ಮದುವೆಗೆ ಮುಂಚಿನಿಂದಲೂ ಉದ್ಯೋಗಸ್ಥ ವನಿತೆಯಾಗಿ, ಕೆರಿಯರ್ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಬೆಂಗಳೂರಿನ ಕುಮುದಾರಾಣಿ, ಮದುವೆಯ ನಂತರ ಕೆಲಸ ಮುಂದುವರಿಸಿಕೊಂಡು ಈಗ ಇಬ್ಬರು ಮಕ್ಕಳ ಮಮತಾಮಯಿ ತಾಯಿ ಎನಿಸಿದ್ದಾರೆ.
ಹಿರಿಯ ಮಗಳು ಅನನ್ಯಾ 12 ದಾಟಿ, ಇದೀಗ 6ನೇ ಕ್ಲಾಸಿನ ಕೊನೆಯ ಹಂತದಲ್ಲಿದ್ದಾಳೆ. ಕಿರಿಯ ಮಗಳು ಇನ್ನೂ ಚಿಕ್ಕ ಕ್ಲಾಸಿನ ವಿದ್ಯಾರ್ಥಿನಿ. ಹದಿಹರೆಯಕ್ಕೆ ಕಾಲಿಟ್ಟ ಮಗಳ ಜೊತೆಗಿನ ಇವರ ವಾತ್ಸಲ್ಯದ ಅನುಬಂಧದ ಬಗ್ಗೆ ಅವರ ಮಾತುಗಳಲ್ಲೇ ತಿಳಿಯೋಣವೇ….?
ನಿಮ್ಮ ಮತ್ತು ನಿಮ್ಮ ಮಗಳ ಬಾಂಧವ್ಯದ ಕುರಿತು ಹೇಳಿ.ನನ್ನ ಹಿರಿಯ ಮಗಳು ಅನನ್ಯಾ ಎಲ್ಲಾ ವಿಷಯಗಳ್ನೂ ಮನಬಿಚ್ಚಿ ನನ್ನೊಂದಿಗೆ ಹಂಚಿಕೊಳ್ಳುತ್ತಾಳೆ, ಅದು ಹಾಗೆ ಹೀಗೆ ಎಂದು ಚರ್ಚಿಸುತ್ತಾಳೆ, ಸರಿ ತಪ್ಪು ಇತ್ಯಾದಿಗಳನ್ನು ವಿಮರ್ಶಿಸುತ್ತಾಳೆ. ಯಾವುದೇ ವಿಷಯವಿದ್ದರೂ ತಾನೇ ನಿರ್ಧಾರ ಕೈಗೊಳ್ಳಬಲ್ಲ ಸಾಮರ್ಥ್ಯ ಅವಳಿಗಿದೆ. ಹಾಗೆ ಮಾಡಿದರೂ ನನ್ನ ಬಳಿ ಬಂದು, ಇದು ಸರಿಹೋಯ್ತಲ್ವಾ, ಹೀಗೆ ಮಾಡಲೇ ಎಂದು ಮಾರ್ಗದರ್ಶನ ಕೋರುತ್ತಾಳೆ. ಅವಳ ವಿದ್ಯಾಭ್ಯಾಸದ ಕುರಿತು ನನಗೆ ಹೆಚ್ಚಿನ ಚಿಂತೆ ಇಲ್ಲ. ಎಲ್ಲವನ್ನೂ ನಾನೇ ಮ್ಯಾನೇಜ್ ಮಾಡ್ತೀನಿ. ಖಾಸಗಿ ಕಂಪನಿಯೊಂದರಲ್ಲಿ ಹಿರಿಯ ಹುದ್ದೆಯಲ್ಲಿರುವ ಪತಿಗೆ ಬಿಡುವು ದೊರಕುವುದೇ ಅಪರೂಪ. ಹೀಗಾಗಿ ನನ್ನ ಬಳಿ ಕೇಳಿದ ನಂತರ, ತಿಳಿಯದ ಇನ್ನಿತರ ವಿಷಯಗಳನ್ನು ತಂದೆ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾಳೆ. ಆದರೆ ಅವಳು ತುಂಟತನ ಮಾತ್ರ ಇನ್ನೂ ಬಿಟ್ಟಿಲ್ಲ. ಬಲು ಘಾಟಿ! ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಅಷ್ಟೇ ಆಸಕ್ತಿ ಇದೆ.
