡುಗಿಯರು 5-6 ಹುಡುಗರನ್ನು ನಿರಾಕರಿಸಿದ ಬಳಿಕ ಏನು ಮಾಡುವುದೆಂದು ಚಿಂತೆ ಶುರುವಾಗುತ್ತದೆ. ಮಧ್ಯವರ್ತಿಗಳು ಯಾವ್ಯಾವುದೊ ಸಂಬಂಧಗಳನ್ನು ತೆಗೆದುಕೊಂಡು ಬರುತ್ತಾರೆ. ಅವರು ಹುಡುಗಿಯರಿಗೆ ಇಷ್ಟವಾಗುವುದೇ ಇಲ್ಲ.
ಓದುಬರಹ ಬಲ್ಲ ನಿಪುಣ ಹುಡುಗಿಯರು ಸರ್ಕಾರದ ತಪ್ಪು ನೀತಿಗಳಿಂದಾಗಿ ಮತ್ತಷ್ಟೂ ತೊಂದರೆ ಅನುಭವಿಸುವಂತಾಗಿದೆ. ಆದರೆ ಚುಕ್ಕಾಣಿ ಹಿಡಿದವರಿಗೆ ಇದರ ಅರಿವೇ ಇಲ್ಲ. ಪ್ರತಿಯೊಂದು ಸಂಗತಿಯನ್ನು ಕರ್ಮ ಹಾಗೂ ಹಣೆಬರಹದ ಮೇಲೆ ಹೇರುತ್ತಾರೆ. ಪ್ರಧಾನಿ ಯಾವುದೇ ಶಾಸ್ತ್ರದ ಹೆಸರು ಉಲ್ಲೇಖಿಸದೆಯೇ ಸಂಸ್ಕೃತದಲ್ಲಿ ಮಾತನಾಡುತ್ತಾರೆ ಹಾಗೂ ವಿತ್ತ ಸಚಿವರು ದೇಶದ ಆರ್ಥಿಕ ದುರವಸ್ಥೆಯನ್ನು `ಆ್ಯಕ್ಟ್ ಆಫ್ ಗಾಡ್’ ಎನ್ನುತ್ತಾರೆ. ಇಂತಹ ಸ್ಥಿತಿಯಲ್ಲಿ ಒಬ್ಬ ಯುವತಿಗಾಗಿ ಹೇಳಲು, ಮಾಡಲು ಉಳಿದಿರುವುದಾದರೂ ಏನಿದೆ?
ಕಳೆದ 4-5 ದಶಕಗಳಿಂದ ಹುಡುಗಿಯರು ಹುಡುಗರಿಗೆ ಸರಿಸಮಾನ ಆಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಆ ಅಪೇಕ್ಷೆ ಈಗ ದೂರವಾಗುತ್ತಿದೆ. ಏಕೆಂದರೆ ಹುಡುಗಿಯರಿಗೆ ನೌಕರಿ ದೊರೆಯದೇ ಇದ್ದರೆ ಅವರು ಅಡುಗೆಮನೆಗೆ ಸೀಮಿತರಾಗಬೇಕಾಗುತ್ತದೆ. ಅವರು ಬಯೋಕೆಮಿಸ್ಟ್ರಿ ಮಾಡಿರಬಹುದು ಅಥವಾ ಪಿಎಚ್‌ಡಿ. ಮನೆಯಲ್ಲಿ ಹುಡುಗರು ಏನೂ ಮಾಡದೇ ಕೂತಿದ್ದರೆ ಪೋಷಕರು ಅವರನ್ನು ಹೊರಗೆ ಕಳಿಸುತ್ತಾರೆ. ಏಕೆಂದರೆ ಮನೆಯಲ್ಲಿ ಶಾಂತಿ ಇರಬೇಕು. ಇದರರ್ಥ ಇಷ್ಟೇ, ಮೈಗಳ್ಳ ಹುಡುಗರು ಹಾಗೂ ಮನೆಯಲ್ಲಿ ಕೆಲಸ ಮಾಡುವ ಹುಡುಗಿಯರ ಸಂಖ್ಯೆ ಹೆಚ್ಚುತ್ತದೆ.
ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದ ದೇಶದ ಅರ್ಥವ್ಯವಸ್ಥೆ ಹೆಚ್ಚು ಹದಗೆಟ್ಟಿದೆ. ಕೊರೋನಾ ಪೂರ್ವಾರ್ದದಲ್ಲಿಯೇ ಕಾರ್ಖಾನೆಗಳು ಬಂದ್ ಆಗುತ್ತಿದ್ದವು. ಉತ್ಪಾದನೆ ಕಡಿಮೆ ಆಗುತ್ತಿತ್ತು. ದೇಶದ ಮುಖಂಡರಿಗೆ ಹಿಂದೂ ಮುಸ್ಲಿಂ ಮತ್ತು ಮಂದಿರದ್ದೇ ಚಿಂತೆಯಾಗಿದೆ. ಹುಡುಗಿಯರ ತಂದೆ ತಾಯಿಯರಿಗೆ ಪ್ರವಚನ, ತೀರ್ಥಯಾತ್ರೆ, ಪವಿತ್ರ ಸ್ನಾನದಿಂದ ತಮ್ಮ ಮಕ್ಕಳ ಉದ್ಧಾರವಾಗುತ್ತದೆ ಎಂಬ ನಂಬಿಕೆ ಇದೆ.
ಹಲವು ದಶಕಗಳ ಬಳಿಕ ಹುಡುಗಿಯರಿಗೆ ನೌಕರಿ ದೊರಕುವುದರ ಮೂಲಕ ಅವರಿಗೆ ಒಂದಿಷ್ಟು ಸ್ವಾತಂತ್ರ್ಯ ಲಭಿಸಿತ್ತು. ಹುಡುಗರ ಸರಿಸಮಾನ ನಡೆಯುವುದು ಸಾಧ್ಯವಾಗುತ್ತಿತ್ತು. ಆದರೆ ಭಾರತದಲ್ಲಿ ಇದೇ ಪ್ರಥಮ ಬಾರಿಗೆ ಹಾಗೂ ಇತರೆ ದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅವರ ಕೈಲಾದ ಅವಕಾಶಗಳು ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ.
ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಭಿಮಾನಿಗಳ ಸಂಖ್ಯೆ ಈಗಲೂ ಹೆಚ್ಚಿಗೆ ಇದೆ. ಧರ್ಮದಲ್ಲಿ ನಂಬಿಕೆಯುಳ್ಳ ಜನರು ಅವರನ್ನು ಇಷ್ಟಪಡುತ್ತಾರೆ ಮತ್ತು ಧಾರ್ಮಿಕರು ಬಿಳಿಯರನ್ನು ಸಮರ್ಥಿಸುತ್ತಾರೆ.
ಆದರೆ ಅಲ್ಲಿ ಹುಡುಗ ಹುಡುಗಿಯರಿಗೆ ಸಮಾನ ಅವಕಾಶಗಳು ಲಭಿಸುತ್ತಿವೆ. ಅಲ್ಲಿ ಮಧ್ಯಸ್ಥಿಕೆದಾರರ ಹಾವಳಿ ಇಲ್ಲ.
ಭಾರತದಲ್ಲಿ ಹುಡುಗಿಯರ ಸ್ವಾತಂತ್ರ್ಯದ ದುರ್ದೆಸೆ ಎಲ್ಲಿಯವರೆಗೆ ಇರುತ್ತದೆ, ಎಷ್ಟು ಜನರಿಗೆ ಪ್ರಭಾವ ಬೀರುತ್ತದೆ ಎಂದು ಹೇಳಲು ಆಗದು. ಆದರೆ ಇದು ದೀರ್ಘಾವಧಿತನಕ ಇರುತ್ತದೆ ಎನ್ನುವುದು ಮಾತ್ರ ಸತ್ಯ. ಈಗಲೂ ಬಹಳಷ್ಟು ಬಗೆಯ ಪ್ರಚಾರ ನಡೆಯುತ್ತಿದೆ. ಅದರಲ್ಲೂ ಕೆಲವು ಬಗೆಯ ಮದುವೆಯ ಕುಕೃತ್ಯಗಳಿಗೆ ಕಾನೂನು ಪ್ರೋತ್ಸಾಹ ಕೊಡುವುದರ ಮೂಲಕ ವ್ಯವಸ್ಥೆಯನ್ನು ಭ್ರಷ್ಟಗೊಳಿಸುವ ಕುಮ್ಮಕ್ಕು ನೀಡುವುದರ ಮೂಲಕ ರಾಷ್ಟ್ರದ ಸರ್ವನಾಶದ ಬೀಜ ಬಿತ್ತಲಾಗುತ್ತಿದೆ.
