ಕಥೆ – ರಾಧಿಕಾ ರಾವ್
“ಮೇಡಂ, ನಾನು ಒಳಗೆ ಬರಬಹುದೆ?” ಅಭಿಷೇಕ್ ಬಾಗಿಲ ಹೊರಗಿನಿಂದ ಕೂಗಿ ಕೇಳಿದ.
“ಹೇಳಿ ಏನು ಕೆಲಸವಿದೆ?” ಒಳಗಿನಿಂದ ಧ್ವನಿ ಬಂತು.
“ನಾನು ಒಬ್ಬ ಸೇಲ್ಸ್ ಮನ್. ಹೌಸ್ ವೈಫ್ ಗಳಿಗೆ ಒಂದು ವಿನೂತನ ಆಫರ್ ತೆಗೆದುಕೊಂಡು ಬಂದಿದ್ದೇನೆ,” ಅಭಿಷೇಕ್ ಒಳಗೆ ಇಣುಕುತ್ತಾ ಹೇಳಿದ.
ಸುನಯನಾ ತನ್ನ ಕೂದಲನ್ನು ನೇವರಿಸಿಕೊಳ್ಳುತ್ತಾ ಹೊರಗೆ ಬಂದಳು. ಆ ಸಮಯದಲ್ಲಿ ಅವಳು ನೈಟಿಯಲ್ಲಿದ್ದಳು. ಹಾಲಿನ ಮೈಬಣ್ಣ, ಆಕರ್ಷಕ ಕಣ್ಣುಗಳ ಸುನಯನಾಳ ಸೌಂದರ್ಯ ಯಾರನ್ನಾದರೂ ಮೋಹಿಸುವಂತಿತ್ತು. ಅವಳ ದೊಡ್ಡ ದೊಡ್ಡ ಕಣ್ಣುಗಳಲ್ಲಿ ಕುತೂಹಲ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ಅಭಿಷೇಕ್ ನ ಕಣ್ಣುಗಳಲ್ಲಿ ಇಣುಕುತ್ತಿದ್ದಂತೆಯೇ ಇಬ್ಬರೂ ಸ್ವಲ್ಪ ಹೊತ್ತು ಒಬ್ಬರನ್ನೊಬ್ಬರು ನೋಡುತ್ತಿದ್ದರು. ತನ್ನನ್ನು ತಾನು ಸೇಲ್ಸ್ ಮನ್ ಎಂದು ಹೇಳಿಕೊಳ್ಳುತ್ತಿದ್ದ ಅಭಿಷೇಕ್ ನೀಳ ಕಾಯದ ಸದೃಢ ಯುವಕನಾಗಿದ್ದ.
“ಬನ್ನಿ ಒಳಗೆ, ” ಸುನಯನಾ ಅವನಿಗೆ ಕುಳಿತುಕೊಳ್ಳಲು ಆಗ್ರಹಿಸಿ ಹಾಗೂ ತಾನೂ ಕೂಡ ಸಮೀಪದಲ್ಲಿಯೇ ಕುಳಿತಳು.
“ಹೇಳಿ ಏನು ವಿಷಯ?” ಸುನಯನಾ ಕೇಳಿದಳು.
“ನಾನು ಹೌಸ್ ವೈಫ್ ಗಳಿಗೆ ಒಂದು ಆಫರ್ ತೆಗೆದುಕೊಂಡು ಬಂದಿದ್ದೇನೆ,” ಎಂದ ಅಭಿಷೇಕ್.
“ಎಂತಹ ಆಫರ್….?” ಸುನಯನಾ ಮುಗುಳ್ನಗುತ್ತಾ ಕೇಳಿದಳು.
“ಅಂದಹಾಗೆ, ನನ್ನ ಬಳಿ ಕಿಚನ್ ಅಪ್ಲಯನ್ಸ್ ನ ಒಂದು ಬಿಗ್ ರೇಂಜ್ ಇದೆ. ನಿಮಗೆ ಇಷ್ಟವಾದರೆ ಆನ್ ಲೈನ್ ಆರ್ಡರ್ ಕೂಡ ಕೊಡಬಹುದು. ಮಿಕ್ಸರ್ ಗ್ರೈಂಡರ್, ಜ್ಯೂಸರ್ ಒಂದು ರೇಂಜ್ ಜೊತೆಗೇ ತೆಗೆದುಕೊಂಡು ಬಂದಿದ್ದೇನೆ. ಫಾರ್ ಎ ಟ್ರಯಲ್ ನೀವು ಇದರ ಪ್ರಯೋಗ ಮಾಡಿ ನೋಡಿ. ಇದರ ಜೊತೆಗೆ ಒಂದು ಐರನ್ ಬಾಕ್ಸ್ ಫ್ರೀ. ನಮ್ಮ ಬಳಿ ಬೇರೆ ಯಾವುದೇ ಕಂಪನಿಗಳಿಗಿಂತಲೂ ಕಡಿಮೆ ಬೆಲೆಯ ಬೆಸ್ಟ್ ಆಫರ್ಸ್ ಗಳಿವೆ. ನಮ್ಮ ಈ ಪ್ರಾಡಕ್ಟ್ ಬೇರೆಯವರಿಗಿಂತ ಭಿನ್ನ. ನಾನು ಇವುಗಳ ವಿಶೇಷತೆಯನ್ನು ಒಂದೊಂದಾಗಿ ತಿಳಿಸುತ್ತೇನೆ.”
ಸುನಯನಾ ಬಿಟ್ಟಕಣ್ಣು ಬಿಡದೆ ಅಭಿಷೇಕನ ಕಡೆ ನೋಡುತ್ತಾ, “ಈ ಮಾತಿಲ್ಲದ ಮೂಕ ವಸ್ತುಗಳಲ್ಲಿ ಅದೇನು ವಿಶೇಷತೆ ಇದೆಯೋ ನನಗೆ ಗೊತ್ತಿಲ್ಲ. ಆದರೆ ನನಗಂತೂ ನಿಮ್ಮ ಮಾತಿನಲ್ಲಿ ಗತ್ತುಗಾರಿಕೆ ಇಲ್ಲ ವಿಶೇಷತೆ ಇದೆ ಅನಿಸುತ್ತಿದೆ,” ಹೇಳಿದಳು.
