ಜೀವನದಿ ಕಾವೇರಿ ಕನ್ನಡಿಗರ ಅದರಲ್ಲೂ ವಿಶೇಷವಾಗಿ ಕೊಡಗು, ಮಂಡ್ಯ, ಮೈಸೂರು, ಬೆಂಗಳೂರು ಅಷ್ಟೇ ಏಕೆ ತಮಿಳುನಾಡು, ಕೇರಳ ಮತ್ತು ಪಾಂಡಿಚೆರಿ ರಾಜ್ಯಗಳ ಬಹುಭಾಗದ ಜೀವನಾಡಿಯಾಗಿರುವುದೇ ಅಲ್ಲದೆ, ಕನ್ನಡನಾಡು, ನುಡಿ ಮತ್ತು ಸಂಸ್ಕೃತಿಗಳ ಸಂಕೇತವಾಗಿರುವುದಷ್ಟೇ ಅಲ್ಲದೆ, ಕನ್ನಡಿಗರ ಸ್ವಾಭಿಮಾನದ ಪ್ರತೀಕ ಆಗಿದೆ.
ಕರ್ನಾಟಕದ ಕಾಶ್ಮೀರವೆಂದೇ ಖ್ಯಾತವಾಗಿರುವ ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿ ಸಮೀಪ ನಿತ್ಯ ಹರಿದ್ವರ್ಣದ ಸಾಲುಸಾಲು ಸಹ್ಯಾದ್ರಿ ಗಿರಿಶಿಖರ, ಕಾಡುಕಣಿವೆಯಿಂದ ಕೂಡಿದ ಸ್ವರ್ಗೀಯ ನಿಸರ್ಗದ ಮಡಿಲಲ್ಲಿರುವ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಶಿರದಲ್ಲಿ ಉಗಮವಾಗುವ ಕಾವೇರಿ ಅರಬ್ಬಿ ಸಮುದ್ರ ಸೇರುವ ಮಾರ್ಗದುದ್ದಕ್ಕೂ ಅಲ್ಲಲ್ಲಿ ಅನೇಕ ನಿಸರ್ಗಧಾಮ, ದ್ವೀಪ, ಜಲಪಾತ, ಕಟ್ಟೆ, ಉದ್ಯಾನವನ ಮೊದಲಾದವುಗಳಿಗೆ ಜನ್ಮ ನೀಡಿದ್ದಾಳೆ.
ಅವುಗಳಲ್ಲಿ ಮೈಸೂರು, ಶ್ರೀರಂಗಪಟ್ಟಣಕ್ಕೆ ಸಮೀಪವಿರುವ ಕಾವೇರಿ ತೀರದ ಸಿನಿ ಗ್ರಾಮ ಖ್ಯಾತಿಯ ಮಹದೇವಪುರ ಕೂಡ ಒಂದು. ಇಲ್ಲಿ ಕಾವೇರಿ ಎತ್ತರದ ಶಿಲಾಸ್ತರದಿಂದ ಜಲಪಾತದಂತೆ ಭೋರ್ಗರೆಯುತ್ತಾ ಧುಮ್ಮಿಕ್ಕದಿದ್ದರೂ ಪ್ರಶಾಂತ ಪರಿಸರದಲ್ಲಿ ನೀಲಾಗಸ ಮತ್ತು ಬೆಟ್ಟಗುಡ್ಡಗಳ ಹಿನ್ನಲೆಯಲ್ಲಿ ತನ್ನ ಅಡ್ಡಕ್ಕೂ ನಿರ್ಮಿಸಲಾಗಿರುವ ಸುಮಾರು ಒಂದು ಕಿ.ಮೀ.ಗೂ ಹೆಚ್ಚಿರುವ ಕಟ್ಟೆಯುದ್ದಕ್ಕೂ ಮೈದುಂಬಿ ಜಲಧಾರೆಯಂತೆ ಜಿಗಿದು ಬಂಡೆಗಲ್ಲುಗಳ ಮೇಲೆ ಕುಣಿದು ಕುಪ್ಪಳಿಸುತ್ತಾ ತನ್ನೆರಡೂ ತೀರಗಳಲ್ಲಿ ಜಲಕ್ರೀಡೆಗಳಿಗೆ ವಿಪುಲ ಅವಕಾಶ ಕಲ್ಪಿಸಿ ಜಲಪಾತದ ಅನುಭವವನ್ನು ನೀಡುತ್ತಿದ್ದಾಳೆ.
