ಕಳೆದ ವರ್ಷದ ಫೆಬ್ರವರಿ ಮೊದಲ ವಾರದಂದು ಮಹಿಳಾ ಆಯೋಗದ ಕಛೇರಿಯಲ್ಲಿ ಸುಮನಾಳ ಕಥೆ ಕೇಳಿ ಆಯೋಗದ ಮುಖ್ಯಸ್ಥೆ ಲತಾ ದೇಶಪಾಂಡೆ ಅವರಷ್ಟೇ ಅಲ್ಲ, ಅಲ್ಲಿದ್ದ ಎಲ್ಲರೂ ಬಹುತೇಕ ದಂಗಾಗಿ ಹೋದರು.

ಸುಮನಾಳ ಮದುವೆ ರೇಲ್ವೇ ಕಾಲೋನಿಯ ಗೌತಮ್ ಜೊತೆ ಆಗಿತ್ತು. ಮದುವೆಯಾದಾಗ ಸುಮನಾ ಬಹಳ ಖುಷಿಗೊಂಡಿದ್ದಳು. ಏಕೆಂದರೆ ತನ್ನ ಪತಿ ಸಿನಿಮಾ ನಿರ್ಮಿಸುತ್ತಾನೆ. ಜೊತೆಗೆ ರೈಲ್ವೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ. ಗಂಡನ ಮನೆಯಲ್ಲಿ ತನಗೆ ಯಾವುದೇ ಕೊರತೆ ಆಗಲಾರದು ಎಂದು ಆಕೆಗೆ ನಂಬಿಕೆಯಿತ್ತು. ತನ್ನ ಬಗ್ಗೆ ಯಾವುದೇ ದೂರು ಬರಬಾರದೆಂದು ಆಕೆ ಎಚ್ಚರ ವಹಿಸುತ್ತಿದ್ದಳು. ಚಿಕ್ಕಪುಟ್ಟ ತೊಂದರೆ ಬಂದರೂ ಅದನ್ನು ಹೇಗೆ ಎದುರಿಸಬೇಕೆಂದು ಕೂಡ ಆಕೆಗೆ ಗೊತ್ತಿತ್ತು.

ಕೆಲವು ತಿಂಗಳುಗಳ ಬಳಿಕ ತನ್ನ ಗಂಡ ಸಿನಿಮಾ ನಿರ್ಮಾಪಕನೂ ಅಲ್ಲ, ರೈಲ್ವೆ ಉದ್ಯೋಗಿಯೂ ಅಲ್ಲ ಎಂಬ ಸಂಗತಿ ಅವಳಿಗೆ ಸಿಡಿಲೆರಗಿದಂತೆ ಬಂದು ಅಪ್ಪಳಿಸಿತು. ತನಗೆ ಸುಳ್ಳು ಹೇಳಿ ಅವನು ಮದುವೆ ಆಗಿದ್ದಾನೆಂದು ಅವಳಿಗೆ ಖಾತ್ರಿಯಾಯಿತು. ಈ ಸುಳ್ಳನ್ನು ನಿರ್ಲಕ್ಷಿಸುವುದೇ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಯೋಚಿಸುತ್ತ ಅವಳು ತನಗೆ ತಾನೇ ಸಮಾಧಾನ ಹೇಳಿಕೊಂಡಳು. ತಾನು ಕೂಗಾಡುವುದರಿಂದ ಏನೇನೂ ಲಾಭವಿಲ್ಲ. ಹೇಗಿದೆಯೋ ಹಾಗೆ ಜೀವನ ಸಾಗಿಸಬೇಕು ಎಂದು ಅವಳು ಅಂದುಕೊಂಡಳು.

