ಲೇಯರ್ಡ್ ದೋಸೆ
ಸಾಮಗ್ರಿ : ಅರ್ಧರ್ಧ ಕಪ್ ಹೆಸರುಬೇಳೆ, ಓಟ್ಸ್, 2 ಚಿಟಕಿ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿಮೆಣಸಿನ ಪೇಸ್ಟ್, ಪುದೀನಾ ಚಟ್ನಿ, ಚೀಸ್ ಸ್ಪ್ರೆಡ್, ಒಂದಿಷ್ಟು ಹೆಚ್ಚಿದ ಈರುಳ್ಳಿ, ಕೊ.ಸೊಪ್ಪು, ಹಸಿರು, ಹಳದಿ, ಕೆಂಪು ಕ್ಯಾಪ್ಸಿಕಂ, ಅಣಬೆ, 2 ಮೊಟ್ಟೆಗಳ ಬುರ್ಜಿ, ತುಸು ತುರಿದ ಕ್ಯಾರೆಟ್, ಅಲಂಕರಿಸಲು ಸೋರ್ ಕ್ರೀಂ, ಹಸಿ ಮೆಣಸು, ಟೊಮೇಟೊ, ಈರುಳ್ಳಿ, ಸೌತೆ ಬಿಲ್ಲೆಗಳು, ತುಸು ಆಲಿವ್ ಎಣ್ಣೆ.
ವಿಧಾನ : ಬೇಳೆಯನ್ನು 4-5 ತಾಸು ನೆನೆಹಾಕಿ. ನಂತರ ಓಟ್ಸ್, ಇಂಗು, ಉಪ್ಪು, ಖಾರ, ಹಸಿಮೆಣಸಿನ ಪೇಸ್ಟ್, ಕೊ.ಸೊಪ್ಪು ಸೇರಿಸಿ ರುಬ್ಬಿಕೊಳ್ಳಿ. ಚಿಕ್ಕ ಬಾಣಲೆಯಲ್ಲಿ ತುಸು ಆಲಿವ್ ಎಣ್ಣೆ ಬಿಸಿ ಮಾಡಿ ಅದರಲ್ಲಿ 3 ಬಗೆ ಕ್ಯಾಪ್ಸಿಕಂ ಸೇರಿಸಿ ಬಾಡಿಸಿಕೊಳ್ಳಿ. ಇದಕ್ಕೆ ಚಿಟಕಿ ಉಪ್ಪು, ಖಾರ ಸೇರಿಸಿ ಕೆಳಗಿಳಿಸಿ. ಅದೇ ಬಾಣಲೆಯಲ್ಲಿ ಮತ್ತೆ ಆಲಿವ್ ಎಣ್ಣೆ ಬಿಸಿ ಮಾಡಿ, ಹೆಚ್ಚಿದ ಈರುಳ್ಳಿ ಒಡೆದ ಮೊಟ್ಟೆ, ಉಪ್ಪು, ಮೆಣಸು ಹಾಕಿ ಬುರ್ಜಿ ತಯಾರಿಸಿ. ನಂತರ ಇದಕ್ಕೆ ಪುದೀನಾ ಚಟ್ನಿ, ಕ್ಯಾಪ್ಸಿಕಂ ಮಿಶ್ರಣಕ್ಕೆ ಚೀಸ್ ಸ್ಪ್ರೆಡ್ ಸೇರಿಸಿ. ಎರಡಕ್ಕೂ ಉಪ್ಪು, ಪುಡಿಮೆಣಸು ಸೇರಿಸಿ. ತವಾ ಬಿಸಿ ಮಾಡಿ ಜಿಡ್ಡು ಸವರಿ. ರುಬ್ಬಿದ ಬೇಳೆ ಹಿಟ್ಟಿನಿಂದ ದೋಸೆ ತಯಾರಿಸಿ. ಒಂದರ ಮೇಲೆ ಕ್ಯಾಪ್ಸಿಕಂ ಮಿಶ್ರಣ ಬರಲಿ. ಮತ್ತೊಂದನ್ನು ಅದರ ಮೇಲಿರಿಸಿ ಅದಕ್ಕೆ ಮೊಟ್ಟೆ ಬುರ್ಜಿ ಹರಡಿರಿ. ಮೂರನೇ ದೋಸೆ ಇದರ ಮೇಲಿರಿಸಿ, ಚಿತ್ರದಲ್ಲಿರುವಂತೆ ಕ್ರೀಂ, ಸೌತೆ ಬಿಲ್ಲೆಗಳಿಂದ ಅಲಂಕರಿಸಿ ಸವಿಯಿರಿ.
