ಟಾರ್ಟಿಲಾ ಸೂಪ್

ಸಾಮಗ್ರಿ : ಸ್ಟ್ರಿಪ್ಸ್ ಆಗಿ ಕತ್ತರಿಸಿದ 1 ಕಾರ್ನ್‌ ಟಾರ್ಟಿಲಾ, 2 ಟೊಮೇಟೊ, 1 ದೊಡ್ಡ ಈರುಳ್ಳಿ, 3-4 ಎಸಳು ಬೆಳ್ಳುಳ್ಳಿ, 1-2 ಹಸಿಮೆಣಸು, 1 ಲವಂಗದೆಲೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ತುರಿದ ಚೀಸ್‌, ತುಸು ಬೆಣ್ಣೆ, ಕರಿಯಲು ಎಣ್ಣೆ.

ವಿಧಾನ : ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಟಾರ್ಟಿಲಾ ಸ್ಟ್ರಿಪ್ಟ್ ನ್ನು ಕರಿದು ತೆಗೆಯಿರಿ. ನಂತರ ಬಾಣಲೆಯಲ್ಲಿ ಅರ್ಧ ಸೌಟಿಗಿಂತ ಕಡಿಮೆ ಎಣ್ಣೆ ಉಳಿಸಿಕೊಂಡು ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಲವಂಗದೆಲೆ, ಹಸಿಮೆಣಸು, ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, 1 ಲೋಟ ನೀರು ಬೆರೆಸಿ ಮಂದ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. 2 ನಿಮಿಷ ಬಿಟ್ಟು ಕೆಳಗಿಳಿಸಿ. ಲವಂಗದೆಲೆ ಬೇರೆ ಮಾಡಿ. ಇದನ್ನು ತುಸು ಆರಲು ಬಿಟ್ಟು ಮಿಕ್ಸಿಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿ. ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಸೂಪ್‌ ಮಿಶ್ರಣ ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. ಇದನ್ನು ಹಲವು ಕಪ್‌ಗಳಿಗೆ ತುಂಬಿಸಿ, ಟಾರ್ಟಿಲಾ ಸ್ಟ್ರಿಪ್ಸ್ ಮತ್ತು ತುರಿದ ಚೀಸ್‌ ತೇಲಿಬಿಟ್ಟು ಬಿಸಿಬಿಸಿಯಾಗಿ ಸವಿಯಲು ಕೊಡಿ.

ಸ್ವೀಟ್‌ ಪೊಟೇಟೊ ಫ್ರೈಸ್‌

ಸಾಮಗ್ರಿ : 3-4 ಸಿಹಿಗೆಣಸು, 4 ಚಮಚ ಕಾರ್ನ್‌ಫ್ಲೋರ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ಮಸಾಲ, ಗರಂಮಸಾಲ, ಕರಿಯಲು ಎಣ್ಣೆ.

ವಿಧಾನ : ಸಿಹಿ ಗೆಣಸಿನ ಸಿಪ್ಪೆ ಹೆರೆದು, ಚಿತ್ರದಲ್ಲಿರುವಂತೆ ಉದ್ದುದ್ದಕ್ಕೆ ಕತ್ತರಿಸಿ. ಇವನ್ನು ಹೊಂಬಣ್ಣ ಬರುವಂತೆ ಎಣ್ಣೆಯಲ್ಲಿ ಕರಿದು, ಹೆಚ್ಚುವರಿ ಎಣ್ಣೆ ಹೋಗಲಾಡಿಸಲು ಟಿಶ್ಯು ಪೇಪರ್‌ ಮೇಲೆ ಹರಡಿರಿ. ಇದರ ಮೇಲೆ ಲಘುವಾಗಿ ಉಪ್ಪು, ಖಾರ, ಮಸಾಲೆ ಉದುರಿಸಿ ಮಿಶ್ರಗೊಳಿಸಿ. ಇದನ್ನು ನೇರವಾಗಿ ಸಾಸ್‌ ಜೊತೆ ಟೀ ಟೈಂನಲ್ಲಿ ಸವಿಯಿರಿ ಅಥವಾ ಮಾಡಿದ ತಕ್ಷಣ ಪ್ಯಾಕ್‌ ಮಾಡಿ ಮಕ್ಕಳ ಡಬ್ಬಿಗೆ ಹಾಕಿಕೊಡಿ.

