ಆಸ್ಟ್ರೇಲಿಯಾದಲ್ಲಿ ಬೆಂಗಳೂರು ಮೂಲದ ಐಟಿ ಉದ್ಯೋಗಿ ಪ್ರಭಾ ಅರುಣ್ ಕುಮಾರ್‌ರ ಮೇಲೆ ಅಜ್ಞಾತ ವ್ಯಕ್ತಿಗಳು ಹಲ್ಲೆ ನಡೆಸಿ ಕೊಲೆಗೈದ ಘಟನೆಯೊಂದು ಘಟಿಸಿತು. ಈ ಘಟನೆಯಿಂದಾಗಿ ಮಹಿಳೆಯರ ಸುರಕ್ಷತೆಯ ಬಗ್ಗೆ ಚರ್ಚೆ ಮತ್ತೊಮ್ಮೆ ಆರಂಭವಾಗಿದೆ.
ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ಕಡೆಯೂ ಇಂತಹ ಅನೇಕ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ.
ಸ್ವಲ್ಪ ದಿನ ಟಿ.ವಿ., ಪತ್ರಿಕೆಗಳಲ್ಲಿ ಚರ್ಚೆಯ ಬಳಿಕ ಆ ವಿಷಯ ಮರೆತೇ ಹೋಗಿಬಿಡುತ್ತದೆ. ಹಾಗಂತ ಮೈಮರೆತು ಎಚ್ಚರ ತಪ್ಪುವುದು ಸರಿಯಲ್ಲ. ನಮ್ಮ ಸುರಕ್ಷತೆಯ ಬಗ್ಗೆ ನಮಗೆ ಸಾಧ್ಯವಿದ್ದಷ್ಟು ಗಮನವಿರಬೇಕು.
ಹದಿಹರೆಯದವರು, ಯುವತಿಯರು, ವಿವಾಹಿತೆಯರು ಸಂಕಷ್ಟದ ಸಮಯದಲ್ಲಿ ಏನೇನು ಮಾಡಿದರೆ ತಾವು ಸುರಕ್ಷಿತವಾಗಿರಬಹುದು ಎಂಬುದನ್ನು ಮೊದಲೇ ತಿಳಿದುಕೊಂಡಿರಬೇಕು.ಯಾವುದೇ ಅನಪೇಕ್ಷಿತ ಘಟನೆಗಳು ನಡೆದಾಗ ಯುವತಿಯರಿಗೆ ಕೈಕಾಲುಗಳು ಆಡುವುದೇ ಇಲ್ಲ. ಕೆಲವು ಎಚ್ಚರಿಕೆಗಳು, ಸುರಕ್ಷತೆಯ ಉಪಾಯಗಳನ್ನು ಅನುಸರಿಸಿದರೆ ಅಂತಹ ಸ್ಥಿತಿಯಿಂದ ಬಚಾವಾಗಬಹುದು.
ಸ್ನೇಹ ಎಲ್ಲೇ ಮೀರದಿರಲಿ
ಶೈಕ್ಷಣಿಕ ಅವಕಾಶಗಳು ಹೆಚ್ಚಿರುವುದು, ಹಾಗೂ ಸಾಮಾಜಿಕ ಬದಲಾವಣೆಗಳಿಂದಾಗಿ ಇಂದಿನ ದಿನಗಳಲ್ಲಿ ಹುಡುಗ ಹುಡುಗಿಯರಲ್ಲಿ ಸ್ನೇಹ ಸಹಜವೇ ಆಗಿದೆ. ಆಧುನಿಕ ಕುಟುಂಬಗಳು ಇದನ್ನು ತಪ್ಪು ಎಂದು ತಿಳಿಯುವುದಿಲ್ಲ. ಆದರೆ ಒಂದು ಸಂಗತಿ ಗಮನದಲ್ಲಿರಲಿ. ಸ್ನೇಹ ಅಂದರೆ ನಿಸ್ವಾರ್ಥದಿಂದ ಕೂಡಿದ್ದಾಗಿರಬೇಕು. ಸಹಾಯ ಮಾಡುವ ಮನೋಭಾವ ಇರಬೇಕು. ಆದರೆ ಬಹಳಷ್ಟು ಹುಡುಗರು ಸ್ನೇಹವನ್ನು ಸೆಕ್ಸ್ ಜೊತೆಗೆ ಲಿಂಕ್ ಮಾಡಿ ನೋಡುತ್ತಾರೆ. ಹುಡುಗರ ಜೊತೆಗೆ ಸ್ನೇಹ ಮಾಡುವಾಗ ಕೆಳಕಂಡ ಸಂಗತಿಗಳ ಬಗ್ಗೆ ಅವಶ್ಯವಾಗಿ ಗಮನಕೊಡಿ:
ಆರಂಭದಲ್ಲಿಯೇ ಸ್ನೇಹಿತನ ಜೊತೆ ಹೆಚ್ಚು ಮುಕ್ತವಾಗಿ ವರ್ತಿಸದಿರಿ. ನಿಮ್ಮ ಕುಟುಂಬದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಅವನ ಮುಂದೆ ಹೇಳಿಬಿಡುವುದು ಸರ್ವಥಾ ಒಳ್ಳೆಯದಲ್ಲ. ಯೋಚಿಸಿ, ವಿಚಾರ ವಿಮರ್ಶೆ ಮಾಡಿ ಮುಂದುರಿಯುವುದು ಒಳ್ಳೆಯದು.