ನಿಮ್ಮ ಮಗಳ ಜೊತೆ ಯಾವುದಾದರೂ ಒಂದು ಮರೆಯಲಾಗದ ಸನ್ನಿವೇಶದ ಕುರಿತು ಹಂಚಿಕೊಳ್ಳಲು ಬಯಸುವಿರಾ?
ನಾವು ತಾಯಿ ಮಗಳು ಅನ್ನುವುದಕ್ಕಿಂತ ಒಳ್ಳೆಯ ಫ್ರೆಂಡ್ಸ್ ಎನ್ನಬಹುದು, ಹಾಗೆ ಎಲ್ಲ ವಿಷಯವನ್ನೂ ಓಪನ್ ಆಗಿ ಚರ್ಚಿಸುತ್ತೇವೆ. ಅವಳೊಂದಿಗಿನ ಪ್ರತಿ ಅನುಭವ ಮಧುರವೇ….. ಹಾಗೆ ನೋಡಿದರೆ, ಒಂದನ್ನಂತೂ ಮರೆಯಲಾಗದು. ಒಮ್ಮೆ ಬಂಡೀಪುರಕ್ಕೆ ಪ್ರವಾಸಕ್ಕೆಂದು ಹೋಗಿದ್ದೆವು. ಎಲ್ಲರಿಂದ ದೂರವಾಗಿ ನಾವಿಬ್ಬರೇ ಸ್ವಲ್ಪ ಧೈರ್ಯವಹಿಸಿ ಏನೇನೋ ಚರ್ಚಿಸುತ್ತಾ ಒಂದು ಮೂಲೆಗೆ ಬಂದುಬಿಟ್ಟಿದ್ದೆವು. ದಿಢೀರ್ ಅಂತ ಅಲ್ಲಿ 4-5 ಆನೆಗಳು ಒಟ್ಟಾಗಿ ಕಾಣಿಸಿಕೊಂಡಾಗ ನನಗಂತೂ ಬಹಳ ಕಕ್ಕಾಬಿಕ್ಕಿ ಆಯ್ತು.
“ಅಮ್ಮ, ನೀನು ನರ್ವಸ್ ಆಗಬೇಡ!” ಅಂತ ಅವಳೇ ನನಗೆ ಧೈರ್ಯ ಹೇಳಿ ಮೆಲ್ಲಗೆ ಅಲ್ಲಿಂದ ಹೊರಡಿಸಿದಳು. ತಕ್ಷಣ ನಮ್ಮ ಡ್ರೈವರ್‌ಗೆ ತಾನೇ ಫೋನ್ ಮಾಡಿ, ಗಾಡಿ ತರಿಸಿ ಸುರಕ್ಷಿತವಾಗಿ ನಮ್ಮ ರೂಮ್ ಸೇರಿದೆವು. ಆ ಸಮಯದಲ್ಲಿ ಅವಳು ತೋರಿದ ಸಮಯಸ್ಛೂರ್ತಿ ನನಗೆಂದೂ ಮರೆಯಲಾಗದು!
