“ಶ್ರೀಕಾಂತ್…. ಬೇಗ ಬೇಗ ಆ ಮೊಟ್ಟೆ ತಿಂದು ಮುಗಿಸು,” ತನ್ನ ಲೋಟಕ್ಕೆ ಮತ್ತೊಂದಿಷ್ಟು ಕಾಫಿ ಸುರಿದುಕೊಳ್ಳುತ್ತಾ ಹೇಳಿದಳು ಅಪರ್ಣಾ.
“ನನಗೆ ಈ ಹಾಲು ಮೊಟ್ಟೆಗಳಿಂದ ಸಾಕಾಗಿದೆಯಮ್ಮ,” ಮೂಗನ್ನು ಎಡಗೈಯಿಂದ ಉಜ್ಜುತ್ತ ಹೇಳಿದ ಶ್ರೀಕಾಂತ.
“ಹೇಳಿದಷ್ಟು ಕೇಳೋ… ಶ್ರೀಕಾಂತೂ….”
ಅಪರ್ಣಾ ನವಿರಾಗಿ ಮಗನನ್ನು ಗದರಿಸುತ್ತ ಹೇಳಿದಳು, “ನೀನೇನೂ ಎಳೆ ಮಗುವಲ್ಲ, ಆರೋಗ್ಯಕ್ಕೆ ಹಾಲು ಮೊಟ್ಟೆ ಎಷ್ಟು ಒಳ್ಳೆಯದೆಂದು ನಿನಗೆ ಗೊತ್ತಿಲ್ಲವೇ?”
ಮತ್ತೇನೂ ಮಾತನಾಡದೆ ಆ ದೊಡ್ಡ ಗ್ಲಾಸನ್ನು ತೆಗೆದುಕೊಂಡು, ಔಷಧ ಕುಡಿಯುವವನಂತೆ ಹಾಲನ್ನು ಗಟಗಟನೆ ಕುಡಿದು ಮುಗಿಸಿದ ಶ್ರೀಕಾಂತ.
“ಹ್ಞಾಂ, ಹಾಗಿರುವ ಜಾಣಮರಿ. ಹಾಗೇ ಆ ಮೊಟ್ಟೆ ಖಾಲಿ ಮಾಡಿ, ಆ ಬ್ರೆಡ್ ಮತ್ತು ಜಾಮ್ ತಿಂದು ಮುಗಿಸು,” ಎನ್ನುತ್ತ ಅವನ ಮುಂದಿದ್ದ ಬಟ್ಟಲುಗಳತ್ತ ಬೊಟ್ಟು ಮಾಡಿದಳು.
“ಅಮ್ಮಾ, ನೀನು ಸಹ ಲಲಿತಾ ಅತ್ತೆ ತರಹ ತಿಂಡಿಗೆ ಬಿಸಿ ಬಿಸಿ ದೋಸೆ ಏಕೆ ಮಾಡಬಾರದು? ಬಿಸಿ ಬಿಸಿ ದೋಸೆ…. ಫಿಲ್ಟರ್‌ಕಾಫಿ…. ಅಹಾಹಾಹಹಹಹ….”
“ನಿನ್ನ ಲಲಿತತ್ತೆಯ ಪುರಾಣ ಇಲ್ಲಿ ತೆಗೀಬೇಡ. ಬಾಯಿ ಮುಚ್ಚಿಕೊಂಡು ಬ್ರೆಡ್ ಮೊಟ್ಟೆ ತಿಂದು ಮುಗಿಸು,” ಲಲಿತಾಳ ಹೆಸರು ಕೇಳಿ ಅವಳ ಮೈಯೆಲ್ಲ ನಖಶಿಖಾಂತ ಉರಿಯಿತು.
ತಾಯಿಯ ಸಿಟ್ಟನ್ನು ಕಂಡು ಹೆಚ್ಚಿಗೆ ಮಾತನಾಡದೆ, ಮೊಟ್ಟೆಯಿದ್ದ ಬಟ್ಟಲನ್ನು ಹತ್ತಿರಕ್ಕೆಳೆದುಕೊಂಡ ಶ್ರೀಕಾಂತ. ಇತ್ತೀಚೆಗೆ ಅಮ್ಮನಿಗೆ ಕಾರಣವಿಲ್ಲದೆ ಕೋಪ ಬರುತ್ತದೆ ಎಂದುಕೊಂಡ.
“ಮೇಡಂ, ನಿಮಗೆ ಫೋನ್ ಬಂದಿದೆ,” ಎಂದಳು ಕೆಲಸದ ಕಮಲಾ. ಅಪರ್ಣಾ ಬೇಗ ಬೇಗ ಕಾಫಿ ಹೀರಿ, ಅತ್ತ ಓಡಿದಳು.
“ತುಂಬಾ ತಡ ಮಾಡಬೇಡ,” ಎಂದು ಮತ್ತೊಮ್ಮೆ ಶ್ರೀಕಾಂತನನ್ನು ಗದರಿಸಲು ಅವಳು ಮರೆಯಲಿಲ್ಲ.
“ಓ! ಮಿಸೆಸ್ ಮನೋಹರ್, ನಿನ್ನೆ ಕಾರ್ಯ ಎಲ್ಲಾ ಸರಿಯಾಗಿ ಮುಗಿಯಿತಾ…..? ಇಲ್ಲವೋ…. ಓ ಹಾಗಾ….?”
ಶ್ರೀಂಕಾತ್ ಕಮಲಾಳತ್ತ ಮಿಕಿಮಿಕಿ ನೋಡುತ್ತಿದ್ದ. ಅವಳು ಅವನತ್ತ ಅಣಕದ ನಗು ಬೀರಿದಳು. ಅವನು ಸಮಯ ಸಾಧಿಸಿ ಬೆಂದ ಮೊಟ್ಟೆಯನ್ನು ಕಸದ ಬುಟ್ಟಿಗೆ ಎಸೆದ.
“ಮೀಟೂ….ಮೀಟೂ….” ಎಂದು ಬಾಲ್ಕನಿಯ ಪಂಜರದಲ್ಲಿದ್ದ ಗಿಣಿ ಶ್ರೀಕಾಂತನನ್ನು ಎಚ್ಚರಿಸಿತು.
“ನೀನು ಬಾಯಿ ಮುಚ್ಚು,” ಎಂದು ಅದನ್ನು ಗದರಿದ ಶ್ರೀಕಾಂತ.
ಶ್ರೀಕಾಂತ ಮುಂದಿನ ಹಾಲ್‌ನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಸುತ್ತಲೂ ಕಾಮಿಕ್ಸ್ ಗೊಂಬೆಗಳನ್ನು ಹರಡಿಕೊಂಡು ಕುಳಿತಿದ್ದ. ಗಡಿಯಾರ 11 ಗಂಟೆ ಬಾರಿಸಿತು.
ಶ್ರೀಕಾಂತ ಕುಳಿತಲ್ಲೇ ಆಕಳಿಸಿದ. ಅವನು ಶಾಲೆಗೆ ಯಾಕೆ ಬಿಡು ಬರುತ್ತದೋ ಎಂದುಕೊಂಡ. ರಜಾ ದಿನಗಳು ಎಂದರೆ ಬಲು ಬೇಸರ. ಏಕೆಂದರೆ ಅವನ ತಾಯಿ ಅವನನ್ನು ಹೊರಗೆ ಆಡಲು ಬಿಲ್‌ಕುಲ್‌ಬಿಡುತ್ತಿರಲಿಲ್ಲ. ಬಿಸಿಲಿಗೆ ಹೋಗಬೇಡ ಎಂದು ಗದರುತ್ತಿದ್ದಳು.
