ನೀಳ್ಗಥೆ – ಅಹಲ್ಯಾ  ಮಧುಸೂದನ್ 

ಎಂದಿನಂತೆ ಶಾಲೆಯಿಂದ ಮನೆಗೆ ಹಿಂದಿರುಗಿದ ರೋಹಿತ್‌ ಆಟೋದಿಂದ ಇಳಿಯದೆಯೇ ಜೋರಾಗಿ ಕಿರುಚಿದ, “ಅಮ್ಮಾ…… ಅಮ್ಮಾ… ರಾಜಣ್ಣನಿಗೆ ಬೇಗ ಹಣ ಕೊಡು ಬಾ!” ತಕ್ಷಣ ಆಟೋದವನ ಕಡೆ ತಿರುಗಿ, “ರಾಜಣ್ಣ…. ಒಂದು ನಿಮಿಷ ಇರು…. ಅಮ್ಮನ ಹತ್ತಿರ ಈಗಲೇ ದುಡ್ಡು ತರ್ತೀನಿ,” ಎಂದು ಒಂದೇ ನೆಗೆತದಲ್ಲಿ ಮನೆಯ ಒಳಗೋಡಿದ.

“ಇರ್ಲಿ ಬಿಡಪ್ಪ…. ನಾಳೆ ತಗೊಂತೀನಿ, ಇನ್ನೊಂದು ಕಡೆ ಅರ್ಜೆಂಟ್‌ ಪಿಕಪ್‌ ಇದೆ,” ಎನ್ನುತ್ತಾ ರಾಜಣ್ಣ  ಬೇಗ ಆಟೋ ಸ್ಟಾರ್ಟ್‌ ಮಾಡಿ ಹೊರಟೇಬಿಟ್ಟ.

`ಇದೇಕೆ ನಾನು ಕೂಗಿದ್ದು ಅಮ್ಮನಿಗೆ ಕೇಳಿಸಲೇ ಇಲ್ಲ…?’ ಎಂದುಕೊಳ್ಳುತ್ತಾ ಮನೆಯೊಳಗೆ ನುಗ್ಗಿದವನೇ ಎಡಗಾಲಿನ ಶೂ ಸೋಫಾ ಕೆಳಗೆ, ಬಲಗಾಲಿನ ಶೂ ಟೀಪಾಯಿ ಕೆಳಗೆ ದೂಡಿದವನೇ, ಬ್ಯಾಗನ್ನು ಮೇಜಿನ ಮೇಲೆಸೆದು, “ಅಮ್ಮಾ….” ಎನ್ನುತ್ತಾ ಆಕೆಯ ಕೋಣೆಗೆ ಓಡಿದ. ಮನೆಯಲ್ಲಿ ಎಲ್ಲಿ ಹುಡುಕಿದರೂ ಅಮ್ಮನ ಸುಳಿವೇ ಇಲ್ಲ! `ಈ ಅಮ್ಮ ಎಲ್ಲಿಗೆ ಹೋದಳು?’ ಎಂದು ಯೋಚಿಸುತ್ತಾ ನೀರು ಕುಡಿಯಲೆಂದು ಅಡುಗೆಮನೆಯ ಫ್ರಿಜ್‌ ಬಳಿ ಚಿಂತಾಕ್ರಾಂತನಾಗಿ ನಿಂತ.

ಅದನ್ನು ಕಂಡು ಮನೆಯ ಆಳು ರಾಮು, “ರೋಹಿತ್‌ ಪುಟ್ಟ…. ಅಮ್ಮನ್ನ ಹುಡುಕ್ತಿದ್ದೀಯಾ? ಅವರು ಇದ್ದಕ್ಕಿದ್ದಂತೆ ಮೈಸೂರಿಗೆ ಹೊರಡಬೇಕಾಯ್ತು…. ಮಧ್ಯಾಹ್ನ ಹೊರಟರು,” ಎಂದ.

“ಅದನ್ನು ಮೊದಲೇ ಹೇಳಬಾರದಾ ರಾಮಣ್ಣ….? ಆಗಿನಿಂದ ನಾನು ಅಮ್ಮನ್ನ ಹುಡುಕುತ್ತಾ ಇದ್ದೀನಿ,” ರೋಹಿತ್‌ ಕೋಪದಲ್ಲಿ ಹೇಳಿದ.

“ಅಗತ್ಯ ಬಿದ್ದರೆ ನಿನಗೆ ವಿಷಯ ತಿಳಿಸಬೇಕು ಅಂತ ಅಪ್ಪಾಜಿ ಫೋನ್‌ ಮಾಡಿದ್ರು…. ಬೇಕಾದ್ರೆ ನೀನು ಒಂದು ಸಲ ಅಪ್ಪಾಜಿಗೆ ಫೋನ್‌ ಮಾಡಿಬಿಡು.”

ಅಪ್ಪಾಜಿ ಹೆಸರು ಬಂದಿದ್ದರಿಂದ ರೋಹಿತ್‌ ಇದ್ದಕ್ಕಿದ್ದಂತೆ ಸುಮ್ಮನಾದ. ಅವನ ಕ್ಷಣಿಕ ಕೋಪ ಮಾಯಾವಾಯಿತು. ಯಾಕೋ ಮನಸ್ಸಿಗೆ ಪಿಚ್ಚೆನಿಸಿತು. ಮನೆಯಲ್ಲಿ ಉಸಿರು ಕಟ್ಟಿದಂತಾಗಲು ಅವನು ಹೊರಗೆ ಬಂದು ಲಾನ್‌ನಲ್ಲಿ ಕುಳಿತ.

`ಸಾಮಾನ್ಯವಾಗಿ ಅಮ್ಮ ನನ್ನ ಯಾವ ಮಾತಿಗೂ ಕೋಪ ಮಾಡಿಕೊಳ್ಳುವವಳಲ್ಲ. ಹಾಗಿರುವಾಗ ಇವತ್ತು ಅಮ್ಮನಿಗೆ ಇದ್ದಕ್ಕಿದ್ದಂತೆ ಹೊರಡಲು ಅಂಥ ಅವಸರ ಏನಿತ್ತು ಅಥವಾ ನನ್ನ ಮೇಲೆ ಕೋಪವೇ? ಇದನ್ನು ಯಾರ ಬಳಿ ಕೇಳುವುದು? ಏನೆಂದು ಕೇಳುವುದು? ಅಪ್ಪಾಜಿ ಬಳಿ ಅಂತೂ ಮಾತನಾಡುವ ಹಾಗೆ ಇಲ್ಲ…’ ತನ್ನಲ್ಲೇ ಯೋಚಿಸುತ್ತಿದ್ದ ಆ ಪುಟ್ಟ ಪೋರನಿಗೆ ಅಪ್ಪಾಜಿ ಎಂದರೆ ಮಹಾ ಭಯ.

ಅಮೂಲ್ಯ ಉಡುಗೊರೆ

ಎದುರು ಮನೆಯ ಡಾಕ್ಟರ್‌ ಆಂಟಿ ಯಾವುದಕ್ಕಾಗಿಯೋ ಹೊರಗೆ ಬಂದರು, ಇವನನ್ನು ಕಂಡವರೇ ಇವರ ಮನೆಯತ್ತ ಧಾವಿಸಿ ಬಂದರು. ಇವನ ತಲೆಗೂದಲಲ್ಲಿ ಬೆರಳಾಡಿಸುತ್ತಾ, “ರೋಹಿ, ಅಮ್ಮ ನಿನಗೆ ಹೇಳದೆ ಹೊರಟುಬಿಟ್ಟರು ಅಂತ ಬೇಜಾರು ಮಾಡಿಕೊಂಡ್ಯಾ? ಹೋಗಲಿ ಬಿಡಪ್ಪ, ಬಹಳ ಅವಸರದಲ್ಲಿದ್ದರು. ಬಾ ನಮ್ಮ ಮನೆಗೆ ಹೋಗೋಣ. ಒಂದಷ್ಟು ಹೊಸ ವಿಡಿಯೋ ಗೇಮ್ಸ್ ಬಂದಿವೆ ನೋಡ್ತೀಯಂತೆ…. ಮತ್ತೆ ಏನಾದ್ರೂ ಹೋಂವರ್ಕ್‌ ಬಾಕಿ ಇದ್ಯಾ, ಅದನ್ನೂ ಕಂಪ್ಲೀಟ್‌ ಮಾಡೋಣ. ಮತ್ತೆ ಇವತ್ತು ನಿನ್ನ ಇಷ್ಟದ ವೆಜ್‌ ಪಲಾವ್ ಮಾಡಿಸಿದ್ದೀನಿ. ಡ್ರೈ ಜಾಮೂನ್‌ ಜೊತೆ ತಿಂತೀಯಾ? ಬಾ ಹೋಗೋಣ….” ಎಂದು ಅಕ್ಕರೆಯಿಂದ ಹೇಳಿದರು. ರೋಹಿತನಿಗೆ ಅಮ್ಮನ ಮೇಲೆ ಎಲ್ಲಿಲ್ಲದ ಕೋಪ ಬಂತು. ಎದುರುಮನೆ ಆಂಟಿ ಬಂದು ತನಗೆ ಅಮ್ಮನ ವಿಷಯ ಹೇಳುವುದೇ? ಛೇ…ಛೇ..!

“ಬೇಡ ಆಂಟಿ…. ಇವತ್ತು ನನ್ನೆಲ್ಲ ಕೆಲಸವನ್ನೂ ನಾನೇ ಮಾಡಿಕೊಳ್ತೀನಿ. ರಾಮು ಇದ್ದಾನಲ್ಲ ಬಿಡಿ…. ರಾಮು, ನಂಗೆ ಹಾರ್ಲಿಕ್ಸ್ ಕೊಡು. ನಾನು ಹೋಂವರ್ಕ್‌ ಮುಗಿಸ್ತೀನಿ. ಆಮೇಲೆ ಊಟ ಮಾಡುವಾಗ ಕಾರ್ಟೂನ್‌ ನೋಡಿ ಮಲಗ್ತೀನಿ. ಅಷ್ಟರಲ್ಲಿ ಅಮ್ಮ ಬರಬಹುದು,” ಎಂದ. ರೋಹಿತ್‌ನ ಹಠದ ಬಗ್ಗೆ ಗೊತ್ತಿದ್ದ ಡಾಕ್ಟರ್‌ ಆಂಟಿ ಹೆಚ್ಚು ಒತ್ತಾಯಿಸಲಾಗದೆ ಹೊರಟುಬಿಟ್ಟರು.

ಅವರ ಎದುರು ದೊಡ್ಡದಾಗಿ ಹಠ ಕಟ್ಟಿದ ರೋಹಿತ್‌ಗೆ ತನ್ನ ಕೋಣೆಗೆ ಹೋದಾಗ, ತಡೆಯಲಾಗದೆ ಅಳು ಒತ್ತರಿಸಿಕೊಂಡು ಬಂದಿತು.

ಅಮ್ಮ ಅವನನ್ನು ಎಷ್ಟು ಪ್ರೀತಿಸುತ್ತಾಳೆ! ತಾನೇನೂ ಹೇಳದೆ ಎಲ್ಲವನ್ನೂ ಅರ್ಥ ಮಾಡಿಕೊಂಡು ಕೇಳದೆಯೇ ಎಲ್ಲಾ ಮಾಡಿಕೊಡುತ್ತಾಳೆ. ಅವನೂ ಅಷ್ಟೆ, ಅಮ್ಮ ಹೇಳುವ ಮೊದಲೇ ಎಲ್ಲಾ ಹೋಂವರ್ಕ್ ಮುಗಿಸಿ ಸರಿ ಇದೆ ತಾನೇ ಎಂದು ಅಮ್ಮನ ಮುಂದೆ ತೋರಿಸಿ ಶಭಾಷ್‌ ಗಿಟ್ಟಿಸುತ್ತಾನೆ. ಅಮ್ಮ ಅವನ ಹತ್ತಿರ ಕುಳಿತಿರಬೇಕಷ್ಟೆ. ಪಾದರಸದಂತೆ ಎಲ್ಲಾ ಕೆಲಸ ಚಕಚಕ ಮಾಡಿಕೊಳ್ಳುತ್ತಾನೆ.

ಅಪರೂಪಕ್ಕೆ ಒಮ್ಮೊಮ್ಮೆ ಅಪ್ಪಾಜಿ ಅವನ ಪುಸ್ತಕದ ಮೇಲೆ ಕಣ್ಣು ಹಾಯಿಸುವುದುಂಟು, ಆಗ ಕಾರಣವಿಲ್ಲದೆಯೇ ಅವರು ರೇಗಿಬಿಡುತ್ತಿದ್ದರು. ಶಾಲೆಯಲ್ಲಿ ಎಲ್ಲಾ ಟೀಚರ್ಸ್‌ ಅವನ ಕಲಿಕೆ ಕಂಡು ಪ್ರಶಂಸಿಸುತ್ತಿದ್ದರು. ಅಪ್ಪಾಜಿ ಮಾತ್ರ ಸಿಡುಕುವುದು ಬಿಟ್ಟಿರಲಿಲ್ಲ.

ಮಾರನೇ ದಿನ ಅವನ ತಂದೆ ಬಂದು ಶಾಲೆಗೆ ತಡವಾಗುತ್ತದೆ ಎಂದು ಎಬ್ಬಿಸಿದಾಗ, ಕೆಂಪಾದ ಅವನ ಕಣ್ಣು ಕಂಡು ರಾತ್ರಿ ಸರಿಯಾಗಿ ಅವನು ನಿದ್ದೆ ಮಾಡಿಲ್ಲ ಎಂದು ಅರ್ಥ ಮಾಡಿಕೊಂಡರು. ಶಾಲೆಗೆ ಹೊರಡುವಾಗ ಅವನ ಬುಕ್ಸ್, ಬ್ಯಾಗ್‌ ಎಲ್ಲಾ ಚೆಕ್‌ ಮಾಡಿದರು. ಅವರು ಸಮಾಧಾನವಾಗಿರುವುದನ್ನು ಕಂಡು ರೋಹಿತ್‌ ಮೆಲ್ಲಗೆ ಪ್ರಶ್ನಿಸಿದ.

“ಅಪ್ಪಾಜಿ, ನನಗೆ ಹೇಳದೆಯೇ ಅಮ್ಮ ಯಾಕೆ ಹೊರಟುಬಿಟ್ಟರು? ಇದಕ್ಕೆ ಮೊದಲು ಅಮ್ಮ ಎಂದೂ ಹಾಗೆ ಮಾಡಿರಲಿಲ್ಲ. ನಾನು ಒಂಟಿ ಆಗ್ತೇನೆ ಅಂತ ಅಮ್ಮನಿಗೆ ಗೊತ್ತಿಲ್ವಾ?”

