ಮಗಳ ಮದುವೆಯ ಗಡಿಬಿಡಿಯಿಲ್ಲದ್ದ ರೇಖಾ, ಮನೆಯ ಒಡವೆಗಳೆಲ್ಲಾ ಕಳುವಾದ ಎಂದು ಗೊತ್ತಾದಾಗ ಹೌಹಾರಿದಳು. ಮುಂದೆ ಅದು ಸಿಕ್ಕಿದ್ದು ಹೇಗೆ? ಕದ್ದವರು ಯಾರು…….?
ಬೆಳಗ್ಗೆ ಶ್ರೀಧರನಿಗೆ ಡಬ್ಬಿ ಕಟ್ಟಿ ಆಫೀಸಿಗೆ ಕಳಿಸಿದ ರೇಖಾ, ಒಂದು ಕಪ್ ಸ್ಟ್ರಾಂಗ್ ಫಿಲ್ಟರ್ ಕಾಫಿ ಮಾಡಿಕೊಂಡು ಉಸ್ಸಪ್ಪಾ ಅಂತ ಹಾಲ್ ನಲ್ಲಿ ಕುಳಿತು ಟಿವಿ ಹಾಕಿ, ಮೊಬೈಲ್ ಕೈಗೆತ್ತಿಕೊಂಡಳು. ಎಲ್ಲಾ ಚಾನೆಲ್ ಗಳಲ್ಲೂ ಬರೀ ಡ್ರಗ್ಸ್ ನದೇ ನಶೆ. `ಛೇ! ಏನು ಕಾಲ ಬಂತಪ್ಪ, ಇವರೂ ಹಾಳಾಗೋದಲ್ಲದೆ, ಯುವಜನರನ್ನೂ ಹಾಳು ಮಾಡುತ್ತಾರೆ,’ ಎಂದು ಯೋಚಿಸುವಷ್ಟರಲ್ಲಿ ಅಚಿಂತ್ಯ ಮೈಮುರಿಯುತ್ತಾ ಎದ್ದು ಬಂದ.
“ಮಮ್ಮಿ, ನನಗೂ ಒಂದು ಕಪ್ ಕಾಫಿ,” ಎನ್ನುತ್ತಾ ಸೋಫಾದ ಮೇಲೆ ಕಾಲು ಚಾಚಿ ಕುಳಿತು, ರಿಮೋಟ್ ತೆಗೆದುಕೊಂಡವನೇ, ಚಾನೆಲ್ ಬದಲಾಯಿಸುತ್ತಾ, “ಇದೇನು ಹಾಕಿಕೊಂಡು ಕುಳಿತಿದ್ದೀಯಾ…? ನ್ಯೂಸ್ ಹೇಳೋರಿಗೂ ಬುದ್ಧಿ ಇಲ್ಲ, ನೋಡೋರಿಗೂ….. ನಮ್ಮ ಕಾಲೇಜಿನ ಹಾಸ್ಟೆಲ್ ನಲ್ಲಿ ಆರಾಮವಾಗಿ ಡ್ರಗ್ಸ್ ಸಪ್ಲೈ ಆಗುತ್ತೆ, ಪೊಲೀಸರಿಗೂ ಕೂಡಾ ಗೊತ್ತಿರುತ್ತೆ. ಹೊಸ ವಿಷಯ ಅನ್ನೋ ಹಾಗೆ ಮಾತಾಡ್ತಾರೆ,” ಎಂದ.
ರೇಖಾಳ ಮೈ ಜುಮ್ ಎಂದಿತು, “ಹೌದೇನೋ….? ಅಂಥ ಉಸಾಬರಿಗೆಲ್ಲ ನೀನು ಹೋಗ್ಬೇಡ್ವೋ. ಅಂಥೆಲ್ಲಾ ನೀನು ತೊಗೊಳಲ್ಲ ತಾನೇ…,” ಎಂದು ಹೆದರುತ್ತಲೇ ಕೇಳಿದಳು.
“ಓಹ್ ಮಮ್ಮಿ…. ಹಾಗೆಲ್ಲ ನಿನ್ನ ಮಗ ದಾರಿ ತಪ್ಪಲ್ಲ, ಯೋಚನೆ ಮಾಡಬೇಡ,” ಎಂದಾಗ ರೇಖಾಗೆ ಸಮಾಧಾನವಾಯಿತು.
“ಮೊದಲು ಬ್ರಶ್ ಮಾಡಿ ಬಾ,” ಎಂದು ಅವನನ್ನು ಬಚ್ಚಲಿಗೆ ಸಾಗಹಾಕಿ, ಕಾಫಿ ಫಿಲ್ಟರ್ ಗೆ ಹಾಕಿಟ್ಟು, ಒಂದಿಷ್ಟು ವಾಟ್ಸ್ ಆ್ಯಪ್, ಫೇಸ್ ಬುಕ್ ನಲ್ಲಿ ಕಣ್ಣಾಡಿಸುವ ಹೊತ್ತಿಗೆ, ಹಿತ್ತಲಿನಲ್ಲಿ, “ಆಂಟೀ, ಭಾಂಡೇ ಹೊರಗಿಡ್ತೀ,” ಅಂತ ಬಾಗಿಲು ಬಡಿಯುತ್ತಾ ಫಾತಿಮಾ ಕೂಗಿದಳು.
ರೇಖಾ ಎದ್ದು ಹೋಗಿ ಹಿತ್ತಲು ಬಾಗಿಲು ತೆಗೆದು, ಅವಳನ್ನು ನೋಡಿ, “ಇವತ್ತು ನೀನು ಯಾಕೆ ಬಂದಿರೋದು…. ನಿಮ್ಮಮ್ಮ ಎಲ್ಲಿ….” ಎನ್ನುತ್ತಾ ಅಡುಗೆಮನೆಗೆ ಬಂದು ಮುಸುರೆ ಪಾತ್ರೆಗನ್ನೆಲ್ಲಾ ಪ್ಲಾಸ್ಟಿಕ್ ಬುಟ್ಟಿಗೆ ಹಾಕತೊಡಗಿದಳು.
“ಆಕೀ, ಗೋವಾಕ್ ಹೋಗ್ಯಾಳ್ರೀ….ಅಣ್ಣನ ಮನೀಗೆ. ಬರೂ ಮಟ ನಂಗಾ ಮಾಡಾಕ್ ಹೇಳ್ಯಾಳ್ರೀ,” ಎನ್ನುತ್ತಾ ಹಾಕಿಕೊಂಡ ಬುರ್ಕಾ ತೆಗೆದು, ಹೊರಗೆ ಕಿಟಕಿಯಲ್ಲಿ ಮಡಚಿ ಇಡುತ್ತಾ, ಖಾಲಿ ಟಬ್ ನ್ನು ನಲ್ಲಿಯ ಕೆಳಗೆ ಇಟ್ಟು ನೀರು ಬಿಡುತ್ತಾ, “ಚಾ ಆತೇನ್ರೀ ಆಂಟೀ,” ಎಂದು ಕೇಳಿದಳು.
ಅವಳಿಗೆ ಚಾ ಮಾಡಿಕೊಡಬೇಕೆಂಬ ಸೂಚನೆ ಗೊತ್ತಾಗಿ, “ಆತು…. ಚಾಗಿಡ್ತೀನಿ ತಡೀ,” ಅಂತ ಅಡುಗೆಮನೆಗೆ ಬಂದು ಟೀಗೆ ನೀರಿಟ್ಟಳು. ಕೆಲಸದವರಿಗೆ ಇಂತಹ ಸಮಯದಲ್ಲಿ ಸ್ವಲ್ಪ ಚಾ, ತಿಂಡಿ ಕೊಟ್ಟು ಸರಿಯಾಗಿ ಇಟ್ಟುಕೊಳ್ಳಬೇಕೆಂಬ ಅನುಭವ ಇಪ್ಪತ್ತೈದು ವರ್ಷಗಳಿಂದ ಚೆನ್ನಾಗಿ ಆಗಿತ್ತು.
ಮೊದಲೇ ಮದುವೆ ಹತ್ತಿರಕ್ಕೆ ಓಡಿ ಬರ್ತಾ ಇದೆ. ನಿಶಾಳನ್ನು ಕೆಲಸಕ್ಕೆ ಕರೆಯುವ ಹಾಗೂ ಇಲ್ಲ. ಪಾಪ…. ಮದುವೆಯಾಗೋ ಹುಡುಗಿ. ಯಾವಾಗ ನೋಡಿದರೂ ಅನೂಪ್ ಜೊತೆ ಮೊಬೈಲ್ ನಲ್ಲಿ ಗುರು ಗುಸು, ಪಿಸು ಪಿಸು ಅಂತಾ ಮಾತನಾಡುತ್ತಲೇ ಇರುತ್ತಾಳೆ. ಇಲ್ಲದಿದ್ದರೆ ರೇಖಾ ಕೆಲಸ ಮಾಡುವಾಗೆಲ್ಲ ತಪ್ಪದೆ ಎಲ್ಲದಕ್ಕೂ ಕೈ ಹಾಕಿ ಸಹಕರಿಸುತ್ತಾಳೆ. ಎಂಜಿನಿಯರಿಂಗ್‌ಮಾಡಿ, ಬೆಂಗಳೂರಿನಲ್ಲಿ ಕೆಲಸ ಮಾಡಲು ಶುರು ಮಾಡಿ ಆಗಲೇ ಎರಡು ವರ್ಷವಾಯ್ತು. ಅಲ್ಲಿ ಉಳಿದುಕೊಂಡಿದ್ದ ಆಂಧ್ರ ಪಿಜಿಯ ಊಟ ಸರಿಹೋಗದೆ ಸ್ವಲ್ಪ ಸೊರಗಿದ್ದಾಳೆ. ಮದುವೆಯಾಗುವ ಸಮಯದಲ್ಲಿ ಸ್ವಲ್ಪ ಮೈ ಕೈ ತುಂಬಿಕೊಂಡಿದ್ದರೆ ಚಂದ ಎಂದು ಹೊತ್ತುಹೊತ್ತಿಗೂ ಅವಳಿಗಿಷ್ಟವಾದ ಅಡುಗೆಯನ್ನು ಮಾಡಿ ಹಾಕುತ್ತಿದ್ದಳು. ತುಂಬಾ ಮೃದು ಮನಸ್ಸಿನ ಹಾಗೂ ಸರಳವಾಗಿ ಎಲ್ಲರೊಡನೆ ಬೆರೆತು ಹೋಗು ಹುಡುಗಿ. ಮದುವೆಯಾದ ಮೇಲೆ ಸಂಸಾರದ ಜಂಜಾಟಗಳು ಇದ್ದದ್ದೇ.