ರೋಟಿ ಬೊನಾನ್ಝಾ
ಸಾಮಗ್ರಿ : 1 ದೊಡ್ಡ ದಪ್ಪ ರೊಟ್ಟಿ, ಅರ್ಧರ್ಧ ಕಪ್ ಬೆಂದ ರಾಜ್ಮಾ ಹುರುಳಿಕಾಳು, ಮೃದು ಅನ್ನ, 3 ಬಗೆಯ ಕ್ಯಾಪ್ಸಿಕಂ, 2-2 ಚಮಚ ತುರಿದ ಪನೀರ್, ಬೆಂದ ಸೋಯಾ ಮಿಶ್ರಣ, ಚೀಸ್ ಸ್ಪ್ರೆಡ್, ಬೆಣ್ಣೆ, ತುರಿದ ಹೂಕೋಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪುಡಿಮೆಣಸು, ಚಾಟ್‌ಮಸಾಲ, ಪುದೀನಾ ಚಟ್ನಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್.
ವಿಧಾನ : ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಹೆಚ್ಚಿದ ತರಕಾರಿ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಕೈಯಾಡಿಸಿ. ನಂತರ ಬೆಂದ ಸೋಯಾ ಮಿಶ್ರಣ, ರಾಜ್ಮಾ ಇತ್ಯಾದಿ ಹಾಕಿ ಕೆದಕಬೇಕು. ಕೊನೆಯಲ್ಲಿ ತುಸು ಉಪ್ಪು, ಖಾರ ಹಾಕಿ ಬೆರೆತುಕೊಂಡ ಮೇಲೆ ಕೆಳಗಿಳಿಸಿ. ಈಗ ರೊಟ್ಟಿ ಬಿಸಿ ಮಾಡಿ ಇದಕ್ಕೆ ಬೆಣ್ಣೆ ಸವರಿ, ಚೀಸ್ ಸ್ಪ್ರೆಡ್ ಹರಡಿರಿ. ಆಮೇಲೆ ಪುದೀನಾ ಚಟ್ನಿ ಹರಡಬೇಕು. ಇದರ ಮೇಲೆ ಉಳಿದ ಎಲ್ಲಾ ಸಾಮಗ್ರಿ ಹರಡಿ, 2 ನಿಮಿಷ ಓವನ್ನಿನಲ್ಲಿ ಬೇಕ್ ಮಾಡಿ ಬಿಸಿಯಾಗಿ ಸವಿಯಲು ಕೊಡಿ.
ಸ್ಪ್ರೌಟ್ ಪನೀರ್ ಸುಪ್ರೀಂ
ಸಾಮಗ್ರಿ : 200 ಗ್ರಾಂ ಪನೀರ್ ಲಾಗ್, ಅರ್ಧ ಕಪ್ ಮಿಶ್ರ ಮೊಳಕೆ ಕಾಳು, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾರೆ ಅರ್ಧ ಕಪ್), 2 ಬೆಂದ ಆಲೂ, 5-6 ಎಸಳು ಕರಿಬೇವು, 2-3 ಹಸಿ ಮೆಣಸಿನಕಾಯಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಒಂದಿಷ್ಟು ಕಡಲೆಬೀಜ, ಓಟ್ಸ್, ಬ್ರೆಡ್ ಕ್ರಂಬ್ಸ್, ದಾಳಿಂಬೆ ಹರಳು, ಬೆಂದ ನೂಡಲ್ಸ್, 2-3 ಸ್ಲೈಸ್ ಚೀಸ್.
