ಆಸ್ಟ್ರೇಲಿಯಾದಲ್ಲಿ ಬೆಂಗಳೂರು ಮೂಲದ ಐಟಿ ಉದ್ಯೋಗಿ ಪ್ರಭಾ ಅರುಣ್‌ ಕುಮಾರ್‌ರ ಮೇಲೆ ಅಜ್ಞಾತ ವ್ಯಕ್ತಿಗಳು ಹಲ್ಲೆ ನಡೆಸಿ ಕೊಲೆಗೈದ ಘಟನೆಯೊಂದು ಘಟಿಸಿತು. ಈ ಘಟನೆಯಿಂದಾಗಿ ಮಹಿಳೆಯರ ಸುರಕ್ಷತೆಯ ಬಗ್ಗೆ ಚರ್ಚೆ ಮತ್ತೊಮ್ಮೆ ಆರಂಭವಾಗಿದೆ.

ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ಕಡೆಯೂ ಇಂತಹ ಅನೇಕ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ.

ಸ್ವಲ್ಪ ದಿನ ಟಿ.ವಿ., ಪತ್ರಿಕೆಗಳಲ್ಲಿ ಚರ್ಚೆಯ ಬಳಿಕ ಆ ವಿಷಯ ಮರೆತೇ ಹೋಗಿಬಿಡುತ್ತದೆ. ಹಾಗಂತ ಮೈಮರೆತು ಎಚ್ಚರ ತಪ್ಪುವುದು ಸರಿಯಲ್ಲ. ನಮ್ಮ ಸುರಕ್ಷತೆಯ ಬಗ್ಗೆ ನಮಗೆ ಸಾಧ್ಯವಿದ್ದಷ್ಟು ಗಮನವಿರಬೇಕು.

ಹದಿಹರೆಯದವರು, ಯುವತಿಯರು, ವಿವಾಹಿತೆಯರು ಸಂಕಷ್ಟದ ಸಮಯದಲ್ಲಿ ಏನೇನು ಮಾಡಿದರೆ ತಾವು ಸುರಕ್ಷಿತವಾಗಿರಬಹುದು ಎಂಬುದನ್ನು ಮೊದಲೇ ತಿಳಿದುಕೊಂಡಿರಬೇಕು.ಯಾವುದೇ ಅನಪೇಕ್ಷಿತ ಘಟನೆಗಳು ನಡೆದಾಗ ಯುವತಿಯರಿಗೆ ಕೈಕಾಲುಗಳು ಆಡುವುದೇ ಇಲ್ಲ. ಕೆಲವು ಎಚ್ಚರಿಕೆಗಳು, ಸುರಕ್ಷತೆಯ ಉಪಾಯಗಳನ್ನು ಅನುಸರಿಸಿದರೆ ಅಂತಹ ಸ್ಥಿತಿಯಿಂದ ಬಚಾವಾಗಬಹುದು.

ಸ್ನೇಹ ಎಲ್ಲೇ ಮೀರದಿರಲಿ

ಶೈಕ್ಷಣಿಕ ಅವಕಾಶಗಳು ಹೆಚ್ಚಿರುವುದು, ಹಾಗೂ ಸಾಮಾಜಿಕ ಬದಲಾವಣೆಗಳಿಂದಾಗಿ ಇಂದಿನ ದಿನಗಳಲ್ಲಿ ಹುಡುಗ ಹುಡುಗಿಯರಲ್ಲಿ ಸ್ನೇಹ ಸಹಜವೇ ಆಗಿದೆ. ಆಧುನಿಕ ಕುಟುಂಬಗಳು ಇದನ್ನು ತಪ್ಪು ಎಂದು ತಿಳಿಯುವುದಿಲ್ಲ. ಆದರೆ ಒಂದು ಸಂಗತಿ ಗಮನದಲ್ಲಿರಲಿ. ಸ್ನೇಹ ಅಂದರೆ ನಿಸ್ವಾರ್ಥದಿಂದ ಕೂಡಿದ್ದಾಗಿರಬೇಕು. ಸಹಾಯ ಮಾಡುವ ಮನೋಭಾವ ಇರಬೇಕು. ಆದರೆ ಬಹಳಷ್ಟು ಹುಡುಗರು ಸ್ನೇಹವನ್ನು ಸೆಕ್ಸ್ ಜೊತೆಗೆ ಲಿಂಕ್‌ ಮಾಡಿ ನೋಡುತ್ತಾರೆ. ಹುಡುಗರ ಜೊತೆಗೆ ಸ್ನೇಹ ಮಾಡುವಾಗ ಕೆಳಕಂಡ ಸಂಗತಿಗಳ ಬಗ್ಗೆ ಅವಶ್ಯವಾಗಿ ಗಮನಕೊಡಿ:

