ಹೊಸದಾಗಿ ಮದುವೆಯಾಗಿತ್ತು. ಬದುಕಿನ ಬಗ್ಗೆ ಆಶಾಭಾವ ತುಂಬಿದ ನೂರಾರು ಕನಸುಗಳು. ರಾಜೇಶ್‌ ಮತ್ತು ಸುನೀತಾ ಹನಿಮೂನ್‌ಗೆಂದು ಊಟಿಗೆ ಹೊರಡುವ ತಯಾರಿ ನಡೆಸಿದರು. ಊಟಿಗೆ ಹೋದ ಮೇಲೆ ಸುನೀತಾ ಗಂಡನ ಎದೆಗೊರಗಿ, “ನಾವು ಎಲ್ಲವನ್ನೂ ಮರೆತು ದಿನವಿಡೀ ಸುತ್ತಾಡೋಣ…. ನಮ್ಮ  ಪ್ರೇಮಲೋಕದಲ್ಲಿ ಆನಂದವಾಗಿ ವಿಹರಿಸೋಣ….” ಎಂದು ಉಲಿದಳು.

ಸುನೀತಾಳ ಮಾತುಗಳಿಗೆ ರಾಜೇಶ್‌ ಒಪ್ಪಿಗೆ ಸೂಚಿಸುತ್ತಾ, “ಹ್ಞೂಂ…. ಇಲ್ಲಿ ನಾನೇ ರಾಜ ನೀನೇ ರಾಣಿ! ನಮ್ಮನ್ನು ಅಡ್ಡಿಪಡಿಸುವವರು ಯಾರು? ನಾನು ನೀನಾಗಿ… ನೀನು ನಾನಾಗಿ….. ಹಾಯಾಗಿ ಇದ್ದುಬಿಡೋಣ,” ಎಂದು ಅವಳನ್ನು ರಮಿಸಿದ.

ಅವರು ಹೋಟೆಲ್‌ನಲ್ಲಿ ಇರುವವರೆಗೂ ಎಲ್ಲ ಸರಿಯಾಗಿ ಇರುತ್ತಿತ್ತು. ಆದರೆ ಅವರು ಹೊರಗೆಲ್ಲಾದರೂ ಸುತ್ತಾಟಕ್ಕೆಂದು ಹೊರಟರೆ, ರಾಜೇಶನ ಕೈಯೇನೋ ಸುನೀತಾಳ ಕೈ ಹಿಡಿದು ಮಾತನಾಡುತ್ತಿದ್ದರೂ, ಅವನ ಕಂಗಳು ಸದಾ ಬೀದಿಯಲ್ಲಿ ಹಾದುಹೋಗುತ್ತಿದ್ದ ಇತರ ಹುಡುಗಿಯರ ಕಡೆಯೇ ಇರುತ್ತಿತ್ತು. ಅವನ ಮನಸ್ಸು ಎದುರಿಗೆ ಕಾಣುವ ಹೆಣ್ಣಿನ ಅಂದ ಹೀರುವುದರಲ್ಲಿ ತಲ್ಲೀನವಾಗಿರುತ್ತಿತ್ತು. ತಾನಿನ್ನೂ ಅವನ ಹೊಸ ಹೆಂಡತಿಯಾದ್ದರಿಂದ ತಕ್ಷಣ ಅವಳು ಸಂಕೋಚ ಬದಿಗೊತ್ತಿ ಆ ಬಗ್ಗೆ ಏನೂ ಮಾತನಾಡದಾದಳು.

