“ನಮಸ್ಕಾರ….. ದೂರದರ್ಶನ ಕೇಂದ್ರ ಬೆಂಗಳೂರು. ಈಗ ಮುನ್ನೋಟ…..” ಟಿ.ವಿ. ಆನ್‌ ಮಾಡುತ್ತಿದ್ದಂತೆ ಕೇಳಿ ಬರುತ್ತಿದ್ದ ಇಂಪಾದ ಸ್ವರವಿದು. ಆಗ ನಗುಮೊಗದೊಂದಿಗೆ, ಇಂಪಾದ ಸ್ವರದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದರು ಅಪರ್ಣಾ ನಾರಾಯಣಸ್ವಾಮಿ.

ದೂರದರ್ಶನವೇ ಆಗ ಏಕೈಕ ಮನರಂಜನೆಯ ಸಾಧನ. ಬೆಂಗಳೂರು ದೂರದರ್ಶನಕ್ಕೆ ಆಗ ಸಿಗುತ್ತಿದ್ದುದು ಕೆಲವೇ ಕೆಲವು ಗಂಟೆಗಳು ಮಾತ್ರ. ಇಂತಹ ಸ್ಥಿತಿಯಲ್ಲಿ ವೀಕ್ಷಕರನ್ನು ಕದಲದಂತೆ, ಒಂದೆಡೆ ಕುಳಿತುಕೊಳ್ಳುವಂತೆ ಮಾಡಿದ್ದು ಅಪರ್ಣಾರ ಮಾತಿನ ಮೋಡಿಯೇ ಹೌದು.

ನಿರೂಪಕಿಯಾಗಿ ಖ್ಯಾತಿ ಗಳಿಸುವ ಮುನ್ನವೇ ಅಪರ್ಣಾ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌‌ರ ಕಣ್ಣಿಗೆ ಬಿದ್ದು `ಮಸಣದ ಹೂ’ ನಾಯಕಿಯಾಗಿದ್ದರು.

ಅಪರ್ಣಾ ಇಂದು ಈ ಸ್ಥಿತಿಗೆ ತಲುಪಲು ಅವರ ಅಪಾರ ಪರಿಶ್ರಮ, ಆತ್ಮವಿಶ್ವಾಸ, ತಿಳಿದುಕೊಳ್ಳಬೇಕೆಂಬ ಕುತೂಹಲವೇ ಕಾರಣ. ಅದಕ್ಕೆ ಅವರಿಗೆ ಬೆಂಬಲವಾಗಿ ನಿಂತರು ತಂದೆ ಕೆ.ಎಸ್‌. ನಾರಾಯಣಸ್ವಾಮಿ.

ಸಾಹಿತ್ಯದ ವಾತಾವರಣ

Untitled-2

ತಂದೆ ನಾರಾಯಣಸ್ವಾಮಿ ಪತ್ರಕರ್ತರು. ಕನ್ನಡದ ಪ್ರಸಿದ್ಧ ದೈನಿಕಗಳ ಸಿನಿಮಾ ಹಾಗೂ ಭಾನುವಾರದ ಪುರವಣಿ ವಿಭಾಗದಲ್ಲಿ ಕೆಲಸ ಮಾಡಿದ್ದರು. ಹೀಗಾಗಿ ಮನೆಯಲ್ಲಿ ಸದಾ ಸಾಹಿತ್ಯದ ಗಾಳಿಯೇ ಬೀಸುತ್ತಿತ್ತು.

ಸಾಹಿತಿಗಳು, ಸಿನಿಮಾ ನಿರ್ದೇಶಕರು, ನಿರ್ಮಾಪಕರು ಆಗಾಗ ಅವರ ಮನೆಗೆ ಬರುತ್ತಿದ್ದರು. ಏನಾದರೊಂದು ಚರ್ಚೆ ಅಲ್ಲಿ ಯಾವಾಗಲೂ ನಡೆದೇ ಇರುತ್ತಿತ್ತು. ಅಪರ್ಣಾರ ಅಮ್ಮ ಪದ್ಮಾ ನಾರಾಯಣಸ್ವಾಮಿ ಮೂಲತಃ ಮೈಸೂರಿನವರು. ಅವರು ನಾಟಕ ಕಲಾವಿದೆ. ಜೊತೆಗೆ ಗಮಕ ಕಲೆಯಲ್ಲೂ ಪ್ರಾವೀಣ್ಯತೆ ಪಡೆದಿದ್ದರು. ಕನ್ನಡದ ಪತ್ರಿಕೆಗಳಿಗೆ ಲೇಖನಗಳನ್ನು, ಸಾಹಿತ್ಯ ಸಮ್ಮೇಳನದ ವರದಿಗಳನ್ನು ಬರೆಯುತ್ತಿದ್ದರು.

ಅಪರ್ಣಾ ಆಗ ಓದುತ್ತಿದ್ದುದು ಕುಮಾರ ಪಾರ್ಕ್‌ ಹೈಸ್ಕೂಲಿನಲ್ಲಿ. ಬಾಲ್ಯದಿಂದಲೇ ಪ್ರತಿಭಾನ್ವಿತೆ. ಕನ್ನಡ ಹಾಗೂ ಇಂಗ್ಲಿಷ್‌ ಕವಿತಾ ವಾಚನದಲ್ಲಿ ಪ್ರತಿವರ್ಷ ಪ್ರಥಮ ಬಹುಮಾನ ಪಡೆಯುತ್ತಿದ್ದರು. `ಪಾತಾಳದಲ್ಲಿ ಪಾಪಚ್ಚಿ’ ಎಂಬ ಆಕಾಶವಾಣಿ ಕಾರ್ಯಕ್ರಮದಲ್ಲಿ ಆಗಲೇ ತಮ್ಮ ಚಮಕ್‌ ತೋರಿಸಿಬಿಟ್ಟಿದ್ದರು.

ಮಕ್ಕಳಿಗೆ ಬಿಡುವಿದ್ದಾಗೆಲ್ಲ ಅಪ್ಪ ಸಾಹಿತ್ಯ ಕಾರ್ಯಕ್ರಮಗಳಿಗೆ ಹಾಗೂ ಸಿನಿಮಾ ಶೂಟಿಂಗ್‌ಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಅಪರ್ಣಾರಿಗೆ ಬಾಹ್ಯ ಪ್ರಪಂಚದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಆಗಲೇ ಉತ್ಪತ್ತಿಯಾಯಿತೆನ್ನಬಹುದು.

ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಅಪರ್ಣಾರಿಗೆ ಆಗ ಮೌಂಟ್‌ ಕಾರ್ಮೆಲ್‌‌ನಲ್ಲಿ ಸೀಟು ಸಿಕ್ಕಿತ್ತು. ಆದರೆ ಅಲ್ಲಿನ ವಾತಾವರಣದ ಬಗ್ಗೆ ಸ್ಪಷ್ಟ ಕಲ್ಪನೆಯಿದ್ದ ಅಪರ್ಣಾ ಅಲ್ಲಿ ಸೇರಲಿಚ್ಛಿಸದೆ ಮಲ್ಲೇಶ್ವರದ ಎಂಇಎಸ್‌ ಕಾಲೇಜು ಆಯ್ಕೆ ಮಾಡಿಕೊಂಡರು.

ಸಿನಿಮಾಕ್ಕೆ ಆಯ್ಕೆ

Untitled-3

ನಾರಾಯಣಸ್ವಾಮಿಯವರು ಪ್ರತಿವಾರ ನಿರ್ಬಿಡೆಯಿಂದ ಸಿನಿಮಾ ವಿಮರ್ಶೆ ಬರೆಯುತ್ತಿದ್ದರು. ಮೊದಲೇ ಪರಿಚಯವಿದ್ದ ಪುಟ್ಟಣ್ಣ ಕಣಗಾಲ್ ‌ಆಗಾಗ ಅವರ ಮನೆಗೆ ಬರುತ್ತಿದ್ದರು. ಅದೊಂದು ಸಲ ಅಪರ್ಣಾರನ್ನು ನೋಡಿ ನಿಮ್ಮ ಮಗಳನ್ನು ಹಾಕಿಕೊಂಡು `ಸ್ಕೂಲ್ ಗರ್ಲ್’ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದರು. ಆ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳದ ನಾರಾಯಣಸ್ವಾಮಿಯವರು `ಮಾಡಪ್ಪ ಮಾಡು,’ ಎಂದಷ್ಟೇ ಹೇಳಿದ್ದರು.

ಅದೊಂದು ದಿನ ಪುಟ್ಟಣ್ಣ ಅವರ ಮನೆಗೆ ಬಂದು, `ಮಸಣದ ಹೂ’ ಚಿತ್ರಕ್ಕೆ ನಿಮ್ಮ ಮಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದರು. `ಸ್ಕೂಲ್ ಗರ್ಲ್’ ಚಿತ್ರದ ಬಗ್ಗೆ ಹೇಳಿದಂತೆ ಈಗಲೂ ಹಾಗೆಯೇ ಹೇಳುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಭಾವಿಸಿದ್ದರು. ಆದರೆ ಮರುದಿನ ಮನೆ ಮುಂದೆ ಕಾರು ಬಂದು ನಿಂತಾಗಲೇ ಅವರಿಗೆ ತಮ್ಮ ಮಗಳು ಹೀರೋಯಿನ್‌ಆಗಿರುವುದು ಖಾತ್ರಿಯಾಯಿತು.

ಪುಟ್ಟಣ್ಣನವರ ಗರಡಿ ಎಂದರೆ ಕೇಳಬೇಕೇ? ಅಲ್ಲಿ ಹೆಜ್ಜೆ ಹೆಜ್ಜೆಗೂ ಅಭಿನಯ ಕಲಿತುಕೊಳ್ಳುವ ಅವಕಾಶಗಳಿರುತ್ತವೆ. ಒಂದು ರೀತಿಯಲ್ಲಿ ಅದು ಅಭಿನಯದ ವಿಶ್ವವಿದ್ಯಾಲಯವೇ ಹೌದು. ಸಂಗೀತ ನಿರ್ದೇಶಕ ವಿಜಯಭಾಸ್ಕರ್‌ ಅಪರ್ಣಾರ ತಂದೆಯ ಮುಂದೆ, “ಬಿಡಿ ನಾರಾಯಣಸ್ವಾಮಿಗಳೇ, ಮಗಳನ್ನು ಪುಟ್ಟಣ್ಣ ಕಣಗಾಲ್ ‌ಪರಿಚಯ ಮಾಡ್ತಿದ್ದಾರೆ. ಅಲ್ಲಿ ಹೋಗುವುದೆಂದರೆ ಅಭಿನಯದ ಪಿಎಚ್‌ಡಿ ಪಡೆದುಕೊಂಡಂತೆ.”

`ಶೂಟಿಂಗ್‌ ಇರಲಿ, ಬಿಡಲಿ. ನೀನು ದಿನ ಶೂಟಿಂಗ್‌ಗೆ ಬರಲೇಬೇಕು. ಅಂಬರೀಷ್‌, ಜಯಂತಿ ಹಾಗೂ ಇತರೆ ಹಿರಿಯ ಕಲಾವಿದರು ಹೇಗೆ ಅಭಿನಯಿಸುತ್ತಾರೆ ಎಂದು ನೀನು ಗಮನಕೊಟ್ಟು ನೋಡಬೇಕು. ಇದೇ ನಿನಗೆ ತರಬೇತಿ,’ ಎಂದು ಪುಟ್ಟಣ್ಣ ಹೇಳುತ್ತಿದ್ದರು.

ಅಪರ್ಣಾ ಯಾವಾಗಾದರೂ ತಲೆಯ ಮೇಲೆ ಕೈಹೊತ್ತು ಕುಳಿತರೆ, ಸರಿಯಾಗಿ ಹೆಜ್ಜೆ ಇಟ್ಟು ನಡೆಯದಿದ್ದರೆ, `ನೀನು ಚಿತ್ರದ ಹೀರೋಯಿನ್‌. ಜನ ನಿನ್ನನ್ನು ಹೆಜ್ಜೆಹೆಜ್ಜೆಗೂ ಗಮನಿಸುತ್ತಾರೆ. ಹಾಗೆಲ್ಲ ಕುಳಿತುಕೊಳ್ಳಬಾರದು, ಗತ್ತಿನಿಂದ ನಡೆಯಬೇಕು,” ಎಂದು ಬುದ್ಧಿಮಾತು ಹೇಳುತ್ತಿದ್ದರು.

