ದಿಢೀರ್ ಮಾವಿನ ಉಪ್ಪಿನಕಾಯಿ
ಸಾಮಗ್ರಿ : ಸಿಪ್ಪೆ ಹೆರೆದು ಸಣ್ಣ ಹೋಳಾಗಿಸಿದ 500 ಗ್ರಾಂ ಹುಳಿ ಮಾವಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಬ್ಲ್ಯಾಕ್ ಸಾಲ್ಟ್, ಮೆಣಸು, ಇಂಗು, ಗರಂಮಸಾಲ, ಒಗ್ಗರಣೆಗೆ ಸಾಸುವೆ, ಜೀರಿಗೆ, ಎಣ್ಣೆ, ಅರ್ಧ ಸಣ್ಣ ಚಮಚ ಅರಿಶಿನ.
ವಿಧಾನ : ಒಂದು ಸಣ್ಣ ಬಾಣಲೆಯಲ್ಲಿ ಜೀರಿಗೆ, ಮೆಣಸು, ಲವಂಗ, ಏಲಕ್ಕಿ ಹುರಿದುಕೊಂಡು, ಆರಿದ ನಂತರ ಪುಡಿ ಮಾಡಿಡಿ. ಒಂದು ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ ಮೊದಲು ಸಾಸುವೆ, ಇಂಗಿನ ಒಗ್ಗರಣೆ ಕೊಡಿ. ನಂತರ ಪುಡಿ ಮಾಡಿದ ಮಿಶ್ರಣ, ಅರಿಶಿನ, ಗರಂಮಸಾಲ, 2 ಬಗೆಯ ಉಪ್ಪು ಬೆರೆಸಿ ಕೆದಕಬೇಕು. ಆಮೇಲೆ ಮಾವಿನ ಹೋಳು ಸೇರಿಸಿ ಮಂದ ಉರಿಯಲ್ಲಿ ಚೆನ್ನಾಗಿ ಬಾಡಿಸಿ. ಇಳಿಸುವ ಮುನ್ನ ಸಕ್ಕರೆ ಹಾಕಿ 2 ನಿಮಿಷ ಕೈಯಾಡಿಸಿ. ಇದೀಗ ದಿಢೀರ್ ಮಾವಿನ ಉಪ್ಪಿನಕಾಯಿ ಸವಿಯಲು ಸಿದ್ಧ. ಫ್ರಿಜ್‌ನಲ್ಲಿಟ್ಟು ಬಳಸಿದರೆ 1 ವಾರ ಕೆಡುವುದಿಲ್ಲ.
ಎಣ್ಣೆರಹಿತ ಮಾವಿನ ಉಪ್ಪಿನಕಾಯಿ
ಸಾಮಗ್ರಿ : ಸಿಪ್ಪೆ ಹೆರೆದು ಉದ್ದದ ಹೋಳಾಗಿಸಿದ 500 ಗ್ರಾಂ ಹುಳಿ ಮಾವಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಅಚ್ಚ ಮೆಣಸಿನ ಪುಡಿ, ಇಂಗು, ಬೆಲ್ಲ, ಅರ್ಧ ಸಣ್ಣ ಚಮಚ ಅರಿಶಿನ.
ವಿಧಾನ : ಮೊದಲು ಮಾವಿನ ಹೋಳಿಗೆ ಉಪ್ಪು, ಅರಿಶಿನ ಹಾಕಿ 2 ದಿನ ಹಾಗೇ ಕಟ್ಟಿಡಿ. ಮಾರನೇ ದಿನ ಇದಕ್ಕೆ ತುರಿದ ಬೆಲ್ಲ ಹಾಗೂ ಉಳಿದೆಲ್ಲ ಸಾಮಗ್ರಿ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಭರಣಿಯ ಬಾಯಿ ಕಟ್ಟಿ, 10-12 ದಿನ ಬಿಸಿಲಿಗಿಡಿ. ನಂತರ ಉಪ್ಪಿನಕಾಯಿ ಬಳಸಲು ಸಿದ್ಧ.
ಅಮಟೆ ಮಾವಿನ ಉಪ್ಪಿನಕಾಯಿ
ಸಾಮಗ್ರಿ : 250 ಗ್ರಾಂ ಮಾವಿನಕಾಯಿ, 300 ಗ್ರಾಂ ಅಮಟೆಕಾಯಿ, 1 ಕಪ್ ಸಾಸುವೆ ಎಣ್ಣೆ ಅಥವಾ ಎಳ್ಳೆಣ್ಣೆ, 1 ಕಪ್ ರೆಡಿಮೇಡ್ ಉಪ್ಪಿನಕಾಯಿ ಮಸಾಲೆ, ಅರ್ಧ ಚಮಚ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ತುಸು ಅರಿಶಿನ.
ವಿಧಾನ : ಅಮಟೆಕಾಯಿ ಇಡಿಯಾಗಿರಲಿ. ಇದನ್ನು ಚೆನ್ನಾಗಿ ಒರೆಸಿಕೊಂಡು ಪೋರ್ಕ್‌ನಿಂದ ಚುಚ್ಚಿಡಿ. ಮಾವನ್ನು ಹೋಳು ಮಾಡಿ. ಎರಡನ್ನೂ ಜಾಡಿಗೆ ತುಂಬಿಸಿ, ಮೇಲೆ ಉಪ್ಪು, ಅರಿಶಿನ ಹಾಕಿ ಚೆನ್ನಾಗಿ ಕುಲುಕಿ 1 ವಾರ ಹಾಗೇ ಬಿಡಿ. ನಂತರ ರೆಡಿಮೇಡ್ ಉಪ್ಪಿನಕಾಯಿ ಮಸಾಲೆ, ಕಾಯಿಸಿದ ಎಣ್ಣೆಗೆ ಇಂಗಿನ ಒಗ್ಗರಣೆ ಕೊಟ್ಟು ಇದಕ್ಕೆ ಬೆರೆಸಿ, ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಭರಣಿ ಅಥವಾ ಜಾಡಿಯನ್ನು 15 ದಿನ ಬಿಸಿಲಿಗಿಟ್ಟು ಆಮೇಲೆ ಬಳಸಲು ಆರಂಭಿಸಿ.
ಕಡಲೆಕಾಳು ಮಾವಿನ ಉಪ್ಪಿನಕಾಯಿ
ಸಾಮಗ್ರಿ : ಒಂದು ಕಪ್ ಕಾಬೂಲ್ ಕಡಲೆಕಾಳು. 500 ಗ್ರಾಂ ಸಣ್ಣಗೆ ಹೆಚ್ಚಿದ ಹುಳಿ ಮಾವಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, 1-1 ಚಮಚ ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಮೆಂತ್ಯ, 2 ಸೌಟು ಎಣ್ಣೆ.
ವಿಧಾನ : ಹಿಂದಿನ ರಾತ್ರಿ ಕಡಲೆಕಾಳು ನೆನೆಹಾಕಿ, ಮಾರನೇ ದಿನ ಅದರ ನೀರು ಸೋಸಿಕೊಂಡು, ಬಟ್ಟೆಯ ಮೇಲೆ ಹರಡಿ, 1-2 ತಾಸು ಒಣಗಿಸಿ. ಒಂದು ಬೇಸನ್‌ಗೆ ಹೆಚ್ಚಿದ ಮಾವು, ಕಡಲೆಕಾಳು, ಉಪ್ಪು, ಖಾರ, ಇಂಗು, ಉಳಿದ ಮಸಾಲೆ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇದನ್ನು ಗಾಜಿನ ಭರಣಿಗೆ ತುಂಬಿಸಿ, ಎಣ್ಣೆ ಬಿಸಿ ಮಾಡಿ. ಇದನ್ನು 4-5 ದಿನ ಬಿಸಿಲಿಗಿಟ್ಟು ಆಮೇಲೆ ಬಳಸಲು ಆರಂಭಿಸಿ.
ಖರ್ಜೂರದ ಹುಳಿಸಿಹಿ ಉಪ್ಪಿನಕಾಯಿ
ಸಾಮಗ್ರಿ : 150 ಗ್ರಾಂ ಖರ್ಜೂರ, 50 ನಿಂಬೆಹಣ್ಣು, 4 ಚಮಚ ಉದ್ದಕ್ಕೆ ಹೆಚ್ಚಿದ ಬಾದಾಮಿ, 5 ಚಮಚ ದ್ರಾಕ್ಷಿ, 1-1 ಚಮಚ ಪುಡಿಮೆಣಸು, ಒಣಶುಂಠಿಯ ಪುಡಿ, ಅರ್ಧರ್ಧ ಚಮಚ ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, 2 ಲವಂಗ, 4 ಏಲಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, ಬ್ಲ್ಯಾಕ್ ಸಾಲ್ಟ್. ವಿನಿಗರ್, ಪುಡಿಸಕ್ಕರೆ.