ಆರಂಭದಲ್ಲಿಯೇ ಸ್ನೇಹಿತನ ಜೊತೆ ಹೆಚ್ಚು ಮುಕ್ತವಾಗಿ ವರ್ತಿಸದಿರಿ. ನಿಮ್ಮ ಕುಟುಂಬದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಅವನ ಮುಂದೆ ಹೇಳಿಬಿಡುವುದು ಸರ್ವಥಾ ಒಳ್ಳೆಯದಲ್ಲ.  ಯೋಚಿಸಿ, ವಿಚಾರ ವಿಮರ್ಶೆ ಮಾಡಿ ಮುಂದುರಿಯುವುದು ಒಳ್ಳೆಯದು.

ಆರಂಭದಲ್ಲಿಯೇ ನಿಮ್ಮ  ಸ್ನೇಹದ ಇತಿಮಿತಿ ಸ್ಪಷ್ಟಪಡಿಸುವುದು ಒಳ್ಳೆಯದು.

ಸಂದರ್ಭ ಬಂದರೆ ಒಂದು ಸಲ ನಿಮ್ಮ ಸ್ನೇಹಿತನನ್ನು ಅಮ್ಮಅಪ್ಪನಿಗೆ ಭೇಟಿ ಮಾಡಿಸಿ.

ನಿಮ್ಮ ಸ್ನೇಹಿತನ ಜೊತೆ ಯಾವುದಾದರೂ ಏಕಾಂತದ ಸ್ಥಳಕ್ಕೆ ಹೋಗುವ ಅಪಾಯ ತಂದುಕೊಳ್ಳಬೇಡಿ. ಹಾಗೊಮ್ಮೆ ಹೋಗುವ ಪ್ರಸಂಗ ಬಂದರೆ ನಿಮ್ಮ ಪೋಷಕರಿಗೆ ಎಲ್ಲಿಗೆ ಹೋಗುತ್ತಿದ್ದೀರಿ, ಯಾವಾಗ  ವಾಪಸ್‌ ಬರಬಹುದು ಎಂಬುದನ್ನು ನಿಮ್ಮ ಸ್ನೇಹಿತನ ಮುಂದೆಯೇ ತಿಳಿಸಿ. ಒಂದು ವೇಳೆ ನೀವು ಫೋನ್‌ ಮಾಡಿದ ಬಳಿಕ ಅವನು ಸ್ಥಳ ಬದಲಾಯಿಸಲು ನೋಡಿದರೆ ನೀವು ಆಗಲೇ ಎಚ್ಚರಗೊಳ್ಳಬೇಕು. ನೀವು ಏನಾದರೂ ನೆಪ ಹೇಳಿ ಅಲ್ಲಿಗೆ ಹೋಗದೇ ಇರುವಂತೆ ಮಾಡಿ.

ನಿಮ್ಮ ಹಾಗೂ ನಿಮ್ಮ ಪೋಷಕರ ಮೊಬೈಲ್‌ಗೆ ಜಿಪಿಎಸ್‌ ಹಾಗೂ ರೆಕಾರ್ಡಿಂಗ್‌ ಸಿಸ್ಟಮ್ ಡೌನ್‌ಲೋಡ್‌ ಮಾಡಿಕೊಳ್ಳಿ. ಬಹಳಷ್ಟು ಮೊಬೈಲ್‌ಗಳಲ್ಲಿ ಈ ಸೌಲಭ್ಯ ಮೊದಲೇ ಇನ್‌ ಬಿಲ್ಟ್ ಆಗಿರುತ್ತವೆ.

ಡೇಟಿಂಗ್ಗೆ ಹೋಗುವಾಗಿನ ಎಚ್ಚರಿಕೆಗಳು

ಆರಂಭದಲ್ಲಿಯೇ ನೀವು ಎಷ್ಟರ ಮಟ್ಟಿಗೆ ಸಹಜತೆ ಇಷ್ಟಪಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸಿ.