ಅಭಿಷೇಕ್ ಒಮ್ಮೆಲೆ ಸಂಕೋಚಗೊಂಡ. ಬಳಿಕ ನಗುತ್ತಾ, “ಮೇಡಂ, ನೀವು ಹೀಗೆ ಮಾತನಾಡುವುದರ ಮೂಲಕ ಈ ಅನಪೇಕ್ಷಿತ ವಸ್ತುವಿನ ಬೆಲೆಯನ್ನು ಹೆಚ್ಚಿಸುತ್ತಿರುವಿರಿ,” ಎಂದು ಹೇಳಿದ.
“ನಾನೆಲ್ಲಿ ಬೆಲೆ ಹೆಚ್ಚಿಸುತ್ತಿರುವೆ? ಜೀವನದಲ್ಲಿ ಯಾವುದೇ ಒಂದು ವಸ್ತುವಿನ ಬೆಲೆಯನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಆಗುವುದಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಒಂದೇ ವಸ್ತುವಿನ ಬೆಲೆ ಬೇರೆ ಬೇರೆ ಆಗಿರುತ್ತದೆ. ನನ್ನ ಪತಿಗೆ ಇಂತಹ ವಸ್ತುಗಳೇ ಬೆಲೆ ಬಾಳುವಂಥವಾಗಿವೆ. ಅವು ಜನರ ಮುಂದೆ ಅವರ ಪ್ರತಿಷ್ಠೆಯನ್ನು ಹೆಚ್ಚಿಸುತ್ತವೆ. ಆದರೆ ನನಗೆ ಎಂತಹ ವಸ್ತುಗಳು ಬೆಲೆ ಬಾಳುವಂಥವಾಗಿಯೆಂದರೆ, ಅವು ಬೇರೊಬ್ಬರ ಕಣ್ಣುಗಳಲ್ಲಿ ಮುಗುಳ್ನಗೆ ಸೂಸುವಂತಹವಾಗಿರಬೇಕು.”
“ಎಷ್ಟೊಂದು ಸುಂದರ ಯೋಚನೆ ನಿಮ್ಮದು, ಪ್ರತಿಯೊಬ್ಬ ಮನುಷ್ಯನ ಯೋಚನೆ ಹೀಗೆಯೇ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ? ನೀವು ತಪ್ಪು ತಿಳಿದುಕೊಳ್ಳುವುದಿಲ್ಲವೆಂದರೆ ಒಂದು ವಿಷಯ ಹೇಳಲಾ ಮೇಡಂ, ನೀವು ಬೇರೆ ಮಹಿಳೆಯರಿಗಿಂತ ಭಿನ್ನವಾಗಿರುವಿರಿ,” ಎಂದು ಅಭಿಷೇಕ್ ಸ್ವಲ್ಪ ಗಂಭೀರನಾಗಿ ಹೇಳಿದ.
“ನಾನೂ ಕೂಡ ಒಂದು ವಿಷಯ ಹೇಳಲು ಇಚ್ಛಿಸುತ್ತೇನೆ ಅಭಿಷೇಕ್, ನನಗೆ ಮೇಡಂ ಎಂದು ಕರೆಸಿಕೊಳ್ಳಲು ಖಂಡಿತಾ ಇಷ್ಟವಿಲ್ಲ. ನೀವು ನನ್ನನ್ನು ಸುನಯನಾ ಎಂದು ಕರೆಯಬಹುದು. ಅಂದಹಾಗೆ ನನ್ನ ಹೆಸರು ಸುನಯನಾ,” ಎಂದಳು.
“ಹೆಸರಿನಂತೆ ನಿಮ್ಮ ಗುಣ ಕೂಡ. ಸುನಯನಾ ಅಂದರೆ ಸುಂದರ ಕಣ್ಣುಗಳು. ನಿಜವಾಗಿಯೂ ನಿಮ್ಮ ಕಣ್ಣುಗಳು ಬಹಳ ಸುಂದರಾಗಿವೆ ಸುನಯನಾ,” ಎಂದು ಅಭಿಷೇಕ್ ಸುನಯನಾಳ ಕಣ್ಣುಗಳಲ್ಲಿ ಇಣುಕುತ್ತಾ ಹೇಳಿದ.
ಸುನಯನಾ ಏನೋ ಯೋಚಿಸುತ್ತಾ, “ನನಗೆ ನಿಮ್ಮ ಬಗ್ಗೆ ಹೀಗೇಕೆ ಅನಿಸುತ್ತಿದೆಯೋ ಗೊತ್ತಿಲ್ಲ. ನೀವು ಸೇಲ್ಸ್ ಮನ್ ಅಲ್ಲ. ಬೇರೆ ಯಾರೊ ಆಗಿದ್ದೀರಿ ಅನಿಸುತ್ತಿದೆ,” ಎಂದಳು.
ಅಭಿಷೇಕ್ ತನ್ನನ್ನು ತಾನು ಸಂಭಾಳಿಸಿಕೊಂಡು ಸೇಲ್ಸ್ ಮನ್ ನ ಟೋನ್ ನಲ್ಲಿ, “ಇಲ್ಲ ಮ್ಯಾಮ್, ನಾನು ಕೇವಲ ಸೇಲ್ಸ್ ಮನ್. ನಮ್ಮ ಕಂಪನಿಯು ಕೆಲವು ಹೊಸ ಉತ್ಪನ್ನಗಳನ್ನು ಲಾಂಚ್ ಮಾಡಿದೆ. ಅವುಗಳ ಬಗ್ಗೆ ನಾನು ನಿಮಗೆ ಪರಿಚಯಿಸುವೆ. ನಿಜವಾಗಿಯೂ ಅವು ನಿಮಗೆ ಬಹಳ ಇಷ್ಟವಾಗುತ್ತವೆ. ಅವನ್ನು ನೀವು ಖಂಡಿತವಾಗಿಯೂ ಖರೀದಿಸುವಿರಿ. ಮೇಡಂ, ನಾನು ಅವಗಳ ಡೆಮೊ ಕೊಡಬಹುದಾ?” ಎಂದು ಕೇಳಿದ.
