“ನಿನಗೆ ಹಣದ ಬೆಲೆ ಏನು ಗೊತ್ತು? ಎಂದಾದರೂ ಕಷ್ಟಪಟ್ಟು ದುಡಿದಿದ್ರೆ ನಿನಗೆ ಗೊತ್ತಾಗ್ತಿತ್ತು!” ವಿನಯ್‌ ಕೋಪದಿಂದ ಹೇಳಿದ, “ಬರೀ ಅಧಿಕಾರದಿಂದ ಅದು ಬೇಕು, ಇದು ಬೇಕು ಎಂದು ಹೇಳಿಬಿಡ್ತಿಯಾ.”

ಅನಿತಾ ಕೂಡ ಕೋಪದಿಂದ ವಿನಯನನ್ನು ನೋಡುತ್ತಾ, “ನಾನು ನಿಮಗೆ ಅಂತಹುದೇನನ್ನು ತರಲು ಹೇಳಿದೆ? ನನಗಾಗಿ ಚಿನ್ನ ವಜ್ರಾಭರಣ ತರಲು ಕೇಳಿದ್ನಾ? ಮಕ್ಕಳಿಗೆ ಹಾಗೂ ಮನೆಗೆ ಬೇಕಾಗುವಂತಹ ಅವಶ್ಯಕ ವಸ್ತುಗಳನ್ನು ತಾನೇ ಕೇಳಿದ್ದು.,,,, ಈ ಅವಶ್ಯಕತೆಗಳನ್ನು ನೀವು ಪೂರೈಸದೆ ಬೇರಾರು ಪೂರೈಸಲು ಸಾಧ್ಯ?”

“ಈ ಅವಶ್ಯಕತೆಗಳನ್ನು ಹಣವಿಲ್ಲದೆ ಪೂರೈಸಲು ಸಾಧ್ಯವಿಲ್ಲ,” ವಿನಯ್‌ ಹೆಚ್ಚು ಕಡಿಮೆ ಚೀರುತ್ತಲೇ ಹೇಳಿದ.

“ಈ ಅವಶ್ಯಕತೆಗಳನ್ನು ಒಮ್ಮೆಲೆ ಪೂರೈಸಿ ಎಂದು ನಾನು ನಿಮಗೆ ಯಾವಾಗ ಹೇಳಿದೆ? ಯಾವುದು ಹೆಚ್ಚು ಅಗತ್ಯವಿದೆಯೋ ಅದನ್ನು ಈಗಲೇ ತೆಗೆದುಕೊಂಡು ಬನ್ನಿ. ಉಳಿದವನ್ನು ಮುಂದಿನ ತಿಂಗಳುಗಳಲ್ಲಿ ತೆಗೆದುಕೊಡುವಿರಂತೆ.”

“ಅದು ಬೇಕು, ಇದು ಬೇಕು ಎಂದು ನೀವು ಮೂವರು ನನಗೆ ಆರ್ಡರ್‌ ಮಾಡ್ತಾನೆ ಇರ್ತೀರಾ…. ಈಗ ನಾನು ಆ ಬೇಡಿಕೆಗಳನ್ನು ಹೇಗೆ ಪೂರೈಸಲು ಸಾಧ್ಯ ಎಂದು ನೀವು ಯೋಚಿಸಲು ಹೋಗುವುದೇ ಇಲ್ಲ.”

“ನೀವು ನನಗೆ ಒಂದು ಸಲಕ್ಕೆ ಎಷ್ಟು ಹಣ ಕೊಡ್ತೀರೊ ಆ ಮೊತ್ತದಲ್ಲಿ ನಾನು ಇಡೀ ತಿಂಗಳು ಸಾಗಿಸಬೇಕಾಗುತ್ತದೆ,” ಅನಿತಾ ಸ್ವಲ್ಪ ರೋಷದಿಂದಲೇ ಹೇಳಿದಳು, “ಹಣ ಗಳಿಸುವ ಬಗ್ಗೆ ಹೇಳಬೇಕೆಂದರೆ, ನಾನೇನು ಕಡಿಮೆ ಓದಿಲ್ಲ. ಆದರೆ ನೀವೇ ನನಗೆ ನೌಕರಿ ಮಾಡಲು ಅವಕಾಶ ಕೊಡಲಿಲ್ಲ. ನೀವಿಂದು `ಹೂಂ’ ಎಂದು ಹೇಳಿಬಿಟ್ರೆ ನಾನು ನೌಕರಿಗಾಗಿ ಹುಡುಕಾಟ ಆರಂಭಿಸ್ತೀನಿ.”

“ಹಾಂ ಹಾಂ,” ಎಂದು ವಿನಯ್‌ ವ್ಯಂಗ್ಯವಾಗಿ ಹೇಳಿದ, “ಈಗ ನಿನಗೆ ಯಾರು ತಾನೇ ನೌಕರಿ ಕೊಡ್ತಾರೆ? ನೀನು ಅಡುಗೆ ಮನೆ ಕೆಲಸ ನೋಡಿಕೊಳ್ತಾ ಇರು.”

ಅನಿತಾಳ ಮೈಮನ ಉರಿದಂತಾಯ್ತು. ಆಕೆ ಓದಿನಲ್ಲೇನೂ ಕಡಿಮೆಯಿರಲಿಲ್ಲ. ಆದರೆ ನೌಕರಿ ಮಾತ್ರ ಮಾಡಿರಲಿಲ್ಲ. ಈಗ ಆಕೆ ಅದಕ್ಕೆ ಪ್ರಯತ್ನಿಸುವುದಾಗಿ ನಿರ್ಧಾರ ಮಾಡಿದಳು. ಅವಳು ಇಡೀ ದಿನ ಆ ಕೆಲಸ ಈ ಕೆಲಸ ಅಂತ ಮಾಡ್ತಾನೆ ಇರ್ತಾಳೆ. ವಿನಯ್‌ ಹಾಗೂ ಮಕ್ಕಳ ಬಗ್ಗೆ ಆಕೆ ಅದೆಷ್ಟು ಕಾಳಜಿ ವಹಿಸುತ್ತಾಳೆ. ಆದರೂ ತನ್ನ ಬಗ್ಗೆ ವಿನಯ್‌ಗೆ ಯಾವುದೇ ಮಹತ್ವ ಇಲ್ಲದೇ ಇರೋದು ಆಕೆಗೆ ಬೇಜಾರು ಮೂಡುತ್ತಲಿತ್ತು.

ಅನಿತಾಳ ಹೃದಯದಲ್ಲಿ ಎದ್ದ ಬಿರುಗಾಳಿ ಈಗ ಸುನಾಮಿಯ ರೂಪ ಪಡೆದುಕೊಂಡಿತ್ತು. ವಿನಯ್‌ ಎಂದಾದರೊಮ್ಮೆ, ಗೊತ್ತಿದ್ದೊ ಗೊತ್ತಿಲ್ಲದೆಯೋ ಅವಳನ್ನು ನಿರರ್ಥಕ, ಕೆಲಸಕ್ಕೆ ಬಾರದವಳು ಎಂದು ಸಾಬೀತುಪಡಿಸುತ್ತಲೇ ಇರುತ್ತಿದ್ದ. ವಿನಯ್‌ನ ಸ್ನೇಹಿತರ ಹೆಂಡತಿಯರು ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಮಕ್ಕಳಾದಾಗ, ಚಿಕ್ಕಚಿಕ್ಕ ಮಕ್ಕಳನ್ನು ನಿರ್ವಹಣೆ ಮಾಡಲು ಏನೇನು ಕಷ್ಟ ಅನುಭವಿಸಿರಬೇಕು ಎಂಬುದನ್ನು ಯೋಚಿಸಲು ವಿನಯ್‌ ಬಿಲ್‌ಕುಲ್ ‌ತಯಾರಿರಲಿಲ್ಲ.

ಮಕ್ಕಳು ಶಾಲೆಗೆ ಹಾಗೂ ವಿನಯ್‌ ಆಫೀಸಿಗೆ ಹೊರಟುಹೋಗಿದ್ದರು. ವಿನಯ್‌ ನಿನ್ನೆ ಹೇಳಿದ ಮಾತುಗಳನ್ನು ಬಹುಶಃ ಮರೆತುಬಿಟ್ಟಿರಬಹುದು. ವಿನಯನ ವ್ಯಂಗ್ಯ ಮಾಡುವ ಸ್ವಭಾವ ಅವಳಿಗೆ ಬಹುಶಃ ಒಗ್ಗಿಹೋಗಿತ್ತು. ಅವಳು ಅದಾವುದನ್ನು ತಲೆಗೆ ಹಚ್ಚಿಕೊಂಡಿರಲಿಲ್ಲ. ಆದರೆ ಈ ಸಲ ಆಡಿದ ಒಂದೊಂದು ಮಾತುಗಳು ಅವಳ ಮನಸ್ಸಿನಲ್ಲಿ ಬಿರುಗಾಳಿ ಎಬ್ಬಿಸಿದ್ದ. ಅವಳ ಅಂತರಂಗದ ಬಿರುಗಾಳಿ ಶಾಂತವಾಗುವ ಲಕ್ಷಣಗಳೇ ಕಂಡುಬರುತ್ತಿರಲಿಲ್ಲ. ತಾನು ಈ ಸಲ ವಿನಯ್‌ಗೆ ಅದನ್ನು ಮನವರಿಕೆ ಮಾಡಿಕೊಡಲೇಬೇಕು. ಆದರೆ ಆಕೆಗೆ ಉದ್ಯೋಗ ಮಾಡುವುದಕ್ಕಿಂತ ಮದುವೆ ಮಾಡಿಕೊಳ್ಳುವುದೇ ಉತ್ತಮವೆನಿಸಿತು. ಅವಳು ಆಗ ಕೆಲಸ ಮಾಡುತ್ತಿದ್ದುದು ಮೈಸೂರಿನಲ್ಲಿ. ವಿನಯ್‌ ಕೆಲಸ ಮಾಡುತ್ತಿದ್ದುದು ಬೆಂಗಳೂರಿನಲ್ಲಿ. ಮದುವೆಯ ಬಳಿಕ ಬೆಂಗಳೂರಿನಲ್ಲಿಯೇ ಕೆಲಸ ಹುಡುಕಿದರಾಯಿತು ಎಂದು ಆಕೆ ಯೋಚಿಸಿದ್ದಳು.