ಡ್ರಿಂಕ್ಸ್ ತೆಗೆದುಕೊಳ್ಳಬೇಡಿ. ಅದು ನಿಮ್ಮ ಸುರಕ್ಷತೆಯ ಸಾಮರ್ಥ್ಯದ ಮೇಲೆ ವ್ಯತ್ಯಾಸವನ್ನುಂಟು ಮಾಡುತ್ತದೆ. ನಿಮ್ಮ ಯೋಜನೆಯ ಸಾಮರ್ಥ್ಯದ ಮೇಲೂ ಪ್ರಭಾವ ಬೀರುತ್ತದೆ.

ಬ್ಲೈಂಡ್‌ ಡೇಟ್‌ಗೆ ಹೋಗದೇ ಇರುವುದು ಒಳ್ಳೆಯದು. ಹೋಗುವುದೇ ಆಗಿದ್ದರೆ ನಿಮ್ಮ ಬೇರೆ ಸ್ನೇಹಿತರನ್ನು ಕೇಳಿಕೊಂಡು ಹೋಗಿ. ಗೊತ್ತಿಲ್ಲದ ನಿರ್ಜನ ಪ್ರದೇಶ ಹಾಗೂ ನಿಮ್ಮ ಸ್ನೇಹಿತನ ಗೆಳೆಯನೆಂದು ಹೇಳುವವನ ಮನೆಗೆ ಹೋಗದಿರಿ.

ಡ್ರಿಂಕ್ಸ್ ಬಗ್ಗೆ ಎಚ್ಚರ

ಪಾರ್ಟಿ ಅಥವಾ ಡೇಟಿಂಗ್‌ನಲ್ಲಿ ಯಾರೋ ಅನಾಮಧೇಯ ವ್ಯಕ್ತಿ ಕೊಟ್ಟ ಡ್ರಿಂಕ್ಸ್ ಕುಡಿಯಲೇ ಬೇಡಿ. ಎಲ್ಲರ ಜೊತೆಗೆ ತಂದುಕೊಡದೆ, ನಿಮಗಾಗಿ ಸ್ಪೆಷಲ್ ಡ್ರಿಂಕ್ಸ್ ತಂದುಕೊಟ್ಟಿದ್ದರೆ ಆ ಬಗ್ಗೆ ಸ್ವಲ್ಪ ಯೋಚನೆ ಮಾಡಿ. ಈ ರೀತಿಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಡ್ರಿಂಕ್ಸ್ ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವ ಘಟನೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಹಾಗಾಗಿ ನೀವು ಯಾವುದೇ ಡ್ರಿಂಕ್ಸ್ ತೆಗೆದುಕೊಳ್ಳುವುದಿದ್ದರೂ ವೇಟರ್‌ನ ಟ್ರೇಯಿಂದ ತೆಗೆದುಕೊಳ್ಳಿ ಅಥವಾ ಎಲ್ಲರಿಗೂ ಕೊಡಲು ಇಟ್ಟಿರುವ ಜಾಗದಿಂದ ತೆಗೆದುಕೊಳ್ಳಿ.

ನೀವು ಕುಡಿಯುತ್ತಿರುವ ಡ್ರಿಂಕ್ಸ್ನ್ನು ಎಲ್ಲೋ ಒಂದು ಕಡೆ ಇಟ್ಟು ನೀವು ಎಲ್ಲೋ ಹೋಗಿ ವಾಪಸ್‌ ಬಂದು ಆ ಡ್ರಿಂಕ್ಸ್ ಪುನಃ ಕೈಗೆತ್ತಿಕೊಳ್ಳಬೇಡಿ. ಡ್ರಿಂಕ್ಸ್ ನಲ್ಲಿ ಬೆರೆಸುವ ಡ್ರಗ್ಸ್ ನ ರುಚಿಯನ್ನು ಗುರುತಿಸಲು ಆಗುವುದಿಲ್ಲ. ಆದರೆ ಅದರ ಲಕ್ಷಣಗಳಿಂದ ಅದನ್ನು ಅವಶ್ಯವಾಗಿ ಪತ್ತೆ ಹಚ್ಚಬಹುದು.