ಮಾತನಾಡಿಕೊಳ್ಳಲಿ ಬಿಡು, ಈಗಲ್ಲದೆ ಮತ್ಯಾವಾಗ ಮಾತನಾಡೋದು ಅಂದುಕೊಳ್ಳುತ್ತಾ ರೇಖಾ ಅವಳಿಗೆ ಯಾವ ಕೆಲಸವನ್ನೂ ಕೊಟ್ಟಿರಲಿಲ್ಲ.
ನಿಶಾಳ ಕ್ಯಾಂಪಸ್ ಸೆಲೆಕ್ಷನ್ ಆದಾಗ ಅದೆಷ್ಟು ಸಂಭ್ರಮಿಸಿದ್ದಳು ರೇಖಾ. ಆದರೆ ಬೆಂಗಳೂರಿಗೆ ಕಳಿಸುವಾಗಲೇ ಗೊತ್ತಾಗಿದ್ದು ಮಗಳನ್ನು ಬಿಟ್ಟಿರುವ ಸಂಕಟ. ಹುಬ್ಬಳ್ಳಿಯಿಂದ ಆಕೆಯನ್ನು ಇಂಟರ್ ಸಿಟಿಗೋ, ರಾಣಿ ಚೆನ್ನಮ್ಮಾ ರೈಲಿಗೋ, ಸ್ಲೀಪರ್ ಕೋಚ್ ಬಸ್ಸಿಗೋ ಹತ್ತಿಸಿ ಬರುವಾಗ ಪ್ರತಿಸಲ ಒದ್ದಾಡಿ ಹೋಗುತ್ತಿದ್ದಳು. ಮಕ್ಕಳನ್ನು ಒಬ್ಬಂಟಿಯಾಗಿ ಎಂದೂ ಮನೆಯಿಂದ ಹೊರಗೆ ಕಳಿಸಿ ಗೊತ್ತೇ ಇರಲಿಲ್ಲ. ತನ್ನ ತವರು ಮನೆಗೂ ಸಹ. ಎಲ್ಲಿ ಹೋದರೂ ಎಲ್ಲರೂ ಜೊತೆಯಲ್ಲಿ ಹೋಗಿ, ಜೊತೆಯಲ್ಲೇ ವಾಪಸಾಗುತ್ತಿದ್ದುದು. ರೇಖಾಳ ಅಮ್ಮ ಎಷ್ಟೋ ಸಲ ಗದರುತ್ತಿದ್ದರು. ಹಾಗೆ ಒಂದೇ ಕಡೆ ಮಕ್ಕಳನ್ನು ರೂಢಿ ಮಾಡಿಕೊಳ್ಳಬೇಕು. ಆಗ ಮಕ್ಕಳೂ ಸಹ ಎಲ್ಲರ ಮನೆಯಲ್ಲಿ ಎಲ್ಲರ ಜೊತೆ ಹೊಂದಿಕೊಂಡು ಹೋಗುವುದನ್ನು ಕಲಿಯುತ್ತಾರೆ. ಮುಂದೆ ಕೆಲಸಕ್ಕೋ, ಗಂಡನ ಮನೆಗೋ ಕಳಿಸುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಈಗಿನಿಂದಲೇ ಸ್ವಲ್ಪ ಅಭ್ಯಾಸ ಮಾಡಿಸಬೇಕು ಎಂದಾಗ, ಇಲ್ಲಮ್ಮ ಅವರಪ್ಪ ಮಕ್ಕಳನ್ನು ಬಿಟ್ಟು ಇರುವುದಿಲ್ಲ ಎಂದು ಶ್ರೀಧರನ ಮೇಲೆ ಹೇಳಿಬಿಡುತ್ತಿದ್ದಳು. ಅದು ನಿಜ ಕೂಡ ಆಗಿತ್ತು. ಜೊತೆಗೆ ರೇಖಾಳ ಅಭಿಲಾಷೆಯೂ ಅದೇ ಆಗಿತ್ತು.
ಕೆಲಸಕ್ಕೆ ಸೇರಿದ ಒಂದು ವರ್ಷದಲ್ಲಿ, ಜೊತೆಯಲ್ಲಿಯೇ ಕೆಲಸ ಮಾಡುತ್ತಿದ್ದ ಅನೂಪ್ ನನ್ನು ಇಷ್ಟಪಟ್ಟ ವಿಷಯವನ್ನು ನಿಶಾ ಮನೆಯಲ್ಲಿ ತಿಳಿಸಿದಾಗ, ರೇಖಾ ಹಾಗೂ ಶ್ರೀಧರ್ ಖುಷಿಯಿಂದಲೇ ಸಮ್ಮತಿಸಿದ್ದರು. ನಿಶಾ ಎಂದು ದುಡುಕಿನ ನಿರ್ಧಾರ ತೆಗೆುಕೊಳ್ಳುವುದಿಲ್ಲವೆಂದು ನಂಬಿಕೆ ಇತ್ತು. ಒಳ್ಳೆಯ ಹುಡುಗ, ಒಳ್ಳೆಯ ಮನೆತನ, ಅದರಲ್ಲೂ ತಮ್ಮ ಪೈಕಿಯವರೇ ಅಂತಾ ಗೊತ್ತಾದಾಗ ಇನ್ನೂ ಸಮಾಧಾನವಾಗಿತ್ತು. ಮದುವೆಯನ್ನು ಒಂದು ವರ್ಷದ ನಂತರ ಇಟ್ಟುಕೊಳ್ಳುವುದೆಂದು ಎರಡೂ ಕಡೆಯವರು ಸೇರಿ ತೀರ್ಮಾನಿಸಿದ್ದರು ಹಾಗಾಗಿ ನಿಶ್ಚಿತಾರ್ಥ ಮಾಡಿ ಮುಗಿಸಿದ್ದರು.
ಇದ್ದೊಬ್ಬ ಮಗಳ ಮದುವೆಯನ್ನು ತುಂಬಾ ಅದ್ಧೂರಿಯಾಗಿ ಮಾಡಬೇಕೆಂದು ಶ್ರೀಧರ್ ತುಂಬಾ ಕನಸು ಕಂಡಿದ್ದ. ಆದರೆ ಈಗ ಕೊರೋನಾ ಹಾವಳಿಯಿಂದಾಗಿ ಕೇವಲ ನೂರು ಜನರಿಗೆ ಮಾತ್ರ ಆಮಂತ್ರಣ ನೀಡಬೇಕಾಗಿತ್ತು. ಅದೂ ಸಹ ಐವತ್ತು ಜನ ಸಂಬಂಧಿಕರು. ಮುಹೂರ್ತಕ್ಕಾಗಿ, ಅವರ ಊಟ ಮುಗಿದ ನಂತರ ಮಧ್ಯಾಹ್ನ ಒಂದು ಗಂಟೆಗೆ ಅಕ್ಕಪಕ್ಕದವರು ಹಾಗೂ ಸಹೋದ್ಯೋಗಿಗಳು ಎಂದು ವಿಂಗಡನೆ ಮಾಡಲಾಗಿತ್ತು. ಅನೂಪ್ ನ ಕಡೆಯಿಂದ ಕೇವಲ ಹದಿನೈದು ಜನ ಮಾತ್ರ ಬರುವವರಿದ್ದರು. ಗಂಡಿನವರು ಮದುವೆ ಮುಗಿದ ನಂತರ ನಾಲ್ಕು ದಿನಕ್ಕೆ ಬೆಂಗಳೂರಿನಲ್ಲೇ ರಿಸೆಪ್ಷನ್ ಗೆ ಏರ್ಪಾಟು ಮಾಡಿಕೊಂಡಿದ್ದರು.
ನಿಶಾಗೆ ಬರೀ ತನ್ನ ಮದುವೆಗೆ ತಯಾರು ಮಾಡಿಕೊಳ್ಳುವ ಕೆಲಸವೇ ಸಾಕಷ್ಟಿತ್ತು. ಫೋಟೋ ಶೂಟ್ ಗೆ ಬೇಕಾಗುವ ಬಟ್ಟೆಗಳ ಆಯ್ಕೆ. ಟೈಲರ್ ಗೆ ಸೀರೆಗಳಿಗೆ ಕುಚ್ಚು ಕಟ್ಟಲು ಕೊಡುವುದು, ಬ್ಲೌಸ್ ಗಳಿಗೆ ಡಿಸೈನ್ ಸೆಲೆಕ್ಷನ್ ಗೆ ಗೂಗಲ್ ಸರ್ಚ್ ಮಾಡುವುದು, ಬ್ಯೂಟಿ ಪಾರ್ಲರ್ ನಲ್ಲಿ ಪ್ರಿಮೇಕಪ್, ಹೇರ್ ಸ್ಟೈಲ್ ಗಾಗಿ ಎಡತಾಕುವುದು, ಒಂದೇ ಎರಡೇ….. ಎಲ್ಲದಕ್ಕೂ ಆತ್ಮೀಯ ಗೆಳತಿ ಶೀತಲ್ ಜೊತೆಗೆ ಓಡಾಟ ಜೋರಾಗಿತ್ತು. ಜೊತೆಗೆ ಅನೂಪ್ ಕಾಲ್ ತಪ್ಪಿಸಿಕೊಳ್ಳುವ ಹಾಗಿಲ್ಲ. ಸ್ವಲ್ಪ ಲೇಟಾದರೂ ಅವನ ಹುಸಿಕೋಪ ತಣ್ಣಗೆ ಮಾಡುವಷ್ಟರಲ್ಲಿ ನಿಶಾಳ ಮೈಬಿಸಿ ಏರಿಸಿಬಿಡುತ್ತಿದ್ದ.
