“ಓಹ್ ಇದಾ ವಿಷಯ…… ಎಂಥ ಸುದ್ದಿ ಕೊಟ್ಟೆ ನನ್ನ ಗೆಳತಿ. ಬಹಳ ಥ್ರಿಲ್ ಆಯಿತು,” ಎಂದು ಪಾರ್ವತಿ ಹೇಳಿದಳು.
“ನಿಧಾನವಾಗಿ ಮಾತಾಡು. ಗೋಡೆಗಳಿಗೂ ಕಿವಿ ಇರುತ್ತದೆ. ಈ ವಿಷಯ ಆಫೀಸಿನಲ್ಲಿ ಗೊತ್ತಾಗದಿರಲಿ,” ಎಂದು ನಾದಿರಾ ಪಾರ್ವತಿಯ ಕೈ ಒತ್ತಿ ಹಿಡಿದು ಹೇಳಿದಳು.
`ಅದೆಂಥ ಹ್ಯಾಂಡ್ ಸಮ್ ಆಗಿದ್ದಾನೆ ಸಚಿನ್. ಜಿಮ್ ನಲ್ಲಿ ಕೆತ್ತಿ ಮಾಡಿಸಿದಂತಹ ದೇಹ, ಆದರೆ ಇದೆಲ್ಲ ಆದದ್ದು ಯಾವಾಗ?’ ಪಾರ್ವತಿಗೆ ಮತ್ತಷ್ಟು ಕುತೂಹಲವಿತ್ತು. ಆ ಸುದ್ದಿ ಕೂಡ ಹಾಗೆಯೇ ಇತ್ತು. ಅದೂ ಕೂಡ ತನ್ನ ಏಕೈಕ ಆಪ್ತ ಗೆಳತಿಯ ಬಗ್ಗೆ.
ನಾದಿರಾ ಮೊದಲ ಬಾರಿ ಸಚಿನ್ ನನ್ನು ಕಂಪನಿಯ ಟೀಮ್ ಮೀಟಿಂಗ್ ನಲ್ಲಿ ನೋಡಿದಾಗ, ಅವಳ ಕಣ್ಣುಗಳು ಅವನ ಮೇಲೆಯೇ ನೆಟ್ಟಿದ್ದವು. ಎತ್ತರದ ಕಾಯ, ಶರ್ಟ್ ನ ಹೊರಗೆ ಇಣುಕುತ್ತಿದ್ದ ದಷ್ಟಪುಷ್ಟ ತೋಳುಗಳು. ಅದು ಜಿಮ್ ಟ್ರೇನಿಂಗ್ ನ ಪರಿಣಾಮ ಎನ್ನುವುದನ್ನು ಎತ್ತಿ ತೋರಿಸುತ್ತಿದ್ದವು. ಅದಕ್ಕೆ ಮೇಲಾಗಿ, ಇಂದಿನ ಲೇಟೆಸ್ಟ್ ಫ್ಯಾಷನ್ ಆಗಿದ್ದ ಟ್ರಿಮ್ ಮಾಡಿದ ಗಡ್ಡ. ನಾದಿರಾಗೆ ಫ್ಯಾಷನೆಬಲ್ ಜನರು ಬಹಳ ಇಷ್ಟವಾಗುತ್ತಿದ್ದರು. ಅವಳೂ ಕೂಡ ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಹುಡುಗಿಯಾಗಿದ್ದಳು.
ಸಚಿನ್ ನ ದೃಷ್ಟಿ ಕೂಡ ಅವಳ ಮೇಲೆ ನೆಟ್ಟಿತ್ತು. ನಾದಿರಾಳ ತೆಳ್ಳನೆಯ ದೇಹ, ಆಕರ್ಷಕ ಬಣ್ಣರೂಪ, ಮುತ್ತಿನಂತಹ ಹಲ್ಲುಗಳು, ಆತ್ಮವಿಶ್ವಾಸ ಭರಿತ ಮೋಹಕ ಮುಗುಳ್ನಗು. ಉದ್ದನೆಯ ಕೂದಲು, ಎದುರಿಗಿನ ವ್ಯಕ್ತಿಯನ್ನು ಮೋಹಪಾಶಕ್ಕೆ ಒಳಗಾಗಿಸಲು ಸಾಕಷ್ಟಾಗಿದ್ದವು. ಅವಳ ದೊಡ್ಡ ದೊಡ್ಡ ಕಪ್ಪು ಕಣ್ಣುಗಳು, ಅದಕ್ಕೆ ಹೊಂದುವಂತಹ ಬಂಗಾರ ಬಣ್ಣದ ಫ್ರೇಮ್ ವುಳ್ಳ ಕನ್ನಡಕ ಅವಳನ್ನು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿತ್ತು.
ಸಚಿನ್ ಹಾಗೂ ನಾದಿರಾ ಜೊತೆ ಜೊತೆಗೆ ಕೆಲಸ ಮಾಡುತ್ತಾ 6 ತಿಂಗಳಾಗುತ್ತಾ ಬಂದಿತ್ತು. ಆಫೀಸಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ರೊಮ್ಯಾನ್ಸ್ ಅವರಲ್ಲಿ ಮೊಳಕೆ ಒಡೆದಿತ್ತು. ಕಣ್ಣುಗಳ ಸನ್ನೆಯಿಂದ ಆರಂಭವಾದ ಅವರ ಪ್ರೀತಿ ಬಳಿಕ ಇಬ್ಬರೂ ಜೊತೆ ಜೊತೆಗೆ ಕುಳಿತು ಊಟ ಮಾಡಲು ಪ್ರೇರೇಪಿಸಿತು. ಒಮ್ಮೊಮ್ಮೆ ಅವರು ಬೆಂಗಳೂರಿನ ಜನದಟ್ಟಣೆಯಿಲ್ಲದ ಕಡೆ ಸಂಜೆ ಹೊತ್ತು ಸುತ್ತಾಡಲು ಹೊರಟುಬಿಡುತ್ತಿದ್ದರು. ಬಳಿಕ ಈವ್ನಿಂಗ್ ಡೇಟ್ ಗೆಂದು ಸಿನಿಮಾಕ್ಕೋ, ಡಿನ್ನರ್ ಗೊ ಹೋಗುತ್ತಿದ್ದರು. ಏಕೆಂದರೆ ಆಫೀಸಿನಲ್ಲಿ ಇದಕ್ಕೆಲ್ಲ ಅವಕಾಶ ಇರುತ್ತಿರಲಿಲ್ಲ. ಹೀಗಾಗಿ ಅವರು ಹೊರಗಡೆಯೇ ಭೇಟಿ ಆಗುತ್ತಿದ್ದರು. ಆದರೆ ಅದಕ್ಕೆ ಅವಕಾಶ ಸಿಗುತ್ತಿದ್ದುದು ಬಹಳ ಕಡಿಮೆಯೇ.
ನಾದಿರಾ ಹಾಗೂ ಸಚಿನ್ ರ ಮನೆಯವರು ಧಾರ್ಮಿಕ ಚಿಂತನೆಗೆ ಒಳಗಾದರು. 21ನೇ ಶತಮಾನದ ಆಧುನಿಕ ವಿಚಾರಧಾರೆಯ ಮಧ್ಯೆಯೂ ಧರ್ಮದ ಸಂಕೋಲೆಗಳು ಬಲವಾಗಿ ಬಿಗಿಯಲ್ಪಟ್ಟಿವೆ. ತಮ್ಮ ಮಕ್ಕಳನ್ನು ಸ್ವಾವಲಂಬಿಯಾಗಿಸಿರುವುದರ ಹೊರತಾಗಿ, ಅವರಿಗೆ ತಮ್ಮ ಜೀವನದ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಕೊಡುವುದಿಲ್ಲ. ಹಿಂದೂ ಮುಸ್ಲಿಂ ಆಗಿರುವುದರ ಕಾರಣದಿಂದ ಈ ಸಂಬಂಧಕ್ಕೆ ಮನೆಯವರು ಅನುಮತಿ ಸಿಗುವುದರ ಆಶಾಭಾವನೆ ಬಹಳ ಕಡಿಮೆ ಇತ್ತು. ಇಬ್ಬರ ನಡುವೆ ಇದ್ದ ಬಲಿಷ್ಠ ಧರ್ಮದ ಗೋಡೆಯನ್ನು ದಾಟುವುದು ಅಷ್ಟು ಸುಲಭವಿರಲಿಲ್ಲ.