“ಅಫ್ ಕೋರ್ಸ್, ನೀವು ಡೆಮೊ ಕೊಡಬಹುದು. ಆದರೆ ನಾನು ಮನೆಯಲ್ಲಿ ಏಕಾಂಗಿಯಾಗಿದ್ದೇನೆ. ನಿಮ್ಮನ್ನು ಅಡುಗೆಮನೆಗೆ ಹೇಗೆ ಕರೆದುಕೊಂಡು ಹೋಗಲಿ?” ಸುನಯನಾ ತನ್ನ ವಿವಶತೆಯನ್ನು ತೋಡಿಕೊಂಡಳು.
“ಇರಲಿ ಬಿಡಿ, ನೀವು ಹಾಗೆಯೇ ಫೀಲ್ ಮಾಡಿಕೊಳ್ಳಿ. ಈ ಪ್ರಾಡಕ್ಟ್ ಬಹಳ ಚೆನ್ನಾಗಿದೆ ಎಂಬಂತೆ,” ಎಂದು ಹೇಳುತ್ತಾ ಅಭಿಷೇಕ್ ಆ ಉಪಕರಣಗಳನ್ನು ಅವಳ ಕೈಗೆ ಒಪ್ಪಿಸಿದ. ಹೀಗೆ ಮಾಡುತ್ತಿರುವಾಗ ಪರಸ್ಪರರ ಕೈಗಳು ಸ್ಪರ್ಶವಾದವು.
ಸುನಯನಾ ಅವನ ಕಡೆ ನೋಡುತ್ತಾ, “ನಾನಂತೂ ಫೀಲ್ ಮಾಡಿಕೊಳ್ಳುತ್ತಿದ್ದೇನೆ,” ಎಂದು ಮೆಲ್ಲಗೆ ಹೇಳಿದಳು.
ಅಭಿಷೇಕ್ ಅಸಹಜಗೊಂಡು, “ಪ್ಲೀಸ್, ಒಂದು ಗ್ಲಾಸ್ ನೀರು ಸಿಗಬಹುದಾ….?” ಎಂದು ಕೇಳಿದ.
“ನೀವು ತಪ್ಪು ತಿಳಿಯದಿದ್ದರೆ ಒಂದು ವಿಷಯ ತಿಳಿಸಲಾ? ನಿಮಗೂ ನಿಮ್ಮ ಪತಿಗೂ ಯಾವುದೇ ಮ್ಯಾಚ್ ಇಲ್ಲ. ಸ್ವಭಾವದ ಜೊತೆಗೆ ನಿಮ್ಮಿಬ್ಬರ ವಯಸ್ಸಿನಲ್ಲೂ ಸಾಕಷ್ಟು ಅಂತರವಿದೆ,” ಎಂದು ಹೇಳಿದ ಅಭಿಷೇಕ್.
“ನನಗೆ ಇದು ಗೊತ್ತು. ಆದರೆ ನನಗೆ ಒಂದು ವಿಷಯ ತಿಳಿಯುತ್ತಿಲ್ಲ. ನನ್ನ ಪತಿ ನಿಮಗೆ ಹೇಗೆ ಗೊತ್ತು?” ಎಂದು ಕೇಳಿದಳು ಸುನಯನಾ.
“ನನಗೆ ಗೊತ್ತಿಲ್ಲ…. ನೀವೇ ಹೇಳಿದ್ರಲ್ಲ……” ಅಭಿಷೇಕ್ ತೊದಲುತ್ತಾ ಹೇಳಿದ.
“ನಾನು ನಿಮಗೆ ಚಹಾ ಮಾಡಿ ತರುತ್ತೀನಿ. ನೀವು ದಣಿದಿರಬಹುದು.”
“ಧನ್ಯವಾದ.”
ಸುನಯನಾ 2 ಕಪ್ ಚಹಾ ಮಾಡಿ ತಂದಳು. ಇಬ್ಬರೂ ಚಹಾ ಹೀರತೊಡಗಿದರು. ಇಬ್ಬರೂ ಅಪರಿಚಿತರಾಗಿದ್ದರು. ಆದರೆ ಪರಸ್ಪರರಿಗಾಗಿ ವಿಶಿಷ್ಟ ರೀತಿಯ ಆಕರ್ಷಣೆಯ ಅನುಭವ ಮಾಡಿಕೊಳ್ಳುತ್ತಿದ್ದರು. ಅಭಿಷೇಕ್ ಗೆ ಸುನಯನಾಳ ನೋವಿನ ಅನುಭವ ಆಗುತ್ತಿತ್ತು. ಸುನಯನಾಗೂ ಅವನು ಸಾಧಾರಣ ಸೇಲ್ಸ್ ಮನ್ ಅಲ್ಲ ಅನ್ನುವುದು ಗೊತ್ತಾಗುತ್ತಿತ್ತು.
“ನನ್ನ ಗಂಡ ಯಾವಾಗಲೂ ಹಣವನ್ನು ಪ್ರೀತಿಸುತ್ತಿರುತ್ತಾರೆ,” ಸುನಯನಾ ಮೌನ ಮುರಿಯುತ್ತಾ ಹೇಳಿದಳು.
“ಹೌದು. ಹಣಕ್ಕಾಗಿ ಅವರು ಯಾರ ಜೀವನದೊಂದಿಗಾದರೂ ಆಟ ಆಡಬಹುದು,” ಅಭಿಷೇಕ್ ಒಮ್ಮೆಲೆ ಹೇಳಿಬಿಟ್ಟ.
ಸುನಯನಾ ಮತ್ತೊಮ್ಮೆ ಅವನ ಕಡೆ ಪ್ರಶ್ನಾರ್ಥಕವಾಗಿ ನೋಡಿದಳು.
ಅಭಿಷೇಕ್ ಮನೆಯಲ್ಲಿ ಎದುರುಗೋಡೆಗೆ ನೇತು ಹಾಕಿದ್ದ ಸುನಯನಾ ಹಾಗೂ ಅವಳ ಗಂಡನ ಫೋಟೋವನ್ನು ನೋಡುತ್ತಾ, “ಅವರು ನಿಮ್ಮನ್ನು ಪ್ರೀತಿಸುವುದಿಲ್ಲವೇ?” ಎಂದು ಕೇಳಿದ.