ಈ ತೆರನಾದ ಡ್ರಗ್‌ನ ಸಾಮಾನ್ಯ ಲಕ್ಷಣಗಳೆಂದರೆ, ಮಾಂಸಖಂಡಗಳಲ್ಲಿ ದುರ್ಬಲತೆ, ಧ್ವನಿಯಲ್ಲಿ ನಡುಕ, ಕೈಕಾಲುಗಳ ಚಲನೆಯ ಮೇಲಿನ ನಿಯಂತ್ರಣ ತಪ್ಪುವುದು, ಯೋಚಿಸುವ ಸಾಮರ್ಥ್ಯದ ಮೇಲೂ ಹಿಡಿತ ತಪ್ಪುವುದು.

ಬೇರೆ ಬಗೆಯ ಡ್ರಗ್‌ನಿಂದ ನಿದ್ರೆಯ ಅಮಲು, ತಲೆ ಭಾರ ಎನಿಸುವುದು, ವಾಂತಿ ಬಂದಂತೆನಿಸುವುದು, ತಲೆಸುತ್ತು, ಬಹುಬೇಗ ನಿದ್ರೆಗೆ ಜಾರುವುದು ಮುಂತಾದ ಲಕ್ಷಣಗಳು ಗೋಚರಿಸುತ್ತವೆ.

ಕೆಲವೊಮ್ಮೆ ಜನರು ಕೂಲ್ ‌ಡ್ರಿಂಕ್ಸ್ ನಲ್ಲಿ ನಿದ್ರೆ ಮಾತ್ರೆಗಳನ್ನು ಪುಡಿ ಮಾಡಿ ಬೆರೆಸುತ್ತಾರೆ. ಆ ಡ್ರಿಂಕ್ಸ್ ಪ್ರಜ್ಞಾಹೀನ ಸ್ಥಿತಿಯತ್ತ ಕೊಂಡೊಯ್ಯುತ್ತದೆ.

ಈ ಲಕ್ಷಣಗಳನ್ನು ನಿಮಗೆ ತಿಳಿಸಲು ಮುಖ್ಯ ಕಾರಣವೇನೆಂದರೆ, ನಿಮಗೆ ಕೊಟ್ಟ ಡ್ರಿಂಕ್ಸ್ ನ್ನು  ಒಮ್ಮೆಲೆ ಗಟಗಟನೆ ಕುಡಿಯಬೇಡಿ.  ನಿಧಾನವಾಗಿ ಒಂದೊಂದೇ ಗುಟುಕು ಹೀರುತ್ತಾ ಇರಿ. ರುಚಿಯಲ್ಲಿ ವ್ಯತ್ಯಾಸ ಎನಿಸಿದರೆ ತಕ್ಷಣವೇ ಕುಡಿಯುವುದನ್ನು ನಿಲ್ಲಿಸಿ. ಹಾಗೇನಾದರೂ ಹೊಟ್ಟೆಯಲ್ಲಿ ತೊಂದರೆ ಎನಿಸಿದರೆ ಜನರು ಹೆಚ್ಚಾಗಿ ಇರುವ ಕಡೆ ಹೋಗಿ ಸಹಾಯ ಕೇಳಿ. ಅಗತ್ಯಬಿದ್ದರೆ ಅವರು ನಿಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು.

ಹೆಚ್ಚೆಚ್ಚು ನೀರು ಕುಡಿಯಿರಿ. ವಾಂತಿ ಮಾಡಬೇಕು ಎನ್ನಿಸಿದರೆ ಯಾರಿಗಾದರೂ ಬಾಥ್‌ ರೂಮ್ ತನಕ ಕರೆದುಕೊಂಡು ಹೋಗಲು ತಿಳಿಸಿ.

ದಾರಿಯಲ್ಲಿ ಸಾಗುವಾಗ ಎಚ್ಚರಿಕೆ

ನೀವು ಕಾಲ್ನಡಿಗೆಯಲ್ಲಿ ಹೋಗುವ ಪ್ರಸಂಗ ಬಂದಾಗ ಜನರು ಹೆಚ್ಚು ಓಡಾಡುವ ರಸ್ತೆಗಳಲ್ಲಿಯೇ ಸಾಗಿರಿ. ಆ ದಾರಿ ಸ್ವಲ್ಪ ದೂರವಾದರೂ ಅಡ್ಡಿಯಿಲ್ಲ, ಅಲ್ಲಿಂದಲೇ ಸಾಗಿ. ಶಾರ್ಟ್‌ ಕಟ್‌ ದಾರಿ ಎಂದು ನಿರ್ಜನ ದಾರಿಯಲ್ಲಿ ಸಾಗುವುದು ಒಮ್ಮೊಮ್ಮೆ ಅಪಾಯಕ್ಕೆ ಸಿಲುಕಿಸಬಹುದು.

