ಕಿಚ್ಚ ಸುದೀಪ್ ಅಭಿನಯದ ‘ಮಾಣಿಕ್ಯ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದ ನಟಿ ರನ್ಯಾ ರಾವ್, ಅದಾದ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಪಟಾಕಿ ಚಿತ್ರದಲ್ಲೂ ಬಣ್ಣ ಹಚ್ಚಿದ್ರು. ವಾಘಾ ಅನ್ನೋ ಪರಭಾಷಾ ಚಿತ್ರವೊಂದರಲ್ಲೂ ನಟಿಸಿದ್ದ ರನ್ಯಾ ರಾವ್, ಇದೀಗ ಗೋಲ್ಡ್ ಸ್ಮಗ್ಲಿಂಗ್ ಮಾಡಲು ಹೋಗಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಸಿಲುಕಿದ್ದಾಳೆ. ಹೌದು.. ದುಬೈನಿಂದ ಈಕೆ ಅಕ್ರಮವಾಗಿ ಚಿನ್ನವನ್ನು ಸಾಗಾಣೆ ಮಾಡ್ತಿದ್ದಾಗ ಬೆಂಗಳೂರಿನ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಆಫೀಸರ್ ಗೆ ತಗಲಾಕ್ಕೊಂಡಿದ್ದಾರೆ.
ಅಂದಹಾಗೆ ನಟಿ ರನ್ಯಾ ರಾವ್ ಸ್ಮಗ್ಲಿಂಗ್ ಮಾಡ್ತಿದಿದ್ದು ಒಂದೋ ಎರಡೋ ಕೆಜಿ ಚಿನ್ನವಲ್ಲ. ಬರೋಬ್ಬರಿ 14.8 ಕೆಜಿ ಬೃಹತ್ ಮೊತ್ತದ ಚಿನ್ನ ಅನ್ನೋದು ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದೆ. ದೊಡ್ಡ ತಿಮಿಂಗಲವೊಂದು ಬಲೆಗೆ ಬಿದ್ದಂತೆ ಈಕೆ ಏರ್ ಪೋರ್ಟ್ ಕಸ್ಟಮ್ಸ್ DRI ತಂಡಕ್ಕೆ ಸಿಕ್ಕಿಬಿದ್ದಿದ್ದಾಳೆ. ದುಬೈನಿಂದ ದೆಹಲಿಗೆ ಆಗಮಿಸಿ, ಅಲ್ಲಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದ ಈಕೆ ಮೀನು ಬಲೆಗೆ ಬಿದ್ದಂತೆ ಸಲೀಸಾಗೇ ಅಧಿಕಾರಿಗಳ ಕೈಗೆ ಸಿಲುಕಿಕೊಂಡಿದ್ದಾಳೆ.
ರನ್ಯಾ ರಾವ್ ಅವರು ವ್ಯಾಪಾರದ ಉದ್ದೇಶಕ್ಕಾಗಿ ದುಬೈಗೆ ಹೋಗ್ತೀನಿ ಎಂದು ಹೇಳಿದ್ದರು. ದೆಹಲಿ ಡಿಆರ್ಐ ಟೀಮ್ಗೆ ಈ ಬಗ್ಗೆ ಖಚಿತವಾದ ಮಾಹಿತಿ ಇತ್ತು. ನಿನ್ನೆ ಆಕೆ ಬರೋದಕ್ಕೂ 2 ಗಂಟೆ ಮೊದಲೇ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಹಾಗೂ ಪೊಲೀಸರು ಅಲರ್ಟ್ ಆಗಿ ಕಾದು ಕುಳಿತಿದ್ದರು.
ದುಬೈನಿಂದ ಎಮಿರೈಟ್ಸ್ ಫ್ಲೈಟ್ನಲ್ಲಿ ನಟಿ ರನ್ಯಾ ರಾವ್ KIAL ವಿಮಾನ ನಿಲ್ದಾಣಕ್ಕೆ ಬಂದರು. 14.8 ಕೆ.ಜಿ ಚಿನ್ನದೊಂದಿಗೆ ಏರ್ಪೋರ್ಟ್ಗೆ ಬಂದಿಳಿದ ನಟಿ ರನ್ಯಾ ತನ್ನ ದೇಹದ ಒಳಗೆ ಚಿನ್ನದ ಬಿಲ್ಲೆಗಳನ್ನ ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಬೆಂಗಳೂರಿನಲ್ಲಿ ನಟಿ ರನ್ಯಾ ರಾವ್ ಲ್ಯಾಂಡ್ ಆಗ್ತಿದ್ದಂತೆ ಸೋಮವಾರ ಸಂಜೆ 7:30ರ ಸುಮಾರಿಗೆ ಏರ್ಪೋರ್ಟ್ನಲ್ಲಿ DRI ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಂದು ವಿಚಾರಣೆಯ ಬಳಿಕ ನಟಿ ರನ್ಯಾ ರಾವ್ ಅವರನ್ನು CCH 82 ಕೋರ್ಟ್‌ಗೆ ಹಾಜರುಪಡಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬ್ಯಾಕ್ ಟು ಬ್ಯಾಕ್ ದುಬೈಗೆ..: ಸಿಕ್ಕಿಬಿದ್ದಿದ್ದೇ ರೋಚಕ:
ಅಸಲಿಗೆ ಪದೇ ಪದೆ ದುಬೈಗೆ ಹೋಗುತ್ತಿದ್ದ ನಟಿ ರನ್ಯಾ ರಾವ್ ಇತ್ತೀಚೆಗೆ 4 ಬಾರಿ ದುಬೈಗೆ ಹೋಗಿ ಬಂದಿದ್ದರು. ಬ್ಯಾಕ್ ಟು ಬ್ಯಾಕ್ ಹೋಗಿಬಂದಿದ್ದರ ಮೇಲೆ ಕಸ್ಟಮ್ಸ್ ಅಧಿಕಾರಿಗಳು ನಟಿಯ ಮೇಲೆ ನಿಗಾ ಇಟ್ಟಿದ್ದರು. ಪ್ರತಿ ಬಾರಿಯೂ ದುಬಾರಿ ಮೌಲ್ಯದ ಚಿನ್ನದ ಸರಗಳನ್ನು ಕೊರಳಿಗೆ ಹಾಕಿಕೊಂಡು ಬರುತ್ತಿದ್ದರು.