ಮದುವೆಯ ಬಳಿಕ ಕೆಲವು ತಿಂಗಳುಗಳು ಖುಷಿ ಖುಷಿಯಿಂದಲೇ ಕಳೆದುಹೋದವು. ಅವಳು ಇನ್ನೇನು ವಿನಯ್‌ ಮುಂದೆ ತನ್ನ ಉದ್ಯೋಗದ ಬಗ್ಗೆ ಪ್ರಸ್ತಾಪ ಮಾಡಲಿದ್ದಳು. ಅಷ್ಟರಲ್ಲಿಯೇ ಅವನಿಗೆ ಹೈದರಾಬಾದ್‌ಗೆ ವರ್ಗವಾಯಿತು.

ಹೊಸ ಸ್ಥಳದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಆಕೆಗೆ ಹಲವು ತಿಂಗಳುಗಳೇ ಹಿಡಿದವು. ವಿನಯನ ನೌಕರಿ ಬಹಳ ವ್ಯಸ್ತತೆಯಿಂದ ಕೂಡಿತ್ತು. ಅವನು ಆಕೆಯ ನೌಕರಿಯ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಲಿಲ್ಲ. `ಅಷ್ಟೊಂದು ಆತುರ ಏನಿದೆ?’ ಎಂದೂ ಆತ ಒಮ್ಮೆಲೆ ಹೇಳಿ ಅವಳ ಬೇಡಿಕೆ ತಳ್ಳಿ ಹಾಕಿದ್ದ.

ಅನಿತಾ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎನ್ನುತ್ತಿರುವಾಗಲೇ ಅವಳ ಒಡಲಲ್ಲಿ ಹೊಸ ಅತಿಥಿಯೊಬ್ಬನ ಆಗಮನದ ಸುಳಿವು ಸಿಕ್ಕಿತು. ಮಗ ಹುಟ್ಟಿದ. ಅದಾದ ಮೂರು ವರ್ಷಕ್ಕೆ ಮಗಳು ಹುಟ್ಟಿದಳು. ಅವಳು ಇಬ್ಬರು ಮಕ್ಕಳ ಪಾಲನೆಪೋಷಣೆಯಲ್ಲಿ ಮಗ್ನಳಾದಳು.

ಅವಳ ಜೀವನದ ಆದ್ಯತೆಯೇ ಬದಲಾಗಿ ಬಿಟ್ಟಿತು. ಅವಳ ಜೀನದ ದೃಷ್ಟಿ ವಿನಯ್‌ ಹಾಗೂ ಮಕ್ಕಳ ಮೇಲೆ ಕೇಂದ್ರೀಕೃತವಾಗಿತ್ತು. ತನ್ನ ಬಗ್ಗೆ ಯೋಚಿಸಲು ಅವಳಿಗೆ ಸಮಯವೇ ದೊರೆಯಲಿಲ್ಲ ಹಾಗೂ ಅವಳು ಆ ಬಗ್ಗೆ ಯೋಚಿಸಲೂ ಇಲ್ಲ. ಮಕ್ಕಳು ಓದುವುದರಲ್ಲಿ ನಿಪುಣರಾಗಿದ್ದರು. ಗಂಡನ ನೌಕರಿಯೂ ಚೆನ್ನಾಗಿ ಸಾಗಿತ್ತು. ಅವನು ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದ. ಒಟ್ಟಾರೆ ಹೇಳಬೇಕೆಂದರೆ, ಅವರ ಜೀವನ ಸರಿಯಾದ ದಿಸೆಯಲ್ಲಿಯೇ ಸಾಗುತ್ತಲಿತ್ತು.

ಹಣ ಎಷ್ಟು ಬರುತ್ತೊ ಅಷ್ಟು ಖರ್ಚಾಗಿಯೇ ಹೋಗುತ್ತೆ. ಮಹಾನಗರಗಳಲ್ಲಂತೂ ಜೀವನ ದುಸ್ತರ. ಯಾವಾಗಲೂ ಹಣದ ಕೊರತೆ ಕಾಡುತ್ತಲೇ ಇರುತ್ತದೆ. ಈ ಕುರಿತಂತೆ ವಿನಯ್‌ ಅವಳಿಗೆ ಏನಾದರೂ ಹೇಳಿಬಿಡುತ್ತಿದ್ದ. ವಿನಯನ ಕಟು, ವ್ಯಂಗ್ಯ ಮಾತುಗಳು ಅವಳ ಮನಸ್ಸನ್ನು ಘಾಸಿಗೊಳಿಸುತ್ತಿದ್ದವು. ತಾನು ನೌಕರಿ ಬಿಡದೇ ಇದ್ದಿದ್ದರೆ ಎಷ್ಟು ಒಳ್ಳೆಯದಾಗಿರುತ್ತಿತ್ತು ಎಂದು ಆಕೆ ಯೋಚಿಸುತ್ತಿದ್ದಳು. ಆದರೆ ಪರಿಸ್ಥಿತಿಗನುಗುಣವಾಗಿ ಏನಾಗಬೇಕಿತ್ತೋ ಅದೇ ಆಗುತ್ತಿತ್ತು. ಆದರೆ ನಿನ್ನೆ ವಿನಯ್‌ ಆಡಿದ ಒಂದೊಂದು ಮಾತುಗಳೂ ಆಕೆಗೆ ತೀವ್ರ ನೋವನ್ನುಂಟು ಮಾಡಿದ್ದವು.

ವಿನಯನ ಸ್ನೇಹಿತರ ಹೆಂಡತಿಯರು ಒಳ್ಳೊಳ್ಳೆ ಹುದ್ದೆಯಲ್ಲಿದ್ದರು. ಅವನು ಬಹುಶಃ ಅದನ್ನೇ ನೋಡುತ್ತಿದ್ದ. ಎರಡೆರಡು ಸಂಬಳಗಳಿಂದ ಅವರ ಆರ್ಥಿಕ ಮಟ್ಟ ತನಗಿಂತ ಚೆನ್ನಾಗಿತ್ತು. ಆದರೆ ಅದಕ್ಕಾಗಿ ಅವರು ಏನೇನು ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಅವನು ಯೋಚಿಸಲು ಇಷ್ಟಪಡುತ್ತಿರಲಿಲ್ಲ. ಇಂಟರ್‌ನೆಟ್‌ನಲ್ಲಿ ನೌಕರಿಗಾಗಿ ಶೋಧ ಮಾಡಲೆಂದು ಆಕೆ ತನ್ನ ಸಿ.ವಿ. ಸಿದ್ಧ ಪಡಿಸಲಾರಂಭಿಸಿದಳು. ವಿನಯ್‌ ತಾನು ಹೇಳಿದ್ದನ್ನು ಬಹುಶಃ ಮರೆತುಬಿಟ್ಟಿದ್ದ ಎನಿಸುತ್ತೆ. ಅನಿತಾಳಿಗೆ ಎಚ್ಚರಿಕೆ ಕೊಟ್ಟು ಮರೆತುಬಿಡುವುದು ಅವನ ಅಭ್ಯಾಸವೇ ಆಗಿಬಿಟ್ಟಿತ್ತು.

ಇದರಿಂದ ಅನಿತಾಳ ಹೃದಯಕ್ಕೆ ಎಷ್ಟು ನೋವಾಗುತ್ತದೆ ಎಂಬುದನ್ನು ಅವನು ಯೋಚಿಸಲು ಹೋಗುತ್ತಿರಲಿಲ್ಲ. ಅವಳ ಮನಸ್ಸಿನಲ್ಲಿ ಎಂತಹ ದ್ವಂದ್ವ ನಡೆಯುತ್ತಿದೆ ಎಂದು ಅವನು ಕಲ್ಪನೆ ಕೂಡ ಮಾಡಿರಲಿಲ್ಲ.

ಎಲ್ಲಿಂದಾದರೂ ಇಂಟರ್‌ವ್ಯೂಗೆ ಕರೆ ಬರಲೆಂದು ಆಕೆ ಬೇರೆ ಬೇರೆ ಕಡೆ ತನ್ನ ಬಯೋಡೇಟಾ ಕಳಿಸುತ್ತಲೇ ಇದ್ದಳು. ಆದರೂ ಯಾವ ಕಡೆಯಿಂದಲೂ ಸರಿಯಾದ ಪ್ರತಿಕ್ರಿಯೆ ದೊರಕಲಿಲ್ಲ. ಒಂದೆರಡು ಕಡೆಯಿಂದ ಆಕೆಗೆ ಕರೆಗಳೇನೊ ಬಂದಿದ್ದವು. ಆದರೆ ಅಲ್ಲಿ ಸಂಬಳದ ಆಫರ್‌ ಚೆನ್ನಾಗಿರಲಿಲ್ಲ. ಅವಳು ಎಂಬಿಎ ಮಾಡಿ ಸುಮಾರು ವರ್ಷಗಳೇ ಆಗಿದ್ದವು. ಅವಳಿಗೆ ಉದ್ಯೋಗದ ಅನುಭವ ಅಷ್ಟಾಗಿ ಇರಲಿಲ್ಲ. ಅವಳು ಈಗ ಏನಿದ್ದರೂ ಸೊನ್ನೆಯಿಂದಲೇ ಶುರು ಮಾಡಬೇಕಿತ್ತು. ಅದು ಬಹಳ ಕಷ್ಟಕರವಾಗಿತ್ತು. ಈ ಮಧ್ಯೆ ಒಂದು ದಿನ ವಿನಯ್‌ ಖುಷಿಯ ಮೂಡ್‌ನಿಂದಲೇ ಮನೆಗೆ ಬಂದು ಹೇಳಿದ, “ಒಂದು ಕಪ್‌ ಒಳ್ಳೆಯ ಚಹ ಮಾಡಿಕೊಡು. ನಾನೀಗ ಹೇಳುವ ಸುದ್ದಿ ಕೇಳಿ ನಿನಗೆ ಭಾರಿ ಖುಷಿಯಾಗುತ್ತದೆ.”

“ನನಗೆ ಖುಷಿಯಾಗುವ ಸುದ್ದಿಯಾ?” ಅವಳು ತಟಸ್ಥ ಭಾವದಿಂದಲೇ ಕೇಳಿದಳು. “ಸಿದ್ಧಾರ್ಥ ಬಹಳಷ್ಟು ದಿನಗಳಿಂದ ಮುಂಬೈಗೆ ಬರಬೇಕೆಂದು ಹೇಳುತ್ತಲೇ ಇದ್ದ. ನಾವು ಈಚೆಗೆ ಎಲ್ಲೂ ಹೋಗಿಲ್ಲ. ನಾನು ಎಲ್‌ಟಿಸಿಗೆ ಅರ್ಜಿ ಹಾಕಿದ್ದೆ. ಅದೀಗ ಮಂಡಿಯೂರಲಾಗಿದೆ. ನಾನು ಏರ್‌ ಟಿಕೆಟ್‌ ಬುಕ್‌ ಮಾಡಿಸೋಕೆ ಹೋಗ್ತೀನಿ. ನೀನು ಸ್ಕೂಲಿಗೆ ಹೋಗಿ ಮಕ್ಕಳ ಲೀವ್ ‌ಅಪ್ಲಿಕೇಶನ್‌ ಕೊಡು ಹಾಗೂ ಮುಂಬೈಗೆ ಹೋಗಲು ಸಿದ್ಧತೆ ಆರಂಭಿಸು.”

