ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್‌, ನಟಿ ರಾಖಿ ಸಾವಂತ್‌ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಖಿ ಅವರನ್ನ ‘ಯಶಸ್ಸು ಕಾಣದ ಹಾಗೂ ಕಹಿ ಮನೋಭಾವದ ವ್ಯಕ್ತಿ’ ಎಂದು ಹೇಳಿರುವ ಕಂಗನಾ, ಯಶಸ್ವಿ ಮಹಿಳೆಯರ ವಿರುದ್ಧ ಪದೇಪದೆ ವೈಯಕ್ತಿಕ ದಾಳಿ ನಡೆಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.

ಇತ್ತೀಚೆಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ರಾಖಿ ಸಾವಂತ್‌, ಪ್ರಧಾನಿ ನರೇಂದ್ರ ಮೋದಿ, ಕಂಗನಾ ರಣಾವತ್‌ ಹಾಗೂ ಸ್ಮೃತಿ ಇರಾನಿ ಕುರಿತು ಆಕ್ಷೇಪಾರ್ಹ ಮತ್ತು ದ್ವಂದ್ವಾರ್ಥದ ಹೇಳಿಕೆ ನೀಡಿದ್ದರು.

‘ಮೋದಿ ಜಿ, ಕಂಗನಾ, ಸ್ಮೃತಿ ಸೇರಿದಂತೆ ಈ ಮಹಿಳೆಯರು ನಿಮಗೆ ಏನು ನೀಡಿದ್ದಾರೆ? ಹಾಗಾಗಿ ಅವರನ್ನ ಸಚಿವರನ್ನಾಗಿ ಮಾಡಿದ್ದೀರಿ. ಅವರು ಏನು ಕೊಟ್ಟಿದ್ದಾರೋ ಅದನ್ನು ನಾನೂ ಕೊಡಬಲ್ಲೆ” ಎಂಬ ಅರ್ಥದಲ್ಲಿ ರಾಖಿ ಹೇಳಿಕೆ ನೀಡಿದ್ದರು.ರಾಖಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಂಗನಾ, ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ, ಯಶಸ್ವಿ ಮಹಿಳೆಯರ ವಿರುದ್ಧ ಅಸೂಯೆ, ವೈಫಲ್ಯ ಹಾಗೂ ಅಹಂಕಾರದಿಂದಾಗಿ ಕೆಲವರು ವೈಯಕ್ತಿಕ ಆರೋಪ ಮಾಡುತ್ತಾರೆ. ಇಂತಹ ಉದ್ದೇಶಪೂರ್ವಕ ದಾಳಿಗಳಿಂದ ತಾವು ಅವಮಾನಕ್ಕೊಳಗಾಗಿದ್ದೇವೆ. ರಾಖಿ ಪದೇಪದೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದನ್ನೂ ನಿಲ್ಲಿಸಬೇಕು ಎಂದು ಕುಟುಕಿದ್ದಾರೆ.

‘ಯಶಸ್ಸಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದರೂ, ಯಾರಿಗೂ ನಿಮ್ಮಿಂದ ಏನೂ ಅಗತ್ಯವಿಲ್ಲ. ನೀವು ನೀಡಿದ ಎಲ್ಲಾ ಉಪಕಾರಗಳನ್ನು ಸೇರಿಕೊಂಡರೂ ನಿಮಗೆ ಕಸ ಗುಡಿಸುವ ಕೆಲಸವೂ ಸಿಗಲ್ಲ. ಅದಕ್ಕೂ ಗುಣಮಟ್ಟ ಮತ್ತು ಪ್ರತಿಭೆ ಬೇಕು’ ಎಂದು ವ್ಯಂಗ್ಯವಾಡಿದ್ದಾರೆ.  ‘ನನ್ನ ರೀಲ್ಸ್‌ಗಳನ್ನು ನೋಡಿ ಅಳುತ್ತಾ ಕುಳಿತುಕೊಳ್ಳಿ’ ಎಂದು ತಿರುಗೇಟು ನೀಡಿದ್ದಾರೆ.

ಕಂಗನಾ ಹಾಗೂ ರಾಖಿ ನಡುವೆ ಈ ರೀತಿಯ ವಾಗ್ವಾದ ಇದೇ ಮೊದಲೇನಲ್ಲ. ಈ ಹಿಂದೆ ದೆಹಲಿಯಲ್ಲಿ ನಡೆದ ಕಾಕ್ರೋಚ್‌ ಜನತಾ ಪಾರ್ಟಿ ಪ್ರತಿಭಟನೆ ಕುರಿತು ಕಂಗನಾ ಮಾತನಾಡಿದ್ದಕ್ಕೆ ರಾಖಿ ಟೀಕಿಸಿದ್ದರು. ಕಂಗನಾರನ್ನು ‘ಗಟರ್‌ ಮೌತ್‌’ ಎಂದು ಕರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ, ರಾಖಿ ಸೇರಿದಂತೆ ತಮ್ಮ ವಿರುದ್ಧ ವೈಯಕ್ತಿಕವಾಗಿ ಮಾತನಾಡುವವರನ್ನು ಟೀಕಿಸಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