ಸಾಮಗ್ರಿ : 3-4 ಬೆಂದ ಆಲೂ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು. 2-3 ಹಸಿ ಮೆಣಸು, ಪುದೀನಾ, ಕರಿಬೇವು, ಶುಂಠಿ, ಬೆಳ್ಳುಳ್ಳಿ, 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾ ಪುಡಿ, ಅಮ್ಚೂರ್‌ ಪುಡಿ, ಗರಂಮಸಾಲ, ಕರಿಯಲು ಎಣ್ಣೆ, 1 ಕಪ್‌ ಬ್ರೆಡ್‌ ಕ್ರಂಬ್ಸ್.

ಹೂರಣದ ಸಾಮಗ್ರಿ : ಅರ್ಧರ್ಧ ಕಪ್‌ ಚೀಸ್‌ ಸ್ಪ್ರೆಡ್‌ ಮೈದಾ, ತುಸು ತುರಿದ ಪನೀರ್‌.

ವಿಧಾನ : ಬೆಂದ ಆಲೂ ಸಿಪ್ಪೆ ಸುಲಿದು ಮಸೆದಿಡಿ. ಇದಕ್ಕೆ ಹೆಚ್ಚಿದ ಎಲ್ಲಾ ಪದಾರ್ಥ, ಉಳಿದ ಸಾಮಗ್ರಿ, ಉಪ್ಪು, ಖಾರ ಸೇರಿಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿಡಿ. ಅದೇ ತರಹ ಹೂರಣದ ಸಾಮಗ್ರಿ ಚೆನ್ನಾಗಿ ಮಸೆದು ಚಿಟಕಿ ಉಪ್ಪು, ಖಾರ ಹಾಕಿ ಮಿಶ್ರಣ ಕಲಸಿಡಿ. ಆಲೂ ಮಿಶ್ರಣದ ದೊಡ್ಡ ಉಂಡೆ, ಪನೀರ್‌ನ ಸಣ್ಣ ಉಂಡೆ ಆಗುವಂತೆ ಸಮಾನವಾಗಿ ಮಾಡಿಕೊಳ್ಳಿ. ಆಲೂ ಮಿಶ್ರಣದಲ್ಲಿ ರಂಧ್ರ ಮಾಡಿ 1-1 ಪನೀರ್‌ ಉಂಡೆ ಇರಿಸಿ, ನೀಟಾಗಿ ಕ್ಲೋಸ್‌ ಮಾಡಿ, ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಟೊಮೇಟೊ ಕೆಚಪ್‌ ಜೊತೆ ಇದನ್ನು ಬಿಸಿ ಬಿಸಿಯಾಗಿ ಸವಿಯಲು ಕೊಡಿ. ಹಬೆಯಾಡುವ ಕಾಫಿ /ಟೀ ಇರಲಿ.

AA-urad-dal-pakora

ಉದ್ದಿನ ಪಕೋಡ

ಸಾಮಗ್ರಿ :  1 ಕಪ್‌ ಉದ್ದಿನ ಬೇಳೆ, ಅರ್ಧರ್ಧ ಕಪ್‌ ಕಡಲೆ ಹಿಟ್ಟು, ಅಕ್ಕಿಹಿಟ್ಟು, ಒಂದಿಷ್ಟು ತುರಿದ ಮೂಲಂಗಿ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, ಕೊ.ಸೊಪ್ಪು, ಕರಿಬೇವು, ಬೇಯಿಸಿ ಮಸೆದ 2 ಆಲೂ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಪುದೀನಾ ಚಟ್ನಿ, ಕರಿಯಲು ಎಣ್ಣೆ.

ವಿಧಾನ : 3-4 ತಾಸು ಬೇಳೆ ನೆನೆಸಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಹೆಚ್ಚಿದ ಸಾಮಗ್ರಿ, ಮೇಲೆ ಹೇಳಿದ ಉಳಿದೆಲ್ಲ ಪದಾರ್ಥ ಹಾಕಿ ಪಕೋಡ ಮಿಶ್ರಣದ ಹದಕ್ಕೆ ಕಲಸಿಡಿ. ನಂತರ ಎಣ್ಣೆ ಕಾಯಿಸಿ, ಇದರಿಂದ ತುಸು ಮಿಶ್ರಣ ಹಾಕುತ್ತಾ, ಗರಿಗರಿ ಪಕೋಡ ಕರಿಯಿರಿ. ಸಲಾಡ್‌ ಆಗಿ ತುರಿದ ಮೂಲಂಗಿ, ಜೊತೆಗೆ ಪುದೀನಾ ಚಟ್ನಿ, ಬಿಸಿ ಬಿಸಿ ಕಾಫಿ/ಟೀ ಇರಲಿ.