ರೊಮ್ಯಾನ್ಸ್ ನ ದಾರಿಯಲ್ಲಿ ಅಷ್ಟಿಷ್ಟು ಮುಂದೆ ಸಾಗಿದ ಬಳಿಕ ಇಬ್ಬರೂ ತಮ್ಮ ತಮ್ಮ ದಾರಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದರು. ಆದರೆ ಮದುವೆಯ ಮಾತನ್ನು ಮನೆಯಲ್ಲಿ ಯಾರು ಪ್ರಸ್ತಾಪಿಸಬೇಕು ಎಂಬ ಬಗ್ಗೆ ಚರ್ಚೆಗೆ ಬಂದಾಗ, ಇಬ್ಬರೂ ಗೊಂದಲಕ್ಕೆ ಸಿಲುಕುತ್ತಿದ್ದರು. ನಾದಿರಾಳ ಮನೆಯಲ್ಲಿ ಒಪ್ಪಿಗೆ ಸಿಗುವುದು ಅಸಾಧ್ಯ ಎಂಬಂತಹ ಸ್ಥಿತಿ ಇತ್ತು. ಸಚಿನ್ ನ ಮನೆಯವರು ಕೂಡ ಈ ಮದುವೆಗೆ ಸಿದ್ಧರಾಗಬಹುದು ಎಂಬ ನಂಬಿಕೆ ಅವರಿಗಿರಲಿಲ್ಲ. ಈ ಸ್ಥಿತಿಯಿಂದ ಮುಕ್ತಿ ಕಂಡುಕೊಳ್ಳುವ ಏಕೈಕ ಉಪಾಯವೆಂದರೆ ರಿಜಿಸ್ಟರ್ಡ್ ಮ್ಯಾರೇಜ್ ಎನ್ನುವುದು ಇಬ್ಬರಿಗೂ ಅರಿವಾಯಿತು. ಇಬ್ಬರೂ ಕೋರ್ಟ್ ಗೆ ಅರ್ಜಿ ಸಲ್ಲಿಸಿದರು ಹಾಗೂ 1 ತಿಂಗಳ ಬಳಿಕ ಕೋರ್ಟ್ ನಲ್ಲಿಯೇ ಕದ್ದುಮುಚ್ಚಿ ವಿವಾಹ ಮಾಡಿಕೊಂಡರು. ಈಗ ಎರಡೂ ಕುಟುಂಬದವರು ಅವರನ್ನು ತರಾಟೆಗೆ ತೆಗೆದುಕೊಳ್ಳುವುದರ ಹೊರತು ಬೇರೇನೂ ಮಾಡಲು ಸಾಧ್ಯವಿರಲಿಲ್ಲ. ಅವರು ಹೇಗೆ ಊಹಿಸಿದ್ದರೊ, ಹಾಗೆಯೇ ಆಯಿತು. ಎರಡೂ ಕುಟುಂಬದವರಿಗೆ ಮದುವೆಯ ಬಗ್ಗೆ ಗೊತ್ತಾದಾಗ, ಅವರು ಇಬ್ಬರನ್ನೂ ಮನಸಾರೆ ನಿಂದಿಸಿದರು. ಇಬ್ಬರೂ ತಾಯಂದಿರು ಕಣ್ಣೀರು ನೋಡಬೇಕಾಯಿತು. ಹಾಗಂತ ಅವರ ಪ್ರೀತಿಯೇನೂ ದುರ್ಬಲವಾಗಿರಲಿಲ್ಲ. ಅವರ ಕಣ್ಮೀರಿಗೆ ಕರಗಿ ತಮ್ಮ ತಮ್ಮ ಮನೆಗೆ ವಾಪಸ್ ಆಗಲಿಲ್ಲ. ಸಚಿನ್ ಹಾಗೂ ನಾದಿರಾ ತಮ್ಮ ಪ್ರೀತಿಯೊಂದಿಗೆ ಮುನ್ನಡೆದರು. ಅದೇ ನಗರದಲ್ಲಿ ಇಬ್ಬರೂ ಒಂದು ರೂಮಿನ ಫ್ಲಾಟ್ ಬಾಡಿಗೆ ಪಡೆದರು. ಅದು ಅವರಿಗೆ ಸಾಕಷ್ಟಾಗುತ್ತಿತ್ತು. ಮಹಾನಗರಗಳಲ್ಲಿ ಇರುವುದರ ಲಾಭವೆಂದರೆ, ಅಷ್ಟೊಂದು ದೊಡ್ಡ ನಗರದಲ್ಲಿ, ಜನದಟ್ಟಣೆಯ ನಡುವೆ ಸುಲಭವಾಗಿ ಕಳೆದು ಹೋಗಬಹುದಿತ್ತು.
ಒಂದೇ ನಗರದಲ್ಲಿದ್ದೂ ಕೂಡ ಇಬ್ಬರೂ ತಂತಮ್ಮ ಕುಟುಂಬದವರಿಂದ ಬಹಳ ದೂರದಲ್ಲಿದ್ದರು. ನಾದಿರಾ ಹಾಗೂ ಸಚಿನ್ ಅಷ್ಟಿಷ್ಟು ಸಾಮಾನುಗಳೊಂದಿಗೆ ಶಿಫ್ಟ್ ಆದರು. ತಮ್ಮ ವೀಕೆಂಡ್ ನ್ನು ಅವರು ತಮ್ಮ ಹೊಸ ಮನೆ ಸೆಟಲ್ ಮಾಡಲು ಕಳೆದರು. ಸೆಕೆಂಡ್ ಹ್ಯಾಂಡ್ ಸೋಫಾ ಸೆಟ್ ಜೊತೆಗೆ ದುಂಡನೆಯ ಟೇಬಲೊಂದನ್ನು ಖರೀದಿಸಿದರು. ಅದರ ಮೇಲೆ ನಾದಿರಾ ಕೃತಕ ಹೂಗಳ ಬೊಕೆಯನ್ನು ಇರಿಸಿ ಖುಷಿಪಟ್ಟಳು. ರಾತ್ರಿ ತನಕ ಇಬ್ಬರೂ ಮನೆ ಸಿಂಗರಿಸುತ್ತಾ ದಣಿದು ಹೋದರು.
“ಅಡುಗೆ ಯಾರು ಮಾಡೋದು?” ಎಂದು ಕೇಳುತ್ತಾ ನಾದಿರಾ ನಕ್ಕಳು.
“ಇಂದು ಊಟವನ್ನು ಹೊರಗಿನಿಂದ ಆರ್ಡರ್ ಮಾಡೋಣ. ಇದೆಲ್ಲ ಸೆಟಲ್ ಆದ ಬಳಿಕ ನಾವಿಬ್ಬರೂ ಜವಾಬ್ದಾರಿಗಳನ್ನು ನಿಭಾಯಿಸೋಣ,” ಎಂದು ಹೇಳಿದ ಸಚಿನ್ ಉತ್ತರ ನಾದಿರಾಳ ಹೃದಯವನ್ನು ಗೆದ್ದಿತು. ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ತಾನು ಸಚಿನ್ ನನ್ನು ಮದುವೆಯಾದದ್ದು ಅವಳಿಗೆ ಸರಿ ಎನಿಸಿತು.
ಇವತ್ತು ಇಬ್ಬರ ಪ್ರಥಮ ರಾತ್ರಿ. ಆದರೆ ಅವರ ಬೆಡ್ ಗೆ ಯಾವುದೇ ಅಲಂಕಾರವಿಲ್ಲ. ಮೆತ್ತನೆಯ ಹಾಸಿಗೆಯಿಲ್ಲ, ಆದರೆ ಪ್ರೇಮಾಸಕ್ತ ಮನಸ್ಸು ಅವರನ್ನು ಪ್ರೇಮದ ನಶೆಯಲ್ಲಿ ಮುಳುಗುವಂತೆ ಮಾಡಿತ್ತು. ಪ್ರೀತಿಯ ಸುವಾಸನೆ ಅವರ ಮನಸ್ಸನ್ನು ಆಕರ್ಷಿಸಿದರೆ, ಹೊರಗಿನ ಪರಿಮಳದ ಅವಶ್ಯಕತೆಯಾದರೂ ಏನಿದೆ? ಪರಸ್ಪರರ ಬಾಹುಗಳಲ್ಲಿ ಜೋಕಾಲಿ ಆಡುತ್ತಾ, ನಗುನಗುತ್ತಾ ಮಧುರ ಅನುಭೂತಿ ಅವರನ್ನು ಜೀವನದಲ್ಲಿ ಹೆಜ್ಜೆ ಹಾಕುವಂತೆ ಮಾಡಿತ್ತು.
ಸೋಮವಾರದಿಂದ ಇಬ್ಬರೂ ಜೊತೆ ಜೊತೆಗೆ ಆಫೀಸಿಗೆ ಹೋಗತೊಡಗಿದರು. ಕ್ರಮೇಣ ಮನೆಯ ಕೆಲಸ ಕಾರ್ಯಗಳು ಆರಂಭವಾದವು. ಸಚಿನ್ ಮನೆಯ ದಿನಸಿ ಹಾಗೂ ಬಿಲ್ ಮುಂತಾದವುಗಳನ್ನು ತುಂಬುವ ಕೆಲಸ ನೋಡಿಕೊಂಡರೆ, ನಾದಿರಾ ಅಡುಗೆ ಮಾಡುವ ಹಾಗೂ ಮನೆ ಸಂಭಾಳಿಸುವ ಜವಾಬ್ದಾರಿ ತೆಗೆದುಕೊಂಡಳು. ಆದರೆ ಸಾಂಬಾರಿಗೆ ಒಗ್ಗರಣೆ ಕೊಡುವ ಕೆಲಸವನ್ನು ಸಚಿನ್ ನೇ ಮಾಡುತ್ತಿದ್ದ. ಅವನ ಸಾಂಬಾರಿನ ರುಚಿ ಹಾಗಿರುತ್ತಿತ್ತು. ಈಗ ಅವರ ನಡುವೆ ಯಾವುದೇ ಅಡ್ಡಗೋಡೆ ಇರಲಿಲ್ಲ. ಅವರ ಹನಿಮೂನ್ ಪೀರಿಯಡ್ ಚಾಲ್ತಿಯಲ್ಲಿತ್ತು. ಆಫೀಸಿನಿಂದ ಮನೆಗೆ ಮರಳುತ್ತಿದ್ದಂತೆ ನಾದಿರಾ ಅಡುಗೆ ಕೆಲಸದಲ್ಲಿ ಮಗ್ನಳಾದರೆ, ಸಚಿನ್ ಬಟ್ಟೆಗಳನ್ನು ಜೋಡಿಸಿ ಇಡುತ್ತಿದ್ದ. ಬಳಿಕ ಡಿನ್ನರ್ ಮುಗಿಸಿ ಪರಸ್ಪರರ ಬಾಹುಗಳಲ್ಲಿ ಕಳೆದುಹೋಗುತ್ತಿದ್ದರು. ನಾದಿರಾ ಯಾವಾಗಲೂ ಖುಷಿಯಲ್ಲಿ ತೇಲುತ್ತಿದ್ದಳು.
ಮದುವೆಯಾಗಿ 3 ತಿಂಗಳು ಕಳೆದಿತ್ತು. ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಇಬ್ಬರೂ ಒಂದು ನಿರ್ದಿಷ್ಟ ದಿನಚರಿಯ ಭಾಗವೇ ಆಗಿಹೋಗಿದ್ದರು.
“ನಾದಿರಾ ಬೇಗ ಬಾ, ಎಷ್ಟು ತಡ ಮಾಡ್ತಿರುವೆ,” ರಾತ್ರಿ ಬೆಡ್ ರೂಮಿನಿಂದ ಸಚಿನ್ ಕೂಗಿ ಕರೆದ.