“ನಿಜವಾಗ್ಲೂ?” ಅನಿತಾಳಿಗೆ ನಂಬಿಕೆಯೇ ಬರಲಿಲ್ಲ. ಈಚೆಗೆ ಅವಳ ಮಾನಸಿಕ ಸ್ಥಿತಿ ಹೇಗಾಗಿಬಿಟ್ಟಿತ್ತೆಂದರೆ, ಅವಳು ತನ್ನ ದಿನಚರಿಯಲ್ಲಿ ಅಷ್ಟಿಷ್ಟು ಬದಲಾವಣೆ ಬಯಸುತ್ತಿದ್ದಳು. ಸಿದ್ಧಾರ್ಥ ವಿನಯನ ಸೋದರ ಮಾವನ ಮಗ. ಇಬ್ಬರಲ್ಲೂ ವಯಸ್ಸಿನ ಅಂತರ ಕೇವಲ 6 ತಿಂಗಳು ಮಾತ್ರ ಇತ್ತು. ಇಬ್ಬರ ಪತ್ನಿಯರು ಕೂಡ ಸಮವಯಸ್ಕರು. ಹೀಗಾಗಿ ನಾಲ್ವರಲ್ಲೂ ಸಾಕಷ್ಟು ಅನ್ಯೋನ್ಯತೆ ಇತ್ತು.

ಕಳೆದ ವರ್ಷವಷ್ಟೇ ಸಿದ್ಧಾರ್ಥ ಹಾಗೂ ರತ್ನಾ ವಿನಯನ ಬೆಂಗಳೂರು ಮನೆಗೆ ಬಂದು ಅನೇಕ ದಿನ ಇದ್ದು ಖುಷಿಯಿಂದಲೇ ಮುಂಬೈಗೆ ವಾಪಸ್ಸಾಗಿದ್ದರು. ಅನಿತಾ ಅವರನ್ನು ಬಹಳ ಪ್ರೀತಿಯಿಂದಲೇ ನೋಡಿಕೊಂಡಿದ್ದಳು. ಮುಂಬೈಗೆ ಹೋಗಲು ಅವಳ ಮನಸ್ಸು ಕಾತುರದಿಂದ ಕಾಯುತ್ತಿತ್ತು. ಇಷ್ಟೊಂದು ದಿನಗಳ ಅವಳ ಉದಾಸ ಮನಸ್ಸು ಬದಲಾವಣೆ ಬಯಸುತ್ತಿತ್ತು. ಅವಳು ಎಲ್ಲರಿಗೂ ಗಿಫ್ಟ್ ಖರೀದಿಸಿದಳು. ಆ ದಿನ ಹತ್ತಿರ ಬಂದೇಬಿಟ್ಟಿತು. ಮುಂಬೈಗೆ ಹೊರಡುವ ವಿಮಾನದಲ್ಲಿ ಕುಳಿತಾಗ ಮಕ್ಕಳಿಗೆ ಹೇಳಲಾರದಷ್ಟು ಖುಷಿ. ಅನಿತಾಗೆ ಕೂಡ ಅದೇನೊ ಆನಂದ.

ಮುಂಬೈ ಏರ್‌ಪೋರ್ಟ್‌ನಲ್ಲಿ ಸಿದ್ಧಾರ್ಥ, ರತ್ನಾ ಹಾಗೂ ಅರ ಮಕ್ಕಳು ಇರನ್ನು ಕರೆದುಕೊಂಡು ಹೋಗಲು ಬಂದಿದ್ದರು. ಕಾರಿನಲ್ಲಿ ಕುಳಿತು ಎಲ್ಲರೂ ತಮಸಿ ತಮಸಿ ಮಾತುಗಳಲ್ಲಿ ಮಗ್ನರಾಗಿದ್ದರು. ಕೆಲವು ದಿನಗಳಾದರೂ ನಾವು ಖುಷಿಯಿಂದ ಕಾಲ ಕಳೆಯುತ್ತೇವೆ ಎಂದು ಎಲ್ಲರಿಗೂ ಖುಷಿಯಾಗಿತ್ತು.

ಮನೆ ತಲುಪಿದಾಗ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು. ಡೈನಿಂಗ್‌ ಟೇಬಲ್ ಮೇಲೆ ಎಲ್ಲರೂ ಕುಳಿತುಕೊಂಡಾಗ ವಿನಯ್ ಹೇಳಿದ, “ಇಂದು ನಮಗೆ ಅತ್ತಿಗೆಯ ಕೈ ಅಡುಗೆ ತಿನ್ನುವ ಅದೃಷ್ಟ. ಏನೇನು ಮಾಡಿರುವಿರಿ ಅತ್ತಿಗೆ?”

ವಿನಯನ ಮಾತು ಕೇಳಿ ರತ್ನಾ ಸ್ವಲ್ಪ ಸಂಕೋಚಗೊಂಡು ಹೇಳಿದಳು, “ಇಂದು ನಾನು ಏನೂ ಮಾಡಲು ಆಗಲಿಲ್ಲ. ರಜೆ ತಗೆದುಕೊಳ್ಳೋಣ ಎಂದು ಯೋಚಿಸಿದೆ. ಆದರೆ ತೆಗೆದುಕೊಳ್ಳಲು ಆಗಲಿಲ್ಲ. ಹೀಗಾಗಿ ಇಂದಿನ ಎಲ್ಲ ಫುಡ್‌ಗಳನ್ನು ಹೊರಗಿನಿಂದ ಆರ್ಡರ್‌ ಕೊಟ್ಟು ತರಿಸಿರುವೆ. ನಾಳೆ ನಾಡಿದ್ದು ಎರಡು ದಿನ ನನಗೆ ರಜೆ ಇದೆ.”

“ಪರವಾಗಿಲ್ಲ ಅತ್ತಿಗೆ. ನಾಳೆಗಾಗಿ ನಾನು ನಿರೀಕ್ಷೆ ಮಾಡ್ತೀನಿ.”

ಊಟ ಮಾಡಿದ ಬಳಿಕ ಎಲ್ಲರೂ ಬಹಳ ಹೊತ್ತಿನತನಕ ಮಾತಿನಲ್ಲಿ ಮಗ್ನರಾಗಿದ್ದರು. ಬಳಿಕ ಮಲಗಿಕೊಂಡರು. ಮುಂದಿನ 2 ದಿನಗಳು ಸಿದ್ಧಾರ್ಥ, ರತ್ನಾ ಹಾಗೂ ಮಕ್ಕಳಿಗೆ ರಜೆ ಇತ್ತು. ಹೀಗಾಗಿ ಆ ಎರಡು ದಿನಗಳು ಚೆನ್ನಾಗಿ ಕಳೆದವು. ಅವರು ಹೊರಗಡೆ ಸುತ್ತಾಡುವ ಪ್ರೋಗ್ರಾಮ್ ಹಾಕಿದ್ದರು. ಹೀಗಾಗಿ ಅನಿತಾಗೆ ಬಹಳ ಖುಷಿಯಾಗಿತ್ತು. ಈ ಬದಲಾವಣೆ ತನಗೆ ಅಗತ್ಯವಿತ್ತು ಎಂದು ಆಕೆಗೆ ಅನಿಸಲಾರಂಭಿಸಿತ್ತು. ಬಹಳ ದಿನಗಳಿಂದ ಏಕತಾನತೆಯ ಜೀವನ ಆಕೆಗೆ ಬೇಸರ ತರಿಸಿತ್ತು. ರತ್ನಾ ಮನೆಯಲ್ಲಿ ಫುಲ್ ಟೈಮ್ ಗಾಗಿ ಕೆಲಸದವಳನ್ನು ನೇಮಿಸಿದ್ದಳು. ಅವಳು ಮುಂಜಾನೆ 6 ಗಂಟೆಗೆ ಬಂದು ರಾತ್ರಿ 8 ಗಂಟೆಯ ಹೊತ್ತಿಗೆ ಮನೆಗೆಲಸ, ಅಡುಗೆ ಮುಗಿಸಿ ಹೊರಟುಬಿಡುತ್ತಿದ್ದಳು.

ಹೀಗಾಗಿ ಆಕೆಗೆ ಮನೆಯ ಕೆಲಸ ಮಾಡುವ ಉತ್ಸಾಹವಾಗಲಿ, ಅಭ್ಯಾಸವಾಗಲಿ ಇರಲಿಲ್ಲ. ಆದರೆ ಅನಿತಾಳ ಉಪಚಾರದಿಂದ ಆಕೆ ಅದೆಷ್ಟು ಪ್ರಭಾವಿತಳಾಗಿದ್ದಳೆಂದರೆ, ತಾನು ಹೇಗಾದರೂ ಮಾಡಿ ಅವರಿಗೆ ಒಳ್ಳೆಯ ಉಪಚಾರ ಮಾಡಬೇಕೆಂದು ಪ್ರಯತ್ನಶೀಲಳಾಗಿದ್ದಳು. ಹೀಗೆ ಶನಿವಾರ ಭಾನುವಾರ ಕಳೆದುಹೋದವು. ಸೋಮಾರ ರತ್ನಾ ಆಫೀಸಿಗೆ ಹೋಗಬೇಕಾಗಿತ್ತು. ಆಕೆ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ 8 ಗಂಟೆಗೆ ಮನೆಯಿಂದ ಹೊರಡುತ್ತಿದ್ದಳು. ಸಿದ್ಧಾರ್ಥನಿಗೆ ಆಫೀಸ್‌ ಹತ್ತಿರವೇ ಇತ್ತು. ಹೀಗಾಗಿ ಅವನು ಮನೆಯಿಂದ ತಡವಾಗಿ ಹೊರಡುತ್ತಿದ್ದ. ಅನಿತಾ ಎದ್ದಾಗ 8.30 ಆಗಿತ್ತು. ಆಕೆ ಹೊರಗೆ ಬಂದಾಗ ಸಿದ್ಧಾರ್ಥ್‌ ಆಫೀಸಿಗೆ ಹೋಗಲು ತಯಾರಾಗಿ ನಿಂತಿದ್ದ.