ಇನ್ನು ಅಚಿಂತ್ಯನಂತೂ ತನ್ನ ಕಾಲೇಜು, ಗೆಳೆಯರು ಅಂತ ಮನೆ ಸೇರುವುದೇ ಲೇಟು. ಅಕಸ್ಮಾತ್ ಎಂದಾದರೂ ಮನೆಯಲ್ಲಿದ್ದ ದಿನ ಅಮ್ಮನಿಗೆ ತನ್ನ ಕೈಲಾದ ಸಹಾಯ ಮಾಡಿಕೊಡುತ್ತಿದ್ದ. ಅವನೇ ಮುಸುರೆ ತುಂಬಿದ ಟಬಲ್ ನ್ನು ಹಿತ್ತಲಿಗೆ ಒಯ್ದು ಇಟ್ಟ.
“ನನ್ನ ಬಂಗಾರ…” ಎನ್ನುತ್ತಾ ಅವನಿಗೆ ಕಾಫಿ ಕೊಟ್ಟು, ಫಾತಿಮಾಗೆ ಟೀ ಸೋಸಿ ಕೊಟ್ಟಳು.
ಇನ್ನೊಂದು ವಾರಕ್ಕೆ ಮನೆ ನೆಂಟರಿಂದ ತುಂಬಿ ತುಳುಕಲು ತಯಾರಾಗಿತ್ತು. ಹಾಗಾಗಿ ಕೈಕೆಲಸಕ್ಕೆ ಜೊತೆಯಾಗಿರಲಿ ಎಂದು ದೊಡ್ಡ ನಾದಿನಿಯ ಕಡೆ ಸಂಬಂಧಿ ಲಕ್ಷ್ಮಿಯನ್ನು ಬಳೆ ಶಾಸ್ತ್ರಕ್ಕೂ ನಾಲ್ಕು ದಿನ ಮೊದಲೇ ಕರೆಸಿಕೊಂಡಿದ್ದಳು. ಗಂಡ ತೀರಿಕೊಂಡ ಆಕೆಯನ್ನು ಎಲ್ಲರೂ ಹೀಗೆ ಮದುವೆ, ಮುಂಜಿ ಮುಂತಾದ ಸಮಾರಂಭಕ್ಕೆ ಕೆಲಸಕ್ಕೆ ಜೊತೆಯಾಗಲು ಕರೆಸಿಕೊಳ್ಳುತ್ತಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೂ ಪುರಸತ್ತಿಲ್ಲದೆ, ಕೆಲಸ ಮಾಡುತ್ತಿದ್ದಳು. ಸ್ವಲ್ಪ ಕೈ ಸುಮಾರು, ಹಾಗಾಗಿ ಮುಂದೆ ಇದ್ದು ನೋಡಿಕೋ ಎಂದು ದೊಡ್ಡ ನಾದಿನಿ ಎಚ್ಚರಿಸಿದ್ದಳು. ಮುಕ್ಕಾಲು ಭಾಗ ಕೆಲಸಗಳನ್ನು ಅವಳೇ ನೋಡಿಕೊಳ್ಳುತ್ತಾ ಇದ್ದುದರಿಂದ ರೇಖಾಳಿಗೆ ಬೇರೆ ಕಡೆ ಗಮನಹರಿಸಲು ಅನುಕೂಲವಾಗಿತ್ತು. ನಾದಿನಿಯರು, ಅಕ್ಕ ತಂಗಿಯರು ಎಲ್ಲರೂ ಬಳೆ ಇಡಿಸುವ ದಿನ ಬೆಳಗ್ಗೆ ಬರುವವರಿದ್ದರು. ಮನೆಯಲ್ಲಿ ಮೊದಲನೇ ಮದುವೆ, ರೇಖಾಳಿಗೆ ಕೈ ಕಾಲುಗಳೇ ಆಡುತ್ತಿರಲಿಲ್ಲ.
ಒಂದೆಡೆ ಮಗಳನ್ನು ಕಳಿಸಿಕೊಡು ದುಃಖ ಬೇರೆ ಎಡೆಬಿಡದೆ ಕಾಡುತ್ತಿತ್ತು. ನಿಶಾಳೇ, “ಅಯ್ಯೋ ಮಮ್ಮಿ,….. ಕೆಲಸ ಮಾಡುವಾಗಲೂ ಬೆಂಗಳೂರಿನಲ್ಲಿದ್ದೆ, ಮದುವೆಯಾದ ಮೇಲೂ ಬೆಂಗಳೂರಿನಲ್ಲೇ ಇರುತ್ತೇನೆ. ನಿನಗೆ ನೋಡಬೇಕು ಎಂದಾಗೆಲ್ಲ ಪುರ್ ಎಂದು ಹಾರಿ ಬರುತ್ತೇನೆ. ಆಯ್ತಾ….,” ಎಂದು ಸಂತೈಸಿದಳು.
`ಮದುವೆಯಾದ ಮೇಲೆ ಅಷ್ಟು ಸುಲಭವಲ್ಲ ನಿಶಾ, ಬೇಕೆಂದಾಗ ಹಾರಿ ಬರಲು,’ ಎಂದು ಬಾಯಿವರೆಗೂ ಬರುತ್ತಿದ್ದ ಮಾತುಗಳನ್ನು ಹಾಗೇ ನುಂಗಿಬಿಡುತ್ತಿದ್ದಳು.
ಬಳೆಯ ಶಾಸ್ತ್ರದ ದಿನ ಓಡೋಡಿ ಬಂದಿತ್ತು. ಮನೆಗೆ ಒಬ್ಬೊಬ್ಬರಾಗಿ ನೆಂಟರು ಇಳಿಯತೊಡಗಿದರು. ಮುಂದೆ ಮೂರು ದಿನಕ್ಕೆ ಮದುವೆ. ನಿಶಾಳಂತೂ ಅಜ್ಜಿಯ ಅಂದರೆ ರೇಖಾಳ ಅತ್ತೆಯ ಸಾಂಪ್ರದಾಯಿಕ ಒಡವೆಗಳನ್ನು ಧರಿಸಿ ಸರ್ವಾಲಂಕಾರ ಭೂಷಿತೆಗಾಗಿ ದಂತದ ಬೊಂಬೆಯ ಹಾಗೆ ಕಂಗೊಳಿಸುತ್ತಿದ್ದಳು. ಅಕ್ಕಿ ರಾಶಿ ಪೂಜೆ, ದೇವರ ಕಾರ್ಯ, ಒಳಕಲ್ಲಿನ ಪೂಜೆ, ಶ್ಯಾವಿಗೆ ಹೊಸೆಯುವುದು…. ಹೀಗೆ ಎಲ್ಲಾ ಶಾಸ್ತ್ರಗಳೂ ಸಾಂಗವಾಗಿ ನಡೆದವು.
ಬಳೆ ಪೂಜೆ ಮಾಡಿ ಎಲ್ಲ ಹೆಣ್ಣುಮಕ್ಕಳು ಬಳೆ ತೊಟ್ಟು, ಊಟವಾಗುವ ಹೊತ್ತಿಗೆ ಸಂಜೆಯಾಗಿತ್ತು. ಮೆಹೆಂದಿಯವರಿಗೆ ಸಂಜೆಯ ಮೇಲೆ ಬರಲು ಹೇಳಿದ್ದರಿಂದ, ಆಗಲೇ ಇಬ್ಬರು ಹುಡುಗಿಯರು ಬಂದು ಕಾಯುತ್ತಾ ಕುಳಿತಿದ್ದರು.
ನಿಶಾ ಉಟ್ಟ ರೇಷ್ಮೆ ಸೀರೆ ಬದಲಿಸಿ, ಒಡವೆಯನ್ನೆಲ್ಲ ಅಲಮಾರಿನಲ್ಲಿಟ್ಟು, ಮೆಹೆಂದಿಯ ದಿನಕ್ಕೆಂದೇ ಕೊಂಡಿದ್ದ ಗೌನ್‌ಹಾಕಿಕೊಂಡು, ಹಂಸದಂತೆ ತಯಾರಾಗಿದ್ದಳು. ಅವಳ ಗೆಳತಿಯರು, ಮನೆಯಲ್ಲಿರುವ ಎಲ್ಲ ಹೆಣ್ಣುಮಕ್ಕಳೂ ಮೆಹೆಂದಿಗಾಗಿ ಡಿಸೈನ್ ಗಳನ್ನು ಹುಡುಕುವುದರಲ್ಲಿ ಮಗ್ನರಾಗಿದ್ದರು. ಹಾಡು ಹೇಳುತ್ತಾ, ನಗುತ್ತಾ, ನಲಿಯುತ್ತಾ, ನಿಶಾಳನ್ನು ಕಾಡಿಸುತ್ತಾ ಎಲ್ಲರೂ ಸಂಭ್ರಮದಲ್ಲಿದ್ದರು. ಎಲ್ಲರನ್ನೂ ಊಟಕ್ಕೆ ಎಬ್ಬಿಸುವಷ್ಟರಲ್ಲಿ ರಾತ್ರಿ ಹನ್ನೊಂದಾಗಿತ್ತು.