ನಾದಿರಾ ಅಡುಗೆಮನೆಯಲ್ಲಿ ಪಾತ್ರೆ ತೊಳೆಯುತ್ತಾ, ಮನಸ್ಸಿಲ್ಲದ ಮನಸ್ಸಿನಿಂದ ಹೇಳಿದಳು, “ಯಾಕೋ ಇವತ್ತು ಬಹಳ ದಣಿವು ಎನಿಸುತ್ತಿದೆ. ಬಹುಶಃ ಪೀರಿಯಡ್ಸ್ ಬರೋದಿದೆ ಅನಿಸುತ್ತೆ. ಹಾಗಾಗಿ ದೇಹದಲ್ಲಿ ಏನೋ ಒಂಥರಾ ಅನಿಸುತ್ತಿದೆ.”
“ಇದಂತೂ ಪ್ರತಿ ತಿಂಗಳ ಸಮಸ್ಯೆ,” ಸಚಿನ್ ನ ಈ ಹೇಳಿಕೆ ನಾದಿರಾಗೆ ಇಷ್ಟವಾಗಲಿಲ್ಲ.
“ನಿನ್ನಿಂದ ಏನು ತಾನೇ ಕೇಳ್ತೀನಿ? ಕೆಲಸವಂತೂ ಮಾಡ್ತಾನೇ ಇದೀನಲ್ಲ?” ಅವಳೂ ಅವನ ಉತ್ತರಕ್ಕೆ ಪ್ರತಿಯಾಗಿ ಉತ್ತರಿಸಿದಳು.
ಆಫೀಸಿನ ಕೆಲಸ ಸಚಿನ್ ಗೆ ಎಷ್ಟು ದಣಿವು ಉಂಟು ಮಾಡುತ್ತಿತ್ತೋ, ನಾದಿರಾಗೂ ಅಷ್ಟು ಸುಸ್ತನ್ನುಂಟು ಮಾಡುತ್ತಿತ್ತು.
“ಈ ನಿನ್ನ ಬೆದರಿಕೆ, ದರ್ಪವನ್ನು ಬೇರೆ ಯಾರ ಮುಂದಾದರೂ ತೋರಿಸಿಕೊ, ನನ್ನ ಮುಂದೆ ಅಲ್ಲ,” ಸಚಿನ್ ಅವಳಿಗೆ ಕೋಪದಿಂದಲೇ ಉತ್ತರಿಸಿದ.
“ಇದೆಂಥ ಮಾತು ಆಡ್ತಿರುವೆ ಸಚಿನ್? ನಿನ್ನ ಇತಿಮಿತಿಯಲ್ಲಿರು. ನಾನು ನಿನ್ನ ಹೆಂಡ್ತಿ,” ನಾದಿರಾಗೂ ಕೋಪ ಬಂತು. ಆದರೆ ಸಚಿನ್ ಇವತ್ತು ಬೇರೆಯೇ ಮೂಡ್ ನಲ್ಲಿದ್ದ. ಅವನು ತಕ್ಷಣೀ ಹಾಸಿಗೆಯಿಂದ ಮೇಲೆದ್ದು ನಾದಿರಾಳ ಜೀನ್ಸ್ ಪ್ಯಾಂಟ್ ನ್ನು ಹಿಡಿದು ಎಳೆದುಕೊಳ್ಳುತ್ತಾ ಹಾಸಿಗೆಯ ಮೇಲೆ ಬೀಳಿಸಿದ.
“ಇದೇನು ಮಾಡ್ತಿರುವೆ ನೀನು?” ನಾದಿರಾ ಜೋರಾಗಿ ಕೇಳಿದಾಗ, ಸಚಿನ್ ಅವಳ ಕೆನ್ನೆಗೆ ಬಲವಾಗಿ ಬಾರಿಸಿದ. ಸಚಿನ್ ಅವಳ ಯಾವೊಂದೂ ಮಾತನ್ನೂ ಕೇಳಿಸಿಕೊಳ್ಳಲಿಲ್ಲ. ಅವಳ ಇಚ್ಛೆಗೆ ವಿರುದ್ಧವಾಗಿ ಅವಳ ದೇಹವನ್ನು ಹಿಂಡಿ ಹಿಪ್ಪೆ ಮಾಡಿದ. ಅವಳೊಂದಿಗೆ ಸಂಪೂರ್ಣ ಸಮಯ ಅವನು ಏನೇನೋ ಗೊಣಗುತ್ತಿದ್ದ, “ನಿನಗೆ ಮೂಡ್ ಇದ್ದಾಗ ಎಲ್ಲ ಸರಿಯೆನಿಸುತ್ತದೆ. ಆದರೆ ನನಗೆ ಮೂಡ್ ಇದ್ದಾಗ…… ನೀನಿಲ್ಲಿರುವಾಗ ನಾನು ಬೇರೆ ಯಾರನ್ನು ಎಳೆದುಕೊಂಡು ಬರೋಕೆ ಆಗುತ್ತೇ….?”
ಅವಳು ಅವನ ಬಾಯಿಂದ ಏನೆನೆಲ್ಲ ಕೇಳಿಸಿಕೊಳ್ಳಬೇಕಾಯಿತು. ಕಾಸಿದ ಸೀಸೆ ಕಿವಿಯಿಂದ ಇಳಿದು ಹೃದಯ ಹಾಗೂ ಮೆದುಳನ್ನು ಘಮ್ಮೆನ್ನುವಂತೆ ಮಾಡಿತ್ತು. ತನ್ನ ದೇಹದ ಹಸಿವನ್ನು ನೀಗಿಸಿಕೊಂಡು ಸಚಿನ್ ಮುಖ ತಿರುಗಿಸಿ ಮಲಗಿದ.
ಸ್ಪಲ್ಪ ಹೊತ್ತು ಹಾಗೆಯೇ ಮಲಗಿದ ಬಳಿಕ ಸಿಡಿಯುತ್ತಿರುವ ತನ್ನ ದೇಹವನ್ನು ಸಂಭಾಳಿಸುತ್ತಾ ಅವಳು ಬಾಥ್ ರೂಮಿಗೆ ಹೋದಳು. ಶವರ್ ಕೆಳಗೆ ಅವಳು ಕೆಳಗೆ ಕುಸಿದು ಬಿದ್ದಳು. ಅವಳು ಅದೆಷ್ಟು ಹೊತ್ತು ಅಲ್ಲಿಯೇ ಬಿದ್ದಿದ್ದಳೊ ಏನೋ, ಅಲ್ಲಿ ಅವಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ನೋವಿನಿಂದ ನರಳುತ್ತಿದ್ದಳು. ಸಚಿನ್ ನ ಯಾವ ಜಿಮ್ ಟೋನ್ ಬಾಡಿಯ ಫ್ಯಾನ್ ಆಗಿದ್ದಳೋ, ಅವನ ಅದೇ ದೇಹ ಅವಳನ್ನು ನೋವಿನಿಂದ ನರಳುವಂತೆ ಮಾಡಿತ್ತು.
ನರಳುತ್ತಿದ್ದ ನಾದಿರಾ ಹಾಸಿಗೆಯ ಒಂದು ತುದಿಗೆ ಅಂಟಿಕೊಂಡು ನಿಧಾನವಾಗಿ ಅಲ್ಲಿಯೇ ಒರಗಿದಳು. ಕಣ್ಣೀರು ಈಗಲೂ ಅವಳ ಕೆನ್ನೆಯನ್ನು ತೊಯ್ಯಿಸಿಬಿಟ್ಟಿತ್ತು. ಆ ಒಂದು ಘಟನೆಯಿಂದ ನಾದಿರಾ ಬಹಳ ಹೆದರಿಹೋಗಿದ್ದಳು. ಅವಳು ತನ್ನ ಕನಸು ಮನಸ್ಸಿನಲ್ಲಿಯೂ ತನ್ನ ರೇಪ್ ಆಗಬಹುದು ಎಂದು ಯೋಚಿಸಿರಲಿಲ್ಲ. ಅದೂ ಕೂಡ ತನ್ನದೇ ಮನೆಯಲ್ಲಿ! ಪ್ರತಿ ರಾತ್ರಿ ನಾದಿರಾ ಸಚಿನ್ ನ ಬಾಹಗಳಲ್ಲಿ ಬಂಧಿಯಾದಾಗ ಆ ಅಪ್ಪುಗೆ ಅವಳಿಗೆ ಅದೆಷ್ಟು ಸುರಕ್ಷಿತ ಎಂದೆನಿಸುತ್ತಿತ್ತು. ಆದರೆ ಇಂದು ನಡೆದ ಘಟನೆ ಯಾವುದೇ ಒಂದು ಕೋನದಲ್ಲೂ ಪ್ರೀತಿಯಂತೂ ಆಗಿರಲಿಲ್ಲ. ಅದೊಂದು ಹಿಂಸೆಯಾಗಿತ್ತು, ಸೇಡಾಗಿತ್ತು. ಅವಳಿಗೆ ಅವನ ಅರ್ಹತೆ ಗೊತ್ತಾಗಿತ್ತು. ಇಂದು ಅವಳಿಗೆ ಜೋರಾಗಿ ಉಸಿರೆಳೆದುಕೊಳ್ಳುವಷ್ಟು ಧೈರ್ಯ ಇರಲಿಲ್ಲ. ಅವಳು ಉಸಿರು ಬಿಗಿಹಿಡಿದು ಆ ರಾತ್ರಿ ಕಳೆದಳು.
ಈ ಪ್ರಕರಣ ನಾದಿರಾಳಲ್ಲಿ ಒಂದು ಬಗೆಯ ತಿರಸ್ಕಾರವನ್ನು ಹುಟ್ಟುಹಾಕಿತು. ಬೆಳಗ್ಗೆ ಸಚಿನ್ ಏಳುವ ಮೊದಲೇ ಅವಳು ತಿಂಡಿಯನ್ನು ಸಿದ್ಧಪಡಿಸಿದಳು. ಅವಳು ಅವನನ್ನು ಹೇಗೆ ಎದುರಿಸುತ್ತಾಳೋ ಏನೋ? ಅವನು ಏಳುವುದನ್ನು ನಿರೀಕ್ಷಿಸುವುದಕ್ಕಿಂತ ಅಡುಗೆ ಮನೆಯ ಕೆಲಸ ಮುಗಿಸುವುದು ಉತ್ತಮ ಎಂದು ಅವಳಿಗನ್ನಿಸಿತು.