“ಇಲ್ಲ. ಅವರಿಗೆ ಭಾವನೆಗಳೆಂದರೆ ಏನೂ ಅಂತಲೇ ಗೊತಿಲ್ಲ. ಆದರೆ ನಾನು ನಿಮಗೆ ಇದೆಲ್ಲವನ್ನು ಏಕೆ ಹೇಳುತ್ತಿರುವೆ?” ಎಂದು ಕೇಳಿದಳು.
“ಏಕೆಂದರೆ ನನ್ನೊಳಗೆ ನಿಮಗೆ ಒಬ್ಬ ಸ್ನೇಹಿತ ಕಾಣುತ್ತಿದ್ದಾನೆ. ನಿಜ ಹೇಳಬೇಕೆಂದರೆ ನನಗೆ ಇನ್ನೊಬ್ಬರ ಭಾವನೆಗಳ ಬಗ್ಗೆ ಹೆಚ್ಚು ಕಳಕಳಿ ಇದೆ. ನೀವು ನಿಜವಾಗಿಯೂ ನನ್ನನ್ನು ಒಬ್ಬ ಸ್ನೇಹಿತನೆಂದು ಭಾವಿಸಿದರೆ, ನಾನು ನಿಮಗೆ ಬಹಳಷ್ಟನ್ನು ಮಾಡಬಹುದು. ಆದರೆ ನಿಮಗೆ ನನ್ನ ಮೇಲೆ ಒಂದಿಷ್ಟಾದರೂ ಸಂದೇಹ ಇದ್ದರೆ ನಾನು ಈಗಲೇ ನನ್ನೆಲ್ಲ ಸಾಮಾನುಗಳೊಂದಿಗೆ ಹೊರಟು ಹೋಗುವೆ.”
“ನನಗೆ ನಿಮ್ಮ ಮೇಲೆ ಯಾವುದೇ ಸಂದೇಹ ಇಲ್ಲ. ತದ್ವಿರುದ್ಧ ಎಂಬಂತೆ ನನ್ನ ಗಂಡನ ಮೇಲೆಯೇ ಸಂದೇಹವಿದೆ. ಅವರು ಬಹುಶಃ ನಿಮ್ಮ ಜೊತೆಗೆ ಏನೋ ತಪ್ಪು ಮಾಡಿದ್ದಾರೆ, ಅದಕ್ಕೆ ಪ್ರತಿಯಾಗಿ ನೀವು ಸೇಡು ತೀರಿಸಿಕೊಳ್ಳಲು ಬಂದಿದ್ದೀರಿ ಅನಿಸುತ್ತೆ,” ಸುನಯನಾ ಅಭಿಷೇಕನನ್ನೇ ನೋಡುತ್ತಾ ಹೇಳಿದಳು.
ಸುನಯನಾಳ ಬಾಯಿಂದ `ಸೇಡು’ ಎಂಬ ಪದ ಕೇಳಿಸಿಕೊಂಡ ಅಭಿಷೇಕ್ ಚಕಿತನಾಗಿ, “ಆದರೆ ಇದು ನಿಮಗೆ ಹೇಗೆ ಗೊತ್ತಾಯ್ತು?” ಎಂದು ಕೇಳಿದ.
“ನಾನು ನೀರು ತರಲು ಹೋದಾಗ, ಚಹಾ ಮಾಡಿಕೊಂಡು ತರುವಾಗ ನಿಮ್ಮ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ನಿಮಗೆ ನನ್ನ ಪತಿಯ ಸ್ವಭಾವದ ಬಗೆಗೂ ಗೊತ್ತು. ಅಷ್ಟೇ ಅಲ್ಲ, ನೀವು ನನ್ನ ಗಂಡನ ಫೋಟೋವನ್ನು ಅದೆಷ್ಟು ತಿರಸ್ಕಾರದಿಂದ ನೋಡುತ್ತಿದ್ದಿರಿ. ಅದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ, ನೀವು ಮೊದಲೇ ನನ್ನ ಪತಿಯ ಜೊತೆ ಮುಖಾಮುಖಿಯಾಗಿದ್ದೀರಿ. ಮತ್ತೊಂದು ಸಂಗತಿಯೆಂದರೆ, ನಮ್ಮ ಈ ಓಣಿಯಲ್ಲಿ ಯಾರೊಬ್ಬರೂ ಸೇಲ್ ಮನ್ ಗಳು ಬರುವುದಿಲ್ಲ. ಅಕಸ್ಮಾಕ್ ಬಂದರೂ ಬೇರೆ ಮನೆಗಳನ್ನೆಲ್ಲಾ ಬಿಟ್ಟು ನಟ್ಟ ನಡುವೆ ಇರುವ ನನ್ನ ಮನೆಯ ಬಾಗಿಲನ್ನೇ ಹೇಗೆ ತಟ್ಟಿದಿರಿ? ಇವೆಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡೇ ನಾನು ಒಂದು ನಿಷ್ಕರ್ಷಕ್ಕೆ ಬಂದೆ. ನಿಮ್ಮ ಮನಸ್ಸಿನಲ್ಲಿ ಏನೋ ವಿಷಯ ಇದೆ ಎಂದು,” ದೀರ್ಘವಾಗಿ ಹೇಳಿದಳು.
“ನೀವಂತೂ ಬಹಳ ಬ್ರಿಲಿಯೆಂಟ್! ನಾನು ಏನೂ ಮಾತನಾಡದೆಯೇ ನೀವು ಪ್ರತಿಯೊಂದು ವಿಷಯದ ಮೇಲೆ ಗಮನವಿಟ್ಟಿರಿ. ಆ ಬಳಿಕ ನಿಮಗೆ ನನ್ನ ಫೀಲಿಂಗ್ ಏನೆನ್ನುವುದು ಕೂಡ ಗೊತ್ತಾಗಿರಬೇಕು,” ಅಭಿಷೇಕ್ ನ ಕಣ್ಣುಗಳಲ್ಲಿ ಪ್ರೀತಿ ಮಿಂಚಿತು.