ಅಷ್ಟರಲ್ಲಿ ಮೇಲಿನಿಂದ ಅಪರ್ಣಾ ಅಲಂಕಾರ ಪೂರೈಸಿ ಕೆಳಗೆ ಬಂದಳು. ಹೊರಗೆ ಹೋಗುವ ಸನ್ನಾಹದಲ್ಲಿ ಇದ್ದಳು. ಅವಳ ಅಂದದ ಮೈಕಟ್ಟಿಗೆ ಗುಲಾಬಿ ಬಣ್ಣದ ಸೀರೆ ಅಚ್ಚುಕಟ್ಟಾಗಿ ಹೊಂದಿಕೊಂಡಿತ್ತು.
ಅವಳ ಕೈಗಳಲ್ಲಿದ್ದ ಅದೇ ಬಣ್ಣದ ಗಾಜಿನ ಬಳೆಗಳು ಬೆಳಕಿಗೆ ಫಳಗುಡುತ್ತಿದ್ದವು. ಬೇಗ ಬೇಗ ತಲೆ ಬಾಚಿಕೊಂಡ ಶಾಸ್ತ್ರ ಮಾಡಿದಳು. ಅವಳು ದೇಹಕ್ಕೆ ಪೂಸಿಕೊಂಡಿದ್ದ ಸೆಂಟ್ ಸುತ್ತಲೂ ಪರಿಮಳ ಬೀರುತ್ತಿತ್ತು.
“ಶ್ರೀಕಾಂತ್…. ನಾನು ಕ್ಲಬ್‌ಗೆ ಹೋಗುತ್ತೇನೆ. ಮನೆಯಲ್ಲೇ ಇವರು ಗೊತ್ತಾಯಿತಾ? ಬೇಕಾದರೆ ವೀಡಿಯೋದಲ್ಲಿ ಒಂದು ಕಾರ್ಟೂನ್ ಫಿಲಂ ನೋಡು. ಹೊರಗಡೆ ಬಿಸಿಲಿಗೆ ಹೋದರೆ, ಕಾಲು ಮುರಿಯುತ್ತೇನೆ,”
“ಅಮ್ಮಾ, ನನಗೆ ಮನೆಯಲ್ಲಿ ತುಂಬಾ ಬೇಜಾರು! ನಾನು ಲಲಿತಾ ಅತ್ತೆಯ ಮನೆಗೆ ಹೋಗಿ ರಾಜನ ಜೊತೆ ಕೇರಂ ಆಡುತ್ತೇನೆ.”
“ಶ್ರೀಕಾಂತ, ನಾನು ಹೇಳುವುದನ್ನು ಯಾವಾಗ ಕೇಳುವುದು ನೀನು?” ಎಂದು ಜೋರಾಗಿ ಗದರಿಸಿದಳು.
“ಕಮಲಾ, ನೀನು ಮನೆಯ ಧೂಳು ಹೊಡೆದು ಶುಚಿ ಮಾಡು. ಆ ಕಿಟಕಿಗಳ ಕಂಬಿಗಳನ್ನು ನೋಡಲು ಆಗುವುದಿಲ್ಲ. ಹಾಗೇ ಮಿಸೆಸ್ ರಾವ್ ಫೋನ್ ಮಾಡಿದರೆ, ಅವರನ್ನು 1-2 ಗಂಟೆಯ ಹೊತ್ತಿಗೆ ಕ್ಲಬ್‌ಗೆ ಬರಲು ಹೇಳು,” ಎಂದಳು.
ಅಷ್ಟರಲ್ಲಿ ಟೆಲಿಫೋನ್ ಮತ್ತೆ ಗಣಗಣಿಸಿತು, “ಓ….. ಮಿಸೆಸ್ ರಾವ್, ನಾನೀಗ ತಾನೇ ನಿಮ್ಮ ಬಗ್ಗೆ ಹೇಳುತ್ತಿದ್ದೆ….. ಓ…. ಎಸ್, ಶ್ಯೂರ್…. ಅದರ ಬಗ್ಗೆ ನಾವೇನಾದರೂ ಕ್ರಮ ತೆಗೆದುಕೊಳ್ಳಲೇಬೇಕು…. ಇದೋ ನಾನೀಗಲೇ ಹೊರಟೆ…. ನಮಸ್ಕಾರ.”
“ಶ್ರೀಕಾಂತ…. ನಾನು ಬರೀ,” ಎಂದು ಅವನ ಹಣೆಗೆ ಮುತ್ತಿಟ್ಟು ಹೊರಟಳು. ಕಮಲಾ ಆಗಲೇ ಗೇಟನ್ನು ತೆರೆಯಲು ಹೋಗಿದ್ದಳು.
ಕಾರನ್ನು ರಿವರ್ಸ್ ತೆಗೆದುಕೊಂಡು, ಗೇಟಿನ ಹೊರಗೆ ಹೋಗುತ್ತಿರುವ ತಾಯಿಯನ್ನೇ ನೋಡುತ್ತ ಕಿಟಕಿಯ ಬಳಿ ನಿಂತ ಶ್ರೀಕಾಂತ. ಅವನು ತನ್ನ ಕಾಮಿಕ್ಸ್ ಗಳನ್ನೆಲ್ಲ ಒಂದೆಡೆ ತಳ್ಳಿ, ಎದ್ದು ಬಂದ. ಅವನು ಕಾರನ್ನು ಓಡಿಸುವವನಂತೆ ಗಾಳಿಯಲ್ಲಿ ಕೈ ಆಡಿಸುತ್ತ ಮನಯಲ್ಲೆಲ್ಲ ಓಡಾಡಿ, ಬಾಲ್ಕನಿಯಲ್ಲಿದ್ದ ತನ್ನ ಗಿಣಿಯ ಬಳಿ ಬಂದ.
ಅಪರ್ಣಾ ತನ್ನ ಕಾರನ್ನು ಎಡಗಡೆಗೆ ತಿರುಗಿಸಿಕೊಳ್ಳುತ್ತ ಲೇಕ್ ಅವಿನ್ಯೂ ಬಳಿಯಿದ್ದ ಮಹಿಳಾ ಸಮಾಜದ ಕ್ಲಬ್‌ನ ಕಡೆ ವೇಗವಾಗಿ ಹೊರಟಳು. ಅವಳ ಆಲೋಚನೆಗಳು ಕಾರಿಗಿಂತ ವೇಗವಾಗಿ ಓಡಿದ. ಕ್ಲಬ್‌ನ ವಾರ್ಷಿಕೋತ್ಸವ ಹತ್ತಿರ ಬಂದುಬಿಟ್ಟಿತ್ತು.
ಕಡೇ ಘಳಿಗೆಯಲ್ಲಿ ಮುಖ್ಯ ಅತಿಥಿಯಾಗಿ ಬರುತ್ತೇನೆಂದಿದ್ದ ಸಿನಿಮಾ ನಟಿ ಕೈಕೊಟ್ಟಿದ್ದಳು. ಇನ್ನೊಂದು ವಾರದೊಳಗೆ ಮತ್ತೊಬ್ಬ ಅತಿಥಿಯನ್ನು ಅವಳು ಗೊತ್ತು ಮಾಡುವುದಾದರೂ ಹೇಗೆ?
ಮಿಸೆಸ್ ಮನೋಹರ್ ಅವರ ಅತ್ತೆಗೆ ಕಾಲು ಫ್ರಾಕ್ಚರ್ ಆದ್ದರಿಂದ ಆಸ್ಪತ್ರೆ ಸೇರಿದ್ದರು. ಆದ್ದರಿಂದ ಈ ಸಮಯದಲ್ಲಿ ತಾನು ಕ್ಲಬ್‌ಗೆ ಬಂದು ಸಹಾಯ ಮಾಡಲಾಗುವುದಿಲ್ಲ ಎಂದು ಅಕೆ ನಿರಾಕರಿಸಿಬಿಟ್ಟಿದ್ದರು.
ಇದಕ್ಕೆಲ್ಲ ಪುಟವಿಟ್ಟ ಹಾಗೆ, ಒಂದು ತಿಂಗಳಿನಿಂದ ದುಬೈನಲ್ಲಿದ್ದ ಪತಿ ಸುರೇಶನಿಂದ ಫೋನ್ ಕಾಲ್ ಬಂದಿರಲಿಲ್ಲ. ಅವರಿಗೇನಾದರೂ ತೊಂದರೆಯೋ? ಆರೋಗ್ಯ ಸರಿಯಾಗಿಲ್ಲವೋ? ಅವಳಿಗೆ ಏನೂ ತಿಳಿಯಲಿಲ್ಲ.