ಅಷ್ಟರಲ್ಲಿ ಸಚಿನ್ ಧ್ವನಿ ಕೇಳಿ ನಾದಿರಾ ಚಕಿತಳಾದಳು. ಅವಳು ಹಿಂತಿರುಗಿ ನೋಡಿದರೆ, ಸಚಿನ್ ಸಂಕೋಚದಿಂದ ಮುಖ ಕೆಳಗೆ ಮಾಡಿ ನಿಂತಿದ್ದ.
ಮುಖದಲ್ಲಿ ಕಳವಳದ ಕಳೆ ಹೊತ್ತಿದ್ದ ಅವನು, “ನನ್ನನ್ನು ಕ್ಷಮಿಸು ನಾದಿರಾ, ನಾನು ನಿನ್ನ ಜೊತೆಗೆ ಹೇಗೆ ವರ್ತಿಸಿದೆನೊ, ಅದು ಕ್ಷಮೆಗೆ ತಕ್ಕುದಲ್ಲ ಎನ್ನುವುದು ನನಗೂ ಗೊತ್ತು. ನಿನ್ನೆ ರಾತ್ರಿ ನನಗೆ ಅದೇನಾಗಿತ್ತೋ ಏನೋ? ನಾನು ನಿನ್ನೊಂದಿಗೆ ಆ ರೀತಿ ವರ್ತಿಸಿದೆ. ನಿನಗೆ ನನ್ನ ಬಾಸ್ ಬಗ್ಗೆ ಗೊತ್ತೇ ಇದೆಯಲ್ಲ, ನಿನ್ನೆ ಇಡೀ ದಿನ ಅವನು ನನ್ನನ್ನು ಅವಮಾನಗೊಳಿಸಿದ. ಬಹುಶಃ ಇದೇ ಕಾರಣದಿಂದ ನನ್ನ ಮನಸ್ಸು ನನ್ನ ಹಿಡಿತದಲ್ಲಿ ಇರಲಿಲ್ಲ. ಪ್ಲೀಸ್…. ಪ್ಲೀಸ್….. ನನ್ನನ್ನು ಕ್ಷಮಿಸು. ಇನ್ನೆಂದೂ ಈ ರೀತಿ ಆಗದು,” ಎಂದು ಹೇಳಿದ.
ಸಚಿನ್ ಎಲ್ಲಿಯವರೆಗೆ ಕ್ಷಮೆ ಯಾಚಿಸುತ್ತಲೇ ಇದ್ದನೆಂದರೆ, ಅವಳು ಒಪ್ಪಿಗೆ ಸೂಚಿಸು ತನಕ ಸಚಿನ್ ಕ್ಷಮೆ ಯಾಚನೆಯಲ್ಲಿ ಯಾವುದೇ ಹಿಂದೇಟು ಹಾಕಲಿಲ್ಲ, “ನನ್ನ ಮೇಲೆ ನಂಬಿಕೆ ಇಡು ನಾದಿರಾ…. ಇನ್ನೆಂದೂ ಹೀಗೆ ಆಗದು,” ಸಚಿನ್ ಮತ್ತೆ ಮತ್ತೆ ಕ್ಷಮೆ ಯಾಚಿಸಿದ್ದರಿಂದ ಅವಳಿಗೂ ಕೂಡ ಅದು ಸಚಿನ್ ನ ಮೊದಲ ಹಾಗೂ ಕೊನೆಯ ತಪ್ಪು ಆಗಿರುತ್ತದೆಂದು ಅನಿಸಿತು. ಈ ಸಲ ಅವಳು ಸಚಿನ್ ನನ್ನು ಕ್ಷಮಿಸಿದಳು.
ನಾದಿರಾ ಈಗ ಸಾಕಷ್ಟು ಬದಲಾಗಿದ್ದಳು. ಅವಳಲ್ಲಿನ ಈ ಬದಲಾವಣೆಯನ್ನು ಎಲ್ಲಕ್ಕೂ ಮೊದಲು ಗುರುತಿಸಿದವಳು ಪಾರ್ವತಿ.
“ನಿನ್ನ ಆತ್ಮವಿಶ್ವಾಸಕ್ಕೆ ಏನಾಗಿದೆ?” ಎಂದು ಅವಳು ಕೇಳಿದಳು.
ಎಲ್ಲಾ ಕಡೆಯಿಂದ ಬರುತ್ತಿದ್ದ ಪ್ರಶ್ನೆಗಳಿಂದ ಅವಳಲ್ಲಿ ಬದಲಾವಣೆಯೇನೋ ಆಗಲಿಲ್ಲ. ಅವಳ ಆತ್ಮವಿಶ್ವಾಸ ಮತ್ತಷ್ಟು ಕುಸಿಯುವಂತಾಯಿತು.
ಅದೇ ದಿನಗಳಲ್ಲಿ ಅವರ ಆಫೀಸಿಗೆ ವಿನೋದ್ ಎಂಬ ಹುಡುಗ ಜಾಯಿನ್ ಆದ. ಅವನು ಆಕರ್ಷಕ ವ್ಯಕ್ತಿತ್ವದ, ತಿಳಿವಳಿಕೆಯುಳ್ಳ ಹುಡುಗ. ಮೊದಲ ನೋಟದಲ್ಲೇ ಅವನು ಪಾರ್ವತಿಗೆ ಇಷ್ಟವಾದ.
“ಅದೆಷ್ಟು ಹ್ಯಾಂಡ್ ಸಮ್ ಆಗಿದ್ದಾನೆ ವಿನೋದ್? ನನಗೆ ಅವನ ಟೀಮಿಗೆ ಹೋಗಬೇಕೆನಿಸುತ್ತೆ,” ಪಾರ್ವತಿ ನಗುತ್ತಾ ಹೇಳಿದಾಗ, ನಾದಿರಾ ಕೂಡ ತನ್ನ ಅಭಿಪ್ರಾಯ ತಿಳಿಸಿದಳು, “ಅಂದಹಾಗೆ ಅವನು ಸ್ಮಾರ್ಟ್ ಆಗೇನೋ ಇದ್ದಾನೆ. ಆದರೆ ಅವನಿಗೆ ಯಾರೂ ಗರ್ಲ್ ಫ್ರೆಂಡ್ ಇಲ್ಲದೇ ಇರಲಿ.”
“ಮತ್ತೆ ಬಾಯ್ ಫ್ರೆಂಡ್ ಕೂಡಾ,” ಎಂದು ಹೇಳುತ್ತಾ ಇಬ್ಬರ ಗೆಳತಿಯರೂ ನಕ್ಕರು.
ಸಂಜೆ ನಾದಿರಾ ಮನೆಗೆ ವಾಪಸ್ಸಾದಾಗ, ಕಾಲ್ ಬೆಲ್ ಮಾಡಿದರೂ, ಸಚಿನ್ ಬಾಗಿಲು ತೆರೆಯಲಿಲ್ಲ. ನಾದಿರಾ ತನ್ನ ಬ್ಯಾಗಿನಲ್ಲಿದ್ದ ಬೀಗದ ಕೈ ಎತ್ತಿಕೊಂಡು ಬಾಗಿಲು ತೆರೆದು ಒಳಗೆ ಹೋದಳು. ಅವಳು ಒಳಗೆ ಪ್ರವೇಶಿಸುತ್ತಿದ್ದಂತೆ ಎದುರಿಗಿನ ಸೋಫಾ ಮೇಲೆ ಸಚಿನ್ ಕೂತಿರುವುದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು.
“ನೀನು ಮನೆಯಲಿದ್ದೂ ಕೂಡ ಬಾಗಿಲು ಏಕೆ ತೆರೆಯಲಿಲ್ಲ…? ನೀನಿನ್ನೂ ಆಫೀಸಿನಿಂದ ಬಂದಿಲ್ಲವೆಂದು ನಾನು ತಿಳಿದಿದ್ದೆ,” ಎಂದು ಕೇಳಿದಳು.
ನಾದಿರಾ ಇನ್ನೂ ಏನೇನೋ ಹೇಳಬೇಕು ಎನ್ನುಷ್ಟರಲ್ಲಿ ಸಚಿನ್ ಅವಳ ಕೂದಲು ಹಿಡಿದು ನೆಲಕ್ಕೆ ನೂಕಿದ. ನಾದಿರಾಗೆ ಒಮ್ಮೆಲೆ ಆಘಾತವಾಗಿತ್ತು. ಅವಳು ನೆಲದಲ್ಲಿ ಕುಕ್ಕರಿಸಿಕೊಂಡಳು. ಸಚಿನ್ ನ ದೇಹದಲ್ಲಿ ಮತ್ತೆ ಭೂತ ಪ್ರವೇಶವಾಗಿತ್ತೇನೊ. ಅವನಿಗೆ ಅವಳ ಕೂಗು ಆಕ್ರಂದನ ಯಾವುದೂ ಕೇಳಿಸಲಿಲ್ಲ. ಆ ಬಳಿಕ ಅವಳ ಸೊಂಟಕ್ಕೆ ಕೈ ಹಾಕಿ ನೆಲದ ಮೇಲೆ ದರದರನೆ ಎಳೆದೊಯ್ದು ಕೋಣೆಗೆ ತಳ್ಳಿದ. ನಂತರ ಪ್ಯಾಂಟ್ ಬೆಲ್ಟ್ ಬಿಚ್ಚಿ ಅವಳ ಮೇಲೆ ಬೀಸತೊಡಗಿದ.