ಈ ಎಲ್ಲ ಸಂಗತಿಗಳು ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತವೆ ಎಂದು ಹೇಳುವುದು ಕಷ್ಟ. ಆದರೆ ಹುಡುಗಿಯರನ್ನು ಮತ್ತು ಮಹಿಳೆಯರನ್ನಂತೂ 8ನೇ ಶತಮಾನಕ್ಕೆ ಕೊಂಡೊಯ್ಯುತ್ತವೆ. ಹುಡುಗಿಯರಿಗೆ ನೌಕರಿ ಕೈತಪ್ಪುತ್ತಿರುವುದು ಅದರ ಮೊದಲ ಹೆಜ್ಜೆಯಾಗಿದೆ. ಮೂರ್ನಾಲ್ಕು ವರ್ಷಗಳ ಕಾಲ ಹುಡುಗಿಯರಿಗೆ ನೌಕರಿಗಳು ಸಿಗದೇ ಇದ್ದರೆ, ಪೋಷಕರು ಅವರ ಶಿಕ್ಷಣಕ್ಕೆ ಮಾಡುತ್ತಿರುವ ಖರ್ಚನ್ನು ಕಡಿಮೆ ಮಾಡಬಹುದಿತ್ತು. ಕೊರೋನಾ ಹಾಗೂ ಧಾರ್ಮಿಕ ಪ್ರಚಾರಗಳಿಂದ ಈಗ ಹೊರಗೆ ಹೋಗುವುದೇ ಕಷ್ಟವಾಗುತ್ತಿದೆ. ಹುಡುಗಿಯರಿಗೆ ಬೇರೆ ನಗರಗಳ, ಬೇರೆ ದೇಶಗಳಲ್ಲಿ ಶಿಕ್ಷಣ ಏಕೆ ಕೊಡಬೇಕು. ಅವರಿಗೆ ಮದುವೆ ಮಾಡಿಬಿಡುವುದೇ ಸರಿ ಎಂದು ಅನ್ನಿಸುತ್ತದೆ. ಮನೆಯಲ್ಲಿ ಕುಳಿತು ಬೇಸತ್ತ ಹುಡುಗಿಯರಿಗೆ ಮದುವೆ ಮಾಡಿಬಿಡುವುದು ತಂದೆ ತಾಯಿಯರಿಗೆ ಅವರ ಮುಕ್ತಿಯ ದಾರಿ ಎನಿಸುತ್ತದೆ. ಆಗ ಹಳೆಯ ತಲೆಮಾರಿನವರಂತೆ ಅಡುಗೆ ಮನೆ ಹಾಗೂ ಮಕ್ಕಳಲ್ಲೇ ಅವರ ಜೀವನ ಕಳೆದು ಹೋಗುತ್ತದೆ.
ಹೆಂಡತಿ ಗಂಡನ ವಿರುದ್ಧ ಸಿಡಿದೇಳಬಹುದು
ಹೆಂಡತಿಯಿಂದ ಗಂಡನ ಕೊಲೆಯಂತಹ ಪ್ರಕರಣಗಳು ಕಡಿಮೆ ಏನಿಲ್ಲ. ಆದರೆ ಅಂಥದು ಘಟಿಸಿದಾಗ ಆಶ್ಚರ್ಯ ಆಗುತ್ತದೆ. ಸೆಪ್ಟೆಂಬರ್ ಮೊದಲ ವಾರ ಹೈದರಾಬಾದ್‌ನ ಡಾಕ್ಟರ್ ಲೆಫ್ಟಿನೆಂಟ್ ಕರ್ನಲ್‌ರನ್ನು ಅವರ ಪತ್ನಿ ಅಡುಗೆಮನೆಯ ಚಾಕುವಿನಿಂದ ಇರಿದು ಕೊಂದರು. ಆ ಜೋಡಿಯ 23ರ ಪುತ್ರಿ ಪೊಲೀಸರಿಗೆ ಮಾಹಿತಿ ಕೊಟ್ಟಳು.
