ಸಮಾಜ ಇಷ್ಟು ಅಸಹಾಯಕ ಏಕೆ?
47 ವರ್ಷದ ಒಬ್ಬ ನಡುವಯಸ್ಸಿನ ವ್ಯಕ್ತಿ 4 ವರ್ಷದ ಹಸುಗೂಸನ್ನು ಚಾಕಲೇಟ್ ಆಮಿಷವೊಡ್ಡಿ ಸೈಕಲ್‌ನಲ್ಲಿ ಸವಾರಿ ಕರೆದೊಯ್ದು, ದೂರ ಪ್ರದೇಶದಲ್ಲಿ ಅದರ ಮೇಲೆ ಅತ್ಯಾಚಾರ ಮಾಡಿ, ಸಾಕ್ಷ್ಯಾಧಾರ ಸಿಗದಂತೆ ಕಲ್ಲಿನಿಂದ ಅದರ ತಲೆ ಜಜ್ಜಿಹಾಕಿದರೆ ಇದಕ್ಕಿಂತ ಬರ್ಬರ ಕೃತ್ಯ ಮತ್ತೊಂದಿರಲು ಸಾಧ್ಯವೇ? ಆದರೆ ಕಾಮತೃಷೆ ಯಾವ ಹೀನಾಯ ಮಟ್ಟ ಮುಟ್ಟುತ್ತದೆಂದರೆ ಅದು ಬಹಿರಂಗವಾಗಿಯೇ ಬಿಂಬಿಸಲ್ಪಡುತ್ತದೆ. ಯಾರು ಹಿಂಸಕ, ಕ್ರೂರಿ, ಅಶಿಕ್ಷಿತ ಅಲ್ಲವೋ ಅಂಥವರಿಂದಲೂ ಹೀಗಾಗಲು ಸಾಧ್ಯವಿದೆ.
ಇಷ್ಟಕ್ಕೂ ಆ ಮಗು ಈ ಪಾಪಿಯ ಪರಿಚಿತರ ಕೂಸು. ಇವನನ್ನು ಮಾಮ ಎನ್ನುತ್ತಾ ಸಲುಗೆ ವಹಿಸಿರಬಹುದು. ಈ ಪಾಪಿ ಅಂಥ ಮುಗ್ಧ ಮಗುವಿನ ಮೇಲೆ ಪೈಶಾಚಿಕ ಅತ್ಯಾಚಾರ ಮಾಡಿದ್ದಲ್ಲದೆ, ಅದು ದೂರಬಾರದೆಂದು ಅತಿ ಕ್ರೂರವಾಗಿ ಅದರ ತಲೆ ಜಜ್ಜಿ ಕೊಲೆ ಮಾಡಿದ್ದಾನೆ. ಇದಕ್ಕಿಂತಲೂ ಅತಿ ದುಃಖದ ವಿಷಯವೆಂದರೆ ಅವನು ತನ್ನನ್ನು ತಾನು ಇನ್ನೂ ಸಂಭಾವಿತನೆಂದೇ ಬಿಂಬಿಸಿಕೊಳ್ಳಲು ಯತ್ನಿಸಿದ್ದು, ತನಗೆ ಒದಗಬಹುದಾದ ಮೃತ್ಯುದಂಡನೆಯಿಂದ ಮಾಫಿ ಪಡೆಯಲು, ಇವನನ್ನು ಸೆರೆಮನೆಗೆ ತಳ್ಳಿದಾಗ, ಅಪರಾಧಿಗಳ ವರ್ತನೆಯಲ್ಲಿ ಸುಧಾರಣೆ ತರಲು ಇರುವಂಥ, ಇಂದಿರಾಗಾಂಧಿ ಓಪನ್ ಯೂನಿರ್ಸಿಟಿಯ ಪರೀಕ್ಷೆಗೆ ಹಾಜರಾಗಿ, ಡ್ರಾಯಿಂಗ್ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದ. ಅಂದರೆ ಈ ಅಪರಾಧಿ ಇಂಥ ಹೇಯಕೃತ್ಯದ ನಂತರ ನೇಣುಗಂಬ ಏರುವುದರಿಂದ ತಪ್ಪಿಸಿಕೊಳ್ಳಲು ಮಾಡಬಾರದ ಪ್ರಯತ್ನಗಳನ್ನೆಲ್ಲಾ ಮಾಡುತ್ತಿದ್ದಾನೆ.
ಸುಮಾರು 8 ವರ್ಷಗಳ ನಂತರ ಅವನ ಕಡೆಯಿಂದ ಬಂದಿದ್ದ ಕೊನೆಯ ಅಪೀಲ್‌ನ್ನು ತಿರಸ್ಕರಿಸಲಾಯಿತು. ಆದರೆ ಇವನನ್ನು ಯಾವಾಗ ನೇಣಿಗೇರಿಸುತ್ತಾರೆ....? ಅದಂತೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಅದಕ್ಕೆ ಮತ್ತೆ 4-5 ವರ್ಷಗಳ ಕಾಲಾವಕಾಶ ಹಿಡಿದರೂ ಆಶ್ಚರ್ಯವೇನಿಲ್ಲ.