ಮಾದಕ ವ್ಯಸನಿ ಪತಿ

ಇಲ್ಲಿಯವರೆಗೆ ಆಕೆ ಎಲ್ಲವನ್ನು ಸಹಿಸಿಕೊಂಡಿದ್ದಳು. ಆದರೆ ಶೀಘ್ರ ಪತಿಯ ಇನ್ನೊಂದು ರೂಪ ಆಕೆಯ ಗಮನಕ್ಕೆ ಬಂತು. ಅವನು ಹಲವು ಬಗೆಯ ವ್ಯಸನಗಳಿಗೆ ತುತ್ತಾಗಿದ್ದ. ಅಮಲಿನಲ್ಲಿ ಅವನು ಎಂತೆಂತಹ ಕುಚೇಷ್ಟೆ ಮಾಡುತ್ತಿದ್ದನೆಂದರೆ, ಅದರಿಂದ ಯಾವುದೇ ಪತ್ನಿಯ ಜೀವನ ನರಕವಾಗುತ್ತಿತ್ತು.

ಗಂಡ ಅಮಲಿನ ದಾಸ ಎಂದು ಅನೇಕ ಮಹಿಳೆಯರು ಹೇಳಿಕೊಂಡು ದೂರು ನೀಡಲು ಬರುತ್ತಿದ್ದರು. ಅದರಿಂದ ಮಹಿಳಾ ಆಯೋಗದ ಅಧ್ಯಕ್ಷರಿಗೆ ಆಶ್ಚರ್ಯ ಆಗುತ್ತಿರಲಿಲ್ಲ. ಆದರೆ ಸುಮನಾಳ ಬಾಯಿಯಿಂದ ತನ್ನ ಗಂಡ ರೂಮ್ ಫ್ರೆಶರ್ನರ್‌ ಮೂಸಿ ನೋಡಿ ನಶೆಗೆ ಒಳಗಾಗುತ್ತಿದ್ದ ಎಂಬುದನ್ನು ಕೇಳಿ ಅವಳು ಅದೆಷ್ಟು ಕಷ್ಟದಲ್ಲಿದ್ದಾಳೆ ಎಂಬುದು ಅರಿವಾಯಿತು.

ಅವಳು ತನ್ನ ಕಷ್ಟ ಹೇಳುತ್ತಾ ಹೋದಂತೆ ಆಯೋಗದ ಸದಸ್ಯರು ದಿಙ್ಮೂಢರಾಗುವಂತಹ ಸ್ಥಿತಿ ಉಂಟಾಯಿತು. ಗಂಡನ ಅಮಲಿನ ಲಾಭವನ್ನು ಆಕೆಯ ಮಾವ ತೆಗೆದುಕೊಳ್ಳಲು ಪ್ರಾರಂಭಿಸಿದ್ದ. ಶಾಯರಿ ಬರೆಯುತ್ತಿದ್ದ ಮಾವ ಆಕೆಯ ಕಣ್ಣು ಕೂದಲಿನ ಬಗ್ಗೆಯೂ ಸಾಕಷ್ಟು ವರ್ಣಿಸುತ್ತಿದ್ದನಂತೆ.

ಅಂದಹಾಗೆ ಆಕೆಯ ಪತಿ ಹಾಗೂ ಮಾವನನ್ನು ಕರೆಸಿ ಸ್ಪಷ್ಟೀಕರಣ ಕೇಳಿದಾಗ ಸುಮನಾ ಹೇಳಿದೆಲ್ಲ ಸುಳ್ಳು ಎಂದು ಅವರು ಹೇಳಿದರು. ಆದರೆ ಸುಮನಾಳ ಮಾತಿನಲ್ಲಿ ಸತ್ಯಾಂಶವಿರುವುದು ಆಯೋಗದ ಸದಸ್ಯರಿಗೆ ಮನವರಿಕೆಯಾಯಿತು. ಏಕೆಂದರೆ ಸಾಮಾನ್ಯವಾಗಿ ಹೆಂಡತಿಯರು ಹೇಳುವುದೇನೆಂದರೆ ಗಂಡ ತೊಂದರೆ ಕೊಡುವುದು, ವರದಕ್ಷಿಣೆಯ ಆರೋಪ ಮಾಡುತ್ತಿದ್ದರು. ಆದರೆ ಸುಮನಾ ಹೇಳಿದ್ದು ಗಂಡನ ಅಮಲಿನ ಬಗೆಗಷ್ಟೆ.