ಗಂಡ ತನಗೆ ಮಾನಸಿಕ ಹಾಗೂ ದೈಹಿಕ ಶಿಕ್ಷೆ ಕೊಡುತ್ತಿದ್ದ ಎನ್ನುವುದು ಹೆಂಡತಿಯ ದೂರಾಗಿತ್ತು. ಅದೊಂದು ರಾತ್ರಿ ಅವಳ ಸಹನೆಯ ಕಟ್ಟೆ ಒಡೆಯಿತು, ಅವಳು ಗಂಡನ ಹತ್ಯೆ ಮಾಡಿಯೇ ಬಿಟ್ಟಳು. ಅಡುಗೆ ಮನೆಯ ಚಾಕುವಿನಿಂದ ಒಬ್ಬರ ಹತ್ಯೆ ಮಾಡುವುದು ಅಷ್ಟು ಸುಲಭವಲ್ಲ. ಏಕೆಂದರೆ ಅದಕ್ಕೆ ಬಹಳಷ್ಟು ಶಕ್ತಿ ಬಳಸಬೇಕಾಗುತ್ತದೆ ಮತ್ತು ಹಲವು ಸಲ ಚಾಕು ಇರಿದರೂ ಕೂಡ ಸಾವು ಸಂಭವಿಸುವುದಿಲ್ಲ. ಹೆಂಡತಿ ಆವೇಶದಲ್ಲಿ ಅದೆಷ್ಟೋ ಬಾರಿ ಇರಿದಿರಬಹುದು, ಗಂಡನಿಗೆ ಬದುಕುಳಿಯಲು ಅವಕಾಶವೇ ಸಿಕ್ಕಿರಲಿಕ್ಕಿಲ್ಲ.
ಸಾಮಾನ್ಯವಾಗಿ ಹೆಂಡತಿ ಗಂಡನ ಮೇಲೆ ಕೈ ಎತ್ತುವುದಿಲ್ಲ. ಏಕೆಂದರೆ ಅದರ ದುಷ್ಪರಿಣಾಮ ಮಕ್ಕಳ ಮೇಲೆ ಆಗುತ್ತದೆ ಎನ್ನುವುದು ಆಕೆಗೆ ಚೆನ್ನಾಗಿ ತಿಳಿದಿರುತ್ತದೆ. ತಾಯಂದಿರಿಗೆ ಮಕ್ಕಳ ಕಾಳಜಿ ತಂದೆಗಿಂತ ಹೆಚ್ಚಿಗೆ ಇರುತ್ತದೆ. ಅದು ನೈಸರ್ಗಿಕ ಗುಣ ಕೂಡ. ಮಹಿಳೆಯರ ಇದೇ ಗುಣದ ಲಾಭ ಪಡೆದು ಶತಶತಮಾನಗಳಿಂದ ಅವರನ್ನು ಹತ್ತಿಕ್ಕಲಾಗುತ್ತಿದೆ. ಸಮಾಜದ ರಚನೆಯೇ ಹಾಗಿದೆ. ಸಂತಾನವೆಂದು ಜನ್ಮ ತಳೆಯುತ್ತಿದ್ದಂತೆ ಅದರ ಮಾಲೀಕತ್ವ ತಂದೆಗೆ ಸೇರುತ್ತದೆ. ತಾಯಿ ಕೇವಲ ಪಾಲನೆ ಪೋಷಣೆ ಮಾಡುವವಳಾಗಿ ಬಿಡುತ್ತಾಳೆ. ಮಕ್ಕಳಿಗಾಗಿ ಆಕೆ ವರ್ಷಾನುವರ್ಷ ಬಲಿದಾನ ಕೊಡಬೇಕಾಗಿ ಬರುತ್ತದೆ.