“ಹಾಗಲ್ಲಪ್ಪ…. ನಿಮ್ಮ ತಾತನಿಗೆ ಇದ್ದಕ್ಕಿದ್ದಂತೆ ಹಾರ್ಟ್‌ ಅಟ್ಯಾಕ್‌ ಆಯ್ತಂತೆ….” ಅಮಿತ್‌ ಹೇಳಿದರು,

“ನಿಮ್ಮ ಮಾಮನ ಫೋನ್‌ ಬಂತು…. ಹೀಗಾಗಿ ಅಮ್ಮ ಟ್ಯಾಕ್ಸಿ ಮಾಡಿಕೊಂಡು ತಕ್ಷಣ ಮೈಸೂರಿಗೆ ಹೊರಟುಬಿಟ್ಟರು. ತಾತಾ ಈಗ ಆಸ್ಪತ್ರೆಯ ಐ.ಸಿ.ಯೂ.ನಲ್ಲಿದ್ದಾರಂತೆ…”

“ಟ್ಯಾಕ್ಸಿ ತಾನೇ….? ನಮ್ಮ ಸ್ಕೂಲ್ ವ‌ರೆಗೂ ಬಂದು ನನಗೆ ವಿಷಯ ತಿಳಿಸಿ ಹೋಗಬಹುದಿತ್ತು.”

“ಹಾಗಲ್ಲ…. ಅಜ್ಜಿ ಗಾಬರಿಗೊಂಡು ತುಂಬಾ ಅಳ್ತಾ ಇದ್ದರಲ್ಲ… ಹಾಗಾಗಿ ಅಮ್ಮ ಬೇಗ ಹೊರಡಬೇಕಾಯ್ತು. ಬೆಂಗಳೂರಿನ ಟ್ರಾಫಿಕ್‌ ನಿಂಗೆ ಗೊತ್ತೇ ಇದೆಯಲ್ಲ….. ನಿಮ್ಮ  ಶಾಲೆವರೆಗೂ ಬಂದು ಮತ್ತೆ ವಾಪಸ್ಸು ಎದುರು ದಿಕ್ಕಿನಲ್ಲಿ ಮೈಸೂರು ರಸ್ತೆಗೆ ಹೋಗುವಷ್ಟರಲ್ಲಿ  ಬಹಳ ತಡವಾಗುತ್ತದೆ.

“ಮತ್ತೆ ನಿನ್ನ ಜೊತೆ ಇಲ್ಲಿ ನಾನಿದ್ದೀನಲ್ಲ…. ನೀನು ಯಾವುದಕ್ಕೂ ಯೋಚಿಸಬೇಡ. ಸರಿ, ಬೇಗ ಸ್ನಾನ ಮಾಡಿ, ಬ್ರೆಡ್‌ ಟೋಸ್ಟ್ ತಿಂದು ರೆಡಿಯಾಗು. ರಾಮು ರೋಹಿಯ ಟಿಫನ್‌ ಬಾಕ್ಸ್ ರೆಡಿ ಮಾಡು…. ಸಂಜೆ ನಾನು ಆಫೀಸ್‌ನಿಂದ ಬಂದ ಮೇಲೆ ನಿನ್ನ ಹೋಂವರ್ಕ್‌ ಮಾಡಿಸ್ತೀನಿ ಬಿಡು. ಸರಿ, ನೀನು ಇನ್ನೂ ಇದೇ ನೆನೆಸಿಕೊಂಡು ಕುಸುಕುಸು ಅಂತ ಅಳುವುದನ್ನು ಬಿಟ್ಟುಬಿಡು, ಹೆಣ್ಣಪ್ಪಿ ಅಲ್ಲ ನೀನು… ಎಷ್ಟು ದೊಡ್ಡ ಹುಡುಗ ಆಗಿದ್ದಿ!”

ಮಗನಿಗೆ ವಿವರಿಸಿ ಹೇಳುತ್ತಲೇ ಅಮಿತ್‌ನ ಗಮನ ಹೆಂಡತಿ ಶೋಭಾ ಕಡೆ ಹರಿಯಿತು. ಈತನ ಪ್ರಕಾರ ಆಕೆ ಹದಿನಾರಾಣೆ ಅಪ್ಪಟ ಹೆಣ್ಣುಹೆಂಗಸು. ಮನೆಯವರು, ಮಗು, ಸಂಸಾರದ ಆಗುಹೋಗುಗಳು…. ಇದರಲ್ಲೇ ಮುಳುಗಿಹೋದ ಅವಳಿಗೆ ಗಂಡನನ್ನು ವಿಚಾರಿಸಿಕೊಳ್ಳುವ ಇರಾದೆ ಇರಲಿಲ್ಲ. ಅಮ್ಮ ಅಪ್ಪ ಎಂಥ ಹೆಣ್ಣನ್ನು ತಂದು ತನ್ನ ತಲೆಗೆ ಬಲವಂತವಾಗಿ ಕಟ್ಟಿದರು ಎಂದು ಅವರ ಮೇಲೂ ಕೋಪ ಬಂದಿತು. ತನ್ನ ಆಯ್ಕೆಗೆ ಬಿಟ್ಟಿದ್ದರೆ, ತನ್ನ ಮೆಚ್ಚಿನ ಹೈ ಸೊಸೈಟಿಯ ಆಂಗ್ಲದಲ್ಲಿ ಪಟಪಟನೆ ಮುತ್ತುದುರಿಸುವ ಸಂಗಾತಿ ಪಡೆಯಬಹುದಾಗಿತ್ತು. ಆದರೆ ಶೋಭಾ ಖಂಡಿತಾ ತನ್ನ ಲೆವೆಲ್‌ ಅಲ್ಲ ಎಂದು ದಿನೇದಿನೇ ದಾಂಪತ್ಯವನ್ನು ಒಲ್ಲದ ಔತಣವಾಗಿಸಿಕೊಂಡಿದ್ದ.

ಪದವೀಧರೆಯಲ್ಲದ ಶೋಭಾಳನ್ನು ಅಮಿತ್‌ ತಂದೆ ತಾಯಿಯರ ಬಲವಂತಕ್ಕಾಗಿ ಮದುವೆಯಾಗಿದ್ದ. ಮಾಡರ್ನ್‌, ಹೈ ಫೈ ಲೈಫ್‌ಸ್ಟೈಲ್‌, ಸೋಶಿಯಲ್ ಮೂಮೆಂಟ್‌ಗಳಿಲ್ಲದ ಶೋಭಾ ಎಂದೂ ಅವನೊಂದಿಗೆ ದೊಡ್ಡ ದೊಡ್ಡ ಪಾರ್ಟಿಗಳಿಗೆ ಬರಲು ಒಪ್ಪುತ್ತಿರಲಿಲ್ಲ.  ಸದಾ ಸೀರೆ ಉಟ್ಟುಕೊಂಡು ಗಂಗಮ್ಮ ಗೌರಮ್ಮನಂತಿದ್ದ ಅವಳನ್ನು ಅತ್ಯಾಧುನಿಕ ಗೆಳೆಯರ ತಂಡಕ್ಕೆ ಪರಿಚಯಿಸಲು ಅವನಿಗೂ ಮುಜುಗರ. ಒಳ್ಳೆಯದೇ ಆಯಿತು, 4 ದಿನ ಅವಳು ತವರಿನಲ್ಲಿದ್ದರೆ ಇಲ್ಲಿ ಡಾ. ಸ್ಮಿತಾಳ ಮಾರ್ಗದರ್ಶನದಲ್ಲಿ ಮಗ ಅಭಿವೃದ್ಧಿ  ಹೊಂದುತ್ತಾನೆಂದು ಸಂಭ್ರಮಿಸಿದ.

ಡಾ. ಸ್ಮಿತಾಳ ನೆನಪು ಬರುತ್ತಿದ್ದಂತೆಯೇ ಅಮಿತ್‌ನಿಗೆ ಎಷ್ಟೋ ಪುಳಕವಾಯಿತು. ಆಕೆ ಪಕ್ಕದ ಮನೆಯವಳೇ ಆದರೂ, ತನ್ನ  ಮನಸ್ಸಿನ ಬಯಕೆಗಳನ್ನು ಸುಲಭವಾಗಿ ಗ್ರಹಿಸುತ್ತಾಳೆಂದು ಸಂಭ್ರಮಿಸುತ್ತಿದ್ದ. ಅಪರೂಪಕ್ಕೆ ಆಕೆ ಮನೆಗೆ ಬಂದಾಗ, ಎಲ್ಲಾ ವಿಷಯಗಳನ್ನೂ ನಿರರ್ಗಳವಾಗಿ ಇಂಗ್ಲಿಷ್‌ನಲ್ಲೇ ಚರ್ಚಿಸುತ್ತಿದ್ದ. ಆಕೆಯ ಆಧುನಿಕ ವಿಚಾರಧಾರೆ, ಸದಾ ಪ್ರೆಸೆಂಟೆಬಲ್ ವ್ಯಕ್ತಿತ್ವಕ್ಕೆ ಅವನು ಮನಸೋತಿದ್ದ. ಆಕೆಯೊಂದಿಗೆ ಮಾತು ಮುಗಿಸಿದಾಗ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ತನ್ನ ಹೆಂಡತಿ ಸಹ ಡಾ. ಸ್ಮಿತಾ ತರಹ ಇರಬಾರದಿತ್ತೇ ಎಂದು ಸದಾ ಹಪಹಪಿಸುತ್ತಿದ್ದ.

ಅದೇಕೋ ಅಮ್ಮನ ವಿಷಯ ತೆಗೆದಾಗಲೆಲ್ಲ ಅಪ್ಪಾಜಿ ರೇಗುತ್ತಾರೆ ಎಂಬುದು ರೋಹಿತ್‌ಗೆ ಗೊತ್ತಾಗಿತ್ತು. “ಅಪ್ಪಾಜಿ, ಸಾಯಂಕಾಲ ನಾನೇ ಹೋಂವರ್ಕ್ ಮಾಡಿಕೊಳ್ತೀನಿ, ಪರವಾಗಿಲ್ಲ,” ಎಂದಾಗ ಅಮಿತ್‌ ವಾಸ್ತವಕ್ಕೆ ಮರಳಿದ.

“ವೆರಿಗುಡ್‌! ನೋಡಪ್ಪ, ನಾನು ಆಫೀಸ್‌ನಿಂದ ಬರುವಷ್ಟರಲ್ಲಿ ನೀನು ಎಲ್ಲಾ ಪೂರ್ತಿ ಮಾಡಿ ಊಟ ಮಾಡಿಬಿಡು. ಮತ್ತೆ… ಒಂಚೂರು ಅಳಬಾರದು. ರಾಮು ಹೇಳಿದಂತೆ ನೀಟಾಗಿ ಎಲ್ಲಾ ಮಾಡು, ಅವನನ್ನ ಗೋಳು ಹೊಯ್ದುಕೊಳ್ಳಬಾರದು. ಎಲ್ಲಾ ಕೆಲಸ ಮುಗಿಸಿರು ಅಮ್ಮ ಬರ್ತಾರೆ. ಗೊತ್ತಾಯ್ತು ತಾನೇ?”

ಆಗಲಿ ಎಂಬಂತೆ ರೋಹಿತ್‌ ತಲೆಯಾಡಿಸಿದ. ಅಪ್ಪ ನನ್ನನ್ನು ನೋಡಿಕೊಳ್ಳುವ ಮಾತನಾಡುತ್ತಾರೆ, ಆದರೆ ನನಗೆ ಬಿಸಿ ಹಾಲಲ್ಲ, ತಣ್ಣಗಿನ ಹಾಲೇ ಇಷ್ಟ ಎಂದು ಗೊತ್ತಿಲ್ಲ. ಅಮ್ಮ ಬೇಗ ಬರಲಿ ಎಂದು ಹಾರೈಸಿದ.

ಅಷ್ಟರಲ್ಲಿ ಹೊರಗಿನಿಂದ ರಾಜಣ್ಣ ತಡವಾಗುತ್ತಿದೆ ಎಂದು ಆಟೋ ಹಾರ್ನ್‌ ಬಾರಿಸಿದ. ರೋಹಿತ್‌ ಗಟಗಟ ಎಂದು ಹಾಲು ಕುಡಿದು ಮುಗಿಸಿ ಒಂದೇ ಓಟದಲ್ಲಿ ಓಡಿದ. ಅಷ್ಟರಲ್ಲಿ ಹಿಂದಿನಿಂದ ಓಡಿಬಂದ ರಾಮು ಟಿಫನ್‌ಬಾಕ್ಸ್, ವಾಟರ್‌ ಕ್ಯಾನ್‌ ಇದ್ದ ಬ್ಯಾಗ್‌ ನೀಡಿದ. ರೋಹಿತ್‌ ಹತ್ತಿ ಕುಳಿತೊಡನೆಯೇ ಆಟೋ ಸ್ಟಾರ್ಟ್‌ ಆಯಿತು.

ಅದಾಗಿ 4 ದಿನ ಕಳೆಯುವಷ್ಟರಲ್ಲಿ ರೋಹಿತ್‌ ಎಷ್ಟೋ ಸುಧಾರಿಸಿಕೊಂಡಿದ್ದ. ಹಿಂದಿನ ಆ ಕೋಪ, ಹಠ ಎಲ್ಲಾ ಹೋಗಿತ್ತು. ರಾಮು ಬಳಿ ಹಾರ್ದಿಕವಾಗಿ ನಡೆದುಕೊಳ್ಳುತ್ತಿದ್ದ. ರಾಜಣ್ಣ ಕರೆಯುವಷ್ಟರಲ್ಲಿ ತಯಾರಾಗಿ, ಗೇಟ್‌ ಬಳಿ ಸಿದ್ಧನಾಗಿ ನಿಂತಿರುತ್ತಿದ್ದ. ಟಿಫನ್‌ ಬಾಕ್ಸ್ ಸಂಪೂರ್ಣ ಖಾಲಿ ಆಗಿರುತ್ತಿತ್ತು. ಮನೆಗೆ ಬಂದ ಮೇಲೂ ಇದೇ ಬೇಕು ಅದೇ ಬೇಕು ಎಂದು ಹಠ ಮಾಡುತ್ತಿರಲಿಲ್ಲ. ಅಪ್ಪಾಜಿ ಬಳಿ ಅಂತೂ ವೆರಿಗುಡ್‌ ಬಾಯ್‌ ಆಗಿರುತ್ತಿದ್ದ. ನೋಡನೋಡುತ್ತಲೇ ಅಮ್ಮ ಊರಿಗೆ ಹೋಗಿ 15 ದಿನಕ್ಕಿಂತ ಹೆಚ್ಚೇ ಆಗಿತ್ತು. ತಾನಿಲ್ಲದೆ ಅಮ್ಮನಿಗಲ್ಲಿ ಹೊತ್ತು ಹೋಗುವುದೇ? ತನ್ನ ಚಿಂತೆ ಕಾಡದೇ  ಎಂದು ಯೋಚಿಸುತ್ತಿದ್ದ.