ಗಂಡಸರ ದುರಭ್ಯಾಸ

ಮಧುಚಂದ್ರ ಮುಗಿಸಿ ತವರಿಗೆ ಮೊದಲ ಬಾರಿ ಬಂದ ಸುನೀತಾ, ತನ್ನ ಅತ್ತಿಗೆ ಪ್ರಭಾಮಣಿ ಬಳಿ ಗಂಡನ ಈ ಕೆಟ್ಟ ನಡವಳಿಕೆ ಕುರಿತು ಹೇಳಿದಳು. ಅದಕ್ಕೆ ಆಕೆ ನಗುತ್ತಾ, “ಅಯ್ಯೋ ಹುಚ್ಚು ಹುಡುಗಿ…. ಇಷ್ಟು ಸಣ್ಣ ವಿಷಯವನ್ನು ಆಳವಾಗಿ ಚಿಂತಿಸುತ್ತಾ ಮಧುಚಂದ್ರದ ಮಜಾ ಕೆಡಿಸಿಕೊಂಡೆಯಾ? ಪರಸ್ತ್ರೀಯರನ್ನು ಕಂಡಾಗ ಅವರನ್ನು ನುಂಗಿಬಿಡುವಂತೆ ನೋಡುವುದು ಹಲವು ಗಂಡಸರ ದುರಭ್ಯಾಸವಾಗಿದೆ. ಒಂದು ಹಂತದ ನಂತರ ಈ ಹುಚ್ಚು ತಾನಾಗಿ ಬಿಟ್ಟುಹೋಗುತ್ತದೆ,” ಎಂದು ವಿವರಿಸಿದಳು.

ಅದೇ ತರಹ ಅವಳ ಗೆಳತಿ ಸರಿತಾ ಸಹ ಹೇಳಿದಳು, “ನಿಮ್ಮ ಅತ್ತಿಗೆ ಸರಿಯಾಗೇ ಹೇಳಿದ್ದಾರೆ. ರತಿರೂಪಿ ಹೆಂಡತಿಯೇ ಪಕ್ಕದಲ್ಲಿದ್ದರೂ ಕೆಲವು ಗಂಡಸರು ಪರಸ್ತ್ರೀಯರತ್ತ ಇಣುಕಿ ನೋಡುವುದನ್ನು ಬಿಡುವುದಿಲ್ಲ.”

ಇದೇ ತರಹ ಅವಳ ಇನ್ನೊಬ್ಬ ಗೆಳತಿ ರಶ್ಮಿ ಸೂಕ್ಷ್ಮವಾಗಿ ಉತ್ತರಿಸಿದಳು, “ಈ ವಿಷಯದಲ್ಲಿ ನನ್ನ ಗಂಡನದು ತುಂಬಾನೇ ಜಾಸ್ತಿ ಅನ್ನೋಂಥ ಚಾಳಿ. ನಾನಂತೂ ಸದಾ ಅವರ ಮೇಲೆ ಒಂದು ಕಣ್ಣಿಟ್ಟಿರುತ್ತೇನೆ. ಆದರೂ ಅವಕಾಶ ಸಿಕ್ಕಿದಾಗ ಅವರು ಕಣ್ಣು ತಂಪು ಮಾಡಿಕೊಳ್ಳವುದೇ ಇರುವುದಿಲ್ಲ.”

ಪರಸ್ತ್ರೀ ಕಂಡಾಗ ತಪ್ಪದ ಆಕರ್ಷಣೆ

ಈ ವಿಚಾರವಾಗಿ ಬಹುತೇಕ ಪತ್ನಿಯರನ್ನು ಮಾತನಾಡಿಸಿದಾಗ, ಬಹಳಷ್ಟು ಮಂದಿ ತಾವು ಎದುರಿಗಿದ್ದಾಗಲೇ ಗಂಡ ಬೇರೆ ಹೆಂಗಸರನ್ನು, ಮುಖ್ಯವಾಗಿ ಅವಿವಾಹಿತ ತರುಣಿಯರನ್ನು ನುಂಗುವಂತೆ ದಿಟ್ಟಿಸುತ್ತಿರುತ್ತಾರೆ ಎಂದು ದೂರುತ್ತಾರೆ.

ಸುಂದರಿಯಾದ ಹೆಂಡತಿ ಪಕ್ಕದಲ್ಲಿ ಕುಳಿತಿದ್ದಾಗಲೂ ಸಹ, ಪತಿರಾಯ ಅವಳ ಜೊತೆ ಮಾತನಾಡುತ್ತಲೇ ಮಧ್ಯೆ ಮಧ್ಯೆ ಆ ಕಡೆ ಸುಳಿದಾಡುವ ಕನ್ಯಾಮಣಿಗಳತ್ತ ಕಳ್ಳನೋಟ ಹರಿಸದೆ ಇರಲಾರ. ಆದರೆ ಗಂಡಸರು ಹೀಗೆ ಮಾಡುವುದಾದರೂ ಏಕೆ?

