ಚೀನಾದ ಪ್ರವಾಸಕ್ಕೆ ಹೋದಾಗ ಐದು ವರ್ಷಗಳ ಹಿಂದೆ ದೃಶ್ಯವಾಹಿನಿಯಲ್ಲಿ ನೋಡಿದ ಅಲ್ಲಿನ ಒಲಿಂಪಿಕ್ ಸ್ಟೇಡಿಯಂ ಮತ್ತು ಆಗ ನಡೆದ ಅದ್ವಿತೀಯ ಉದ್ಘಾಟನಾ ಸಮಾರಂಭ ನೆನಪಿಗೆ ಬಂದಿತು. ಇಡೀ ವಿಶ್ವದ ಮನ ಗೆದ್ದ, ಎಲ್ಲರಿಂದ ಪ್ರಶಂಸೆಗೆ ಒಳಗಾದ ರಂಗು ರಂಗಿನ ಬೆಳಕಿನೋಕುಳಿಯಾಟದ ಸಮಾರಂಭ ನಡೆದ ಆ ಸ್ಥಳವನ್ನು ನೋಡಲೇಬೇಕೆನಿಸಿತು. ಜೀವನದಲ್ಲಿ ಒಮ್ಮೆಯಾದರೂ ಇಂತಹುದನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ಆಸೆಯಾಗಿತ್ತು. ಮಗನ ಕೈಲಿ ಹೇಳಿದ್ದಕ್ಕೆ ನಿನಗೆ ಬಹಳ ಸಣ್ಣ ಆಸೆಗಳೇ ಅಮ್ಮಾ, ಒಡವೆ ಬೇಡಾಂತೀಯಾ ಆದರೆ ವಿದೇಶ ಸುತ್ತೋಕೆ ಹೋಗ್ತೀಯಾ, ಚಿನ್ನಕ್ಕಿಂತ ದುಬಾರಿಯಿದು, ಎಂದು ನಗೆಚಾಟಿಕೆಯಾಡಿದ. ಸಮಾರಂಭವನ್ನಲ್ಲದಿದ್ದರೂ ಸುಮ್ಮನೆಯಾದರೂ ಅಲ್ಲಿನ ಗೂಡಿನಾಕಾರದಲ್ಲಿರುವ ಒಲಿಂಪಿಕ್ ಸ್ಟೇಡಿಯಮ್ ನ್ನು ನೋಡಬೇಕೆನಿಸಿತು. ಅದರ ಮುಂದೆ ಹೋಗಿ ನಿಂತಾಗ ಅದರ ಬೃಹದಾಕಾರದ ಮುಂದೆ ನಾವೆಷ್ಟು ಕುಬ್ಜರೆನಿಸಿತು.
ಒಲಿಂಪಿಕ್ ಕ್ರೀಡೆಗಳು ಮುಗಿದು ಐದು ವರ್ಷಗಳಾದರೂ ಇನ್ನೂ ಹೊಚ್ಚ ಹೊಸದರಂತೆ ನಿರ್ವಹಣೆ ಮಾಡಲಾಗಿದೆ.
ಚೀನಾದಲ್ಲಿ ಒಲಿಂಪಿಕ್ ಕ್ರೀಡೆ ನಡೆಸುವುದು 2008ಕ್ಕೆ ಎಂದು ನಿರ್ಧಾರವಾಗಿದ್ದರೂ ಇದರ ತಯಾರಿ 2003ರಿಂದಲೇ ಆರಂಭವಾಯಿತು. ಹಕ್ಕಿಯ ಗೂಡಿನಾಕಾರದಲ್ಲಿರಬೇಕು ಎಂದು ನಿರ್ಧಾರವಾದಾಗ ಮೊದಲಿಗೆ ಕಬ್ಬಿಣದ ಬೀಮ್ ಗಳಿಂದ ಬೇಕಾದಾಗ ತೆರೆದುಕೊಳ್ಳುವಂತಹ ಅಥವಾ ಮುಚ್ಚಿಕೊಳ್ಳುವ ರಿಟ್ರಾಕ್ಟೆಬಲ್ ಸೂರನ್ನು ನಿರ್ಮಿಸುವುದೆಂದಾಯಿತು. ಡಿಸೆಂಬರ್‌ರಲ್ಲಿ ಭೂಮಿ ಪೂಜೆ ಮಾಡಿ 2008ರ ಜೂನ್‌ನಲ್ಲಿ ಬಿಡುಗಡೆ ಮಾಡಲಾಯಿತು.