AA-Chene-dal-ki-marodi-(5)

ಕಡಲೆಬೇಳೆ ಶಂಕರಪೋಳಿ

ಸಾಮಗ್ರಿ :  1 ಕಪ್‌ ಕಡಲೆಬೇಳೆ, ಅರ್ಧರ್ಧ ಕಪ್‌ ಅಕ್ಕಿಹಿಟ್ಟು, ಮೈದಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಅರಿಶಿನ, ಓಮ, ಜೀರಿಗೆ, ಸೋಂಪು, ನೈಲಾನ್‌ ಎಳ್ಳು, ಕರಿಯಲು ಎಣ್ಣೆ.

ವಿಧಾನ : ಮೊದಲು ಕಡಲೆಬೇಳೆಯನ್ನು 1 ಗಂಟೆ ಕಾಲ ನೆನೆಸಿ, ಒಂದು ಸೀಟಿ ಬರುವಂತೆ ಬೇಯಿಸಿ. ನಂತರ ಚೆನ್ನಾಗಿ ಆರಿದ ನಂತರ ಕನಿಷ್ಠ ನೀರು ಬಳಸಿ ನುಣ್ಣಗೆ ಅರೆಯಿರಿ. ನಂತರ ಇದಕ್ಕೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ಮಿಶ್ರಣ ಕಲಸಿಡಿ. ಇದರಿಂದ 2-3 ಉಂಡೆ ಮಾಡಿ, ಎಣ್ಣೆ ಸವರುತ್ತಾ, ದಪ್ಪ ಚಪಾತಿ ಲಟ್ಟಿಸಿ ನಂತರ ಅದರಿಂದ ಚಿತ್ರದಲ್ಲಿರುವಂತೆ ವಜ್ರಾಕಾರದಲ್ಲಿ ಶಂಕರಪೋಳಿ ಕತ್ತರಿಸಿ, ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಬರುವಂತೆ ಕರಿಯಿರಿ. ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ಬೇಕಾದಾಗ ಟೊಮೇಟೊ ಕೆಚಪ್‌, ಬಿಸಿ ಕಾಫಿ/ಟೀ  ಜೊತೆ ಸೇವಿಸಿ.

AA-Dal-puva-aur-strawberry-jam-(4)

ದಾಲ್ ಪುಯೆ ಸ್ಟ್ರಾಬೆರಿ ಜ್ಯಾಂ

ಸಾಮಗ್ರಿ :  ಅರ್ಧರ್ಧ ಕಪ್‌ ಉದ್ದಿನ ಬೇಳೆ, ಹೆಸರು ಬೇಳೆ, ಅಕ್ಕಿ, 1 ದೊಡ್ಡ ಚಮಚ ಶುಂಠಿ ಪೇಸ್ಟ್, 1-2 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಕರಿಯಲು ಎಣ್ಣೆ, ಜ್ಯಾಂಗಾಗಿ 10-12 ಸ್ಟ್ರಾಬೆರಿ, ಅರ್ಧ ಕಪ್‌ ಸಕ್ಕರೆ, 1-2 ಚಮಚ ನಿಂಬೆ ರಸ.