ನೈಟ್‌ ಪಾರ್ಟಿಗಳಲ್ಲಿ ಹೆಚ್ಚು ಹೊತ್ತು ಹೊರಗೆ ಉಳಿಯಬೇಡಿ.

ಯಾರಾದರೂ ಗೆಳತಿ ಅಥವಾ ಸಂಬಂಧಿಕರನ್ನು ಜೊತೆಗೆ ಕರೆದುಕೊಂಡು ಹೋಗಿ.

ಒಂದು ವೇಳೆ ಕೆಲವರು ಏಕಾಏಕಿ ನಿಮ್ಮನ್ನು ಸುತ್ತುರಿದಿರುವುದು ಕಿರಿಕಿರಿ ಅನ್ನಿಸುತ್ತಿದ್ದರೆ, ನೀವು ತಕ್ಷಣವೇ ಆ ಜಾಗದಿಂದ ದೂರ ಹೋಗುವುದು ಒಳಿತು.

ರಾತ್ರಿ ವಾಹನ ಹತ್ತುವಾಗ ಎಚ್ಚರಿಕೆ

ರಾತ್ರಿ ಹೊತ್ತಿನಲ್ಲಿ ಅತ್ಯಂತ ಕಡಿಮೆ ಜನರು ಕುಳಿತಿರುವ ಬಸ್‌ನಲ್ಲಿ ಹತ್ತಬೇಡಿ.

ಬಸ್‌ ನಿಲ್ದಾಣ ಅಥವಾ ಪ್ರಮುಖ ಬಸ್‌ ನಿಲುಗಡೆಯಿಂದಲೇ ಬಸ್‌ ಹತ್ತಿ. ನಡುದಾರಿಯಲ್ಲಿ ಯಾವುದೊ ವಾಹನಕ್ಕೆ ಕೈ ಮಾಡಿ ಹತ್ತಬೇಡಿ.

ನೀವು ಯಾವುದಾದರೂ ಟ್ಯಾಕ್ಸಿ ಅಥವಾ ಆಟೋದಲ್ಲಿ ಕುಳಿತುಕೊಳ್ಳಬೇಕಿದ್ದರೆ ಹಾಗೂ ನೀವು ಏಕಾಂಗಿಯಾಗಿದ್ದರೆ, ನಿಮ್ಮ  ಮನೆಯವರಿಗೆ ಫೋನ್‌ ಮಾಡಿ ವಾಹನದ ನಂಬರ್‌ನ್ನು ಅವಶ್ಯವಾಗಿ ತಿಳಿಸಿ. ನೀವು ನಂಬರ್‌ನ್ನು ಹೇಗೆ ಹೇಳಬೇಕು ಎಂದರೆ, ನೀವು ಹೇಳುವುದು ಡ್ರೈವರ್‌ಗೂ ಕೂಡ ತಿಳಿಸಬೇಕು.

ಆಟೋ ಅಥವಾ ಟ್ಯಾಕ್ಸಿ ಸ್ಟ್ಯಾಂಡ್‌ಗಳಲ್ಲಿ ಪ್ರೀಪೆಯ್ಡ್ ವಾಹನಗಳು ಲಭ್ಯವಿವೆ. ಅವನ್ನು ತೆಗೆದುಕೊಳ್ಳುವಾಗ ಪ್ರಯಾಣಿಕರ ಹೆಸರು ವಿಳಾಸ, ಮೊಬೈಲ್ ‌ನಂಬರ್‌ ಹಾಗೂ ವಾಹನದ ನಂಬರ್‌ನ್ನು ಸೇರಿಸಲಾಗಿರುತ್ತದೆ.