ಈ ಕುರಿತಾಗಿ ಕೆಲವು ಗಂಡಸರನ್ನು ಈ ಬಗ್ಗೆ ವಿಚಾರಿಸಿದಾಗ, ಹೆಚ್ಚಿನ ಗಂಡಸರ ಮನಸ್ಸು ಬೇರೆ ಹುಡುಗಿಯರ ಬಗ್ಗೆ ಚಂಚಲವಾಗಿರುತ್ತದೆಯೇ, ಇದು ಎಷ್ಟರ ಮಟ್ಟಿಗೆ ನಿಜ ಎಂದು ಕೇಳಿದಾಗ, ಬಹಳಷ್ಟು ಮಂದಿ ಬೇರೆ ಬೇರೆ ರೀತಿಯಲ್ಲಿ ಅದನ್ನು ಒಪ್ಪಿಕೊಂಡರು.

“ಹೆಂಡತಿ ಸಣ್ಣ ವಿಷಯವನ್ನು ದೊಡ್ಡದು ಮಾಡಿ ರಗಳೆ ಎಬ್ಬಿಸುತ್ತಾಳೆ. ಹೀಗಿರುವಾಗ ಏನೋ ಒಂದು ಸಲ ಬೇರೆ ಹುಡುಗಿಯರನ್ನು ಒಂದು ನಿಮಿಷ ಕಣ್ಣೆತ್ತಿ ನೋಡಿದರೆ ಅದರಲ್ಲಿ ತಪ್ಪೇನು? ನಾವು ನೋಡಿಬಿಟ್ಟ ಮಾತ್ರಕ್ಕೆ ಆ ಹುಡುಗಿಗೆ ಲೈನ್ ಹೊಡೆಯುತ್ತಿದ್ದೇವೆ ಎಂದು ಅರ್ಥವೋ ಅಥವಾ ಅಷ್ಟಕ್ಕೇ ಫ್ಲರ್ಟ್‌ ಮಾಡಿಕೊಂಡು ಅವಳ ಹಿಂದೆಯೇ ಹೋಗಿಬಿಡುತ್ತೇವೆಯೇ?”

“ಅಯ್ಯೋ ಬಿಡ್ರಿ…. ಇದು ಯಾವ ಮಹಾ ವಿಷಯ? ಸುಂದರವಾದ ಫಿಗರ್‌, ಆಕರ್ಷಕ ಪರ್ಸನಾಲ್ಟಿ ಎಂದರೆ ಎಂಥವರಿಗಾದರೂ ಅವರನ್ನು ಒಮ್ಮೆ ತಿರುಗಿ ನೋಡೋಣ ಅನಿಸುತ್ತೆ. ಪ್ರಕೃತಿಯಲ್ಲಿ ಸಿಗುವ ಸುಂದರವಾದುದನ್ನು ನೋಡದೆ ಇರಲು ಕಣ್ಣುಗಳಿಗೆ ಸಾಧ್ಯವೋ?”

ಅನಗತ್ಯ ಸಂದೇಹವೇಕೆ?

“ಹೆಂಡತಿಯಾದವಳು ಗಂಡ ದಿನದ 24 ಗಂಟೆಯೂ ತನ್ನನ್ನೇ ನೋಡುತ್ತಿರಲಿ ಎಂದು ಬಯಸುತ್ತಾಳೆ. ಗಂಡನ ದೃಷ್ಟಿ ಸ್ವಲ್ಪ ಹೊತ್ತು ಇನ್ನೊಬ್ಬರ ಕಡೆ ತಿರುಗಿದರೂ ಅವಳಿಗೆ ಅದೇನೇನು ಸಂದೇಹಗಳು ಬರುತ್ತವೋ ಹೇಳಲಾಗದು. ಪಾಪ, ಗಂಡಂದಿರಿಗೆ ಕಷ್ಟ ತಪ್ಪಿದ್ದಲ್ಲ. ನನ್ನ ಹೆಂಡತಿ ಅಂತೂ ಇದರಲ್ಲಿ ಎಕ್ಸ್ ಪರ್ಟ್‌. ನಾನು ಮುದುಕಿಯತ್ತ ನೋಡಿದರೂ ಅವಳಿಗೆ ಕೆಂಡದಂಥ ಕೋಪ ಬರುತ್ತದೆ. ಸಂದೇಹ ಎಂಬುದು ಹೆಂಡತಿಯ ದೃಷ್ಟಿಯಲ್ಲಿರುತ್ತದೆ, ಗಂಡಂದಿರಿಗೆ ಸದಾ ಅದನ್ನೇ ಯೋಚಿಸುವುದು ಬಿಟ್ಟರೆ ಬೇರೆ ಕೆಲಸವಿಲ್ಲವೇ?’