ವಿಧಾನ : ಅಕ್ಕಿ ಮತ್ತು ಬೇಳೆಗಳನ್ನು ಬೇರೆ ಬೇರೆಯಾಗಿ 3-4 ತಾಸು ನೆನೆಹಾಕಿ, ನಂತರ ಒಟ್ಟಿಗೆ ಚಿಟಿಕಿ ಉಪ್ಪು, ಹಸಿ ಮೆಣಸು ಹಾಕಿ ರುಬ್ಬಿಕೊಳ್ಳಿ. ಇದು ಗಟ್ಟಿ ಆಗಿರಬೇಕು, ಕನಿಷ್ಠ ನೀರು ಬಳಸಿಕೊಳ್ಳಿ. ನಂತರ ಉಳಿದೆಲ್ಲ ಸಾಮಗ್ರಿಗಳ ಜೊತೆ ನೀಟಾಗಿ ಬೆರೆಸಿಕೊಳ್ಳಿ. ಇದನ್ನು ಕಾದ ಎಣ್ಣೆಗೆ ಒಂದೊಂದೇ ಸೌಟು ಬಿಡುತ್ತಾ, ಚಿತ್ರದಲ್ಲಿರುವಂತೆ ವಡೆ (ಪುಯೆ) ಆಕಾರದಲ್ಲಿ ಕರಿದು ತೆಗೆಯಿರಿ. ನಂತರ ಮಿಕ್ಸಿಗೆ ಸ್ಟ್ರಾಬೆರಿ ಹಾಕಿ ಪೇಸ್ಟ್ ಮಾಡಿ ಒಂದು ಬಾಣಲೆಗೆ ತುಸು ತುಪ್ಪ ಹಾಕಿ  ಬಿಸಿ ಮಾಡಿ. ನಂತರ ಇದಕ್ಕೆ ಸಕ್ಕರೆ, ಸ್ಟ್ರಾಬೆರಿ ಪೇಸ್ಟ್ ಸೇರಿಸಿ, ಮಂದ ಉರಿಯಲ್ಲಿ ಹದನಾಗಿ ಬಾಡಿಸಿ. ನಂತರ ನಿಂಬೆಹಣ್ಣು ಹಿಂಡಿಕೊಂಡು, ಕೆದಕಿ ಕೆಳಗಿಳಿಸಿ ಆರಲು ಬಿಡಿ. ನಂತರ ಎಲ್ಲಾ ಪುಯೆಗಳ ಮೇಲೂ ಇದನ್ನು ಸಮನಾಗಿ ಹರಡಿ ಸವಿಯಲು ಕೊಡಿ.

AA-gatte-ka-munchurian-(2)

ಕಡಲೆಹಿಟ್ಟಿನ ಡ್ರೈ ಮಂಚೂರಿಯನ್

ಮೂಲ ಸಾಮಗ್ರಿ : 1 ಕಪ್‌ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಹಸಿ ಮೆಣಸಿನ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಅಡುಗೆ ಸೋಡ, ಕರಿಯಲು ರೀಫೈಂಡ್‌ ಎಣ್ಣೆ.

ಮಂಚೂರಿಯನ್ಗಾಗಿ : 3 ಬಗೆಯ 1-1 ಪುಟ್ಟ ಕ್ಯಾಪ್ಸಿಕಂ, ತುರಿದ 1 ಕ್ಯಾರೆಟ್‌, ಒಂದಿಷ್ಟು ಹೆಚ್ಚಿದ ಎಲೆಕೋಸು, ಹೂಕೋಸು, ಈರುಳ್ಳಿ, ರುಚಿಗೆ ತಕ್ಕಷ್ಟು ಗ್ರೀನ್‌ ಚಿಲೀ ಸಾಸ್‌, ಟೊಮೇಟೊ ಸಾಸ್‌, ಟೊಬಾಸ್ಕೊ ಸಾಸ್‌, ಅರ್ಧ ಪ್ಯಾಕೆಟ್‌ ಫ್ರೈಡ್‌ ರೈಸ್ ಮಸಾಲ.

ವಿಧಾನ : ಮೂಲ ಸಾಮಗ್ರಿ ಎಲ್ಲ ಬೆರೆಸಿ ಗಟ್ಟಿಯಾದ ಪಕೋಡ ಮಿಶ್ರಣದಂತೆ ಕಲಸಿಕೊಳ್ಳಿ. ಇದರಿಂದ ಸಣ್ಣ ಸಣ್ಣ ಗೋಲಿ ಗಾತ್ರದ ಉಂಡೆ ಮಾಡಿ, ಕುದಿವ ನೀರಿಗೆ ಹಾಕಿ ಬೇಯಿಸಿ. ನಂತರ ನೀರಿನಿಂದ ಬೇರ್ಪಡಿಸಿ, ಚೌಕಾಕಾರವಾಗಿ ಕತ್ತರಿಸಿ, ನಂತರ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಅದೇ ಬಾಣಲೆಗೆ ಇನ್ನಷ್ಟು ಎಣ್ಣೆ ಹಾಕಿ, ಒಂದೊಂದಾಗಿ ಎಲ್ಲಾ ಹೆಚ್ಚಿದ ತರಕಾರಿ ಹಾಕಿ ನೀಟಾಗಿ ಬಾಡಿಸಿ. ನಂತರ ಉಪ್ಪು, ಖಾರ, ಎಲ್ಲಾ ಸಾಸ್‌, ಮಸಾಲೆ ಹಾಕಿ, ಕರಿದ ಕಡಲೆ ಪೀಸ್‌ ಗಳ ಜೊತೆ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. 2 ನಿಮಿಷ ಬಿಟ್ಟು ಇದನ್ನು ಕೆಳಗಿಳಿಸಿ ಬಿಸಿಯಾಗಿ, ಸ್ಟಾರ್ಟರ್‌ ಆಗಿ ಸವಿಯಲು ಕೊಡಿ.