ಇಂದಿನ ಬದಲಾವಣೆ ಪರ್ವದಲ್ಲೂ ಮಹದೇಪುರ ಅತ್ತಿತ್ತ ಹೊರಳದೆ ಗ್ರಾಮೀಣ ಸೊಗಡಿನ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿದೆ. ಒಂದು ಕಾಲದಲ್ಲಿ ಸಿನಿ ಗ್ರಾಮವೆಂದೇ ಖ್ಯಾತವಾಗಿದ್ದ ಮಹದೇವಪುರ ಗ್ರಾಮೀಣ ಪರಿಸರ ಮತ್ತು ಬದುಕಿನ ಹಂದರದ ಕಥೆಗಳನ್ನು ಹೊಂದಿರುತ್ತಿದ್ದ ಅಂದಿನ ಬಹುತೇಕ ಎಲ್ಲಾ ಭಾಷೆಯ ಚಿತ್ರಗಳಿಗೆ ಆ ಗ್ರಾಮ ಪೋಸು ನೀಡಿದೆ.
ಎವರ್ಗ್ರೀನ್ ಸೌಂದರ್ಯ ಮತ್ತು ಪರಿಸರದ ಪ್ರಾಕೃತಿಕ ದೃಶ್ಯಾವಳಿಗಳಾದ ನದಿ, ತೊರೆ, ಹಸುರಿನಿಂದ ಕಂಗೊಳಿಸುವ ಬೆಟ್ಟಗುಡ್ಡ ಹಾಗೂ ಕಾಡುಮೇಡು ಮೊದಲಾದವುಗಳಿಂದ ನಿಸರ್ಗ ನಿರ್ಮಿತ ಸೆಟ್ನಂತಿರುವ ಮಹದೇವಪುರ, ನಿರ್ಮಾಪಕರು ಕೃತಕವಾಗಿ ಗ್ರಾಮೀಣ ಪರಿಸರದ ಸೆಟ್ಗಳನ್ನು ನಿರ್ಮಿಸುವ ಖರ್ಚನ್ನು ಉಳಿಸಿ 1980-90ರ ದಶಕದ ಕನ್ನಡ ಚಿತ್ರರಂಗದ ಏಳುಬೀಳುಗಳಿಗೆ ಸಾಕ್ಷಿಯಾಗಿ `ಸಿನಿಮಾ ಹಳ್ಳಿ’ ಎಂದೇ ಹೆಸರು ಮಾಡಿತ್ತು. ಈ ಸಿನಿಮಾ ಗ್ರಾಮ ಕೇವಲ ಕನ್ನಡ ಭಾಷಾ ಚಿತ್ರಗಳೇ ಅಲ್ಲದೇ, ತಮಿಳು, ತೆಲುಗು, ಮಲೆಯಾಳಂ, ಹಿಂದಿಯೂ ಸೇರಿದಂತೆ ಹಾಲಿವುಡ್ನ ಸುಮಾರು 200ಕ್ಕೂ ಹೆಚ್ಚಿನ ಚಿತ್ರಗಳೇ ಅಲ್ಲದೆ, ಹಲವಾರು ಧಾರಾವಾಹಿಗಳಲ್ಲೂ ಚಿತ್ರೀಕರಣಗೊಂಡಿದೆ.
ದಿವಂಗತ ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್ ಹಾಗೂ ಖ್ಯಾತ ನಟ ರಜನೀಕಾಂತ್ ಮೊದಲಾದ ಕಲಾ ದಿಗ್ಗಜರ ನೆಚ್ಚಿನ ಚಿತ್ರೀಕರಣ ತಾಣವಾಗಿದ್ದವು. ಮಹದೇವಪುರದ ಎಡ ತುದಿಯಲ್ಲಿ ಕಾವೇರಿ ನದಿಯ ಬಲ ದಂಡೆಯ ಮೇಲೆ ಮೈಸೂರಿನ ರಾಜವಂಶಸ್ಥರು ಕಟ್ಟಿಸಿದ್ದೆಂದು ಹೇಳಲಾಗುವ ಎರಡು ಅಂತಸ್ತಿನ (ಸಿನಿಮಾ) ಮನೆ 60ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಜಮೀನುದಾರ ಅಥವಾ ಊರಿನ ಗೌಡರ ಮನೆಯಾಗಿ ಚಿತ್ರೀಕರಣಗೊಂಡಿದೆ.