ಇತ್ತೀಚೆಗೆ ಅಪ್ಪಾಜಿ ಹಿಂದಿನಂತೆ ತಡವಾಗಿ ಬರುತ್ತಿರಲಿಲ್ಲ. ಈಗೆಲ್ಲ ಸಂಜೆ ಹೊತ್ತು ಅವನೊಂದಿಗೆ ಶಟಲ್ ಕಾಕ್‌ ಆಡಿ, ನಂತರ ಎದುರು ಮನೆ ಡಾಕ್ಟರ್‌ ಆಂಟಿ ಜೊತೆ ಮಾತನಾಡಲು ಹೋಗುತ್ತಿದ್ದರು. ಇಲ್ಲದಿದ್ದರೆ ಎಷ್ಟೋ ಸಲ ಆಂಟಿ ಇಲ್ಲಿಗೇ ಬರುತ್ತಿದ್ದರು.

ಎಷ್ಟೋ ಸಲ ಆಕೆ ರಾತ್ರಿ ಹೊತ್ತು ನಮ್ಮ ಜೊತೆಯೇ ಊಟ ಮಾಡುತ್ತಾರೆ. ನೀವು ಒಬ್ಬರೇ ಹೋಗಿ ಇಷ್ಟು ಹೊತ್ತಲ್ಲಿ ಏನು ಅಡುಗೆ ಮಾಡಿಕೊಳ್ತೀರಿ, ಇಲ್ಲೇ ಊಟ ಮಾಡಿ ಎಂದು ಅಪ್ಪಾಜಿ ಅವರನ್ನು ಒತ್ತಾಯಿಸುತ್ತಾರೆ. ರಾಮು ಸಹ ಖುಷಿ ಖುಷಿಯಾಗಿ ಅವರನ್ನು ಮಾತನಾಡಿಸುತ್ತಾನೆ, ಎಲ್ಲರಿಗೂ ಬಡಿಸುತ್ತಾನೆ.

ಅಪ್ಪಾಜಿ, ಸ್ಮಿತಾ ಆಂಟಿ ಸದಾ ಇಂಗ್ಲಿಷ್‌ನಲ್ಲೇ ಹರಟೆ ಹೊಡೆಯುತ್ತಿರುತ್ತಾರೆ. ರೋಹಿತ್‌ ಅವರ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಂಡಾಗ ಬಹುತೇಕ ಅರ್ಥವಾಗುತ್ತದೆ. ಇವನ ತಾಯಿಯ ಬಗ್ಗೆ ಅವರು ಮಾತನಾಡಿಕೊಳ್ಳುವಾಗ ರೋಹಿತ್‌ ಮೈಯೆಲ್ಲಾ ಕಿವಿಯಾಗಿ ಕೇಳಿಸಿಕೊಳ್ಳುತ್ತಾನೆ. ಅಮ್ಮನನ್ನು ಅವರು ಹಳೆಯ ಕಾಲದ ಸಂಪ್ರದಾಯಸ್ಥ ಗೊಡ್ಡು, ಇಂಗ್ಲಿಷ್‌ ಗಂಧಗಾಳಿ ಇಲ್ಲ, ಆಧುನಿಕ ವ್ಯವಹಾರ ಗೊತ್ತಾಗಲ್ಲ ಎಂದೆಲ್ಲ ಆಡಿಕೊಂಡಾಗ ಇವನಿಗೆ ಕೆಟ್ಟ ಕೋಪ ಬರುತ್ತದೆ.

ಯಾವಾಗ ಅಮ್ಮ ಮನೆಗೆ ಬರುವುದು, ಯಾವಾಗ ತಾನು ಅಮ್ಮನಿಗೆ ಈ ಆಂಟಿಯ ಬಗ್ಗೆ ವಿವರ ತಿಳಿಸುವುದು ಎಂದೆಲ್ಲ ಯೋಚಿಸುತ್ತಾನೆ. ಸದಾ ಆಕೆ ತನ್ನನ್ನು ಬಹಳ ಪ್ರೀತಿಸುವವಳಂತೆ ನಟಿಸುತ್ತಾಳೆ, ಆದರೆ ಅದೆಲ್ಲ ಅಪ್ಪಾಜಿಯನ್ನು ಮೆಚ್ಚಿಸಲಿಕ್ಕೆ ಮಾತ್ರ ಎಂದು ತನಗೆ ಗೊತ್ತಾಗುವುದಿಲ್ಲವೇ? ಅವನಿಗಂತೂ ಆಕೆ ಧರಿಸುವ ಆ ಚಿತ್ರ ವಿಚಿತ್ರ ಡ್ರೆಸ್‌ಗಳು ಒಂದಿಷ್ಟೂ ಇಷ್ಟ ಆಗುವುದಿಲ್ಲ. ಯಾವಾಗ ನೋಡಿದರೂ ಗಂಡಸರಂತೆ ಜೀನ್ಸ್, ಟೀಶರ್ಟ್‌, ಗೌನ್‌, ಮಿನಿ ಮಿಡಿ ಎಂದೆಲ್ಲ ಏನೇನೋ ಡ್ರೆಸ್ಸುಗಳು…. ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತರೆ… ಥೂ ತನಗೆ ಅದೆಲ್ಲ ಇಷ್ಟವೇ ಇಲ್ಲ. ಅಮ್ಮನ ತರಹ ಎಂದೂ ಲಕ್ಷಣವಾಗಿ ಸೀರೆ ಉಟ್ಟುಕೊಳ್ಳುವುದೇ ಇಲ್ಲ. ಅಮ್ಮನ ತರಹ ಈ ಆಂಟಿಗೆ ಉದ್ದದ ಜಡೆಯೂ ಇಲ್ಲ, ಕ್ರಾಫ್‌ ಮಾಡಿಸಿಕೊಂಡು ಗಂಡಸರ ತರಹ ಕಾಣಿಸುತ್ತಾರೆ.

ಹಾಗೆ ನೋಡಿದರೆ ಅಪ್ಪಾಜಿ ಏನೋ ಒಳ್ಳೆಯವರೇ, ಆದರೆ ಕಾರಣವಿಲ್ಲದೆ ಎಲ್ಲರ ಮುಂದೆ ಅಮ್ಮನನ್ನು ಗದರಿಕೊಳ್ಳುತ್ತಾರೆ. ಆದರೆ ಅಮ್ಮನೋ ಜಾಸ್ತಿ ಮಾತನಾಡುವುದೇ ಇಲ್ಲ…. ಸುಮ್ಮನೇ ಇದ್ದುಬಿಡುತ್ತಾರೆ.

ಸ್ಮಿತಾ ಆಂಟಿ ಈ ಆಫೀಸರ್ಸ್‌ ಕಾಲೋನಿಯಲ್ಲಿ ನಮಗಿಂತಲೂ ಮುಂಚಿನಿಂದಲೇ ವಾಸವಾಗಿದ್ದಾರೆ. ಮೊದಲ ಸಲ ತಾವು ಈ ಮನೆಗೆ ಶಿಫ್ಟ್ ಆದ ದಿನ, ರೋಹಿತ್‌ಗೆ ಚೆನ್ನಾಗಿ ನೆನಪಿದೆ. ಈ ಆಂಟಿ ಓಡೋಡಿ ಬಂದು ಪರಿಚಯ ಮಾಡಿಕೊಂಡಿದ್ದರು, ಜೊತೆಗೆ ಅವರ ಮನೆಯ ಆಳು ಎಲ್ಲರಿಗೂ ಕಾಫಿ, ತನಗೆ ಹಾಲು ತಂದುಕೊಟ್ಟಿದ್ದ. ಆಕೆ ಮಾತನಾಡುತ್ತಾ, ತಾನು ಇಲ್ಲೇ ಸರ್ಕಾರಿ ಆಸ್ಪತ್ರೆಯಲ್ಲಿ ಗೈನಕಾಲಜಿಸ್ಟ್ ಎಂದು ಪರಿಚಯಿಸಿಕೊಂಡಿದ್ದರು. ತನ್ನ ಹೆಸರು ಡಾ. ಸ್ಮಿತಾ ಕುಮಾರ್‌, ಯಾವುದೇ ಸಹಾಯ ಬೇಕಿದ್ದರೂ ಸಂಕೋಚಪಡದೆ ತಮ್ಮನ್ನು ಕೇಳಬೇಕೆಂದು ಹೇಳಿದರು.

ರೋಹಿತ್‌ಗೆ ಅಂದು ಏನು ನಡೆಯಿತು ಎಂದು ಇಂದಿಗೂ ಚೆನ್ನಾಗಿ ನೆನಪಿದೆ. ಆಗ ಅಮ್ಮ ಅವನನ್ನು ಕರೆದು, “ರೋಹಿ, ಅತ್ತೆಗೆ ನಮಸ್ಕಾರ ಹೇಳು. ಇವರು ನಿನ್ನ ಉಷಾ ಸೋದರತ್ತೆ ಇದ್ದಾರಲ್ಲ ಭದ್ರಾವತಿಯಲ್ಲಿ ಹಾಗೇ ಹೊಸ ಅತ್ತೆ ಆಗಬೇಕು,” ಎಂದಾಗ ರೋಹಿತ್‌ ನಮಸ್ಕಾರ ಎನ್ನುವುದಕ್ಕೆ ಮೊದಲೇ ಆಕೆ, “ರೋಹಿತ್‌, ಇಲ್ಲ ಇಲ್ಲ…. ಇಂಥ ಸಂಬಂಧಗಳಲ್ಲಿ ನನಗೆ ನಂಬಿಕೆ ಇಲ್ಲ. ನೀನು ಆಂಟಿ ಅಂತ ಹೇಳಪ್ಪ ಸಾಕು,” ಎಂದು ದುರ್ದಾನ ಪಡೆದವರಂತೆ ಅಲ್ಲಿಂದ ಹೊರಟುಬಿಟ್ಟಿದ್ದರು. ಆಕೆ ಅತ್ತ ಹೋಗುತ್ತಲೇ ಇತ್ತ ಅಪ್ಪಾಜಿ ಅಮ್ಮನ ಮೇಲೆ ಹರಿಹಾಯ್ದರು,

“ಮೊದಲ ದಿನವೇ ನೀನು ಎಂಥ ಹಳ್ಳಿ ಗುಗ್ಗು ಅಂತ ತೋರಿಸಿಕೊಡಬೇಕೇ? ಎದುರಿನಲ್ಲಿ ಯಾರಿದ್ದಾರೆ ಅಂತ ನೋಡಿಕೊಂಡಲ್ಲವೇ ಮಾತನಾಡುವುದು… ನೋಡು ಆಕೆಗೆ ಎಷ್ಟು ಬೇಸರವಾಗಿರಬೇಕು….. ಛೀ! ಛೀ!”

ಇದಾದ ಮೇಲೆ ಆಕೆ ಹೊತ್ತುಗೊತ್ತಿಲ್ಲದೆ ನಮ್ಮ ಮನೆಗೆ ದಾಳಿ ಇಡತೊಡಗಿದರು. ಒಂದು ಸಲ ಸಂಜೆ ಮುಳುಗುವ ಹೊತ್ತು…. ಆಕೆ ಬಂದವರೇ ಅಪ್ಪಾಜಿಯ ತೋಳಿಗೆ ತಲೆಯಾನಿಸಿ ಬಿಕ್ಕಿ ಬಿಕ್ಕಿ ಅಳುತ್ತಾ, “ಇವತ್ತು ನಾನು ಬಹಳ ಡಿಸ್ಟರ್ಬ್‌ ಆಗಿದ್ದೇನೆ ಮಿ. ಅಮಿತ್‌…. ಊರಿನಲ್ಲಿ ನನ್ನ ತಂಗಿಗೆ ಆ್ಯಕ್ಸಿಡೆಂಟಾಗಿ ಬಹಳ ರಕ್ತ ಹೋಗಿದೆಯಂತೆ…. ಡಾಕ್ಟರ್‌ ಆಗಿಯೂ ನಾನೇನೂ ಮಾಡಲಾರದವಳಾಗಿದ್ದೇನೆ,” ಎಂದು ಬಹಳ ಹೊತ್ತು ಮಾತನಾಡುತ್ತಾ ನಮ್ಮಲ್ಲಿಯೇ ಉಳಿದರು.

ಅಪ್ಪಾಜಿ ಆಕೆಗೆ ಬಾಯಿ ತುಂಬಾ ಸಮಾಧಾನ ಹೇಳುತ್ತಾ, ಕಣ್ಣೀರು ಒರೆಸಿ, ಸಂತೈಸಿದರು. ಅಮ್ಮನನ್ನು ಕರೆದು, “ಈಕೆ ಇವತ್ತು ಇಲ್ಲಿಯೇ ಉಳಿದುಕೊಳ್ಳಲಿ. ಒಂಟಿಯಾಗಿ ನೋವು ಅನುಭವಿಸುತ್ತಾ ಅಷ್ಟು ದೊಡ್ಡ ಮನೆಯಲ್ಲಿರುವುದು ಬೇಡ. ನಮ್ಮ ಹಾಲ್‌ನಲ್ಲಿ ಇವರಿಗೆ ಮಲಗುವ ವ್ಯವಸ್ಥೆ ಮಾಡು,” ಎಂದರು.

ಅಮ್ಮ ಏನೂ ಯೋಚಿಸದೆ, ಹಾಲ್‌ನಲ್ಲಿ ಒಂದು ಸಿಂಗಲ್ ಕಾಟ್‌ನ್ನು ಆಕೆಗಾಗಿ ಅಣಿಗೊಳಿಸಿದರು. ಈ ರೀತಿ ಸ್ಮಿತಾ ಆಂಟಿ ಆಗಾಗ ನಮ್ಮ ಮನೆಗೆ ಹೊತ್ತಲ್ಲದ ಹೊತ್ತಿನಲ್ಲಿ ಬಂದು ದಾಳಿ ಇಡತೊಡಗಿದರು. ಆಕೆ ಬಂದೊಡನೆ ಅಪ್ಪಾಜಿ ಮುಖದಲ್ಲಿ 200 ವ್ಯಾಟ್‌ ಬಲ್ಬ್ ಉರಿಯುತ್ತಿತ್ತು! ಅವರಿಬ್ಬರೂ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದರು. ಅಮ್ಮ ಬಂದು ಅವರೆದುರು ಕುಳಿತರೆ ಬೇಕೆಂದೇ ಇಂಗ್ಲಿಷ್‌ನಲ್ಲಿ ಅನಗತ್ಯ ಹರಟೆಗೆ ಶುರುಹಚ್ಚಿಕೊಳ್ಳುತ್ತಿದ್ದರು. ತನ್ನನ್ನು ಬೇಕೆಂದೇ ಅವರು ಅಪಮಾನಿಸುತ್ತಿದ್ದಾರೆ ಎಂದು ಗೊತ್ತಿದ್ದರೂ ಅಮ್ಮ ಏನೂ ಹೇಳಲಾಗದ ಅಸಹಾಯಕತೆಯಲ್ಲಿ ಚಡಪಡಿಸುತ್ತಿದ್ದರು. ಅಪ್ಪಾಜಿ ಬೇಕೆಂದೇ ಆಕೆ ಮುಂದೆ ಅಮ್ಮನನ್ನು ಗದರುತ್ತಿದ್ದರು.