ಅಷ್ಟರಲ್ಲಿ ಲಕ್ಷ್ಮಿಯ ಊರಿನಿಂದ ಕರೆ ಬಂದಿತ್ತು. ಆಕೆಯ ಮಗನಿಗೆ ಆ್ಯಕ್ಸಿಡೆಂಟ್ ಆಗಿ ಕಾಲು ಮುರಿದುಕೊಂಡಿದ್ದ. ನೋಡಿಕೊಳ್ಳಲು ಬೇರೆಯವರು ಇಲ್ಲದ ಕಾರಣ ಲಕ್ಷ್ಮಿ ರಾತ್ರಿಯೇ ಹೊರಡಬೇಕಾಯಿತು. ಎಂತಹ ಸಮಯದಲ್ಲಿ ಕೈಕೊಡುತ್ತಿದ್ದಾಳೆ ಎಂದು ರೇಖಾಗೆ ಅನಿಸಿದರೂ, `ಪಾಪ… ಹೆತ್ತ ಕರುಳು,’ ಕೇಳಬೇಕಲ್ಲ, ಎನಿಸಿ ಅವಳಿಗೆ ಐದು ಸಾವಿರ ಕೊಟ್ಟು, ಧೈರ್ಯ ಹೇಳಿ ಅಚಿಂತ್ಯನನ್ನು ಜೊತೆ ಮಾಡಿ ಬಸ್ ಸ್ಟಾಂಡ್ ಗೆ ಕಳಿಸಿದಳು. ಎಷ್ಟು ಹೊತ್ತಾದರೂ ಪರವಾಗಿಲ್ಲ, ಸರಿಯಾಗಿ ಅನಳನ್ನು ಊರಿನ ಬಸ್ ಹತ್ತಿಸಿ ಬಾ, ಅನಳಿಗೆ ಗೊತ್ತಾಗುವುದಿಲ್ಲ ಎಂದು ಮಗನಿಗೆ ಎಚ್ಚರಿಸಿಯೇ ಕಳುಹಿಸಿದ್ದಳು.
ಅತಿಥಿಗಳು, ನಿಶಾ ಹಾಗೂ ಅಚಿಂತ್ಯನ ಸ್ನೇಹಿತರಿಗಾಗಿ ಹೋಟೆಲ್ ನ ರೂಮುಗಳನ್ನು ಬುಕ್ ಮಾಡಿದ್ದರು. ಅಚಿಂತ್ಯ ರಾತ್ರಿ ಎಲ್ಲರನ್ನೂ ತಲುಪಿಸುವ ಜವಾಬ್ದಾರಿ ಹೊತ್ತಿದ್ದ. ಜೊತೆಗೆ ಅಚಿಂತ್ಯ ತನ್ನ ಗೆಳೆಯರೊಂದಿಗೆ ಅಲ್ಲೇ ಉಳಿದುಕೊಳ್ಳುತ್ತೇನೆ ಎಂದು ಹೇಳಿದ್ದ. ಈಗಿನ ಕಾಲದ ಹುಡುಗರು, ಒಟ್ಟಾಗಿ ಸೇರಿದ ಮೇಲೆ ಡ್ರಿಂಕ್ಸ್, ಸಿಗರೇಟು ಅಂತ ಎಂಜಾಯ್ ಮಾಡುವುದನ್ನು ತಪ್ಪಿಸುವುದಿಲ್ಲ. ಇದೆಲ್ಲ ಶ್ರೀಧರ್ ಹಾಗೂ ರೇಖಾಗೆ ಗೊತ್ತಿದ್ದರೂ ಅಚಿಂತ್ಯ ಹಾಗೂ ನಿಶಾ ಪ್ರತಿಯೊಂದು ವಿಷಯವನ್ನು ಮುಚ್ಚುಮರೆ ಇಲ್ಲದೆ ತಿಳಿಸುತ್ತಿದ್ದರಿಂದ ಅವರೆಲ್ಲರ ನಡುವೆ ಪೋಷಕ ಮಕ್ಕಳ ಬಾಂಧ್ಯಕ್ಕಿಂತ ಗೆಳೆತನವೇ ಹೆಚ್ಚಿತ್ತು.
ರೇಖಾಳಿಗಂತೂ ಬೆಳಗ್ಗೆಯಿಂದ ಪುರಸತ್ತಿಲ್ಲದೆ ಓಡಾಡಿದ್ದರಿಂದ ಕಾಲುಗಳು ಮುಷ್ಕರ ಹೂಡುತ್ತಿದ್ದವು. ಮನೆಯಲ್ಲಿ ಇಬ್ಬರು ನಾದಿನಿಯರು ಹಾಗೂ ತಂಗಿಯ ಸಂಸಾರ ಮಾತ್ರ ಉಳಿದುಕೊಂಡಿದ್ದರು. ಲಕ್ಷ್ಮಿ ಇಲ್ಲದ್ದು ಕೈ ಕಾಲು ಮುರಿದಂತಾಗಿತ್ತು. ಆದರೆ ಎಲ್ಲರೂ ಹೊಂದಿಕೊಂಡು ಹೋಗುವಂತಹ ಹತ್ತಿರದವರೇ ಇದ್ದಿದ್ದರಿಂದ, ಎಲ್ಲರೂ ಎಲ್ಲ ಕೆಲಸಕ್ಕೂ ಕೈಜೋಡಿಸಿದರು. ಎಲ್ಲರಿಗೂ ಮಲಗಲು ಅಣಿ ಮಾಡಿ ಕೊಟ್ಟು ಮಲಗುವ ಕೋಣೆಗೆ ಬಂದಳು.
ಶ್ರೀಧರ್ ಆಗಲೇ ಗೊರಕೆ ಹೊಡೆಯುತ್ತಿದ್ದ. ಒಡವೆ ಬಿಚ್ಚಿ ಅಲಮಾರಿನಲ್ಲಿ ಇಡಲು ತೆರೆದಳು. ಎಲ್ಲಾ ಅಸ್ತವ್ಯಸ್ತ. ಈ ಹುಡುಗಿಗೆ ಮದುವೆಯಾಗ ಹೊರಟರೂ ಇನ್ನೂ ಬುದ್ದಿ ಬಂದಿಲ್ಲ. ಬಂಗಾರವನ್ನು ಯಾವಾಗಲೂ ಜೋಪಾನವಾಗಿಡಬೇಕು. ಕಳೆಯುವುದು ಸುಲಭ. ಆದರೆ ಒಂದು ಗ್ರಾಂ ಕೊಂಡುಕೊಳ್ಳಬೇಕೆಂದರೂ ತುಂಬಾ ದುಬಾರಿ ಎಂದು ಎಷ್ಟು ಸಲ ಹೇಳಿದರೂ ಕೇಳುವುದಿಲ್ಲ. ಎಲ್ಲೋ ಒಂದು ಕಡೆ ಇಟ್ಟುಬಿಡುತ್ತಾಳೆ ಹುಚ್ಚು ಹುಡುಗಿ ಎನ್ನುತ್ತಾ ಎಲ್ಲ ಸರಿ ಮಾಡತೊಡಗಿದಳು.
ಎಲ್ಲಿ ಹುಡುಕಿದರೂ ನಿಶಾ ಬಿಚ್ಚಿಟ್ಟ ಒಡವೆಗಳು ಕಾಣಲಿಲ್ಲ. ಎದೆ ಧಸಕ್ಕೆಂದಿತು, ಮತ್ತೆ ಎಲ್ಲವನ್ನೂ ಕೆದಕಿ ಹುಡುಕಾಡಿದಳು. ಏನೂ ಸಿಗಲಿಲ್ಲ. ಮೈಯೆಲ್ಲಾ ಬೆರೊಡೆಯಲು ಶುರುವಾಯಿತು. ಬೇರೆ ಎಲ್ಲ ಒಡವೆಗಳೂ ಒಳಗಿನ ಲಾಕರ್ ನಲ್ಲಿ ಇಟ್ಟಿದ್ದು ಹಾಗೇ ಇದ್ದವು, ಇವು ಮಾತ್ರ ಕಾಣೆಯಾಗಿದ್ದವು. ನಿಶಾಳ ರೂಮಿಗೆ ಓಡಿ ಹೋಗಿ, “ನಿಶಾ… ನಿಶಾ…,” ಎಂದು ಎಬ್ಬಿಸಿದಳು.
ಅನೂಪ್ ನ ಕನಸನ್ನು ಕಾಣುತ್ತಾ ಸಕ್ಕರೆ ನಿದ್ದೆಯಲ್ಲಿದ್ದ ನಿಶಾ ಆಕಳಿಸುತ್ತಾ, “ಏನಮ್ಮಾ…. ಇಷ್ಟು ಹೊತ್ತಿನಲ್ಲಿ,” ಎಂದಳು.
“ಒಡವೆಗಳನ್ನು ಎಲ್ಲಿ ಇಟ್ಟಿದ್ದೀಯಾ ಸಿಕ್ತಾನೇ ಇಲ್ಲ…..” ಎಂದಳು.