ಗಂಡ ನಶೆಗೆ ತುತ್ತಾದಾಗ ಹೆಂಡತಿ ಯಾವ ಯಾವ ತೊಂದರೆಗಳಿಗೆ ಸಿಲುಕುತ್ತಾಳೆ ಎನ್ನುವುದು ಸುಮನಾಳ ಸ್ಥಿತಿಯಿಂದ ಅರಿವಾಗುತ್ತದೆ. ಆ ಕಡೆಯೂ ಇಲ್ಲ, ಈ ಕಡೆಯೂ ಇಲ್ಲ ಎಂಬಂತಹ ಸ್ಥಿತಿ ಆಕೆಯದಾಗುತ್ತದೆ. ತವರಿನವರಿಗೆ ಈ ಬಗ್ಗೆ ಹೇಳಿದರೆ, ಈಚೆಗೆ ಎಲ್ಲರೂ ಕುಡಿಯುತ್ತಾರೆ ನೀನು ಹೊಂದಾಣಿಕೆ ಮಾಡಿಕೊಂಡು ಹೋಗುವುದನ್ನು ರೂಢಿಸಿಕೊ ಎಂದು ಅವಳಿಗೇ ಬುದ್ಧಿವಾದ ಹೇಳುತ್ತಾರೆ.

ಆದರೆ ಹೆಂಡತಿ ಎಂತಹ ದುಸ್ಥಿತಿ ಅನುಭವಿಸಬೇಕಾಗುತ್ತದೆ ಎಂಬುದು ಅಮಲಿನ ವ್ಯಕ್ತಿಯೊಂದಿಗೆ ಮದುವೆಯಾದ ಹೆಂಡತಿಗಷ್ಟೇ ಗೊತ್ತಾಗುತ್ತದೆ. ಗಂಡನ ಈ ದೌರ್ಬಲ್ಯದ ಲಾಭವನ್ನು ಮನೆಯ ಇತರೆ ಗಂಡಸರು ಪಡೆಯಲು ನೋಡುತ್ತಾರೆ.

ಹೆಂಡತಿಯ ಸಂಕಷ್ಟ ಯಾವಾಗ ವಿಕೋಪಕ್ಕೆ ಹೋಗುತ್ತದೆ ಎಂದರೆ, ಆಕೆ ತನಗೆ ಮನೆಯ ಇತರೆ ಗಂಡಸರಿಂದ ಕಿರುಕುಳ ಸಹಿಸಬೇಕಾಗಿ ಬರುತ್ತಿದೆ ಎಂದು ಹೇಳಿದರೂ ಗಂಡ, ಆಕೆಯ ಪರ ವಹಿಸದೆ ಮನೆಯವರ ಪರವಾಗಿಯೇ ನಿಲ್ಲಲು ನೋಡಿದಾಗ, ಹೆಂಡತಿ ಈ ವಿಷಯವನ್ನು ಬೇರೆಯವರ ಮುಂದೆ ಹೇಳಿದಾಗ ಆಕೆಯ ನಡತೆಯ ಬಗೆಗೇ ಸಂದೇಹ ವ್ಯಕ್ತಪಡಿಸಲು ಆರಂಭಿಸುತ್ತಾರೆ.

ಎಂತೆಂಥ ತೊಂದರೆಗಳು?