ನಾದಿರಾ ನಲುಗಿ ಹೋದಳು. ಅವಳು ತನ್ನನ್ನು ರಕ್ಷಿಸಿಕೊಳ್ಳಲು ಅವನ ಕೈಯ್ಯಲ್ಲಿದ್ದ ಬೆಲ್ಟ್ ಹಿಡಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅದೆಲ್ಲ ವಿಫಲ ಪ್ರಯತ್ನವಾಯಿತು ಅಷ್ಟೇ. 5-6 ಬಾರಿ ಅವಳನ್ನು ಬೆಲ್ಟ್ ನಿಂದ ಹೊಡೆದು, ಅವಳನ್ನು ಹಾಸಿಗೆಯ ಮೇಲೆ ತಳ್ಳಿ ಅವಳ ಬಟ್ಟೆಗಳನ್ನು ಕಳಚಿ, ಹದ್ದಿನಂತೆ ಅವಳ ಮೇಲೆ ಮುಗಿಬಿದ್ದ. ನಾದಿರಾಳ ಬಿಕ್ಕಳಿಕೆ, ರೋಧನ, ಅವಳ ನೋವಿನ ಕೂಗು ನಿರ್ಜೀವ ಗೋಡೆಗಳಿಗೆ ಅಪ್ಪಳಿಸಿ ಅದೇ ಕೋಣೆಯಲ್ಲಿ ಹಾಸಿಗೆಯ ಮೇಲೆ ಮೂಲೆಗುಂಪಾದವು.
ತನ್ನ ಬಲವನ್ನೆಲ್ಲ ಉಪಯೋಗಿಸಿದ ಸಚಿನ್ ಮಗ್ಗಲು ಬದಲಿಸಿ ಮಲಗಿದ. ಅವಳು ಮಲಗಿರಲಿಲ್ಲ. ಅವನ ಉಸಿರಾಟದ ಏರಿಳಿತ ಅವಳ ಕಿವಿಗೆ ಬೀಳುತ್ತಿತ್ತು. ಹೆದರಿಕೆಯಿಂದ ನಾದಿರಾ ತನ್ನ ಉಸಿರನ್ನು ಎಷ್ಟು ಸಾಧ್ಯವೋ ಅಷ್ಟು ತಡೆಹಿಡಿದಿದ್ದಳು. ಇಂದಂತೂ ಅವಳು ಬಹಳ ಹೆದರಿಕೊಂಡಿದ್ದಳು. ಅವಳು ಸಚಿನ್ ಎದುರು ಮುಖ ಎತ್ತಿ ಮಾತನಾಡುವ ಧೈರ್ಯ ಕೂಡ ಕಳೆದುಕೊಂಡು ಬಿಟ್ಟಿದ್ದಳು. ತನ್ನನ್ನು ತಾನು ನಿಸ್ಸಹಾಯಕಳು, ಅವಮಾನಿತಳು ಎಂಬ ಮನಸ್ಥಿತಿಯಲ್ಲಿದ್ದಳು.
ರಾತ್ರಿ ಕಳೆದುಹೋಯಿತು. ಬೆಳಗ್ಗೆ ನಾದಿರಾ ಆಫೀಸಿಗೆ ಹೋಗುವ ಸ್ಥಿತಿಯಲ್ಲಿರಲಿಲ್ಲ. ಮುಖ ಹಾಗೂ ದೇಹದ ಮೇಲೆ ಬೆಲ್ಟಿನ ಗುರುತುಗಳು ಅವನ ದೌರ್ಜನ್ಯವನ್ನು ಎತ್ತಿ ತೋರಿಸುತ್ತಿದ್ದವು. ಅವಳ ದೇಹದಲ್ಲಿ ಅಸಹನೀಯ ನೋವು ಇತ್ತು. ಅವಳ ಕೈ ಕಾಲುಗಳು ಅವಳಿಗೆ ಜೊತೆ ಕೊಡುವ ಸ್ಥಿತಿಯಲ್ಲಿರಲಿಲ್ಲ.
ಪ್ರತಿದಿನ ಬೆಳಗ್ಗೆ ಅಲಾರಂ ಆದಾಗ ಅವಳಿಗಿಂತ ಮೊದಲೆ ಸಚಿನ್ ಎದ್ದ. ರಾತ್ರಿಯ ಅವನ ಮದ ಇಳಿದಿತ್ತು. ಇವನು ದಬಕ್ಕನೇ ಅವಳ ಮುಂದೆ ನಿಂತಾಗ ಅವಳಿಗೆ ಒಮ್ಮೆಲೆ ಆತಂಕ, ಗಾಬರಿಯಿಂದ ಅವಳ ಮುಖ ಬಿಳಿಚಿಕೊಂಡಿತು. ಕಣ್ಣುಗಳು ಪಿಳಿಪಿಳಿ ಅಂತಾ ಅವನನ್ನೇ ದೃಷ್ಟಿಸುತ್ತಿದ್ದ. ಆದರೆ ಸಚಿನ್ ನ ಶಕ್ತಿಯ ಭೂತ ಇಳಿದಿತ್ತು.
“ನನ್ನನ್ನು ಕ್ಷಮಿಸು ನಾದಿರಾ…. ನಾನು ಹಾಗೆ ಮಾಡಬಾರದಿತ್ತು….. ನಾನು ನಿನ್ನ ಮೇಲೆ ಕೈ ಎತ್ತಬಾರದಿತ್ತು. ಆದರೆ ನಾನು ಏನು ತಾನೇ ಮಾಡಲು ಸಾಧ್ಯವಿತ್ತು? ಇದರಲ್ಲಿ ನಿನ್ನದು ಕೂಡ ತಪ್ಪಿದೆ. ನೀನು ನಿನ್ನೆಯಷ್ಟೇ ಬಂದ ವಿನೋದ್ ಗೆ ಅಷ್ಟೊಂದು ಮಹತ್ವ ಕೊಡುತ್ತೀಯಾ ಅಂತ ನಾನು ಕನಸಿನಲ್ಲೂ ಎಣಿಸಿರಲಿಲ್ಲ. ನೀನು ನನ್ನನ್ನೇ ಪ್ರೀತಿಸ್ತೀಯಾ ಅಂದುಕೊಂಡಿದ್ದೆ. ಆದರೆ ನೀನು….” ಅವನು ನಾದಿರಾಳ ಮೇಲೆ ಆರೋಪ ಹೊರಿಸುತ್ತಾ ಮಾತನಾಡಿದ.
“ಇದೇನು ಹೇಳುತ್ತಿರುವೆ ಸಚಿನ್. ನಾನು ನಿನ್ನನ್ನು ಪ್ರೀತಿಸ್ತೀನಿ,” ಎಂದು ಹೇಳುತ್ತಾ ಅವಳು ಬಿಕ್ಕಳಿಸುತ್ತಾ, “ನಾನು ಪಾರ್ವತಿ ಜೊತೆ ಸೇರಿ ತಮಾಷೆ ಮಾಡ್ತಿದ್ದೆ. ಆದರೆ ನೀನು ಹೀಗೆ ತಪ್ಪು ಭಾವಿಸ್ತೀಯಾ ಅಂತ ನನಗೆಲ್ಲಿ ಗೊತ್ತಿತ್ತು?” ಎಂದು ಹೇಳ್ತಾ ಹೇಳ್ತಾ ಅವಳು ಅಳತೊಡಗಿದಳು.
“ಅದೇನು ತಮಾಷೆಯ ಮಾತಾ? ನನಗೆ ಇಂಥ ತಮಾಷೆ ಒಂದಿಷ್ಟೂ ಇಷ್ಟವಾಗುವುದಿಲ್ಲ. ನಿಮ್ಮಿಬ್ಬರ ಮಾತು ಕೇಳಿ ನಾನೆಷ್ಟು ದುಃಖಿತನಾದೆ ನಿನಗೆ ಗೊತ್ತಾ?” ಎಂದು ಹೇಳುತ್ತಾ ಅವನು ಮುಖ ಊದಿಸಿಕೊಂಡ. ಅವನ ಕಣ್ಣುಗಳಲ್ಲಿ ಇನ್ನೂ ರೋಷದ ಕಿಡಿಗಳು ಕಾಣಿಸುತ್ತಿದ್ದವು.
ಅವನ ಕಣ್ಣುಗಳಲ್ಲಿನ ಭಾವನೆಯನ್ನು ಓದಿ, ಅವನ ಕ್ಷಮಾಪಣೆ ಕೇಳಿಸಿಕೊಂಡು ನಾದಿರಾ ಅವನಿಗೆ 2ನೇ ಅವಕಾಶ ಕೊಡಲು ನಿರ್ಧರಿಸಿದಳು. ಪ್ರೀತಿಯಲ್ಲಿ 3, 5, 8, 10ನೇ ಅವಕಾಶ ಕೊಡುವುದು ಸುಲಭ. ಆದರೆ ಸಂಬಂಧ ಕಡಿದುಕೊಳ್ಳುವುದು ಕಠಿಣ. ಪಿತೃ ಪ್ರಧಾನ ಸಮಾಜದಲ್ಲಿ ಬೆಳೆದು ದೊಡ್ಡವರಾದ ಹುಡುಗಿಯರಿಗೆ ಸಾಮಾನ್ಯವಾಗಿ ಪುರುಷರಿಗಿಂತ ತಮ್ಮದೇ ತಪ್ಪುಗಳು ಎದ್ದು ಕಾಣುತ್ತವೆ. ಪುರುಷರಿಗೆ ಸಂಬಂಧಗಳನ್ನು ನಿಭಾಯಿಸಲು ಬರುವುದಿಲ್ಲ, ಮಹಿಳೆಯರನ್ನು ಅವರು ಸಂವೇದನಾಶೀಲರೂ ಆಗಿರುವುದಿಲ್ಲ. ಅವರದು ಬಿಸಿ ರಕ್ತ, ಮಹಿಳೆಯರಿಗಿಂತ ಹೆಚ್ಚು ಶಕ್ತಿಶಾಲಿ. ಬೇರೆ ಮತ್ತೇನು ಮಾಡಲು ಸಾಧ್ಯ? ಈ ಯೋಚನೆಗೆ ತುತ್ತಾದ ಮಹಿಳೆಯರು ತಮ್ಮಲ್ಲಿಯೇ ತಪ್ಪುಗಳನ್ನು ಹುಡುಕುತ್ತಾರೆ. ಪುರುಷರನ್ನು ತಮಗಿಂತ ಸರ್ವೋಚ್ಚ ಎಂದು ಭಾವಿಸಿ ಕ್ಷಮಿಸುವ ಶಿಕ್ಷೆ, ಇದು ಉನ್ನತ ಶಿಕ್ಷಣ ಹಾಗೂ ಉನ್ನತ ಹುದ್ದೆಯಿಂದಲು ನಿವಾರಿಸಲು ಆಗುವುದಿಲ್ಲ.