“ನನಗೆ ಏಳಲು ಬಹುಶಃ ತಡವಾಯ್ತೇನೋ? ನೀವು ಹೊರಡಲು ಸಿದ್ಧರಾಗಿದ್ದೀರಿ?”

“ಹೌದು. ನಾನು ಇನ್ನೇನು ಹೊರಟೆ. ನೀವು ಏಳುವುದನ್ನೇ ಕಾಯುತ್ತಿದ್ದೆ. ವಿನಯ್‌ ಇನ್ನೂ ಮಲಗಿರಬೇಕಲ್ವಾ….?”

“ಹೌದು. ರತ್ನಾ ಎಲ್ಲಿ?”

“ಆಕೆ ಆಗಲೇ ಆಫೀಸಿಗೆ ಹೊರಟಳು.”

“ಹೌದಾ?” ಅನಿತಾ ತನ್ನ ಕೈಗಡಿಯಾರದ ಕಡೆ ನೋಡಿಕೊಂಡಳು.

“ಹೌದು. ಆಕೆ ದಿನಾಲು 8 ಗಂಟೆಗೆ ಹೊರಡುತ್ತಾಳೆ. ಅಂದಹಾಗೆ ನಾನೂ ಹೊರಡ್ತೀನಿ. ಮನೆಗೆಲಸದವಳು ನಿಮ್ಮ ತಿಂಡಿ ಕಾಫಿ, ಊಟದ ವ್ಯವಸ್ಥೆಯನ್ನೆಲ್ಲ ಮಾಡುತ್ತಾಳೆ. ನಿಮಗೆ ಏನು ಬೇಕೊ ಅದನ್ನು ಅವಳಿಗೆ ಹೇಳಿ ಮಾಡಿಸಿಕೊಳ್ಳಿ,” ಎಂದು ಹೇಳಿ ಸಿದ್ಧಾರ್ಥ ಗಡಿಬಿಡಿಯಿಂದ ಹೊರಟುಹೋದ. ಅಷ್ಟರಲ್ಲಿಯೇ ವಿನಯ್‌ ಕೂಡ ಎದ್ದು ಬಂದ. ಗಂಡ ಹೆಂಡತಿ ಇಬ್ಬರೂ ಪರಸ್ಪರ ಮುಖ ನೋಡಿಕೊಂಡರು. ಸಿದ್ಧಾರ್ಥನ ಮಕ್ಕಳು ಕೂಡ ಶಾಲೆಗೆ ಹೊರಟುಹೋಗಿದ್ದರು. ಈಗ ತಮ್ಮ ಕುಟುಂಬದವರಷ್ಟೇ ಏನು ಮಾಡಬೇಕು? ಅಷ್ಟರಲ್ಲಿಯೇ ಮನೆಗೆಲಸದವಳು ಅವರಿಗೆ ಟೀ ಕಪ್‌ ನೀಡಿದಳು. ಇಬ್ಬರೂ ಮೌನವಾಗಿ ಟೀ ಹೀರತೊಡಗಿದರು. ರತ್ನಾ ಉನ್ನತ ಹುದ್ದೆಯಲ್ಲಿದ್ದಳು. ಇಬ್ಬರೂ ಉದ್ಯೋಗದಲ್ಲಿರುವುದರಿಂದ ಅವರ ಜೀವನಮಟ್ಟ ಚೆನ್ನಾಗಿಯೇ ಇತ್ತು. ಖರ್ಚು ಮಾಡುವಾಗ ಯಾರೊಬ್ಬರೂ ಯೋಚನೆ ಮಾಡುತ್ತಲೇ ಇರಲಿಲ್ಲ. ಮನೆಯಲ್ಲಿ ಅತ್ಯಾಧುನಿಕ ಹಾಗೂ ದುಬಾರಿ ಸಾಮಾನುಗಳಿದ್ದವು. ಇಬ್ಬರೂ ಕೆಲಸ ಮಾಡುವುದರಿಂದ ತಾವು ಸಹ ಮನೆಯಲ್ಲಿ ಯಾವುದರ ಬಗೆಗೂ ಯೋಚಿಸಬೇಕಾದ ಸಂದರ್ಭ ಬರುತ್ತಿರಲಿಲ್ಲ ಎಂದು ವಿನಯ್‌ ಮತ್ತು ಅನಿತಾ ಯೋಚಿಸತೊಡಗಿದರು. ಇಷ್ಟೊಂದು ಲೆಕ್ಕ ಪತ್ರ ಇಡಬೇಕಾದ ಅವಶ್ಯಕತೆಯೂ ಇರುತ್ತಿರಲಿಲ್ಲ ಎಂದುಕೊಂಡರು.

ಅಷ್ಟರಲ್ಲಿ ಮಕ್ಕಳು ಎದ್ದು ಬಂದರು. ಕೆಲಸದವಳಿಗೆ ತಿಂಡಿ ಮಾಡಲು ಹೇಳಿ ಅವರು ಸ್ನಾನಕ್ಕೆ ಹೋದರು. ತಿಂಡಿ ತಿಂದು ಅವರೆಲ್ಲ ಹೊರಗಡೆ ಸುತ್ತಾಡಲು ಹೊರಟರು. 4 ಗಂಟೆತನಕ ಅಲ್ಲಿ ಇಲ್ಲಿ ಸುತ್ತಾಡಿ ಮನೆಗೆ ಬಂದರು. ತಾವಷ್ಟೇ ಸುತ್ತಾಡೋದು ಅವರಿಗೆ ಬೇಸರ ತರಿಸಿತ್ತು .ಅಷ್ಟರಲ್ಲಿ ಸಿದ್ಧಾರ್ಥನ ಮಕ್ಕಳು ಮನೆಗೆ ಬಂದಿದ್ದರು. ಆ ಮಕ್ಕಳನ್ನು ನೋಡಿ ವಿನಯ್‌ ಮಕ್ಕಳಿಗೆ ಖುಷಿಯಾಯಿತು. ನಾಲ್ಕೂ ಮಕ್ಕಳ ಆಟದಿಂದ ಮನೆಯಲ್ಲಿ ಖುಷಿಯ ಅಲೆ ಚಿಮ್ಮಿಸಿತು.

ರಾತ್ರಿ 8 ಗಂಟೆಗೆ ರತ್ನಾ ಹಾಗೂ 9 ಗಂಟೆಗೆ ಸಿದ್ಧಾರ್ಥ ಮನೆಗೆ ಬಂದರು. ಇಬ್ಬರೂ ಸಿಕ್ಕಾಪಟ್ಟೆ ದಣಿದಿದ್ದರು. ಮನೆಗೆಲಸದವಳು ಅಡುಗೆ ಮಾಡಿಟ್ಟು ಹೋಗಿದ್ದಳು.

ಅನಿತಾ ಮತ್ತು ವಿನಯ್‌ ಯೋಚನೆಯಲ್ಲಿ ತೊಡಗಿದ್ದರು. ಸಿದ್ಧಾರ್ಥ್‌ ಮತ್ತು ರತ್ನಾ ರಾತ್ರಿ 9 ಗಂಟೆಯ ಹೊತ್ತಿಗೆ ಬರುತ್ತಾರೆ. ಮಕ್ಕಳು ಮಧ್ಯಾಹ್ನವೇ ಬಂದುಬಿಟ್ಟಿರುತ್ತಾರೆ. ಅವರು 5-6 ಗಂಟೆ ಸಮಯ ಹೇಗೆ ಕಳೆಯುತ್ತಿರಬಹುದು? ಇಂದೇನೊ ಅವರು ತಮ್ಮ ಮಕ್ಕಳೊಂದಿಗೆ ಖುಷಿಯಿಂದ ಆಟದಲ್ಲಿ ಮಗ್ನರಾಗಿದ್ದರು. ಉಳಿದ ದಿನಗಳ ಅವರ ದಿನಚರಿ ಹೇಗಿರಬಹುದು? ಟ್ಯೂಶನ್ ಮಾಸ್ತರು ಬಂದು 1 ಗಂಟೆ ಕಲಿಸಿ ಹೊರಟುಹೋದರೆ ಅವರೆಷ್ಟು ಕಲಿಸಿದರು, ಇವರೆಷ್ಟು ಕಲಿತರು ಎಂಬುದನ್ನು ಅವರೇ ಕಂಡುಕೊಳ್ಳಬೇಕು. ಮಕ್ಕಳು ಕೂಡ ಇನ್ನೂ ಅಷ್ಟೊಂದು ದೊಡ್ಡವರಾಗಿಲ್ಲ.

ಸ್ವಲ್ಪ ಹೊತ್ತಿನ ಬಳಿಕ ರತ್ನಾ ಹಾಗೂ ಸಿದ್ಧಾರ್ಥ್‌ ಬಟ್ಟೆ ಬದಲಿಸಿ ಫ್ರೆಶ್‌ ಆಗಿ ಬಂದರು. ಡೈನಿಂಗ್‌ ಟೇಬಲ್ ಮೇಲೆ ಊಟಕ್ಕೆ ಕೂತಾಗ ಕೆಲಸದವಳು ತಯಾರಿಸಿಟ್ಟು ಹೋದ ತೆಳ್ಳನೆಯ ನೀರಿನಂತಹ ಸಾಂಬಾರು, ರುಚಿಯಿಲ್ಲದ ಆಲೂ ಪಲ್ಯ ಕಂಡುಬಂದವು. ಆಗ ಅವಳಿಗೆ ತನ್ನ ಮನೆಯ ಡೈನಿಂಗ್‌ ಟೇಬಲ್ ಕಣ್ಮುಂದೆ ಬಂದಿತು. ತಮ್ಮ ಮನೆಯಲ್ಲಿ ದುಡಿಯುವವರು ಒಬ್ಬರೇ. ಮನೆಯಲ್ಲಿ ಅಷ್ಟೊಂದು ದುಬಾರಿ ಸಾಮಾನುಗಳೂ ಇಲ್ಲ. ಆದರೆ ಟೇಬಲ್ ಮೇಲೆ ಎಷ್ಟೊಂದು ಆಹಾರ ವಸ್ತುಗಳು ಇರುತ್ತವೆ. ಚಟ್ನಿ, ಮೊಸರು ಬಜ್ಜಿಯಿಲ್ಲದೆ ವಿನಯ್‌ ಹಾಗೂ ಮಕ್ಕಳು ಊಟ ಮಾಡುತ್ತಲೇ ಇರಲಿಲ್ಲ. ಏನಾದರೊಂದು ಸಿಹಿ ಕೂಡ ಇರುತ್ತಿತ್ತು. ಅತಿಥಿಗಳು ಬಂದರಂತೂ ಅನಿತಾ ಸಾಕಷ್ಟು ಬೆವರು ಹರಿಸುತ್ತಿದ್ದಳು.