ನಶೆಗೆ ತುತ್ತಾದ ಗಂಡಂದಿರ ಹೆಂಡತಿಯರ ಸ್ಥಿತಿ ಬೇರೆ ಹೆಂಡತಿಯರ ರೀತಿ ಅಲ್ಲ. ಏಕೆಂದರೆ ಗಂಡ ಅವಳಿಗೆ ಹೊಡೆಯುವುದನ್ನಷ್ಟೇ ಮಾಡುವುದಿಲ್ಲ. ಅವಳಿಗೆ ಬಗೆ ಬಗೆಯ ತೊಂದರೆ ಕೊಟ್ಟು ತನ್ನ ದೌರ್ಬಲ್ಯ ಬಚ್ಚಿಟ್ಟುಕೊಳ್ಳಲು ಪ್ರಯತ್ನ ನಡೆಸುತ್ತಾನೆ. ಏಕೆಂದರೆ ಹೆಂಡತಿ ತುಟಿ ಬಿಚ್ಚದಿರಲಿ ಎನ್ನುವುದು ಅವನ ಉದ್ದೇಶವಾಗಿರುತ್ತದೆ. ಈ ಪೌರುಷದ ಮುಂದೆ ತೊಂದರೆಗೊಳಗಾದ ಹೆಂಡತಿಯರಿಗೆ ತಮ್ಮ ಗಂಡಂದಿರಿಂದ ದೈಹಿಕ ಸುಖ ಸಿಗುವುದು ಕೂಡ ಅಷ್ಟಕ್ಕಷ್ಟೇ. ಏಕೆಂದರೆ ಅಮಲಿನಲ್ಲಿರುವ ವ್ಯಕ್ತಿಗೆ ಲೈಂಗಿಕ ಆಸಕ್ತಿ ಕುಂದಿರುತ್ತದೆ.

ಪ್ರಶ್ನೆ ಕೇವಲ ಸೆಕ್ಸ್ ನದಷ್ಟೇ ಅಲ್ಲ. ಬೇರೆ ಕೆಲವು ಸಮಸ್ಯೆಗಳು ಕೂಡ ಆಕೆಗೆ ಅತ್ತೆಮನೆಯಲ್ಲಿ ಉಸಿರುಗಟ್ಟುವಂತೆ ಮಾಡುತ್ತವೆ. ಆದರೆ ಯಾರೊಬ್ಬರ ಸಹಾಯ ಇಲ್ಲದೆ ಇರುವ ಕಾರಣದಿಂದ ಆಕೆ ಅವನ್ನೆಲ್ಲ ಸಹಿಸಿಕೊಂಡೇ ಹೋಗಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಆಕೆಗೆ ಮಗುವೇನಾದರೂ ಆದರೆ ಅಲ್ಲಿಂದ ಹೊರಬೀಳುವುದು ಆಕೆಗೆ ಕಷ್ಟಕರವಾಗಿ ಪರಿಣಮಿಸುತ್ತದೆ.