ಮನೆಯಲ್ಲಿ ಸ್ತ್ರೀಯರ ಮೇಲಾಗುವ ದೌರ್ಜನ್ಯ ಹೊರಗೆ ನಡೆಯುವ ಹಿಂಸೆಗಳಿಗಿಂತ ಅದೆಷ್ಟೋ ಪಟ್ಟು ಹೆಚ್ಚಿಗೆ ಇದೆ. ಅದರ ಅಂಕಿಅಂಶಗಳು ಸಿಗುವುದಿಲ್ಲ. ಮನೆಯಿಂದ ಹೊರಗೆ ಸ್ತ್ರೀಯರ ಮೇಲೆ ಪುರುಷರಿಂದಾಗುವ ಅತ್ಯಾಚಾರಕ್ಕಿಂತ, ಮನೆಯಲ್ಲಿ ಗಂಡನ ಬಲಾತ್ಕಾರವನ್ನು ಮಹಿಳೆಯರು ಸಹಿಸಿಕೊಳ್ಳಬೇಕಾಗುತ್ತದೆ. ಸಾಮಾಜಿಕ ವ್ಯವಸ್ಥೆ ಹೇಗೆ ರೂಪುಗೊಂಡಿವೆಯೆಂದರೆ, ಮಕ್ಕಳ ಎದುರು ನಡೆಯುವ ತನ್ನ ಮೇಲಿನ ದೌರ್ಜನ್ಯವನ್ನು ಮಹಿಳೆ ಮೌನವಾಗಿಯೇ ಸಹಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.
ಗಂಡನ ಹತ್ಯೆಯ ಬಗ್ಗೆ ಕೇವಲ ಸಮಾಜವಷ್ಟೇ ಮಹಿಳೆಗೆ ಶಿಕ್ಷೆ ಕೊಡುವುದಿಲ್ಲ. ಆಕೆಯ ಮಕ್ಕಳೂ ಜೀವನವಿಡೀ ಅದರ ಶಾಪ ಅನುಭವಿಸಬೇಕಾಗಿ ಬರುತ್ತದೆ. ಮಕ್ಕಳು, ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ ಕೂಡ ತಮ್ಮ ತಾಯಿಯನ್ನು ಎಂದೂ ಕ್ಷಮಿಸುವುದಿಲ್ಲ. ಗಂಡನ ಕೊಲೆ ಮಾಡಿದ ಹೆಂಡತಿಯ ಮಕ್ಕಳು ಎಂಬ ಆರೋಪ ಹೊರೆಸಿ ಅವರ ಮಕ್ಕಳಿಗೆ ಶಿಕ್ಷೆ ಕೊಡಲಾಗುತ್ತದೆ.
ಹೈದರಾಬಾದ್‌ನ ಆ 50 ವರ್ಷದ ಮಹಿಳೆಯಿಂದ ಗಂಡನ ಕೊಲೆಗೆ ಕಾರಣ ಸ್ಪಷ್ಟವಿಲ್ಲ. ಆದರೆ ಮದುವೆಯಾದ ಇಷ್ಟು ವರ್ಷಗಳ ಬಳಿಕ ಆಕೆಗೆ ಅಷ್ಟೊಂದು ಧೈರ್ಯ ಬಂದಿರುವುದು ಮಾತ್ರ ದೊಡ್ಡ ವಿಷಯವಲ್ಲ, ಆಕೆಯ ಪತಿ ಒಬ್ಬ ಡಾಕ್ಟರ್. ಮುಂದಿನ ಪರಿಣಾಮಗಳ ಬಗೆಗೂ ಆಕೆಗೆ ಅರಿವು ಇದ್ದೇ ಇರುತ್ತದೆ. ಆತ್ಮಗೌರವದ ಅಭಿಲಾಷೆಯಾಗಿದ್ದ ಆಕೆ, ಗಂಡನಿಂದ ಅವಮಾನಿತಳಾಗುತ್ತಿರಬಹುದೆ ದೌರ್ಜನ್ಯಕ್ಕೆ ತುತ್ತಾಗಿರಬಹುದು. ಇದರಲ್ಲಿ ಕಾನೂನಿನ ಕ್ರಮ ಏನು ಎನ್ನುವುದು ಸ್ಪಷ್ಟವಿಲ್ಲ. ನ್ಯಾಯಾಧೀಶರು ಸಾಮಾನ್ಯವಾಗಿ ಇಂತಹ ಮಹಿಳೆಯರ ಬಗ್ಗೆ ದಯೆ ತೋರಿಸುವುದಿಲ್ಲ. ಅವರಿಗೆ ಸೂಕ್ತ ವಕೀಲರ ನೆರವು ಕೂಡ ದೊರಕುವುದಿಲ್ಲ. ಪೊಲೀಸರಿಗೂ ಕೂಡ ಪ್ರಕರಣ ಬೇಗ ಮುಗಿಸಿಬಿಟ್ಟರೆ ಸಾಕಾಗಿರುತ್ತದೆ. ಶಿಕ್ಷೆ ಕೊಟ್ಟು ಮುಕ್ತಿ ಕಂಡುಕೊಳ್ಳಲು ನೋಡುತ್ತಾರೆ. ಏಕೈಕ ಪುತ್ರಿ ಆಕೆಯನ್ನು ರಕ್ಷಿಸುವುದಾದರೂ ಹೇಗೆ ಮತ್ತು ಏಕೆ ರಕ್ಷಿಸುತ್ತಾಳೆ? ಆ ಪ್ರಶ್ನೆಯನ್ನು ಸಮಾಜ ಮೊದಲನೇ ದಿನವೇ ಎತ್ತುತ್ತದೆ.
ಕೊಲೆಯನ್ನು ಯಾರೂ ಪ್ರೋತ್ಸಾಹಿಸಲು ಆಗದು, ಆದರೆ ತಮ್ಮ ಅತ್ಮಗೌರವ ಕಾಪಾಡಿಕೊಳ್ಳಲು ಗಂಡನ ವಿರುದ್ಧ ಸಿಡಿದೇಳುವ ಮಹಿಳೆಯರನ್ನು ಅವಶ್ಯವಾಗಿ ಪ್ರಶಂಸೆ ಮಾಡಬಹುದು.
ಸೇನೆಯಲ್ಲಿ ಸಾವು ಮಹಿಳೆಯರಿಗೆ ಆಪತ್ತು
ಭಾರತ-ಚೀನಾ ಗಡಿಯಲ್ಲಿ ಈವರೆಗೆ ಗುಂಡಿನಿಂದ ಸೈನಿಕರು ಸಾವಿಗೀಡಾಗಿಲ್ಲ. ಆದರೂ ಎರಡೂ ಬದಿಯಿಂದ ಸಿದ್ಧತೆಗಳು ಪೂರ್ಣಗೊಂಡಿವೆ. 4-5 ವರ್ಷಗಳ ಬಳಿಕ ಮೊದಲ ಬಾರಿ ಚೀನಾ ಸೈನಿಕರು ಗುಂಡು ಹಾರಿಸಿದರು. ಆದರೆ ಗಾಳಿಯಲ್ಲಿ…. ಏಕೆಂದರೆ ಯುದ್ಧ ಆಗದಂತೆ ಎರಡೂ ಕಡೆಯಿಂದ ಪ್ರಯತ್ನಗಳು ನಡೆಯುತ್ತಿವೆ. ಚೀನಾ ಸಾಧ್ಯವಿದ್ದಷ್ಟು ಮಟ್ಟಿಗೆ ಬೆದರಿಕೆ ಹಾಕಲು ನೋಡುತ್ತಿದೆ. ಅದು ದೀರ್ಘ ಯುದ್ಧದಲ್ಲಿ ಸಿಲುಕಲು ಇಷ್ಟಪಡುವುದಿಲ್ಲ. ಏಕೆಂದರೆ ಅದರಿಂದ ಸಿಗುವಂಥದ್ದೇನೂ ಇಲ್ಲ.
