ಮಳೆಗಾಲಕ್ಕೆಂದೇ ಡಯೆಟಿಶಿಯನ್ ಪ್ರತಿ ವ್ಯಕ್ತಿಗೂ ತಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯ ಅಂದ್ರೆ ಮಿಲೆಟ್ಸ್ ಬೆರೆಸಿಕೊಳ್ಳಲು ಹೇಳುತ್ತಾರೆ. ಏಕೆಂದು ವಿವರವಾಗಿ ತಿಳಿಯೋಣವೇ…..?
ಇತ್ತೀಚೆಗೆ ಆರೋಗ್ಯದ ಕುರಿತಾಗಿ ಜನ ಹೆಚ್ಚು ಜಾಗ್ರತೆ ವಹಿಸ ತೊಡಗಿದ್ದಾರೆ. ನಿಯಮಿತವಾಗಿ ವ್ಯಾಯಾಮ, ಜಿಮ್ ಪ್ರಾಕ್ಟೀಸ್ ಅವರ ದೈನಂದಿನ ಅಭ್ಯಾಸವಾಗಿದೆ. ಅದೇ ತರಹ ಅವರು ತಮ್ಮ ಡಯೆಟ್ ನಲ್ಲೂ ಎಚ್ಚರಿಕೆ ವಹಿಸಬೇಕಿದೆ. ಇಂದಿನ ಯುವ ಜನತೆಗೆ ಜಂಕ್ ಫುಡ್ ಯಾ ಫಾಸ್ಟ್ ಫುಡ್ ಒಂದೇ ಇಷ್ಟ. ಹೀಗಾಗಿಯೇ ಇಂದಿನ ಯುವಜನತೆ ಬಹು ಬೇಗ ಸ್ಥೂಲತೆ, ಬಿಪಿ, ಕೊಲೆಸ್ಟ್ರಾಲ್ ಇತ್ಯಾದಿಗಳಿಗೆ ಬಲಿಯಾಗುತ್ತಿದ್ದಾರೆ. ಅದರಿಂದ ಹೊರಬರುವುದು ಕಷ್ಟವಾಗುತ್ತಿದೆ. ಹೀಗಾಗಿ ಇಂದಿನ ಡಯೆಟಿಶಿಯನ್ಸ್ ಮಿಲೆಟ್ಸ್ ಅಂದ್ರೆ ಸಿರಿಧಾನ್ಯವನ್ನು ನಮ್ಮ ದೈನಂದಿನ ಆಹಾರದಲ್ಲಿ ಬೆರೆಸಿಕೊಳ್ಳಲು ಮತ್ತೆ ಮತ್ತೆ ಹೇಳುತ್ತಾರೆ. ಸಿರಿಧಾನ್ಯದಲ್ಲಿ 2 ಬಗೆ. ದಪ್ಪ ಕಾಳು, ಸಣ್ಣ ಕಾಳು. ಸಿರಿ ಧಾನ್ಯದಲ್ಲಿ ಬರುವ ಪ್ರಮುಖ ಧಾನ್ಯಗಳು ಎಂದರೆ ರಾಗಿ, ಜೋಳ, ನವಣೆ, ಸಾಮೆ, ಸಜ್ಜೆ, ಹಾರಕ (ಅರ್ಕ), ಕೊರಿ, ಬರುಗು, ಊದಲು ಇತ್ಯಾದಿ.
ಜಾಗರೂಕತೆ ಅತ್ಯಗತ್ಯ
ಈ ಕುರಿತಾಗಿ ತಜ್ಞರ ಅಭಿಪ್ರಾಯ ಎಂದರೆ ಸಿರಿಧಾನ್ಯಗಳು ಇಮ್ಯುನಿಟಿಯ ಬೂಸ್ಟರ್ ಗಳಾಗಿವೆ. ಕಳೆದ 2023ನೇ ವರ್ಷವನ್ನು ಕೇಂದ್ರ ಸರ್ಕಾರ `ಸಿರಿಧಾನ್ಯ ವರ್ಷ’ ಎಂದು ಘೋಷಿಸಿತ್ತು, ಆ ಮೂಲಕ ಸಾಮಾನ್ಯ ಜನರಲ್ಲಿ ಮಿಲೆಟ್ಸ್ ಕುರಿತು ಹೆಚ್ಚಿನ ಜಾಗರೂಕತೆ ಮೂಡಿಸಿತು. ಸಿರಿಧಾನ್ಯಗಳಲ್ಲಿ ಕ್ಯಾಲ್ಶಿಯಂ, ಸತು, ರಂಜಕ, ಮೆಗ್ನಿಶಿಯಂ, ಪೊಟ್ಯಾಶಿಯಂ, ನಾರು, ವಿಟಮಿನ್ಸ್, ಕಬ್ಬಿಣಾಂಶಗಳು ಹೇರಳವಾಗಿ ಅಡಗಿವೆ.