ಅಮ್ಮ ಇಂಥ ಮಾನಸಿಕ ಹಿಂಸೆಯನ್ನು ಆ ಹಸುಗೂಸಿನೊಂದಿಗೆ ಹಂಚಿಕೊಳ್ಳುವುದಾದರೂ ಹೇಗೆ? ಆದರೆ ರೋಹಿತ್‌ಗೆ ಅಮ್ಮ ದಿನೇದಿನೇ ಕೊರಗುತ್ತಿದ್ದಾರೆ ಎಂಬ ಸೂಕ್ಷ್ಮ ಅರಿವಾಗತೊಡಗಿತು. ನಾನು ಎಲ್ಲರೆದುರು 4ನೇ ಕ್ಲಾಸ್‌ ವಿದ್ಯಾರ್ಥಿ, ಚಿಕ್ಕವನಿರಬಹುದು. ಆದರೆ ಆ ಆಂಟಿ ಬರುವುದರಿಂದ ಅಮ್ಮನಿಗಾಗುತ್ತಿರುವ ಹಿಂಸೆ ಬಗ್ಗೆ ನನಗೆ ಅರಿವಾಗದೇ?

ಇತ್ತ ತಾತನಿಗೆ ಹುಷಾರಿಲ್ಲವೆಂದು ಅಮ್ಮ ಮೈಸೂರಿಗೆ ಹೋಗಿದ್ದೇ ಬಂತು, ಈ ಆಂಟಿಗೆ 2 ಜೊತೆ ರೆಕ್ಕೆ ಮೊಳೆತಂತೆ ಹಾರಿಹಾರಿ ನಮ್ಮ ಮನೆ ಕಡೆ ನುಗ್ಗುತ್ತಿರುತ್ತಾರೆ. ಸದಾ ಅಪ್ಪಾಜಿ ಜೊತೆ ಹರಟೆ, ನಗು. ಅಪ್ಪಾಜಿ ಮುಂದೆ ಬೇಕೆಂದೇ ತನ್ನನ್ನು ಅತಿಯಾಗಿ ಮುದ್ದಿಸುವುದು, ಎತ್ತಾಡುವುದು ಇತ್ಯಾದಿ ಮಾಡುತ್ತಾರೆ. ರಾಮು ಮೂಲಕ ತನಗೇನಿಷ್ಟ ಎಂದು ತಿಳಿದುಕೊಂಡು ಆ ರೀತಿ ತನ್ನನ್ನು ಪೂಸಿ ಹೊಡೆಯಲು ನೋಡುತ್ತಾರೆ. ಆಗ ಎಂದಿಗಿಂತ ಅವರ ಮೇಲೆ ಹೆಚ್ಚು ಕೋಪ ಉಕ್ಕುತ್ತದೆ.

ರೋಹಿತ್‌ ಈಗ ತನ್ನನ್ನು ತಾನು ದೊಡ್ಡವನಾಗಿದ್ದೀನಿ ಎಂಬಂತೆ ಗಂಭೀರವಾಗಿ ನಡೆದುಕೊಳ್ಳುತ್ತಾನೆ. ಮೊದಲ ಸಲ ಅವನಿಗೆ ಅನಿಸಿತು, `ಈ ಬಾರಿ ತಾನು ಅಮ್ಮನೊಂದಿಗೆ ಮೈಸೂರಿಗೆ ಹೋಗದೆ ಇದ್ದದ್ದೇ ಒಳ್ಳೆಯದಾಯಿತು. ಯಾರೂ ಇಲ್ಲದೆ ಅಪ್ಪಾಜಿ ಒಬ್ಬರೇ ಆಗಿದ್ದರೆ… ಯಾಕೋ, ಯಾವುದೂ ಸರಿ ಇಲ್ಲ ಅನಿಸುತ್ತೆ. ಅಪ್ಪಾಜಿ ಹೇಗೋ ಏನೋ…. ಈ ಸ್ಮಿತಾ ಆಂಟಿ ಏಕೋ ಸರಿಯಾಗಿ ನಡೆದುಕೊಳ್ಳುತ್ತಿಲ್ಲ, ಹಿಂಸೆ ಎನಿಸುತ್ತದೆ.’

ಹೀಗೆ ಒಂದು ಸಂಜೆ ಸ್ಮಿತಾ ಆಂಟಿ ಬಂದವರೇ ಅಪ್ಪಾಜಿಗೆ ಶುಭಾಶಯ ಕೋರಿದರು. ಅಂದು ಅವರ ಬರ್ತ್‌ಡೇ ಎಂದು ಗೊತ್ತಿದ್ದ ರೋಹಿತ್‌, ಬೆಳಗ್ಗೆಯೇ ಅವರಿಗೆ ವಿಶ್‌ ಮಾಡಿ, ತಾನೇ ಕ್ರೆಯಾನ್ಸ್ ನಿಂದ ತಯಾರಿಸಿದ್ದ ಚೆಂದದ ಗ್ರೀಟಿಂಗ್‌ ಕಾರ್ಡ್‌ ಕೊಟ್ಟಿದ್ದ. ಅಮ್ಮ ಪ್ರತಿ ವರ್ಷ ಸಂಜೆ ದೇವಾಲಯಕ್ಕೆ ಕರೆದೊಯ್ದು ರಾತ್ರಿಗೆ ಏನಾದರೂ ಸಿಹಿ ಅಡುಗೆ ಮಾಡುತ್ತಿದ್ದರು. ಈ ಬಾರಿ ಅಪ್ಪಾಜಿ ಆ ಕುರಿತು ಏನೂ ಹೇಳದೆ, ತನಗೊಂದು ಬಾಕ್ಸ್ ಪೇಡ ಕೊಡಿಸಿದ್ದರಷ್ಟೆ.

ಆದರೆ…. ಇದೇನಿದು ಈ ಆಂಟಿ…. ಒಳ್ಳೆ ಟಿಪ್‌ ಟಾಪಾಗಿ ಡ್ರೆಸ್‌ ಮಾಡಿಕೊಂಡು ಹೊರಗೆ ಹೊರಡುವಂತೆ ಬಂದಿದ್ದಾರೆ. “ನಡೆಯಿರಿ ಮಿ. ಅಮಿತ್‌, ನಾವಿಂದು ನಿಮ್ಮ ಬರ್ತ್‌ಡೇ ಸೆಲಬ್ರೇಟ್‌ ಮಾಡೋಣ,” ಎನ್ನುತ್ತಾ ಅವರ ಕೈಗೆ ಒಂದು ದೊಡ್ಡ ಉಡುಗೊರೆಯ ಬಾಕ್ಸ್ ಕೊಟ್ಟರು. ಜೊತೆಗೆ ಇನ್ನೊಂದು ಚಿಕ್ಕ ಗಿಫ್ಟ್ ಕೂಡ ಇತ್ತು. ಅಪ್ಪಾಜಿ ಆ ಚಿಕ್ಕ ಬಾಕ್ಸ್ ಓಪನ್‌ ಮಾಡಿದಾಗ ಅದರಲ್ಲಿ ಆ್ಯಪಲ್ ಐಫೋನ್‌ ಇತ್ತು! ಅಪ್ಪಾಜಿ ಬಹಳ ದಿನಗಳಿಂದ ಅದನ್ನು ಕೊಳ್ಳಬೇಕೆಂದಿದ್ದರು. ಮಾತನಾಡುವಾಗ ಎಲ್ಲೋ ಆಕೆ ಬಳಿ ಬಾಯಿತಪ್ಪಿ ಹೇಳಿರಬೇಕು, ಇದೇ ಅವಕಾಶ ಎಂದುಕೊಂಡು ಆಕೆ ಗಿಫ್ಟ್ ಮಾಡಿದ್ದರು.

ಅಪ್ಪಾಜಿ ಆಕೆಗೆ ಬಾಯಿ ತುಂಬಾ ಧನ್ಯವಾದ ಹೇಳಿದರು, “ಬನ್ನಿ, ಇವತ್ತು ಸಂಜೆ ನನ್ನ ಕಡೆಯಿಂದ ಅಶೋಕ ಹೋಟೆಲ್‌ನಲ್ಲಿ ಸ್ಪೆಷಲ್ ಡಿನ್ನರ್‌,” ಎಂದರು ಆಕೆ.

“ಬೇಡಿ, ಇವತ್ತು ಯಾರೋ ಕ್ಲೈಂಟ್ಸ್ ಬರುತ್ತಾರೆ…” ಎಂದೇನೋ ಅಪ್ಪಾಜಿ ಸಬೂಬು ಹೇಳಲೆತ್ನಿಸಿದರೂ ಆಕೆ ಬಡಪಟ್ಟಿಗೆ ಒಪ್ಪಲಿಲ್ಲ. ಕೊನೆಗೆ ಬಲವಂತವಾಗಿ, “ನಡಿ ರೋಹಿ, ಬೇಗ ಡ್ರೆಸ್‌ ಮಾಡಿಕೋ. ನಾವೀಗ ಹೊರಗಡೆ ಹೊರಟಿದ್ದೇವೆ. ಮೊದಲು ಜಯನಗರಕ್ಕೆ ಹೋಗಿ ಶಾಪಿಂಗ್‌ ಮುಗಿಸಿ, ಹಾಗೇ ಊಟ ಮಾಡಿಕೊಂಡು ಬರೋಣ. ರಾಮು, ರಾತ್ರಿ ನಾವು ಊಟಕ್ಕೆ ಇರಲ್ಲ,” ಎಂದು ಸೂಚಿಸಿ ಅಪ್ಪಾಜಿ ತಯಾರಾಗತೊಡಗಿದರು.

ತಾನು ಬರುವುದೇ ಇಲ್ಲ ಎಂದು ರೋಹಿತ್‌ಗೆ ಹೇಳೋಣ ಎನಿಸಿತು. ಆದರೆ…. ತಾನು ಶಿವಪೂಜೆ ಮಧ್ಯೆ ಕರಡಿ ಆಗದಿದ್ದರೆ, ಅಮ್ಮನಿಗೆ ಅಲ್ಲೇನು ನಡೆಯಿತು ಎಂದು ಹೇಳುವುದಾದರೂ ಹೇಗೆ? ರೋಹಿತ್‌ ತಾನೂ ಸಿದ್ಧನಾಗಿ ಅವರ ಜೊತೆ ಹೊರಟ.

ಮನೆಯಾಕೆ….. ಅಡುಗೆಯಾಕೆ…..!

ದಾರಿ ಉದ್ದಕ್ಕೂ ಕಾರಿನಲ್ಲಿ ಅವರಿಬ್ಬರೂ ಅಮ್ಮನ ಕುಂದುಕೊರತೆಗಳ ಬಗ್ಗೆಯೇ ಮಾತನಾಡುತ್ತಿದ್ದರು. ಅಪ್ಪಾಜಿ ಹೇಳುತ್ತಿದ್ದರು, “ನನ್ನ ಹೆಂಡತಿ ಶೋಭಾ ವಿದ್ಯಾವಂತೆ ನಿಜ, ಆದರೆ ಸದಾ ಮನೆ ಮನೆ ಅಂತ ಅದಕ್ಕೆ ಅಂಟಿಕೊಂಡಿರ್ತಾಳೆ. ಸೋಶಿಯಲ್ ಮೂಮೆಂಟ್‌, ಕ್ಲಬ್ಬು, ಪಬ್ಬು ಒಂದೂ ಇಲ್ಲ. ಯಾವ ಮಾಡ್‌ ವಿಷಯದಲ್ಲೂ ಆಸಕ್ತಿ ಇಲ್ಲ. ಫೇಸ್‌ಬುಕ್‌ ಅಕೌಂಟ್‌ ಬೇಡ ಅಂತಾಳೆ. ಮಗನನ್ನೂ ಹಾಗೆ ಬೆಳೆಸಿ ಮುಷಂಡಿ ಮಾಡಿಡ್ತಾಳೆ.

“ಲೇಡೀಸ್‌ ಕ್ಲಬ್‌ ಮೆಂಬರ್‌ ಆಗು ಅಂದ್ರೆ ಕೇಳಲ್ಲ. ಕೂಪಮಂಡೂಕದ ತರಹ ತಾನಾಯಿತು, ತನ್ನ ಕೆಲಸವಾಯಿತು ಅಂತ ಸುಮ್ಮನಿರ್ತಾಳೆ. ಏನಾದ್ರೂ ವಿವರಿಸಿ ಹೇಳಿದರೆ ಮುಖ ದುಮ್ಮಿಸಿಕೊಂಡು ಕೂತುಬಿಡ್ತಾಳೆ.”

ಅಪ್ಪಾಜಿ ಕಡೆ ನೋಡಿ ಆಕೆ ಮರುಕದಿಂದ, “ರಿಯಲಿ, ದಿಸ್‌ ಈಸ್‌ ಏ ಗ್ರೇಟ್‌ ಪ್ರಾಬ್ಲಂ ಫಾರ್‌ ಯೂ. ನಿಮಗಿರುವುದು ಒಬ್ಬನೇ ಮಗ. ಅವನನ್ನೂ ತನ್ನ ಹಾಗೇ ಪೆದ್ದು ಮಾಡಿ ಕೂರಿಸಿದರೆ ಏನು ಗತಿ? ಅಂಥ ಹೆಂಡತಿಯನ್ನು ಅದು ಹೇಗೆ ಸೈರಿಸಿಕೊಂಡಿದೀರಪ್ಪ….” ನಂತರ ನನ್ನ ಕಡೆ ತಿರುಗಿ, “ಹಾಯ್‌ ಡಿಯರ್‌…. ಯಾವಾಗ ನಿನ್ನ ಹಾಲು ಹಲ್ಲು ಬಿದ್ದು ಹಸುಳೆಯಿಂದ ಹುಡುಗನಾಗುವುದು?” ಎಂದಾಗ ನನಗೆ ಏನು ಜವಾಬು ಕೊಡುವುದೋ ತಿಳಿಯಲಿಲ್ಲ.“

ಇನ್ನು ಮುಂದೆ ಯಾವುದಕ್ಕೂ ಚಿಂತಿಸಬೇಡಿ ಮಿ. ಅಮಿತ್‌. ರೋಹಿತ್‌ನ ಜವಾಬ್ದಾರಿ ನನಗಿರಲಿ. ಅವನಿಗೆ ಬೇಕಾದ ಎಲ್ಲಾ ಎಟಿಕೇಟ್ಸ್, ಮ್ಯಾನರಿಸಂ ನಾನು ಕಲಿಸಿ ಅಪ್‌ಟುಡೇಟ್‌ ಮಾಡ್ತೀನಿ,” ಎಂದರು.