ಭಾರತ ಚೀನಾ ಗಡಿ ವಿವಾದ ನಮ್ಮ ವಿದೇಶಾಂಗ ನೀತಿಯು ವಿಫಲವಾದುದರ ಸಂಕೇತ. 1962ರ ಬಳಿಕ ಭಾರತ ಹಾಗೂ ಚೀನಾ ಗಡಿಯುದ್ದಕ್ಕೂ ಒತ್ತಡದ ನಡುವೆಯೂ ಶಾಂತಿ ಉಳಿದುಕೊಂಡಿದೆ. ಏಕೆಂದರೆ ಚೀನಾ ಈ ಬೆಂಕಿಯನ್ನು ಹಾಗೆಯೇ ಉರಿಯುತ್ತಿರುವಂತೆ ನೋಡಿಕೊಳ್ಳಲು ಇಷ್ಟಪಡುತ್ತದೆ. ಒಂದೊಮ್ಮೆ ಟಿಬೆಟ್ ರಾಜರ ಆಡಳಿಕ್ಕೊಳಪಟ್ಟ ಪ್ರದೇಶ ಈಗ ಬೀಜಿಂಗ್ ಸರ್ಕಾರದ ಅಧೀನದಲ್ಲಿದೆ. ಆಂಗ್ಲರು ಎಳೆದ ಗಡಿರೇಖೆ ಅವಾಸ್ತವತೆಯಿಂದ ಕೂಡಿದೆ. ಅದು ಆ ಪ್ರದೇಶವನ್ನು ವಶಕ್ಕೆ ಪಡೆದುಕೊಳ್ಳಲು ಆತುರದಿಂದಿಲ್ಲ. ಆದರೆ ಸಾಂಸ್ಕೃತಿಕವಾಗಿ ಹಕ್ಕು ಪ್ರತಿಪಾದಿಸಲು ನೋಡುತ್ತಿದೆ.
ಪರ್ವತ ಪ್ರದೇಶಗಳ ಈ ಬಯಲು ಪ್ರದೇಶ ಭಾರತೀಯ ರಾಜರುಗಳಿಗೆ ಏನೇನೂ ಉಪಯುಕ್ತ ಅಲ್ಲದ ಪ್ರದೇಶಗಳೆನಿಸಿದ್ದವು.
ಭಾರತ ಚೀನಾ ಯುದ್ಧ ನಡೆದರೆ, ಅದು ಅತ್ಯಂತ ಪ್ರಾಣಘಾತಕ ಆಗಿರುತ್ತದೆ. ಎರಡೂ ದೇಶಗಳು ಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಸೇನೆ ಜಮಾಣೆ ಮಾಡಿವೆ. ತೋಪುಗಳು, ಮಿಸೈಲುಗಳು, ಟ್ಯಾಂಕರ್‌ಗಳು ಅಲ್ಲಿಗೆ ಹೋಗಿವೆ. ನೂರಾರು ವಿಮಾನಗಳು ಗಸ್ತು ತಿರುಗುತ್ತಿವೆ. ಯುದ್ಧವಾದರೆ, ಎರಡೂ ಕಡೆ ನೂರಾರು ಜನರು ವಿಧವೆಯರಾಗುವುದು ಖಚಿತ. ಯುದ್ಧ ಆಗದೆಯೇ ಅನೇಕ ಸೈನಿಕರ ಶವಗಳು ಬರುತ್ತಿವೆ. ಯುದ್ಧ ನಡೆದರೆ ಅದೆಷ್ಟು ಶವಗಳು ಬರಬಹುದು? ಯುದ್ಧದ ಮಹಿಮೆಯನ್ನು ಹಾಡಿ ಹೊಗಳಲಾಗುತ್ತದೆ. ಸರ್ಕಾರಗಳು ಜನತೆಯನ್ನು ಕೆರಳಿಸುತ್ತವೆ. ಜನರು ರಕ್ತಪಿಪಾಸುಗಳಾಗುತ್ತಾರೆ. ಯಾರು ನಿಜವಾಗಿಯೂ ರಕ್ತ ಹರಿಸುತ್ತಾರೊ, ಅವರ ಬಗ್ಗೆ 1-2 ವಾರ ಹುತಾತ್ಮ ಎಂದು ಹೇಳಿ ಬಳಿಕ ಮರೆತುಬಿಡಲಾಗುತ್ತದೆ. ಇದು ಬೇರೆ ದೇಶಗಳಿಗಿಂತ ಭಾರತದಲ್ಲಿ ಹೆಚ್ಚು. ಯುದ್ಧ, ಗಾಯಾಳುಗಳಿಗಂತೂ ಮತ್ತಷ್ಟು ಆಪತ್ತು ತರುತ್ತದೆ. ಅವರು ಜೀವನವಿಡೀ ಯುದ್ಧದ ನೋವನ್ನು ಅನುಭವಿಸುತ್ತಿರಬೇಕಾಗುತ್ತದೆ.