ಅಸಿಡಿಟಿ ಸಮಸ್ಯೆಯಿಂದ ನೀವು ಪಾರಾಗಬೇಕೇ? ಸಿರಿಧಾನ್ಯಗಳಲ್ಲಿನ ವಿಟಮಿನ್ಸ್ ನಿಂದಾಗಿ ದೇಹದ ಮೆಟಬಾಲಿಸಂ ಬ್ಯಾಲೆನ್ಸ್ ಗೊಳಿಸಲು ಹೆಚ್ಚು ಪೂರಕ. ಮಿಲೆಟ್ಸ್ ನಲ್ಲಿನ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್, ಫೈಬರ್ ಹೆಚ್ಚಾಗಿದ್ದು ಪೌಷ್ಟಿಕಾಂಶಗಳ ಗಣಿ ಎನಿಸಿದೆ. ಇದು ಗ್ಲುಟೆನ್ ಫ್ರೀ ಎಂಬುದು ಮತ್ತೊಂದು + ಪಾಯಿಂಟ್. ಸಿರಿಧಾನ್ಯಗಳಲ್ಲಿ ಇದರ ರಗಳೆ ಇಲ್ಲದ ಕಾರಣ, ಸಹಜವಾಗಿ ಜೀರ್ಣಶಕ್ತಿ ಹೆಚ್ಚಿಸುತ್ತದೆ.
ಮಳೆಗಾಲದಲ್ಲಿ ಹೆಚ್ಚು ಉಪಯೋಗಿ
ಮಳೆಗಾಲದಿಂದಾಗಿ ಇಡೀ ಕಾಲಮಾನ ಬದಾಗಿ ಹೋಗುತ್ತದೆ. ಆಬಾಲವೃದ್ಧರಾದಿಯಾಗಿ ಎಲ್ಲರನ್ನೂ ಕಾಡು ಮಾಮೂಲಿ ನೆಗಡಿ, ಶೀತ, ಕೆಮ್ಮು, ಕಫ, ಡಯೇರಿಯಾ ಇತ್ಯಾದಿಗಳು ಈ ಸೀಸನ್ ನಲ್ಲಿ ಬಹಳ ಹಿಂಸಿಸುತ್ತವೆ. ಈ ಸೀಸನ್ ನಲ್ಲಿ ಸಹಜವಾಗಿ ನಮ್ಮ ಇಮ್ಯುನಿಟಿ ತಗ್ಗುತ್ತದೆ. ಕುಡಿಯುವ ನೀರು ಲೇಶ ಮಾತ್ರ ಬದಲಾದರೂ ಹಿಂಸೆಗಳು ಆರಂಭ. ತುಂತುರ ಮಳೆ ಕಾರಣ ಜನ ಖಾರ ಖಾರದ ಗರಿಮುರಿ ವ್ಯಂಜನ ಬಯಸುತ್ತಾರೆ. ಇದರಿಂದ ಸಹಜವಾಗಿ ಹೊಟ್ಟೆ ಬೇಗ ಕೆಡುತ್ತದೆ. ಆದ್ದರಿಂದ ಈ ಮಳೆಯ ದಿನಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ವ್ಯಂಜನಗಳನ್ನು ಅಧಿಕ ಸೇವಿಸಿ. ನಮ್ಮ ರಾಜ್ಯದಲ್ಲಂತೂ ದೈನಂದಿನ ಆಹಾರವಾಗಿ ರಾಗಿ ಮುದ್ದೆ ಅನಾದಿ ಕಾಲದಿಂದಲೂ ಹೆಸರುವಾಸಿ. ಹಾಗೆಯೇ ಇದರ ರೊಟ್ಟಿ, ಗಂಜಿ, ರಾಗಿ ಮಾಲ್ಟ್, ಡ್ರೈ ಫ್ರೂಟ್ಸ್ ಬೆರೆತ ರಾಗಿ ಲಡ್ಡು ಇತ್ಯಾದಿಗಳೂ ಮಳೆಗಾಲಕ್ಕೆ ಸೊಗಸಾಗಿ ಹೊಂದುತ್ತವೆ. ಮಳೆಗಾಲದಲ್ಲಿ ನೀವು ಹೊರಗಿನ ಊಟಕ್ಕೆ ಶರಣಾದರೆ ಹೊಟ್ಟೆ ಉಬ್ಬರ, ಮಲಬದ್ಧತೆ ಗ್ಯಾರಂಟಿ. ಹೀಗಾಗಿ ಈ ಕಾಲದಲ್ಲಿ ಸಿರಿ ಧಾನ್ಯಗಳಲ್ಲಿ ಯಾವುದೇ ಬಗೆಯನ್ನು ಬದಲಾಯಿಸುತ್ತಾ ನಿಮ್ಮ ಆಹಾರದಲ್ಲಿ ಬಳಸಿಕೊಳ್ಳಿ. ಮಿಲೆಟ್ಸ್, ಮಾನ್ ಸೂನಿನ ಆಪ್ತಮಿತ್ರ ಎಂದರೆ ತಪ್ಪಾಗಲಾರದು!