AA-ghiya-ke-balls-(3)

ಟೇಸ್ಟಿ ಟೆನಿಸ್ಬಾಲ್

ಸಾಮಗ್ರಿ :  1 ಸೌತೆಕಾಯಿ, 2 ಕಪ್‌ ಕಡಲೆಹಿಟ್ಟು, ಅರ್ಧ ಕಪ್‌ ರವೆ, 1-2 ಚಮಚ ತುಂಡರಿಸಿದ ಗೋಡಂಬಿ, ಕಡಲೆಬೀಜ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂ ಮಸಾಲ, ಚಾಟ್‌ ಮಸಾಲ, ಧನಿಯಾ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಒಂದಿಷ್ಟು ಕಪ್ಪು ದ್ರಾಕ್ಷಿ, ಕರಿಯಲು ಎಣ್ಣೆ.

ವಿಧಾನ : ಸೌತೆಯ ಸಿಪ್ಪೆ ಹೆರೆದು ತುರಿದಿಡಿ. ಇದಕ್ಕೆ ಮೇಲಿನ ಎಲ್ಲಾ ಪದಾರ್ಥ ಹಾಕಿ ಪಕೋಡ ಮಿಶ್ರಣದಂತೆ (ಹೆಚ್ಚುವರಿ ನೀರು ಬೇಡ, ಸೌತೆಯ ನೀರೇ ಸಾಕು) ಕಲಸಿಕೊಳ್ಳಿ. ಇದರಿಂದ ಸಣ್ಣ ಟೆನಿಸ್‌ ಬಾಲ್ ಆಕಾರದಲ್ಲಿ ಉಂಡೆ ಕಟ್ಟಿ, ಸ್ವಲ್ಪ ಹೊತ್ತು ಫ್ರಿಜ್ ನಲ್ಲಿಡಿ. 1 ಗಂಟೆ ಬಿಟ್ಟು ಇನ್ನು ಹೊರತೆಗೆದು, ಫ್ಯಾನಿನಡಿ ಆರಲು ಬಿಡಿ. ನಂತರ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು, ಚಿತ್ರದಲ್ಲಿರುವಂತೆ ದ್ರಾಕ್ಷಿಗಳಿಂದ ಅಲಂಕರಿಸಿ, ಟೂತ್‌ ಪಿಕ್‌ ಸಿಗಿಸಿ ಸವಿಯಲು ಕೊಡಿ.

AA-khuskhus-poori-(2)

ಗಸಗಸೆಯ ಪೂರಿ

ಮೂಲ ಸಾಮಗ್ರಿ : ಅರ್ಧರ್ಧ ಕಪ್‌ ಮೈದಾ, ಆಟಾ, ಅಕ್ಕಿಹಿಟ್ಟು, ತುಸು ಉಪ್ಪು, ಓಮ, ಕರಿಯಲು ಎಣ್ಣೆ.

ಹೂರಣಕ್ಕೆ ಸಾಮಗ್ರಿ : ಅರ್ಧ ಕಪ್‌ ಗಸಗಸೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಏಲಕ್ಕಿ ಪುಡಿ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ.