ಹೊಸ ಕಾಸ್ಟ್ಯೂಮ್ ಧರಿಸಿದಾಗೆಲ್ಲ ಡ್ರೆಸ್‌ ಡಿಸೈನರ್‌ ಜಯರಾಂ ಅಪರ್ಣಾರನ್ನು ಪುಟ್ಟಣ್ಣರ ಮುಂದೆ ನಿಲ್ಲಿಸುತ್ತಿದ್ದರು. ಅವರು ಅಡಿಯಿಂದ ಮುಡಿಯವರೆಗೆ ಗಮನಿಸಿ `ಸರಿ’ ಅಥವಾ `ಇಲ್ಲ’ ಎಂದು ಹೇಳಿಬಿಡುತ್ತಿದ್ದರು. ಈಗಲೂ ಅಪರ್ಣಾ ಧಾರಾವಾಹಿ ಅಥವಾ ಯಾವುದೇ ಕಾರ್ಯಕ್ರಮದ ಶೂಟಿಂಗ್‌ಗೆ ಹೋದರೆ ತಾವು ಧರಿಸಿದ ಪೋಷಾಕು ಸರಿ ಇದೆಯೇ ಎಂದು ನಿರ್ದೇಶಕರನ್ನು ಕೇಳುತ್ತಾರೆ.

ಮೊದಲ ಸಲ ಮೇಕಪ್‌ ಮಾಡಿಸುವ ಸಂದರ್ಭದಲ್ಲಿ ಪುಟ್ಟಣ್ಣನವರು ಅಪರ್ಣಾರಿಗೆ, “ಮೇಕಪ್‌ ಟೇಬಲ್‌ನಿಂದ ಇಂದು ನಿನ್ನ ಸಿನಿಮಾ ಜೀವನ ಆರಂಭವಾಗ್ತಿದೆ. ಇದೇ ನಿನಗೆ ಬದುಕು ಕೂಡ ಕೊಡುತ್ತೆ. ಮೊದಲು ಮೇಕಪ್‌ ಮ್ಯಾನ್‌ಗೆ, ನಂತರ ಮೇಕಪ್ ಟೇಬಲ್‌ಗೆ ನಮಸ್ಕರಿಸಿಯೇ ಕುಳಿತುಕೊ,” ಎಂದು ಹೇಳಿದ್ದರಂತೆ. ಅಂದು ಪುಟ್ಟಣ್ಣನವರು ಹೇಳಿದ್ದ ಮಾತನ್ನು ಅಪರ್ಣಾ ಈಗಲೂ ಚಾಚೂ ತಪ್ಪದೇ ಅನುಸರಿಸುತ್ತಾರೆ.

`ಮಸಣದ ಹೂ’ ಮುಕ್ಕಾಲು ಭಾಗ ಮುಗಿಸುವ ಹೊತ್ತಿಗೆ ಪುಟ್ಟಣ್ಣ ನಿಧನರಾದರು. ಮುಂದಿನ ಭಾಗದ ಚಿತ್ರವನ್ನು ಕೆಎಸ್‌ಎಲ್ ಸ್ವಾಮಿ ಮುಗಿಸಿದರು.

ಪುಟ್ಟಣ್ಣನವರ ಶೋಧ ಅಪರ್ಣಾರಿಗೆ ಬಳಿಕ ಹೆಸರಾಂತ ನಿರ್ದೇಶಕ ಬಾಲಚಂದರ್‌ರಿಂದಲೂ ಕರೆ ಬಂದಿತ್ತು. ಅವರು ಹೊಸ ನಾಯಕಿಗಾಗಿ ಶೋಧ ಮಾಡುತ್ತಿದ್ದಾರೆಂದು ಗೊತ್ತಾದಾಗ ವಿಜಯ್‌ ಭಾಸ್ಕರ್‌, `ಪುಟ್ಟಣ್ಣನವರು ಆಯ್ಕೆ ಮಾಡಿದ ಹುಡುಗಿಯೊಬ್ಬಳು ಇದ್ದಾಳೆ, ನೋಡಬಹುದು,’ ಎಂದು ಹೇಳಿದ್ದರು. ಆ ಮಾತಿಗೆ ಬಾಲಚಂದರ್‌`ನೋಡೋದೇನ್ಬಂತು ಕಳಿಸಿಯೇ ಬಿಡಿ,’ ಅಂದಿದ್ರಂತೆ.

ಆದರೆ ಅಪರ್ಣಾ ತಂದೆ ನಾರಾಯಣಸ್ವಾಮಿ ತುಂಬಾ ಕಟ್ಟುನಿಟ್ಟು. ಓದನ್ನು ಅರ್ಧಕ್ಕೆ ಬಿಟ್ಟು ಸಿನಿಮಾದಲ್ಲಿ ಮುಂದುವರಿಯುವುದು ಬೇಡವೇ ಬೇಡ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಹೀಗಾಗಿ ಅಪರ್ಣಾ ಸಿನಿಮಾದಲ್ಲಿ ಮುಂದುವರಿಯಲಿಲ್ಲ.

ಬ್ಯೂಟಿ ಜೊತೆಗೆ ಬ್ರೇನೂ ಬೇಕು

Untitled-4

ತಂದೆ  ಸಿನಿಮಾಗಳಲ್ಲಿ ಅಭಿನಯ ಬೇಡ ಎಂದಿದ್ದರು. ಆದರೆ ಕಾಲೇಜಿನ ಇತರೆ ಚಟುವಟಿಕೆಗಳಲ್ಲಿ ಅವರಿಗೆ ಅಭಿನಯಿಸುವ ಮುಕ್ತ ಅವಕಾಶವಿತ್ತು. `ಕೈಗಾರಿಕಾ ನಾಟಕೋತ್ಸವ’ಕ್ಕೆ ಅಶೋಕ ಬಾದರದಿನ್ನಿ ನಿರ್ದೇಶನದ `ಅಭಿಜ್ಞಾನ ಶಾಕುಂತಲ’ ನಾಟಕದಲ್ಲಿ ಅಪರ್ಣಾರಿಗೆ ಅಭಿನಯಿಸುವ ಅವಕಾಶ ದೊರಕಿತು. ದೂರದರ್ಶನದಲ್ಲಿ ಬಂದ `ಮನವೆಂಬ ಮರ್ಕಟ’ ನಾಟಕ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

ಸಿನಿಮಾ ನಾಟಕಗಳಿಗಿಂತ ಮಗಳು ಆಕಾಶವಾಣಿ, ದೂರದರ್ಶನದಲ್ಲಿ ಸುದ್ದಿ ಓದಬೇಕು, ಜೊತೆಗೆ ಅರ್ಥಶಾಸ್ತ್ರಜ್ಞೆಯಾಗಬೇಕೆಂಬ ಅಪೇಕ್ಷೆ ಅವರ ತಂದೆಗಿತ್ತು. ಆದರೆ ಅಪರ್ಣಾರಿಗೆ ತಂದೆಯ ಹಾಗೆ ಪತ್ರಕರ್ತರಾಗಬೇಕೆಂಬ ಅಭಿಲಾಷೆ ಇತ್ತು. `ಬ್ಯೂಟಿ ಜೊತೆಗೆ ಬ್ರೇನೂ ಇರಬೇಕು. ಬ್ರೇನ್‌ ಇಲ್ಲದ ಬ್ಯೂಟಿ ಯಾವ ಪ್ರಯೋಜನಕ್ಕೂ ಬಾರದು,’ ಎಂದು ಅವರು ಮಗಳಿಗೆ ಸ್ಪಷ್ಟವಾಗಿ ಹೇಳುತ್ತಿದ್ದರು.