ಜೊತೆಗೆ ಮಲತಂದೆಯ ಹೆಸರಲ್ಲಿ ಏರ್ಪೋರ್ಟ್ನಿಂದ ಅನಧಿಕೃತವಾಗಿ ಪೊಲೀಸ್ ಎಸ್ಕಾರ್ಟ್ನಲ್ಲಿಯೇ ಮನೆಗೆ ಆಗಮಿಸುತ್ತಿದ್ದರು. ಹೀಗಾಗಿ ಈಕೆಯ ಪ್ರತಿಯೊಂದು ಚಲನವಲನ ಗಮನಿಸಿದ್ದ ಅಧಿಕಾರಿಗಳು ಈ ಬಾರಿ ದಾಖಲೆ ಸಮೇತ ಹಿಡಿದಿದ್ದಾರೆ.
ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದ ಆರೋಪದಲ್ಲಿ ನಟಿ ರನ್ಯಾ ರಾವ್ ಅವರ ವಿಚಾರಣೆ ಮಾಡಲಾಗುತ್ತಿದೆ. ವಿಚಾರಣೆ ನಡೆಸ್ತಿರೋ ಅಧಿಕಾರಿಗಳು ಚಿನ್ನಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎನ್ನುತ್ತಿದೆ. ಒಂದು ವೇಳೆ ದಾಖಲೆ ಸಲ್ಲಿಸಲು ವಿಫಲರಾದ್ರೆ ಅಧಿಕಾರಿಗಳು ಆ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಚಿನ್ನದ ಪ್ರಮಾಣ ಹೆಚ್ಚು ಇರೋದ್ರಿಂದ ನಟಿಗೆ ಜೈಲು ಶಿಕ್ಷೆಯಾಗುವ ಅವಕಾಶ ಇದೆ.
ಮನೆಯಲ್ಲಿ ಭಾರೀ ನಗದು ಪತ್ತೆ:
ನಟಿ ರನ್ಯಾ ರಾವ್ ಬಳಿ ಚಿನ್ನವನ್ನ ಸೀಜ್ ಮಾಡಿದ ಡಿಆರ್ಐ ಅಧಿಕಾರಿಗಳ ತಂಡ ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯಲ್ಲಿರುವ ಆಕೆಯ ಮನೆಯನ್ನ ಪರಿಶೀಲನೆ ಮಾಡಿದೆ. ನಂದವಾಣಿ ಮ್ಯಾನ್ಷನ್ನಲ್ಲಿರುವ ಫ್ಲ್ಯಾಟ್ನಲ್ಲಿ ತಡಕಾಡಿದ ಅಧಿಕಾರಿಗಳಿಗೆ ಅಪಾರ ಪ್ರಮಾಣದ ನಗದು ಸಿಕ್ಕಿದೆ ಎನ್ನಲಾಗಿದೆ. ರಾತ್ರಿಯೇ ಶೋಧ ಕಾರ್ಯ ನಡೆಸಿದ ಐದಕ್ಕೂ ಹೆಚ್ಚು ಅಧಿಕಾರಿಗಳು ಬರೋಬ್ಬರಿ 3 ದೊಡ್ಡ ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ರನ್ಯಾ ಮಲತಂದೆ IPS ಅಧಿಕಾರಿ:
ವಿಶೇಷ ಅಂದ್ರೆ ಈಕೆ ಐಪಿಎಸ್ ಆಫೀಸರ್ ರಾಮಚಂದ್ರರಾವ್ ಅವರ ಪುತ್ರಿಯಾಗಿದ್ದಾರೆ. 1991ರ ಮೇ 28ರಂದು ಹುಟ್ಟಿದ ರನ್ಯಾರಾವ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ರಾಮಚಂದ್ರರಾವ್ ಅವರ 2ನೇ ಪತ್ನಿಯ ಮೊದಲ ಗಂಡನ ಮಗಳಾಗಿದ್ದು, ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಮುಗಿಸಿದ್ದಾರೆ.
ಬಹುಶಃ ಅಪ್ಪ ಇದಾರೆ ಅನ್ನೋ ಧೈರ್ಯದ ಮೇಲೆಯೇ ಹೀಗೆ ಮಾಡಿದ್ರಾ ? ಅಥವಾ ಅಪ್ಪನೇ ಇದಕ್ಕೆ ಸಾಥ್ ಕೊಟ್ರಾ ಅನ್ನೋದನ್ನ ಸದ್ಯ DRI ಕಸ್ಟಮ್ಸ್ ಟೀಂ ವಿಚಾರಣೆ ತ್ವರಿತಗೊಳಿಸಿದೆ. ಆ್ಯಕ್ಟಿಂಗ್, ಡಬ್ಬಿಂಗ್ ಮಾಡ್ಕೊಂಡು, ಸುತ್ತಾಡ್ಕೊಂಡ್ ಇರೋದು ಬಿಟ್ಟು ಇದೆಲ್ಲಾ ಬೇಕಿತ್ತಾ ರನ್ಯಾ ಮೇಡಂ ನಿಮಗೆ ಅಂತಿದ್ದಾರೆ ನೆಟ್ಟಿಗರು.