“ಅಯ್ಯೋ….. ಅಲ್ಲೆ ಸೀರೆಯ ಮೇಲೆ ಪರ್ಸಿನಲ್ಲಿ ಇಟ್ಟಿದ್ದೀನಮ್ಮಾ, ಸ್ವಲ್ಪ ಸರಿಯಾಗಿ ನೋಡು,” ಎಂದು ಮತ್ತೆ ಮಲಗಲು ಹೋದವಳನ್ನು, “ಮೊದಲು ಎಲ್ಲಿ ಅಂತಾ ತೋರಿಸು ಬಾ, ಆಮೇಲೆ ಮಲಗುವೆಯಂತೆ,” ಎಂದು ಕೈಹಿಡಿದು ಎಬ್ಬಿಸಿದಳು.
ನಿಶಾ ಗೊಣಗುತ್ತಲೇ ಎದ್ದು ಬಂದು ಅಲಮಾರಿಯಲ್ಲಿ ಇಟ್ಟಿದ್ದ ಪರ್ಸ್ ಹುಡುಕತೊಡಗಿದಳು. ಊಹ್ಞೂಂ…. ಎಲ್ಲೂ ಕಣ್ಣಿಗೆ ಬೀಳಲಿಲ್ಲ, “ಇಲ್ಲೇ ಇಟ್ಟಿದ್ದೆ,” ಎನ್ನುತ್ತಾ ಎಲ್ಲ ಕೆದರತೊಡಗಿದಳು.
ಸಪ್ಪೆ ಮುಖ ಮಾಡಿಕೊಂಡು ರೇಖಾಳ ಕಡೆಗೆ ತಿರುಗಿ, ಸಿಗಲಿಲ್ಲ ಎಂದು ಗೋಣಾಡಿಸಿ ತಲೆ ತಗ್ಗಿಸಿದಳು. ಶ್ರೀಧರನಿಗೆ ಗೊತ್ತಾದರೆ, ನಿಮ್ಮ ಸಾಮಾನು ನಿಮಗೆ ಸರಿಯಾಗಿ ಇಟ್ಟುಕೊಳ್ಳಲು ಬರುವುದಿಲ್ಲ ಎಂದು ಎಗರಾಡುತ್ತಾನೆ ಎಂದು ಗೊತ್ತಿದ್ದರಿಂದ, ಇಬ್ಬರೂ ನಿಶ್ಶಬ್ದವಾಗಿ ಹೊರಗಡೆ ಬಂದರು. ಸಧ್ಯ, ಮದುವೆಗೆ ಕೊಡಬೇಕಾದ ಒಡವೆಗಳೆಲ್ಲಾ ಸುರಕ್ಷಿತವಾಗಿದ್ದವು. ಇವು ರೇಖಾಳ ಅತ್ತೆಯ ಹಳೆಯ ಕಾಲದ ಒಡವೆಗಳಾದ್ದರಿಂದ, ಜೊತೆಗೆ ತಲತಾಂತರದಿಂದ ಮನೆಯ ಸೊಸೆಗೆ ಸೇರಬೇಕಾದ ಅಂದರೆ ಅಚಿಂತ್ಯನ ಹೆಂಡತಿಗೆ ಸೇರಬೇಕಾದ. ಹಾಗಾಗಿ ಮನೆಮಗಳು ಈ ಮದುವೆಯಲ್ಲಿ ತೊಟ್ಟು ಆಸೆ ಪೂರೈಸಿಕೊಳ್ಳಲಿ ಎಂಬ ಆಲೋಚನೆ ಜೊತೆಗೆ ಅಲಂಕಾರ ಎಲ್ಲಾ ಸಾಂಪ್ರದಾಯಿಕವಾಗಿರಲಿ ಎಂದು ನಿಶಾ ಅವುಗಳನ್ನು ತೊಟ್ಟಿದ್ದಳು.
ನಿಶಾಳ ರೂಮಿನಲ್ಲಿ ಕುಳಿತು ಅಚಿಂತ್ಯನಿಗೆ ಕರೆ ಮಾಡಿ ವಿಷಯ ತಿಳಿಸಿದಳು. ಫ್ರೆಂಡ್ಸ್ ಜೊತೆಗೆ ಲೈಟಾಗಿ ಡ್ರಿಂಕ್ಸ್ ತೆಗೆದುಕೊಳ್ಳುತ್ತಿದ್ದ ಅವನು, ಸ್ವಲ್ಪ ಹೊತ್ತು ಯೋಚಿಸಿ, “ಮಮ್ಮಿ… ನೀವೆಲ್ಲಾ ಮೆಹೆಂದಿ ಹಾಕಿಸಿಕೊಳ್ಳುವಾಗ ಲಕ್ಷ್ಮೀ ಆಂಟಿ ಒಂದೆರಡು ಸಲ ನಿನ್ನ ರೂಮಿಗೆ ಹೋಗಿದ್ದರು. ಒಮ್ಮೆ ಕಸ ಗುಡಿಸುವುದನ್ನು ನೋಡಿದೆ,” ಎಂದ.
“ನೋಡು, ಈಗ ಒಡವೆ ಹೋಗಿದ್ದಕ್ಕಿಂತ ಹೆಚ್ಚಾಗಿ ನಿಮ್ಮಪ್ಪನಿಗೆ ಹೇಗೆ ಹೇಳುವುದು? ಅವೆಲ್ಲ ಅವರಮ್ಮನ ಒಡವೆಗಳು, ಅದೂ ಮನೆ ಸೊಸೆಗೆ ಸೇರಬೇಕಾದ. ಅಂಥವುಗಳನ್ನು ಕಳೆದುಕೊಂಡಿದ್ದಕ್ಕೆ ಏನೆನ್ನುತ್ತಾರೋ….?” ಎನ್ನುತ್ತಾ ನಿಶಾಳ ಸಣ್ಣದಾದ ಮುಖ ನೋಡಿ, “ಸದ್ಯಕ್ಕೆ ನೀನು ಮಲಗು, ಜಾಸ್ತಿ ಯೋಚನೆ ಮಾಡಬೇಡ. ಬೆಳಗ್ಗೆ ಎದ್ದ ಕೂಡಲೇ ನಿಮ್ಮಪ್ಪನ ಜೊತೆ ಪೊಲೀಸ್ ಸ್ಟೇಷನ್ನಿಗೆ ಹೋಗಿ ಬರ್ತೀನಿ. ಮನೆಯಲ್ಲಿ ಇರುವವರಿಗೆ ಏನೂ ಗುಟ್ಟು ಬಿಟ್ಟುಕೊಡಬೇಡ. ಏನೋ ಮದುವೆ ಕೆಲಸದ ಮೇಲೆ ಹೊರಗೆ ಹೋಗುತ್ತೇವೆ ಎಂದು ಹೇಳುತ್ತೇನೆ. ರೂಮಿನ ಬಾಗಿಲು ಹಾಕಿಕೋ,” ಎಂದು ಹೇಳಿ ಬಂದು ಶ್ರೀಧರನ ಪಕ್ಕದಲ್ಲಿ ಉರುಳಿದಳು.
ರಾತ್ರಿಯೆಲ್ಲ ನಿದ್ದೆ ಬರದೆ ಹೊರಳಾಡಿದಳು. ಕಾಣೆಯಾಗಿರುವುದು ಹತ್ತಿರ ಹತ್ತಿರ ಹದಿನೈದು ಲಕ್ಷದಷ್ಟು ಒಡವೆ. ಲಕ್ಷ್ಮಿಯ ಬಗ್ಗೆ ಅಸಾಧ್ಯ ಸಿಟ್ಟು ಬಂತು. ಬೀದೀಲಿ ಹೋಗೋ ಮಾರಮ್ಮನನ್ನು ಕರೆದು ಒಳಗೆ ಸೇರಿಸಿದಿ ಎಂದುಕೊಳ್ಳುತ್ತಾ, ಅವಳ ಮೇಲೆ ಎಷ್ಟು ಕಣ್ಣಿಟ್ಟು ಕಾದಿದ್ದೆ. ಅದೇನು ಮಗನಿಗೆ ಆ್ಯಕ್ಸಿಡೆಂಟ್ ಅಂತ ನಿಜ ಹೇಳಿದೆಯಲ್ಲೋ…. ಇಲ್ಲ ಒಡವೆ ಎಗರಿಸಿಕೊಂಡು ಹೋಗಲು ಸುಳ್ಳು ಸುಳ್ಳೇ ಕಥೆ ಕಟ್ಟಿದಲ್ಲೋ ಒಂದೂ ತಿಳಿಯುತ್ತಿಲ್ಲ, ಎಂದು ಪೇಚಾಡಿಕೊಂಡಳು.
ಬೆಳಗ್ಗೆ ಆರು ಗಂಟೆ ಆಗುವುದನ್ನೇ ಕಣ್ಣಿನಲ್ಲಿ ಎಣ್ಣೆ ಬಿಟ್ಟು ಕಾಯ್ದುಕೊಂಡಿದ್ದ ರೇಖಾ, ಶ್ರೀಧರ್ ಏಳುವುದನ್ನೇ ಕಾಯುತ್ತಿದ್ದಳು. ಅವನು ಎದ್ದ ಕೂಡಲೇ ನಿಧಾನವಾಗಿ ವಿಷಯ ತಿಳಿಸಿದಳು. ಅವನ ಸಿಟ್ಟು ನೆತ್ತಿಗೇರಿ ಸ್ವಲ್ಪ ಹೊತ್ತು ಕೂಗಾಡಿದ. ನಂತರ ಮನೆಯಲ್ಲಿ ಮದುವೆಗೆ ಬಂದ ಜನರಿದ್ದುದು ನೆನಪಾಗಿ ಶಾಂತನಾದ. ಜೊತೆಗೆ ತನ್ನ ಅಕ್ಕನ ಶಿಫಾರಸ್ಸಿನಿಂದಲೇ ಲಕ್ಷ್ಮಿಯನ್ನು ಸಹಾಯಕ್ಕೆ ಕರೆಸಿಕೊಂಡಿದ್ದರಿಂದ ರೇಖಾಳನ್ನು ದೂರುವುದು ಸರಿಯಲ್ಲ ಎನಿಸಿ ಸುಮ್ಮನಾದ.