ಸಾಮೆ ಅಕ್ಕಿ ದೋಸೆ

ಸಾಮಗ್ರಿ : 1 ಕಪ್‌ ಸಾಮೆ ಅಕ್ಕಿ (ನವಣೆ ಸಿರಿ ಧಾನ್ಯಗಳ ಸ್ಟೋರ್‌ನಲ್ಲಿ ಲಭ್ಯ), 200 ಗ್ರಾಂ ಸೀಮೆಗೆಡ್ಡೆ (ಬೇಯಿಸಿ ಸಿಪ್ಪೆ ಸುಲಿದಿಡಿ), 1-2 ಹಸಿಮೆಣಸು, 2 ಬೇಯಿಸಿ ಮಸೆದ ಆಲೂ, 1-2 ಟೊಮೇಟೊ, ಅರ್ಧ ಕಪ್‌ ಬೆಂದ ಬಟಾಣಿ, ರುಚಿಗೆ ತಕ್ಕಷ್ಟು ಉಪ್ಪು, ಪೆಪ್ಪರ್‌ ಪೌಡರ್‌, ಮೊಸರು, ಗರಂಮಸಾಲ, ದೋಸೆಗೆ ತಕ್ಕಷ್ಟು ಎಣ್ಣೆ.

ವಿಧಾನ : ಹಿಂದಿನ ರಾತ್ರಿ ಸಾಮೆ ಅಕ್ಕಿ ನೆನೆಸಿಡಿ. ಮಾರನೇ ದಿನ ಬೆಳಗ್ಗೆ ಮಸೆದ ಸೀಮೆಗೆಡ್ಡೆ, ಮೊಸರು, ಉಪ್ಪು, ಪೆಪ್ಪರ್‌ ಪೌಡರ್‌, ಚಿಟಕಿ ಇಂಗು ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ಇದನ್ನು ಹಾಗೇ ನೆನೆಯಲು ಬಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಕರಿಬೇವಿನ ಸಮೇತ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಟೊಮೇಟೊ, ಹಸಿ ಮೆಣಸು ಹಾಕಿ ಬಾಡಿಸಿ. ನಂತರ ಬೆಂದ ಬಟಾಣಿ, ಮಸೆದ ಆಲೂ, ಉಪ್ಪು, ಖಾರ, ಗರಂಮಸಾಲ ಹಾಕಿ ಕೆದಕಬೇಕು. ಇದೀಗ ಪಲ್ಯ ರೆಡಿ. ನಂತರ ಒಂದೊಂದಾಗಿ ದೋಸೆ ತಯಾರಿಸಿ, ಎರಡೂ ಬದಿ ಬೇಯಿಸಿ. ನಡುವೆ ಆಲೂ ಪಲ್ಯ ಹರಡಿ, ಬಿಸಿ ಬಿಸಿಯಾಗಿ ಚಟ್ನಿ ಜೊತೆ ಸವಿಯಲು ಕೊಡಿ ಅಥವಾ ರಾಪ್‌ ಮಾಡಿ ಬಾಕ್ಸ್ ಗೆ ಹಾಕಿಕೊಡಿ.

ಕಾರ್ನ್‌ಫ್ಲೇಕ್ಸ್ ಬರ್ಫಿ

ಸಾಮಗ್ರಿ : ಅರ್ಧ ಕಪ್‌ ಕಾರ್ನ್‌ಫ್ಲೇಕ್ಸ್, 8-10 ಹಸಿ ಖರ್ಜೂರ, ಒಂದಿಷ್ಟು ಹುರಿದ ಕಡಲೆಕಾಯಿ ಬೀಜ, ಬೆಲ್ಲ, ತುಪ್ಪ, ಕೊಬ್ಬರಿ, ಏಲಕ್ಕಿಪುಡಿ.