“ನಾನು ಕನ್ನಡವನ್ನು ಇಷ್ಟರ ಮಟ್ಟಿಗೆ ಮಾತನಾಡುತ್ತೇನೆಂದರೆ ಅದಕ್ಕೆ ನನ್ನ ತಂದೆಯೇ ಮೂಲ ಕಾರಣ. ಕನ್ನಡವನ್ನು ಹೇಗ್ಹೇಗೊ ಮಾತನಾಡಿದರೆ ಅವರಿಗೆ ಸರಿಹೋಗುತ್ತಿರಲಿಲ್ಲ. `ಅಮ್ಮಾ, ಹೂವಾ ಬಂದಿದೆ ನೋಡು, ಎಂದು ಹೇಳಿದಾಗ, ಅಪ್ಪ `ಹೂವಾ’ ಎನ್ನುವುದು ಯಾವ ಸೀಮೆ ಕನ್ನಡ? `ಹೂವು’ ಅನ್ನು ಇಲ್ಲವೇ `ಹೂ’ ಎಂದು ಹೇಳು ಎನ್ನುತ್ತಿದ್ದರು. ಮನೆಯಲ್ಲಿ ಯಾರ ಜೊತೆಗಾದರೂ ಸ್ವಲ್ಪ ಜೋರಾಗಿ ಮಾತನಾಡಿದರೂ, `ನಿಮಗೆ ಮಾತನಾಡುವ ಕಲೆಯೇ ಗೊತ್ತಿಲ್ಲ,’ ಎಂದು ಹೇಳಿ, ಹೇಗೆ ಮಾತನಾಡಿದರೆ ಸೂಕ್ತ ಎನ್ನುವುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿದ್ದರು.

ಆಕಾಶವಾಣಿಯ ವಸಂತ ಕಲಿ ಅವರೂ ಕೂಡ ಅಪರ್ಣಾರಿಗೆ ಅಲ್ಪಪ್ರಾಣ, ಮಹಾಪ್ರಾಣ, ಭಾಷೆಯ ಏರಿಳಿತದ ಬಗ್ಗೆ ಸಾಕಷ್ಟು ತಿಳಿಸಿ ಹೇಳುತ್ತಿದ್ದರು.

ದೂರದರ್ಶನದ ನಂಟು

Untitled-5

ಒಂದು ಸಲ ದೂರದರ್ಶನದ ಶ್ರೀನಿವಾಸ ಕುಲಕರ್ಣಿಯವರಿಂದ ಕರೆ ಬಂದಿತ್ತು. ಅವರು ಧ್ವನಿ ಪರೀಕ್ಷೆ ಮಾಡಿಸಿ ಡಿಗ್ರಿ ಮುಗಿಸಿದ ಬಳಿಕ ಬಾ ಎಂದು ಹೇಳಿ ಕಳಿಸಿದರು.

ಪದವಿ ಮುಗಿಸಿದ ಬಳಿಕ ಬೆಂಗಳೂರು ದೂರದರ್ಶನ ಅವರ ಅಂದದ ಮಾತುಗಳಿಗೆ ಚೆಂದದ ವೇದಿಕೆಯಾಯಿತು. `ಕಾರ್ಯಕ್ರಮ ನಿನ್ನಿಂದ ಆರಂಭವಾಗುತ್ತೆ. ಇನ್ನು 5 ನಿಮಿಷಕ್ಕೆ ಪ್ರಪಂಚವೇ ಮುಳುಗಿ ಹೋಗುತ್ತೆ ಎಂದು ಹೇಳಿದರೂ ಕೂಡ ನೀನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಗುಮುಖದಿಂದೀ ಕಾರ್ಯಕ್ರಮ ಆರಂಭಿಸಬೇಕು, ಎಂದು ಆಗ ದೂರದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಳಿನಿ ರಾಮಣ್ಣ, ಹೇಮಲತಾ, ಲಲಿತಾ ಭೋಜ್‌, ಮೋಹನ್‌ ರಾಮ್ ಮುಂತಾದವರು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಹಾಗಾಗಿ ನಾನು ಹೆಚ್ಚು ಲವಲವಿಕೆಯಿಂದ ಕ್ಯಾಮೆರಾ ಎದುರಿಸಲು ಸಾಧ್ಯವಾಯಿತು,” ಎಂದು ಅಪರ್ಣಾ ತಮ್ಮ ಆರಂಭಿಕ ದಿನಗಳನ್ನು ಸ್ಮರಿಸಿಕೊಳ್ಳುತ್ತಾರೆ.

ಕನ್ನಡದ ರೇಣುಕಾ ಶಹಾಣೆ

ಬೆಂಗಳೂರು ದೂರದರ್ಶನದ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಖ್ಯಾತಿ ಅಪರ್ಣಾರಿಗೆ ಸಲ್ಲುತ್ತದೆ. ಆಗ ಶ್ರೀನಿವಾಸ್‌ ಪ್ರಭು ಜೊತೆಗೆ ನಡೆಸಿಕೊಡುತ್ತಿದ್ದ ಒಂದು ಜನಪ್ರಿಯ ಕಾರ್ಯಕ್ರಮವೆಂದರೆ `ಪ್ರಿಯ ವೀಕ್ಷಕರೆ!’ ಕಾರ್ಯಕ್ರಮಗಳಿಗಿಂತ ಇವರು ನಡೆಸಿಕೊಡುತ್ತಿದ್ದ ರೀತಿಯೇ ವೀಕ್ಷಕರಿಗೆ ಗುಂಗು ಹಿಡಿಸಿಬಿಟ್ಟಿತ್ತು. ಹೆಚ್ಚಿನ ಪತ್ರಗಳು ಈ ಕುರಿತಾಗಿಯೇ ಇರುತ್ತಿದ್ದವು. `ಸುರಭಿ’ ಕಾರ್ಯಕ್ರಮದ ರೇಣುಕಾ ಶಹಾಣೆಯವರ ಹಾಗೆಯೇ ಇವರು ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಾರೆಂದು ವೀಕ್ಷಕರು ಇವರನ್ನು `ಕನ್ನಡದ ರೇಣುಕಾ ಶಹಾಣೆ’ ಎಂದೇ ಕರೆಯುತ್ತಿದ್ದರು.