ಹಣದ ಬಗೆಗಂತೂ ಹೆಂಡತಿ ಏನೂ ಮಾತನಾಡಲು ಆಗುವುದಿಲ್ಲ. ಏಕೆಂದರೆ ಗಳಿಕೆಯ ಬಹುದೊಡ್ಡ ಭಾಗವನ್ನು ಗಂಡ ನಶೆಗಾಗಿ ವ್ಯಯಿಸುತ್ತಾನೆ. ಯಾವಾಗ ಅವನ ದೇಹ ತುಂಬಾ ದುರ್ಬಲವಾಗುತ್ತೋ ಆಗ ಅವನು ಮೈಗಳ್ಳನ ರೀತಿಯಲ್ಲಿ ಮನೆಯಲ್ಲಿಯೇ ಬಿದ್ದುಕೊಂಡಿರುತ್ತಾನೆ. ಗಂಡ ಕುಡಿಯಲು ಮಾಡಿದ ಸಾಲದ ವಸೂಲಿಗೆ ಜನರು ಮನೆಗೆ ಬರಲು ಶುರು ಮಾಡಿದಾಗ ಹೆಂಡತಿಗೆ ಮತ್ತಷ್ಟು ಸಂಕಟ ಎದುರಾಗುತ್ತದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಸುಧಾ ಇಬ್ಬರು ಮಕ್ಕಳ ತಾಯಿ. 5 ವರ್ಷಗಳ ಹಿಂದೆ ಅವಳ ಮದುವೆ ಸುಧೀರ್‌ ಜೊತೆ ಆಗಿತ್ತು. ಆಕೆಯ ಗಂಡ ಮದ್ಯ ವ್ಯಸನಿ. ಅವನು ಒಂದು ದಿನ ಕುಡಿಯದಿದ್ದರೂ ಚಡಪಡಿಸುತ್ತಿದ್ದ. ಗಂಡ ಒಂದು ಕಾರ್ಖಾನೆಯಲ್ಲಿ ದಿನಗೂಲಿಯ ಮೇಲೆ ಕೆಲಸ ಮಾಡುತ್ತಿದ್ದ. ಹೀಗಾಗಿ ಕುಟುಂಬ ನಿರ್ವಹಣೆಗಾಗಿ ಸುಧಾ 6000 ಸಂಬಳದ ಒಂದು ನೌಕರಿಗೆ ಹೋಗುತ್ತಿದ್ದಳು. ಸುಧಾ ಹಣ ಕೊಡದೇ ಇದ್ದಾಗ ಅವನು ಜೋರುಜೋರಾಗಿ ಕೂಗುತ್ತಿದ್ದ. ಅವಳ ಚಾರಿತ್ರ್ಯದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ. ಸುಧಾಳ ಸಂಬಳ ಬರುತ್ತಿದ್ದಂತೆ ಅದರಲ್ಲಿನ ಬಹುಪಾಲು ಹಣನ್ನು ಕಿತ್ತುಕೊಂಡು ಬಾರ್‌ ಗೆ ಓಡುತ್ತಿದ್ದ. ಪುಟ್ಟ ಮಕ್ಕಳ ಕಡೆ ನೋಡುತ್ತ ನಿಮ್ಮ ಅಪ್ಪ ನಿಮಗೆ ಎಂತಹ ಭವಿಷ್ಯ ರೂಪಿಸುತ್ತಿದ್ದಾನೆ ನೋಡಿ ಎಂದು ಹೇಳುತ್ತಿದ್ದಳು.

ಸುಧಾಳಿಗೆ ಏನು ಮಾಡಬೇಕೆಂದು ಹೊಳೆಯುತ್ತಿರಲಿಲ್ಲ. ಗಂಡನನ್ನು ತೊರೆದು ಹೋದರೆ ತನ್ನ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತೆ ಎನ್ನುವುದು ಅವಳಿಗೆ ಗೊತ್ತು. ಹೊರಗಿನ ಜಗತ್ತು ತನ್ನ ಕಡೆ ನೋಡುವ ನೋಟ ಎಂಥದು ಎಂದು ಅವಳಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಸುಮ್ಮನೇ ಇದ್ದಾಳೆ.

ಮದ್ಯ ವ್ಯಸನಿ ಗಂಡ ಸಿಕ್ಕಾಗ ಹೆಂಡತಿಯರು ಏನು ಮಾಡಬೇಕು? ಇದಕ್ಕೆ ನಿಖರವಾದ ಉತ್ತರ ಯಾರಿಗೂ ಗೊತ್ತಿಲ್ಲ. ಅದಕ್ಕೆ ಉತ್ತರವನ್ನು ಹೆಂಡತಿಯರೇ ಕಂಡುಕೊಳ್ಳಬೇಕು. ಅವನು ಕೊಡುವ ಕಷ್ಟಗಳನ್ನು ಸಹಿಸಿಕೊಳ್ಳುತ್ತ ಅವನೊಂದಿಗೆ ಜೀವನ ನಡೆಸಬೇಕು. ಇಲ್ಲಿ ಅವನನ್ನು ತೊರೆದು ತಮ್ಮದೇ ಆದ ಜೀವನ ಕಟ್ಟಿಕೊಳ್ಳಬೇಕು.