ವಿಧಾನ : ಹಾಲಲ್ಲಿ ನೆನೆಸಿದ ಖರ್ಜೂರ ಪೇಸ್ಟ್ ಮಾಡಿ. ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ಇದರಲ್ಲಿ ಬೆಲ್ಲ ಕರಗಿದಾಗ (ಮಂದ ಉರಿ ಇರಲಿ) ಉಳಿದೆಲ್ಲ ಸಾಮಗ್ರಿ ಹಾಕಿ ಕೆದಕಿ ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಗೆ ಹರಡಿ, ತುಸು ಆರಿದಾಗ ನೀಟಾಗಿ ಬರ್ಫಿ ಕತ್ತರಿಸಿ, ಮಕ್ಕಳಿಗೆ ಕೊಡಿ.

ಬೇಕ್ಡ್ ಕಾರ್ನ್‌ ವಡೆ

ಸಾಮಗ್ರಿ : 2 ಕಪ್‌ ನೆನೆಸಿದ ಕಡಲೆಬೇಳೆ, ಅದರಲ್ಲಿ ಮುಕ್ಕಾಲು ಭಾಗ ಸ್ವೀಟ್‌ ಕಾರ್ನ್‌, ಒಂದಿಷ್ಟು ಹೆಚ್ಚಿದ  ಹಸಿಮೆಣಸು, ಈರುಳ್ಳಿ, ಕೊ.ಸೊಪ್ಪು, ಕರಿಬೇವು, ಶುಂಠಿ, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಸಾಸ್‌, ಕರಿಯಲು ಎಣ್ಣೆ.

ವಿಧಾನ : ಕಡಲೆಬೇಳೆಗೆ ಕಾರ್ನ್‌ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಹೆಚ್ಚಿದ ಎಲ್ಲಾ ಪದಾರ್ಥ ಸೇರಿಸಿ, ಉಪ್ಪು, ಖಾರ ಹಾಕಿ ವಡೆ ಹದಕ್ಕೆ ಕಲಸಿರಿ. ಬೇಕಿಂಗ್‌ ಟ್ರೇಗೆ ಜಿಡ್ಡು ಸವರಿ, ಇದರಿಂದ ಸಣ್ಣ ವಡೆ ತಟ್ಟಿ ಜೋಡಿಸಿಕೊಳ್ಳಿ. ಮೊದಲೇ ಬಿಸಿ ಮಾಡಿದ ಓವನ್‌ನಲ್ಲಿ ಇದನ್ನು ಜೋಡಿಸಿ 180 ಡಿಗ್ರಿ ಶಾಖದಲ್ಲಿ 10 ನಿಮಿಷ ಬೇಕ್‌ ಮಾಡಿ. ಬದಲಾವಣೆಗೆ ಎಣ್ಣೆಯಲ್ಲೂ ಕರಿಯಬಹುದು. ಬಿಸಿ ಇರುವಾಗಲೇ ಸಾಸ್‌ ಜೊತೆ ಸವಿಯಲು ಕೊಡಿ.

ಡೇಟ್ಸ್ ಕೇಕ್

ಸಾಮಗ್ರಿ : 1 ಕಪ್‌ ಹೆಚ್ಚಿದ ಹಸಿ ಖರ್ಜೂರ (ಹಾಲಲ್ಲಿ ನೆನೆಸಿಡಿ), 1 ಕಪ್‌ ಹಾಲು, ಅರ್ಧ ಕಪ್‌ ಸಕ್ಕರೆ, 1 ಕಪ್‌ ಮೈದಾ, ಅರ್ಧ ಕಪ್‌ ತುಪ್ಪ, 1 ಸಣ್ಣ  ಚಮಚ ಬೇಕಿಂಗ್‌ ಪೌಡರ್‌, ಒಂದಿಷ್ಟು ತುಪ್ಪದಲ್ಲಿ ಹುರಿದ ಗೋಡಂಬಿ-ದ್ರಾಕ್ಷಿ ಚೂರು.