ದಾಖಲೆ ಬರೆದ ಅಪರ್ಣಾ

1998ರ ದೀಪಾವಳಿ ಸಂದರ್ಭ. ಇಡೀ ದಿನ ವಿಶೇಷ ಕಾರ್ಯಕ್ರಮ ನಡೆಸುವ ಬಗ್ಗೆ ಬೆಂಗಳೂರು ದೂರದರ್ಶನ ಯೋಜಿಸಿತ್ತು. ಅರ್ಧ ಗಂಟೆಗೊಮ್ಮೆ ಕಾರ್ಯಕ್ರಮಗಳ ಮಧ್ಯೆ ಮಧ್ಯೆ ರಸಪ್ರಶ್ನೆ ಕೇಳಿ, ಅದರ ಉತ್ತರವನ್ನು ವೀಕ್ಷಕರಿಂದ ದೂರವಾಣಿ ಮೂಲಕ ಪಡೆದು ವಿಜೇತರ ಹೆಸರು ಘೋಷಿಸುವುದು. ಹೀಗೆ ಸತತ 8 ಗಂಟೆಗಳ ಕಾಲ ಕಾರ್ಯಕ್ರಮ ನಿರೂಪಣೆ ಮಾಡಿ ಅಪರ್ಣಾ ಹೊಸದೊಂದು ದಾಖಲೆಯನ್ನೇ ಬರೆದರು.

ಸುದ್ದಿಯೊಂದನ್ನು ಹೊರತುಪಡಿಸಿ ದೂರದರ್ಶನದ ಬಹುತೇಕ ಎಲ್ಲ ಬಗೆಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಖ್ಯಾತಿ ಅಪರ್ಣಾರಿಗೆ ಸಲ್ಲುತ್ತದೆ.

ನಿರೂಪಣೆಗೆ ಹೊಸ ವ್ಯಾಖ್ಯೆ

ಕೆಲವು ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಿಗೆ ದೂರದರ್ಶನದ ನಿರೂಪಕರನ್ನು ಬಳಸಿಕೊಳ್ಳುವ ಪರಂಪರೆ ದೆಹಲಿಯಲ್ಲಿ ಆರಂಭವಾಗಿತ್ತು. ಅದು ಬೆಂಗಳೂರಿನಲ್ಲಿ ಆರಂಭವಾದದ್ದು ಅಪರ್ಣಾರ ಮುಖಾಂತರ. ಮಲೇಷಿಯಾ ನಿಯೋಗವೊಂದು ಆಗಮಿಸಿದ ಸಂದರ್ಭದಲ್ಲಿ ಕಾರ್ಯಕ್ರಮ ನಡೆಸಿಕೊಡುವ ಹೊಣೆಗಾರಿಕೆ ಅಪರ್ಣಾರ ಮೇಲಿತ್ತು. ಆಂಗ್ಲ ನಿರೂಪಣೆಯ ಅವರ ಪ್ರಥಮ ಪ್ರಯತ್ನ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಯಿತು. ಆ ಬಳಿಕ ಅವರಿಗೆ ಸರ್ಕಾರಿ, ಖಾಸಗಿ ವಲಯದಿಂದ ನಿರೂಪಣೆಯ ಆಹ್ವಾನಗಳು ಪುಂಖಾನುಪುಂಖವಾಗಿ ಬರುತ್ತಲೇ ಇವೆ. ಈವರೆಗೆ ಅವರು ನಿರೂಪಿಸಿದ ಕಾರ್ಯಕ್ರಮಗಳ ಸಂಖ್ಯೆ 7000 ದಾಟಿದೆ.

“ನಿರೂಪಣೆಯೇ ಒಂದು ವೃತ್ತಿಯಾಗುತ್ತದೆ, ಮಾತುಗಾರಿಕೆಯೇ ಒಂದು ಕಸುಬಾಗುತ್ತದೆ ಎಂದು ನಾನು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ,” ಎನ್ನುತ್ತಾರೆ ಅಪರ್ಣಾ.

ಸ್ಟೇಜ್‌ ಮ್ಯಾನೇಜ್‌ಮೆಂಟ್‌ ಇಂದು ಉದ್ದಿಮೆಯ ರೂಪ ತಾಳಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಯೋಜಿಸಲ್ಪಡುವ ಕಾರ್ಯಕ್ರಮಗಳಿಗೆ ನಿಜವಾದ ಮೆರುಗು ಕೊಡುವವರು ಅಪರ್ಣಾರಂತಹ ನಿರೂಪಕರು.

“ಜೋರು ಜೋರಾಗಿ ಮಾತನಾಡಿ ಚಪ್ಪಾಳೆ ತಟ್ಟಿಸಿಕೊಳ್ಳುವುದೇ ಶ್ರೇಷ್ಠ ನಿರೂಪಣೆಯಲ್ಲ. ಸಾರ್ವಜನಿಕ ಘನತೆ, ಉತ್ತಮ ನಡವಳಿಕೆಯ ಮುಖಾಂತರ ಕಾರ್ಯಕ್ರಮಗಳಿಗೆ ಶೋಭೆ ತಂದುಕೊಡುವುದು ನಿರೂಪಕರ ಕರ್ತವ್ಯ,” ಎಂದು ಅಪರ್ಣಾ ಸ್ಪಷ್ಟವಾಗಿ ಹೇಳುತ್ತಾರೆ.

ಧಾರಾವಾಹಿ ನಂಟು

`ನಿರೂಪಣೆ’ ಕ್ಷೇತ್ರದಲ್ಲಿನ ಜನಪ್ರಿಯತೆ ಅವರಿಗೆ ಧಾರಾವಾಹಿಗಳಲ್ಲೂ ಅವಕಾಶ ತಂದುಕೊಟ್ಟಿತು. `ಮೂಡಲ ಮನೆ,’ `ಪ್ರೀತಿ ಇಲ್ಲದ ಮೇಲೆ,’ `ಶುಭಮಂಗಳ,’ `ಜೋಗುಳ,’ `ಮುಕ್ತಮುಕ್ತ’ ಅವರಿಗೆ ಖ್ಯಾತಿ ತಂದುಕೊಟ್ಟ ಧಾರಾವಾಹಿಗಳು.