ಹಚ್ಚಹಸುರಿನಿಂದ ಕಂಗೊಳಿಸುವ ಸುತ್ತಮತ್ತಲ ಭತ್ತ, ಕಬ್ಬು ತಲೆದೂಗುವ ತೆಂಗಿನ ಕೃಷಿ ಭೂಮಿ ಹಾಗೂ ಕಾವೇರಿ ನದಿಗೆ ಹೊಂದಿಕೊಂಡಂತಿರುವ ಕಾಡುಮೇಡು ಯಾವುದೇ ಸಂಭಾವನೆ ಅಪೇಕ್ಷಿಸದೆ ಕ್ಯಾಮೆರಾಗಳಿಗೆ ಪೋಸು ನೀಡಿ ಹಳೆಯ ಮತ್ತು ಹೊಸ ತಲೆಮಾರಿನ ಕಲಾವಿದರ ನಟನೆಗೆ ಸಾಕ್ಷಿಯಾಗಿತ್ತು. ಆದರೆ, ಇತ್ತೀಚಿನ ಚಿತ್ರಗಳೆಲ್ಲಾ ಹೆಚ್ಚಾಗಿ ನಗರ ಪ್ರದೇಶದ ದೊಡ್ಡ ದೊಡ್ಡ ಕಟ್ಟಡಗಳಾದ ಅರಮನೆಗಳು, ಭವ್ಯ ಬಂಗಲೆಗಳು ಮತ್ತು ಮಾಲ್ಗಳಿಗೆ ಶಿಫ್ಟಾಗಿ ಸಿನಿಮಾ ಕಥೆಗಳು ಪ್ರೀತಿ, ಪ್ರೇಮ, ರಾಜಕೀಯ, ರೌಡಿಸಂ, ಗೂಂಡಾಯಿಸಂ, ಮಚ್ಚು, ಲಾಂಗಿನ ಕಥೆಗಳಿಗೇ ಮೀಸಲಾಗಿರುವುದರಿಂದ ಈ ಗ್ರಾಮ ಚಿತ್ರೋದ್ಯಮದಿಂದ ನೇಪಥ್ಯಕ್ಕೆ ಸರಿಯುವಂತಾಗಿದೆ.
ಮೈಸೂರಿನ ಹೊರ ವಲಯದಂತಿರುವ ಉದಯಗಿರಿ ಮೂಲಕ ಕಾವೇರಮ್ಮನಹಳ್ಳಿ ಮಾರ್ಗವಾಗಿ 18 ಕಿ.ಮೀ. ಅಥವಾ ಶ್ರೀರಂಗಪಟ್ಟಣದ ಮೂಲಕ 13 ಕಿ.ಮೀ. ಕ್ರಮಿಸಿದರೆ ಸಿಗುವ ಮಹದೇಪುರ ಸಮೀಪದ ಮೈಸೂರು, ಮಂಡ್ಯ, ಬನ್ನೂರು ಮೊದಲಾದ ನಗರ ಮತ್ತು ಗ್ರಾಮೀಣ ಜನತೆಗೆ ಜಲಕ್ರೀಡೆಯಲ್ಲಿ ಕಾಲ ಕಳೆಯುವ ಒಂದು ದಿನದ ವಿಹಾರ ತಾಣ ಆಗಿದೆ.