ಇಂದು ಹೊಡೆತ ಹಾಗೂ ರೇಪ್ ನ ಬಳಿಕ ನಾದಿರಾ ಸಚಿನ್ ನ ಕಣ್ಣಲ್ಲಿ ಯಾವ ಪಶ್ಚಾತ್ತಾಪ, ಕಣ್ಣೀರು ಕಂಡಳೋ, ಅವನು ತನ್ನ ನೋವನ್ನು ಮರೆತಳು. ಮಹಿಳೆಯರಂತೂ ಯಾವಾಗಲೂ ಅಳುತ್ತಿರುತ್ತಾರೆ. ಆದರೆ ಪುರುಷ ಯಾವಾಗಲಾದರೊಮ್ಮೆ ಅತ್ತರೂ ಅದು ಸರಿ ಕಾಣುತ್ತದೆಯೇ? ಅವಳು ತಕ್ಷಣವೇ ಅವನನ್ನು ಕ್ಷಮಿಸಿಬಿಟ್ಟಳು. ತಪ್ಪು ಅವಳದ್ದೇ ಆಗಿತ್ತು. ಅವಳು ಒಂದು ಸಂಬಂಧದಲ್ಲಿ ಬಂಧಿಯಾಗಿದ್ದೂ ಕೂಡ ಪರಪುರುಷನಿಗಾಗಿ ಇಂತಹ ತಮಾಷೆ ಮಾಡಿದ್ದಳು.
ಆದರೆ ಅಂದು ನಾದಿರಾ ಆಫೀಸಿಗೆ ಹೋಗಲು ಆಗಲಿಲ್ಲ. ಅವಳ ಸ್ಥಿತಿ ಅಷ್ಟು ಸರಿಯಿರಲಿಲ್ಲ. ಒಂದು ದಿನ ವಿಶ್ರಾಂತಿ ಪಡೆದಳು. ಔಷಧಿ ಸೇವಿಸಿ ಮರುದಿನ ಬೆಳಗ್ಗೆ ತನ್ನ ದೇಹದ ಮೇಲಿನ ಪೆಟ್ಟುಗಳಿಗೆ ಮೇಕಪ್ ಸವರಿ ಆಫೀಸ್ ತಲುಪಿದಳು. ಅವಳು ಬಾಹ್ಯವಾಗಿ ನಾರ್ಮಲ್ ಆಗಿದ್ದಳು. ಆದರೆ ಅಂತರ್ಮನದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡು ಸಚಿನ್ ನನ್ನು ಕ್ಷಮಿಸಿದಳು. ಆದರೂ ಅವಳ ಮನಸ್ಸಿನಲ್ಲಿ ಸಚಿನ್ ಬಗೆಗೆ ಒಂದು ರೀತಿಯ ಭಯ ಮನೆ ಮಾಡಿತ್ತು. ಅದರಿಂದ ಅವನ ಯಾವ ಮಾತನ್ನೂ ವಿರೋಧಿಸುತ್ತಿರಲಿಲ್ಲ ಹಾಗೂ ವಾದ ವಿವಾದ ಮಾಡುತ್ತಿರಲಿಲ್ಲ. ಅವನ ಒಂದೊಂದು ಮಾತನ್ನು ಒಪ್ಪಿಕೊಳ್ಳುತ್ತಾ ಹೀಗೆಯೇ ಕೆಲವು ದಿನಗಳು ಕಳೆದವು. ಆದರೆ ಸಚಿನ್ ನ ಕೈ ಮುಕ್ತವಾಗಿತ್ತು. ಅವನು ತನಗೆ ಇಷ್ಟವಾಗದ್ದು ಏನಾದರೂ ಘಟಿಸಿದರೆ, ಯಾವುದೇ ಸಾಮಗ್ರಿ ತಕ್ಷಣವೇ ಸಿಗದಿದ್ದರೆ ಅವಳ ಮೇಲೆ ಕೈ ಎತ್ತುತ್ತಿದ್ದ. ಒಮ್ಮೊಮ್ಮೆ ಜೋರಾಗಿ ಚೀರುತ್ತಿದ್ದ, ಇನ್ನೊಮ್ಮೆ ಒದೆಯುತ್ತಿದ್ದ. ಕೆಲವೊಮ್ಮೆ ರುಚಿಯಿಲ್ಲದ ಊಟದ ತಟ್ಟೆಯನ್ನು ಎಸೆಯುತ್ತಿದ್ದ ಮತ್ತೆ ಕೆಲವು ಸಲ ನನಗೆ ಕೋಪ ತರಿಸ್ತೀಯಾ ಎಂದು ಹೇಳುತ್ತಾ ತನ್ನ ತಾಳ್ಮೆ ಕಳೆದುಕೊಳ್ಳುತ್ತಿದ್ದ.
ಹಿಂಸೆಗೆ ತುತ್ತಾದ ಮಹಿಳೆಯ ವ್ಯಕ್ತಿತ್ವವೇ ಬದಲಾಗಿಬಿಡುತ್ತದೆ. ಅವಳು ತನ್ನೊಳಗೆ ತಾನು ಸೀಮಿತಳಾಗಿ ಬಿಡುತ್ತಾಳೆ. ನಾದಿರಾ ಈಗ ಯಾವಾಗಲೂ ಗಾಬರಿಯಿಂದಿರುತ್ತಿದ್ದಳು. ಸದಾ ಕುಗ್ಗಿದಂತೆ ಇರುತ್ತಿದ್ದಳು.
“ನಿನ್ನ ಆತ್ಮವಿಶ್ವಾಸಕ್ಕೆ ಏನಾಯ್ತು? ಏಕೆ ಹೀಗೆ ಭಯಭೀತಳಾಗಿ ಇರ್ತೀಯಾ?” ಪಾರ್ವತಿ ಕೇಳಿದಳು.
ಇಂತಹ ಪ್ರಶ್ನೆಗಳಿಗೆ ನಾದಿರಾಳ ಬಳಿ ಉತ್ತರವೇ ಇರಲಿಲ್ಲ. ಆದರೆ ಇಂತಹ ಶಬ್ದಗಳು ಮೇಲಿಂದ ಮೇಲೆ ಅವಳ ಆತ್ಮವಿಶ್ವಾಸವನ್ನು ಇನ್ನಷ್ಟು ಕುಗ್ಗಿಸುತ್ತಿದ್ದ. ಯಾವುದೇ ಸಾಕ್ಷರ, ಇಂದಿನ ಆಧುನಿಕ ಯುಗದ ಹುಡುಗಿಗೆ ಇದು ಅತ್ಯಂತ ಕಷ್ಟಕರ ಗಳಿಗೆಯಾಗಿತ್ತು. ತಾನು ಮಾಡಬಾರದ ಸಂಬಂಧದಲ್ಲಿ ಸಿಲುಕಿದ್ದೇನೆ ಎಂಬುದು ಅವಳಿಗೆ ಗೊತ್ತಿತ್ತು. ಆದರೆ ತಾನು ಇಷ್ಟೊಂದು ವಿವಶಳಾಗಿದ್ದೇನೆ ಎಂಬುದನ್ನು ಅವಳು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅವಳಿಗೆ ಈ ಸಂಬಂಧ ಒಂದು ಕಾರಾಗೃಹದ ರೀತಿಯಲ್ಲಾಗಿತ್ತು. ಅಲ್ಲಿ ಅವಳ ಧ್ವನಿಯನ್ನು ಹತ್ತಿಕ್ಕಲಾಗಿತ್ತು. ಅವಳ ದೇಹ ನಿರ್ಲಿಪ್ತ ಹಾಗೂ ಮನಸ್ಸು ಕೂಡ. ತಾನು 21ನೇ ಶತಮಾನದ ಓದು ಬರಹ ಬಲ್ಲ, ಸ್ವಾವಲಂಬಿ ಯುವತಿ ಆಗಿದ್ದೂ ಕೂಡ ತನಗೆ ಈ ಸ್ಥಿತಿ ಬಂದೊದಗಿದೆ ಎಂದು ಅವಳು ಯಾರ ಮುಂದೆ ಹೇಳಲು ಸಾಧ್ಯವಿತ್ತು? ಅಂದಹಾಗೆ ಅವಳು ಕುಟುಂಬದ ವಿರುದ್ಧ ಯಾವ ದಿಟ್ಟ ಹೆಜ್ಜೆ ಇಟ್ಟಿದ್ದಳೋ ಅದನ್ನು ತಪ್ಪು ನಿರ್ಧಾರ ಎಂದು ಸ್ವೀಕರಿಸುವುದು ಅವಳಿಗೆ ಕಠಿಣ ಎಂದೆನಿಸತೊಡಗಿತ್ತು. ತನ್ನಿಚ್ಛೆಯ ಮೇರೆಗೆ ಆಯ್ಕೆ ಮಾಡಿದ ಸಂಬಂಧದಲ್ಲಿನ ಕೊರತೆಗಳನ್ನು ಎತ್ತಿ ತೋರಿಸುವ ಧೈರ್ಯವನ್ನು ಅವಳು ಹೇಗೆ ತಾನೇ ಸ್ವೀಕರಿಸಲು ಸಾಧ್ಯವಿತ್ತು? ಅದಕ್ಕೆ ಜನ ಏನೆಂದು ಹೇಳಬಹುದು?