“ಪೊಲೀಸ್ ಸ್ಟೇಷನ್ನಿನಲ್ಲಿ ಕಳೆದ ಒಡವೆಗಳ ಮಾಹಿತಿ ಕೇಳುತ್ತಾರೆ. ನನಗೆ ಅದೆಲ್ಲ ಗೊತ್ತಾಗುವುದಿಲ್ಲ, ಬೇಗ ರೆಡಿಯಾಗು,” ಎಂದು ರೇಖಾಳಿಗೆ ಹೇಳಿ ಸ್ನಾನಕ್ಕೆ ಹೋದ. ರೇಖಾ ಅದನ್ನು ಮೊದಲೇ ಊಹಿಸಿದ್ದರಿಂದ, ತಂಗಿಗೆ ಮಾತ್ರ ಸೂಕ್ಷ್ಮವಾಗಿ ವಿಷಯ ತಿಳಿಸಿ ಲಗುಬಗೆಯಿಂದ ರೆಡಿಯಾದಳು. ನಾದಿನಿಯರಿಗೆ ತಿಳಿದರೆ ಅವರಮ್ಮನ ಒಡವೆ ಹೋದದ್ದಕ್ಕೆ ಸುಮ್ಮನೆ ಬೇಜಾರು ಮಾಡಿಕೊಳ್ಳುತ್ತಾರೆ ಎಂದು ತಿಳಿಸಲು ಹೋಗಲಿಲ್ಲ. ಮದುವೆಯ ಮುಂದಿನ ಕಾರ್ಯಗಳು ಮರುದಿನ ಸಂಜೆಯಿಂದ ಪ್ರಾರಂಭವಾಗುತ್ತಿದ್ದವು. ಆದ್ದರಿಂದ ಬಂದ ಬೀಗರು, ಮಕ್ಕಳ ಸ್ನೇಹಿತರೆಲ್ಲರೂ ಸಹ ಹತ್ತಿರವಿದ್ದ ಫಾಲ್ಸ್ ನೋಡಿಕೊಂಡು ಬರಲು ತಯಾರಾಗಿದ್ದು ಒಂದು ರೀತಿಯಲ್ಲಿ ಅನುಕೂಲವಾಗಿತ್ತು.
ಪೊಲೀಸ್ ಸ್ಟೇಷನ್ ನಲ್ಲಿ ಎಲ್ಲಾ ವಿವರಗಳನ್ನು ನೀಡಿ ಕಂಪ್ಲೇಂಟ್ ದಾಖಲಿಸಿ ಬರುವ ಹೊತ್ತಿಗೆ ಮಧ್ಯಾಹ್ನ ಹನ್ನೆರಡು ದಾಟಿತ್ತು. ಶ್ರೀಧರ ಅಲ್ಲಿಂದ ಬರುವಾಗಲೇ, “ಆಗಿದ್ದು ಆಗಿಹೋಯಿತು. ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಮುಖ ಸಪ್ಪಗೆ ಮಾಡಿಕೊಳ್ಳಬೇಡ. ಮದುವೆಗೆ ಮೊದಲು ನಿಶಾಳ ಮನಸ್ಸಿಗೆ ನೋವಾಗುವುದು ಬೇಡ. ಸಹಜವಾಗಿರು,” ಎಂದು ಹೇಳಿ ಕರೆದುಕೊಂಡು ಬಂದ.
ಎಷ್ಟೇ ಸಹಜವಾಗಿ ಇರಲು ಪ್ರಯತ್ನಿಸಿದರೂ ಒಮ್ಮೊಮ್ಮೆ ಅಸಹನೆ ಇಣುಕಿಬಿಡುತ್ತಿತ್ತು. ನಿಶಾಳಂತೂ ತುಂಬಾ ಬೇಜಾರಿನಿಂದ, “ಮಮ್ಮೀ, ನನ್ನ ಸೇವಿಂಗ್ಸ್ ನಿಂದ ಅದೆಲ್ಲವನ್ನೂ ಖರೀದಿ ಮಾಡು,” ಎಂದಾಗ ಶ್ರೀಧರ್ ಗದರಿದ್ದ.
“ಸುಮ್ಮನೆ ತಲೆ ಕೆಡಿಸ್ಕೊಬೇಡಾ ಚಿನ್ನು, ಸಿಕ್ಕೇ ಸಿಗುತ್ತೆ. ಸಿಗದಿದ್ದರೂ ಚಿಂತೆಯಿಲ್ಲ. ನೀನು ನಗ್ತಾ ನಗ್ತಾ ಈ ಮನೆಯಿಂದ ಆ ಮನೆಗೆ ಎಂಟ್ರಿ ಕೊಡ್ಬೇಕು ಗೊತ್ತಾಯ್ತಾ….” ಎಂದು ಪ್ರೀತಿಯಿಂದ ಗದರಿದಾಗ, ನಿಶಾ ಓಡಿ ಬಂದು ಅಪ್ಪನ ಎದೆಗೊರಗಿ ಅತ್ತಳು, ಶ್ರೀಧರ್ ಮಮತೆಯಿಂದ ಅಳ ತಲೆ ನೇನರಿಸಿದ.
ಮರುದಿನ ಸಂಜೆಯಿಂದ ಮದುವೆಯ ಕಾರ್ಯಕ್ರಮಗಳು ಶುರುವಾದವು. ಯಾಕೋ ಶ್ರೀಧರ್ ಸ್ವಲ್ಪ ಟೆನ್ಶನ್ ನಲ್ಲಿ ಇದ್ದ ಹಾಗೆ ಕಾಣುತ್ತಿದ್ದ.
“ಏನಾಯ್ತು…?” ಎಂದು ರೇಖಾ ಕೇಳಿದಳು.
“ಪೊಲೀಸ್ ಸ್ಟೇಷನ್ನಿನಿಂದ ಫೋನು ಬಂದಿದೆ. ಒಡವೆಗಳು ಸಿಕ್ಕಿದಂತೆ, ಬರಬೇಕೆಂದು ಹೇಳಿದ್ದಾರೆ,” ಎಂದ.ರೇಖಾಳಿಗೆ ಖುಷಿಯಿಂದ ಕುಣಿದಾಡುವಂತಾಯಿತು, `ಅಬ್ಬಾ…. ಮನೆ ದೇವರಿಗೆ ಹರಕೆ ಹೊತ್ತಿದ್ದಕ್ಕೂ ಸಾರ್ಥಕವಾಯಿತು,’ ಎಂದುಕೊಂಡು ಮನದಲ್ಲೇ ನಮಿಸಿದಳು.
“ಲಗ್ನಪತ್ರಿಕೆ ಶಾಸ್ತ್ರದ ಕಾರ್ಯಕ್ರಮ ಮುಗಿಸಿ ನೀವು ಹೋಗಿ ಬನ್ನಿ. ಆಮೇಲೆ ಬರೀ ಅರಿಶಿನ ಹಚ್ಚು ಕಾರ್ಯಕ್ರಮ. ಗಂಡಸರ ಕೆಲಸವೇನೂ ಇರೋದಿಲ್ಲ. ಇಲ್ಲಿದ್ದು ನಾನು ಮ್ಯಾನೇಜ್ ಮಾಡ್ತೀನಿ,” ಎಂದಳು ರೇಖಾ.
“ಆಯ್ತು…ಹಾಗೇ ಮಾಡ್ತೀನಿ,” ಎಂದ.
ಬೆಳಗ್ಗೆ ಅವಸರದಲ್ಲಿ ತಿಂಡಿ ತಿಂದು ಹೊರಟ ಅಚಿಂತ್ಯ ಮತ್ತು ಅವನ ಗೆಳೆಯರ ಗ್ಯಾಂಗ್ ನ ಪತ್ತೆಯೇ ಇರಲಿಲ್ಲ. ಹೋಗುವಾಗಲೇ ಸಂಜೆಯ ಮೇಲೆ ಇಲ್ಲೇ ಇರಬೇಕು ಎಂದು ರೇಖಾ ಹುಸಿಮುನಿಸಿನಿಂದ ಗದರಿಸಿಯೇ ಕಳಿಸಿದ್ದಳು.
`ಓಹ್ ಮಮ್ಮಿ….. ತುಂಬಾ ಬೋರಾಗ್ತಿದೆ. ನೀರಸಾಗರ ಡ್ಯಾಮ್ ಗೆ ಹೋಗ್ತಿದ್ದೀವಿ. ಸಂಜೆಯ ಹೊತ್ತಿಗೆ ಮನೆಯಲ್ಲಿರುತ್ತೇವೆ ಆಯ್ತಾ,” ಎಂದು ಹೇಳಿ ಹೋದವರ ಸುಳಿವೂ ಸಹ ಇಲ್ಲ.
ಈ ಗಂಡು ಹುಡುಗರಿಗೆ ಎಷ್ಟು ಹೇಳಿದರೂ ಅಷ್ಟೇ. ಹೋಗಲಿ ಬಿಡು ಅವರು ಇದ್ದಾದರೂ ಮಾಡುವುದು ಏನಿದೆ? ಎಲ್ಲಾ ಹೆಂಗಸರ ಕೆಲಸಗಳು ಅಂದುಕೊಂಡಳಾದರೂ ಒಮ್ಮೆ ಕರೆ ಮಾಡಿದಳು. ಸ್ವಿಚ್ ಆಫ್ ಬಂತು. ಮತ್ತೆ ತಲೆ ಕೆಡಿಸಿಕೊಳ್ಳಲು ಹೋಗದೆ ಹೆಣ್ಣುಮಕ್ಕಳ ಸಂಭ್ರಮದಲ್ಲಿ ಭಾಗಿಯಾದಳು.