ಈ ಹಳ್ಳಿಯ ಸರಹದ್ದಿನಲ್ಲೇ ಸುಮಾರು ಅರ್ಧ ಕಿ.ಮೀ.ನಷ್ಟು ವಿಶಾಲವಾಗಿ ಮೈಹರವಿ ಬೆಡಗು, ಬಿನ್ನಾಣದಿಂದ ಸಾಗುವ ಕಾವೇರಿ ನದಿ ಹಾಗೂ ಇದಕ್ಕೆ ಅಡ್ಡಲಾಗಿ ನಿರ್ಮಿಸಲಾಗಿರುವ ಬೃಹತ್ ಸೇತುವೆ, ಅಣೆಕಟ್ಟೆಯಂತಹ ಒಡ್ಡು ಸೃಷ್ಟಿಸಿರುವ ಸಣ್ಣ ಸಣ್ಣ ಜಲಪಾತ ಹಾಗೂ ಕಾವೇರಿ ಎರಡೂ ತಟದಲ್ಲಿ ಸಮೃದ್ಧವಾಗಿ ಬೆಳೆದಿರುವ ಹಸುರಿನ ವನಸಿರಿ, ಮೈಮನಗಳಿಗೆ ತಂಪನ್ನೆರೆಯುವ ಕಲಾ ಶ್ರೀಮಂತಿಕೆಯಿಂದ ಕೂಡಿದ ಪ್ರಾಕೃತಿಕ ಶಿಲೆಗಳು, ನದಿ ಪಾತ್ರ ಸೃಷ್ಟಿಸಿರುವ ನಡುಗಡ್ಡೆ (ದ್ವೀಪ) ಇವುಗಳಿಗೆಲ್ಲಾ ಪೂರಕವಾದ ಪ್ರಶಾಂತ ಪರಿಸರದ ಪ್ರಾಕೃತಿಕ ಸೊಬಗು ಸಂದರ್ಶಕರ ಮನಸೂರೆಗೊಂಡು ವಿಹಾರವನ್ನು ಅವಿಸ್ಮರಣೀಯಗೊಳಿಸದಿರದು.
ಮಹದೇವಪುರದಲ್ಲಿ ಸಂದರ್ಶಿಸಬಹುದಾದ ಪ್ರಮುಖ ಸ್ಥಳಗಳೆಂದರೆ, ನದಿಯ ಬಲದಂಡೆಯ ಮೇಲಿರುವ ಹಲವಾರು ಸಿನಿಮಾಗಳಿಗೆ ಪೋಸು ನೀಡಿರುವ ಬಂಗಲೆ ಹಾಗೂ ಇಲ್ಲಿಂದ ಮಣ್ಣಿನ ಹಾದಿಯಲ್ಲಿ 1 ಕಿ.ಮೀ. ಸಾಗಿದರೆ ಸಿಗುವ ಕೆರೆಕೋಡಿ ಬಿದ್ದಂತೆ ಕಾಣುವ ಜಲಧಾರೆಯಂತಹ ತಾಣ ಹಾಗೂ ಸೇತುವೆಯ ಮೂಲಕ ಸುಮಾರು ಎರಡು ಕಿ.ಮೀ. ಸಾಗಿದರೆ ಸುಂದರ ನೈಸರ್ಗಿಕ ಸೊಬಗಿನ ಮಡಿಲಲ್ಲಿರುವ ಸುಮಾರು 600 ವರ್ಷಗಳಷ್ಟು ಪುರಾತನವಾದ ಬೋರೇದೇವರ ಹೆಸರಿನ ಶಿವದೇಗುಲ, ಒಂದು ಕಿ.ಮೀ. ಉದ್ದದ ಒಡ್ಡಿನುದ್ದಕ್ಕೂ ಝರಿಯಂತೆ ಉಕ್ಕಿ ಹರಿಯುವ ಜಲರಾಶಿ, ಕಟ್ಟೆಯ ಮೇಲಿಂದ 15 ಅಡಿ ಆಳಕ್ಕೆ ಧುಮ್ಮಿಕ್ಕಿ ಮೈ, ಮನಗಳಿಗೆ ಮುದ ನೀಡುವ ಜಲಧಾರೆ ಹಾಗೂ ಇಲ್ಲಿಂದ ಒಂದು ಕಿ.ಮೀ. ದೂರದಲ್ಲಿರುವ ಗೆಂಡೆ ಹೊಸಳ್ಳಿ ಪಕ್ಷಿಧಾಮ. ಆದರೆ ಈ ಎಲ್ಲಾ ಸ್ಥಳಗಳನ್ನು ಸ್ವಂತ ವಾಹನವಿದ್ದವರು ಮಾತ್ರವೇ ಸಂದರ್ಶಿಸಬಹುದಾಗಿದೆ. ಮಳೆಗಾಲದಲ್ಲಿ ಚಿಕ್ಕ ಶರಧಿಯಂತೆ ಮೈದೆರೆದುಕೊಳ್ಳುವ ಕಾವೇರಿ ನದಿ ಭೋರ್ಗರೆಯುತ್ತಾ, ಹಾಲ್ನೊರೆಯಂತೆ ಉಕ್ಕುಕ್ಕಿ ಹರಿವ ವೈಭವವನ್ನು ನೋಡಿಯೇ ಕಣ್ಣು ತುಂಬಿಸಿಕೊಂಡು ಆಸ್ವಾದಿಸಬೇಕು.