“ಹೌದು, ನೀವು ನನ್ನನ್ನು ಇಷ್ಟಪಡುತ್ತೀರಿ ಎಂಬ ಭಾವನೆಯೂ ಕೂಡ ಉಂಟಾಯಿತು. ನನ್ನ ಸ್ಪರ್ಶ ನಿಮ್ಮನ್ನು ವಿಚಲಿತಗೊಳಿಸುತ್ತಿದೆ. ನಮ್ಮ ನಡುವೆ ಆಕರ್ಷಣೆಯ ಸೇತುವೆ ನಿರ್ಮಾಣವಾಗುತ್ತಿದೆ. ನಾನು ಸ್ವಲ್ಪ ದುರ್ಬಲಳಾದರೂ ನಮ್ಮಿಬ್ಬರ ನಡುವೆ ಏನು ಬೇಕಾದರೂ ನಡೆಯಬಹುದು.”
ಅಭಿಷೇಕ್ ಆಕಸ್ಮಿಕವಾಗಿ ಮುಂದೆ ಬಾಗಿ ಸುನಯನಾಳನ್ನು ತನ್ನ ಬಾಹುಗಳಲ್ಲಿ ಬಂಧಿಸಿದ. ಸುನಯನಾ ಯಾವುದೇ ಪ್ರತಿರೋಧ ತೋರಲಿಲ್ಲ. ಇಬ್ಬರಿಗೂ ಪರಸ್ಪರರ ಮನಸ್ಸಿನ ಆಳ ಗೊತ್ತಾಗಿಹೋಗಿತ್ತು. ಸ್ವಲ್ಪ ಹೊತ್ತು ಆ ಸುಂದರ ಕ್ಷಣಗಳ ಆನಂದ ಪಡೆದುಕೊಂಡ ನಂತರ ಸುನಯನಾ ಅವನಿಂದ ಬಿಡಿಸಿಕೊಂಡು ಅವನಿಗೆ ಕುಳಿತುಕೊಳ್ಳಲು ಹೇಳಿದಳು.
“ಹೃದಯಗಳ ವ್ಯಾಪಾರ ಮಾಡುವ ಮೊದಲು ನೀವು ಯಾರು ಅನ್ನುವುದು ನನಗೆ ಗೊತ್ತಾಗಬೇಕು. ಎಲ್ಲಿಂದ ಬಂದಿರುವಿರಿ? ಏಕೆ ಬಂದಿರುವಿರಿ?” ಕೇಳಿದಳು ಸುನಯನಾ.
“ಕಥೆ ದೀರ್ಘವಾಗಿದೆ. ಅದನ್ನು ಆರಂಭದಿಂದಲೇ ಹೇಳಬೇಕು,” ಎಂದ ಅಭಿಷೇಕ್.
“ನನಗೂ ಕೂಡ ಯಾವುದೇ ಗಡಿಬಿಡಿ ಇಲ್ಲ. ನೀವು ಹೇಳಿ,” ಸುನಯನಾ ತಾಳ್ಮೆಯಿಂದ ಹೇಳಿದಳು.
“ಅಂದಹಾಗೆ ನಾನು ಸಾಧಾರಣ ಕುಟುಂಬವೊಂದರ ಗಳಿಸುವ ಏಕೈಕ ಪುತ್ರ. ಎಂಬಿಎ ಮಾಡಿದ್ದೇನೆ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಈ ಮಧ್ಯೆ ನಮ್ಮ ಕಂಪನಿಯಲ್ಲಿ ಹಗರಣವೊಂದು ನಡೆಯಿತು. ಅದರಲ್ಲಿ ಕೋಟ್ಯಂತರ ರೂ.ಗಳ ಕಳ್ಳತನವಾಯಿತು. ನಿಮ್ಮ ಪತಿ ನಮ್ಮ ಕಂಪನಿಯಲ್ಲಿ ಬಹುದೊಡ್ಡ ಹುದ್ದೆಯಲ್ಲಿದ್ದಾರೆ. ಹಗರಣ ಮಾಡಿದ್ದೇ ಅವರು. ಆದರೆ ಕಳಂಕ ತಂದಿದ್ದು ನನ್ನ ಹೆಸರಿಗೆ. ನನ್ನ ವಿರುದ್ಧ ಸಾಕ್ಷ್ಯ ಸೃಷ್ಟಿಸಿ, ಕಳ್ಳತನ ಹಾಗೂ ಮೋಸದ ಜಾಲದಲ್ಲಿ ಸಿಲುಕಿಸಿ ಜೇಲಿಗೆ ಕಳಿಸಿದರು.
“ಈಗ ನೀವೇ ಹೇಳಿ, ಯಾವುದೇ ಒಂದು ಮನೆಯ ಗಳಿಸುವ ಹುಡುಗನ ಜೊತೆ ಹೀಗಾದರೆ, ಅವನ ತಾಯಿ ತಂದೆಯರ ಸ್ಥಿತಿ ಏನಾಗಬಹುದು? ಅದ್ಹೇಗೊ ನಾನು ನನ್ನ ನಿರಪರಾಧಿತನವನ್ನು ಸಾಬೀತುಪಡಿಸಿ ಜೇಲಿನಿಂದ ಹೊರಬಂದೆ. ಹಾಡುಹಗಲೇ ಅವರ ಮನೆಗೆ ನುಗ್ಗಿ ಅವರ ಅತ್ಯಮೂಲ್ಯ ವಸ್ತುವೊಂದನ್ನು ಕದ್ದುಕೊಂಡು ಹೋಗ್ತೀನಿ ಎಂದು, ಜೇಲಿಗೆ ಹೋಗುವಾಗ ನಾನು ಪಣ ತೊಟ್ಟಿದ್ದೆ.”
“ಅಂದರೆ ನೀವು ಕಳ್ಳತನದ ಉದ್ದೇಶದಿಂದ ಇಲ್ಲಿಗೆ ಬಂದಿರುವಿರಾ?” ಸುನಯನಾ ಮುಗುಳ್ನಗುತ್ತಾ ಕೇಳಿದಳು.