ವಿಧಾನ : ನೆನೆಸಿದ ಖರ್ಜೂರ, ಕಾದಾರಿದ ಗಟ್ಟಿ ಹಾಲು, ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ಒಂದು ಬೇಸನ್‌ಗೆ ಜರಡಿಯಾಡಿದ ಮೈದಾ ಹಾಕಿ, ಅದರ ಮೇಲೆ ಖರ್ಜೂರದ ಪೇಸ್ಟ್, ತುಪ್ಪ, ಬೇಕಿಂಗ್‌ ಪೌಡರ್‌ ಬೆರೆಸಿ ಮೃದುವಾದ ಮಿಶ್ರಣ ಕಲಸಿಡಿ. ಕೇಕ್‌ ಟಿನ್‌ಗೆ ಜಿಡ್ಡು ಸವರಿ, ಮೈದಾ ಡಸ್ಟ್ ಮಾಡಿ. ಅದಕ್ಕೆ ಅರ್ಧರ್ಧ ಭಾಗ ಮಿಶ್ರಣ ತುಂಬಿಸಿ ಒಳಗೆ ಗೋಡಂಬಿ, ದ್ರಾಕ್ಷಿ ಹುದುಗಿಸಿ. ಮೊದಲೇ ಪ್ರೀಹೀಟ್‌ ಮಾಡಿದ ಓವನ್‌ನಲ್ಲಿ ಇದನ್ನು 160 ಡಿಗ್ರಿ ಶಾಖದಲ್ಲಿ 20-25 ನಿಮಿಷ ಬೇಕ್‌ ಮಾಡಿ ನೀಟಾಗಿ ಕತ್ತರಿಸಿ, ಹಾಟ್‌ ಚಾಕಲೇಟ್‌ ಜೊತೆ ಸರ್ವ್ ಮಾಡಿ.

ಫ್ರೂಟ್‌ ಕ್ರಂಬ್ಸ್

ಸಾಮಗ್ರಿ : ಮಾಗಿದ 2 ಸೇಬು, 1 ಚಮಚ ನಿಂಬೆರಸ, ಅರ್ಧ ಚಮಚ ದಾಲ್ಚಿನ್ನಿ ಪೌಡರ್‌, ಅರ್ಧ ಕಪ್‌ ತುರಿದ ಬೆಲ್ಲ, 4 ಚಮಚ ಸಕ್ಕರೆ, 1 ಕಪ್‌ ತುಪ್ಪದಲ್ಲಿ ಹುರಿದ ಓಟ್ಸ್, ಅರ್ಧ ಸೌಟು ಬೆಣ್ಣೆ, ತುಸು ಗೋಡಂಬಿ-ದ್ರಾಕ್ಷಿ.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿ. ಮಂದ ಉರಿಯಲ್ಲಿ ಇದಕ್ಕೆ ಓಟ್ಸ್ ಹಾಕಿ ಹುರಿಯಿರಿ. ಆಮೇಲೆ ಸಿಪ್ಪೆ ಹೆರೆದು ತುರಿದ ಸೇಬು, ಬೆಲ್ಲ, ಸಕ್ಕರೆ ಹಾಕಿ ಕೆದಕಬೇಕು. ಮಧ್ಯೆ ಮಧ್ಯೆ ಬೆಣ್ಣೆ ಬೆರೆಸುತ್ತಿರಿ. ತುಸು ಗೋಡಂಬಿ-ದ್ರಾಕ್ಷಿ ಹಾಕಿ ಹುರಿದು ಕೆಳಗಿಳಿಸಿ. ಬೆಣ್ಣೆ ಸವರಿದ ಬೇಕಿಂಗ್‌ ಟ್ರೇಗೆ ಇದನ್ನು ಹರಡಿ, ಮೇಲೆ ಹೆಚ್ಚು ಗೋಡಂಬಿ-ದ್ರಾಕ್ಷಿ ಹಾಕಿ, ಮತ್ತೆ ಬೆಣ್ಣೆ ಹಾಕಿ, 180 ಡಿಗ್ರಿ ಶಾಖದಲ್ಲಿ 25-30 ನಿಮಿಷ ಬೇಕ್‌ ಮಾಡಿ. ಇದೀಗ ಕ್ರಂಬ್ಸ್ ರೆಡಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