ಮಕ್ಕಳು ಊಟದ ತಟ್ಟೆ ನೋಡಿ ಸುಮ್ಮನೆ ಮುಖ ನೋಡತೊಡಗಿದವು. ಆದರೆ ರತ್ನಾಳ ಮಕ್ಕಳಿಗೆ ಕೆಲಸದವಳು ಮಾಡಿಟ್ಟಿದ್ದ ಅಡುಗೆ ತಿನ್ನುವುದು ಅಭ್ಯಾಸವಾಗಿ ಹೋಗಿತ್ತು. ಹೀಗಾಗಿ ಅವರು ತಿನ್ನತೊಡಗಿದರು. ಆಗ ರತ್ನಾ ಎದ್ದು, “ಮೊಸರು ಬಜ್ಜಿ ಮಾಡ್ತೀನಿ, ಫ್ರಿಜ್‌ನಲ್ಲಿ ಮೊಸರು ಇದೆ,” ಎಂದಳು. ಅತಿಥಿಗಳಿಗಾಗಿ ಡೈನಿಂಗ್‌ ಟೇಬಲ್ ಮೇಲೆ ಇಟ್ಟಿದ್ದ ಪದಾರ್ಥಗಳನ್ನು ನೋಡಿ ಅವರಿಗೆ ಸಂಕೋಚವಾಗುತ್ತಲಿತ್ತು.

“ಕೂತ್ಕೊ ರತ್ನಾ. ಎಲ್ಲ ಸರಿಯಾಗಿದೆ. ಆಮೇಲೆ ಮೊಸರಿಗೆ ಸಕ್ಕರೆ ಹಾಕಿಕೊಂಡು ತಿನ್ನೋಣ,” ಅನಿತಾ ರತ್ನಾಳ ಕೈ ಹಿಡಿದು ಕೂರಿಸುತ್ತಾ ಹೇಳಿದಳು, “ನಾನು ತೆಗೆದುಕೊಂಡು ಬರ್ತೀನಿ,” ಎಂದು ಹೇಳಿ ಫ್ರಿಜ್‌ನಿಂದ ಮೊಸರು ತೆಗೆದುಕೊಂಡು ಬಂದಳು. ಎಲ್ಲರೂ ಕುಳಿತು ತಿನ್ನತೊಡಗಿದರು.

ಸಿದ್ಧಾರ್ಥ್‌ ಹಾಗೂ ರತ್ನಾ ಸಾಕಷ್ಟು ದಣಿದಿದ್ದರಿಂದ ಅಷ್ಟಿಷ್ಟು ಔಪಚಾರಿಕ ಮಾತುಗಳನ್ನು ಆಡಿ ಮಲಗಲು ಹೊರಟರು. ಮಕ್ಕಳು ಬೆಳಗ್ಗೆ ಬೇಗನೇ ಹೊರಡಬೇಕಾದ್ದರಿಂದ ಅವರೂ ತಮ್ಮ ರೂಮಿಗೆ ಹೋದರು. ಈಗ ಪುನಃ ವಿನಯ್‌, ಅನಿತಾ ಹಾಗೂ ಮಕ್ಕಳು ಹಾಲ್‌‌ನಲ್ಲಿ ಏಕಾಂಗಿಯಾದರು. ವಿನಯ್‌ ಹಾಗೂ ಅನಿತಾರ ಮನಸ್ಸಿನಲ್ಲಿ ಪರಸ್ಪರ ವಿರೋಧ ವಿಚಾರಗಳು ಪುಂಖಾನುಪುಂಖವಾಗಿ ಬರತೊಡಗಿದವು. ಇಬ್ಬರೂ ಹಣವನ್ನಂತೂ ಗಳಿಸುತ್ತಿದ್ದಾರೆ. ಆದರೆ ಜೀವನದಿಂದ ಏನು ತಾನೇ ಪಡೆದುಕೊಳ್ಳುತ್ತಿದ್ದಾರೆ, ಜೀವನಕ್ಕೆ ಏನು ತಾನೇ ಕೊಡುತ್ತಿದ್ದಾರೆ? ಜೀವನ ದಿನದಿಂದ ದಿನಕ್ಕೆ ಕೈಯಲ್ಲಿನ ಮರಳಿನ ಹಾಗೆ ಜಾರಿ ಹೋಗ್ತಾ ಇರುತ್ತೆ. ಆಗ ಅವರಿಗೆ ಹಳೆಯ ದಿನಗಳನ್ನು ನೆನಪಿಸಿಕೊಳ್ಳದ ಹೊರತು ಬೇರೇನೂ ದಾರಿ ಉಳಿದಿರುವುದಿಲ್ಲ.

ಎಲ್ಲರದೂ ದಿನ ಅದೇ ರೊಟೀನ್‌ ಆಗಿತ್ತು. ಮಧ್ಯಾಹ್ನದ ಹೊತ್ತು ವಿನಯ್‌ ಮತ್ತು ಅನಿತಾ ಮಕ್ಕಳೊಂದಿಗೆ ಅಲ್ಲಿ ಇಲ್ಲಿ ಸುತ್ತಾಡಿ ಬರುತ್ತಿದ್ದರು. ರಾತ್ರಿ ದಣಿದು ಬಂದ ಸಿದ್ಧಾರ್ಥ ಹಾಗೂ ರತ್ನಾ ಮಕ್ಕಳೊಂದಿಗೆ ಸರಿಯಾಗಿ ಮಾತನಾಡಲು ಕೂಡ ಆಗುತ್ತಿರಲಿಲ್ಲ. ಈಗಷ್ಟೇ ಅವರಿಬ್ಬರು ಸಿದ್ಧಾರ್ಥ್‌ ಹಾಗೂ ರತ್ನಾರ ಜೀವನವನ್ನು ಹತ್ತಿರದಿಂದ ನೋಡುತ್ತಿದ್ದರು. ರಾತ್ರಿ ಹೊತ್ತಿನಲ್ಲಿ ಮಾತ್ರ ಅವರಿಬ್ಬರಿಗೆ ಪರಸ್ಪರ ಮಾತುಕಥೆ ನಡೆಸಲು ಅವಕಾಶ ಸಿಗುತ್ತಿತ್ತು. ಮನೆಯ ಚಿಕ್ಕಪುಟ್ಟ ಜವಾಬ್ದಾರಿಗಳನ್ನು ನಿಭಾಯಿಸುವ ಕುರಿತಂತೆ ಅಷ್ಟೇ ಏಕೆ, ಮಕ್ಕಳ ಫೀ ಕಟ್ಟುವ ಕುರಿತು, ಅವರ ಶಾಲೆಯ ಮೀಟಿಂಗ್‌ಗೆ ಅಟೆಂಡ್‌ ಆಗುವುದರಿಂದ ಹಿಡಿದು ಅವರ ವಿದ್ಯಾಭ್ಯಾಸದ ಕುರಿತಂತೆ ಇಬ್ಬರಲ್ಲೂ ಮಾತಿನ ಚಕಮಕಿ ನಡೆಯುತಿತ್ತು, ರತ್ನಾ ಯಾವುದೇ ಬಾಬತ್ತಿನಲ್ಲೂ ಹೊಂದಾವಣಿಕೆ ಮಾಡಿಕೊಳ್ಳಲು ಇಷ್ಟಪಡುತ್ತಿಲ್ಲ ಎಂಬುದು ವಿನಯ್‌ಗೆ ಗೊತ್ತಾಗುತ್ತಿತ್ತು. ಮಾಡುವುದಾದರೂ ಹೇಗೆ ಸಾಧ್ಯ? ಆಕೆ ಸಿದ್ಧಾರ್ಥನಷ್ಟೇ ಬಿಜಿಯಾಗಿದ್ದಳು. ದೊಡ್ಡ ಹುದ್ದೆ, ದೊಡ್ಡ ಸಂಬಳ, ಆಫೀಸಿನ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಳು.

ಅನಿತಾ ತನ್ನೊಂದಿಗೆ ಎಷ್ಟೊಂದು ಹೊಂದಾಣಿಕೆ ಮಾಡಿಕೊಳ್ಳುತ್ತಾಳೆ. ಮನೆ ಹಾಗೂ ಮಕ್ಕಳ ಎಷ್ಟೊಂದದ್ಡ್ಡೊ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ಆ ಕಾರಣದಿಂದ ತಾನು ನೌಕರಿಯ ಬಗ್ಗೆ ಸಾಕಷ್ಟು ಗಮನಕೊಡಲು ಸಾಧ್ಯವಾಗುತಿತ್ತು. ತಮ್ಮ ಕುಟುಂಬಕ್ಕೆ ಬರುವ ಸಂಬಳ ಸಿದ್ಧಾರ್ಥ್‌ ಮತ್ತು ರತ್ನಾರ ಸಂಬಳಕ್ಕೆ ಹೋಲಿಸಿದಲ್ಲಿ ಅರ್ಧದಷ್ಟು ಮಾತ್ರ ಇರಬಹುದು. ಆದರೆ ಮನೆಯಲ್ಲಿ ಸುಖಶಾಂತಿ ಇದೆ. ಅಷ್ಟೊಂದು ಉದಾಸೀನತೆ ಇಲ್ಲವೇ ಇಲ್ಲ. ಈ 5 ದಿನಗಳಲ್ಲಿ ಸಿದ್ಧಾರ್ಥನ ಮನೆಯಲ್ಲಿ ಅವರಿಗೆ ಉಸಿರುಗಟ್ಟಿದಂತಾಯ್ತು.

ಇದೇ ರೀತಿ ಅವರ ರಜೆಗಳ 7 ದಿನಗಳು ಹಾಗೆಯೇ ಮುಗಿದುಹೋದವು. ಇನ್ನು 2-3 ದಿನಗಳು ಮಾತ್ರ ಉಳಿದಿದ್ದವು. ಅವರ ಎಲ್ಲ ಕಾರ್ಯಕ್ರಮಗಳು ಹಾಗೆಯೇ ಪೆಂಡಿಂಗ್‌ ಇದ್ದವು. ಅವರು ಸಿದ್ಧಾರ್ಥನ ಮನೆಗೆ ಏನೋ ಅಂದುಕೊಂಡು ಬಂದಿದ್ದರು. ಆದರೆ ಏನೋ ಆಗಿಬಿಟ್ಟಿತ್ತು. ಈಗ ಅವರಿಗೆ ಅಲ್ಲಿರಲು ಮನಸ್ಸೇ ಉಳಿದಿರಲಿಲ್ಲ.