“ನೋಡಿ, ನಾನು ಕಳ್ಳತನದ ಉದ್ದೇಶದಿಂದಲೇ ಬಂದಿದ್ದೆ. ಆದರೆ ನಿಮ್ಮನ್ನು ಭೇಟಿಯಾದ ಬಳಿಕ ಹಾಗೆ ಮಾಡಲು ಮನಸ್ಸು ಬರುತ್ತಿಲ್ಲ.”
“ನೀವು ಕಳ್ಳತನದ ಉದ್ದೇಶದಿಂದ ಬಂದಿದ್ದರೆ ಹಾಗೇ ಆಗಲಿ. ಇಲ್ಲಿ ನಿಮಗೆ ಯಾವುದು ಅತ್ಯಮೂಲ್ಯ ಅನಿಸುತ್ತೋ ಅದನ್ನೇ ತೆಗೆದುಕೊಂಡು ಹೋಗಿ. ನಿಮಗೆ ಅನ್ಯಾಯವಾಗಿದ್ದರೆ ಅದಕ್ಕೆ ನೀವು ಅವಶ್ಯವಾಗಿ ಪ್ರತೀಕಾರ ತೀರಿಸಿಕೊಳ್ಳಿ. ನೀವು ಹೇಳುವಂತೆ ನನ್ನ ಗಂಡ ಹಾಗೆಯೇ ಇದ್ದಾರೆ. ಅವರು ಕೇವಲ ತಮ್ಮ ಲಾಭದ ಬಗ್ಗೆ ನೋಡಿಕೊಳ್ಳುತ್ತಾರೆ. ಅದಕ್ಕೆ ಯಾರದ್ದಾದರೂ ಜೀವ ಹೋದರೂ ಸರಿ. ಇದೊ ತೆಗೆದುಕೊಳ್ಳಿ ಬೀಗದ ಕೈ….. ನಿಮಗೇನು ಬೇಕೊ ತೆಗೆದುಕೊಳ್ಳಿ,” ಎಂದು ಬೀಗದ ಕೈ ನೀಡಿದಳು.
“ಬೇಡ. ಹೀಗೆ ಮಾಡಬೇಡಿ. ನಿಮ್ಮ ಪತಿಗೆ ಬೇಜಾರಾಗಬಹುದು. ಅವರು ನಿಮ್ಮ ವಿರುದ್ಧ ಏನಾದರೂ ಮಾಡಬಹುದು,” ಎಂದು ಅಭಿಷೇಕ್ ಹಿಂಜರಿಯುತ್ತಲೇ ಹೇಳಿದ.
“ಅವರು ಯಾವಾಗ ತಾನೇ ಖುಷಿಯಿಂದಿರುತ್ತಾರೆ? ಅವರು ಇವತ್ತು ಬೇಸರ ಮಾಡಿಕೊಳ್ಳಬಹುದು. ಇದೇನು ದೊಡ್ಡ ವಿಷಯವಲ್ಲ. ಅಂದಹಾಗೆ ನಾನು ಅವರನ್ನು ಬಿಟ್ಟುಹೋಗುವ ಮನಸ್ಸು ಮಾಡಿರುವೆ. ಒಂದು ದಿನ ನಾನು ಅವರನ್ನು ಬಿಟ್ಟು ಹೋಗುತ್ತೇನೆ. ಹೀಗಾಗಿ ನೀವು ನನ್ನ ಬಗ್ಗೆ ಚಿಂತೆ ಮಾಡಬೇಡಿ,” ಎಂದು ಹೇಳುತ್ತಾ ಸುನಯನಾ ಬೀರು ಹಾಗೂ ಕಪಾಟಿನ ಬಾಗಿಲು ತೆರೆದಳು. ಎರಡೂ ಕಡೆ ಹಣ ಹಾಗೂ ಆಭರಣಗಳು ಧಾರಾಳವಾಗಿ ತುಂಬಿದ್ದವು. ಆದರೆ ಅತ್ತ ಕಡೆ ಅಭಿಷೇಕ್ ಕಣ್ಣೆತ್ತಿಯೂ ಕೂಡ ನೋಡಲಿಲ್ಲ.
“ನಾನು ಏನೇನೊ ಯೋಚಿಸಿ ನಿಮ್ಮ ಮನೆಗೆ ಕಳ್ಳತನ ಮಾಡಲೆಂದು ಬಂದೆ. ಆದರೆ ನಿಮ್ಮ ಜೊತೆ ಮಾತಾಡಿದ ಬಳಿಕ ಈಗ ಹಾಗೆ ಯೋಚಿಸಲು ಸಾಧ್ಯವಾಗುತ್ತಿಲ್ಲ,” ಎಂದ.
“ನಾನು ನಿಮಗೆ ಹೇಳಿದ್ನಲ್ಲ, ನನ್ನ ಬಗ್ಗೆ ಯೋಚಿಸಬೇಡಿ ಅಂತ. ಕಳ್ಳತನ ಮಾಡಲೆಂದು ಬಂದ ಒಬ್ಬ ವ್ಯಕ್ತಿಯ ಪರ ಇದೇ ಮೊದಲ ಬಾರಿ ನಿಲ್ಲುತ್ತಿರುವೆ. ಅದೂ ಕೂಡ ನನ್ನದೇ ಮನೆಯಲ್ಲಿ ಪ್ಲೀಸ್ ಡೋಂಟ್ ಹೆಸಿಟೇಟ್.”
“ಇಲ್ಲ ಈಗಿಲ್ಲ. ನಾನು ನಿಮ್ಮನ್ನು ಸ್ನೇಹಿತಳೆಂದು ಭಾವಿಸಿರುವೆ. ನಾನು ಒಬ್ಬ ಸ್ನೇಹಿತೆಯ ಮನೆಯಲ್ಲಿ ಹೇಗೆ ಕಳ್ಳತನ ಮಾಡಲು ಸಾಧ್ಯ?”