ದೇಹ ತೂಕ ತಗ್ಗಿಸಲು ಬಲು ಪೂರಕ
ದೇಹ ತೂಕ ತಗ್ಗಿಸಬೇಕು ಎಂದು ಸದಾ ಚಿಂತಿಸುವವರಿಗೆ ಸಿರಿಧಾನ್ಯ ವರದಾನವೇ ಸರಿ. ಯಾರಾದರೂ 3 ಕಪ್ ಅನ್ನ ಅಥವಾ 4 ಗೋಧಿ ಚಪಾತಿ ತಿಂದರೆ, ಅಂಥವರಿಗೆ 2 ರಾಗಿ ರೊಟ್ಟಿ/ಜೋಳದ ರೊಟ್ಟಿ ಸಾಕೆನಿಸುತ್ತದೆ. ರಾಗಿಯಲ್ಲಿನ ಕ್ಯಾಲ್ಶಿಯಂನಿಂದಾಗಿ, ಇದರ ರೊಟ್ಟಿ/ಮುದ್ದೆ ತಿಂದವರಿಗೆ ಅಸಿಡಿಟಿಯ ಕಾಟ ಇರದು. ಜೊತೆಗೆ ಸುಲಭವಾಗಿ ಜೀರ್ಣಾಗುತ್ತದೆ. ಇದರಿಂದ ಜೀರ್ಣಾಂಗ ವ್ಯೂಹಕ್ಕೆ ಯಾವುದೇ ಒತ್ತಡ ಹೇರಿದಂತೆ ಆಗುವುದಿಲ್ಲ. ಸಿರಿಧಾನ್ಯಗಳಲ್ಲಿನ ಮಹತ್ವ ಎಂದರೆ, ಯಾವ ಬಗೆಯದನ್ನು ಬಳಸಿದರೂ ಇದರಲ್ಲಿನ ಫೈಬರ್ ಅಂಶದಿಂದಾಗಿ ಇದು ಬಲು ಉಪಕಾರಿ.
ಸಿರಿಧಾನ್ಯಗಳ ಇನ್ನಿತರ ಲಾಭಗಳ ಬಗ್ಗೆ ತಿಳಿಯೋಣ :
ಮಿಲೆಟ್ಸ್ ರಕ್ತ ಸಂಚಾರವನ್ನು ಹಿತಕರ ಮಾಡುತ್ತದೆ. ನಿಯಮಿತ ಆಹಾರದಲ್ಲಿನ ಬಳಕೆಯಿಂದಾಗಿ, ನಿಮ್ಮ ಇಮ್ಯುನಿಟಿ ಸಹಜವಾಗಿಯೇ ಹೆಚ್ಚುತ್ತದೆ. ಫಿಟ್& ಫೈನ್ ಆಗಿರಬೇಕು, ದೇಹ ತೂಕ ಹೆಚ್ಚಬಾರದು ಎಂದು ಬಯಸುವವರು ಇದನ್ನು ನಿಯಮಿತವಾಗಿ ಬಳಸಿಕೊಳ್ಳಿ. ಸ್ವಲ್ಪ ಅಂಶ ತಿಂದರೂ ಹೊಟ್ಟೆ ತುಂಬಿದಂತೆ ಅನಿಸುತ್ತದೆ, ಆಗ ಹಸಿವು ಬೇಗ ತಗ್ಗುತ್ತದೆ. ಸಿರಿಧಾನ್ಯದಲ್ಲಿ ಆ್ಯಂಟಿ ಏಜಿಂಗ್ ಗುಣಗಳೂ ಅಧಿಕವಾಗಿವೆ. ಹೀಗಾಗಿ ಚರ್ಮದಲ್ಲಿ ನಿಮಗೆ ಕಲೆ, ಗುರುತು, ಡಲ್ ನೆಸ್, ಸುಕ್ಕು, ನಿರಿಗೆ, ಆ್ಯಕ್ನೆ, ಮೊಡವೆಗಳ ಕಾಟ ಇರುವುದಿಲ್ಲ.