ವಿಧಾನ : ಬಾಣಲೆಯಲ್ಲಿ ಆಲಿವ್ ಎಣ್ಣೆ ಬಿಸಿ ಮಾಡಿ ಕಡಲೆಬೀಜ, ಕರಿಬೇವು ಹಾಕಿ ಚಟಪಟಾಯಿಸಿ. ಆಮೇಲೆ ಗೋಡಂಬಿ, ಬಾದಾಮಿ, ದ್ರಾಕ್ಷಿ, ಸ್ಪ್ರೌಟ್ಸ್ ಹಾಕಿ ಕೈಯಾಡಿಸಿ. ಇದರ ಮೇಲೆ ನೀರು ಚಿಮುಕಿಸಿ ಮುಚ್ಚಳ ಮುಚ್ಚಿರಿಸಿ ಬೇಯಿಸಿ. ಮಸೆದ ಆಲೂ, ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ದಾಳಿಂಬೆ ಹರಳು ಹಾಕಿ ಕೆದಕಬೇಕು. ಇದನ್ನು ಕೆಳಗಿಳಿಸಿ ಆರಲು ಬಿಡಿ. ಪನೀರ್‌ನಲ್ಲಿ ಅಲ್ಲಲ್ಲಿ ಪೋರ್ಕಿನಿಂದ ರಂಧ್ರ ಮಾಡಿ, ಕಟ್ಸ್ ಬರಿಸಿ. ಓಟ್ಸ್, ಬ್ರೆಡ್ ಕ್ರಂಬ್ಸ್ ಬೆರೆಸಿ ಲಘುವಾಗಿ ಎಣ್ಣೆ ಹನಿಸಿ ಏರ್ ಫ್ರೈರ್‌ನಲ್ಲಿರಿಸಿ. ಹೊರಗೆ ತೆಗೆದು ಸ್ಪ್ರೌಟ್ ಮಿಶ್ರಣ, ಪನೀರ್ ಜೊತೆ ಬೆರೆಸಿಕೊಳ್ಳಿ. ಚೀಸ್ ಸ್ಲೈಸ್ ಇರಿಸಿ ಮೈಕ್ರೋವೇವ್ ನಲ್ಲಿ ತುಸು ಬಿಸಿ ಮಾಡಿ. ಬೆಂದ ತರಕಾರಿ ಹೋಳನ್ನು ತುಸು ಎಣ್ಣೆಯಲ್ಲಿ ಫ್ರೈ ಮಾಡಿ, ನೂಡಲ್ಸ್ ಜೊತೆ ಬೆರೆಸಿ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಸ್ಪೆಷಲ್ ಫಿಶ್ ಫ್ರೈ ವಿತ್ ಫ್ರೈಡ್‌ರೈಸ್
ಸಾಮಗ್ರಿ : ಅರ್ಧ ಕಪ್ ಕಡಲೆಹಿಟ್ಟು, ಅರ್ಧ ಕಂತೆ ಹೆಚ್ಚಿ ಬೇಯಿಸಿದ ಪಾಲಕ್ ಸೊಪ್ಪು, 2-3 ಹಸಿ ಮೆಣಸು, ಒಂದಿಷ್ಟು ಕೊ.ಸೊಪ್ಪು, 2 ಪೀಸ್ ಫಿಶ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಜೀರಿಗೆ, ಅರಿಶಿನ, ಗರಂಮಸಾಲ, ಎಣ್ಣೆ, ಚಾಟ್ ಮಸಾಲ, ಅರ್ಧರ್ಧ ಕಪ್ ಹೆಚ್ಚಿದ ಈರುಳ್ಳಿ, ಟೊಮೇಟೊ, ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ಮೃದು ಅನ್ನ, ಕ್ರೀಂ ಅಥವಾ ಸೋರ್ ಕ್ರೀಂ, ಅಕ್ಕಿ ಹಿಟ್ಟು, ಬ್ರೆಡ್ ಕ್ರಂಬ್ಸ್.