“ನಾನು ಎಲ್ಲಿಯೇ ಹೋದರೂ `ಪ್ರೀತಿ ಇಲ್ಲದ ಮೇಲೆ’ಯ ಪಲ್ಲವಿ ಹಾಗೂ `ಮುಕ್ತ ಮುಕ್ತ’ದ ಶೀಲಾ ಪ್ರಸಾದ್‌ ಹೆಸರಿನಿಂದ ಜನ ಗುರುತಿಸುತ್ತಾರೆ,” ಎಂದು ಅಪರ್ಣಾ ಹೇಳುತ್ತಾರೆ.

ಅಪರ್ಣಾ ದೂರದರ್ಶನದಲ್ಲಿದ್ದಾಗ ಟಿ.ಎನ್‌. ಸೀತಾರಾಮ್ ಅವರಿಂದ? `ಮಾಯಾಮೃಗ’ದಲ್ಲಿ ಅಭಿನಯಿಸಲು ಕರೆ ಬಂದಿತ್ತು. ಆದರೆ ಆಗ ಅವರು ಪೂರ್ಣಾವಧಿಯ ನಿರೂಪಕಿಯಾಗಿದ್ದರಿಂದ ಅಭಿನಯಿಸಲು ಅನುಮತಿ ದೊರಕಲಿಲ್ಲ. ಅವರು ಮಾಡಬೇಕಿದ್ದ ಪಾತ್ರ ಬಳಿಕ ಮಾಳವಿಕಾ ಅವರಿಗೆ ಸಿಕ್ಕಿತು. ಆ ಪಾತ್ರ ತಪ್ಪಿಸಿಕೊಂಡ ಬಗ್ಗೆ ಅಪರ್ಣಾರಿಗೆ ಈಗಲೂ ಖೇದವಿದೆ.

ಬಿಗ್‌ ಬಾಸ್‌ಗೆ ಪ್ರವೇಶ

Untitled-7

ತಮ್ಮ ಮಾತಿನ ಕಲೆಯಿಂದಲೇ ಮನೆ ಮಾತಾದ ಅಪರ್ಣಾ `ಬಿಗ್‌ ಬಾಸ್‌’ ಪ್ರವೇಶ ಮಾಡಿದ್ದು ಹಲವರನ್ನು ಹುಬ್ಬೇರಿಸುವಂತೆ ಮಾಡಿತ್ತು. ಹಾಗೆ ನೋಡಿದರೆ ಅಲ್ಲಿಗೆ ಹೋಗಲು ಅವರಿಗೆ ಖಂಡಿತ ಇಷ್ಟವಿರಲಿಲ್ಲ. ಪತಿ ಸ್ತಾರೆಯವರ ಆಗ್ರಹದಿಂದಲೇ ಅವರು ಅಲ್ಲಿಗೆ ಹೋಗಿದ್ದು. `ಈ ಟಿವಿ’ಯವರು ನಿನಗೆ ಎಷ್ಟೊಂದು ಅವಕಾಶಗಳನ್ನು ಕೊಟ್ಟಿದ್ದಾರೆ. ಇದು ನಿನಗೊಂದು ಚಾಲೆಂಜ್‌ ಎಂದು ಅಲ್ಲಿಗೆ ಹೋಗು ಎಂದು ಹೇಳಿ ಹುರಿದುಂಬಿಸಿದರು.

`ಬಿಗ್‌ ಬಾಸ್‌’ ಕನ್ನಡದ ಕಾರ್ಯಕ್ರಮ. ಅಲ್ಲಿನ ಸ್ಪರ್ಧಿಗಳು ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಹೇಳಿ, ಕನ್ನಡ ಬಾರದವರಿಗೆ ಕನ್ನಡ ಕಲಿಸಲು ಸಾಕಷ್ಟು ಪ್ರಯತ್ನಪಟ್ಟರು. ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ ಎನ್ನುವುದು ನಿಜವಾದರೂ, ಪ್ರಯತ್ನ ಪಟ್ಟ ಖುಷಿ ಅವರಿಗಿದೆ.

“ನನ್ನ ಕನ್ನಡ ಕಲಿಸುವ ಪ್ರಯತ್ನವನ್ನು ಜನಪ್ರಿಯತೆ ಗಳಿಸಿಕೊಳ್ಳುವ ಗಿಮಿಕ್‌ ಎಂದೆಲ್ಲ ಮಾತುಗಳು ಕೇಳಿಬಂದವು. ಕನ್ನಡವನ್ನು ನಾವೇ ಪ್ರೀತಿಸದಿದ್ದರೆ ಮತ್ತಾರು ಪ್ರೀತಿಸಲು ಸಾಧ್ಯ. ನಮ್ಮ ಭಾಷೆಯ ಬಗ್ಗೆ ಗೌರವ ಇರದೇ ಇರುವುದೇ ಕನ್ನಡದ ಸ್ಥಿತಿ ಹೀಗಾಗಲು ಕಾರಣವಾಗಿದೆ,” ಎಂದು ಅಪರ್ಣಾ ಖೇದದಿಂದ ಹೇಳುತ್ತಾರೆ.

“ಬಿಗ್‌ ಬಾಸ್‌ ಮನೆಯಲ್ಲಿ 42 ದಿನ ಇದ್ದೆ. ಒಟ್ಟು ಕುಟುಂಬದ ಮಹತ್ವ ಏನೆಂಬುದು ನನಗೆ ಅಲ್ಲಿ ಮನದಟ್ಟಾಯಿತು. ಅಲ್ಲಿ ನಕ್ಕಷ್ಟು ನಾನು ಬೇರೆಲ್ಲೂ ನಕ್ಕಿಲ್ಲ,” ಎಂದು ತಮ್ಮ ಅನುಭವವನ್ನು ವಿವರಿಸುತ್ತಾರೆ.