ವಿಧಾನ : ಮೂಲ ಸಾಮಗ್ರಿಗೆ ತುಸು ನೀರು ಬೆರೆಸಿ, ಮೃದುವಾದ ಪೂರಿ ಮಿಶ್ರಣ ಕಲಸಿಡಿ. ಇದಕ್ಕೆ ಎಣ್ಣೆ ಬೆರೆಸಿ ಚೆನ್ನಾಗಿ ನಾದಿಕೊಂಡು 1-2 ಗಂಟೆ ಕಾಲ ನೆನೆಯಲು ಬಿಡಿ. ಗಸಗಸೆಯನ್ನು ಡ್ರೈ ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ಇದನ್ನು ವೆಟ್‌ ಮಿಕ್ಸಿಗೆ ಹಾಕಿ ಉಳಿದ ಹೂರಣದ ಸಾಮಗ್ರಿ ಬೆರೆಸಿ, ಸುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ನೆನೆದ ಹಿಟ್ಟಿನ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳಾಗಿಸಿ ಲಟ್ಟಿಸಿರಿ. ಇದರ ಮೇಲೆ 2 ಚಮಚ ಗಸಗಸೆ ಪೇಸ್ಟ್ ಹರಡಿ, ಮತ್ತೆ ಮಡಿಚಿ ಲಟ್ಟಿಸಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಪೂರಿ ಕರಿಯಿರಿ. ಆಲೂ ಪಲ್ಯ, ಮಿಕ್ಸ್ ವೆಜ್‌ ಸಾಗು ಜೊತೆ ಸವಿಯಿರಿ.

Dal-Pakoda

ಹೆಸರುಬೇಳೆ ಪಕೋಡ

ಸಾಮಗ್ರಿ : 250 ಗ್ರಾಂ ಹೆಸರುಬೇಳೆ, 2-3 ಈರುಳ್ಳಿ, 4-5 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪೆರಿಪೆರಿ ಮಸಾಲ, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಯಲು ಎಣ್ಣೆ.

ವಿಧಾನ : ಹೆಸರುಬೇಳೆಯನ್ನು 2-3 ತಾಸು ನೆನೆಹಾಕಿ ನಂತರ ತರಿತರಿಯಾಗಿ ರುಬ್ಬಿ ಕೊಳ್ಳಿ. ಇದಕ್ಕೆ ಉಳಿದ ಎಲ್ಲಾ ಸಾಮಗ್ರಿ ಹೆಚ್ಚಿ ಹಾಕಿ, ಬೇರೆ ಎಲ್ಲಾ ಸೇರಿಸಿ ಪಕೋಡ ಮಿಶ್ರಣದಂತೆ ಗಟ್ಟಿಯಾಗಿ ಕಲಸಿಡಿ. ಕಾದ ಎಣ್ಣೆಗೆ ಇದರಿಂದ ಸಣ್ಣ ಸಣ್ಣ ಉಂಡೆ ಮಾಡಿ ಹಾಕಿ, ಗರಿಗರಿ ಪಕೋಡ ಕರಿಯಿರಿ. ಪುದೀನಾ ಚಟ್ನಿ ಜೊತೆ ಇದನ್ನು ಬಿಸಿ ಬಿಸಿಯಾಗಿ ಸವಿಯಿರಿ.

Chocolate-Phirnee

ಕೇಸರಿ ಚಾಕಲೇಟ್ಫಿರ್ನಿ

ಸಾಮಗ್ರಿ : 1 ಲೀ. ಗಟ್ಟಿ ಹಾಲು, 150 ಗ್ರಾಂ ಸಕ್ಕರೆ, 4 ಚಮಚ ತುಪ್ಪ, 100 ಗ್ರಾಂ ತುರಿದ ಡಾರ್ಕ್‌ ಚಾಕಲೇಟ್‌, ಅಗತ್ಯವಿದ್ದಷ್ಟು ಏಲಕ್ಕಿಪುಡಿ, ಖೋವಾ, ಗುಲಾಬಿ ಜಲ, ಹಾಲಲ್ಲಿ ಕದಡಿದ 100 ಗ್ರಾಂ ಅಕ್ಕಿಹಿಟ್ಟು, ತುಪ್ಪದಲ್ಲಿ ಹುರಿದ ತುಂಡರಿಸಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು.