ಅಪಾಯ ಮನೆಯಲ್ಲೂ ಇದೆ, ಹೊರಗೂ ಇದೆ. ಹೀಗಾಗಿ ಹೆಂಡತಿಯರು ನಿರ್ಧಾರ ತೆಗೆದುಕೊಳ್ಳಲು ತಡ ಮಾಡುತ್ತಾರೆ ಹಾಗೂ ಬಳಿಕ ಪಶ್ಚಾತ್ತಾಪಪಡುತ್ತಾರೆ. ಏಕೆಂದರೆ ಹೊರಗಿನ ಅಪಾಯ ಗಂಡನ ಅಮಲಿನಿಂದಾಗಿ ಒಳಗೆ ಪ್ರವೇಶಿಸಿ ತೊಂದರೆ ಕೊಡಲಾರಂಭಿಸುತ್ತದೆ.

ಸುಮನಾ ಮಹಿಳಾ ಆಯೋಗದ ಮುಂದೆ ಬಂದು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಳು. ತನ್ನ ಸಮಸ್ಯೆಗೆ ಪರಿಹಾರ ಸಿಗದೇ ಹೋದರೆ ಅವಳು ವಿಚ್ಛೇದನ ಪಡೆಯುತ್ತಾಳೆ. ಬಳಿಕ ಅವಳು ಮತ್ತೊಬ್ಬ ಸಂಗಾತಿಯನ್ನು ಪಡೆಯಬಹುದು. ಹಾಗೊಮ್ಮೆ ಸಿಗದೇ ಹೋದರೂ ಘೋರ ನರಕದ ಜೀವನದಿಂದ ಅವಳಿಗೆ ಮುಕ್ತಿಯಂತೂ ದೊರಕುತ್ತದೆ.

ಭಾರತಿ ಭೂಷಣ್

ಮದುವೆಯ ಬಳಿಕ ಗಂಡ ಕುಡುಕ ಎಂದು ಗೊತ್ತಾದಾಗ ಪ್ರೀತಿ ಮತ್ತು ಚಿಕಿತ್ಸೆಯಿಂದ ಗಂಡನ ಮದ್ಯದ ಚಟವನ್ನು ಬಿಡಿಸುವ ಪ್ರಯತ್ನ ಮಾಡಬೇಕು. ಅವನನ್ನು ಪ್ರೀತಿಯಿಂದ ಸರಿದಾರಿಗೆ ತರಲು ಪ್ರಯತ್ನಿಸಿ.

ಒಂದು ವೇಳೆ ಗಂಡ ಮದ್ಯ ವ್ಯಸನ ಬಿಡದೇ ಹೋದರೆ, ಪರಿಸ್ಥಿತಿ ಗಂಭೀರವಾಗುತ್ತ ಸಾಗಿದರೆ ಹೆಂಡತಿಯೇ ಅವನನ್ನು ತೊರೆಯಲು ಪ್ರಯತ್ನ ಮಾಡಬೇಕು. ಅದಕ್ಕಾಗಿ ಕಾನೂನು ಪ್ರಕಾರ ಏನು ಮಾಡಲು ಸಾಧ್ಯವೋ ಹಾಗೆ ಮಾಡಬೇಕು.

ಅತ್ತೆ ಮನೆಯಲ್ಲಿ ಬೇರೆ ಪುರುಷರು ನಿಮ್ಮ ಮೇಲೆ ಕಣ್ಣು ಹಾಕಿದ್ದರೆ ಅವರಿಗೆ ಹೆದರದೆ, ಅವರನ್ನು ಧೈರ್ಯದಿಂದ ಎದುರಿಸಿ. ಅದಕ್ಕಾಗಿ ಪೊಲೀಸ್‌ ಠಾಣೆ ಅಥವಾ ನ್ಯಾಯಾಲಯದ ಕಟ್ಟೆ ಹತ್ತಬೇಕಾಗಿ ಬಂದರೂ ಹೆದರಬೇಡಿ.