‘ನೋಡಿದಿರಾ, ಎಷ್ಟು ಸಹಜವಾಗಿ ಗಂಡಸರು ತಮ್ಮ ಮನದ ಮಾತನ್ನು ತಿಳಿಸಿಬಿಟ್ಟರು? ಆದರೆ ಪತ್ನಿಗೆ ತನ್ನ ಪತಿ ಅನ್ಯ ಹುಡುಗಿಯನ್ನು ನೋಡುತ್ತಿದ್ದರೆ ಅಥವಾ ಅವಳ ಪ್ರಶಂಸೆಯ ನುಡಿ ಕೇಳಿದರೆ, ಸಹಜವಾಗಿಯೇ ಪತ್ನಿಯ ಮನದಲ್ಲಿ ತಕ್ಷಣ ನೂರಾರು ವಿಚಾರಗಳು ತಲೆ ತಿನ್ನುತ್ತವೆ. ತತ್‌ಕ್ಷಣವೇ ಅವಳ ಮನದಲ್ಲಿ ಅಸುರಕ್ಷೆಯ ಭಾವ ಮೊಳೆಯುತ್ತದೆ. ತನ್ನಲ್ಲಿ ಗಂಡನಿಗೆ ಮೊದಲಿನ ಆಕರ್ಷಣೆ ಇಲ್ಲವೇನೋ ಎನಿಸುತ್ತದೆ. ಗಂಡ ತನ್ನನ್ನು ಹಿಂದೆ ಪ್ರೀತಿಸುತ್ತಿದ್ದಂತೆ ಈಗ ಪ್ರೀತಿಸುತ್ತಿಲ್ಲ ಎಂದೇ ತರ್ಕಿಸುತ್ತಾಳೆ. ಹೀಗಾಗಿಯೇ ಎದುರಿಗೇ ತಾನಿದ್ದರೂ ಬೇರೆ ಹುಡುಗಿಯರತ್ತ ಅವನ ಮನಸ್ಸು ಹೋಗುತ್ತದೇನೋ ಎಂದುಕೊಳ್ಳುತ್ತಾಳೆ.