ವಿನಯ್‌ಗೆ ಸಿದ್ಧಾರ್ಥ್‌ ಹಾಗೂ ರತ್ನಾ ತಮ್ಮ ಮನೆಗೆ ಬಂದಾಗಿನ ನೆನಪುಗಳು ಬರಲಾರಂಭಿಸಿದವು. ಅವರು ಬರುವ ಮುನ್ನ ಅನಿತಾ ಮನೆ ಕೆಲಸಗಳನ್ನು ಹೇಗೆ ಮುಗಿಸಿಬಿಡುತ್ತಿದ್ದಳು, ಮಕ್ಕಳ ಓದಿಗೆ ನೆರವಾಗುತ್ತಿದ್ದಳು, ಅಡುಗೆಯನ್ನು ಎಷ್ಟು ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ತಾನೂ ಕೂಡ ಮನೆಗೆ ಬೇಗ ಬಂದುಬಿಡುತ್ತಿದ್ದೆ. ನಂತರ ಎಲ್ಲರೂ ಸೇರಿ ಒಂದಿಲ್ಲೊಂದು ಕಡೆ ಸುತ್ತಾಡಲು ಹೋಗುತ್ತಿದ್ದೆವು. ಅವರಿಗಾಗಿ ತಾನು ಕೆಲವು ದಿನ ರಜೆ ಕೂಡ ಹಾಕಿದ್ದೆ. ಅನಿತಾಳಂತೂ ಅವರಿಬ್ಬರ ಆತಿಥ್ಯದಲ್ಲಿ ಏನೂ ಕೊರತೆಯಾಗದಂತೆ ಸತತ ನಿಗಾ ವಹಿಸುತ್ತಿದ್ದಳು. ಸಿದ್ಧಾರ್ಥನ ಮನೆ ಹಣಕಾಸಿನ ಬಾಬತ್ತಿನಲ್ಲಿ ಶ್ರೀಮಂತವಾಗಿರಬಹುದು. ಆದರೆ ತನ್ನ ಮನೆಯೇ ಅವನಿಗೆ ಬೇಡವಾದ ಮನೆ ಎಂಬಂತೆ ಅನಿಸತೊಡಗಿತು. ಇಂತಹ ಹತ್ತು ಹಲವು ವಿಚಾರಗಳು ಅವನ ಮನಸ್ಸಿನಲ್ಲಿ ಬಂದು ಹೋಗುತ್ತಲಿದ್ದವು. ತಾನು ಅನಿತಾಳ ಜೊತೆ ಒಮ್ಮೊಮ್ಮೆ ಎಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದೆ ಎಂದು ನೆನಪಾಗಿ ಅವನಿಗೆ ಅಪರಾಧಪ್ರಜ್ಞೆ ಕಾಡತೊಡಗಿತ್ತು. ತನ್ನ ವರ್ತನೆ ಅವಳಿಗೆ ಎಷ್ಟು ನೋವು ತರುತ್ತಿರಬಹುದು ಎಂದು ಯೋಚಿಸಿ ತನ್ನ ಬಗ್ಗೆಯೇ ಹೇಸಿಗೆಯೆನಿಸತೊಡಗಿತು. ಇನ್ನೆರಡು ದಿನ ಅವರ ಮನೆಯಲ್ಲಿದ್ದು ಹೊರಟು ಬಿಟ್ಟರಾಯಿತು ಎಂದು ವಿನಯ್‌ ನಿರ್ಧರಿಸಿದ.

ಮರುದಿನ ಅವರ ಫ್ಲೈಟ್‌ ಇತ್ತು. ಈ ಮಧ್ಯೆ ಒಂದು ದುರ್ಘಟನೆ ನಡೆಯಿತು. ಸಿದ್ಧಾರ್ಥನ ಮಗಳು ಸುನೀತಾ ಸ್ಕೂಲ್ ವ್ಯಾನ್ ನಿಂದ ಮನೆಗೆ ಬರುತ್ತಿದ್ದಳು. ದಾರಿಯಲ್ಲಿ ಒಂದು ಮಗು ಕೆಳಗೆ ಇಳಿಯಿತು. ಸುನೀತಾ ಬಾಗಿಲಿನ ಹತ್ತಿರವೇ ನಿಂತಿದ್ದಳು. ಡ್ರೈವರ್ ಗಮನಿಸದೆಯೇ ಹಾಗೆಯೇ ಓಡಿಸಿದ್ದರಿಂದ ಸುನೀತಾ ಕೆಳಗಡೆ ಬಿದ್ದುಬಿಟ್ಟಳು. ಮಕ್ಕಳೆಲ್ಲ ಕೂಗಿಕೊಂಡಿದ್ದರಿಂದ ಡ್ರೈವರ್‌ ಗಾಡಿ ನಿಲ್ಲಿಸಿದ. ಅವಳನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅವಳ ಕಾಲಿಗೆ ಫ್ರ್ಯಾಕ್ಚರ್‌ ಆಗಿತ್ತು. ನೆಲಕ್ಕೆ ಉಜ್ಜಿದ್ದರಿಂದ ಅಲ್ಲಲ್ಲಿ ಗಾಯಗಳು ಕೂಡ ಆಗಿದ್ದವು.

ವ್ಯಾನಿನ ಡ್ರೈನರ್‌ ಮೊದಲು ಸಿದ್ಧಾರ್ಥ್‌ಗೆ ಫೋನ್‌ ಮಾಡಿದ. ಅವನು ಮೀಟಿಂಗ್‌ನಲ್ಲಿ ಇದ್ದುದರಿಂದ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ನಂತರ ರತ್ನಾಳ ಮೊಬೈಲ್‌‌ಗೆ ಪೋನ್‌ ಮಾಡಿದ. ಆಕೆಯೂ ಫೋನ್‌ ರಿಸೀವ್ ‌ಮಾಡಲಿಲ್ಲ. ನಂತರ ಮನೆಯ ನಂಬರ್‌ಗೆ ಕಾಲ್ ಮಾಡಿದಾಗ ವಿನಯ್‌ ಫೋನ್‌ ಎತ್ತಿದ. ಡ್ರೈವರ್‌ ಹೇಳಿದ್ದನ್ನು ಕೇಳಿ ಅವನಿಗೆ ಆತಂಕವಾಯಿತು.

“ನಾನೀಗ ಹೊರಟೆ,” ಎಂದು ಅವನು ಫೋನ್‌ ಇಟ್ಟ.ಅನಿತಾ ಕೂಡ ಅವನ ಮಾತುಗಳನ್ನು ಕೇಳಿ ಗಾಬರಿಗೊಂಡಳು. ರತ್ನಾ ಹಾಗೂ ಸಿದ್ಧಾರ್ಥ್‌ಗೆ ಫೋನ್‌ ಮಾಡಿದರೆ ಅವರು ಸಂಪರ್ಕಕ್ಕೆ ಸಿಗಲೇ ಇಲ್ಲ. ತಕ್ಷಣವೇ ವಿನಯ್‌ ಹಾಗೂ ಅನಿತಾ ಒಂದು ಟ್ಯಾಕ್ಸಿ ಮಾಡಿಕೊಂಡು ಆಸ್ಪತ್ರೆಗೆ ಹೋದರು. ಅಲ್ಲಿ ಸುನೀತಾಳ ಚಿಕಿತ್ಸೆ ನಡೆಯುತ್ತಿತ್ತು. ಇವರನ್ನು ನೋಡಿ ಸುನೀತಾ ಬಿಕ್ಕಿ ಬಿಕ್ಕಿ ಅಳತೊಡಗಿದಳು.

ಡ್ರೈವರ್‌ಗೆ ಒಂದು ಏಟು ಕೊಟ್ಟುಬಿಡಬೇಕು ಎನ್ನುವಷ್ಟು ವಿನಯ್‌ಗೆ ಕೋಪ ಬಂದುಬಿಟ್ಟಿತ್ತು. ಆದರೆ ಇದು ಸರಿಯಾದ ಸಮಯವಲ್ಲ ಎಂದು ಅವನಿಗೆ ಅನ್ನಿಸಿತು. ಅವನು ಸುನೀತಾಳ ತಲೆ ಸವರಿ ಕಣ್ಣೀರು ಒರೆಸಿ, “ಏನೂ ಆಗಲ್ಲ. ಅಳಬೇಡ,” ಎಂದು ಧೈರ್ಯ ಹೇಳಿದ. ಗಾಯಗಳಿಗೆ ಬ್ಯಾಂಡೇಜ್ ಹಾಕಲಾಗಿತ್ತು. ಕಾಲಿಗೆ ಪ್ಲ್ಯಾಸ್ಟರ್‌ ಹಾಕಲಾಯಿತು. ಇದೆಲ್ಲಕ್ಕೂ ಸಾಕಷ್ಟು ಸಮಯ ತಗುಲಿತು. ಈ ಮಧ್ಯೆ ಮಿಸ್ಡ್ ಕಾಲ್‌‌ಗಳನ್ನು ನೋಡಿ ರತ್ನಾ ಡ್ರೈವರ್‌ಗೆ ಫೋನ್‌ ಮಾಡಿದ್ದಳು. ವಿಷಯ ತಿಳಿದು ಗಾಬರಿಗೊಂಡು ತಕ್ಷಣವೇ ಆಸ್ಪತ್ರೆಗೆ ತಲುಪಿದಳು. ಸುನೀತಾಳ ಸ್ಥಿತಿ ನೋಡಿ ಆಕೆಗೆ ಅಳು ಬಂದುಬಿಟ್ಟಿತು. ವಿನಯ್‌ ಹಾಗೂ ಅನಿತಾ ಆಕೆಯನ್ನು ಸಮಾಧಾನ ಪಡಿಸಿದರಲ್ಲದೆ, ಸುನೀತಾಳೊಂದಿಗೆ ಮನೆಗೂ ಕರೆತಂದರು. ಅತ್ತ ಸಿದ್ಧಾರ್ಥನಿಗೂ ಮೀಟಿಂಗ್‌ ಮುಗಿದಿತ್ತು. ಅವನ ಮೊಬೈಲ್ ಫೋನ್‌ ಆನ್‌ ಆಯಿತು. ವಿನಯ್‌ ನಡೆದದ್ದನ್ನೆಲ್ಲ ವಿವರಿಸಿದ. ಅವನು ತಕ್ಷಣವೇ ಮನೆಗೆ ಬಂದ. ಸುನೀತಾಳ ಸ್ಥಿತಿ ನೋಡಿ ತಂದೆತಾಯಿಗಳಿಬ್ಬರಿಗೂ ದುಃಖ ಆಗುವುದು ಸಹಜವೇ. ಆದರೆ ಅವರ ಈ ದುಃಖ ಕೆಲವೇ ಗಂಟೆಗಳಲ್ಲಿ ಮರೆಯಲಾದದ್ದನ್ನು ಕಂಡು ವಿನಯ್‌ ಮತ್ತು ಅನಿತಾರಿಗೆ ಆಶ್ಚರ್ಯವಾಯಿತು. ಈಗ ಅವರ ಚಿಂತೆ ಮನೆಯಲ್ಲಿ ಮಗಳ ಜೊತೆ ಯಾರು ಇರಬೇಕು ಎನ್ನುವುದಾಗಿತ್ತು. ಇಬ್ಬರ ನಡುವೆ ಶುರುವಾದ ಮಾತುಕತೆ ನಂತರ ಹೆಚ್ಚುಕಡಿಮೆ ಜಗಳದ ರೂಪವನ್ನೇ ಪಡೆದುಕೊಂಡಿತು.