“ಆದರೆ ನಾನು ಒಬ್ಬ ಸ್ನೇಹಿತನ ಉದ್ದೇಶಕ್ಕೆ ಅಡ್ಡಗಾಲು ಹಾಕಲು ಹೇಗೆ ಸಾಧ್ಯ? ನೀವು ನಿಮ್ಮ ಪ್ರತೀಕಾರ ತೀರಿಸಿಕೊಳ್ಳಿ ಎಂದು ನಾನು ಹೇಳುತ್ತಿರುವೆ.”
“ಸರಿ, ನನಗೆ ಯೋಚಿಸಲು ಸಮಯ ಕೊಡಿ.”
“ಕಳ್ಳ ಕುಳಿತು ಯೋಚಿಸುದಿಲ್ಲ. ಕಾರ್ಯಪ್ರವೃತ್ತನಾಗುತ್ತಾನೆ. ನಾನು ನಿಮ್ಮನ್ನು ಹಿಡಿದು ಕೊಡಬಹುದು ಎಂಬ ಹೆದರಿಕೆ ನಿಮಗೆ ಆಗುತ್ತಿಲ್ಲವೆ?”
“ಇಲ್ಲ. ಆ ಹೆದರಿಕೆ ನನಗಿಲ್ಲ. ಹಾಗೊಂದು ವೇಳೆ ನೀವು ಹಾಗೆ ಮಾಡಿದ್ದೇ ಆದರೆ ನಾನು ಖುಷಿಯಿಂದ ಜೇಲಿಗೆ ಹೋಗಲು ಸಿದ್ಧ,” ಎಂದು ಹೇಳುತ್ತಾ ಅವನು ಸುನಯನಾಳಿಗೆ ತೀರಾ ನಿಕಟನಾದ.
ಸುನಯನಾ ಅವನತ್ತ ಕಣ್ಣಲ್ಲಿಯೇ ಕೊಲ್ಲುವಂತಹ ನೋಟ ಬೀರಿದಳು. ಆಗ ಅಭಿಷೇಕ್ ಪಿಸುಗುಟ್ಟುತ್ತಾ, “ಮಾದಕ ಕಣ್ಣಿನ ನೋಟದವಳೇ, ನೀನು ನನ್ನನ್ನು ಕೊಂದರೂ ನನಗೆ ಯಾವುದೇ ದುಃಖವಾಗುವುದಿಲ್ಲ.”
“ನೀನೂ ಒಬ್ಬ ವಿಚಿತ್ರ ವ್ಯಕ್ತಿ. ಅಮೂಲ್ಯ ವಸ್ತು ಕಳ್ಳತನ ಮಾಡಲು ಬಂದಿದ್ದೆ. ಆದರೆ ಕದ್ದದ್ದು ಮಾತ್ರ ನನ್ನ ಹೃದಯವನ್ನು,” ಸುನಯನಾ ಅವನತ್ತ ಪ್ರೀತಿಯಿಂದ ನೋಡುತ್ತಾ ಹೇಳಿದಳು.
“ನಿನ್ನ ನಗುವಿಗಿಂತ ಅಮೂಲ್ಯವಾದದ್ದು ನನಗೆ ಕಾಣುತ್ತಿಲ್ಲ. ಇದೇ ನನಗೆ ಅಮೂಲ್ಯ ಉಡುಗೊರೆಯಾಗಿದೆ,” ಅಭಿಷೇಕ್ ಅವಳಿಗೆ ಅದೇ ಧಾಟಿಯಲ್ಲಿ ಹೇಳಿದ.
ಈ ರೀತಿ ಕವಿತೆಯ ಸಾಲುಗಳನ್ನು ಉಲ್ಲೇಖಿಸುತ್ತಾ ಇಬ್ಬರೂ ಅದೆಷ್ಟು ಹತ್ತಿರಾದರು ಎನ್ನುವುದು ಇಬ್ಬರಿಗೂ ಗೊತ್ತೇ ಆಗಲಿಲ್ಲ. ಸುನಯನಾಳಿಗೆ ಗಂಡನ ಪ್ರೀತಿ ಸಿಕ್ಕಿರಲಿಲ್ಲ. ಅವಳು ಅಪರಿಚಿತ ವ್ಯಕ್ತಿಯೊಬ್ಬನಿಗಾಗಿ ಸ್ಪಂದಿಸಿದ್ದಳು. ಅದೇ ಅಭಿಷೇಕನಿಗೆಲ್ಲಿ ಗೊತ್ತಿತ್ತು ತಾನು ಬಂದಿದ್ದು ಕಳ್ಳತನ ಮಾಡಲು. ಆದರೆ ಹೃದಯವೊಂದಕ್ಕೆ ಕನ್ನ ಹಾಕ್ತೀನಿ ಅಂತ ಅವನು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ.
“ನನ್ನ ಮದುವೆಯೇ ಒಂದು ಮೋಸ. ನನ್ನ ಮಲತಂದೆ ನನಗೆ ಇವರ ಕಝಿನ್ ಫೋಟೋ ತೋರಿಸಿ ಇವರೊಂದಿಗೆ ಖುಷಿಯಿಂದ ಜೀವಿಸಬಹುದು ಎಂದು ಹೇಳಿದ್ದರು. ಆದರೆ ನನ್ನನ್ನು ಮಾರಾಟ ಮಾಡುತ್ತಾರೆ ಎಂದು ನನಗೆಲ್ಲಿ ಗೊತ್ತಿತ್ತು?
“ನನ್ನ ಮಲತಂದೆ ಹಣದ ದುರಾಸೆಗಾಗಿ ನನಗಿಂತ ದುಪ್ಪಟ್ಟು ವಯಸ್ಸಿನ ವ್ಯಕ್ತಿಗೆ ನನ್ನನ್ನು ಮಾರಾಟ ಮಾಡಿದ್ದರು. ಇವರು ವಿಧುರ. ಮೊದಲ ಪತ್ನಿ ಅಪಘಾತದಲ್ಲಿ ತೀರಿಹೋಗಿದ್ದರು. ಇವರ ಮತ್ತು ನನ್ನ ಸಂಬಂಧ ಮೊದಲ ದಿನದಿಂದಲೇ ಮಾಲೀಕ ಹಾಗೂ ದಾಸಿಯ ತರಹ ಸಂಬಂಧವಿತ್ತು. ಗಂಡ ಹೆಂಡತಿಯ ಸಂಬಂಧ ಇರಲಿಲ್ಲ.