ವಿಧಾನ : ಮಸೆದ ಪಾಲಕ್ ಮಸಾಲೆ, ಕೊ.ಸೊಪ್ಪು, ಹಸಿಮೆಣಸು ಸೇರಿಸಿ ರುಬ್ಬಿಕೊಳ್ಳಿ. ಇದಕ್ಕೆ ಅಕ್ಕಿಹಿಟ್ಟು, ಕಡಲೆಹಿಟ್ಟು ಬೆರೆಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ. ಮೀನಿನ ತುಂಡುಗಳನ್ನು ಶುಚಿಗೊಳಿಸಿ, ಇದನ್ನು ಕಡಲೆಹಿಟ್ಟಿನಲ್ಲಿ ಅದ್ದಿ, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ, ಪ್ಯಾನ್‌ನಲ್ಲಿ ಶ್ಯಾಲೊ ಫ್ರೈ ಮಾಡಿ. ಅದೇ ಎಣ್ಣೆಗೆ ಜೀರಿಗೆ ಒಗ್ಗರಣೆ ಕೊಟ್ಟು, ಹೆಚ್ಚಿದ ತರಕಾರಿ ಹಾಕಿ ಬಾಡಿಸಿ. ಇದಕ್ಕೆ ತುಸು ಉಪ್ಪು, ಮೆಣಸು ಹಾಕಿ ಕೆದಕಿ, ಅನ್ನ ಹಾಕಿ ಕೈಯಾಡಿಸಿ. ಚಿತ್ರದಲ್ಲಿರುವಂತೆ ಫಿಶ್ ಫ್ರೈ ಇರಿಸಿ ಅಲಂಕರಿಸಿ. ಜೊತೆಗೆ ರಾಯ್ತಾ ಇರಲಿ, ಬಿಸಿಯಾಗಿ ಸವಿಯಲು ಕೊಡಿ.
ಮಶ್‌ರೂಮ್ ಚೀಸ್ ಪ್ಯಾನ್‌ಕೇಕ್
ಸಾಮಗ್ರಿ : ಅರ್ಧರ್ಧ ಕಪ್ ಗೋದಿಹಿಟ್ಟು, ಮೈದಾ, 2-2 ಚಿಟಕಿ ಬೇಕಿಂಗ್ ಪೌಡರ್, ಉಪ್ಪು, ಸಕ್ಕರೆ, ತುಸು ಹಾಲು, ಹೆಚ್ಚಿದ ಮಶ್‌ರೂಮ್, ಈರುಳ್ಳಿ, ಟೊಮೇಟೊ, ಹಸಿಮೆಣಸು, ಕೊ.ಸೊಪ್ಪು, ಅರ್ಧ ಕಪ್ ಸೋಯಾ ಚೂರು, ರುಚಿಗೆ ತಕ್ಕಷ್ಟು ಉಪ್ಪುಮೆಣಸು, ಇಡಿಯಾದ 5-6 ಕೆಂಪು ಚೆರ್ರಿ ಟೊಮೇಟೊ.