ಅವಳ ಆಲೋಚನೆ ಸಾಗುತ್ತಿದ್ದಂತೆ ಕ್ಲಬ್‌ನ ಮುಖ್ಯದ್ವಾರ ಬಂದೇಬಿಟ್ಟಿತು.
ಆಗಲೇ ಮಿಸೆಸ್ ರಾವ್ ಅವರ ನೀಲಿ ಮಾರುತಿ ಒಳಗೆ ಬಂದು ನಿಂತಿದೆ. ಅಪರ್ಣಾ ತನ್ನ ಆಲೋಚನೆಗಳನ್ನು ಕೊಡವಿ ಒಳಗಡಿಯಿಟ್ಟಳು.
“ಮಹಿಳಾ ಮಂಡಳಿಯ ಅಧ್ಯಕ್ಷೆಗೆ ಸ್ವಾಗತ, ಸುಸ್ವಾಗತ,” ಎಂದು ಕಾರ್ಯದರ್ಶಿ ಲೀಲಾ ಬಂದು ಕೂಗಿದಳು.
“ಬೇಗ ಬೇಗ ಕೆಲಸ ನೋಡಿರಿ.”
ಲಲಿತಾ ತನ್ನ ಮನೆಯ ಅಂಗಳದ ಹುಲ್ಲನ್ನು ಕತ್ತರಿಸುತ್ತ ಒಪ್ಪ ಮಾಡುತ್ತಿದ್ದಳು. ಯಾವುದೋ ರಾಗ ಗುನುಗುತ್ತ ಕಾರ್ಯದಲ್ಲಿ ಮಗ್ನಳಾಗಿದ್ದಳು. ಚಳಿಗಾಲದ ಬೆಳಗಿನ ಬಿಸಿಲು ಹದವಾಗಿತ್ತು.
`ತೋಟದಲ್ಲಿ ಒಂದರ್ಧ ಗಂಟೆ ಕೆಲಸ ಮಾಡಿದರೆ ಎಷ್ಟೋ ಹಾಯಾಗಿರುತ್ತದೆ,’ ಎಂದು ತನಗೆ ತಾನೇ ಹೇಳಿಕೊಳ್ಳುತ್ತ ಮನೆಯ ಮುಂದಿನಿಂದ ಗೇಟ್‌ನ ಬಳಿ ಇದ್ದ ಸಂಪಿಗೆ ಮರದವರೆಗೂ ಹುಲ್ಲನ್ನು ಹದವಾಗಿ ಕತ್ತರಿಸಿದಳು.
ಅವಳ ಮಗ ರಾಜ ಹಾಗೂ ಅವಳ ಅಣ್ಣನ ಮಕ್ಕಳು ಆನಂದದಿಂದ ಕೇಕೆ ಹಾಕಿಕೊಂಡು ತೋಟದಲ್ಲಿ ಆಡಿಕೊಳ್ಳುತ್ತಿದ್ದರು.
`ರಾಜ, ಈ ಹುಡುಗರೊಟ್ಟಿಗೆ ಅದೆಷ್ಟು ಸಂತೋಷವಾಗಿದ್ದಾನೆ. ಇನ್ನೂ ಎರಡು ವಾರ ಇವರನ್ನು ಇಲ್ಲೇ ಉಳಿಸಿಕೊಳ್ಳಬೇಕು,’ ಎಂದುಕೊಂಡಳು.
“ಅತ್ತೆ….. ನೋಡಿ ಅವರು ಏನು ಮಾಡುತ್ತಿದ್ದಾರೆ…. ಅತ್ತೇ…. ಅವರಿಗೆ ಹೇಳಿ,” ಪುಟ್ಟ ಶೃತಿ ಅವರ ಸಮಕ್ಕೆ ಆಡಲಾರದೆ ಆಗಾಗ ದೂರುತ್ತಿದ್ದಳು.
ಲಲಿತಾ ಹುಡುಗರು ಸಂತೋಷವಾಗಿ ಆಡುವುದನ್ನೇ ನೋಡುತ್ತ ನಿಂತಳು. ಹುಡುಗರು ಜೋರಾಗಿ ಕೂಗುತ್ತ, “ರತ್ತೋ ರತ್ತೋ ರಾಯನ ಮಗಳೇ….” ಎಂದು ಶೃತಿಯನ್ನು ಗೋಳು ಹೊಯ್ದುಕೊಳ್ಳುತ್ತಿದ್ದರು. ಅಲ್ಲಿಯೇ ಇದ್ದ ಗುಲ್ ಮೊಹರ್ ಹೂಗಳ ದಳಗಳನ್ನು ಅವಳ ಮೇಲೆ ರಾಶಿ ಚೆಲ್ಲುತ್ತ, ರಾಗವಾಗಿ ಹಾಡು ಹೇಳಿಕೊಂಡು ರೇಗಿಸುತ್ತಿದ್ದರು. ಅಂಗಳದ ತುಂಬಾ ಓಡಾಡುತ್ತ ರೈಲಾಟ ಆಡುತ್ತಿದ್ದರು.
ಅವಳು ಹಾಗೇ ಗಮನಿಸುತ್ತಿದ್ದಾಗ, ಪಕ್ಕದ ಮನೆಯ ಶ್ರೀಕಾಂತ ಆಸೆಯ ಕಣ್ಣುಗಳನ್ನು ಅರಳಿಸಿಕೊಂಡು ಕಾಂಪೌಂಡ್ ಬಳಿ ನಿಂತಿರುವುದನ್ನು ನೋಡಿದಳು. ತನ್ನ ಕೈಯಲ್ಲೊಂದು ಫುಟ್ ಬಾಲ್‌ನ್ನು ಹಿಡಿದು, ರಾಜ ಮತ್ತವನ ಗೆಳೆಯರು ಆನಂದದಿಂದ ಆಡುವುದನ್ನೇ ಪೆಚ್ಚಾಗಿ ನೋಡುತ್ತಾ ನಿಂತಿದ್ದ.
“ಹಲೋ ಶ್ರೀಕಾಂತ್,” ಎಂದು ಮಾತನಾಡಿದಳು ಲಲಿತಾ.
“ಹಲೋ ಅತ್ತೆ,” ಸಂಕೋಚದಿಂದ ನಾಚಿಕೊಳ್ಳುತ್ತ ಹೇಳಿದ ಶ್ರೀಕಾಂತ.
“ನಮ್ಮ ಮನೆಯಲ್ಲಿ ಬಂದು ಆಡಿಕೊಳ್ಳಪ್ಪ,” ಎಂದು ಅವಳು ಆಹ್ವಾನಿಸಿದಳು. ಶ್ರೀಕಾಂತ ಸುಮ್ಮನೆ ತಲೆಯಾಡಿಸಿದ. ಅವನ ಗಮನವೆಲ್ಲ ಆಡುತ್ತಿದ್ದ ಹುಡುಗರತ್ತಲೇ ಇತ್ತು.
“ನಿಮ್ಮಮ್ಮ ಎಲ್ಲೋ ಮರಿ?” ಎಂದು ಕೇಳಿದಳು.
“ಕ್ಲಬ್‌ಗೆ ಹೋಗಿದ್ದಾರೆ.”
ಅವರು ಹೊಸದಾಗಿ ಈ ಕಾಲೋನಿಗೆ ಬಂದಿದ್ದಾಗ ಅಪರ್ಣಾ ಮತ್ತವಳ ಗೆಳತಿಯರು ಲಲಿತಾಳನ್ನು ಸಂಘದ ಸದಸ್ಯೆಯನ್ನಾಗಿ ಮಾಡಿಕೊಳ್ಳಲಿಕ್ಕೆ ಬಂದಿದ್ದರು.