ರೋಹಿತ್‌ನನ್ನು ಖುಷಿಯಾಗಿಟ್ಟುಕೊಳ್ಳಬೇಕೆಂದು ಅವನಿಗೆ ಐಸ್‌ಕ್ರೀಂ ಕೊಡಿಸಿ, ಶಾಪಿಂಗ್‌ನಲ್ಲಿ ಬೇಕಾದ್ದು ಕೊಡಿಸಿದರು. ಆದರೆ ತನ್ನ ತಾಯಿಯ ಗೈರುಹಾಜರಿಯಲ್ಲಿ ಇವರಿಬ್ಬರೂ ಮಾತನಾಡಿಕೊಳ್ಳುವ ವಿಷಯ ರೋಹಿತ್‌ನನ್ನು ಇರಿಯುತ್ತಿತ್ತು. ಕೊನೆಗೆ ರಾತ್ರಿ 8 ಗಂಟೆ ಹೊತ್ತಿಗೆ ಹೋಟೆಲ್ ಅಶೋಕ ತಲುಪಿದರು. ಡಾ. ಸ್ಮಿತಾ ಒಳಗಿನ ಫ್ಯಾಮಿಲಿ ರೂಂ ಬುಕ್‌ ಮಾಡಿಸಿದ್ದರು. ಮೂವರೂ ಒಳಗೆ ಹೋದಾಗ ರೋಹಿತ್‌ಗೆ ಯಾಕೋ ಮೂಡ್‌ಔಟ್‌ ಆಗಿ ಹಸಿವೆ ಇಂಗಿ ಹೋದಂತೆನಿಸಿತು. ಹಿಂದೆ ಒಮ್ಮೆ ಅಮ್ಮ ಅಪ್ಪನ ಜೊತೆ ಇಲ್ಲಿಗೆ ಬಂದಿದ್ದಾಗ ಎಷ್ಟು ಸಂಭ್ರಮದಿಂದ ಎಲ್ಲವನ್ನೂ ಸವಿದಿದ್ದ! ಅದೆಲ್ಲ ಅವನಿಗೆ ನೆನಪಾಯಿತು.

ಸ್ಮಿತಾ  ಆಂಟಿ ಅಪ್ಪಾಜಿಗೆ, ತನಗೆ ಬೇಕಾದುದನ್ನು ಆರ್ಡರ್‌ ನೀಡಿ ತರಿಸಿದರು.

ರೋಹಿತ್‌ನನ್ನು ಕಂಡು ವೇಟರ್‌ ಪ್ರಶ್ನಿಸಿದ, “ಲಿಟಲ್ ಮಾಸ್ಟರ್‌, ನಿಮಗಾಗಿ ನಾನು ಯಾವ ಡಿಶ್‌ ತರಲಿ? ಇಲ್ಲಿ ನಿಮ್ಮ ಇಷ್ಟದ ಎಲ್ಲವೂ ಸಿಗುತ್ತದೆ. ನಿಮಗೆ ಬೇಕಾದ ಪಾಸ್ತಾ, ಫ್ರೆಂಚ್‌ ಫ್ರೈ, ಚೈನೀಸ್‌ ನೂಡಲ್ಸ್, ಬರ್ಗರ್‌…. ಏನು ಬೇಕು ಹೇಳಿ. ಅಮ್ಮ ಅಪ್ಪ ಆರ್ಡರ್‌ ಮಾಡಿದ್ದನ್ನೇ ನೀವು ತಿಂತೀರಾ?”

ಅಷ್ಟು ಹೊತ್ತೂ ಆ ಮುಗ್ಧ ಮನದಲ್ಲಿ ನಡೆಯುತ್ತಿದ್ದ ತಳಮಳ ಜ್ವಾಲಾಮುಖಿಯಾಗಿ ಸಿಡಿದಿತ್ತು, “ರೀ, ಸುಮ್ನೆ ಹೋಗ್ರಿ…. ಇವರು ನನ್ನ ಅಮ್ಮ ಅಲ್ಲ! ಇಲ್ಲಿ ನನಗೇನೂ ಇಷ್ಟಾನೂ ಆಗ್ತಿಲ್ಲ!”

ಅಮಿತ್‌-ಸ್ಮಿತಾ ಇಬ್ಬರನ್ನೂ ಆ ಮುಗ್ಧ ಮಗುವಿನ ನುಡಿಗಳು ಇಕ್ಕಟ್ಟಿಗೆ ಸಿಲುಕಿಸಿದವು. ಅವರು ಒಳಗಿನ ಫ್ಯಾಮಿಲಿ ರೂಮ್ ನಲ್ಲಿ ಕುಳಿತಿದ್ದರಿಂದ ಬಚಾವ್. ಇಲ್ಲದಿದ್ದರೆ ಇಡೀ ಹೋಟೆಲಿನಲ್ಲಿದ್ದ ಎಲ್ಲರಿಗೂ ಈ ಅವಾಂತರ ಗೊತ್ತಾಗುತ್ತಿತ್ತು. ಅಮಿತ್‌ಗೆ ಬಂದ ಕೋಪದಲ್ಲಿ ಮಗನಿಗೊಂದು ಬಾರಿಸಿ ಸುಮ್ಮನೆ ಕೂರುವಂತೆ ಹೇಳಿದ.

ರೋಹಿತ್‌ ಅಂದು ತಂದೆಯ ಆ ರೂಪ ನೋಡಿ ಅತಿ ಗಂಭೀರನಾದ. ಮಾತು ಮಾತಿಗೂ ಅಳುವುದನ್ನು ಕಲಿತಿದ್ದ ಆ ಮಗು ಅಂದು ಅತಿ ಗಾಂಭೀರ್ಯ ತೋರಿಸಿತು. ಕಂಗಳಲ್ಲಿ ಒಂದು ತೊಟ್ಟು ನೀರಿಲ್ಲ. ಏನೂ ಹೇಳಲೂ ಇಲ್ಲ. ಸುಮ್ಮನೆ ತಲೆ ತಗ್ಗಿಸಿ ಕುಳಿತುಬಿಟ್ಟ.

“ಓಹ್‌…. ಮಿ. ಅಮಿತ್‌! ಇದೇನು ಮಾಡಿದಿರಿ? ಪಾಪ ಮಗು, ಅದಕ್ಕೇನು ಗೊತ್ತಾಗುತ್ತೆ? ಹಾಗಾ ಅದನ್ನು ಟ್ಯಾಕಲ್ ಮಾಡುವುದು? ರೋಹಿಯ ಮೂಡ್‌ ಹಾಳು ಮಾಡಿದಿರಿ,” ಎನ್ನುತ್ತಾ ಕೃತಕ ಸಾಂತ್ವನ ತುಂಬಲು ರೋಹಿತ್‌ನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳಲು ಯತ್ನಿಸಿದರು ಡಾಕ್ಟರ್‌ ಆಂಟಿ.

ರೋಹಿತ್‌ ಆಕೆಯ ಕೈ ತಳ್ಳುತ್ತಾ, “ಆಂಟಿ ಪ್ಲೀಸ್‌…. ಐ ಆ್ಯಮ್ ಓ.ಕೆ. ಸಾರಿ ಟೂ ಮೇಕ್‌ ಯೂ ಡಿಸ್ಟರ್ಬ್ ವಿತ್‌ ಮೈ ವರ್ಡ್ಸ್. ಐ ನೋ…. ಡ್ಯಾಡ್‌ ನೆವರ್‌ ಲೈಕ್ಸ್ ದಿಸ್‌… ಸಾರಿ ಡ್ಯಾಡ್‌….” ಎನ್ನುತ್ತಾ ದೊಡ್ಡ ಹುಡುಗನಂತೆ ಗಂಭೀರವಾಗಿ ತನ್ನ ತಟ್ಟೆಗೆ ಪಲಾವ್ ಬಡಿಸಿಕೊಂಡು ಮೌನವಾಗಿ ಅದನ್ನು ತಿನ್ನತೊಡಗಿದ.

ಅಮಿತ್‌-ಸ್ಮಿತಾ ಅವನನ್ನೇ ನೋಡುತ್ತಾ ಸುಮ್ಮನೆ ಇರಬೇಕಾಯಿತು. ಅವರೂ ಸಹ ಏನೂ ಮಾತನಾಡದೆ ತಮ್ಮ ತಟ್ಟೆಗಳಿಗೆ ಬೇಕಾದ್ದನ್ನು ಬಡಿಸಿಕೊಂಡರು. ಆ ಮಗುವಿನ ಮುಂದೆ ಮಾತನಾಡಲು ಈ ದೊಡ್ಡವರಿಗೆ ಬಾಯಿಯೇ ಬರಲಿಲ್ಲ. ಮಗನ ಮನದಲ್ಲಿ ಏನಿದೆ ಅಂತ ತಂದೆಗೆ ಸ್ಪಷ್ಟ ಗೊತ್ತಾಯಿತು. ತನಗೆ ಪ್ರತ್ಯೇಕವಾಗಿ ತಿಳಿಸಲೆಂದೇ ರೋಹಿತ್‌ ಹಾಗೆ ಮಾಡಿದನೆಂದು ಆ ಮಗನ ಅಪ್ಪ ಸ್ಪಷ್ಟವಾಗಿ ಅರ್ಥ ಮಾಡಿಕೊಂಡ.

ಅವರು ರಾತ್ರಿ 10 ಘಂಟೆ ಹೊತ್ತಿಗೆ ಮನೆ ತಲುಪಿದಾಗ, ಮನೆಯ ಕಿಟಕಿ ಬಾಗಿಲು ತೆರೆದಿತ್ತು, ದೀಪ ಬೆಳಗಿತ್ತು! ರೋಹಿತ್‌ಗಂತೂ ತನ್ನ ಸಂತೋಷ ಮರಳಿ ಬಂದಂತೆ ಆಯ್ತು, “ಓ…. ಅಮ್ಮ ಬಂದಿರಬೇಕು!” ಎನ್ನುವ ಆ ಮಾತಲ್ಲಿ ಅದೆಷ್ಟು ಸಂಭ್ರಮ ಅಡಗಿತ್ತೋ!

“ಅಪ್ಪಾಜಿ ಬರ್ತ್‌ಡೇ ದಿನ ಅಮ್ಮ ಬಂದೇ ಬರ್ತಾರೆ ಅಂತ ನನಗೆ ಅನಿಸಿತ್ತು,” ಎನ್ನುತ್ತಾ ಕಾರು ನಿಂತ ತಕ್ಷಣ ರೋಹಿತ್‌ ಕ್ಷಣ ಮಾತ್ರ ವ್ಯರ್ಥ ಮಾಡದೆ ಅಮ್ಮನ ಬಳಿ ಓಡಿದ.

ಅಮಿತ್‌-ಸ್ಮಿತಾ ಮಾತಿಲ್ಲದೆ ಕಾರಿನಲ್ಲೇ ಕುಳಿತಿದ್ದರು, “ಸಾರಿ ಡಾ. ಸ್ಮಿತಾ…. ನನ್ನ ಮಗನ ಪರವಾಗಿ ನಾನು ಕ್ಷಮೆ ಕೇಳ್ತೀನಿ,” ಎಂದಾಗ ಆಕೆ, “ಬಿಡಿ ಮಿ. ಅಮಿತ್‌…. ಇದರಲ್ಲಿ ಕ್ಷಮೆ ಕೇಳುವಂಥದ್ದು ಏನಿದೆ? ಡೈವೋರ್ಸ್‌ ಆಗಿರದೇ ಇದ್ದಿದ್ದರೆ ನನಗೂ ಇಂಥ ವಯಸ್ಸಿನ ಮಗು ಇರುತ್ತಿತ್ತು….”

ಮೊದಲ ಬಾರಿ ಅಮಿತ್‌ಗೆ ಶಾಕ್‌ ತಗುಲಿತ್ತು!

“ನೀನು ಯಾವಾಗ ಬಂದೆ ಅಮ್ಮಾ?” ಓಡಿ ಬಂದು ಅಮ್ಮನ ಮಡಿಲಿಗೆ ಅಪ್ಪಿಕೊಂಡು ಮಗ ಕೇಳಿದ.

“ನಾನು ಸಂಜೆ ಬಂದೆ ಕಣಪ್ಪ…. ನೀವು ಆ ಕಡೆ ಹೊರಟಿರಿ…. ನಾನು ಈ ಕಡೆ ಬಂದೆ…. ರಾಮು ಹೇಳಿದ….”

“ಅಮ್ಮ, ಇವತ್ತು ನೀನು ಇದ್ದಿದ್ದರೆ ಎಷ್ಟು ಮಜಾ ಇರ್ತಿತ್ತು ಗೊತ್ತಾ? ನಾನು ಸಂಜೆ ಪೂರ್ತಿ ನಿನ್ನ ಬಗ್ಗೆಯೇ ಯೋಚಿಸುತ್ತಿದ್ದೆ. ಕಳೆದ ವರ್ಷ ಈ ದಿನ ನಾವೆಷ್ಟು ಎಂಜಾಯ್‌ ಮಾಡಿದ್ದೆವು ಅಲ್ಲವೇ….? ಅದೇ ಜಾಗಕ್ಕೆ ಇವತ್ತು ಹೋಗಿದ್ದೆವು. ಆದರೆ ನೀನು ಇರಲಿಲ್ಲವಲ್ಲ ಅನ್ನುವುದೇ….” ಎಂದು ಹೇಳುವಷ್ಟರಲ್ಲಿ ರೋಹಿತ್‌ ಸುಮ್ಮನಾದ.

ಅಷ್ಟರಲ್ಲಿ ಏನೋ ನೆನಪಾದವನಂತೆ ರೋಹಿತ್‌, “ಅಮ್ಮಾ… ನೀನು ಮೈಸೂರಿಗೆ ಹೋಗಿದ್ದಾಗ ನಾನು ಇಲ್ಲಿ ಎಷ್ಟೊಂದು ಡ್ರಾಯಿಂಗ್‌ ಮಾಡಿದ್ದೀನಿ ಗೊತ್ತಾ? ನೀನು ಒಂದ್ಸಲ ನೋಡಿದ್ರೆ ನೋಡ್ತಾನೇ ಇದ್ದುಬಿಡ್ತೀಯಾ….” ಎನ್ನುತ್ತಾ ತಾನು ಬಿಡಿಸಿದ ಚಿತ್ರಗಳನ್ನು ಸಂಭ್ರಮದಿಂದ ಅಮ್ಮನಿಗೆ ತೋರಿಸತೊಡಗಿದ ರೋಹಿತ್‌.