ಅಷ್ಟೊಂದು ದೀರ್ಘ ಕಾಲದ ಅವಧಿಯಲ್ಲಿ ನಿಧಾನವಾಗಿ ರೂಪುಗೊಂಡಿದ್ದರಿಂದಲೋ ಏನೋ ಅದು ಅಷ್ಟು ಸುಂದರ ಮತ್ತು ಗಟ್ಟಿಯಾಗಿ ನಿರ್ಮಾಣಗೊಂಡಿದ್ದು, ತೆರೆಯುವಂತಹ ಸೂರೆಂದು ನಿರ್ಧಾರಾದದ್ದು, ನಂತರ ಬೀಜಿಂಗ್‌ನ ಚಾರ್ಲ್ಸ್ ಡೀ ಗಾಲ್ ವಿಮಾನ ನಿಲ್ದಾಣದ ಸೂರು ಕುಸಿದಾಗ ಸರ್ಕಾರ ತನ್ನ ಎಲ್ಲಾ ಯೋಜನೆಗಳ ಮರು ವಿಮರ್ಶೆ ಮಾಡಿತು. ಆಗ ಬೇಕೆಂದಾಗ ತೆರೆಯುವಂತಹ ಸೂರಿನ ನಿರ್ಮಾಣದ ನಿರ್ಧಾರವನ್ನು ಬದಲಿಸಲಾಯಿತು. ಮೇಲೆ ವೃತ್ತಾಕಾರವಾಗಿ ಸೂರು ತೆರೆದೇ ಇರುವಂತಹುದರ ನಿರ್ಮಾಣವಾದಾಗ ಕಡಿಮೆ ಕಬ್ಬಿಣದ ಬಳಕೆಯಾಗಿ ನಿರ್ಮಾಣದ ವೆಚ್ಚದಲ್ಲೂ ಉಳಿತಾಯವಾಯಿತು.
ಮೊದಲಿಗೆ 500 ಮಿಲಿಯನ್ ಡಾಲರ್ ಇದ್ದದ್ದು ನಂತರ 290 ಮಿಲಿಯನ್ ಡಾಲರ್ ಸಾಕಾಯಿತು.
ಕಬ್ಬಿಣದ ಬೀಮ್ ಗಳಿಂದ ಗೂಡಿನಾಕಾರದಲ್ಲಿ ರೂಪುಗೊಂಡ ಸ್ಟೇಡಿಯಂ ಆಕರ್ಷಕವಾಗಿದೆ. ವಿನ್ಯಾಸಕಾರರ ಕುಶಲತೆಯನ್ನು ಎತ್ತಿತೋರುತ್ತದೆ. ಆಗ ಬಳಕೆಗೆಂದು ತಂದಿರಿಸಿದ ಮೊಬೈಲ್ ಶೌಚಾಲಯಗಳು ಈಗಲೂ ಅಚ್ಚುಕಟ್ಟಾಗಿದ್ದು ಬಳಸಲು ಸರವಾಗವೆನಿಸುತ್ತವೆ.
ಪೂರ್ವ ಮತ್ತು ಪಶ್ಚಿಮದ ಕೋನಗಳು ಉತ್ತರ ಮತ್ತು ದಕ್ಷಿಣದಕ್ಕಿಂತ ಸ್ವಲ್ಪ ಎತ್ತರವಾಗಿದ್ದು ಆಕರ್ಷಕ ನೋಟವನ್ನು ನೀಡುತ್ತವೆ.
ದಿನದ 24 ಗಂಟೆಗಳೂ ಮಳೆ ನೀರನ್ನು ಸಂಗ್ರಹಿಸುವ ತಾಣವನ್ನು ಹತ್ತಿರದಲ್ಲೇ ಮೂಡಿಸಲಾಗಿದೆ. ಅದನ್ನು ಶುದ್ಧೀಕರಿಸಿದ ನಂತರ ಪೂರ್ಣವಾಗಿ ಬಳಸಲಾಗುತ್ತದೆ. ಆಡು ತಾಣಗಳ ಕೆಳಗೆ ಪೈಪ್‌ಗಳನ್ನು ಅಳವಡಿಸಲಾಗಿದ್ದು ಚಳಿಗಾಲದಲ್ಲಿ ಬೆಚ್ಚಗಿರುವಂತೆಯೂ ಮತ್ತು ಬೇಸಿಗೆಯಲ್ಲಿ ತಂಪಾಗಿರುವ ಕಾರ್ಯವನ್ನು ಸಮರ್ಥವಾಗಿ ಮಾಡುತ್ತದೆ. ಮೊದಲಿಗೆ 1 ಲಕ್ಷ ಜನರು ಕುಳಿತುಕೊಳ್ಳುವಂತೆ ರೂಪಿಸಲಾಗಿತ್ತು. ನಂತರ ಬದಲಾವಣೆಗಳಿಗೆ ಅನುಗುಣವಾಗಿ 9 ಸಾವಿರ ಸೀಟುಗಳನ್ನು ಕಡಿತಗೊಳಿಸಲಾಗಿ ಒಲಿಂಪಿಕ್ಸ್ ನ ನಂತರ 11 ಸಾವಿರ ತಾತ್ಕಾಲಿಕ ಆಸನಗಳನ್ನು ತೆಗೆದ ಮೇಲೆ ಈಗ 80 ಸಾವಿರ ಜನ ಕುಳಿತುಕೊಳ್ಳಬಹುದಾಗಿದೆ.