“ನಿಮ್ಮ ಯಜಮಾನರು ಆಗಾಗ ಟೂರಿಗೆಂದು ಹೊರಗೆ ಹೋಗುತ್ತಾರೆ. ಮಕ್ಕಳೂ ಶಾಲೆಗೆ ಹೋಗಿಬಿಡುತ್ತಾರಲ್ಲವೇ? ಸಮಯ ಕಳೆಯಲು ಮಹಿಳಾ ಕ್ಲಬ್‌ಗೆ ಸೇರಿಬಿಡಿ ಮಿಸೆಸ್ ಶ್ರೀನಿವಾಸ್,” ಎಂದು ಒಬ್ಬಾಕೆ ನುಡಿದಳು.
“ಅದೇ ನೋಡಿ ಸಮಸ್ಯೆ. ನಮ್ಮ ಯಜಮಾನರು ಬಹಳ ದಿನ ಹೊರಗೇ ಉಳಿಯುತ್ತಾರಾದ್ದರಿಂದ ನಾನು ರಾಜು ಕಡೆ ಹೆಚ್ಚಿನ ಗಮನ ಕೊಡಬೇಕಾಗಿದೆ,” ಎಂದು ಲಲಿತಾ ಅವರ ಮಾತನ್ನು ನಯವಾಗಿ ತಿರಸ್ಕರಿಸಿದ್ದಳು.
“ಅದೇನೂ ದೊಡ್ಡ ಸಮಸ್ಯೆಯಲ್ಲ ಬಿಡಿ, ಮಿಸೆಸ್ ಶ್ರೀನಿವಾಸ್,” ಅಪರ್ಣಾ ಸಮಾಧಾನಪಡಿಸುವವಳಂತೆ ಹೇಳಿದಳು.
“ಹೇಗಿದ್ದರೂ ನಾವು ನೆರೆಹೊರೆಯವರು. ನಮ್ಮ ಶ್ರೀಕಾಂತನನ್ನು ನೋಡಿಕೊಳ್ಳಲು ಕಮಲಾ ಇದ್ದಾಳೆ. ಅಲ್ಲೇ ರಾಜಾನೂ ಇರುತ್ತಾನೆ.”
“ಥ್ಯಾಂಕ್ಸ್, ಆದರೆ ನನಗೆ ಇದೆಲ್ಲ ಹಿಡಿಸುವುದಿಲ್ಲ,” ಎಂದಳು ಲಲಿತಾ.
`ತಾನು ಮೊದಲು ದೊಡ್ಡ ಕಂಪನಿಯಲ್ಲಿ ಕೆಲಸಕ್ಕಿದ್ದಳು. ಮಗುವಿಗೋಸ್ಕರ ಕೆಲಸ ಬಿಟ್ಟು ಬಂದು ಸಂತೃಪ್ತ ಗೃಹಿಣಿಯಾಗಿ ಬಾಳುತ್ತಿದ್ದೇನೆ,’ ಎಂದು ಹೇಳಬೇಕೆನಿಸಿದರೂ, ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗುತ್ತದೆ ಎಂದು ಸುಮ್ಮನಾದಳು.
“ವೇಳೆ ಕಳೆಯಲು ಈಗ ಬೇಕಾದಷ್ಟು ಸಾಧನಗಳಿವೆ. ನನ್ನ ಹವ್ಯಾಸಗಳೇ ಬೇಕಾದಷ್ಟಿವೆ. ರಾಜು ದೊಡ್ಡವನಾದ ಮೇಲೆ ನಾನು ಬಂದು ಅಲ್ಲಿ ಸೇರಬಹುದೇನೋ…..”
ಈ ಉತ್ತರವನ್ನು ನಿರೀಕ್ಷಿಸಿರದಿದ್ದ ಅಪರ್ಣಾ ಬಹಳ ಅಪಮಾನಿತಳಾದಂತೆ ಸುಮ್ಮನಾದಳು. ಅಂದಿನಿಂದ ಅಪ್ಪಿತಪ್ಪಿಯೂ ಶ್ರೀಕಾಂತನನ್ನು ಲಲಿತಾಳ ಮನೆಗೆ ಆಡಲಿಕ್ಕೆ ಬಿಡುತ್ತಿರಲಿಲ್ಲ.
ಯೋಚನೆಗಳನ್ನು ಕೊಡವಿ ಲಲಿತಾ ಪ್ರಶ್ನಿಸಿದಳು, “ಶ್ರೀಕಾಂತ, ನಿನ್ನದು ಊಟ ಆಯ್ತೇನಪ್ಪಾ?” ಮಾತನ್ನು ಮುಂದುವರಿಸಲು ಬಯಸಿದಳು.
ಇಲ್ಲ ಎಂಬಂತೆ ಶ್ರೀಕಾಂತ ತಲೆಯಾಡಿಸಿದ. ಅವನ ಕಣ್ಣು ರಾಜು ಮತ್ತಿತರರ ಮೇಲೆ ಹಾಗೇ ನೆಟ್ಟಿದ್ದ. ಅವನ ಕನಸು ಕಾಣುವ ಕಣ್ಣುಗಳಲ್ಲಿ ಏನೋ ಅಶಾಂತಿ ತುಂಬಿತ್ತು.
ಅವನ ಇದೇ ಬಗೆಯ ನಿರಾಶಾಭರಿತ ನೋಟವನ್ನು ಹಿಂದೆ ಕಂಡಿದ್ದೆನಲ್ಲಾ ಎಂದು ಲಲಿತಾ ಯೋಚಿಸಿದಳು.
ಅದೊಂದು ದಿನ ಶಾಲೆಯಲ್ಲಿ ಮಕ್ಕಳ ದಿನಾಚರಣೆಯಿತ್ತು. ಆ ದಿನ ಶಾಲೆಯ ಆವರಣದಲ್ಲಿ ಮಕ್ಕಳ ಡ್ರಾಯಿಂಗ್, ಕಟ್ಟಿಂಗ್, ಪೇಂಟಿಂಗ್‌ಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಎಲ್ಲಾ ಪಾಲಕರೂ ತಂತಮ್ಮ ಮಕ್ಕಳೊಂದಿಗೆ ಬಂದಿದ್ದರು.
ಡಿಸ್ ಪ್ಲೇ ಬೋರ್ಡಿನಲ್ಲಿದ್ದ ತಾನು ಮಾಡಿದ ಕಾಗದದ ಏರೋಪ್ಲೇನನ್ನು ತೋರಿಸುತ್ತ ಹೇಳಿದ ರಾಜು, “ನೋಡಮ್ಮ, ನಾನು ಮಾಡಿದ ಏರೋಪ್ಲೇನು.”
“ರಾಜು ತನ್ನ ಕ್ರ್ಯಾಫ್ಟ್ ಕೆಲಸದಲ್ಲಿ ಯಾವಾಗಲೂ ಮುಂದು,” ಎಂದು ಅವನ ಟೀಚರ್ ರಾಜನನ್ನು ಹೊಗಳಿದಾಗ ಅವನಿಗೆ ಬಹಳ ಹೆಮ್ಮೆಯಾಯಿತು.
ಆಗ ಲಲಿತಾ ಶ್ರೀಕಾಂತನನ್ನು ಗಮನಿಸಿದಳು. ಅವನು ತನ್ನ ಪುಟ್ಟ ಕುರ್ಚಿಯಲ್ಲಿ ಕುಳಿತು ಮುಂದಿನ ಮೇಜಿಗೆ ಗದ್ದವೂರಿ ಕುಳಿತಿದ್ದ.
“ಶ್ರೀಕಾಂತ ನಿನ್ನ ತಾಯಿ ಎಲ್ಲಿ, ಬರಲಿಲ್ಲವೇ?”
“ಇಲ್ಲ, ಕ್ಲಬ್‌ಗೆ ಹೋಗಿದ್ದಾರೆ.”
“ನಿನ್ನ ತಂದೆ ಎಲ್ಲಿ?”