ಶೋಭಾ ಮಗನ ಚಿತ್ರಗಳನ್ನು ಕುತೂಹಲದಿಂದ ಗಮನಿಸಿದಳು. ನಂತರ ಎಲ್ಲಾ ಚಿತ್ರಗಳ ಕೆಳಗೂ ಅದಕ್ಕೆ ಸೂಕ್ತವಾಗಿ ಹೊಂದುವಂತೆ 4-4 ಸಾಲುಗಳ ಅಡಿಬರಹ (ಕ್ಯಾಪ್ಶನ್‌) ಸೇರಿಸಿದಳು. ರೋಹಿತ್‌ಗಂತೂ ಅಮ್ಮ ತನ್ನ ಮನಸ್ಸಿನ ಭಾವನೆಗಳನ್ನೇ ಬಿಡಿಸಿದ್ದಾಳೆ ಅನಿಸಿತು.

“ಓಹ್‌…. ವಂಡರ್‌ಫುಲ್ ಮೈ ಡಿಯರ್‌ ಮಾಮ್!” ಬಿಲ್‌ಕುಲ್‌ ತನ್ನ ತಂದೆಯ ಶೈಲಿಯಲ್ಲೇ ನುಡಿದ ರೋಹಿತ್‌. ನಂತರ ಏನನ್ನೋ ನೆನಪಿಸಿಕೊಂಡವನಂತೆ, “ಅಮ್ಮಾ…. ನೀನು ಊಟ ಮಾಡಿದೆ ತಾನೇ? ನಾನಂತೂ ಹೊರಗಡೆ ಚೆನ್ನಾಗಿ ತಿಂದುಕೊಂಡು ಬಂದಿದ್ದೇನೆ. ಇರು, ರಾಮು ಏನಾದರೂ ಮಾಡಿದ್ದಾನಾ ನೋಡ್ತೀನಿ…” ಎಂದು ಒಳಗೆ ಓಡಿದ.

“ಬೇಡಪ್ಪ ಮಗು, ನಂಗೆ ಹಸಿವಿಲ್ಲ,” ಶೋಭಾ ಹೇಳಿದಳು, “ನಿಮ್ಮ ತಾತನ ಆರೋಗ್ಯ ಇನ್ನೂ ಪೂರ್ತಿ ಸರಿಹೋಗಿಲ್ಲ. ನಾನು ಇನ್ನೂ ಅಲ್ಲೇ ಇರಬೇಕಿತ್ತು. ಆದರೆ ನನಗೆ ನಿನ್ನದೇ ಯೋಚನೆ ಆಗಿತ್ತು, ಅದಕ್ಕೆ ಬೇಗ ಹೊರಟು ಬಂದೆ.”

“ಅಮ್ಮಾ, ಇನ್ನು ನೀನು ನನ್ನ ಬಗ್ಗೆ ಚಿಂತಿಸುವುದು ಬೇಡ. ನಾನೀಗ ತುಂಬಾ ದೊಡ್ಡವನಾಗಿದ್ದೀನಿ. ಒಬ್ಬನೇ ಎಲ್ಲಾ ಮಾಡಿಕೊಳ್ತೀನಿ, ಅಪ್ಪಾಜಿಯನ್ನೂ ನೋಡಿಕೊಳ್ತೀನಿ,” ಎಂದು ಕಿಲಕಿಲ ನಗತೊಡಗಿದ. ಅದು ಗಂಡ ಅಮಿತನ ನಗೆಯಂತೆಯೇ ಇದೆ ಎನಿಸಿತವಳಿಗೆ.

“ರಾಮು, ಅಮ್ಮಂಗೆ ಅರ್ಜೆಂಟಾಗಿ ಏನಾದರು ಮಾಡಿಕೊಡು!” ರೋಹಿತ್‌ ಸಾಹೇಬರು ರಾಮುವಿಗೆ ಆರ್ಡರ್‌ ಮಾಡಿದರು.

“ಆಗ್ಲಿ ಸಾರ್‌…. ಬೇಗ ತರ್ತೀನಿ,” ರಾಮು ನಸುನಗುತ್ತಾ ಹೇಳಿದಾಗ, ರೋಹಿತ್‌ ಅಮ್ಮನ ಕಡೆ ತಿರುಗಿ, `ನೋಡಿದ್ಯಾಮ್ಮ…. ಹೇಗೆ ನಿಭಾಯಿಸ್ತೀನಿ,’ ಎಂಬಂತೆ ನಗು ಬೀರಿದ.

ಶೋಭಾಳಿಗಂತೂ ಮಗ ಬಹಳ ಬೆಳೆದುಬಿಟ್ಟಿದ್ದಾನೆ ಎನಿಸಿತು. ಅಂದು ಬಹಳ ದಿನಗಳ ನಂತರ ರೋಹಿತ್‌ ಅಮ್ಮನ ಪಕ್ಕ ನಿಶ್ಚಿಂತೆಯಿಂದ ಮಲಗಿದ.

ಅವನಿಗಂತೂ ಅಮ್ಮನ ಬಳಿ ಮಾತನಾಡುವುದು ಬೇಕಾದಷ್ಟಿತ್ತು, ಹೇಳುವುದಿತ್ತು, ಕೇಳುವುದಿತ್ತು…. ತನಗೆ ಗೊತ್ತಿರುವ ಒಂದೊಂದು ವಿಷಯವನ್ನೂ ಅಮ್ಮನ ಬಳಿ ಹಂಚಿಕೊಳ್ಳುವವರೆಗೂ ಅವನಿಗೆ ನೆಮ್ಮದಿ ಇಲ್ಲ. ಇವತ್ತಂತೂ ಅಪ್ಪಾಜಿ ಆ ಸ್ಮಿತಾ ಆಂಟಿ ಎದುರೇ ಹೇಗೆ ಹೊಡೆದುಬಿಟ್ಟರು… ತನಗೆ ಹೊಡೆತ ಬಿತ್ತು ಎಂದು ಅಮ್ಮನಿಗೆ ಹೇಳಿದರೆ ಆಕೆ ತನಗೆ ಬೋಧನೆ ಮಾಡುತ್ತಾಳೆ. ಅಮ್ಮ ಇಷ್ಟೊಂದು ಮೃದು ಆಗಿರುವುದೇಕೆ? ಅಪ್ಪಾಜಿ ಕಂಡರೆ ಏಕೆ ಭಯಪಡಬೇಕು?

ಹೀಗೆ ತನ್ನ ಗೊಂದಲಗಳಲ್ಲಿ ಮುಳುಗಿದ್ದ ರೋಹಿತ್‌ ಅಮ್ಮನನ್ನು ಕೇಳಿದ, “ಅಮ್ಮ ನೀನೇಕೆ ಎಲ್ಲರಂತೆ ಇಂಗ್ಲಿಷ್‌ನಲ್ಲಿ ಮಾತನಾಡಲ್ಲ…. ಅಪ್ಪಾಜಿ, ಡಾ. ಸ್ಮಿತಾ ಆಂಟಿ ಆಡ್ತಾರಲ್ಲ ಹಾಗೆ… ಅಪ್ಪಾಜಿಗಂತೂ ಅದಕ್ಕೆ ಅವರನ್ನು ಕಂಡರೆ ಬಹಳ ಇಷ್ಟ…..”

“ಅದು…. ಮೊದಲಿನಿಂದಲೂ ನಾನು ಕನ್ನಡ ಮೀಡಿಯಂನಲ್ಲೇ ಓದಿದ್ದು….. ಪಿ.ಯು.ಸಿ ನಂತರ ಡಿಗ್ರಿ ಮುಂದುವರಿಸಲಿಲ್ಲ…. ಇಂಗ್ಲಿಷ್‌ ಸರಾಗವಾಗಿ ಬಳಕೆಯಿಲ್ಲ, ಅರ್ಥ ಮಾಡಿಕೊಳ್ಳಬಲ್ಲೆ ಅಷ್ಟೆ.”

“ಅಮ್ಮ…..” ರೋಹಿತ್‌ ದೃಢವಾಗಿ ಹೇಳಿದ, “ಇನ್ನು ಮುಂದೆ ಪ್ರತಿ ಸಲ ನಾನು ನಿನ್ನೊಂದಿಗೆ ಇಂಗ್ಲಿಷ್‌ನಲ್ಲೇ ಮಾತಾಡ್ತೀನಿ. ಅದೇನೂ ಕಲಿಯಲು ಅಸಾಧ್ಯವಲ್ಲ! ನಾನು ಹೇಳಿಕೊಡ್ತೀನಿ,” ಎಂದ.

ಸ್ವಲ್ಪ ಹೊತ್ತು ಬಿಟ್ಟು ಮಗ್ಗಲು ಬದಲಾಯಿಸುತ್ತಾ ರೋಹಿತ್‌ ಮತ್ತೆ ಹೇಳಿದ, “ಆ ಆಂಟಿ ತರಹ ನೀನೂ ಯಾಕಮ್ಮ ಕೆಲಸಕ್ಕೆ ಹೋಗ್ತಿಲ್ಲ? ಅವರ ತರಹ ನಿನಗೇಕೆ ಕಾರು ಓಡಿಸಲು ಬರೋದಿಲ್ಲ? ಹೊರಗೆ ಹೋಗೋಣ ಎಂದಾಗೆಲ್ಲ ಬೇಡ ಅಂತೀಯ… ದೊಡ್ಡ ಪಾರ್ಟಿಗಳಿಗೆ ಹೋಗೋದೇ ಇಲ್ಲ…”

“ಮಗು ರೋಹಿ… ನಿನಗೇನಾಗಿದೆ ಇವತ್ತು? ಯಾಕೆ ಒಂದೇ ಸಮನೆ ಇಷ್ಟೊಂದು ಪ್ರಶ್ನೆ ಕೇಳ್ತಿದ್ದಿ…. ನಿನ್ನ ಆಂಟಿ ತರಹ ನಾನೇಕೆ ಡ್ರೆಸ್‌ ಮಾಡಲ್ಲ, ಮೇಕಪ್‌ ಮಾಡಿಕೊಳ್ಳಲ್ಲ ಅಂತ ಕೇಳಬೇಡ…. ಮಗು, ಅವರು ದೊಡ್ಡ ಆಸ್ಪತ್ರೆಯ ಆಧುನಿಕ ಡಾಕ್ಟರ್‌. ನಾನೋ ಒಬ್ಬ ಸಾಧಾರಣ ಗೃಹಿಣಿ. ನನ್ನ ಜೀವನ…. ಗಂಡ ಮನೆ ಮಕ್ಕಳು…. ಇಷ್ಟೆ.”

“ಆದರೆ ನೀನು ನನ್ನ ಅಮ್ಮ…. ನನಗಾಗಿ ನೀನು ಸ್ವಲ್ಪ ಚೇಂಜ್‌ ಆಗಬಾರದೇ?”

ಬಹಳ ಮುಗ್ಧನೆಂದು ತಾನು ಭಾವಿಸುತ್ತಿದ್ದ ಮಗ ಇಂದು ಇಷ್ಟು ಪ್ರಬುದ್ಧನಾಗಿ ಪ್ರಶ್ನೆ ಕೇಳುತ್ತಿದ್ದಾನಲ್ಲ ಎಂದವಳಿಗೆ ಬೆರಗಾಯಿತು. ಮಗನನ್ನು ಈ ಬಗ್ಗೆ ವಿವರವಾಗಿ ಕೇಳೋಣ ಎಂದುಕೊಳ್ಳುವಷ್ಟರಲ್ಲಿ ಹೊರಗಿನಿಂದ ಅಮಿತ್‌ ಟಕಟಕ ಬೂಟಿನ ಸದ್ದು ಮಾಡುತ್ತಾ ಒಳ ಬಂದದ್ದು ಗೊತ್ತಾಯಿತು. ಯಾಕೋ ನಂತರ ಆಕೆಯ ಧ್ವನಿಯೇ ಉಡುಗಿಹೋಯಿತು.

ನಿನ್ನ ತಂದೆಯ ಆರೋಗ್ಯ ಹೇಗಿದೆ ಎಂದು ಸಹ ಔಪಚಾರಿಕತೆಗಾಗಿ ಗಂಡ ಏನೂ ಕೇಳಲಿಲ್ಲವಲ್ಲ ಎನಿಸಿ ಬಹಳ ಪಿಚ್ಚೆನಿಸಿತು. ಅದೇನಾಗಿದೆಯೋ ಏನೋ ಇವರಿಗೆ…. ಖಂಡಿತಾ ಮೊದಲಿನಂತೆ ಇಲ್ಲ ಅನಿಸಿತು. ಹಿಂದೆಲ್ಲ ಎಲ್ಲ ಸರಿಯಾಗಿತ್ತು, ಆದರೆ ಈಗ… ಅಳೆದೂ ಸುರಿದೂ ಒಂದೋ ಎರಡೋ ಮಾತಷ್ಟೆ.

ತಾಯಿ ಮಗ ಒಟ್ಟಿಗೆ ಮಲಗಿರುವುದನ್ನು ಕಂಡು ಅಮಿತ್‌ಗೆ ಹೆಂಡತಿಯ ಮೇಲಿನ ಹಳೆಯ ಸಿಟ್ಟು ಮರುಕಳಿಸಿತು. ಇವಳಿಂದಲೇ ಮಗ ಹೀಗೆ ಅಮ್ಮನ ಸೆರಗು ಬಿಡಲಾರದವನಾಗಿದ್ದಾನೆ ಎನಿಸಿತು. ಅಲ್ಲ… ಅವನು ಸ್ಮಿತಾಳಿಗೆ ಹಾಗೆ ಹೇಳಬೇಕಾದರೆ ಅಷ್ಟು ಆತ್ಮವಿಶ್ವಾಸ ಎಲ್ಲಿಂದ ಬಂತು? ಆದರೆ ಮಗನ ಮುಗ್ಧ ಮುಖ ನೋಡುತ್ತಲೇ ತಾನು ಅವನಿಗೆ ಅಷ್ಟು ಜೋರಾಗಿ ಹೊಡೆಯಬಾರದಿತ್ತು ಎಂದು ಅಮಿತ್‌ಗೆ ಬಹಳ ಪಿಚ್ಚೆನಿಸಿತು. ಕರುಳು ತಡೆಯಾರದೆ ಮಗನ ತಲೆ ನೇವರಿಸುತ್ತಾ, “ಎದ್ದಿದ್ದೀಯಾ ರೋಹಿ… ಏಟು ಜೋರಾಗಿ ಬಿತ್ತೇನಪ್ಪ… ಐ ಆ್ಯಮ್ ಸಾರಿ!”

“ಏನದು? ಏಟು ಬಿತ್ತೆ? ಎಲ್ಲಿ ತಗುಲಿತು ಮಗು? ಅದರ ಬಗ್ಗೆ ನೀನೇನೂ ಹೇಳಲೇ ಇಲ್ಲವಲ್ಲ….” ಗಾಬರಿಯಿಂದ ಎದ್ದು ಕುಳಿತು ಶೋಭಾ ಕೇಳಿದಳು.

“ರೋಹಿ… ಎಲ್ಲಿ ತೋರಿಸಪ್ಪ, ಎಲ್ಲಿ ಪೆಟ್ಟು ತಗುಲಿದೆ?”

