-ಶರತ್ ಚಂದ್ರ
ಫೆಬ್ರವರಿ ತಿಂಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ವಿವಾಹ ಪರ್ವ ಆರಂಭವಾಗಿದೆ. ಫೆಬ್ರವರಿ 16ರಂದು ಡಾಲಿ ಧನಂಜಯ್ ಅವರ ಮದುವೆ ಮೈಸೂರಿನಲ್ಲಿ ನಡೆಯುವ ಬಗ್ಗೆ ನಿಮಗೆಲ್ಲ ಗೊತ್ತಿದೆ. ಅದಕ್ಕಿಂತ ಮುಂಚೆ ಫೆಬ್ರವರಿ 7 ಮತ್ತು 8 ಕ್ಕೆ ನಟಿ ಜಯಮಾಲ ಅವರ ಪುತ್ರಿ ಸೌಂದರ್ಯ ಹಾಗೂ ಅದೇ ದಿನ ಕನ್ನಡ ರಂಗದ ದಲ್ಲಿ ಕ್ರೇಜಿ ಕ್ವೀನ್ ಅಂತ ಕರೆಸಿಕೊಳ್ಳುವ ನಟಿ ರಕ್ಷಿತಾ ಅವರ ತಮ್ಮ ರಾಣಾ ಕೂಡ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ. ಅಂದ ಹಾಗೆ ರಾಣ ಮದುವೆಯಾಗುವ ಹುಡುಗಿ ಹೆಸರು ಕೂಡ ರಕ್ಷಿತಾ ಅಂತೆ .
ಮೊದಲ ಬಾರಿ ರಾಣ ಅಕ್ಕನಿಗೆ ರಕ್ಷಿತಾ ಎಂಬ ಹುಡುಗಿಯನ್ನು ಪ್ರೀತಿಸುವ ವಿಷಯ ತಿಳಿಸಿದಾಗ,ನಿನಗೆ ಬೇರೆ ಯಾವ ಹೆಸರಿರುವ ಹುಡುಗಿ ಸಿಕ್ಕಿಲ್ವಾ ಅಂತ ಕಾಲೆಳಿದ್ದರಂತೆ.
ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ರಕ್ಷಿತಾ ಮಾತನಾಡಿ ಮಾಧ್ಯಮದವರೊಂದಿಗಿನ ನಂಟು ಇಂದು ನಿನ್ನೆಯದಲ್ಲ, ತಂದೆ ಗೌರಿಶಂಕರ್ ಹಾಗೂ ತಾಯಿ ಮಮತಾ ರಾವ್ ಅವರ ಚಿತ್ರ ಜೀವನದುದ್ದಕ್ಕೂ ಮಾಧ್ಯಮದವರು ನೀಡಿರುವ ಬೆಂಬಲವನ್ನು ಸ್ಮರಿಸುತ್ತ ತಮ್ಮ ರಾಣ ವಿವಾಹ ಕ್ಕೆ ಮಾಧ್ಯಮ ಮಿತ್ರರನ್ನು ವಿಶೇಷವಾಗಿ ಆಹ್ವಾನಿಸಿದರು.
ಸುಮಾರು ಏಳು ವರ್ಷದಿಂದ, ಫ್ಯಾಶನ್ ಡಿಸೈನರ್ ಆಗಿರುವ ರಕ್ಷಿತಾ ಅವರನ್ನು ರಾಣ ಪ್ರೀತಿಸುತ್ತಿದ್ದು ಎರಡು ಕುಟುಂಬಗಳ ಒಪ್ಪಿಗೆ ಪಡೆದು ಫೆಬ್ರವರಿ 7ನೇ ತಾರೀಕಿಗೆ ಹಸೆಮಣೆ ಏರಲಿದ್ದಾರೆ.
ಅಂದ ಹಾಗೆ ಈ ಹಿಂದೆ ರಾಣ,ಬಾವ ಪ್ರೇಮ್ಸ್ ನಿರ್ದೇಶನದ 'ಏಕ್ ಲವ್ ಯಾ ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿ ನಾಯಕ ನಾಗಿ ಭರವಸೆ ಮೂಡಿಸಿದ್ದರು. ಇತ್ತೀಚೆಗೆ ರಾಣ ಅವರ ಹೊಸ ಚಿತ್ರ ಕೂಡ ಲಾಂಚ್ ಆಗಿದ್ದು ನಿರ್ದೇಶಕ ತರುಣ್ ಸುಧೀರ್ ನಿರ್ಮಿಸುತ್ತಿದ್ದಾರೆ.ನಿಜ ಜೀವನದಲ್ಲಿ ನಡೆದಿರುವ ಕಥೆಯನ್ನು ಆಧರಿಸಿ ಪುನೀತ್ ರಂಗಸ್ವಾಮಿ ನಿರ್ದೇಶಿಸಲಿರುವ ಲವ್ ಥ್ರಿಲರ್ ಚಿತ್ರದಲ್ಲಿ ರಾಣ ವಿಶಿಷ್ಟ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ.
ವಿವಾಹ ಜೀವನಕ್ಕೆ ಕಾಲಿಡುತ್ತಿರುವ ರಾಣಾ ಮತ್ತು ರಕ್ಷಿತಾ ಅವರಿಗೆ ನಮ್ಮ ಶುಭ ಹಾರೈಕೆ.