“ದುಬೈನಲ್ಲಿದ್ದಾರೆ.”
“ಹಾಗಾದರೆ ಮನೆಯಲ್ಲಿ ಯಾರಿದ್ದಾರೆ?”
“ಕಮಲಾ.”
“ಹಾಗಾದರೆ ಕಮಲಾಳನ್ನು ಶಾಲೆಗೆ ಏಕೆ ಕರೆತರಲಿಲ್ಲ?” ನಸುನಗುತ್ತ ಟೀಚರ್ ಪ್ರಶ್ನಿಸಿದರು.
“ಅವಳಿಗೆ ಮನೆಯಲ್ಲಿ ತುಂಬಾ ಕೆಲಸ.”
ಅವನ ಕಣ್ಣಿನ ಕೊನೆಯಲ್ಲಿ ಶೇಖರವಾಗಿದ್ದ ಕಂಬನಿಯನ್ನು ಲಲಿತಾ ಗಮನಿಸಿದಳು. ಆಗ ಅವಳು ಎಚ್ಚರಿಕೆಯಿಂದ ಸಂಭಾಷಣೆಯನ್ನು ಬದಲಾಯಿಸಿದ್ದಳು.
“ಹಲೋ ಶ್ರೀಕಾಂತ್! ಇದು ನೀನು ಬಿಡಿಸಿದ ಚಿತ್ರವಲ್ವಾ? ಎಷ್ಟೊಂದು ಚೆನ್ನಾಗಿ ಚಿತ್ರ ಬಿಡಿಸಿದ್ದೀಯ ಮರಿ! ನಮ್ಮ ರಾಜುವಿಗೂ ಬರಲ್ಲ. ಅವನಿಗೂ ಸ್ವಲ್ಪ ಹೇಳಿಕೊಡಪ್ಪ.”
“ಅಮ್ಮಾ….! ನಮಗೆ ಹಸಿವಾಗಿದೆ,” ಎಂದು ರಾಜು ಬಂದು ಅವಳ ಸೀರೆ ಜಗ್ಗಿದಾಗಲೇ ಅವಳು ತನ್ನ ಆಲೋಚನೆಗಳನ್ನು ಕೊಡವಿ ಎಚ್ಚೆತ್ತಳು.
“ಅತ್ತೇ…. ಅತ್ತೇ… ನಮಗೆಲ್ಲ ಬಹಳ….. ಬಹಳ…. ಹಸಿವು,” ಪುಟ್ಟ ಶೃತಿಯೂ ಅವರೊಂದಿಗೆ ಸೇರಿಕೊಂಡಳು.
“ಶ್ರೀಕಾಂತ್, ಬರ್ತೀನಪ್ಪಾ… ಒಂದು ದಿನ ನಿಮ್ಮ ತಾಯಿಯ ಬಳಿ ಅನುಮತಿ ಕೇಳಿಕೊಂಡು ಬಾ…. ಅವತ್ತು ನಿನಗೆ ಮಸಾಲೆ ದೋಸೆ ಮಾಡಿಕೊಡುತ್ತೇನೆ,” ಎಂದ ಲಲಿತಾ ಹುಲ್ಲು ಕತ್ತರಿಸುವ ಸಾಧನವನ್ನು ಸರಿಮಾಡಿಕೊಳ್ಳುತ್ತ ಒಳನಡೆದಳು. ಅವಳ ಹಿಂದೆಯೇ `ಹೋ’ ಎಂದು ಸದ್ದು ಮಾಡುತ್ತ ಮಕ್ಕಳ ಹಿಂಡು ಹೋಯಿತು. ಶ್ರೀಕಾಂತ್ ಇನ್ನೂ ಅವರನ್ನೇ ದಿಟ್ಟಿಸುತ್ತ ಅಲ್ಲೇ ನಿಂತುಕೊಂಡಿದ್ದ.
“ಈ ದಿನದ ಆಧುನಿಕ ನಾರಿ ಎಚ್ಚೆತ್ತುಕೊಳ್ಳಬೇಕಾಗಿದೆ…. ತನ್ನ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಪ್ರತಿಭಟಿಸಿ ಸಮಾಜವನ್ನು ಎದುರಿಸಬೇಕಾಗಿದೆ….” ಸಭೆ ಸಮಾರಂಭಗಳಿಗಷ್ಟೇ ಲಾಯಕ್ಕಾದ ಭಾಷಣವನ್ನು ಮುಖ್ಯ ಅತಿಥಿ ಕಂಠ ಪಾಠ ಮಾಡಿಕೊಂಡವರಂತೆ ಒಪ್ಪಿಸುತ್ತಿದ್ದರು.
ವೇದಿಕೆಯ ಮೇಲೆ ಕುಳಿತಿದ್ದ ಅಪರ್ಣಾ ಎದುರಿಗಿದ್ದ ಸಭಿಕರನ್ನು ಗಮನಿಸಿ ನೋಡಿದಳು. ಯಾರಿಗೂ ಭಾಷಣ ಕೇಳಿಸಿಕೊಳ್ಳುವ ಗೊಡವೆ ಇರಲಿಲ್ಲ. ಫಳಫಳನೆ ಮಿರುಗುತ್ತಿದ್ದ ಶಿಫಾನ್ ಸೀರೆಗಳು, ಮಿಂಚುತ್ತಿದ್ದ ನೈಲೆಕ್ಸ್ ಸೀರೆಗಳು, ಒಪ್ಪವಾದ ಕೇಶ ಶೃಂಗಾರ, ಹೇರಳವಾದ ಮೇಕಪ್‌ಗಳಿಂದ ಸುಸಜ್ಜಿತವಾಗಿ ಬಂದು ನೆರೆದಿದ್ದರು. ಕ್ಲಬ್‌ನ ವಾರ್ಷಿಕೋತ್ಸವದ ದಿನಕ್ಕೆಂದು ವಾರಗಟ್ಟಲೇ ಚರ್ಚಿಸಿ, ಇತ್ತೀಚೆಗಷ್ಟೇ ವಿದೇಶೀ ಬಂಧು ಬಾಂಧವರಿಂದ ಕೊಂಡ ಉಡುಗೊರೆಗಳನ್ನೂ ಹೇರಿಕೊಂಡು, ಫ್ಯಾಷನ್ನಿನ ಮ್ಯಾಚಿಂಗ್ ಭರಾಟೆಯ ಪ್ರದರ್ಶನಕ್ಕಿಳಿದಿದ್ದರು.
“ಮುಂದುವರಿದ ದೇಶಗಳಾದ ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ಗಳತ್ತ ನೋಡಿ…. ಗೊಡ್ಡು ಸಂಪ್ರದಾಯಕ್ಕೆ ಬಲಿ ಬಿದ್ದಿರುವ ಭಾರತೀಯ ನಾರಿಯನ್ನು ನೋಡಿ…..”
ತುಟಿಯ ಲಿಪ್‌ಸ್ಟಿಕ್ ಕೆಡದಂತೆ, ಮಧ್ಯೆ ಮಧ್ಯೆ ನೀರು ಗುಟುಕರಿಸುತ್ತ ಮುಖ್ಯ ಅತಿಥಿಗಳ ಭಾಷಣ ಅವ್ಯಾಹತವಾಗಿ ಸಾಗಿಯೇ ಇತ್ತು.
ಈಗ ಅಪರ್ಣಾಳ ಯೋಚನೆಗಳು ಮನೆಯತ್ತ ತಿರುಗಿದ. ಈ ದಿನ ಅವಳು ಮನೆ ಬಿಟ್ಟು ಹೊರಡುವಾಗ ಶ್ರೀಕಾಂತನ ಆರೋಗ್ಯ ಅಷ್ಟೇನೂ ಚೆನ್ನಾಗಿರಲಿಲ್ಲ. ಅಸಲಿಗೆ ಅವನು ಗೆಲುವಾಗಲೇ ಇರಲಿಲ್ಲ. ಆದರೆ ವಾರ್ಷಿಕೋತ್ಸವದ ಸಮಾರಂಭದ ಗಡಿಬಿಡಿಯಲ್ಲಿ ಮುಳುಗಿದ್ದ ಅಪರ್ಣಾ, ಎರಡು ಬಾರಿ ಡಾಕ್ಟರ್ ಕೊಟ್ಟ ಅಪಾಯಿಂಟ್ ಮೆಂಟ್‌ಗಳನ್ನು ಕೈ ಬಿಟ್ಟಿದ್ದಳು.