ವಿಧಾನ : ಹಿಂದಿನ ರಾತ್ರಿ ನಿಂಬೆ ಹಣ್ಣುಗಳನ್ನು ಚೆನ್ನಾಗಿ ಹಿಂಡಿಕೊಂಡು ಅದರಲ್ಲಿ, ಬೀಜ ತೆಗೆದು ಉದ್ದಕ್ಕೆ ಸೀಳಿದ ಖರ್ಜೂರಗಳನ್ನು ನೆನೆಹಾಕಿ. ಇದಕ್ಕೆ ದ್ರಾಕ್ಷಿ ಬಾದಾಮಿ ಸೇರಿಸಿಡಿ. ಮಾರನೇ ಬೆಳಗ್ಗೆ ಒಂದು ಪ್ಯಾನಿಗೆ ಈ ಮಿಶ್ರಣ, ಸಕ್ಕರೆ, ವಿನಿಗರ್ ಬೆರೆಸಿ ಮಂದ ಉರಿಯಲ್ಲಿ 4-5 ನಿಮಿಷ ಕೆದಕಬೇಕು. ಆಮೇಲೆ ಇದಕ್ಕೆ ಪುಡಿಮೆಣಸು, ಒಣಶುಂಠಿ ಪುಡಿ, ಜೀರಿಗೆ, ಸೋಂಪಿನ ಪುಡಿ, ಏಲಕ್ಕಿ, ಲವಂಗದ ಪುಡಿ ಹಾಕಿ ಕೆದಕಬೇಕು. ಕೊನೆಯಲ್ಲಿ ಎರಡೂ ಬಗೆಯ ಉಪ್ಪು ಬೆರೆಸಿ ಚೆನ್ನಾಗಿ ಕೆದಕಿ ಕೆಳಗಿಳಿಸಿ. ಇದನ್ನು ಭರಣಿಗೆ ತುಂಬಿಸಿ 4 ದಿನಗಳ ನಂತರ ಬಳಸಲು ಆರಂಭಿಸಿ.
ಮಾವಿನ ಮುರಬ್ಬಾ
ಸಾಮಗ್ರಿ : 500 ಗ್ರಾಂ ದಪ್ಪಗೆ ತುರಿದ ಮಾವಿನಕಾಯಿ, 500 ಗ್ರಾಂ ಸಕ್ಕರೆ, ಅರ್ಧ ಸಣ್ಣ ಚಮಚ ಇಂಗು, 1-1 ಚಮಚ ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಅರ್ಧ ಚಮಚ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ.
ವಿಧಾನ : ಮಾವಿನ ತುರಿಗೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಗಾಜಿನ ಭರಣಿಗೆ ತುಂಬಿಸಿ. ಇದನ್ನು ಒಂದು ವಾರದ ಕಾಲ ಬಿಸಿಲಿಗಿಡಬೇಕು. ಸಕ್ಕರೆ ಕರಗಿ ಇದರಲ್ಲಿ ವಿಲೀನಗೊಳ್ಳುತ್ತಿದ್ದಂತೆ ಚೆನ್ನಾಗಿ ಕುಲಕಬೇಕು. ಹೀಗೆ 8-10 ದಿನ ಕಳೆದ ಮೇಲೆ ಈ ಸಿಹಿ ಉಪ್ಪಿನಕಾಯಿಯನ್ನು ರೊಟ್ಟಿ, ಚಪಾತಿಗಳೊಂದಿಗೆ ಸವಿಯಲು ಕೊಡಿ.
ಸ್ಪೆಷಲ್ ಟೊಮೇಟೊ ಉಪ್ಪಿನಕಾಯಿ
ಸಾಮಗ್ರಿ : 2 ಕಿಲೋ ಚೆನ್ನಾಗಿ ಮಾಗಿದ ಟೊಮೇಟೊ, 2-3 ಈರುಳ್ಳಿ, 1 ಗಡ್ಡೆ ಬೆಳ್ಳುಳ್ಳಿ, 1 ದೊಡ್ಡ ತುಂಡು ಶುಂಠಿ, 100 ಗ್ರಾಂ ಹಸಿಮೆಣಸು, 125 ಗ್ರಾಂ ಸಾಸುವೆ, 100 ಗ್ರಾಂ ಮೆಂತ್ಯ, ಅರ್ಧ ಕಪ್ ತುಂಡರಿಸಿದ ಬ್ಯಾಡಗಿ ಒಣಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಬೆಲ್ಲ, ವಿನಿಗರ್, 3 ಸೌಟು ಎಣ್ಣೆ.