ಪ್ರೇಮವನ್ನು ಕೊಟ್ಟು ಪಡೆಯಿರಿ

ಗಂಡು ಹೆಣ್ಣು ಇಬ್ಬರೂ ಮದುವೆಯ ಬಂಧನದಲ್ಲಿ ಸಂಬಂಧ ಏರ್ಪಡಿಸಿಕೊಂಡಾಗ, ಇಬ್ಬರೂ ಪರಸ್ಪರ ಸಮರ್ಪಿತರಾಗಿ ಇರಬೇಕೆಂದು ಬಯಸುತ್ತಾರೆ. ಇಬ್ಬರೂ ತಮ್ಮ ಇಡೀ ಸಮಯ, ಗಮನ, ಪ್ರೀತಿ ಪ್ರೇಮಗಳನ್ನು ಪರಸ್ಪರರಿಗಾಗಿ ಮೀಸಲಿಡಲಿ ಎಂದು ಬಯಸುತ್ತಾರೆ. ಆದರೆ ಪತಿ ತನ್ನ ಪತ್ನಿಯನ್ನು ಮನಃಪೂರ್ಕವಾಗಿ ಪ್ರೇಮಿಸಿದರೂ, ಒಮ್ಮೊಮ್ಮೆ ಅನ್ಯ ಮಹಿಳೆಯರನ್ನು ಕಂಡಾಗ ಅವರ ಸೌಂದರ್ಯವನ್ನು ಹೊಗಳದೇ ಇರಲಾರ. ಇದರರ್ಥ ಅವನು ತನ್ನ ಹೆಂಡತಿಯನ್ನು ಪ್ರೇಮಿಸುತ್ತಿಲ್ಲ ಎಂದಲ್ಲ. ಯಾರನ್ನಾದರೂ ಹೊಗಳುವುದು ಎಂದರೆ ಅದು ದೊಡ್ಡ ತಪ್ಪೇನಲ್ಲವಲ್ಲ….? ಹೀಗಾಗಿ ನಿಮ್ಮ ಪತಿ ನಿಮ್ಮ ಎದುರೇ ಇನ್ನೊಬ್ಬ ಮಹಿಳೆಯನ್ನು ಹೊಗಳಿದ ಎಂದ ಮಾತ್ರಕ್ಕೆ, ನೀವು ಮುಖವನ್ನು ಗಡಿಗೆ ಗಾತ್ರ ಮಾಡಿಕೊಂಡು, ಮುನಿಸಿಕೊಳ್ಳಬೇಕಿಲ್ಲ. ಇದರಿಂದ ನಿಮ್ಮ ಕೀಳು ಮಾನಸಿಕತೆ ತೋರ್ಪಡಿಸಿಕೊಂಡಂತೆ ಆಗುತ್ತದೆ. ಬದಲಿಗೆ ಅದನ್ನು ಸಹಜವಾಗಿ ಸ್ವೀಕರಿಸಿ, ಸಾಧ್ಯವಾದರೆ ನೀವು ಸಹ ಆ ಮಹಿಳೆ ಕುರಿತಾಗಿ ನಾಲ್ಕು ಒಳ್ಳೆಯ ಮಾತನಾಡಿ.

ನೀವು ನಿಮ್ಮ ಗಂಡನ ಕುರಿತಾಗಿ ಅಧಿಕ ಭಾವುಕರಾಗಿದ್ದೀರಿ ಎನಿಸಿದರೆ ಅಥವಾ ಆತ ಪರಸ್ತ್ರೀ ಜೊತೆ ಸ್ನೇಹಪೂರ್ವಕವಾಗಿ ನೋಡಿದಾಕ್ಷಣ ನಿಮ್ಮ ಹಕ್ಕನ್ನು ಕಸಿದಂತಾಯಿತು ಎನಿಸಿದರೆ, ಮೊದಲು ನಿಮ್ಮ ಈ ಮನಸ್ಸಿನ ಅಸುರಕ್ಷೆಯ ಭಾವವನ್ನು ಹೋಗಲಾಡಿಸಿ. ನಿಮಗೆ ನಿಮ್ಮ ಸೌಂದರ್ಯ, ಯೋಗ್ಯತೆ, ಬುದ್ಧಿವಂತಿಕೆಗಳ ಕುರಿತಾಗಿ ಏನಾದರೂ ಕೊರತೆ ಇದೆ ಅನಿಸುತ್ತದೆಯೇ? ಹಾಗೆನಿಸಿದರೆ ನೀವು ನಿಮ್ಮ ವ್ಯಕ್ತಿತ್ವ, ನಿಮ್ಮ ಗುಣಗಳನ್ನು ಇನ್ನಷ್ಟು ಸುಧಾರಿಸುವ ಯತ್ನ ನಡೆಸಿ. ನೀವು ನಿಮ್ಮ ಪತಿಗೆ ಮನಃಪೂರ್ವಕವಾಗಿ ಪ್ರೀತಿ ಪ್ರೇಮ ನೀಡಿ ಸಮರ್ಪಿತರಾದರೆ, ಸಹಜವಾಗಿಯೇ ಅದನ್ನು ಹಿಂಪಡೆಯುವಿರಿ.

ಗಂಡನ ಈ ಅಭ್ಯಾಸವನ್ನು ಅತಿ ಗಂಭೀರವಾಗಿ ತೆಗೆದುಕೊಂಡು, ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ ಮಾಡಿಕೊಳ್ಳಬೇಡಿ. ನಿಮ್ಮ ಪತಿ ಸಾವಿರ ಜನರನ್ನು ನೋಡಿದರೇನು? ಆದರೆ ಅವರ ಮೇಲೆ ಹಕ್ಕಿರುವುದು ನಿಮಗೆ ಮಾತ್ರ ತಾನೇ?

– ಪ್ರಭಾ ಪ್ರಕಾಶ್‌. 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