ಭಾರತದಲ್ಲಿ ಸೈನಿಕರು ಬರುವುದೇ ಹಳ್ಳಿಗಳಿಂದ. ಅಲ್ಲಿನ ಸ್ಥಿತಿ ಇನ್ನೂ ಭಯಾನಕ. ವಿಧವೆಯರಿಗೆ ದೊರೆಯುವ ಹಣವನ್ನು ಗಂಡನ ಅಣ್ಣ ತಮ್ಮ ತಂಗಿಯರಷ್ಟೇ ಅಲ್ಲ, ಆಕೆಯ ಅಣ್ಣ ತಂಗಿಯರೂ ಹೊಡೆದುಕೊಳ್ಳಲು ನೋಡುತ್ತಾರೆ. ವಿಧವೆಯ ಮಕ್ಕಳು ದೊಡ್ಡವರಿರದಿದ್ದರೆ, ಅಷ್ಟೊಂದು ಬುದ್ಧಿವಂತರಾಗಿರದಿದ್ದರೆ ಆಕೆಯ ಸ್ಥಿತಿ ಯಾರಿಗೂ ಬೇಡ. ಸೇನೆಯ ನೌಕರಿ ಒಳ್ಳೆಯದೆಂದು ಹೇಳಲಾಗುತ್ತದೆ. ಆದರೆ ಸೇನೆಯಲ್ಲಿನ ಸಾವು ಮಹಿಳೆಯರಿಗೆ ಆಪತ್ತಾಗಿ ಪರಿಣಮಿಸುತ್ತದೆ. ಭಾರತದಂತಹ ಕಂದಾಚಾರದ ದೇಶದಲ್ಲಿ ವಿಧವೆಯನ್ನು ಈಗಲೂ ಪತಿಯ ಸಾವಿಗೆ ಕಾರಣಕರ್ತಳು ಎಂದು ಭಾವಿಸಲಾಗುತ್ತದೆ.
ಭಾರತ ಚೀನಾಗಳಿಗೆ ಸ್ನೇಹ ಒಂದು ವರದಾನದಂತಿತ್ತು. ಭಾರತ ಅದೆಷ್ಟೋ ಕಚ್ಚಾ ಸರಕನ್ನು ರಪ್ತ ಮಾಡಿತ್ತು ಹಾಗೂ ಅದೆಷ್ಟೋ ದಿನಬಳಕೆ ವಸ್ತುಗಳನ್ನು ತರಿಸಿಕೊಳ್ಳುತ್ತಿತ್ತು. ಯುದ್ಧ ಭಯ ನಾಗರಿಕರಿಗೆ ಅಗ್ಗದ ಸಾಮಾನುಗಳಿಂದ ದೂರ ಇರುವಂತೆ ಮಾಡಿದೆ. ಟಿಕ್‌ಟಾಕ್ ನಂತಹ ಆ್ಯಪ್ ಭಾರತದ ಹುಡುಗಿಯರಿಗೆ ಪ್ರತಿಭೆ ಪ್ರದರ್ಶಿಸಲು ಅವಕಾಶ ಕೊಟ್ಟಿತ್ತು. ಈಗ ಆ ಅವಕಾಶಗಳು ತಪ್ಪಿಹೋಗಿವೆ. ಭಾರತೀಯ ಟಿಕ್‌ಟಾಕ್ ಬರುವಷ್ಟರಲ್ಲಿ ಅದು ಅನೇಕ ಸೆನ್ಸಾರ್‌ಗಳಿಗೆ ಒಳಗಾಗಿರುತ್ತದೆ. ಚೀನಾದೊಂದಿಗೆ ಗುದ್ದಾಟ ಎರಡೂ ದೇಶಗಳಿಗೆ ದುಬಾರಿಯಾಗಿ ಪರಿಣಮಿಸುತ್ತದೆ ಎನ್ನುವುದು ಮಾತ್ರ ನಿಜ.