ಹಿಂದಿನ ರಾತ್ರಿ ಪೂರ್ತಿ ಶ್ರೀಕಾಂತ ನರಳುತ್ತಲೇ ಇದ್ದ. ಮುಂಜಾನೆಯ ಹೊತ್ತಿಗೆ ಲಘು ಜ್ವರ ಬಂದಿತ್ತು. ಮನೆ ಬಿಟ್ಟು ಹೊರಡುವಾಗ ಕಮಲಾಳನ್ನು ಕರೆದು, “ಅವನಿಗೆ ಜ್ವರ ಹೆಚ್ಚಾದರೆ ಈ ಅರ್ಧ ಮಾತ್ರೆಯನ್ನು ಕೊಟ್ಟಿರು,” ಎಂದಿದ್ದಳು.
“ಅಮ್ಮಾ, ಈ ದಿನ ಹೋಗಬೇಡ,” ಎಂದು ಶ್ರೀಕಾಂತ ಗೋಗರೆದಿದ್ದ.
“ಇವತ್ತು ನಾನು ಹೋಗಲೇಬೇಕಪ್ಪ,” ಎಂದು ಅವನಿಗೆ ಪೊಳ್ಳು ಸಮಾಧಾನ ಹೇಳಿದಳು.
ಕೆಲಸದ ನಿಮಿತ್ತ, ಕಂಪನಿಯ ವತಿಯಿಂದ ಸುರೇಶ ಒಂದು ವರ್ಷದ ಮಟ್ಟಿಗೆ ದುಬೈಗೆ ಹೊರಟಿದ್ದ. ಶ್ರೀಕಾಂತನೂ ಶಾಲೆಗೆ ಹೊರಟುಹೋದ ಮೇಲೆ ಅಪರ್ಣಾಳಿಗೆ ಮನೆಯಲ್ಲಿ ಸಮಯ ಕಳೆಯುವುದೇ ದುಸ್ತರವಾಯಿತು. ಆದ್ದರಿಂದ ಅವಳು ಮಹಿಳಾ ಸಮಾಜಕ್ಕೆ ಸೇರಿಕೊಂಡು ದಿನಾ ಕ್ಲಬ್‌ಗೆ ಹೋಗಿ ಬರತೊಡಗಿದಳು.
ಅವಳಿಗೆ ಮನೆ ಗಂಡ ಮಕ್ಕಳು ಎಂದು ಸದಾ ಬಂಧಿಗಳಂತೆ ಮನೆಯಲ್ಲೇ ಕೊಳೆಯುವ ಗೃಹಿಣಿಯರನ್ನು ಕಂಡರೆ ಮಹಾ ತಿರಸ್ಕಾರ. ಪದವೀಧರಳಾದ ತಾನು ಪಾತ್ರೆ ಉಜ್ಜುತ್ತ ಮನೆಯಲ್ಲಿ ಕೂಡುವುದರ ಬದಲು ಮಹಿಳಾ ಸಂಘಟನೆಗಾಗಿ ಹೊರಗೆ ದುಡಿಯಬೇಕು ಎಂದು ತನ್ನ ಮಟ್ಟಿಗೆ ಕ್ರಾಂತಿಕಾರಕವೆನಿಸಿದ ಆಧುನಿಕ ಮನೋಭಾವನೆಗಳನ್ನು ಬೆಳೆಸಿಕೊಂಡು, ಸಂಪೂರ್ಣವಾಗಿ ಮನೆಯ ಕರ್ತವ್ಯಗಳನ್ನು ನಿರ್ಲಕ್ಷಿಸತೊಡಗಿದಳು. ಶ್ರೀಕಾಂತನ ತಾಯಿಯಾಗಿ ಆ ಜವಾಬ್ದಾರಿಯನ್ನು ಕಡೆಗಣಿಸಿದ್ದಳು. ಅಂದಿನಿಂದ ಶ್ರೀಕಾಂತ ಮನಸ್ಸಿನಲ್ಲಿಯೇ ನೊಂದೂ ನೊಂದೂ ಮೌನಿಯಾಗಿ ಹೋಗಿದ್ದ! ಆ ದೊಡ್ಡ ಮನೆ ಪೂರ್ತಿ ಒಬ್ಬನೇ ಕುಳಿತು, ಕಥೆ ಪುಸ್ತಕ, ಕಾಮಿಕ್ಸ್ ಓದಿ, ಬುದ್ಧಿ ಜಡ್ಡು ಗಟ್ಟಿದವನಂತಾಗಿದ್ದ.
“ನೀನೇಕೆ ಹೊರಗೆ ಹೋಗಿ ಆಟ ಆಡಬಾರದು?” ಎಂದು ಯಾವಾಗಲಾದರೂ ಅವಳು ಕೇಳಿದಾಗ, “ಅಮ್ಮಾ, ರಾಜು ಮನೆಗೆ ಹೋಗಬೇಡವೆಂದು ನೀನೇ ಹೇಳಿದೆ,” ಎನ್ನುತ್ತಿದ್ದ.
ಅಪರ್ಣಾಳಿಗೆ ತನ್ನನ್ನು ಅಪಮಾನಗೊಳಿಸಿದ ಲಲಿತಾಳನ್ನು ಕಂಡರೆ ಮೈಯೆಲ್ಲ ಉರಿ ಉರಿ. ಪೂರ್ವಕಾಲದ ಪುಟ್ಟಮ್ಮನಂತೆ ಮನೆಯಲ್ಲೇ ಕೊಳೆಯುವ ಅವಳನ್ನು ಶ್ರೀಕಾಂತ ಮನಃಪೂರ್ವಕವಾಗಿ ಗೌರವಿಸುತ್ತಾನೆಂದೇ? ಲಲಿತಾ ಅತ್ತೆ ಮಾಡುವ ಮಸಾಲೆ ದೋಸೆ, ಬೋಂಡ, ಪಕೋಡಾಗಳು, ರಾಜು ಮತ್ತವನ ಗೆಳೆಯರೊಂದಿಗೆ ಅವಳೂ ಮಕ್ಕಳಂತೆ ಕೂತು ಕೇರಂ ಆಡುವ ಶೈಲಿ, ಬೇಸಿಗೆಯಲ್ಲಿ ಅವರನ್ನೆಲ್ಲ ಈಜು, ಜಾಗಿಂಗ್ ಎಂದು ಹೊರಡಿಸಿಕೊಂಡು ಹೋಗುವ ಪರಿ… ಅವೆಲ್ಲಕ್ಕೂ ಮಾರುಹೋಗಿದ್ದಾನೆಯೇ?
`ಅಯ್ಯೋ ನಾನು ಲಲಿತಾಳನ್ನು ಕಂಡು ಏಕೆ ಅಸೂಯೆ ಪಡಲಿ?’ ಎಂದುಕೊಂಡಳು ಅಪರ್ಣಾ.
“ನಮ್ಮ ಅಧ್ಯಕ್ಷೆ, ಮಿಸೆಸ್ ಅಪರ್ಣಾ ಭಟ್ ಈಗ ವಂದನಾರ್ಪಣೆ ಸಲ್ಲಿಸಲಿದ್ದಾರೆ….”
ತಕ್ಷಣ ತನ್ನ ಯೋಚನೆಗಳನ್ನು ಕೊಡವಿದ ಅಪರ್ಣಾ, ನಸುನಗುತ್ತ ಮೈಕ್ ಬಳಿ ನಡೆದಿದ್ದಳು, “ಮಾನ್ಯ ಮುಖ್ಯ ಅತಿಥಿಗಳೇ, ಪ್ರೀತಿಯ ಗೆಳತಿಯರೇ….” ಯಾವಾಗಲೂ ಅಭ್ಯಾಸವಾಗಿದ್ದ ಅದೇ ಹಳಸಲು ಮಾತುಗಳು ಸರಸರಸನೆ ಹರಿದು ಬಂದವು.
