ಅಷ್ಟೇನೂ ಎತ್ತರವಲ್ಲದ ಕಲ್ಲು ಬಂಡೆಯಿಂದ, ಹಸಿರು ಮುಕ್ಕಳಿಸುವ ವನರಾಶಿಗಳ ಮಧ್ಯದಿಂದ ಹರಿದು ಕೆಳಗೆ ಧುಮುಕುವ ಆ ಜಲರಾಶಿಯು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ! ಕಾಡಿನ ಮಧ್ಯದಲ್ಲಿ ಸದ್ದು ಗದ್ದಲವಿಲ್ಲದೇ ಬೀಳುವ ಈ ಸಿರಿಮನೆ ಜಲಪಾತವನ್ನು ನೋಡಲು ಎರಡು ಕಣ್ಣುಗಳೂ ಸಾಲುವುದಿಲ್ಲ. ಅದರ ರೂಪರಾಶಿಯನ್ನು ನೋಡಲು ಪಾಟಿಗೆಗಳನ್ನಿಳಿದು ಕೆಳಗೆ ಹೋಗಬೇಕು. ಆಹಾ... ಆಹಾ...! ಆ ಸೌಂದರ್ಯ ರಾಣಿಯನ್ನು ನೋಡಿದಾಗ ನಿಬ್ಬೆರಗಾಗಿ ಪ್ರಪಂಚವನ್ನು ಮರೆತುಬಿಡುತ್ತೇವೆ.

ಚಿಕ್ಕಮಗಳೂರು ಜಿಲ್ಲೆಯ ನಿಸರ್ಗದ ಮಡಿಲಿನ ತುಂಗೆಯ ದಡದಲ್ಲಿ ಪಡಿಸಿದ ಶಾರದಾದೇವಿ ಸಾನ್ನಿಧ್ಯದ ಶೃಂಗೇರಿಯಿಂದ ಸುಮಾರು 17 ಕಿ.ಮೀ. ದೂರದಲ್ಲಿರುವ ಸಿರಿಮನೆ ಜಲಪಾತ ಆಕರ್ಷಣೆಯ ತಾಣ. ಅಲ್ಲಿಗೆ ಹೋಗಲು ಹಸಿರು ಕಾಡನ್ನು ಸೀಳಿಹೋಗುವ ರಸ್ತೆಯಲ್ಲಿ ಋಷ್ಯಶೃಂಗ ಮುನಿಯ ಕಿಗ್ಗ ಕ್ಷೇತ್ರದವರೆಗೆ ಬಲು ಸಲೀಸಾಗಿ ಹೋಗಬಹುದು. ಏಕೆಂದರೆ ಅಲ್ಲಿಯವರೆಗೆ ವಾಹನದ ವ್ಯವಸ್ಥೆ ಇದೆ. ಅಲ್ಲಿಂದ ಜಲಪಾತವನ್ನು ತಲುಪಲು 7 ಕಿ.ಮೀ.ನ್ನು ಮಾತ್ರ ಯಾವುದಾದರೂ ವಾಹನವನ್ನು ಮಾಡಿಕೊಂಡೇ ಹೋಗಬೇಕು. ಅದೂ ಇಕ್ಕಟ್ಟಾದ ಕಾಡಿನ ದಾರಿಯ ಮೂಲಕ. ಅಲ್ಲಿ ಪಕ್ಕದಲ್ಲಿರುವ ಪ್ರಪಾತವನ್ನು ನೋಡಿದರೆ ಭಯ ಹುಟ್ಟುತ್ತದೆ.

ಈ ರಸ್ತೆಯಲ್ಲಿ ದಾರಿಯನ್ನು ಕ್ರಮಿಸಿ ಸಮತಟ್ಟಾದ ಬಯಲಿನಲ್ಲಿ ನಿಂತಾಗ ಇಲ್ಲೆಲ್ಲಿ ಜಲಪಾತವಿದೆ? ಎಂದು ಅನಿಸುತ್ತದೆ. ಆದರೆ  ಸಮತಟ್ಟಾದ ನೆಲದಿಂದ ಕೆಳಗೆ ಸುಮಾರು 100-150 ಮೆಟ್ಟಿಲನ್ನು ಇಳಿದರೆ ಸುಂದರವಾದ ಸ್ಛಟಿಕದಂಥ ಜಲರಾಶಿಯು ಶಿವನ ಜಡೆಯಿಂದ ಶಾಂತವಾಗಿ, ನಿಧಾನವಾಗಿ ಕಲ್ಲುಗಳಿಂದ ಸುಮಾರು 50 ಅಡಿ ಎತ್ತರದಿಂದ ಜಲಪಾತವಾಗಿ ಹರಿದು ಬರುತ್ತಾಳೊ ಎನ್ನುವಂತೆ ಭಾಸವಾಗುತ್ತದೆ. ನೋಡುಗರಿಗೆ ಅದು ದಿವ್ಯವಾದ ಅನುಭೂತಿಯನ್ನೇ ನೀಡುತ್ತದೆ.