ಇದರ ಹೊರತಾಗಿ ಕ್ಯಾಬ್‌ ಸರ್ವೀಸ್‌ ಕೂಡ ಲಭಿಸುತ್ತವೆ. ಅವು ಕಿಲೋಮೀಟರ್‌ ಲೆಕ್ಕದಲ್ಲಿ ದರ ವಿಧಿಸುತ್ತವೆ. ಕಂಪನಿ ನಿಮ್ಮ ಹೆಸರು, ಫೋನ್‌ ನಂಬರ್‌ ಮುಂತಾದವುಗಳನ್ನು ನಮೂದಿಸಿಕೊಂಡು ನಿಮಗೆ ವಾಹನ ಕಳಿಸುತ್ತವೆ. ಅದರ ಜೊತೆಗೆ ನಿಮಗೆ ವಾಹನದ ನಂಬರ್‌, ಡ್ರೈವರ್‌ನ ಹೆಸರು, ಫೋನ್‌ ನಂಬರ್‌ ಕೂಡ ಕಳಿಸುತ್ತವೆ.

ನೈಟ್‌ ಪಾರ್ಟಿಗಳಿಗೆ ಹೋಗಲು ನಿಮ್ಮದೇ ಆದ ವಾಹನವಿದ್ದರೆ ಹೆಚ್ಚು ಉತ್ತಮ.

ಚಲಿಸುವ ವಾಹನದಿಂದ ಎಳೆಯುವ ಪ್ರಯತ್ನ

ಇಂತಹ ಘಟನೆಯೇನಾದರೂ ನಡೆದರೆ, ನೀವು ಎಲ್ಲಕ್ಕೂ ಮುಂಚೆ ಮಾಡಬೇಕಾದ ಕೆಲಸವೆಂದರೆ, ಧೈರ್ಯ ಕಳೆದುಕೊಳ್ಳದೇ ಇರುವುದು. ಹುಡುಗಿಯರು ಬಹುಬೇಗ ಧೈರ್ಯ ಕಳೆದುಕೊಳ್ಳುತ್ತಾರೆಂದೇ ಅವರು ಇಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ. ಸಾಮಾನ್ಯವಾಗಿ ಹುಡುಗಿಯರು ಗಾಬರಿಗೊಂಡಾಗ ಅವರ ಮೆದುಳು ಕೆಲಸವನ್ನೇ ಮಾಡುವುದಿಲ್ಲ. ಇಂತಹ ಸ್ಥಿತಿ ಬಂದಾಗ ನೀವು ಮೂರು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲನೆಯದು, ನಿಮಗೆ ಎಷ್ಟು ಜೋರಾಗಿ ಕೂಗಲು ಸಾಧ್ಯವೋ, ಅಷ್ಟು ಜೋರಾಗಿ ಕೂಗಿಕೊಳ್ಳಿ. ಎರಡನೆಯದು ಎಷ್ಟು ಜೋರಾಗಿ ಪ್ರತಿಭಟನೆ ಮಾಡಲು ಸಾಧ್ಯವೋ, ಅಷ್ಟು ಜೋರಾಗಿ ಕೈಕಾಲು, ಉಗುರುಗಳಿಂದ ದಾಳಿ ಮಾಡಿ. ಮೂರನೆಯದು ನಿಮ್ಮ ಕಾಲುಗಳನ್ನು ವಾಹನದ ಕಂಬಿಗೆ ಅಥವಾ ಸೀಟಿನ ಮುಂಭಾಗದಲ್ಲಿ ಹೇಗೆ ಗಟ್ಟಿಯಾಗಿ ಹಿಡಿದುಕೊಳ್ಳಬೇಕೆಂದರೆ ನಿಮ್ಮನ್ನು ಎಳೆಯಲು ಅವರಿಗೆ ಕಷ್ಟವಾಗಬೇಕು.

ನಿಮ್ಮನ್ನು ಇಬ್ಬರು ಮೂವರು ಎಳೆದಾಡುತ್ತಿದ್ದರೆ, ನಿಮಗೆ ಅತ್ಯಂತ ಹತ್ತಿರದಲ್ಲಿರುವ ವ್ಯಕ್ತಿಯನ್ನು ಜೋರಾಗಿ ತಳ್ಳಿ ಉಗುರುಗಳಿಂದ ಅವನ ಮುಖದ ಮೇಲೆ ಜೋರಾಗಿ ಪರಚಿ. ನಿಮ್ಮ ಸ್ಯಾಂಡ್‌ನ ಹೀಲ್‌ನಿಂದ ಅವನ ಕಾಲನ್ನು ಜೋರಾಗಿ ತುಳಿಯಿರಿ.