ಯಾವ ಗಂಡ ಹೆಂಡತಿಯನ್ನೇ ಸರಿಯಾಗಿ ಗಮನಿಸುವುದಿಲ್ಲವೋ, ಅವನು ಮಕ್ಕಳನ್ನು ಹೇಗೆ ಸಲಹುತ್ತಾನೆ? ಹೀಗಾಗಿ ತಾಯಿಯಾಗುವುದನ್ನು ಆದಷ್ಟು ಮುಂದೂಡಿ. ಅದಕ್ಕಾಗಿ ಕಾಪರ್‌-ಟೀ ಅವಳಡಿಸಿಕೊಳ್ಳಿ. ಒಂದು ಸಲ ಮಗುವಾದ ಬಳಿಕ ಗಂಡನನ್ನು ದ್ವೇಷಿಸುವ ಬದಲು, ಮುಂದೆ ಈ ಮಗುವಿಗೆ ತಂದೆಯ ಅಗತ್ಯ ಉಂಟಾಗುತ್ತದೆ ಎಂದು ಅವನು ಹೇಗೇ ಇರಲಿ, ಪರವಾಗಿಲ್ಲ ಬಿಡಿ ಎಂದು ಸಹಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಗಂಡ ಕುಡುಕ ಎಂದು ಗೊತ್ತಾದ ತಕ್ಷಣ ತಾಯಿಯಾಗುವ ನಿರ್ಧಾರ ಮುಂದೂಡಿ.

ನೀವು ಮದ್ಯ ವ್ಯಸನ ಬಿಡದೇ ಇದ್ದರೆ ನನ್ನನ್ನೇ ಬಿಟ್ಟು ಬಿಡಿ ಎಂದು ಸ್ಪಷ್ಟವಾಗಿ ಹೇಳಿ. ಜೊತೆಗೆ ನೀವು ನನಗೆ ಜೀವನ ನಿರ್ವಹಣೆಗೆ ವೆಚ್ಚ ಕೊಡಬೇಕಾಗುತ್ತದೆ ಎಂದು ಹೇಳಿ.

ಗಂಡ ದೈಹಿಕ ಹಿಂಸೆ ಕೊಡುತ್ತಿದ್ದರೆ ಅದನ್ನು ಸಹಿಸಿಕೊಂಡು ಕೂತಿರಬೇಡಿ. ಪೊಲೀಸ್‌ ಅಥವಾ ಮಹಿಳಾ ಆಯೋಗದ ನೆರವು ಪಡೆದುಕೊಳ್ಳಿ.

ವರದಕ್ಷಿಣೆಯಾಗಿ ದೊರೆತ ಆಭರಣಗಳನ್ನು ಜೋಪಾನದಿಂದ ಕಾಯ್ದಿಡಿ. ಕಾನೂನಿನನ್ವಯ ಹೆಂಡತಿಗೆ ಅದರ ಹಕ್ಕು ಇರುತ್ತದೆ.

ಗಂಡ ಮದ್ಯ ವ್ಯಸನಿಯಾಗಿರುವುದು, ಮದುವೆಯಾದ ಕೆಲವು ದಿನಗಳಲ್ಲಿಯೇ ಪತ್ತೆಯಾಗುತ್ತದೆ. ತವರಿನವರಿಗೆ ಈ ವಿಷಯ ಹೇಳಿದರೆ ಅವರಿಗೆ ದುಃಖವಾಗುತ್ತದೆ ಎಂದು ಭಾವಿಸಿ ಹೇಳದೇ ಇರಬೇಡಿ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ವಿಷಯ ತಿಳಿದು ಅವರಿಗೆ ಇನ್ನೂ ಬಹಳ ದುಃಖವಾಗುತ್ತದೆ, ಅದಕ್ಕೆ ಅವಕಾಶ ಕೊಡಬೇಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