ವಿಧಾನ : ಮೈದಾ, ಗೋಧಿಹಿಟ್ಟು, ಉಪ್ಪು, ಬೇಕಿಂಗ್ ಪೌಡರ್, ಸಕ್ಕರೆ, ತುಪ್ಪ, ತುಸು ಹಾಲು ಬೆರೆಸುತ್ತಾ ದೋಸೆ ಹಿಟ್ಟಿನ ಮಿಶ್ರಣ ಕಲಸಿಡಿ. ಇದನ್ನು ಅರ್ಧ ಗಂಟೆ ನೆನೆಯಲು ಬಿಡಿ. ಮಶ್‌ರೂಮ್ ನ್ನು ತುಸು ಹಾಲಿನಲ್ಲಿ ಬೇಯಿಸಿ. ನಂತರ ಇದಕ್ಕೆ ಚಿಟಕಿ ಉಪ್ಪು, ಚೀಸ್ ಸ್ಪ್ರೆಡ್ ಬೆರೆಸಿ ದೋಸೆಹಿಟ್ಟಿನ ಹದಕ್ಕೆ ತಿರುವಿಕೊಳ್ಳಿ. ಚಿಕ್ಕ ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ, ಟೊಮೇಟೊ, ಸೋಯಾ ಚೂರು ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಉಪ್ಪು, ಪುಡಿಮೆಣಸು ಸೇರಿಸಿ. ಫ್ರೈಯಿಂಗ್ ಪ್ಯಾನಿಗೆ ಬೆಣ್ಣೆ ಸವರಿ ಒಳಭಾಗ ಜಿಡ್ಡು ಮಾಡಿ. ಇದಕ್ಕೆ ಮೈದಾ ಮಿಶ್ರಣ ಹರಡಿ ದೋಸೆ ತಯಾರಿಸಿ. ಈ ರೀತಿ ಸಿದ್ಧಗೊಂಡ ದೋಸೆಗಳಿಗೆ ಸಮನಾಗಿ ಬರುವಂತೆ ಸೋಯಾ ಫಿಲ್ಲಿಂಗ್ ತುಂಬಿಸಿ. ಒಂದು ಟ್ರೇನಲ್ಲಿ ಮೊದಲು ರುಬ್ಬಿಕೊಂಡ ಮಶ್‌ರೂಮ್ ಸಾಸ್ ಹರಡಿ, ಇದರ ಮೇಲೆ ದೋಸೆ ಹರಡಿ. ಅದರ ಮೇಲೆ ಇನ್ನಷ್ಟು ಸಾಸ್ ಬರಲಿ. ಇದರ ಮೇಲೆ ಹಸಿಮೆಣಸು, ಕೊ.ಸೊಪ್ಪು ಉದುರಿಸಿ. ಈ ರೀತಿ ಮಡಿಚಿ ಇರಿಸಿದ ದೋಸೆಗಳಿಗೆ ಚಿತ್ರದಲ್ಲಿರುವಂತೆ ಚೆರ್ರಿ ಟೊಮೇಟೊ ಸಿಗಿಸಿ, ರುಚಿಗೆ ತಕ್ಕಷ್ಟು ಉಪ್ಪು-ಮೆಣಸು ಉದುರಿಸಿ. ಮಾಡಿದ ತಕ್ಷಣ ಸರ್ವ್ ಮಾಡಿ.
ದಾಲ್ ಡಿಲೈಟ್
ಸಾಮಗ್ರಿ : 1 ಕಪ್ ಗೋಧಿಹಿಟ್ಟು, 2 ಚಮಚ ತುಪ್ಪ, ಅರ್ಧ ಚಮಚ ಓಮ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಖಾರ, ಶುಂಠಿ, ಕೊ.ಸೊಪ್ಪಿನ ಪೇಸ್ಟ್, ಇಂಗು, ಪುದೀನಾ ಚಟ್ನಿ, ತುಸು ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಹಸಿ ಮೆಣಸು, ಸೌತೇಕಾಯಿ, ಕ್ಯಾರೆಟ್, ಹೂಕೋಸು, ಟೊಮೇಟೊ, ಪಾಲಕ್‌ಸೊಪ್ಪು, 3-4 ಇಡೀ ಒಣಮೆಣಸು, ಒಗ್ಗರಣೆಗೆ ಎಣ್ಣೆ, ಜೀರಿಗೆ, ಸಾಸುವೆ, 2 ಚಮಚ ತುಪ್ಪ, ಅರ್ಧರ್ಧ ಕಪ್ ತೊಗರಿ, ಉದ್ದಿನ ಬೇಳೆ.