ಹಾಗೆಯೇ ಬಿರು ಬೇಗೆಯ ಬೇಸಿಗೆಯಲ್ಲಿ ಪ್ರವಾಹದ ಸೆಳೆತ ಕಡಿಮೆ ಇರುವ ಜಲಧಾರೆಗೆ ಮೈಯೊಡ್ಡಿಯೇ ಅದರ ಮಜವನ್ನು ಆನಂದಿಸಬೇಕು. ಇದಕ್ಕೆ ಹೆಚ್ಚು ಅವಕಾಶವಿರುವುದು ಕಾವೇರಿ ನದಿಯ ಎಡ ದಂಡೆಯ ಮೇಲಿರುವ ಗುಡಿಯ ಹಿಂಭಾಗದ ಸಮೃದ್ಧ ಜಲರಾಶಿಯ ಕಟ್ಟೆಯ ಮಧ್ಯದಲ್ಲಿ. ಆದರೆ ಅಲ್ಲಿಗೆ ಹೋಗಬೇಕಾದರೆ ಪಂಪ್ಹೌಸ್ವರೆಗೂ ವಾಹನದಲ್ಲಿ ತೆರಳಿ ಅಲ್ಲಿಂದ ಸುಮಾರು ಒಂದು ಕಿ.ಮೀ. ದೂರವನ್ನು ಕಟ್ಟೆಯಿಂದ ಹೊರಕ್ಕೆ ಜಿಗಿದು ಒಟ್ಟಿಗೆ ಉಪಯೋಗಿಸಲಾಗಿರುವ ಕೊರಕಲಿನಂತಹ ದೊಡ್ಡ ಮತ್ತು ಸಣ್ಣ ಕಲ್ಲು ಬಂಡೆಗಳು ಹಾಗೂ ಕಟ್ಟೆಯ (ರಾಜಪರಮೇಶ್ವರಿ ಹೆಸರಿನ ಸುಮಾರು 15 ಅಡಿ ಎತ್ತರದ ಈ ಕಟ್ಟೆಯನ್ನು 1888ರಲ್ಲಿ ನಿರ್ಮಿಸಲಾಗಿದ್ದರೂ ಇಂದಿಗೂ ಸಹ ಜಗಜಟ್ಟಿಯಂತೆ ಕಾವೇರಿಗೆ ಎದೆಯೊಡ್ಡಿ ನಿಂತಿರುವುದು ವಿಸ್ಮಯವನ್ನು ಮೂಡಿಸದಿರದು) ಮೇಲ್ಭಾಗದ ಮೇಲೆ ಝರಿಯಂತಹ ಜಲಮಾರ್ಗವನ್ನು ಸವೆಸಬೇಕು. ಈ ಮಾರ್ಗ ಸುಗಮವಾಗಿರದೆ ಕೆಲವೆಡೆ ಪಾಚಿ ಇರುವುದರಿಂದ ಹೆಜ್ಜೆಹೆಜ್ಜೆಗೂ ಎಚ್ಚರಿಕೆ ಅತ್ಯಗತ್ಯ. ಸ್ವಲ್ಪ ಎಚ್ಚರ ತಪ್ಪಿದರೆ ಜಾರಿ ಬೀಳುವ ಅಪಾಯ ತಪ್ಪಿದ್ದಲ್ಲ. ಆದಾಗ್ಯೂ ಪುರುಷರು ಹಾಗಿರಲಿ, ಯುತಿಯವರು ಹಾಗೂ ಪ್ರೌಢ ಮಹಿಳೆಯರೂ ಈ ದಾರಿಯನ್ನು ಕ್ರಮಿಸಿ ಜಲಪಾತ ಜಳಕದ ಆನಂದವನ್ನು ಅನುಭವಿಸುತ್ತಾರೆ. ಆದರೆ, ಎಚ್ಚರಿಕೆಯಿಂದ ಕ್ರಮಿಸುವವರಿಗೆ ಝರಿಯಂತೆ ಹರಿಯುವ ಕಾವೇರಿ ಕಾವಲಿಯಂತೆ ಕಾದು ಸುಡು ಕಲ್ಲಿನ ಮೇಲೆ ಬಸವಳಿದ ಕಾಲಿಗೆ ಕಚಗುಳಿ ಇಟ್ಟು ಇಡೀ ಶರೀರಕ್ಕೆ ತಂಪಿನ ಅನುಭವ ನೀಡುತ್ತದೆ. ಗುಡಿಯ ಹಿಂಭಾಗದಲ್ಲಿರುವ ಸ್ನಾನ ಘಟ್ಟದಂಥ ಸ್ಥಳದಿಂದ ಒಂದು ನೂರಡಿಯವರೆಗೆ ಸೇತುವೆಯೊಂದನ್ನು ನಿರ್ಮಿಸಿದರೆ ಯಾವುದೇ ಶ್ರಮ ಅಥವಾ ಅಪಾಯವಿಲ್ಲದೆ ನದಿಯ ಮಧ್ಯದಲ್ಲಿರುವ ಜಲಪಾತವನ್ನು ಎರಡೇ ನಿಮಿಷದಲ್ಲಿ ತಲುಪಿಬಿಡಬಹುದು. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕಷ್ಟೆ. ಮಾರ್ಗದುದ್ದಕ್ಕೂ ಬಲದಂಡೆಗೆ ನಿರ್ಮಿಸಲಾಗಿರುವ ಕಟ್ಟೆಯಲ್ಲಿನ ನೀರು ಈಜುಕೊಳದಂತೆ ಈಜು ಬಯಸುವವರಿಗೆ ವಿಪುಲವಾದ ಅವಕಾಶವೇನೋ ಇದೆ. ಆದರೆ, ಈ ನೀರು ಪೂರ್ಣ ಪಾಚಿ ಮತ್ತು ಜೊಂಡಿನಿಂದ ಆವೃತ್ತವಾಗಿದೆ.
ಪ್ರಮುಖ ಜಲಧಾರೆಯವರೆಗೂ ಸಾಗದವರು ಮಾರ್ಗ ಮಧ್ಯದಲ್ಲೇ ಸಾಗುವ ಸಣ್ಣಪುಟ್ಟ ಜಲಧಾರೆಯಲ್ಲೇ ಆಟವಾಡಿ ಆನಂದಿಸುತ್ತಾರೆ. ಕೆಲವರಂತೂ ತಂಪು ಹವೆಯ ಸುಂದರ ಪರಿಸರದ ನಡುವೆ ನೀರಿನಿಂದ ಆವೃತ್ತವಾದ ಸಣ್ಣಸಣ್ಣ ನಡುಗಡ್ಡೆ ಅಥವಾ ಬಂಡೆಗಳ ಮೇಲೆ ಪರಿವಾರ ಸಮೇತವಾಗಿ ಕುಳಿತು ಭೋಜನವನ್ನು ಆಸ್ವಾದಿಸುತ್ತಾ ತಮ್ಮ ವಿಹಾರವನ್ನು ಅವಿಸ್ಮರಣೀಯಗೊಳಿಸಿಕೊಳ್ಳುತ್ತಾರೆ.
ಕಟ್ಟೆ ನೀರಿನಲ್ಲಿ ದೋಣಿ ವಿಹಾರ ಮಾಡಬಯಸುವವರಿಗೆ ದೇಗುಲದ ಹಿಂದಿರುವ ಸ್ನಾನ ಘಟ್ಟದ ಬಳಿ ಬೋಗುಣಿ ಆಕಾರದ ಹರಿವು ವ್ಯವಸ್ಥೆ ಕೂಡ ಇದೆ. ಮಹದೇಪುರದಿಂದ ಒಂದು ಕಿ.ಮೀ. ದೂರದಲ್ಲಿ ಗೆಂಡೆ ಹೊಸಳ್ಳಿ ಪಕ್ಷಿಧಾಮವಿದ್ದು, ಪಕ್ಷಿ ಪ್ರಿಯರು ನವೆಂಬರ್ಫೆಬ್ರವರಿಯ ಚಳಿಗಾಲದಲ್ಲಿ ದೇಶವಿದೇಶಗಳಿಂದ ವಲಸೆ ಬರುವ ಪಕ್ಷಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದಾಗಿದೆ.
– ರಾಮಕೃಷ್ಣಾರ್ಪಣಾನಂದ