“ಅಯ್ಯೋ ಅಮ್ಮಾ, ಸ್ವಲ್ಪ ಜಾರಿ ಬಿದ್ದೆ, ತಲೆಗೆ ಏಟು ತಗುಲಿತು ಅಷ್ಟೆ. ಅಪ್ಪಾಜಿ, ಯೋಚನೆ ಮಾಡಬೇಡಿ, ದಟ್ಸ್ ಆಲ್ ರೈಟ್‌. ನೀನೂ ಮಲಗಮ್ಮ,” ಎಂದ.

ರೋಹಿತನ ಮಾತು ಕೇಳಿ ಅಮಿತ್‌ಗೆ ಮಗ ಹೆಂಡತಿಗೇನೂ ಹೇಳಲಿಲ್ಲ ಎಂದು ಅಭಿಮಾನ ಉಕ್ಕಿ ಬಂದು, ಮಗನ ಹಣೆಗೆ ಮುತ್ತಿಟ್ಟು, ಮಲಗಲು ಹೊರಟ.

ಅದಾದ ವಾರದಲ್ಲಿ ಮನೆಯಲ್ಲೇನೋ ಸೂಕ್ಷ್ಮ ಬದಲಾವಣೆ ಆಗಿದೆ ಎಂದೆನಿಸಿತು ಅಮಿತ್‌ಗೆ. ಯಾವುದೇ ವಿಷಯಕ್ಕೂ ಮನೆಯಲ್ಲಿ ಕಟಿಪಿಟಿ ಇಲ್ಲ. ಎಲ್ಲಾ ಕೆಲಸಗಳು ಪಾದರಸದಂತೆ ಚಕಚಕ ನಡೆಯುತ್ತಿದೆ. ಮಗನ ಹಿಂದಿನ ಮೊಂಡುತನ, ಅಳು, ರಂಪ ಏನೂ ಇಲ್ಲ. ಶೋಭಾ ಸಹ ಹಸನ್ಮುಖಿಯಾಗಿ ಓಡಾಡುತ್ತಾ ಗೆಲುವಾಗಿದ್ದಾಳೆ. ಮಗ ಅಮ್ಮನ ಜೊತೆ ಕಾಲ ಕಳೆಯುತ್ತಾ ಚೂಟಿಯಾಗಿದ್ದಾನೆ, ಅವರಿಬ್ಬರ ಮುಖದಲ್ಲಿ ಏನೋ ಕಳೆಯಿದೆ! ಇರಲಿ, ಸದ್ಯಕ್ಕಂತೂ ಸ್ಮಿತಾಳ ಭೇಟಿಗೆ ಏನೂ ಅಡ್ಡಿಯಿಲ್ಲ ಅಂತ ಸಮಾಧಾನಗೊಂಡ.

ಆ ದಿನ ಸಂಜೆ ತಡವಾಗಿ ಅಮಿತ್‌ ಮನೆ ತಲುಪಿದಾಗ, ಯಾರೋ ಕೂಗಿದಂತಾಗಲು ಬಂದು ನೋಡಿದರೆ ಕೊರಿಯರ್‌ ಹುಡುಗ ನಿಂತಿದ್ದ. ಅವನಿಂದ ಕವರ್‌ ಪಡೆದು ನೋಡಿದರೆ ಅದು ಮಗನ ಕುರಿತಾಗಿತ್ತು. ಯಾರು ಕಳುಹಿಸಿರಬಹುದು? ಎಲ್ಲಿಂದ ಬಂದಿರಬಹುದು? ಅವನ ತಲೆಯಲ್ಲಿ ಹಲವಾರು ವಿಚಾರಗಳು ಘರ್ಷಿಸುತ್ತಿದ್ದರೂ ಇರಲಿ, ಎಂದುಕೊಂಡು ಮಗನನ್ನು ಕರೆದು ಆ ಕವರ್‌ ನೀಡಿದ.

ಅದನ್ನು ತೆರೆದು ಓದಿದ ಮಗರಾಯನ ಮಖದಲ್ಲಿ 1000 ವ್ಯಾಟ್ಸ್ ಬಲ್ಬ್ ಬೆಳಗಿತ್ತು! ಖುಷಿಯಿಂದ ಕುಪ್ಪಳಿಸುತ್ತಾ ತಂದೆಗೆ ಹೇಳಿದ,

“ಅಪ್ಪಾಜಿ! ನೀವು ಇದನ್ನು ಓದಿ ನೋಡಿ!”

ಅಮಿತ್‌ ಆ ಪತ್ರ ತೆರೆದು ಓದಿದಾಗ, ಶ್ರೀಮತಿ ಶೋಭಾ, ಈ ಬಾರಿಯ ಜಿಲ್ಲಾ ಮಟ್ಟದ ಪ್ರಾದೇಶಿಕ ಚಿತ್ರಕಲಾ ಸ್ಪರ್ಧೆಯಲ್ಲಿ ನಿಮ್ಮ ತೈಲವರ್ಣ ಚಿತ್ರ ಪ್ರಥಮ ಬಹುಮಾನ ಗಳಿಸಿದೆ, ಅಭಿನಂದನೆಗಳು. ನೀವು ಲಲಿತಕಲಾ ಅಕ್ಯಾಡೆಮಿಗೆ ಖುದ್ದಾಗಿ ಬಂದು ರಾಜ್ಯಪಾಲರಿಂದ ಈ ಬಹುಮಾನ, ಪ್ರಶಸ್ತಿ ಪಡೆಯಬೇಕು, ಎಂದು ವಿವರಿಸಲಾಗಿತ್ತು.

ಸಖೇದಾಶ್ಚರ್ಯದಿಂದ ಅಮಿತ್‌ ಹೆಂಡತಿ ಕಡೆ ತಿರುಗಿ ಕೇಳಿದ, “ಶೋಭಾ…. ಎಂದಿನಿಂದ ನಿನಗೆ ಈ ಹವ್ಯಾಸ?”

“ಪೇಂಟಿಂಗ್‌ ಹಾಬಿ ನನಗೆ ಬಾಲ್ಯದಲ್ಲೇ ರೂಢಿಯಲ್ಲಿತ್ತು. ಆದರೆ ಅದರ ಕಡೆ ಹೆಚ್ಚು ಗಮನ ಕೊಟ್ಟಿರಲಿಲ್ಲ,” ಉತ್ಸಾಹದಿಂದ ಶೋಭಾ ಮುಂದುವರಿಸಿದಳು, “ನಾನು ಎಂದಿನಂತೆ ಸಾಧಾರಣವಾಗಿ ಬಿಡಿಸಿದ್ದ ಚಿತ್ರವನ್ನು ರೋಹಿತ್‌ ಯಾವಾಗ ಈ ಜಿಲ್ಲಾ ಮಟ್ಟದ ಸ್ಪರ್ಧೆಗೆ ಕಳುಹಿಸಿದ್ದ ಅನ್ನೋದೇ ಗೊತ್ತಿಲ್ಲ. ಆ ಚಿತ್ರ ಇಂಥ ಪ್ರಶಸ್ತಿ ಗಳಿಸಬಹುದೆಂದು ನಾನೆಂದೂ ಎಣಿಸಿರಲಿಲ್ಲ. ನನ್ನಂಥ ಒಬ್ಬ ಸಾಧಾರಣ ಗೃಹಿಣಿಯ ಮನದಾಳದ ಭಾವನೆಗಳಿಗೆ ಇಂಥ ಪುರಸ್ಕಾರ ಸಿಗಬಹುದೆಂದು ಕನಸುಮನಸಿನಲ್ಲೂ ಎಣಿಸಿರಲಿಲ್ಲ,” ಎಂದಳು.

ಅಮಿತ್‌ಗಂತೂ ಶಾಕ್‌ ಮೇಲೆ ಶಾಕ್‌! ಸುಮ್ಮನೆ ತನ್ನ ಕೋಣೆಗೆ ಹೋಗಿ ಕುಳಿತುಬಿಟ್ಟ. ಇಷ್ಟು ದಿನಗಳ ಕಾಲ ತಾನು ಹೆಂಡತಿಯನ್ನು ಎಷ್ಟೆಲ್ಲ ಅಪಮಾನಿಸಿದ್ದೆ ಎಂದು ನೆನೆದು ಬೇಸರವಾಯಿತು. ಆಕೆಯ ಕಡೆಯಿಂದ ವಿರೋಧದ ಚಕಾರ ಇರಲಿಲ್ಲ. ತನ್ನ ಗಂಡ, ಮನೆ, ಮಕ್ಕಳ ಪ್ರಪಂಚದಲ್ಲಿ ಆಕೆ ಚಿತ್ರಕಲೆಯನ್ನು ಎಲ್ಲೋ ಅವಿತಿರಿಸಿದ್ದಳು. ಆಕೆಯ ಪ್ರತಿಭೆ ಎಲೆಮರೆಯ ಕಾಯಿಯಾಗಿತ್ತು. ಪಾಶ್ಚಾತ್ಯ ಫ್ಯಾಷನ್‌ ಕುರಿತು ಭ್ರಮೆ ಬೆಳೆಸಿಕೊಂಡಿದ್ದ ತಾನು ಆಡಂಬರವನ್ನೇ ಆಧುನಿಕತೆ ಅದೇ ನಾಗರಿತೆ ಎಂದು ಭಾವಿಸಿ, ಹೆಂಡತಿಯ ಆದರಣೆಯನ್ನೇ ಮರೆತಿದ್ದು ಬಹಳ ತಪ್ಪೆನಿಸಿತು.

ಆದರ್ಶ ಪತ್ನಿಯ ಮಹತ್ವ ಎಂಥದು ಎಂಬುದು ಈಗ ಗೊತ್ತಾಗತೊಡಗಿತು. ಮುಗ್ಧ ಮಕ್ಕಳನ್ನು ಎಂದೂ ಚಿಕ್ಕವರೆಂದು ಅನಾದರಿಸಬಾರದು. ಅವರು ದೊಡ್ಡವರಿಗಿಂತ ಎಷ್ಟೋ ಸೂಕ್ಷ್ಮದವರಾಗಿರುತ್ತಾರೆ. ಈ ರೀತಿ ಮೊದಲ ಬಾರಿಗೆ ಪತ್ನಿಯ ಬಗ್ಗೆ ಬಹಳ ಹೆಮ್ಮೆ ಎನಿಸಿತು.

ಅದಾದ ಒಂದು ವಾರದ ನಂತರ ಅಮಿತ್‌ ಸಂಜೆ ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ. ತಾಯಿ ಮಗ ದೇವಸ್ಥಾನಕ್ಕೆ ಹೋಗಿರುವುದಾಗಿ ರಾಮು ತಿಳಿಸಿದ. ಬೇಸರ ಕಳೆಯಲೆಂದು ರಾಮು ನೀಡಿದ ಕಾಫಿತಿಂಡಿ ಸೇವಿಸುತ್ತಾ ಅಮಿತ್‌ ಟಿ.ವಿ. ಆನ್‌ ಮಾಡಿದಾಗ…. ಇದೇನಾಶ್ಚರ್ಯ! ಆಗ ವಾರ್ತೆಗಳ ಸಮಯ. ಎಲ್ಲಾ ಚಾನೆಲ್‌ಗಳಲ್ಲೂ ವಾರ್ತೆಗಳ ಮಧ್ಯೆ, ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ರಾಜ್ಯಪಾಲರು ಬಹುಮಾನ, ಪ್ರಶಸ್ತಿ ವಿತರಿಸುತ್ತಿದ್ದ ಸುದ್ದಿ ಪ್ರಸಾರವಾಗುತ್ತಿತ್ತು!

“ಇವರನ್ನು ಭೇಟಿಯಾಗಿ….” ನಿರೂಪಕಿ ವಿವರಿಸುತ್ತಿದ್ದಳು,

“ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಮೊದಲ ವಿಜೇತರು…. ಶ್ರೀಮತಿ ಶೋಭಾ… ಸಾಧಾರಣ ಗೃಹಿಣಿಯಾಗಿ ಎಲೆಮರೆಯ ಕಾಯಿಯಂತೆ ತಮ್ಮ ಚಿತ್ರಕಲೆಯ ಪ್ರತಿಭೆಯನ್ನು ಅವಿತಿರಿಸಿದ್ದ ಇವರನ್ನು ಬೆಳಕಿಗೆ ತಂದು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದ್ದು ಇವರ 10 ವರ್ಷದ ಪುಟ್ಟ ಬಾಲಕ ರೋಹಿತ್‌!”

ಅಮಿತ್‌ ಕುತೂಹಲದಿಂದ ಮುಂದಿನ ಚಾನೆಲ್‌ಗೆ ಬದಲಾಯಿಸಿದಾಗ ಅಲ್ಲಿಯೂ ಅದೇ ಸುದ್ದಿ. ರೋಹಿತ್‌ ಉತ್ಸಾಹದಿಂದ ಹೇಳುತ್ತಿದ್ದ, “ಕಳೆದ ತಿಂಗಳು ನನ್ನ ಅಪ್ಪಾಜಿ ತಂದಿದ್ದ ಒಂದು ಪತ್ರಿಕೆಯಲ್ಲಿ ಈ ಸ್ಪರ್ಧೆ ಕುರಿತು ವಿವರಗಳಿದ್ದವು. ಅಮ್ಮನ ಈ ಪ್ರತಿಭೆ ಹೊರ ಜಗತ್ತಿಗೆ ಗೊತ್ತಾಗಲಿ ಎಂದೇ ಅವರಿಗೆ ತಿಳಿಸದೆ, ತಾಯಿಮಗುವಿನ ಮಮತೆಯ ಬಾಂಧವ್ಯದ ಕುರಿತು ಮೂಕವಾಗಿ ವಿವರಿಸುವ ಅಮ್ಮನ ಈ ತೈಲಚಿತ್ರವನ್ನು ನಾನು ಸ್ಪರ್ಧೆಗೆ ಕಳುಹಿಸಿದ್ದೆ. ಅದು ನನಗೆ ಮಾತ್ರಲ್ಲ….. ನಿಮ್ಮೆಲ್ಲರಿಗೂ ಇಂದು ಇಷ್ಟವಾಗಿರುವುದಕ್ಕೆ ಅನಂತ ಧನ್ಯವಾದಗಳು!”