“45 ದಿನಗಳ ತನಕ ಪ್ಲಾಸ್ಟರ್‌ ಇರುತ್ತದೆಂದು ಡಾಕ್ಟರ್‌ ಹೇಳಿದ್ದಾರೆ. ಅಷ್ಟು ದಿನ ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಡಾಕ್ಟರ್‌ ಹೇಳಿದ್ದಾರೆ. ಶಾಲೆಗೂ ಹೋಗೋಕಾಗಲ್ಲ.

ಓದಿಗೂ ಹಾನಿ. ಈ ಹುಡುಗರು ಏನೇನು ಮಾಡಿಕೊಳ್ತಾರೊ…. ನಮಗೆಲ್ಲ ಸಮಸ್ಯೆ ತಂದಿಡ್ತಾರೆ,” ರತ್ನಾ ಹೇಳಿದಳು.“ಅತ್ತಿಗೆ, ನೀವು ಇದೇನು ಹೇಳ್ತಿದಿರಾ? ಸುನೀತಾ ಕೇಳಿಸಿಕೊಂಡ್ರೆ ಏನು ಗತಿ. ಅವಳು ನೋವಿನಿಂದ ಇನ್ನೂ ಹೊರಬಂದಿಲ್ಲ. ಮೊದಲೇ ಹೆದರಿದ್ದಾಳೆ….” ವಿನಯ್‌ ಹೇಳಿದ.

“ಹಾಗಾದರೆ ಏನು ಮಾಡಲಿ. ಅಷ್ಟೊಂದು ದಿನ ನಾನು ರಜೆ ಪಡೆದುಕೊಳ್ಳೋಕೆ ಆಗೊಲ್ಲ. 2 ದಿನ ರಜೆ ತೆಗೆದುಕೊಳ್ಳುವುದೇ ಕಷ್ಟ.”

“ಆದರೆ ರತ್ನಾ, ನಿನ್ನ ನೌಕರಿಗಿಂತ ಮಗಳು ಮುಖ್ಯ. ಅವಳಿಗಾಗಿ ನೀನು ರಜೆ ತೆಗೆದುಕೊಳ್ಳಲೇಬೇಕು. ಅವಳಿಗೆ ಎಷ್ಟೊಂದು ಪೆಟ್ಟಾಗಿದೆ, ಕಾಲಿನ ಮೂಳೆಯೇ ಮುರಿದಿದೆ. ನಿಮ್ಮಿಂದಾಗಿ ಅವಳಿಗೆ ತೊಂದರೆಯಾದ್ರೆ ನೀವು ಇಡೀ ಜೀವನ ಪಶ್ಟಾತ್ತಾಪಪಡಬೇಕಾಗುತ್ತದೆ. ಅವಳ ಯೋಗಕ್ಷೇಮ ನೋಡಿಕೊಳ್ಳುವ ತುರ್ತು ಅವಶ್ಯಕತೆ ಇದೆ. ಮನೆಗೆಲಸದವಳ ಮೇಲೆ ನೀವು ಬಿಟ್ಟುಹೋಗಲಾಗದು,” ಅನಿತಾ ಹೇಳಿದಳು.

“ಅಷ್ಟೊಂದು ದಿನ ರಜೆ ತೆಗೆದುಕೊಂಡುಬಿಟ್ಟರೆ, ನನ್ನ ನೌಕರಿ ಹೊರಟುಹೋಗುತ್ತದೆ,” ರತ್ನಾ ಹೇಳಿದಳು.

“ಅದ್ಹೇಗೆ ಹೋಗುತ್ತೆ ನೌಕರಿ? ನಿನ್ನ ಕಾಲು ಫ್ರ್ಯಾಕ್ಚರ್‌ ಆಗಿದ್ದಿದ್ದರೆ ಆಗ ನಿನ್ನ ನೌಕರಿ ಹೋಗುತ್ತಿತ್ತಾ?” ಸಿದ್ಧಾರ್ಥ್‌ ಸ್ವಲ್ಪ ಕಟು ಧ್ವನಿಯಲ್ಲಿಯೇ ಹೇಳಿದ.

“ಹಾಗಾದರೆ, ನೀವೇ ರಜೆ ತೆಗೆದುಕೊಳ್ಳಿ ನೋಡೋಣ.”

“ನೀವಿಬ್ಬರೂ ಏಕೆ ವಾದ ವಿವಾದ ಮಾಡ್ತಿದ್ದೀರಾ? ಇಬ್ಬರೂ ಸರದಿ ಪ್ರಕಾರ ರಜೆ ಪಡೆದು ಮಗುವಿನ ಯೋಗಕ್ಷೇಮ ನೋಡಿಕೊಳ್ಳಿ.

ಓದಿನ ಬಗ್ಗೆ ಟ್ಯೂಟರ್‌ ಹೇಗೂ ಬರ್ತಿರ್ತಾರೆ. ಯಾವುದಾದರೂ ಮಗುವಿನ ನೋಟ್ಸ್ಸ ತಂದುಕೊಟ್ಟರೆ ನಿಧಾನವಾಗಿ ಮುಗಿಸಬಹುದು. ಕೆಲವೇ ದಿನಗಳಲ್ಲಿ ಆಕೆ ಕುಳಿತುಕೊಳ್ಳಬಹುದು.”

“ಅದಕ್ಕಾಗಿ ನೌಕರಿ ಬಿಟ್ಟುಬಿಡು ಹಾಗೂ ಮನೆ ಸಂಭಾಳಿಸು,” ಎಂದು ಸ್ವಲ್ಪ ಸಿಡುಕುತನದಿಂದಲೇ ಹೇಳುತ್ತ ಸಿದ್ಧಾರ್ಥ್‌ ರೂಮಿಗೆ ಹೋದ.

“ದೊಡ್ಡ ಸಂಬಳ ಕೈಗೆ ಬಂದರೆ ನಿಮಗೆ ಖುಷಿ. ಏನಾದರೂ ಕಷ್ಟ ಬಂದರೆ ನಾನೊಬ್ಳೇ ಅದನ್ನು ಅನುಭವಿಸಬೇಕು. ನಿಮಗೆ ಮಾತ್ರ ಯಾವುದೇ ತೊಂದರೆ ಆಗಬಾರದು,” ಎಂದು ಹೇಳುತ್ತ ಆಕೆ ಕೂಡ ತನ್ನ ರೂಮಿಗೆ ಹೋಗಿ ದಢಾರೆಂದು ಬಾಗಿಲು ಹಾಕಿಕೊಂಡಳು. ಮಾತನಾಡುತ್ತ ಕ್ರಮೇಣ ಧ್ವನಿ ತುಂಬಿಬಂದಿತ್ತು.

pix-2

ಸಿದ್ಧಾರ್ಥ್‌ ಹಾಗೂ ರತ್ನಾ ಮನೆಯಲ್ಲಿ ಇವರಿಬ್ಬರು ಇದ್ದಾರೆ ಎಂಬುದನ್ನು ಕೂಡ ಮರೆತುಬಿಟ್ಟಿದ್ದರು. ಮುಚ್ಚಿದ ಕೋಣೆಯಿಂದ ಇಬ್ಬರೂ ಜೋರು ಜೋರಾಗಿ ಕೂಗುತ್ತಿರುವುದು ಕೇಳಿಸುತ್ತಿತ್ತು.

ವಿನಯ್‌ ಮತ್ತು ಅನಿತಾ ಪರಸ್ಪರ ಮುಖ ನೋಡುತ್ತ ಹಾಲ್‌ನಲ್ಲಿ ಕುಳಿತಿದ್ದರು. ನಂತರ ಅವರೂ ಮಲಗಲು ಹೋದರು. ಮರುದಿನ ಇಬ್ಬರೂ ಮಗಳನ್ನು ಅದೇ ಸ್ಥಿತಿಯಲ್ಲಿ ಬಿಟ್ಟು ಆಫೀಸಿಗೆ ಹೊರಟುಹೋದರು. ಏಕೆಂದರೆ ಮುಂದೆ ಅವರು ರಜೆ ತೆಗೆದುಕೊಳ್ಳಬೇಕಿತ್ತು. ವಿನಯ್‌ ಮತ್ತು ಅನಿತಾ ತಮ್ಮ ಸುತ್ತಾಡುವ ಕಾರ್ಯಕ್ರಮ ರದ್ದುಗೊಳಿಸಿ ಸುನೀತಾಳನ್ನು ನೋಡಿಕೊಂಡರು.

ಆ ದಿನ ಸಂಜೆ ಅವರ ಫ್ಲೈಟ್‌ ಇತ್ತು. ಅಂದು ಸಿದ್ಧಾರ್ಥ್‌ ಮತ್ತು ರತ್ನಾ ಬೇಗನೇ ಮನೆಗೆ ಬಂದರು. ಅಡುಗೆಮನೆಯಲ್ಲಿ ಚಹಾ ಮಾಡುತ್ತ ರತ್ನಾ ಹೇಳಿದಳು, “ಅನಿತಾ, ನೀನು ಏನೇನೋ ಯೋಚಿಸುತ್ತಿರಬಹುದು. ನಾವು ನಿಮ್ಮ ಮನೆಗೆ ಬಂದಾಗ ಸಾಕಷ್ಟು ಉಪಚಾರ ಮಾಡಿದ್ದೆ. ಆದರೆ ನೀವು ನಮ್ಮ ಮನೆಗೆ ಬಂದಾಗ ನಾವು ನಿಮ್ಮ ಮೇಲೆ ಸಾಕಷ್ಟು ಜವಾಬ್ದಾರಿ ಹೊರಿಸಿದೆ.”