ವಿಧಾನ : ಬೇಳೆಗಳನ್ನು ನೆನೆಹಾಕಿ. ನಂತರ ಉಪ್ಪು, ಅರಿಶಿನ, ಒಣ ಮೆಣಸಿನಕಾಯಿ, ಟೊಮೇಟೋ ಹಾಕಿ ಬೇಯಿಸಿ. ಗೋದಿಹಿಟ್ಟಿಗೆ ಓಮ, ಚಿಟಕಿ ಉಪ್ಪು, ಖಾರ, ತುಪ್ಪ, ಶುಂಠಿ, ಕೊ.ಸೊಪ್ಪಿನ ಪೇಸ್ಟ್ ಹಾಕಿ ಹಿಟ್ಟು ಕಲಸಿಡಿ. 2 ಚಮಚ ಬಿಸಿ ಮಾಡಿದ ತುಪ್ಪಕ್ಕೆ ಒಗ್ಗರಣೆ ಕೊಟ್ಟು ಹೆಚ್ಚಿದ ಪಾಲಕ್ ಮತ್ತು ಪನೀರ್‌ನ್ನು ಬಾಡಿಸಿ. ಹಿಟ್ಟಿನಿಂದ 2-3 ಉಂಡೆಗಳನ್ನು ಮಾಡಿ ಅದಕ್ಕೆ ಬಟ್ಟಲಿನ ಆಕಾರ ಕೊಡಿ. ಇದಕ್ಕೆ ಬಾಡಿಸಿದ ಪನೀರ್ ಮಿಶ್ರಣ ತುಂಬಿಸಿ ಕ್ಲೋಸ್ ಮಾಡಿ. ಬೇಳೆ ಮಿಶ್ರಣವನ್ನು ಬಾಣಲೆಯಲ್ಲಿ ಮಂದ ಉರಿಯಲ್ಲಿ ಕುದಿಸಬೇಕು. ಇದಕ್ಕೆ ಹೆಚ್ಚಿದ ತರಕಾರಿ ಹಾಕಿ, ಹಿಟ್ಟಿನ ಬಟ್ಟಲು ತೇಲಿಬಿಟ್ಟು ಎಲ್ಲ ಬೇಯುವಂತೆ ಮಾಡಿ. ಕೊನೆಯಲ್ಲಿ ಬೇರೆಯಾಗಿ ಒಗ್ಗರಣೆ ಕೊಟ್ಟು ಜೀರಿಗೆ, ಇಂಗು, ಒಣ ಮೆಣಸಿನಕಾಯಿಗಳನ್ನು ಇದಕ್ಕೆ ಬೆರೆಸಬೇಕು. ಕೊನೆಯಲ್ಲಿ ಈ ಮಿಶ್ರಣಕ್ಕೆ ಪುದೀನಾ ಚಟ್ನಿ ಬೆರೆಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಹಾಂಡೀ ಸ್ಪೆಷಲ್
ಸಾಮಗ್ರಿ : 2-3 ಪೀಸ್ ಮಟನ್, ರುಚಿಗೆ ತಕ್ಕಷ್ಟು ಉಪ್ಪು, ಒಣ ಮೆಣಸಿನ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, 2 ಚಿಟಕಿ ಅರಿಶಿನ, ಧನಿಯಾಪುಡಿ, ಹೆಚ್ಚಿದ 1 ದೊಡ್ಡ ಈರುಳ್ಳಿ, ಅರ್ಧ ಕಪ್ ಬ್ರೋಕನ್ ವೀಟ್, ಅರ್ಧರ್ಧ ಕಪ್ ಕಡಲೆ, ಹೆಸರು ಬೇಳೆ, ಹೆಚ್ಚಿದ ಪನೀರ್, ಮೊಸರು, ಪುದೀನಾ ಚಟ್ನಿ, 5-6 ಮಶ್‌ರೂವ್ (2 ಭಾಗವಾಗಿಸಿ), ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಹಸಿ ಮೆಣಸು, 3-4 ಒಣ ಮೆಣಸಿನಕಾಯಿ, 2 ಚಮಚ ತುಪ್ಪ, 3-4 ಏಲಕ್ಕಿ, ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್.