ಸಿರಿಮನೆ ಎನ್ನುವ ಊರಿನ ಪಕ್ಕದಲ್ಲಿರುವುದರಿಂದ ಈ ಜಲಪಾತಕ್ಕೆ ಹೀಗೆ ಹೆಸರು ಬಂದಿದೆಯಂತೆ, ನಿಜಕ್ಕೂ ಆ ಊರಿನಿಂದ ಇದಕ್ಕೆ ಆ ಹೆಸರು ಬಂದಿದೆಯೋ ಬಿಟ್ಟಿದೆಯೋ ಗೊತ್ತಿಲ್ಲ. ಆದರೆ ಹೆಸರೇ ಹೇಳುವಂತೆ ಇದು ಸಂಪತ್ತಿನ ಸಿರಿಮನೆಯೇ ಸೈ. ಅಲ್ಲಿಗೆ ಹೋದರೆ ಸಾಕು ಎಲ್ಲವನ್ನೂ ಮರೆಯುತ್ತೇವೆ, ನಿಬ್ಬೆರಗಾಗಿ ತಲ್ಲೀನತೆಗೆ ಒಳಗಾಗುತ್ತೇವೆ. ಸಿರಿಮನೆ ಎನ್ನುವುದು ಇಲ್ಲಿರುವ ಮನೆತನದ ಹೆಸರು. ಜಲಪಾತದ ಸನಿಹದಲ್ಲಿ ಬೆರಳೆಣಿಕೆಯಷ್ಟು ಮನೆಗಳಿದ್ದು, ಈ ಜಲಪಾತದಿಂದ ಈ ಊರಿನವರು ತಮ್ಮೂರಿಗೆ ಬೇಕಾಗುವಷ್ಟು ವಿದ್ಯುತ್ತನ್ನು ಪಡೆದುಕೊಳ್ಳಲು ಪರ್ಯಾಯ ವ್ಯವಸ್ಥೆಗಾಗಿ ಸಣ್ಣದಾದ ಜಲವಿದ್ಯುತ್‌ ಘಟಕನ್ನು ಸ್ಥಾಪಿಸಿಕೊಂಡಿದ್ದಾರೆ, ಇದು ನಿಜಕ್ಕೂ ಮಾದರಿ ಕೆಲಸ.

ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಸಿರಿಮನೆ ಜಲಪಾತದಿಂದ ಕಾಡಿನಲ್ಲಿ 34 ಕಿ.ಮೀ.ಗಳ ಅನತಿ ದೂರದಲ್ಲಿ ಇನ್ನೊಂದು ಪುಟ್ಟದಾದ ಮಗೆಬೈಲ್ ಜಲಪಾತವಿದೆ. ಹಸಿರು ಚಿಮ್ಮುತ್ತಿರುವ ದಟ್ಟ ಕಾಡಿನಲ್ಲಿ ಈ ಜಲಪಾತಗಳನ್ನು ನೋಡುತ್ತಾ ಸಂಚರಿಸುವ ಅನುಭವ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ಮಾರ್ಗ ಸೂಚಿ ಶೃಂಗೇರಿಯಿಂದ ಕಿಗ್ಗ ಎನ್ನುವ ಸ್ಥಳದವರೆಗೆ ಸಾಕಷ್ಟು ಬಸ್ಸಿನ ಸೌಲಭ್ಯವಿದೆ. ಅಲ್ಲಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಈ ಜಲಪಾತಕ್ಕೆ ಹೋಗಲು ಮಣ್ಣಿನ ಕಚ್ಚಾ ರಸ್ತೆ ಇದೆ. ಸ್ವಂತ ವಾಹನವಿದ್ದರೆ ಒಳ್ಳೆಯದು. ಇಲ್ಲವೇ ಅಲ್ಲಿ ಸಿಗುವ ವಾಹನವನ್ನು ಬಾಡಿಗೆಗೆ ಪಡೆದುಕೊಂಡು ಹೋಗಿಬರಬಹುದು. ಚಾರಣ ಮಾಡುವವರಾದರೆ ಇದು ಅವರಿಗೆ ಹೇಳಿಮಾಡಿಸಿದ ಸ್ಥಳವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