ಪತಿಯ ಸಹಕಾರ

ಪತಿ ನಾಗರಾಜ ಸ್ತಾರೆ ಹೆಸರಾಂತ ವಾಸ್ತುಶಿಲ್ಪಿ. ಜೊತೆಗೆ ಲೇಖಕರು ಕೂಡ. ಹಲವು ಪತ್ರಿಕೆಗಳಿಗೆ ಆಗಾಗ ಲೇಖನಗಳನ್ನು ಬರೆಯುತ್ತಲೇ ಇರುತ್ತಾರೆ. ಸಾಂಸ್ಕೃತಿಕ ವಲಯದ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿರುವ ಅವರು, ಪತ್ನಿಯ ಸಕಲ ಚಟುವಟಿಕೆಗಳಿಗೆ ತುಂಬು ಮನಸ್ಸಿನಿಂದ ಪ್ರೋತ್ಸಾಹ ನೀಡುತ್ತಾರೆ.

`ಮನೆ ಗೆದ್ದು ಮಾರು ಗೆಲ್ಲು’ ಎನ್ನುವ ಮಾತನ್ನು ಅಪರ್ಣಾ ಚಾಚೂ ತಪ್ಪದೇ ಅನುಸರಿಸುತ್ತಾರೆ. ಬಿಡುವಿದ್ದಾಗೆಲ್ಲ ಮನೆಯ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರಲ್ಲದೆ, ಪತಿಯ ಅನುಪಸ್ಥಿತಿಯಲ್ಲಿ ಅವರ ಆಫೀಸಿನ ಆಗುಹೋಗುಗಳನ್ನು ಗಮನಿಸುತ್ತಾರೆ.

“ಮನೆಯವರ ಸಹಕಾರ ಇರದಿದ್ದರೆ ನಾವು ನೆಮ್ಮದಿಯಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ,” ಎಂದು ಹೇಳುವುದರ ಮೂಲಕ ತಮ್ಮ ಕುಟುಂಬ ಪ್ರೀತಿಯನ್ನು ತೋರಿಸುತ್ತಾರೆ.

ಕೀಳರಿಮೆ ಬೇಡ `ನಾನು ಏನೂ ಮಾಡ್ತಿಲ್ಲ, ಮನೇಲೇ ಇದೀನಿ’ ಎಂದು ಅನೇಕ ಮಹಿಳೆಯರಿಗೆ ಕೀಳರಿಮೆ ಇದೆ. ಏನೂ ಕೆಲಸ ಮಾಡದೆ ಹಾಗೆಯೇ ಕುಳಿತಿದ್ದರೆ ಹಾಗೆ ಹೇಳಬಹುದು. ಮನೆಯನ್ನು ನೋಡಿಕೊಂಡೂ ಹಾಗೆ ಹೇಳುವುದು ತಪ್ಪು. ಪೂರ್ಣಾವಧಿಯಲ್ಲಿ ಮನೆಯನ್ನು ನೋಡಿಕೊಳ್ಳುವವರು `ಹೋಮ್ ಮೇಕರ್‌’ಗಳೇ ಹೌದು, ಎನ್ನುತ್ತಾರೆ ಅಪರ್ಣಾ.

“ಬೇರೆಯವರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ನಿಮಗೆ ಏನು ಇಷ್ಟವೋ ಅದನ್ನೇ ಮಾಡಿ. ಅದು ಮಾಡ್ತೀನಿ, ಇದು ಮಾಡ್ತೀನಿ ಎಂಬ ಗೊಂದಲ ಬೇಡ,” ಎಂದು ಇಂದಿನ ಆಧುನಿಕ ಯುವತಿಯರಿಗೆ ಕಿವಿಮಾತು ಹೇಳುತ್ತಾರೆ.

ವಿದೇಶದಲ್ಲೂ ಮಾತಿನ ಮೋಡಿ

ಬಹ್ರೇನ್‌ ಕನ್ನಡ ಸಮ್ಮೇಳನ ಹಾಗೂ ಲಂಡನ್‌ ಕನ್ನಡ ಸಮ್ಮೇಳನಗಳಿಗೆ ಆಹ್ವಾನಿತ ನಿರೂಪಕಿಯಾಗಿ ಹೋಗಿ ಅಲ್ಲೂ ತಮ್ಮ ಮಾತಿನ ಮೋಡಿಯನ್ನು ತೋರಿಸಿಕೊಟ್ಟವರು ಅಪರ್ಣಾ.

“ಅಲ್ಲಿನ ಕನ್ನಡಿಗರಿಗಿರುವಷ್ಟು ಕನ್ನಡ ಪ್ರೀತಿ ಇಲ್ಲಿಯರಿಗೆ ಸ್ಪಲ್ಪವಾದರೂ ಇದ್ದಿದ್ದರೆ, ಕನ್ನಡದ ಸ್ಥಿತಿ ಈ ಮಟ್ಟಕ್ಕೆ ತಲುಪುತ್ತಿರಲಿಲ್ಲ,” ಎಂದು ಅಪರ್ಣಾ ಖೇದ ವ್ಯಕ್ತಪಡಿಸುತ್ತಾರೆ.

ಪ್ರಶಸ್ತಿ ಪುರಸ್ಕಾರ

1986ರಲ್ಲಿ `ಮಸಣದ ಹೂ’ ಚಿತ್ರದಲ್ಲಿನ ಅಭಿನಯಕ್ಕೆ ಬಿ.ಆರ್‌. ಪಂತುಲು `ವರ್ಷದ ಹೊಸ ಮುಖ’ ಪ್ರಶಸ್ತಿ ದೊರಕಿತು. ಆ ಬಳಿಕ 2007ರಲ್ಲಿ `ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲಿನ ಅಭಿನಯಕ್ಕೆ `ಆರ್ಯಭಟ ಪ್ರಶಸ್ತಿ.’ 2009ರಲ್ಲಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‌ ವತಿಯಿಂದ ಶ್ರೇಷ್ಠ ನಿರೂಪಣೆಯ `ಜೀವಮಾನದ ಪ್ರಶಸ್ತಿ’ ಬಂದಿದೆ.

– ಅಶೋಕ ಚಿಕ್ಕಪರಪ್ಪಾ.

ಇವರೇ ಹೀರೋಯಿನ್‌ ಸರ್‌!