ಮುಖ್ಯ ಅತಿಥಿಗಳನ್ನು ಉಪಾಹಾರ ಗೃಹಕ್ಕೆ ಕಳುಹಿಸಿಕೊಟ್ಟು, ಅಪರ್ಣಾ ಸಮೀಪದಲ್ಲಿದ್ದ ಟೆಲಿಫೋನ್ ಬೂತಿನ ಬಳಿ ಓಡಿಬಂದಳು. ಅದಾಗಲೇ ಮಧ್ಯಾಹ್ನ ಒಂದೂವರೆಯಾಗಿತ್ತು.
ಶ್ರೀಕಾಂತ ಊಟ ಮಾಡಿದನೋ ಇಲ್ಲವೋ? ಜ್ವರ ಇಳಿದಿತ್ತೋ ಇಲ್ಲವೋ? ಅವಳು ಆತಂಕಪಟ್ಟು ಡಯಲ್ ಮಾಡಲು ಪ್ರಯತ್ನಿಸಿದಷ್ಟೂ ಸಿಕ್ಕು ಹೆಚ್ಚಾಗುತ್ತಿತ್ತು.
ಆ ಹಾಳು ಕಮಲಾ, ಮನೆಯಲ್ಲಿದ್ದಾಳೋ ಅಥವಾ ಹರಟೆ ಹೊಡೆಯಲಿಕ್ಕೆ ಹೊರಟಳೋ? ಇತ್ತೀಚೆಗೆ ಅವಳು ಮಾಡುತ್ತಿದ್ದ ಕಿರಿಕಿರಿ ಒಂದೊಂದಲ್ಲ. ಗದರಿಸಿದರೆ ಕೆಲಸ ಬಿಟ್ಟುಬಿಡುವುದಾಗಿ ಅಪರ್ಣಾಳನ್ನೇ ಹೆದರಿಸುತ್ತಿದ್ದಳು. ಇಂದಿನ ಕಾಲದಲ್ಲಿ ಮತ್ತೆ ಹೊಸ ಕೆಲಸದವರನ್ನು ಹುಡುಕಿ ಅವರೊಡನೆ ಹೆಣಗುವುದೆಂದರೆ ಸುಮ್ಮನಾಯಿತೇ? ಅಪರ್ಣಾ ವಿಧಿಯಿಲ್ಲದೆ ತಾನೇ ರಾಜಿ ಮಾಡಿಕೊಳ್ಳುತ್ತಿದ್ದಳು.
ಅಷ್ಟರಲ್ಲಿ ಊಟದ ಸಂಭ್ರಮ ಮುಗಿದು ಮುಖ್ಯ ಅತಿಥಿಗಳನ್ನು ಬೀಳ್ಕೊಂಡದ್ದೂ ಆಗಿತ್ತು. ಅಪರ್ಣಾ ಕೂಡಲೇ ಕಾರು ಹತ್ತಿ, ವೇಗವಾಗಿ ಓಡಿಸುತ್ತ ಶ್ರೀಕಾಂತನ ಚಿಂತೆ ಹೆಚ್ಚಿಸಿಕೊಂಡಳು.
ಅಪರ್ಣಾ ತನ್ನ ಮನೆಯ ಮುಂದೆ ಕಾರು ನಿಲ್ಲಿಸಿ, ಮೆಟ್ಟಿಲು ಹತ್ತಿ ಒಳ ಬರುತ್ತಿದ್ದಂತೆಯೇ ಒಳಗಿನಿಂತ ಲಲಿತಾ ಧಾವಂತಪಟ್ಟುಕೊಂಡು ಹೊರಬರುತ್ತಿದ್ದಳು, ಅವಳ ಹಿಂದೆಯೇ ಕಮಲಾ.
“ಶ್ರೀಕಾಂತ್….!” ಅದಕ್ಕಿಂತ ಅವನ ಬಗ್ಗೆ ಅಪರ್ಣಾಳಿಂದ ಹೆಚ್ಚಾಗಿ ಕೇಳಲಾಗಲಿಲ್ಲ.
“ಶ್ರೀಕಾಂತನಿಗೆ ವಿಪರೀತ ಜ್ವರ ಬಂದು ಕೆಂಡದಂತೆ ಮೈ ಸುಡುತ್ತಿತ್ತು. ಬಾಯಿಗೆ ಬಂದಂತೆ ಬಡಬಡಿಸುತ್ತಿದ್ದ….. ಆದ್ದರಿಂದ ನನಗೆ ಗಾಬರಿಯಾಗಿ ಲಲಿತಾ ಅತ್ತೆಯನ್ನು ಕರೆದುಕೊಂಡು ಬಂದೆ…..” ಎಂದಳು ಕಮಲಾ.
`ನರಳುತ್ತಾ ಬಿದ್ದಿರುವ ಮಗುವಿಗಿಂತ ನಿನಗೆ ಸುಡುಗಾಡು ಕ್ಲಬ್ಬೇ ಹೆಚ್ಚಾಯಿತೇ? ಎಂಥ ತಾಯಿ ನೀನು?’ ಎಂದೆಲ್ಲಾ ಅವಳನ್ನು ಜಾಡಿಸಬೇಕೆಂದುಕೊಂಡರೂ ಲಲಿತಾ ಸುಮ್ಮನೆ ಹೇಳಿದಳು,
“ನಾನು ಬಂದು ನೋಡಿದಾಗ ಶ್ರೀಕಾಂತ್ ಒದ್ದಾಡುತ್ತಿದ್ದ. ನಿಮ್ಮ ಫ್ಯಾಮಿಲಿ ಡಾಕ್ಟರ್ ಯಾರೆಂದು ನನಗೆ ತಿಳಿಯಲಿಲ್ಲ. ಅದಕ್ಕೆ ನಾನು ಡಾಕ್ಟರ್ ಚಂದ್ರಕಾಂತ್‌ರನ್ನು ಕರೆದೆ. ಅವರು ಅವನನ್ನು ಪರೀಕ್ಷಿಸಿ ನ್ಯುಮೋನಿಯಾ ಎಂದರು,” ಮತ್ತೆ ಅಪರ್ಣಾಳೊಂದಿಗೆ ಹೆಚ್ಚಿಗೆ ಮಾತನಾಡಲಿಚ್ಛಿಸದೆ ಲಲಿತಾ ತನ್ನ ಮನೆಯ ದಾರಿ ಹಿಡಿದಳು. ಶ್ರೀಕಾಂತನ ರೂಮಿನತ್ತ ದಾಪುಗಾಲು ಹಾಕುತ್ತ ಅಪರ್ಣಾ ಕಮಲಾಳನ್ನು ಗದರಿದಳು, “ಯಾಕೇ ನೀನು ಕ್ಲಬ್ಬಿಗೆ ಫೋನ್ ಮಾಡಿ ನನಗೆ ತಿಳಿಸಲಿಲ್ಲ?”
“ಲಲಿತತ್ತೆ ನಿಮ್ಮೊಂದಿಗೆ ಮಾತನಾಡಬೇಕೆಂದು ಬಹಳ ಪ್ರಯತ್ನಪಟ್ಟರು ಮೇಡಂ. ಅಲ್ಲಿದ್ದ ನಿಮ್ಮ ಜವಾನ ನೀವು ಮೀಟಿಂಗ್ ನಲ್ಲಿದ್ದೀರಾ ಹಾಗೆಲ್ಲ ಡಿಸ್ಟರ್ಬ್ ಮಾಡಲಾಗುವುದಿಲ್ಲ ಎಂದು ಹೇಳಿ ಫೋನ್ ಕುಕ್ಕಿಬಿಟ್ಟ. ಅನಂತರವೇ ಅವರು ಡಾ. ಚಂದ್ರಕಾಂತ್‌ರನ್ನು ಕರೆದದ್ದು. ಅಷ್ಟರಲ್ಲಿ ವಾಂತಿ ಮಾಡಿಕೊಂಡ ಶ್ರೀಕಾಂತನನ್ನು ಶುಚಿಗೊಳಿಸಿ ಎಳನೀರು ಕುಡಿಸಿ, ರಾಜುವನ್ನು ಔಷಧಿ ತರಲು ಕಳುಹಿಸಿದರು,” ಎಂದಳು ಕಮಲಾ.