ವಿಧಾನ : ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಗೆ ಉಪ್ಪು, ಗರಂ ಮಸಾಲೆ, ಅರಿಶಿನ ಧನಿಯಾಪುಡಿ ಹಾಕಿ ಮಿಶ್ರಗೊಳಿಸಿ. ಇದರಲ್ಲಿ ಮಟನ್ ಪೀಸ್ ಮ್ಯಾರಿನೇಟ್ ಆಗಲು ಬಿಡಿ. ಪ್ರೆಷರ್ ಪ್ಯಾನಿನಲ್ಲಿ ತುಸು ಎಣ್ಣೆ ಬಿಸಿ ಮಾಡಿ ಏಲಕ್ಕಿ, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಮಶ್‌ರೂಮ್ ಹಾಕಬೇಕು. ಆಮೇಲೆ ಮಟನ್ ಹಾಕಿ ಕೈಯಾಡಿಸಿ. ಇದಕ್ಕೆ 2 ಕಪ್ ನೀರು ಬೆರೆಸಿ ಮುಚ್ಚಳ ಮುಚ್ಚಿರಿಸಿ ಬೇಯಿಸಿ. ಬೇರೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ತುಂಡರಿಸಿದ ಒಣ ಮೆಣಸಿನಕಾಯಿ, ಬ್ರೋಕನ್ ವೀಟ್, 2 ಬಗೆ ಬೇಳೆ ಹಾಕಿ ಹುರಿಯಿರಿ. ಪ್ಯಾನ್ ತಣಿದಾಗ, ಅದೇ ಮಟನ್ ಮಿಶ್ರಣಕ್ಕೆ ಈ ಬೇಳೆ ಮಿಶ್ರಣ, ಪನೀರ್ ಹಾಕಿ ಕೆದಕಿ ಇವೆಲ್ಲ ಬೇಯುವಂತೆ ಮಾಡಿ. ಸಣ್ಣಗೆ ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಮೊಸರು, ಪುದೀನಾ ಚಟ್ನಿ ಎಲ್ಲಾ ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸುತ್ತಿರಿ. ಚೆನ್ನಾಗಿ ಕುದಿ ಬಂದ ಮೇಲೆ ಕೆಳಗಿಳಿಸಿ ಡ್ರೈ ಫ್ರೂಟ್ಸ್ ಬೆರೆಸಿ ಬಿಸಿಯಾಗಿ ಸವಿಯಲು ಕೊಡಿ.
ಟಿಕ್ಕಾ ರೋಲ್ಸ್
ಸಾಮಗ್ರಿ : 8-10 ಮಶ್‌ರೂಮ್, 5-6 ಪನೀರ್ ತುಂಡು, ಒಂದಿಷ್ಟು ಹೆಚ್ಚಿದ ಈರುಳ್ಳಿ, ಹೂಕೋಸು, ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪುದೀನಾ ಚಟ್ನಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಚಾಟ್‌ಮಸಾಲ, 1 ಕಪ್ ಮೊಸರು, ಅರ್ಧ ಕಪ್ ಕ್ರೀಂ, 2 ಮೊಟ್ಟೆ, 4 ಚಮಚ ಆಲಿವ್ ಎಣ್ಣೆ, ಅಲಂಕರಿಸಲು ಚೆರ್ರಿ ಟೊಮೇಟೊ.