“ತವರಿನಲ್ಲಿ ಮಲತಂದೆಯ ಹೊರತು ಈಗ ಯಾರೂ ಇಲ್ಲ. ಇಲ್ಲೂ ಕೂಡ ಇವರ ಹೊರತು ಇರುವವರೆಂದರೆ ಇವರ ನೌಕರರು ಮಾತ್ರ. ನಾನು ನನ್ನ ನೋವನ್ನು ಯಾರ ಮುಂದೆ ಹೇಳಲಿ? ಹೀಗಾಗಿ ನಾನು ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡೆ. ಆದರೆ ನಿಮ್ಮನ್ನು ಭೇಟಿ ಮಾಡಿದ ನಂತರ ನನ್ನ ಜೀವನದಲ್ಲಿ ಖುಷಿ ಮತ್ತೆ ಅರಳುತ್ತಿದೆ ಎನ್ನುವುದು ಅರಿವಿಗೆ ಬಂತು. ಈಗ ನನಗೆ ಹೊಸ ಜೀವನ ದೊರೆತಂತೆ ಆಗಿದೆ.” ಎಂದಳು.
“ನಾನೂ ಕೂಡ ಪ್ರೀತಿಯ ಹೆಸರಿನಲ್ಲಿ ಕೇವಲ ಮೋಸ ಹೋಗಿದ್ದೇನೆ. ಹೀಗಾಗಿ ಈವರೆಗೆ ಮದುವೆಯನ್ನೇ ಆಗಿಲ್ಲ. ಈಗ ನನಗೆ ಅರಿವಾಗುತ್ತಿದೆ ಇದೆಲ್ಲದರ ಹಿಂದಿನ ಕಾರಣ ಏನೆಂದು. ಅಂದಹಾಗೆ ನಿಮ್ಮ ಜೊತೆಗೆ ನನ್ನ ಕಥೆ ಪೂರ್ತಿಯಾಗಬೇಕಿತ್ತು.”
ಇಬ್ಬರೂ ಬಹಳ ಹೊತ್ತಿನ ತನಕ ಪ್ರೀತಿಯ ಮಾತಿನಲ್ಲಿ ಮುಳುಗಿದ್ದರು. ಆಕಸ್ಮಿಕವಾಗಿ ಸುನಯನಾ ಎಚ್ಚರಗೊಂಡು ಗಾಬರಿಯಿಂದ, “ನೋಡಿ, ಈಗ ನಿಮ್ಮ ಬಳಿ ಹೆಚ್ಚು ಸಮಯವಿಲ್ಲ. ಅವರು ಇನ್ನೇನು ಬಂದುಬಿಡುತ್ತಾರೆ. ನೀವು ಇಲ್ಲಿಂದ ಏನು ತೆಗೆದುಕೊಂಡು ಹೋಗುವಿರಿ ಎನ್ನುವುದನ್ನು ನಿರ್ಧರಿಸಿ,” ಎಂದು ಹೇಳಿದಳು.
“ಒಂದು ವೇಳೆ ನಾನು ನಿಮ್ಮನ್ನು ತೆಗೆದುಕೊಂಡು ಹೋಗಬೇಕು ಎಂದರೆ, ಅದಕ್ಕೆ ನಿಮ್ಮ ಉತ್ತರ ಏನಾಗಿರುತ್ತದೆ?” ಎಂದು ಅಭಿಷೇಕ್ ಧೈರ್ಯ ಮಾಡಿ ತನ್ನ ಹೃದಯದ ಮಾತನ್ನು ಹೊರಹೊಮ್ಮಿಸಿದ.
“ನನ್ನ ಉತ್ತರ……” ಎಂದು ಹೇಳುತ್ತಾ ಅವಳು ಮೌನ ವಹಿಸಿದಳು.
“ಹೇಳಿ ಸುನಯನಾ? ನಿಮ್ಮ ಉತ್ತರ ಏನು?” ಅಭಿಷೇಕ್ ತಳಮಳದಿಂದ ಕೇಳಿದ.
“ನನ್ನ ಉತ್ತರ ಕೂಡ ಅದೇ ಆಗಿರುತ್ತದೆ. ನಾನು ಈ ಚಿನ್ನದ ಪಂಜರದಲ್ಲಿ ಇದ್ದು ಇದ್ದೂ ಬೇಸತ್ತು ಹೋಗಿದ್ದೇನೆ. ಈಗ ಒಂದು ಹಕ್ಕಿಯ ಹಾಗೆ ನಾನೂ ಕೂಡ ಮುಕ್ತವಾಗಿ ಹಾರಲು ಇಚ್ಛಿಸುತ್ತೇನೆ. ನಾನು ನಿಮಗೆ ಅನುಮತಿ ಕೊಡ್ತೀನಿ. ನೀವು ನನ್ನನ್ನು ಮನೆಯಿಂದ ಕದ್ದುಕೊಂಡು ಹೋಗಬಹುದು. ಅದಕ್ಕಾಗಿ ನಾನು ಸಿದ್ಧಳಿರುವೆ,” ಎಂದಳು.
“ಹಾಗಾದರೆ ಸರಿ. ನಾನು ನಿನ್ನನ್ನು ಅಂದರೆ ಈ ಮನೆಯ ಅತ್ಯಮೂಲ್ಯ ವಸ್ತುವನ್ನು ಕದ್ದುಕೊಂಡು ಹೋಗುತ್ತಿರುವೆ. ನನ್ನ ಪ್ರತೀಕಾರ ಇಷ್ಟು ಸುಂದರ ರೂಪ ಪಡೆದುಕೊಳ್ಳಬಹುದು ಎಂದು ನಾನು ಯೋಚನೆ ಕೂಡ ಮಾಡಿರಲಿಲ್ಲ,” ಎಂದ ಅಭಿಷೇಕ್.
ನಂತರ ಇಬ್ಬರೂ ಪರಸ್ಪರರ ಕೈ ಹಿಡಿದು ಒಂದು ಹೊಸ ಜೀವನದ ಆರಂಭಕ್ಕೆ ಹೊರಟು ನಿಂತರು.