ಯಾರು ಇಂಥ ಅತ್ಯಾಚಾರ ಎಸಗಿದ ಪಾಪಿಗಳಿಗೆ ತಕ್ಷಣ ಗಲ್ಲುಶಿಕ್ಷೆ ಆಗಬೇಕೆಂದು ಬೇಡಿಕೆ ಇರಿಸುತ್ತಾರೋ, ಅಂಥವರು ತಾಳ್ಮೆಯಿಂದ ವರ್ಷಗಟ್ಟಲೇ ಕಾಯಬೇಕಾಗಿರುವುದು ನಮ್ಮ ಕಾನೂನಿನ ಕ್ರಮವಾಗಿದೆ. ಕಾನೂನು ತನ್ನ ಕೈಚಳಕವನ್ನು ಸರಿಯಾಗಿಯೇ ತೋರುತ್ತಿದ್ದರೂ, ಇಂಥವರಿಗೆ ಶಿಕ್ಷೆ ಆಗುವಷ್ಟರಲ್ಲಿ ಎಷ್ಟೋ ವರ್ಷ ಕಳೆದಿರುತ್ತದೆ. ಸಾಮಾನ್ಯವಾಗಿ ಅಪರಾಧಿ ಜೇಲು ಸೇರಿದ ಮೇಲೆ, ಕೋರ್ಟುಗಳಲ್ಲಿ ಅಪರಾಧ ಸಾಬೀತುಪಡಿಸಬೇಕಿರುವ ಪೊಲೀಸ್ ಹಾಗೂ ವಕೀಲರ ಸಣ್ಣಪುಟ್ಟ ದೋಷಗಳಿಂದಾಗಿ ಇವರಿಗೆ ಲಾಭ ಆಗಿ, ಶಿಕ್ಷೆ ಇನ್ನೂ ಮುಂದೂಡಲ್ಪಡುತ್ತದೆ.
ಅಪರಾಧಿ ಮೊದಲು ಸೆಶನ್ ಕೋರ್ಟ್ ನಂತರ ಹೈಕೋರ್ಟ್, ಸಿಂಗಲ್ ಜಡ್ಜ್ ಹೈ ಕೋರ್ಟ್ ನಂತರ ಡಿವಿಷನ್ ಬೆಂಚ್ ಹಾಗೂ ಹೈಕೋರ್ಟ್ ನಂತರ ಸುಪ್ರೀಂಕೋರ್ಟ್ ಮತ್ತು ಎಷ್ಟೋ ಸಲ ಸುಪ್ರೀಂಕೋರ್ಟ್‌ನ ಆದೇಶಕ್ಕೆ ಪಿಟೀಶನ್ ಸಲ್ಲಿಸುತ್ತಾ ಇರುತ್ತಾರೆ. ಇಷ್ಟೆಲ್ಲ ಅಪರಾಧ ಮಾಡಿದ್ದರೂ ತಮ್ಮನ್ನು ತಾವು ಮುಗ್ಧರೆಂದು ಸಾಬೀತುಪಡಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ.
ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಈ ಅಪರಾಧಿ ಬಸಂತ್ ಸಂಪತ್‌ನ ಕುಟುಂಬದ ಬಳಿ ಅಪೀಲ್ ಮೇಲೆ ಅಪೀಲ್‌ಗೆ ಮೊರೆಹೋಗಲು ಅಷ್ಟು ರಾಶಿ ಹಣ ಎಲ್ಲಿಂದ ಬಂತು? ಇದಂತೂ ಗೊತ್ತಿಲ್ಲ.
ಏಕೆಂದರೆ ಅಪರಾಧ ನಡೆದ ದಿನ ಇವನು ಆ ಹಸುಗೂಸನ್ನು ಸೈಕಲ್‌ನಲ್ಲೇ ಕರೆದೊಯ್ದಿದ್ದ, ಅಂದರೆ ಬೈಕ್‌ವುಳ್ಳವನೂ ಅಲ್ಲ.... ಹಾಗಿದ್ದೂ ಇಂಥ ಅಮಾನವೀಯ ಅಪರಾಧ ಮಾಡಿದ ವ್ಯಕ್ತಿಯನ್ನು ಉಳಿಸಿಕೊಳ್ಳೋಣ ಎಂದು ಅವನ ಮನೆಯವರು ಲಕ್ಷಾಂತರ ಹಣ ಖರ್ಚು ಮಾಡಿ ವರ್ಷಗಟ್ಟಲೇ ಕೇಸ್ ಎಳೆದಾಡಿದ್ದಾರೆ.