ವಿಧಾನ : ಮೊಸರಿಗೆ ಉಪ್ಪು, ಖಾರ, ಪುದೀನಾ ಚಟ್ನಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಮಶ್‌ರೂಮ್, ಹೂಕೋಸು, ಪನೀರ್ ತುಂಡು, ಕ್ಯಾಪ್ಸಿಕಂ, ಈರುಳ್ಳಿ ಸೇರಿಸಿ 2-3 ಗಂಟೆ ಕಾಲ ಮ್ಯಾರಿನೇಟ್‌ಗೊಳಿಸಿ. ಇದನ್ನು ಬಾಣಲೆಗೆ ಹಾಕಿ ಬೇಗ ಬೇಗ ಬಾಡಿಸಿ ಗಟ್ಟಿಗೊಳಿಸಿ. ಇದಕ್ಕೆ ಉಪ್ಪು, ಖಾರ, ಚಾಟ್‌ಮಸಾಲ ಹಾಕಿ ಕೆದಕಿ ಕ್ರೀಂ ಬೆರೆಸಿ, ಕೆಳಗಿಳಿಸಿ. ಇದು ಗಟ್ಟಿಯಾದ ನಂತರ ಇದರಿಂದ ಟಿಕ್ಕಿ (ಡ್ರೈ ಪಲ್ಯ) ತಯಾರಿಸಿ. ಫ್ರೈಯಿಂಗ್ ಪ್ಯಾನ್‌ನಲ್ಲಿ 1-1 ಮೊಟ್ಟೆ ಒಡೆದು ಹಾಕಿ ತುಸು ಉಪ್ಪು, ಮೆಣಸು ಚಿಮುಕಿಸಿ ಆಮ್ಲೆಟ್ ತಯಾರಿಸಿ. ಎರಡೂ ಆಮ್ಲೆಟ್‌ಗಳಿಗೆ ಟಿಕ್ಕಿ ಮಿಶ್ರಣ ತುಂಬಿಸಿ, ರೋಲ್ಸ್ ಸಿದ್ಧಪಡಿಸಿ. ಇದನ್ನು ಬಿಸಿ ಖಿಚಡಿ ಮೇಲಿರಿಸಿ, ಚಿತ್ರದಲ್ಲಿರುವಂತೆ ಚೆರ್ರಿ ಟೊಮೇಟೊ ಸಮೇತ ಅಲಂಕರಿಸಿ ಸವಿಯಲು ಕೊಡಿ.
ಸ್ಪೆಷಲ್ ವೆಜ್ ಪರೋಟ
ಸಾಮಗ್ರಿ : 2 ಕಪ್ ಮಲ್ಟಿಗ್ರೇನ್ ಆಟಾ, ಅರ್ಧ ಸೌಟು ತುಪ್ಪ, 2-2 ಚಿಟಕಿ ಓಮ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪುದೀನಾ ಚಟ್ನಿ, ಪನೀರ್ ಮಸಾಲ, 1-2 ಬೇಯಿಸಿ ಮಸೆದ ಆಲೂ, ಅರ್ಧರ್ಧ ಕಪ್ ತುರಿದ ಕ್ಯಾರೆಟ್, ಹೂಕೋಸು, ತುರಿದ ಚೀಸ್, ಬೆಣ್ಣೆ, ಬೆಂದ ಸೋಯಾ ಚೂರು.
ವಿಧಾನ : ಮಸೆದ ಆಲೂಗೆ ಪನೀರ್, ಸೋಯಾ, ಕ್ಯಾರೆಟ್, ಹೂಕೋಸು, ಚೀಸ್ ಇತ್ಯಾದಿ ಬೆರೆಸಿರಿ. ಗೋದಿಹಿಟ್ಟಿಗೆ ತುಪ್ಪ, ಓಮ, ಉಪ್ಪು, ಖಾರ, ಪುದೀನಾ ಚಟ್ನಿ ಬೆರೆಸಿ ಕಲಸಿಡಿ. ಇದರಿಂದ 4 ಉಂಡೆಗಳನ್ನು ಮಾಡಿ ಲಟ್ಟಿಸಿ. 2-2 ರೊಟ್ಟಿಗಳ ನಡುವೆ ಆಲೂ ಮಿಶ್ರಣ ತುಂಬಿಸಿ ತುದಿಗಳನ್ನು ಅಂಟಿಸಿ. ಹರಿತ ಚಾಕುವಿನಿಂದ ಇದನ್ನು 2 ಭಾಗವಾಗಿ ಕತ್ತರಿಸಿ. ಇದನ್ನು ತವಾ ಮೇಲೆ ಹಾಕಿ, ತುಪ್ಪ ಬಿಡುತ್ತಾ ಎರಡೂ ಬದಿ ಬೇಯಿಸಿ. ಬಿಸಿ ಇರುವಾಗಲೇ ಇದರ ಮೇಲೆ ಬೆಣ್ಣೆ ಹಾಕಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.