ಶ್ರೀಧರ್ ಬಂದಾಗ ರಾತ್ರಿ ಹನ್ನೆರಡು ಗಂಟೆ. ಆಗತಾನೇ ಅರಿಶಿನ ಶಾಸ್ತ್ರ ಮುಗಿದಿತ್ತು. ಅಚಿಂತ್ಯನೂ ಅಪ್ಪನ ಜೊತೆಗೇ ಬಂದಿದ್ದು ನೋಡಿ ಬೈಯ್ಯಲು ಬಾಯ್ತೆರೆದಳು. ಅವನ ತುಟಿ, ಕೆನ್ನೆಗಳು ಊದಿ ಕೆಂಪಾಗಿದ್ದುದನ್ನು ಕಂಡು, “ಅಯ್ಯೋ, ಏನಾಯ್ತೋ ಸೋನೂ….?” ಎಂದು ಅವನ ಕೆನ್ನೆ ಸವರಿದಳು.
“ಅದೇ ಅವನ ಗೆಳೆಯರೆಲ್ಲ ಸೇರಿ ನೀರಸಾಗರ ಡ್ಯಾಂ ನೋಡಲು ಬೈಕ್ ಗಳನ್ನು ತೆಗೆದುಕೊಂಡು ಹೋಗಿದ್ದರಲ್ಲ, ಬರುವಾಗ ಇವನ ಬೈಕ್ ಸ್ಕಿಡ್ ಆಗಿ ಬಿದ್ದು ಈ ಅವತಾರ. ಪೊಲೀಸ್ ಸ್ಟೇಷನ್ ಗೆ ಹೋದಾಗ, ಇವನ ಫೋನೂ ಬಂತು. ಹಾಗೆಯೇ ಡಾಕ್ಟರ್‌ಹತ್ತಿರ ಕರೆದುಕೊಂಡು ಹೋಗಿ ಬಂದೆ,” ಎಂದು ಶ್ರೀಧರ್ ಹೇಳಿದ.
“ಛೇ… ಯಾಕೋ ಎರಡು ದಿನಗಳಿಂದ ಒಂದಾದ ಮೇಲೊಂದು ಅಪಶಕುನಗಳೇ,” ಎಂದು ರೇಖಾಳ ಮನಸ್ಸು ಗಾಬರಿಗೊಂಡಿತು.
ಅಚಿಂತ್ಯನಿಗೆ ಊಟ ಮಾಡಿಸಿ, ಮಾತ್ರೆ ಕೊಟ್ಟು ಮಲಗಿಸುವಾಗ ಕಣ್ಣೀರು ದಳದಳನೆ ಉದುರಿದವು. “ಸಾರಿ ಮಮ್ಮಿ…..” ಎಂದ ಅಚಿಂತ್ಯ.
“ಇರಲಿ ಬಿಡು ನೋವು ಹೇಗಿದೆ….?” ಎಂದಳು.
“ಅಷ್ಟೇನೂ ನೋವಿಲ್ಲ. ನಾಳೆಯ ಹೊತ್ತಿಗೆ ಸರಿಹೋಗ್ತೀನಿ ಬಿಡು,” ಎಂದನಾದರೂ ಮತ್ತೇನೋ ಹೇಳಲು ಹೋಗಿ ಸುಮ್ಮನಾದ.
ಹೆತ್ತವಳ ಸಂಕಟ ಅಷ್ಟು ಸುಲಭವಾಗಿ ಕಡಿಮೆಯಾಗುವುದಿಲ್ಲ ಎಂದು ಎಲ್ಲರೂ ಸುಮ್ಮನಾದರು. ರಾತ್ರಿ ಮಗನ ಬಳಿಯಲ್ಲಿಯೇ ಮಲಗಿದಳು.
ಬೆಳಗ್ಗೆ ಅವನಿಗೆ ಮುಖ ತೊಳೆಯಲು ಸಹಾಯ ಮಾಡಿ, ಬಿಸಿಬಿಸಿ ಕಾಫಿ ಮಾಡಿಕೊಟ್ಟು, “ಮುಹೂರ್ತ ಹೇಗಿದ್ದರೂ ಹತ್ತು ಗಂಟೆಗೆ ಇದೆ. ನೀನು ಇನ್ನೂ ಸ್ವಲ್ಪ ಹೊತ್ತು ಮಲಗು, ಅಷ್ಟು ಹೊತ್ತಿಗೆ ರೆಡಿಯಾದರೆ ಸಾಕು,” ಎಂದು ಬೆಡ್ ಶೀಟ್ ಹೊದಿಸಿ ಹೊರಬಂದಳು.
ಸ್ನಾನ ಮಾಡುವವರು, ತಿನ್ನುವವರು ಹೀಗೆ ಎಲ್ಲರೂ ಅವರವರ ಕೆಲಸದಲ್ಲಿ ಮಗ್ನರಾಗಿದ್ದರು. ಮುಹೂರ್ತ ಕಟ್ಟಿಸಲು ಸ್ವಾಮಿಗಳು ಆಗಲೇ ಬಂದು ತಯಾರಿ ಮಾಡಿಕೊಳ್ಳುತ್ತಿದ್ದರು. ರೇಖಾಳ ತಂಗಿಯೇ ಎಲ್ಲದಕ್ಕೂ ಜವಾಬ್ದಾರಿ ವಹಿಸಿಕೊಂಡು ಓಡಾಡುತ್ತಿದ್ದಳು.
ಬೀಗರ ಕಡೆಯವರದ್ದೂ ಸಹ ಏನೊಂದೂ ತಕರಾರಿಲ್ಲದ್ದು ಎಲ್ಲರಿಗೂ ಸಂತೋಷವೆನಿಸಿತು. ಎಲ್ಲರೂ ನಿಶಾಳ ಅದೃಷ್ಟವನ್ನು ಕೊಂಡಾಡುವವರೇ. ಅಂತೂ ಶುಭ ಮುಹೂರ್ತದಲ್ಲಿ ನಿಶಾಳ ಕುತ್ತಿಗೆಗೆ ಅನೂಪ್ ತಾಳಿ ಕಟ್ಟಿದ. ಅಚಿಂತ್ಯನೂ ಮುಹೂರ್ತಕ್ಕೆ ಸರಿಯಾಗಿ ರೆಡಿಯಾಗಿ ಬಂದಿದ್ದ. ಮೈಯೆಲ್ಲಾ ನೋವಿನಿಂದ ಸುಸ್ತಾಗಿದ್ದರೂ ಅಕ್ಕನ ಮದುವೆಯಲ್ಲಿ ಎಲ್ಲರನ್ನೂ ಮಾತನಾಡಿಸುತ್ತಾ, ಊಟದ ಕಡೆಗೆ ಎಲ್ಲ ವ್ಯವಸ್ಥೆ ನೋಡಿಕೊಳ್ಳುತ್ತಿದ್ದುದನ್ನು ಕಂಡು ರೇಖಾಳ ಹೃದಯ ತುಂಬಿ ಬಂದಿತ್ತು. ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಎಲ್ಲರ ಊಟವಾಗಿ ಒಬ್ಬೊಬ್ಬರೇ ಊರಿಗೆ ಹೋಗಲು ರೆಡಿಯಾಗಿ ನಿಂತರು. ಕೊರೋನಾ ಕಾಲವಾದ್ದರಿಂದ ಯಾರನ್ನೂ ಇರಲು ಬಲವಂತ ಮಾಡಲು ಹೋಗಲಿಲ್ಲ.
ಸಂಜೆಯ ಹೊತ್ತಿಗೆ ನಿಶಾಳನ್ನು ಗಂಡನ ಮನಿಗೆ ಕಳಿಸಲು ಎಲ್ಲಾ ತಯಾರಿ ಮಾಡಿ, ಸಂಕಟವಿದ್ದರೂ ತೋರಿಸಿಕೊಳ್ಳದೆ, ಅಳಿಯ ಮಗಳನ್ನು ಶುಭ ಹಾರೈಸಿ ಕಳಿಸಿಕೊಟ್ಟರು. ಅನೂಪ್ ನ ತಂದೆ, ತಾಯಿ ತಮ್ಮೂರಿನಲ್ಲಿ ನಡೆಯುವ ಆರತಕ್ಷತೆಗೆ ಒಂದು ದಿನ ಮುಂಚಿತವಾಗಿಯೇ ಬಂದುಬಿಡಿ ಎಂದು ಆಮಂತ್ರಿಸಿ ಹೊರಟರು.
ಮಗಳನ್ನು ಕಳಿಸಿಕೊಟ್ಟು ಶ್ರೀಧರ್ ರೇಖಾ ಮನೆಯೊಳಗೆ ಬಂದಾಗ ಮನೆಯೆಲ್ಲ ಬಣಬಣ ಎನಿಸಿಬಿಟ್ಟಿತು. ರೇಖಾಳಿಗೆ ದುಃಖ ತಡೆಯಲಾಗದೆ ಬಿಕ್ಕಳಿಸಿದಳು. ಶ್ರೀಧರ್ ಮೌನಕ್ಕೆ ಶರಣಾಗಿದ್ದ. ರೇಖಾಳ ತಂಗಿ ಅವರಿಬ್ಬರಿಗೂ ಸಮಾಧಾನ ಹೇಳಿ ರಾತ್ರಿಯ ಊಟಕ್ಕೆ ಬಲವಂತ ಮಾಡಿದಾಗ, ಎರಡು ತುತ್ತು ತಿನ್ನುವ ಶಾಸ್ತ್ರ ಮಾಡಿ ಎದ್ದರು. ಅಚಿಂತ್ಯ ಆಯಾಸದಿಂದ ಆಗಲೇ ನಿದ್ದೆ ಹೋಗಿದ್ದ.