`ಮಸಣದ ಹೂ’ ಚಿತ್ರದ ಚಿತ್ರೀಕರಣಕ್ಕಾಗಿ ಕಂಠೀರವ ಸ್ಟುಡಿಯೋಗೆ ದಿನ ಹೋಗಬೇಕಾಗಿತ್ತು. ಶೂಟಿಂಗ್‌ ಇಲ್ಲದ ದಿನಗಳಲ್ಲಿ ಅಪರ್ಣಾ ನಿರ್ಮಾಪಕರು ಹಾಗೂ ನಿರ್ದೇಶಕರ ಮಕ್ಕಳೊಂದಿಗೆ ಸೇರಿಕೊಂಡು ಸ್ಟುಡಿಯೋ ಆವರಣದಲ್ಲಿ ಸುತ್ತಾಡುತ್ತಿದ್ದರು. ಆಗಾಗ ಮಾವು, ಹುಣಸೆ ಮರಗಳಿಗೆ ಕಲ್ಲು ಹೊಡೆಯುತ್ತಿದ್ದುದು ಉಂಟು. ಅದೊಂದು ಸಲ ಸ್ಟುಡಿಯೋದ ಇನ್‌ಚಾರ್ಜ್‌ ಅಪರ್ಣಾಗೆ ಚೆನ್ನಾಗಿ ಗದರಿದ್ದರು. ನಿರ್ಮಾಪಕ ನಿರ್ದೇಶಕರ ಮಕ್ಕಳು `ಸರ್‌, ಇವಳೇ ಚಿತ್ರದ ಹೀರೋಯಿನ್‌’ ಎಂದು ಹೇಳಿದಾಗ ಅವರು ಇವಳ ಮುಖವನ್ನೇ ನೋಡುತ್ತಿದ್ದರು.

ನಿಮ್ಮಿಂದ ಕನ್ನಡ ಕಲಿತೆ……

Untitled-6

ಶ್ರೀನಿವಾಸ್‌ ಪ್ರಭು ಹಾಗೂ ಅಪರ್ಣಾ ನಡೆಸಿಕೊಡುತ್ತಿದ್ದ `ಪ್ರಿಯ ವೀಕ್ಷಕರೆ’ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ಇಬ್ಬರ ನಿರೂಪಣೆಯನ್ನೇ ಹೊಗಳಿ ಅನೇಕ ಪತ್ರಗಳು ಬರುತ್ತಿದ್ದವು. `ನಮ್ಮನ್ನು ಹೊಗಳುವಂತಹ ಪತ್ರಗಳನ್ನು ಆಯ್ಕೆ ಮಾಡಿಕೊಳ್ಳಲೇಬೇಡಿ’ ಎಂದು ಪ್ರಭು ಅಪರ್ಣಾರಿಗೆ ಹೇಳುತ್ತಿದ್ದರು. ಅಂತಹ ಪತ್ರಗಳಲ್ಲಿ ಒಂದನ್ನು ಅವರು ಆಯ್ಕೆ ಮಾಡಿಕೊಳ್ಳಲೇಬೇಕಾಯಿತು. ಅದು ಮುಸ್ಲಿಂ ವ್ಯಕ್ತಿಯೊಬ್ಬ ಬರೆದ ಪತ್ರ.

“ನಿಮ್ಮಿಬ್ಬರ ಶುದ್ಧ ಕನ್ನಡದ ಮಾತುಗಳೇ ನನಗೆ ಇಷ್ಟರ ಮಟ್ಟಿಗೆ ಕನ್ನಡದಲ್ಲಿ ಪತ್ರ ಬರೆಯಲು ಪ್ರೇರಣೆ ನೀಡಿತು,” ಎಂದು ಆ ವ್ಯಕ್ತಿ ಬರೆದಿದ್ದ.

ನಟಿಸಲು ಬರುವುದಿಲ್ಲವಲ್ಲ……

`ಮೂಡಲ ಮನೆ’ ಧಾರಾವಾಹಿಯಲ್ಲಿ ಅಪರ್ಣಾ ಯಮುನಾ ಮೂರ್ತಿಯವರ ಮಗಳ ಪಾತ್ರ ಮಾಡಿದ್ದರು. ಯಮುನಾ ಮೂರ್ತಿ ತಮ್ಮ ಗರ್ಭಿಣಿ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಆಕೆ ಅಲ್ಲಿ ಸಾನ್ನಪ್ಪುತ್ತಾಳೆ. ಧಾರಾವಾಹಿಯಲ್ಲಿ ಮಗಳ ಸಾವಿಗಿಂತ ಹೆಚ್ಚಾಗಿ ಅಪರ್ಣಾ ಇನ್ನು ಮುಂದೆ ತಮ್ಮ ಜೊತೆ ನಟಿಸಲು ಬರುದಿಲ್ಲವಲ್ಲ ಎಂಬ ದುಃಖವೇ ತಮಗೆ ಹೆಚ್ಚಾಗಿ ಆಗಿತ್ತು ಎಂದು ಯಮುನಾ ಮೂರ್ತಿ ಒಂದು ಕಡೆ ಹೇಳಿದ್ದರು.

ಕನ್ನಡಕ್ಕೊಂದು ಆಸ್ತಿ

ಖ್ಯಾತ ಕವಿ ಲಕ್ಷ್ಮೀ ನಾರಾಯಣ ಭಟ್ಟರು ಅದೊಂದು ಸಲ ಕಾರ್ಯಕ್ರಮದ ಬಳಿಕ ಅಪರ್ಣಾರ ನಿರೂಪಣೆಯನ್ನುದ್ದೇಶಿಸಿ, “ಪತ್ರಕರ್ತ ನಾರಾಯಣ ಸ್ವಾಮಿಯವರು ಕನ್ನಡಕ್ಕೆ ಒಂದು ಒಳ್ಳೆಯ ಆಸ್ತಿಯನ್ನೇ ಬಿಟ್ಟುಹೋಗಿದ್ದಾರೆ,” ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.

ಗೌರವ ತಂದುಕೊಟ್ಟರು…..

ಕನ್ನಡದ ಮತ್ತೊಬ್ಬ ಶ್ರೇಷ್ಠ ನಿರೂಪಕ ಶ್ರೀನಿವಾಸ ಪ್ರಭು ಅಪರ್ಣಾ ಕುರಿತು ಹೀಗೆ ಹೇಳುತ್ತಾರೆ, “ನಿರೂಪಣೆ ಅಭಿನಯಕ್ಕಿಂತ ಕಷ್ಟದ ಕೆಲಸ. ಅಪರ್ಣಾ ಅದನ್ನು ಚಾಲೆಂಜ್‌ ಎಂಬಂತೆ ಸ್ವೀಕರಿಸಿ, ನಿರೂಪಕ ವೃತ್ತಿಗೆ ಗೌರವ ತಂದುಕೊಟ್ಟಿದ್ದಾರೆ.”

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