ಆರಂಭದಲ್ಲಿಯೇ ನಿಮ್ಮ ಸ್ನೇಹದ ಇತಿಮಿತಿ ಸ್ಪಷ್ಟಪಡಿಸುವುದು ಒಳ್ಳೆಯದು.
ಸಂದರ್ಭ ಬಂದರೆ ಒಂದು ಸಲ ನಿಮ್ಮ ಸ್ನೇಹಿತನನ್ನು ಅಮ್ಮಅಪ್ಪನಿಗೆ ಭೇಟಿ ಮಾಡಿಸಿ.
ನಿಮ್ಮ ಸ್ನೇಹಿತನ ಜೊತೆ ಯಾವುದಾದರೂ ಏಕಾಂತದ ಸ್ಥಳಕ್ಕೆ ಹೋಗುವ ಅಪಾಯ ತಂದುಕೊಳ್ಳಬೇಡಿ. ಹಾಗೊಮ್ಮೆ ಹೋಗುವ ಪ್ರಸಂಗ ಬಂದರೆ ನಿಮ್ಮ ಪೋಷಕರಿಗೆ ಎಲ್ಲಿಗೆ ಹೋಗುತ್ತಿದ್ದೀರಿ, ಯಾವಾಗ ವಾಪಸ್ ಬರಬಹುದು ಎಂಬುದನ್ನು ನಿಮ್ಮ ಸ್ನೇಹಿತನ ಮುಂದೆಯೇ ತಿಳಿಸಿ. ಒಂದು ವೇಳೆ ನೀವು ಫೋನ್ ಮಾಡಿದ ಬಳಿಕ ಅವನು ಸ್ಥಳ ಬದಲಾಯಿಸಲು ನೋಡಿದರೆ ನೀವು ಆಗಲೇ ಎಚ್ಚರಗೊಳ್ಳಬೇಕು. ನೀವು ಏನಾದರೂ ನೆಪ ಹೇಳಿ ಅಲ್ಲಿಗೆ ಹೋಗದೇ ಇರುವಂತೆ ಮಾಡಿ.
ನಿಮ್ಮ ಹಾಗೂ ನಿಮ್ಮ ಪೋಷಕರ ಮೊಬೈಲ್‌ಗೆ ಜಿಪಿಎಸ್ ಹಾಗೂ ರೆಕಾರ್ಡಿಂಗ್ ಸಿಸ್ಟಮ್ ಡೌನ್‌ಲೋಡ್ ಮಾಡಿಕೊಳ್ಳಿ. ಬಹಳಷ್ಟು ಮೊಬೈಲ್‌ಗಳಲ್ಲಿ ಈ ಸೌಲಭ್ಯ ಮೊದಲೇ ಇನ್ ಬಿಲ್ಟ್ ಆಗಿರುತ್ತವೆ.
ಡೇಟಿಂಗ್ಗೆ ಹೋಗುವಾಗಿನ ಎಚ್ಚರಿಕೆಗಳು
ಆರಂಭದಲ್ಲಿಯೇ ನೀವು ಎಷ್ಟರ ಮಟ್ಟಿಗೆ ಸಹಜತೆ ಇಷ್ಟಪಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸಿ.
ಡ್ರಿಂಕ್ಸ್ ತೆಗೆದುಕೊಳ್ಳಬೇಡಿ. ಅದು ನಿಮ್ಮ ಸುರಕ್ಷತೆಯ ಸಾಮರ್ಥ್ಯದ ಮೇಲೆ ವ್ಯತ್ಯಾಸವನ್ನುಂಟು ಮಾಡುತ್ತದೆ. ನಿಮ್ಮ ಯೋಜನೆಯ ಸಾಮರ್ಥ್ಯದ ಮೇಲೂ ಪ್ರಭಾವ ಬೀರುತ್ತದೆ.




 
        
    