ಮರುದಿನ ರೇಖಾಳ ತಂಗಿಯೂ ಹೊರಟು ನಿಂತಳು. ಅಲ್ಲಿಗೆ ಮನೆ ಮತ್ತಷ್ಟೂ ಖಾಲಿಯಾದಂತಾಯಿತು. ಅಚಿಂತ್ಯ ಚೇತರಿಸಿಕೊಳ್ಳುತ್ತಿದ್ದ. ಬೆಂಗಳೂರಿನಲ್ಲಿಯೂ ರಿಸೆಪ್ಷನ್ ಚೆನ್ನಾಗಿಯೇ ನಡೆಯಿತು. ನಿಶಾಳಿಗೆ ಪದ್ಧತಿಯ ಪ್ರಕಾರ ಕೊಡಬೇಕಾದ ಸಾಮಾನುಗಳನ್ನೆಲ್ಲಾ ಕೊಡಿಸಿ ವಾಪಸಾದರು.
ಸ್ವಲ್ಪ ದಿನಗಳ ನಂತರ ಪೊಲೀಸ್ ಸ್ಟೇಷನ್ ನಿಂದ ಒಡವೆಗಳನ್ನು ಗುರುತು ಹಿಡಿಯಲು ಬುಲಾವ್ ಬಂದಿತ್ತು. ಖುಷಿಯಿಂದ ತಯಾರಾದ ರೇಖಾ, ಪೊಲೀಸ್ ಸ್ಟೇಷನ್ ಗೆ ಹೋಗಿ ಬರುತ್ತೇವೆಂದು ಹೇಳಲು ಅಚಿಂತ್ಯನ ರೂಮಿಗೆ ಹೋದಳು. ಅವನೂ ರೆಡಿಯಾಗಿದ್ದುದನ್ನು ನೋಡಿ, ಎಲ್ಲಿಗೆ ಎನ್ನುವಂತೆ ಹುಬ್ಬೇರಿಸಿದಳು. ಹಿಂದೆಯೇ ಬಂದ ಶ್ರೀಧರ್, “ಅವನೂ ನಮ್ಮ ಜೊತೆಗೆ ಇರಲಿ ಎಂದು ನಾನೇ ರೆಡಿಯಾಗಲು ಹೇಳಿದೆ,” ಎಂದ.
“ಹುಷಾರಿಲ್ಲದ ಹುಡುಗನಿಗೆ ಏನು ಉಸಾಬರಿ ಹಚ್ತೀರಿ….” ಎಂದು ಗೊಣಗುತ್ತಾ ಕಾರು ಏರಿದಳು.
ಮೂರು ಕಾರಿನಲ್ಲಿ ಹೊರಟರು. ದಾರಿಯಲ್ಲಿ ರೇಖಾ ಏನೋ ನೆನಪಾದವಳಂತೆ, “ಲಕ್ಷ್ಮಿಗೆ ಏನು ಶಿಕ್ಷೆ ಸಿಗಬಹುದು. ಎಲ್ಲಾ ಒಡವೆಗಳು ಸಿಕ್ಕವೋ ಹೇಗೆ….” ಎಂದು ಗಂಡನನ್ನು ಪ್ರಶ್ನಿಸಿದಳು.
“ಅಲ್ಲಿ ಹೋದ ಮೇಲೆ ಎಲ್ಲಾ ಗೊತ್ತಾಗುತ್ತೆ ಸುಮ್ನೆ ಬಾ,” ಎಂದ ಶ್ರೀಧರ್ ಸ್ಟೇಷನ್ ನಲ್ಲಿ ಮದುವೆಗೆ ಬಂದಿದ್ದ ಐದು ಮಂದಿ ಅಚಿಂತ್ಯನ ಗೆಳೆಯರು, ಜೊತೆಗೆ ಅವನದೇ ವಯಸ್ಸಿನ ಮತ್ತಷ್ಟು ಹುಡುಗರು ನಿಂತಿದ್ದರು. ಅವರನ್ನು ನೋಡಿ ರೇಖಾಗೆ ಆಶ್ಚರ್ಯವಾಯಿತು. ಏನು ಎಂಬಂತೆ ಅಚಿಂತ್ಯನ ಕಡೆಗೊಮ್ಮೆ, ಶ್ರೀಧರ್ ನ ಕಡೆಗೊಮ್ಮೆ ನೋಡಿದಳು.
“ರೇಖಾ, ಮದುವೆಯ ಸಂಭ್ರಮದಲ್ಲಿದ್ದ ನಿನಗೆ ಒಂದು ವಿಷಯ ತಿಳಿಸಿರಲಿಲ್ಲ. ಒಡವೆಗಳನ್ನು ಕದ್ದವನು ನಮ್ಮ ಅಚಿಂತ್ಯನೇ! ಫ್ರೆಂಡ್ಸ್ ಗಳು ಎಲ್ಲಾ ಸೇರಿಕೊಂಡು ಒಮ್ಮೆ ಡ್ರಗ್ಸ್ ತೆಗೆದುಕೊಳ್ಳಬೇಕು ಅಂತ ಆಸೆಪಟ್ಟು, ಅದಕ್ಕಾಗಿ ಬೇಕಾಗುವ ದೊಡ್ಡ ಮೊತ್ತದ ಹಣಕ್ಕಾಗಿ ಇಂಥಹ ಕೆಲಸ ಮಾಡಿದ್ದಾನೆ. ಇವರ ಕಾಲೇಜಿನ ಹಾಸ್ಟೆಲ್ ನಲ್ಲಿರುವ ಒಬ್ಬ ಹುಡುಗ ಯಾರನ್ನೋ ಪರಿಚಯ ಮಾಡಿಸಿದ್ದಾನೆ. ಅವರು ಕೊಡಿಸ್ತೀನಿ ಅಂತಾ ಕರೆದುಕೊಂಡು ಹೋದ ಸಮಯಕ್ಕೆ ಸರಿಯಾಗಿ ಪೊಲೀಸ್ ಗೆ ಇನ್ ಫರ್ಮೇಷನ್‌ದೊರೆತು ಎಲ್ಲರೂ ಸಿಕ್ಕಿ ಹಾಕಿಕೊಂಡಿದ್ದಾರೆ.
“ಎಲ್ಲರಿಗೂ ನಾಲ್ಕು ತದುಕಿ, ದುಡ್ಡು ಎಲ್ಲಿಂದ ಬಂತು ಎಂದು ವಿಚಾರಿಸಿದಾಗ, ಒಡವೆಗಳನ್ನು ಯಾವುದೋ ಮಾರ್ವಾಡಿ ಅಂಗಡಿಯಲ್ಲಿ ಮಾರಾಟ ಮಾಡಿ ಹಣ ಹೊಂದಿಸಿದ್ದಾಗಿ ಬಾಯಿಬಿಟ್ಟಿದ್ದಾರೆ. ಸಧ್ಯ ಇವರೆಲ್ಲರ ಕೈಗೆ ಡ್ರಗ್ಸ್ ಸಿಗುವ ಮೊದಲೇ ಸಿಕ್ಕಿ ಹಾಕಿಕೊಂಡಿದ್ದು ಒಳ್ಳೆಯದಾಯಿತು. ಇಲ್ಲದಿದ್ದರೆ ಈ ಕೇಸಿನಿಂದ ಹೊರಬರುವುದು ತುಂಬಾ ಕಷ್ಟವಾಗ್ತಿತ್ತು. ಹಾಗಾಗಿ ನಾನು ಒಡವೆ ಕಳೆದುಹೋದ ಬಗ್ಗೆ ಕೊಟ್ಟ ಕಂಪ್ಲೇಂಟ್ ವಾಪಸ್ ತೆಗೆದುಕೊಳ್ಳುವ ನಿರ್ಧಾರ ಮಾಡಿದೆ. ಏನೋ ವಯಸ್ಸು ಅಂತಹುದು, ಸ್ನೇಹಿತರ ಮಾತು ಕೇಳಿ ತಪ್ಪು ಮಾಡಿದ್ದಾನೆ. ಕ್ಷಮಿಸಿಬಿಡು ಅವನನ್ನು, ನನಗೆ ಬೇರೆ ದಾರಿಯೇ ಇರಲಿಲ್ಲ. ಒಡವೆಗಳು ಮತ್ತು ಮಗ ಎರಡರ ನಡುವಿನ ಆಯ್ಕೆಯ ಪ್ರಶ್ನೆ ಬಂದಾಗ, ನಾನು ಮಗನನ್ನು ಆರಿಸಿಕೊಂಡೆ,” ಎಂದು ಶ್ರೀಧರ್ ವಿವರವಾಗಿ ಹೇಳಿದ.
ಮೌನಕ್ಕೆ ಶರಣಾದ ರೇಖಾ, ಅಚಿಂತ್ಯನ ಕಡೆಗೊಮ್ಮೆ ತಣ್ಣನೆಯ ನೋಟ ಬೀರಿ, ಪೊಲೀಸ್ ಇನ್ ಸ್ಪೆಕ್ಟರ್ ಮುಂದೆ ಸರಿಸಿದ ಕಂಪ್ಲೇಂಟ್ ವಾಪಸ್ ಪಡೆಯುವ ಶೀಟ್ ಗೆ ಸಹಿ ಹಾಕತೊಡಗಿದಳು.