ವಿಧಾನ : ಅರ್ಧರ್ಧ ಭಾಗ ಸಾಸುವೆ ಮೆಂತ್ಯ ಹುರಿದು ಪುಡಿ ಮಾಡಿಡಿ. ಅದೇ ತರಹ ಈರುಳ್ಳಿ, ಶುಂಠಿ, ಹಸಿಮೆಣಸು, ಬೆಳ್ಳುಳ್ಳಿಗಳನ್ನು ಸಣ್ಣಗೆ ಹೆಚ್ಚಿಕೊಂಡು ಅರ್ಧರ್ಧ ಭಾಗ ಮಿಕ್ಸಿಗೆ ಹಾಕಿ ವಿನಿಗರ್ ಜೊತೆ ನುಣ್ಣಗೆ ತಿರುವಿಕೊಳ್ಳಿ. ಟೊಮೇಟೊ ಸಣ್ಣಗೆ ಹೆಚ್ಚಿಡಿ. ದಪ್ಪ ದಳದ ಪ್ರೆಷರ್ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಉಳಿದರ್ಧ ಭಾಗದ ಸಾಸುವೆ, ಮೆಂತ್ಯ, ಬ್ಯಾಡಗಿ ಮೆಣಸಿನಕಾಯಿ ಹಾಕಿ ಒಗ್ಗರಣೆ ಕೊಡಿ. ಆಮೇಲೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿ ಹಾಕಿ ಬಾಡಿಸಿ. ನಂತರ ಟೊಮೇಟೊ ಸೇರಿಸಿ ಮಂದ ಉರಿಯಲ್ಲಿ ಸತತ ಬಾಡಿಸಿ. ಚೆನ್ನಾಗಿ ಕುದಿ ಬಂದ ಮೇಲೆ ಉಪ್ಛು, ಖಾರ, ಪುಡಿ ಮಾಡಿದ ಬೆಲ್ಲ, ವಿನಿಗರ್ ಬೆರೆಸಿ 5-6 ನಿಮಿಷ ಕೈಯಾಡಿಸಿ. ಆಮೇಲೆ ಚೆನ್ನಾಗಿ ಕುದಿ ಬಂದು ಮೇಣದಂತಾದಾಗ, ಕೆಳಗಿಳಿಸಿ ಆರಲು ಬಿಡಿ. ಆಮೇಲೆ ಇದನ್ನು ಗಾಜಿನ ಭರಣಿಗೆ ತುಂಬಿಸಿ, ಬೇಕಾದಾಗ ಬಳಸಬಹುದು. 2-3 ವಾರ ಇದು ಕೆಡದೆ ಉಳಿಯುತ್ತದೆ.
ಹಾಗಲಕಾಯಿ ಉಪ್ಪಿನಕಾಯಿ
ಸಾಮಗ್ರಿ : 500 ಗ್ರಾಂ ಹಾಗಲಕಾಯಿ, 250 ಗ್ರಾಂ ಹುಳಿ ಮಾವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, 2-2 ಚಮಚ ಹುರಿದು ಪುಡಿ ಮಾಡಿದ ಸಾಸುವೆ, ಜೀರಿಗೆ, ಸೋಂಪು, ಮೆಂತ್ಯ, ಧನಿಯಾ, ಅಗತ್ಯವಿದ್ದಷ್ಟು ಅರಿಶಿನ, ಎಣ್ಣೆ, ಬೆಲ್ಲ, ನಿಂಬೆರಸ.
ವಿಧಾನ : ಹಾಗಲಕಾಯಿಗಳನ್ನು ಚೆನ್ನಾಗಿ ಒದ್ದೆ ಬಟ್ಟೆಯಿಂದ, ನಂತರ ಒಣಬಟ್ಟೆಯಿಂದ ಒರೆಸಿ, ಆಮೇಲೆ ಬಿಲ್ಲೆಗಳಾಗಿ ಕತ್ತರಿಸಿ, ಬೀಜ ತೆಗೆದುಬಿಡಿ. ನಂತರ ಇದಕ್ಕೆ ತುಸು ಉಪ್ಪು, ಅರಿಶಿನ ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು 1 ತಾಸು ನೆನೆಯಲು ಬಿಡಿ. ಆಮೇಲೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸುವೆ, ಜೀರಿಗೆ, ಸೋಂಪು, ಮೆಂತ್ಯ, ಧನಿಯಾಗಳ ಒಗ್ಗರಣೆ ಕೊಡಿ. ಇದಕ್ಕೆ ಹಾಗಲಕಾಯಿ ಹಾಕಿ ಚೆನ್ನಾಗಿ ಬಾಡಿಸಿ. ಆಮೇಲೆ ಸಿಪ್ಪೆ ಹೆರೆದು ತುರಿದ ಮಾವು ಹಾಕಿ ಬಾಡಿಸಿ. ಇನ್ನಷ್ಟು ಎಣ್ಣೆ ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸುತ್ತಿರಿ. ಆಮೇಲೆ ಉಪ್ಪು, ಖಾರ, ಅರಿಶಿನ, ಪುಡಿ ಮಾಡಿದ ಬೆಲ್ಲ ಹಾಕಿ ಸತತ ಕೈಯಾಡಿಸಿ ಕೆಳಗಿಳಿಸಿ. ಆರಿದ ನಂತರ ಗಾಜಿನ ಭರಣಿಗೆ ತುಂಬಿಸಿ, ಬಾಯಿ ಕಟ್ಟಿ ಬಿಸಿಲಿಗಿಡಿ. ಹೀಗೆ 4-5 ದಿನಗಳಾದ ಮೇಲೆ ಇದು ಬಳಸಲು ಯೋಗ್ಯ