ಕೇಳಿಸಿಕೊಳ್ಳುತ್ತಿದ್ದ ಅಪರ್ಣಾಳ ಹೃದಯ ಅಪರಾಧಿ ಭಾವನೆಯಿಂದ ತತ್ತರಿಸಿತು. ಶ್ರೀಕಾಂತ್ ಬಸವಳಿದು ಅದೀಗ ತಾನೇ ಕಣ್ಣು ಮುಚ್ಚಿ ಮಲಗಿದ್ದ. ಅವನ ಅಸ್ತವ್ಯಸ್ತವಾದ ಕೂದಲು ಹಣೆಯ ಮೇಲೆ ಅಡ್ಡಾಡುತ್ತಿದ್ದರೆ, ಎಡಗೈ ಪಕ್ಕದಲ್ಲಿದ್ದ ಗೊಂಬೆಯನ್ನು ಗಟ್ಟಿಯಾಗಿ ಅಪ್ಪಿಹಿಡಿದಿತ್ತು. ಬಲಗೈಯನ್ನು ಹಾಸಿಗೆಯ ಮಗ್ಗುಲಿಗೆ ಚಾಚಿ ಕನರಿಸುತ್ತಿದ್ದ, “ಲಲಿತತ್ತೆ… ನನ್ನ ಬಿಟ್ಟು ಹೋಗಬೇಡಿ….. ಲಲಿತತ್ತೆ ಇಲ್ಲೇ ಇರಿ. ಅಮ್ಮ ಅಂತೂ ನನ್ನ ಬಳಿ ಇರೋದೇ ಇಲ್ಲ…..”
ಅವಳ ಪಕ್ಕ ಕುಳಿತು ಸ್ವತಃ ಇದನ್ನು ಕೇಳಿಸಿಕೊಂಡ ಅಪರ್ಣಾ, ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅವಳ ಮಾತೃ ಹೃದಯ ಕಂದನಿಗೆ ತಾನೆಸಗಿದ ದ್ರೋಹವನ್ನು ನೆನೆದು ಮೂಕವೇದನೆಪಟ್ಟಿತು. ತಾನು ನಂಬಿದ ಅರ್ಥಹೀನ ಆಧುನಿಕ ವಿಚಾರಗಳು, ವೈಚಾರಿಕತೆಯ ಹೆಸರಿನಲ್ಲಿ ತಂದುಕೊಂಡ ಆತಂಕಗಳು…. ತನ್ನನ್ನು ತಾನೇ ಕ್ಷಮಿಸಲಾರದಾದಳು.
ಸಂಪೂರ್ಣವಾಗಿ ತಾನು ಶ್ರೀಕಾಂತನ ಪ್ರೀತಿಯಿಂದ ಪರಿತ್ಯಕ್ತಳಾಗುವ ಮೊದಲು ಏನಾದರೂ ಮಾಡಲೇಬೇಕೆಂದು ನಿರ್ಧರಿಸಿದಳು. ಸಾಯಂಕಾಲ ಕಾಫಿ ಕುಡಿಯುವ ಹೊತ್ತಿಗೆ ಒಂದು ದೃಢ ನಿರ್ಧಾರಕ್ಕೆ ಬಂದಿದ್ದಳು. ಆಗ ತಾನೇ ಎದ್ದ ಶ್ರೀಕಾಂತ್, “ಅಮ್ಮಾ….” ಎಂದು ಕೂಗಿ ಕರೆದಾಗ ಓಡಿಹೋಗಿ ಅವನನ್ನು ಮಡಿಲಲ್ಲಿ ತುಂಬಿಕೊಂಡು ಕಂಬನಿ ಮಿಡಿಯುತ್ತ, ಅವನ ಹಣೆ, ಗಲ್ಲಗಳಿಗೆ ಮುತ್ತಿಟ್ಟು, “ಎದ್ದೆಯಾ ಶ್ರೀಕಾಂತ್…… ನಿನ್ನನ್ನು ಬಿಟ್ಟು ಎಲ್ಲಿಗೂ ಹೋಗಲಾರೆ,” ಎಂದಳು.
ಅನಂತರ ಕ್ಲಬ್‌ಗೆ ಫೋನ್ ಮಾಡಿ, “ಮಿಸೆಸ್ ರಾವ್, ನನ್ನ ಹೆಸರನ್ನು ಈ ಬಾರಿಯ ಚುನಾವಣೆಯಿಂದ ದಯವಿಟ್ಟು ರದ್ದು ಮಾಡಿ…. ಇಲ್ಲ, ಇಲ್ಲ… ನನಗ್ಯಾವ ಹುದ್ದೆಯ ಮೇಲೂ ಅಕ್ಕರೆ ಇಲ್ಲ….. ಹ್ಞೂಂ…. ಎಲ್ಲಾ ನಿರ್ಧರಿಸಿಯಾಗಿದೆ. ಒಬ್ಬ ಸದಸ್ಯಳಾಗಿದ್ದು ಯಾವಾಗಲಾದರೊಮ್ಮೆ ಭೇಟಿ ಕೊಡಲು ಪ್ರಯತ್ನಿಸುವೆ,” ಎಂದು ಫೋನಿಟ್ಟಳು.
`ನನಗೆ ನನ್ನ ಮಗೂ ಶ್ರೀಕಾಂತ ಮುಖ್ಯ. ಕ್ಲಬ್‌ಗೆ ಮುಂದೆ ಯಾವಾಗ ಬೇಕಾದರೂ ಹೋಗಬಹುದು. ನನ್ನ ಪತಿ, ನನ್ನ ಮಗ, ನನ್ನ ಮನೆ, ನನ್ನ ಮನಶ್ಶಾಂತಿ ಮುಖ್ಯ’ ಎಂದು ನಿರ್ಧರಿಸಿದಳು.
ತಾನು ಯಾವುದೋ ಕುರುಡು ನಂಬಿಕೆಗಳಿಗೆ ಬಲಿಯಾಗಿ, ಸ್ವಂತ ಗೃಹಕೃತ್ಯದ ಕರ್ತವ್ಯಗಳನ್ನು ತ್ಯಜಿಸಿ, ಬಿಸಿಲ್ಗುದುರೆಯ ಬೆನ್ನು ಹತ್ತಿ, ಬಂಗಾರದಂಥ ಬದುಕನ್ನು ಬರಿದುಗೊಳಿಸಿ ಕೊಳ್ಳುತ್ತಿದ್ದೆನಲ್ಲಾ ಎಂದು ವ್ಯಥೆಪಟ್ಟಳು. ಅಷ್ಟು ಮಾತ್ರವಲ್ಲದೆ, ಅವಳ ಮನಸ್ಸು ಲಲಿತಾಳಂಥ ಉತ್ತಮ ಗೆಳತಿಯನ್ನು ಕಳೆದುಕೊಳ್ಳಲೂ ಸಿದ್ಧಳಿರಲಿಲ್ಲ.
“ಕಮಲಾ, ಒಂದು ಗಳಿಗೆ ಶ್ರೀಕಾಂತನ ಬಳಿ ಇರು. ನಾನೀಗಲೇ ಲಲಿತಾಳ ಮನೆಗೆ ಹೋಗಿ ಅವಳಿಗೆ ಕೃತಜ್ಞತೆ ತಿಳಿಸಿ ಬರುತ್ತೇನೆ,” ಎಂದು ಹೊರಟಳು.