ಪ್ರಚಂಡ ಕರತಾಡನದಿಂದ ಸಭಿಕರು ಸಂಭ್ರಮ ವ್ಯಕ್ತಪಡಿಸಿದರು. ರಾಜ್ಯಪಾಲರು ಶೋಭಾಳನ್ನು ಅಭಿನಂದಿಸಿ ಪ್ರಶಸ್ತಿ, ಪುರಸ್ಕಾರವಿತ್ತಾಗ, ಆಕೆ ಒಂದೇ ಮಾತು ಹೇಳಿದಳು, “ಈ ಪುರಸ್ಕಾರ ನನಗಲ್ಲ… ಎಲ್ಲಾ ನನ್ನ ಮಗನಿಗೆ ಸೇರಬೇಕು!” ಧನ್ಯತೆಯ ಆನಂದಾಶ್ರುಗಳನ್ನು ಆಕೆ ಸುರಿಸಿದಾಗ ಮಗ ತಾಯಿಯ ಕೈ ಹಿಡಿದು ಹೆಮ್ಮೆಯಿಂದ ಮುನ್ನಡೆಸಿಕೊಂಡು ಬಂದಿದ್ದ. ಈ ನೇರ ಕಾರ್ಯಕ್ರಮದ ಮೋಡಿಗೆ ಒಳಗಾಗಿದ್ದ ಅಮಿತ್‌ ಮನೆಗೆ ಮರಳಲಿರುವ ಹೆಂಡತಿ ಮಗನನ್ನು ಯಾವಾಗ ಭೇಟಿಯಾಗುವೆನೋ ಎಂದು ಹೆಮ್ಮೆಯಿಂದ ತುದಿಗಾಲಿನಲ್ಲಿ ಕಾಯತೊಡಗಿದ.

ಅಷ್ಟರಲ್ಲಿ ಅವನ ಗೆಳೆಯರು, ಬಂಧು ವರ್ಗದಿಂದ ಅನೇಕ ಫೋನ್‌ ಕರೆಗಳು ಬಂದು ಎಲ್ಲರೂ ಅಮಿತ್‌ನನ್ನು ಮಾತನಾಡಿಸಿ, ಶೋಭಾಳನ್ನು ಅಭಿನಂದಿಸಲು ಅವಳ ಬಗ್ಗೆ ವಿಚಾರಿಸುವವರೇ! ಅದರಲ್ಲೂ ಪುಟ್ಟ ಹುಡುಗ ಅಮ್ಮ ಎಲ್ಲರೆದುರು ಹೆಮ್ಮೆಯಿಂದ ಪ್ರಶಸ್ತಿ ಸ್ವೀಕರಿಸುವಂತೆ ಮಾಡಿದ್ದು, ಹೆಚ್ಚಿನ ಹೊಗಳಿಕೆಗೆ ಪಾತ್ರವಾಗಿತ್ತು.

ಅವರಿಬ್ಬರೂ ಅರ್ಧ ಗಂಟೆಯಲ್ಲಿ ಆಟೋದಲ್ಲಿ ಬಂದಿಳಿದಾಗ, ಅಮಿತ್‌ ಅವರನ್ನು ಎದುರುಗೊಳ್ಳಲು ತಾನೇ ಮುಂಬಾಗಿಲಿನಲ್ಲಿ ಕಾದು ನಿಂತಿದ್ದ. ಹೆಂಡತಿಯನ್ನು ಅಭಿನಂದಿಸಿ, ಹೆಮ್ಮೆಯಿಂದ ಮಗನನ್ನು ಗಿರಿಗಿರನೆ ತಿರುಗಿಸಿ ಕೆಳಗಿಳಿಸಿದ ಅಮಿತ್‌, “ಮಾಸ್ಟರ್‌ ರೋಹಿತ್‌…. ಈ ಟಿ.ವಿ ವರದಿ ಇದೆಲ್ಲ ಹೇಗೆ ಆಯಿತು?”

“ನಿನ್ನೆ ಚಿತ್ರಕಲಾ ಪರಿಷತ್ತಿನವರೇ ಮನೆಗೆ ಬಂದು ಆಹ್ವಾನ ಕೊಟ್ಟರು ಅಪ್ಪಾಜಿ. ಇವತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಎಲ್ಲಾ ಚಾನೆಲ್‌ನವರು ನೇರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅಮ್ಮನಿಗೆ ಇನ್ನೂ ಸಂಕೋಚ ಹೋಗಿಲ್ಲ. ಆದರೆ ನಾನು ಮಾಡಿದ್ದು ಸರಿಯಲ್ವಾ ಅಪ್ಪಾಜಿ?” ಮಗ ಕೇಳಿದ.

ಮನೆಯಲ್ಲಿ ತಾನೆಂಥ ವಜ್ರ ಹೊಂದಿದ್ದೇನೆ ಎಂಬುದು ಅಮಿತ್‌ಗೆ ಈಗ ಅರ್ಥವಾಗಿತ್ತು. ಹೆಂಡತಿಯನ್ನು ಮೊದಲಿನಿಂದಲೂ ಅಪಮಾನಿಸುತ್ತಾ ಮೂಲೆಗುಂಪಾಗಿಸಿದ್ದಕ್ಕೆ ಅವನೀಗ ಬಹಳ ಪಶ್ಚಾತ್ತಾಪಪಡುತ್ತಿದ್ದ. ಇಷ್ಟು ದಿನಗಳಲ್ಲಿ ತಾನು ಹೆಂಡತಿಯ ಪ್ರತಿಭೆಯನ್ನು ಗುರುತಿಸಿ ಹೊರತರಬೇಕಿತ್ತು, ಆ ಕೆಲಸವನ್ನು ಅವನ ಬದಲಿಗೆ ಮಗ ಹಾಲುಗಲ್ಲದ ಹಸುಳೆ ನೆರವೇರಿಸಿದ್ದ. ಆ ಪುಟ್ಟ ಕಂದ ಬಲು ಆಪ್ಯಾಯಮಾನತೆಯಿಂದ, ಚೆದುರಲಿದ್ದ ತಮ್ಮ ಸಂಸಾರದ ಗೂಡನ್ನು ಒಂದಾಗಿಸಿದ್ದಾನೆ ಎಂದು ಬಹಳ ಹೆಮ್ಮೆ ಎನಿಸಿತು.

ಅಷ್ಟರಲ್ಲಿ ಯಾರೋ ಬಾಗಿಲು ಬಡಿದಂತಾಗಲು, ಅಮಿತ್‌ ಬಂದು ಬಾಗಿಲು ತೆರೆದ. ಅದೇ ಸ್ಮಿತಾ…. ಆಕೆ ಬಿರುಗಾಳಿಯಂತೆ ಒಳಬರುತ್ತಾ, “ಮಿ. ಅಮಿತ್‌…. ಪ್ಲೀಸ್‌, ಬೇಗ ಬನ್ನಿ. ನಾನು ಸ್ವಲ್ಪ ಶಾಪಿಂಗ್‌ ಮಾಡಬೇಕು, ನಿಮ್ಮ ಹೆಲ್ಪ್ ಬೇಕಾಗುತ್ತದೆ,” ಎಂದು ಸರಾಗಾಗಿ ಆತನ ಹೆಗಲ ಮೇಲೆ ಕೈ ಇಡಲು ಬಂದಳು.

ಮಿಂಚಿನ ವೇಗದಲ್ಲಿ ರೋಹಿತ್‌ ಅಪ್ಪಾಜಿ ಬಳಿ ಓಡಿ ಬಂದ. ಕ್ಷಣ ಮಾತ್ರದಲ್ಲಿ ಅವನನ್ನು ಎತ್ತಿಕೊಂಡ ಅಮಿತ್‌ ಹೆಮ್ಮೆಯಿಂದ ಅವನನ್ನು ಮುದ್ದಿಸುತ್ತಾ, “ಸಾರಿ ಡಾಕ್ಟರ್‌…. ನಾನಿಂದು ಬಹಳ ಬಿಝಿ… ಯೂ ಶುಡ್‌ ಹೆಲ್ಪ್ ಯುವರ್‌ಸೆಲ್ಫ್…. ನನ್ನ ಶ್ರೀಮತಿ ಇಂದು ಅಪೂರ್ವ ಸಾಧನೆ ಮಾಡಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಪಾಲರಿಂದ ಪ್ರಥಮ ಬಹುಮಾನ, ಪ್ರಶಸ್ತಿ ಗಳಿಸಿದ್ದಾಳೆ. ಅದನ್ನು ಸೆಲೆಬ್ರೇಟ್‌ ಮಾಡಲು ನಾವೀಗ ಅಶೋಕ ಹೋಟೆಲ್‌ಗೆ ಹೊರಟಿದ್ದೇವೆ…..” ಎಂದು ಮುಂದೆ ಬಂದವನೆ ಶೋಭಾಳ ಬಳಿ ನಿಂತು, ಬಲಗೈಯಿಂದ ಅವಳ ತೋಳ ಮೇಲೆ ಕೈ ಹಾಕಿ ತನ್ನ ಪಕ್ಕ ಒರಗಿಸಿಕೊಳ್ಳುತ್ತಾ ಸ್ಮಿತಾಳಿಗೆ ಮತ್ತೆ ಹೆಮ್ಮೆಯಿಂದ ಹೇಳಿದ,

“ವೈ ಡೋಂಟ್‌ ಯೂ ಕಂಗ್ರಾಜ್ಯಲೇಟ್‌ ಹರ್‌…”

ಸ್ಮಿತಾಳಿಗೆ ಗಂಟಲಲ್ಲಿ ಚೆಂಡು ಸಿಕ್ಕಿ ಹಾಕಿಕೊಂಡಂತಾಗಿ, ಒಟ್ಟಾಗಿ ನಿಂತಿದ್ದ ಆ ಕುಟುಂಬನ್ನು, ದೈವೀಕಳೆಯಿಂದ ಶೋಭಿಸುತ್ತಿದ್ದ ಆ ಗೃಹಿಣಿಯ ತುಂಬು ಸಂತೋಷವನ್ನು ದಿಟ್ಟಿಸಲಾಗದೆ ಒಲ್ಲದ ಮನದಿಂದಲೇ, “ಕಂಗ್ರಾಜುಲೇಷನ್ಸ್ ಶೋಭಾ….” ಎಂದು ಬಲವಂತದ ಪೇಲವ ನಗು ತಂದುಕೊಂಡಳು

.“ಥ್ಯಾಂಕ್ಯು ವೆರಿ ಮಚ್‌ ಡಾಕ್ಟರ್‌… ಅವರ್‌ ಫ್ಯಾಮಿಲಿ ಈಸ್‌ ಸೆಲೆಬ್ರೇಟಿಂಗ್‌ ಮೈ ಸಕ್ಸಸ್‌ ಇನ್‌ ಎ ಗ್ರ್ಯಾಂಡ್‌ ವೇ… ಬೈ ದಿ ಬೈ…. ವೈ ಡೋಂಟ್‌ ಯೂ ಆಲ್ಸೋ ಜಾಯಿನ್‌ ಅಸ್‌…. ಏನೂಂದ್ರೆ, ಅವರನ್ನು ಪಾರ್ಟಿಗೆ ಕರೆಯ್ಯೊಲ್ಲವೇ?”

ಶೋಭಾಳ ಆತ್ಮವಿಶ್ವಾಸದ ಮಾತುಗಳನ್ನು ಜೀರ್ಣಿಸಿಕೊಳ್ಳಲಾಗದೆ, ಹಾವು ಮೆಟ್ಟಿದವಳಂತೆ ಸ್ಮಿತಾ ಅಲ್ಲಿಂದ ಹೊರಡುತ್ತಾ, “ನೋ ನೋ… ನನಗೀಗ ಬಹಳ ತಲೆ ನೋವು…. ಇನ್ನೊಂದು ಸಲ ಬರ್ತೀನಿ…” ಎನ್ನುತ್ತಾ ದುರ್ದಾನ ಪಡೆದವಳಂತೆ ಅಲ್ಲಿಂದ ಹೊರಟಳು.

“ಆಂಟಿ… ಬೈ!” ರೋಹಿತ್‌ ಕಿಲಕಿಲ ನಗುತ್ತಾ ಕೈ ಬೀಸಿದಾಗ ವಿಧಿಯಿಲ್ಲದೆ ಆ ಮನೆಗೆ ಶಾಶ್ವತವಾಗಿ ಎಂಬಂತೆ ಸ್ಮಿತಾ “ಬೈ” ಹೇಳಿ ಹೊರಡಲೇಬೇಕಾಯಿತು. ಹೆಂಡತಿಯ ಆತ್ಮವಿಶ್ವಾಸದ ನುಡಿಗಳು ಅಮಿತ್‌ಗೆ ಅಮಿತಾನಂದ ಉಂಟು ಮಾಡಿತು. ಅವಾಕ್ಕಾಗಿ ಆತ ಹೆಂಡತಿಯನ್ನೂ, ಅದಕ್ಕೆ ಕಾರಣಕರ್ತನಾದ ಮಗನನ್ನೂ ನೋಡುತ್ತಾ ನಿಂತುಬಿಟ್ಟ. ಹತ್ತಿರ ಬಂದವನೇ ಹೆಂಡತಿ ಮಗ ಇಬ್ಬರನ್ನೂ ಬರಸೆಳೆದು ಅಪ್ಪಿಕೊಂಡಾಗ, ಶೋಭಾಳ ಕಂಗಳಲ್ಲಿ ಆನಂದಾಶ್ರು ಮಡುಗಟ್ಟಿದ್ದರೆ, ರೋಹಿತ್‌ ಹೆಮ್ಮೆಯಿಂದ ನಗುತ್ತಿದ್ದ.

“ಅಪ್ಪಾಜಿ… ಜಯನಗರ 4ನೇ ಬ್ಲಾಕ್‌ನಲ್ಲಿ ಮೊದಲು ಐಸ್‌ಕ್ರೀಂ…. ಶಾಪಿಂಗ್‌…. ಅಮೇಲೆ ಡಿನ್ನರ್‌,” ಎಂದಾಗ, “ರೈಟ್‌ ಡಿಯರ್‌… ಇನ್ನು ಮುಂದೆ ನೀನು ಹೇಗೆ ಹೇಳಿದರೆ ಹಾಗೆ,” ಎಂದ ಅಮಿತ್‌, “ಮನೆಗೆ ಬಂದು ಅಮ್ಮ ಮಾಡುವ ಖೀರು ಮಿಸ್‌ ಮಾಡಬಾರದು,” ಎಂದಾಗ ಎಲ್ಲರೂ ನಕ್ಕರು.

ಡಿನ್ನರ್‌ ಮುಗಿಸಿ ಮನೆಗೆ ಬಂದ ಅವರು, ಮಾರನೇ ದಿನ ಶೋಭಾಳ ತಂದೆಯನ್ನು ನೋಡಲು ಮೈಸೂರಿಗೆ ಹೊರಟು ನಿಂತು ಬಾಗಿಲಿಗೆ ಬೀಗ ಹಾಕುತ್ತಿದ್ದಾಗ, ಇನ್ನು ಮುಂದೆ ಆ ಮನೆಯ ಬಾಗಿಲು ತನಗೆ ಶಾಶ್ವತವಾಗಿ ಮುಚ್ಚಿದಂತೆ ಎಂದು ಸ್ಮಿತಾ ದೂರದಿಂದಲೇ ನೋಡಿ ತಿಳಿದುಕೊಂಡಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