“ಅದೇನೂಂತ ಮಾತಾಡ್ತಿದೀಯಾ ರತ್ನಾ…. ನಮಗಂತೂ ಬಹಳ ಒಳ್ಳೆಯದೆನಿಸಿತು. ದೈನಂದಿನ ದಿನಚರಿಯಲ್ಲಿ ಸಾಕಷ್ಟು ಬದಲಾವಣೆ ಸಿಕ್ಕಿತು.”

“ಅನಿತಾ, ನೀನು ಒಳ್ಳೆಯ ಕೆಲಸವನ್ನೇ ಮಾಡಿದೀಯಾ. ಆರಂಭದಿಂದಲೇ ನೌಕರಿಯ ಬಗ್ಗೆ ಯೋಚಿಸಲಿಲ್ಲ. ಈಗ ನಾನು ನೌಕರಿ ಬಿಡಬೇಕು ಅನಿಸುತ್ತೆ. ಆದರೆ ಬಿಡೋಕೆ ಸಂಕಟ ಆಗುತ್ತೆ. ದ್ವಂದ್ವದಲ್ಲಿ ಸಿಲುಕಿದ್ದೀನಿ. ಆದರೆ ಮನೆಯ ಜವಾಬ್ದಾರಿ ನಿಭಾಯಿಸೋಕೂ ಆಗ್ತಾ ಇಲ್ಲ. ಇದರಿಂದ ಸಿದ್ಧಾರ್ಥ್‌ಗೂ ಖುಷಿ ಇಲ್ಲ, ಮಕ್ಕಳಿಗೂ ಖುಷಿ ಇಲ್ಲ, ನನಗೂ ಮನಶ್ಶಾಂತಿ ಇಲ್ಲ. ಪ್ರತಿಸಲ ಯಾವುದಾದರೊಂದು ಟೆನ್ಶನ್‌ನಲ್ಲಿ ಜವಾಬ್ದಾರಿ ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲ,” ಎಂದು ಹೇಳುತ್ತಾ ರತ್ನಾಳ ಕಣ್ಣುಗಳು ತುಂಬಿಬಂದವು. ಹಲವು ದಿನಗಳ ದುಃಖ ಅವಳಿಗೆ ಒಮ್ಮೆಲೆ ಉಮ್ಮಳಿಸಿ ಬಂತು.

“ಇದೇನು ರತ್ನಾ….. ಎಲ್ಲರಿಗೂ ಒಂದಿಲ್ಲೊಂದು ಕಷ್ಟ ಇದ್ದೇ ಇರುತ್ತೆ. ನಮಗೆ ಯಾವುದು ಸುಲಭವಾಗಿ ಮಾಡಲು ಸಾಧ್ಯವೋ ಅದನ್ನೇ ಮಾಡಬೇಕು. ನಮ್ಮನ್ನು ನಾವು ಅಷ್ಟೊಂದು ತುಂಡು ತುಂಡವಾಗಿ ಹಂಚಿಕೆ ಮಾಡಿಕೊಳ್ಳಬಾರದು,” ಎಂದು ಹೇಳಿ ಅನಿತಾ ರತ್ನಾಳ ಕಣ್ಣೀರು ಒರೆಸತೊಡಗಿದಳು.

“ಒಂದು ಮಾತು ಹೇಳ್ಲಾ ರತ್ನಾ?”

“ಅದೇನು ಹೇಳು?”

“ನೀನು ಕೆಲವು ವರ್ಷಗಳ ಮಟ್ಟಿಗಾದರೂ ಧೈರ್ಯ ಮಾಡಿ ನೌಕರಿ ಬಿಟ್ಟುಬಿಡು. ಈ ಕೆಲವು ವರ್ಷಗಳು ಮಕ್ಕಳ ಕೆರಿಯರ್‌ನ್ನು ರೂಪಿಸಲು ಸಾಧ್ಯವಾಗಲಿದೆ. ಜೀವನ ಮರಳಿನ ಹಾಗೆ. ಕೈಯಿಂದ ಜಾರಿ ಹೋಗುತ್ತಲೇ ಇರುತ್ತದೆ. ಅದು ನಮಗೆ ಗೊತ್ತೇ ಆಗುವುದಿಲ್ಲ,” ಎಂದು ಅನಿತಾ ಹೇಳಿ, ಚಹಾದ ಕಪ್‌ಗಳನ್ನು ಎತ್ತಿಕೊಂಡು ಇಬ್ಬರೂ ಹೊರಗೆ ಬಂದರು.

ನಾಲ್ಕು ಮಂದಿ ಮೌನವಾಗಿ ಟೀ ಹೀರುತ್ತಿದ್ದರು. ಆದರೆ ಅವರ ಮನಸ್ಸಿನಲ್ಲಿ ಮಾತ್ರ ಅಂತರ್ದ್ವಂದ್ವ ನಡೆಯುತ್ತಲೇ ಇತ್ತು. ಅನಿತಾ ಯೋಚಿಸುತ್ತಿದ್ದುದೇ ಬೇರೆ. ಎಲ್ಲಕ್ಕೂ ಮೊದಲು ತನ್ನ ಸಿ.ವಿ. ಹರಿದು ಹಾಕಬೇಕೆಂದು ಅವಳು ನಿರ್ಧರಿಸಿದಳು.

ತಾನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಅನಿತಾಳ ಹೃದಯಕ್ಕೆ ನೋವಾಗುವಂತಹ ಮಾತು ಆಡಬಾರದೆಂದು ವಿನಯ್ ಮನಸ್ಸಿನಲ್ಲಿ ಪಣ ತೊಟ್ಟಿದ್ದ. ಅವಳು ತನ್ನ ಕುಟುಂಬದ ಸೂತ್ರಧಾರಿಣಿ. ತನ್ನ ಜೀವನದಲ್ಲಿ ಅಷ್ಟಿಷ್ಟು ಮಾಧುರ್ಯತೆ ಉಳಿದಿದೆಯೆಂದರೆ ಅದು ಅನಿತಾಳಿಂದ.

ವಿನಯ್‌ ಹಾಗೂ ಅನಿತಾರ ಕುಟುಂಬ ಎಷ್ಟು ಶಾಂತ ಹಾಗೂ ಸುಖಿ ಕುಟುಂಬವಾಗಿದೆ. ಅನಿತಾ ಹೇಳಿದ ಮಾತುಗಳನ್ನು ರತ್ನಾ ಅವಲೋಕನ ಮಾಡಲು ಆರಂಭಿಸಿದ್ದಳು. ಸ್ವಲ್ಪ ಹೊತ್ತಿನಲ್ಲಿಯೇ ಬ್ಯಾಗ್‌ಗಳೊಂದಿಗೆ ವಿನಯನ ಕುಟುಂಬ ಹಾಲ್‌‌ಗೆ ಬಂತು. ಆಗ ಸಿದ್ಧಾರ್ಥ ಮತ್ತು ರತ್ನಾ ತಲೆ ತಗ್ಗಿಸಿ ಕುಳಿತಿದ್ದರು. “ಬರ್ತೀವಿ ಸಿದ್ಧಾರ್ಥ್‌, ಬರ್ತೀವಿ ಅತ್ತಿಗೆ,” ಎಂದು ವಿನಯ್‌ ಹೇಳಿದ. ಸಿದ್ಧಾರ್ಥ್‌ ಒಮ್ಮೆಲೆ ಎದ್ದು ವಿನಯನನ್ನು ತಬ್ಬಿಕೊಂಡ, “ಕ್ಷಮಿಸು ವಿನಯ್‌, ನಿನಗಾಗಿ ಏನೂ ಮಾಡಲು ಆಗಲಿಲ್ಲ.”

“ಅದೇನು ಹೇಳ್ತಿದೀಯಾ ಸಿದ್ಧಾರ್ಥ್‌, ನಾವೆಲ್ಲ ಇಲ್ಲಿ ಖುಷಿಯಾಗಿಯೇ ಇದ್ವಿ. ಈಗ ನೀವು ನಮ್ಮ ಮನೆಗೆ ಬರೋಕೆ ಪ್ಲ್ಯಾನ್ ಮಾಡಬೇಕು.”

“ನಾನೂ ನಿಮ್ಮನ್ನು ಬಿಡೋಕೆ ಏರ್‌ಪೋರ್ಟ್‌ ತನಕ ಬರ್ತೀನಿ.”

“ಬೇಡ, ಬೇಡ. ನೀನು ಬರುವ ಅವಶ್ಯಕತೆ ಇಲ್ಲ. ಕೆಳಗಡೆ ಟ್ಯಾಕ್ಸಿ ಬಂದಿದೆ. ನಾವು ಹೋಗ್ತೀವಿ. ನೀನು, ರತ್ನಾ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಅವರಿಗೆ ನಿಮ್ಮ ಅವಶ್ಯಕತೆಯಿದೆ ಸಿದ್ಧಾರ್ಥ್‌,” ಎಂದು ವಿನಯ್‌ ಆತ್ಮೀಯತೆಯಿಂದ ಅವನ ಹೆಗಲ ಮೇಲೆ ಕೈ ಇಟ್ಟ. ಇಬ್ಬರ ಕಣ್ಣುಗಳು ಪರಸ್ಪರ ಎದುರಾದವು. ಸಿದ್ಧಾರ್ಥ್‌ ಕಣ್ಣಲ್ಲಿಯೇ ಉತ್ತರ ಕೊಟ್ಟ. ಅವನು ಟ್ಯಾಕ್ಸಿವರೆಗೂ ಬಂದ.

ವಿನಯನ ಕುಟುಂಬದವರು ಟ್ಯಾಕ್ಸಿಯಲ್ಲಿ ಕುಳಿತು ಟಾಟಾ ಹೇಳುತ್ತ ಹೊರಟುಹೋದರು. ಅಷ್ಟರಲ್ಲಿ ವಿನಯ್‌ ಮತ್ತು ಅನಿತಾಳ ಹಾಗೂ ಸಿದ್ಧಾರ್ಥ್‌ ಮತ್ತು ರತ್ನಾರ ಜೀವನದ ವ್ಯಾಖ್ಯೆಯೇ ಬದಲಾಗಿಹೋಗಿತ್ತು. ಅವರ ವಿಚಾರಧಾರೆಗಳು ತಮ್ಮ ದಿಸೆಯನ್ನು ಬದಲಿಸಿದ್ದವು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