ವಿಧಾನ : ಭಾರಿ ತಳದ ಬಾಣಲೆಯಲ್ಲಿ ಹಾಲು ಕಾಯಿಸಿ, ಮಂದ ಉರಿ ಮಾಡಿ. ಇದನ್ನು ಅರ್ಧದಷ್ಟು ಹಿಂಗಿಸಿ. ನಂತರ ಅಕ್ಕಿಹಿಟ್ಟಿನ ಮಿಶ್ರಣ ಬೆರೆಸಿ ಕದಡಿಕೊಳ್ಳಿ. ಚೆನ್ನಾಗಿ 3-4 ಕುದಿ ಬಂದ ಮೇಲೆ (ಬಹುತೇಕ ಅಕ್ಕಿ ಬೇಯುವವರೆಗೆ) ಒಂದೊಂದಾಗಿ ಉಳಿದ ಸಾಮಗ್ರಿ ಬೆರೆಸಿ ತಳ ಹಿಡಿಯದಂತೆ ಗೊಟಾಯಿಸುತ್ತಿರಿ. ಕೊನೆಯಲ್ಲಿ ತುಪ್ಪ, ಗುಲಾಬಿ ಜಲ, ಗೋಡಂಬಿ, ದ್ರಾಕ್ಷಿ ಸೇರಿಸಿ, ತುರಿದ ಚಾಕಲೇಟ್‌ ಉದುರಿಸಿ, ತಕ್ಷಣ ಬಿಸಿಯಾಗಿ ಸವಿಯಲು ಕೊಡಿ.

chocolate-balls

ಹೇಝಲ್ ನಟ್ಸ್ ಕೋಕೋನಟ್ಚಾಕಲೇಟ್ಬಾಲ್

ಸಾಮಗ್ರಿ : 150 ಗ್ರಾಂ ಹೇಝಲ್ ನಟ್ಸ್ (ಸಿಪ್ಪೆ ಸುಲಿದು ತುಪ್ಪದಲ್ಲಿ ಹುರಿದದ್ದು), 350 ಗ್ರಾಂ ಡಾರ್ಕ್‌ ಚಾಕಲೇಟ್‌ ಕಟ್‌ ಕಟ್ ಮಾಡಿದ್ದು, 200 ಗ್ರಾಂ ಚಾಕೋ ಹೇಝಲ್ ನಟ್ಸ್ ಸ್ಪ್ರೆಡ್‌, ಕೋಕೋನಟ್‌ ಪೌಡರ್‌.

ವಿಧಾನ : 20 ನಟ್ಸ್ ನ್ನು ಬೇರೆಯಾಗಿಡಿ. ಉಳಿದನ್ನು ಅತಿ ಸಣ್ಣದಾಗಿ ಹೆಚ್ಚಿಡಿ. ಇವನ್ನು ಪೇಸ್ಟ್ ಮಾಡಲಾರದು. ಡಬಲ್ ಬಾಯ್ಲರ್ ವಿಧಾನದಿಂದ (ಕೆಳಗೆ ಬಾಣಲೆಯಲ್ಲಿ ಕುದಿ ನೀರು, ಅದರ ಮೇಲೊಂದು ಬಟ್ಟಲು, ಅದರಲ್ಲಿ ಚಾಕಲೇಟ್‌ ಕರಗಬೇಕು) ಚಾಕಲೇಟ್ ಕರಗಿಸಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಇವೆಲ್ಲ ಪದಾರ್ಥಗಳನ್ನೂ ಒಂದೊಂದಾಗಿ ಅದಕ್ಕೆ ಹಾಕುತ್ತಾ ಬೇಗ ಬೇಗ ಕೈಯಾಡಿಸಿ. ತುಪ್ಪ ಬೆರೆಸುತ್ತಾ ತಳ ಹಿಡಿಯದಂತೆ ಕೆದಕಿ ಕೆಳಗಿರಿಸಿ. ಆರಿದ ನಂತರ ಇದರಿಂದ ಸಣ್ಣ ಉಂಡೆ ಮಾಡಿ, ಮಧ್ಯೆ ಬೇರೆಯಾಗಿ ಇರಿಸಿದ ಸ್ವಲ್ಪ ಸ್ವಲ್ಪ ನಟ್ಸ್ ನ್ನು ಇದಕ್ಕೆ ಸೇರಿಸಿ ಕ್ಲೋಸ್‌ ಮಾಡಿ. ನಂತರ ಇದನ್ನು ಕೋಕೋನಟ್‌ ಪೌಡರ್‌ ನಲ್ಲಿ ಹೊರಳಿಸಿ, ಇವನ್ನು ಫ್ರಿಜ್‌ ನಲ್ಲಿಟ್ಟು ನೀಟಾಗಿ ಸೆಟ್‌ ಮಾಡಿ. ಚಿತ್ರದಲ್ಲಿರುವಂತೆ ಬಾದಾಮಿಗಳಿಂದ ಅಲಂಕರಿಸಿ ಸವಿಯಿರಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