ಇತ್ತೀಚೆಗೆ ಯುವತಿಯರಿಗೆ ಸುರಕ್ಷತೆಗೆ ಸಂಬಂಧಪಟ್ಟಂತೆ ಹಲವು ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವು ನಿಮಗೆ ಕಷ್ಟದ ಸ್ಥಿತಿಯಲ್ಲಿ ನೆರವಾಗುತ್ತವೆ.

ಡಿಸ್ಟೆನ್ಸ್ ಅಲಾರ್ಮ್

ನಿಮಗೆ ಅಪಾಯದ ಮುನ್ಸೂಚನೆ ಕಂಡುಬಂದಾಗ ಈ ಅಲಾರ್ಮ್ ಹಾಕಿದರೆ ಅದು ಭಾರಿ ಸದ್ದು ಮಾಡುತ್ತದೆ. 100 ರಿಂದ 200 ಗಜದ ಅಂತರದಲ್ಲಿ ಇದರ ಧ್ವನಿ ಕೇಳಿಸುತ್ತದೆ. ಇದರಿಂದ ಅಪರಾಧಿಗಳು ಇಕ್ಕಟ್ಟಿಗೆ ಸಿಲುಕಿ ಅಲ್ಲಿಂದ ಓಡಿಹೋಗಲು ಪ್ರಯತ್ನಿಸುತ್ತಾರೆ. ಏಕೆಂದರೆ ಅಲಾರ್ಮ್ ನಿಂದ ಬಹಳಷ್ಟು ಜನರು ನಿಮ್ಮ ಬಳಿ ಬರುತ್ತಾರೆ.

ಸ್ಟೆನ್ಗನ್

ಈ ಪುಟ್ಟ ಗನ್‌ (ಪಿಸ್ತೂಲ್ ‌ರೀತಿಯದ್ದು) ನಿಂದ ಎದುರಿನ ವ್ಯಕ್ತಿ ತೀವ್ಕ ವಿದ್ಯುತ್‌ ಆಘಾತ ಅನುಭವಿಸುತ್ತಾನೆ, (15 ನಿಮಿಷದಿಂದ 30 ನಿಮಿಷಗಳತನಕ) ನಿಷ್ಕ್ರಿಯನಾಗುತ್ತಾನೆ. ಇದರಿಂದ ನಿಮಗೆ ತಕ್ಷಣವೇ ಆ ಸ್ಥಳದಿಂದ ಬೇರೊಂದು ಸ್ಥಳಕ್ಕೆ ಹೋಗಲು ಸಮಯ ಸಿಗುತ್ತದೆ.

ಸ್ಪ್ರೇ

ಇದು ಹಲವು ಪ್ರಕಾರಗಳಲ್ಲಿ ಲಭ್ಯ. ಇದರ ಗುಂಡಿ ಒತ್ತಿದಾಗ ಇದರಿಂದ ಹೊರಹೊಮ್ಮುವ ಸ್ಪ್ರೇ ಗೂಂಡಾಗಿರಿ ಮಾಡುವವರನ್ನು ಸ್ವಲ್ಪ ಹೊತ್ತಿನ ಮಟ್ಟಿಗೆ ನಿಷ್ಕ್ರಿಯಗೊಳಿಸುತ್ತದೆ. ಅವರ ಕೈ ಕಾಲುಗಳು ಚೈತನ್ಯಹೀನವಾಗುತ್ತವೆ. ಬೇರೆ ಬಗೆಯ

ಸ್ಪ್ರೇ ಸಿಂಪಡಿಸಿದ ಸ್ವಲ್ಪ ಹೊತ್ತಿನ ತನಕ ಎದುರಿಗಿನ ವ್ಯಕ್ತಿ ಕಣ್ತೆರೆಯಲು ತೊಂದರೆಯಾಗುತ್ತದೆ. ಇದರಲ್ಲಿ ಕೆಮಿಕಲ್ ಸ್ಪ್ರೇ ಕೂಡ ಇದೆ. ಪೆಪ್ಪರ್‌ (ಕರಿಮೆಣಸು) ನಂತಹ ಸ್ಪ್ರೇ ಗಳು ಕೂಡ ಇವೆ.

ಆರ್‌.ಕೆ. ಮಹೇಶ್ವರಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