ಜೀರ್ಣಶಕ್ತಿ ಹೆಚ್ಚಿಸುವಲ್ಲಿ ಸಿರಿಧಾನ್ಯದ ಪಾತ್ರ ಹಿರಿದು. ಇದರಲ್ಲಿನ ಅಧಿಕ ನಾರಿನಂಶವೇ ಇದಕ್ಕೆ ಕಾರಣ. ಮಧುಮೇಹ ನಿಯಂತ್ರಣದಲ್ಲಿ ಇರಬೇಕೇ? ಇದು ಗ್ಲೂಟನ್ ಫ್ರೀ ಆದ್ದರಿಂದ ಮಧುಮೇಹಿಗಳಿಗೂ ಪೂರಕ. ಮುಟ್ಟಾದಾಗ ಉಂಟಾಗುವ ಹೊಟ್ಟೆ ನುಲಿಯುವಿಕೆ ದೂರಾಗಲು ಮಿಲೆಟ್ಸ್ ಸಹಾಯಕ. ಇದರಲ್ಲಿನ ಮೆಗ್ನೀಶಿಯಂ ಅದಕ್ಕೆ ಪೂರಕ. ಹೆಚ್ಚು ಕ್ಯಾಲ್ಶಿಯಂ ಇರುವುದರಿಂದ ನಿಮ್ಮ ಮೂಳೆಗಳಿಗೂ ಸಹಾಯಕ. ಇದು ಹೃದ್ರೋಗಿಗಳ ಆಹಾರಕ್ಕೂ ಸಹಾಯಕ. ಇದರಿಂದ ಹೃದಯದ ಮಾಂಸಖಂಡಗಳು ಸದೃಢಗೊಂಡು, ಬಿಪಿ ಏರದಂತೆ ತಡೆಹಿಡಿದು, ರಕ್ತ ಸಂಚಾರ ಸಲೀಸಾಗಿ ಪ್ರವಹಿಸಲು ನೆರವಾಗುತ್ತದೆ. ಸಿರಿಧಾನ್ಯದಲ್ಲಿನ ಆ್ಯಂಟಿ ಆಕ್ಸಿಡೆಂಟ್ಸ್ ದೇಹದ ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ಹತೋಟಿಗೆ ತರುತ್ತದೆ, ಹೀಗಾಗಿ ಕ್ಯಾನ್ಸರ್ ಭಯ ತಂತಾನೇ ತಗ್ಗುತ್ತದೆ. ಇದು ಬಾಡಿ ಡೀಟಾಕ್ಸ್ ಮಾಡುವಲ್ಲಿಯೂ ಹೆಚ್ಚು ಸಹಾಯಕ.
ಇದನ್ನು ಸೇವಿಸುವುದು ಹೇಗೆ?
ರಾಗಿ, ಜೋಳದ ರೊಟ್ಟಿ, ಮುದ್ದೆ ನಮ್ಮ ಕರ್ನಾಟಕದ ಜನತೆಗೆ ಚಿರಪರಿಚಿತ. ಜೊತೆಗೆ ಇದರಿಂದ ಗಂಜಿ, ದೋಸೆ, ಇಡ್ಲಿ, ಒತ್ತು ಶ್ಯಾವಿಗೆ, ಹಾಲುಬಾಯಿ, ರಾಗಿ/ಜೋಳದ ಬಿಸ್ಕತ್ತು ಇತ್ಯಾದಿ ಸಹ ಮಾಡಿ ಸವಿಯಬಹುದು. ಇದರಿಂದ ಸಿಹಿ ತಯಾರಿಸದಾಗೆಲ್ಲ, ಜೊತೆಗೆ ಧಾರಾಳ ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್ ಸೇವಿಸುವುದರಿಂದ ಪೌಷ್ಟಿಕಾಂಶ ಹೆಚ್ಚುತ್ತದೆ.
ಅಕ್ಕಿ ಹಿಟ್ಟನ್ನು ಬೆಲ್ಲ, ಧಾರಾಳ ತೆಂಗಿನ ತುರಿ, ಏಲಕ್ಕಿ ಪುಡಿ, ತುಸು ಹಾಲು ಬೆರೆಸಿ ಹಬೆಯಲ್ಲಿ ಬೇಯಿಸುವಂತೆಯೇ ರಾಗಿ ಹಿಟ್ಟಿನಲ್ಲಿಯೂ ಟ್ರೈ ಮಾಡಿ ನೋಡಿ. ಸಜ್ಜೆ, ನವಣೆ, ಊದಲು ಇತ್ಯಾದಿ ಬೆರೆಸಿ ಪೌಷ್ಟಿಕ ದೋಸೆ, ಇಡ್ಲಿ ಸಹ ತಯಾರಿಸಬಹುದು. ನಿಮ್ಮ ಕಲ್ಪನೆಗೆ ತಕ್ಕಂತೆ ಸಿರಿ ಧಾನ್ಯಗಳಿಂದ ಬಗೆಬಗೆಯ ಸಿಹಿ ತಯಾರಿಸಿ, ಬೆಳೆಯುವ ಮಕ್ಕಳಿಗೆ ಕೊಡಿ.
– ಸುಮತಿ