“ನನ್ನ ದೊಡ್ಡಪ್ಪನ ಮಗ ಕೆಲವು ದಿನಗಳ ಕಾಲ ನಮ್ಮನೆಯಲ್ಲಿರಲು ಬರುತ್ತಾನೆ. 10ನೇ ತರಗತಿ ಕೋಚಿಂಗ್ ಗಾಗಿ ಅವನಿಗೆ ಕೋಚಿಂಗ್ ಹುಡುಕಬೇಕು,” ಅದೊಂದು ದಿನ ಸಂಜೆ ಸಚಿನ್ ಹೇಳಿದ.
“ಹೌದು. ಇಲ್ಲಿ ಕೋಚಿಂಗ್ ಸಿಗೋದು ಕಷ್ಟಕರ ಕೆಲಸವೇನಲ್ಲ,” ನಾದಿರಾ ಅವನು ಹೇಳಿದ್ದಕ್ಕೆ ಒಪ್ಪಿಗೆಯ ಧ್ವನಿಯಲ್ಲಿ ಹೇಳಿದಳು, “ಅವನು ಯಾವಾಗ ಬರುತ್ತಾನೆ? ಅವನಿಗೆ ಊಟದಲ್ಲಿ ಏನೇನು ಇಷ್ಟ ಅಂತ ನನಗೆ ತಿಳಿಸು.”
ಸಚಿನ್ ನ ದೊಡ್ಡಪ್ಪ ಹಾಗೂ ಅವರ ಮಗ ಚಂದನ್ ಮರುದಿನವೇ ಆಗಮಿಸಿದರು. ಇವರಿಬ್ಬರಿಗೂ ಚೆನ್ನಾಗಿ ಹೊಂದಿಕೊಳ್ಳುವಂತೆ ಹೇಳಿದ. ಸಚಿನ್ ನ ದೊಡ್ಡಪ್ಪ ಮರುದಿನವೇ ತಮ್ಮೂರಿಗೆ ಹೊರಟುಬಿಟ್ಟರು. ಚಂದನ್ ನವ ಯುಗದ ಜಾಣ ವಿದ್ಯಾರ್ಥಿಯಾಗಿದ್ದ. ಕೆಲವೇ ದಿನಗಳಲ್ಲಿ ನಾದಿರಾ ಸಚಿನ್ ಗೆ ಬಹಳ ಹೆದರುತ್ತಾಳೆ ಎನ್ನುವುದು ಅವನಿಗೆ ತಿಳಿದುಹೋಯಿತು. ಅವನ ಪ್ರತಿಯೊಂದು ಮಾತನ್ನು ಅವಳು ಆಜ್ಞೆಯಂತೆ ಪಾಲಿಸುತ್ತಾಳೆ ಎನ್ನುವುದು ಗೊತ್ತಾಯಿತು. ಕೋಣೆಯಲ್ಲಿ ಇಬ್ಬರ ನಡುವೆ ಏನು ನಡೆಯುತ್ತದೆ ಎನ್ನುವುದು ಚಂದನ್ ಗೆ ತಿಳಿಯುವುದು ಕಷ್ಟಕರ ಏನಾಗಿರಲಿಲ್ಲ. ಆದರೆ ಎಲ್ಲರೆದುರು ನಾದಿರಾ ಸಚಿನ್ ನ ಮಾತನ್ನು ಮನ್ನಿಸುವುದು, ಕೂಗಿದಾಗ ಓಡೋಡಿ ಬರುವುದು ಕಣ್ಣೆತ್ತಿ ನೋಡಿದಾಗ ಗಾಬರಿಯಾಗುವುದು ಇವೆಲ್ಲ ಚಂದನ್ ಗೆ ತನ್ನಣ್ಣ ಹುಲಿ ಹಾಗೂ ನಾದಿರಾ ಕುರಿ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿತ್ತು.
ಅದೊಂದು ದಿನ ಸಂಜೆ ನಾದಿರಾ ಆಫೀಸಿನಿಂದ ಬಂದು ಅಡುಗೆಗೆ ಸಿದ್ಧ ಮಾಡುತ್ತಿದ್ದಳು. ಆಗ ಚಂದನ್ ಹಿಂದಿನಿಂದ ಸದ್ದಿಲ್ಲದೆ ಬಂದು, ಸಚಿನ್ ಹಾಗೆ ಗಂಭೀರ ಸ್ವರದಲ್ಲಿ, “ನಾದಿರಾ,” ಎಂದು ಕೂಗಿದ.
ಆ ಧ್ವನಿ ಕೇಳಿ ನಾದಿರಾಳಿಗೆ ತನ್ನಿಂದ ಎನೋ ತಪ್ಪಾಗಿದೆ, ಅದಕ್ಕೆ ಸಚಿನ್ ಗೆ ಬೇಸರ ಆಗಿದೆ ಎನಿಸಿತು. ಅವಳಿಗೆ ಭಯ ಆಯಿತು. ಅವಳು ಗಾಬರಿಯಿಂದೀ ಹಿಂತಿರುಗಿ ನೋಡಿದಾಗ, ಎದುರಿಗೆ ಚಂದನ್ ನನ್ನು ಕಂಡು ಹೌಹಾರಿದಳು.
ಅಳು ಹೀಗೆ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿರುವುದನ್ನು ನೋಡಿ ಚಂದನ್ ಚಪ್ಪಾಳೆ ತಟ್ಟುತ್ತಾ, “ನಾನು ಕೂಡ ನಿಮ್ಮನ್ನು ಹೆದರಿಸಿಬಿಟ್ಟೆ. ನಾನೂ ಅಣ್ಣನಿಗಿಂತ ಕಡಿಮೆ ಏನಿಲ್ಲ?” ಎಂದು ಹೇಳಿದ.
ಚಂದನ್ ನ ಈ ಮಾತುಗಳಿಂದ ನಾದಿರಾ ವಿಚಲಿತಳಾದಳು. ಹೊಸ ಪೀಳಿಗೆ ಕೂಡ ಮನೆಯಲ್ಲಿನ ಹಿಂಸೆ ಕಂಡು ಅದನ್ನೇ ಕಲಿತುಕೊಳ್ಳುತ್ತಾರಾ ಅವಳ ತಲೆ ಸುತ್ತಿದಂತೆ ಭಾಸವಾಯಿತು. ಅವನು ಆ ಮನೆಗೆ ಬಂದು 1 ತಿಂಗಳು ಕೂಡ ಆಗಿರಲಿಲ್ಲ. ಆಗಲೇ ಕೀಳು ಮನೋಭಾವ ಬೆಳೆಸಿಕೊಳ್ಳಲು ಶುರು ಮಾಡಿದ್ದ.
ಅದೇ ಯೋಚನೆಯಲ್ಲಿ ನಾದಿರಾ ಮನಸ್ಸಿಲ್ಲದೆ ಅಡುಗೆ ಮಾಡಿದಳು. ಆಗಲೇ ಸಚಿನ್ ಮನೆಗೆ ಬಂದಿದ್ದ. ಅವಳು ಎಲ್ಲರನ್ನೂ ಡೈನಿಂಗ್ ಟೇಬಲ್ ಗೆ ಬರಲು ಆಹ್ವಾನಿಸಿದಳು. ಸಚಿನ್ ಮತ್ತು ಚಂದನ್ ಡೈನಿಂಗ್ ಹಾಲ್ ಗೆ ಬಂದು ಕುಳಿತರು. ನಾದಿರಾ ಅವರಿಬ್ಬರಿಗೆ ಊಟ ಬಡಿಸಿದಳು.
ಸಚಿನ್ ಮೊದಲ ತುತ್ತು ಬಾಯಿಗೆ ಹಾಕಿಕೊಳ್ಳುತ್ತಲೇ ಜೋರಾಗಿ ಚೀರಿದ, “ಸಾಂಬಾರಿನಲ್ಲಿ ಉಪ್ಪು ನಿನ್ನಮ್ಮ ಬಂದು ಹಾಕುತ್ತಾಳೆಯೇ?” ಎಂದು ಹೇಳುತ್ತಾ ಅವನು ಪ್ಲೇಟ್ ನ್ನು ಎತ್ತಿ ನಾದಿರಾಳತ್ತ ಎಸೆದ. ಸ್ಟೀಲ್ ಪ್ಲೇಟ್ ನ ಚೂಪಾದ ತುದಿ ಅವಳ ಹಣೆಗೆ ತಗುಲಿತು. ಬಲ ಭಾಗದ ಹಣೆಯಿಂದ ರಕ್ತ ಜಿನುಗತೊಡಗಿತು. ನಾದಿರಾ ಗಾಬರಿಯಿಂದ ಬಾಥ್ ರೂಮಿಗೆ ಓಡಿದಳು. ಅಲ್ಲಿ ಅವಳು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡಳು. ಅವಳಿಗೆ ಗಾಯಕ್ಕಿಂತ ಹೆಚ್ಚಾಗಿ ತನ್ನ ಸ್ಥಿತಿಯ ಬಗ್ಗೆ ಅಳು ಬಂತು. ತನ್ನ ಬಗ್ಗೆಯೇ ಮರುಕ ಉಂಟಾಯಿತು ಹಾಗೂ ದುಃಖ ಕೂಡ ಆಯಿತು. ಅವನು ತನ್ನೊಂದಿಗೆ ಏನು ಮಾಡುತ್ತಿದ್ದಾನೆ? ಒಂದು ಚಿಕ್ಕ ನಿರ್ಲಕ್ಷ್ಯದ ಕಾರಣದಿಂದ ಆದ ಈ ಘಟನೆ ಅವಳನ್ನು ಬುಡ ಸಮೇತ ಅಲ್ಲಾಡಿಸಿಬಿಟ್ಟಿತು. ಅವನೇಕೆ ತನ್ನ ಜೀವನವನ್ನು ಹೀಗೆ ಹಾಳು ಮಾಡುತ್ತಿದ್ದಾನೆ? ಇದು ಹೀಗೆಯೇ ನಡೆಯುತ್ತಿರುತ್ತಾ? ಈವರೆಗೆ ಈ ಹಿಂಸೆ ದೌರ್ಜನ್ಯ ಮನೆಯೊಳಗೆ, ತಮ್ಮಿಬ್ಬರ ನಡುವೆ ಮಾತ್ರ ನಡೆಯುತ್ತಿತ್ತು. ಇಂದು ಒಂದು ಅತಿಥಿಯ ಎದುರು ಘಟಿಸಿದೆ. ಅಂದರೆ ಮನೆಗೆ ಯಾರೇ ಬಂದರೂ ಸಚಿನ್ ಅವರೆದುರಿಗೆ ಹೀಗೆಯೇ ತನ್ನೊಂದಿಗೆ ವರ್ತಿಸುತ್ತಾನೆಯೇ? ತನಗೆ ಯಾವುದೇ ಮರ್ಯಾದೆ, ಗೌರವ ಇಲ್ಲವೇ? ಮದುವೆಯ ಈ ಘಟ್ಟ ಬಹಳ ಆತಂಕಕಾರಿಯಾಗಿ ಪರಿಣಮಿಸಿತು. ಉಸಿರುಗಟ್ಟುವ ವಾತಾವರಣ, ಇಲ್ಲೂ ಉಸಿರಾಡಲೂ ಆಗಬಾರದು. ಆದರೆ ಜೀವಂತ ಇರಬೇಕು. ನಾದಿರಾ ಪ್ರೀತಿಯಲ್ಲಲ್ಲ, ಹೆದರಿಕೆಯಿಂದ ಕುರುಡಿ ಆಗತೊಡಗಿದ್ದಳು. ಪ್ರೀತಿಯಂತೂ ಬಹಳ ಹಿಂದೆಯೇ ಅವಳಿಂದ ದೂರ ಸರಿದಿತ್ತು. ಈಗಿದ್ದುದು ಕೇವಲ ಜವಾಬ್ದಾರಿಗಳು ಹಾಗೂ ಹೆದರಿಕೆ. ಆ ಕಾರಣದಿಂದ ನಾದಿರಾ ಸದಾ ಕುಗ್ಗಿದಂತೆ ಇರುತ್ತಿದ್ದಳು. ಆದರೆ ಇಂದು ಅದರ ಮೇರೆ ಮೀರಿತು. ಈವರೆಗೆ ಅವಳು ತನ್ನನ್ನೇ ತಾನು ತಪ್ಪಿತಸ್ಥೆ ಎಂದುಕೊಂಡು ಸಚಿನ್ ನನ್ನು ಕ್ಷಮಿಸುತ್ತಾ ಬಂದಿದ್ದಳು. ಆದರೆ ಇಂದು ಇಬ್ಬರ ನಡುವಿನ ವಿಷಯ ಹೊರಗೆ ಹೋಯಿತು. ಮೂರನೇ ವ್ಯಕ್ತಿಯ ಮುಂದೆಯೂ ಅವನಿಗೆ ತನ್ನ ಬಗ್ಗೆ ಏನೂ ಅನ್ನಿಸುವುದಿಲ್ಲವೆಂದರೆ, ಮುಂಬರುವ ಜೀವನ ಇನ್ನಷ್ಟು ಕೆಟ್ಟದಾಗಿರುತ್ತದೆ. ತನ್ನ ಮಕ್ಕಳು ಏನನ್ನು ಕಲಿಯಬಹುದು? ತನ್ನ ಸ್ಥಿತಿ ಸಮಾಜದಲ್ಲಿ ಏನಾಗಬಹುದು? ಇಷ್ಟೊಂದು ಒಳ್ಳೆಯ ಶಿಕ್ಷಣ, ಒಳ್ಳೆಯ ನೌಕರಿ ಮಾಡುತ್ತಿದ್ದರೂ, ನಾದಿರಾಳ ಜೀವನದಲ್ಲಿ ಕೇವಲ ದೌರ್ಜನ್ಯ, ಹೊಡೆತ ತಿನ್ನುವುದೇ ಆಗಿದೆ. ಸದಾ ಕಣ್ಣೀರು ಸುರಿಸುವುದೇ ಆಗಿದೆ. ಇಂತಹ ಜೀವನದ ಬಗ್ಗೆ ಅವಳಿಗೆ ತಿರಸ್ಕಾರ ಉಂಟಾಯಿತು. ತನ್ನ ತಾಯಿ ತಂದೆ ಇದಕ್ಕಾಗಿಯೇ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಲು ಕಲಿಸಿಕೊಟ್ಟರೆ? ಇಂತಹ ಅದೆಷ್ಟೋ ಪ್ರಶ್ನೆಗಳು ಅವಳ ಕಣ್ಮುಂದೆ ಬಂದು ಗಿರಕಿ ಹೊಡೆಯತೊಡಗಿದವು. ಅದೇ ಸ್ಥಿತಿಯಲ್ಲಿ ಅವಳು ಹೊರಗೆ ಬಂದಾಗ, ಸಚಿನ್ ಊಟ ಮುಗಿಸಿರುವುದು ಕಾಣಿಸಿತು. ಕೆಳಗೆ ಬಿದ್ದ ಅನ್ನದ ಕಣಗಳು ಹೇಗಿದ್ದವೋ ಹಾಗೆಯೇ ಇದ್ದವು.
ಅವಳ ಗಂಭೀರ ಸ್ಥಿತಿ ಕಂಡು ಸಚಿನ್ ಅವಳತ್ತ ಧಾವಿಸಿದ, “ಓಹ್, ನಿನಗೆ ಸಾಕಷ್ಟು ಪೆಟ್ಟಾಗಿದೆ ನಾದಿರಾ. ಆಸ್ಪತ್ರೆಗೆ ಹೋಗೋಣ ಬಾ,” ಎಂದು ಕರೆದ.
ಆದರೆ ನಾದಿರಾ ಕೈಸನ್ನೆಯಿಂದಲೇ ಅವನನ್ನು ಅಲ್ಲಿಯೇ ತಡೆದಳು. ಅವಳು ಏಕಾಂಗಿಯಾಗಿ ಮನೆಯಿಂದ ಹೊರಬಂದಳು. ಎದುರಿಗೆ ಬರುತ್ತಿದ್ದ ಆಟೋ ನಿಲ್ಲಿಸಿ ಆಸ್ಪತ್ರೆಗೆ ಹೋಗಲು ಸೂಚಿಸಿದಳು. ಆಸ್ಪತ್ರೆಗೆ ಹೋಗಿ ಅವಳು ಫಾರ್ಮ್ ಭರ್ತಿ ಮಾಡಿದಳು. ಡಾಕ್ಟರ್ ಕಾರಣ ಕೇಳಿದಾಗ ಅವಳು ಕೌಟುಂಬಿಕ ದೌರ್ಜನ್ಯ ಎಂದು ಹೇಳಿದಳು. ಈವೆರೆಗೆ ಅವಳು ಬಹಳ ಸಹಿಸಿಕೊಂಡಿದ್ದಳು. ಇನ್ಮುಂದೆ ಇದಕ್ಕೆಲ್ಲ ಪೂರ್ಣವಿರಾಮ. ಈ ಸಂಬಂಧದಲ್ಲಿ ಅವಳು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಮುಂದೆ ಸಾಗಿದ್ದಳು. ರೆಪ್ಪೆಗಳ ಆಸರೆಯಲ್ಲಿ ಬೆಳೆಯುತ್ತಿದ್ದ ತನ್ನ ಕನಸು ನನಸಾಗಲಿ ಎನ್ನುವುದು ಅವಳ ಬಯಕೆಯಾಗಿತ್ತೇ ಹೊರತು, ಕಣ್ಣೀರ ಕೋಡಿಯಲ್ಲ. ಆ ಕನಸುಗಳು ಕೊಚ್ಚಿ ಹೋಗಬೇಕು ಎಂದಾಗಿರಲಿಲ್ಲ. ತನ್ನ ಈ ಸ್ಥಿತಿ ಕುಟುಂಬದವರಿಗೂ ಗೊತ್ತಾಗುತ್ತದೆ. ಅವರು ಹೇಳಬಹುದು, ನಾವು ಮೊದಲೇ ಬೇಡ ಬೇಡ ಎಂದು ಹೇಳಿದ್ದೆವು. ನಮ್ಮ ಮಾತನ್ನು ಒಪ್ಪಿದ್ದರೆ ಅವಳಿಗಂತೂ ಈ ಸ್ಥಿತಿ ಬರುತ್ತಿರಲಿಲ್ಲ ಎಂದು. ಅನ್ಯ ಧರ್ಮದ ವ್ಯಕ್ತಿಯ ಜೊತೆ ಮದುವೆ ಹಾಗೂ ತನ್ನ ಪ್ರೀತಿಯ ಬಗ್ಗೆ ಅವರು ಬೊಟ್ಟು ಮಾಡಿ ತೋರಿಸಬಹುದು. ಆದರೆ ತಪ್ಪು ಹೆಜ್ಜೆಯ ಅರ್ಥ ಪ್ರೀತಿಯ ಬಗ್ಗೆ ಅಪನಂಬಿಕೆ ಹುಟ್ಟುಬೇಕೆಂದು ಅಲ್ಲ, ತಾನು ಎಂಥದೇ ಕಷ್ಟ ಸಹಿಸಿಕೊಳ್ಳಲು ಸಿದ್ಧಳಿದ್ದೇನೆ, ತಾನು ತನ್ನ ಕಾಲಗಳ ಮೇಲೆ ನಿಲ್ಲಲು ಸಮರ್ಥಳಾಗಿದ್ದೇನೆ. ಇನ್ನುಂದೆ ತಾನು ಯಾರಿಗೂ ಹೊರೆಯಾಗಬೇಕಾದ ಅಗತ್ಯವಿಲ್ಲ ಹಾಗೂ ತನ್ನ ಆತ್ಮಗೌರವಕ್ಕೆ ಹೀಗೆ ಹೆಜ್ಜೆ ಹೆಜ್ಜೆಗೂ ಚ್ಯುತಿ ಬರಬಾರದು. ಈಗ ಅವಳಿಗೆ ಆ ಹೆಜ್ಜೆ ಇಡುವ ಅವಶ್ಯಕತೆ ಇದೆ. ತನಗೂ ಸಂತೋಷದಿಂದಿರುವ ಹಕ್ಕು ಇದೆ.