ನೀವು ಮಾಡುವ ಅಡುಗೆಯಲ್ಲಿ ನಿಮ್ಮ ಮಗಳು ಇಷ್ಟಪಟ್ಟು ತಿನ್ನುವ ತಿಂಡಿ ತಿನಿಸು…..ಮನೆಯಲ್ಲಿ ನನಗೆ ಎಲ್ಲಾ ಸಣ್ಣಪುಟ್ಟ ಕೆಲಸಗಳಲ್ಲೂ ನೆರವಾಗುತ್ತಾಳೆ. ತರಕಾರಿ ಹೆಚ್ಚಿ ಕೊಡುವುದು, ಎಲ್ಲರಿಗೂ ಬಡಿಸುವಾಗ ನನ್ನೊಂದಿಗೆ ಅವಳೂ ಕೈ ಜೋಡಿಸುತ್ತಾಳೆ. ಮುಖ್ಯವಾಗಿ ಹೊರಗಿನ ಹೋಟೆಲ್ ತಿಂಡಿ ತಿನಿಸು ಅವಳಿಗೆ ಅಷ್ಟೇನೂ ಇಷ್ಟವಾಗದು, ಹಾಗೇಂತ ಹೋಗೋದೇ ಇಲ್ಲ ಅಂತಲ್ಲ. ಅಮ್ಮ ನೀನೇ ಮಾಡಿಬಿಡು ಅಂತಿರ್ತಾಳೆ. ಅದರಲ್ಲೂ ನಾನು ಮಾಡುವ ಬಾಳೇಕಾಯಿ ಬಜ್ಜಿ, ಕಾರ್ನ್ ಪರೋಟ ಅವಳಿಗೆ ತುಂಬಾನೇ ಇಷ್ಟ. ಮಾಮೂಲಿ ಅನ್ನ ಸಾರು ಮಾಡುವ ಬದಲು ಆಗಾಗ ಇದನ್ನೇ ಮಾಡಿಬಿಡಮ್ಮ ಅನ್ನುತ್ತಾಳೆ. ಹೆಂಗರುಳು ತುಂಬಾ ಮಿಡಿಯುತ್ತೆ ಅನ್ನುವ ಹಾಗೆ ನನ್ನ ಮಗಳು ನನಗೆ ಈಗಾಗಲೇ ನನ್ನ ಬಲಗೈ ಆಗಿಹೋಗಿದ್ದಾಳೆ!
– ಕುಮುದಾರಾಣಿ, ಬೆಂಗಳೂರು
ಖಾಸಗಿ ಕಂಪನಿಯೊಂದರಲ್ಲಿ ಪರ್ಸನಲ್ ಸೆಕ್ರೆಟರಿಯಾಗಿ ಕೆಲಸ ಮಾಡಿಕೊಂಡು, ಕುಟುಂಬದ ಜವಾಬ್ದಾರಿಯನ್ನೂ ಅಷ್ಟೇ ಸಮರ್ಥವಾಗಿ ನಿರ್ವಹಿಸುತ್ತಿರುವ ಮೈಸೂರಿನ ಬಿ.ಆರ್. ಸುಮನಾ, ಇಲ್ಲಿ 14ರ ಹರೆಯಕ್ಕೆ ಕಾಲಿಟ್ಟು, 9ನೇ ತರಗತಿಯಲ್ಲಿ ಕಲಿಯುತ್ತಿರುವ ತಮ್ಮ ಮಗ ನಿರಂಜನ್ ಬಗ್ಗೆ, ಅವನ ವ್ಯಕ್ತಿತ್ವ ವಿಕಾಸದಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳೋಣ……
ನಿಮ್ಮ ಮತ್ತು ನಿಮ್ಮ ಮಗನ ಬಾಂಧವ್ಯದ ಕುರಿತು ಹೇಳಿ.
ತಾಯಿ ಮತ್ತು ಮಗನ ಬಾಂಧವ್ಯ ಅಂದ್ರೆ ಫ್ರೆಂಡ್, ಫಿಲಾಸಫರ್, ಗೈಡ್ ಇದ್ದಂತೆ ಅಂತಲೇ ನಾನು ಭಾವಿಸುತ್ತೇನೆ. ಯಾವುದೇ ವಿಷಯವಿರಲಿ, ಮಗ ಎಲ್ಲವನ್ನೂ ನನ್ನ ಬಳಿ ಬಂದು ಹಂಚಿಕೊಳ್ಳುತ್ತಾನೆ. ಅದು ಶಾಲೆ, ಪಠ್ಯೇತರ ಚಟುವಟಿಕೆ, ಇನ್ನಿತರ ಯಾವುದೇ ವಿಷಯ ಆಗಿರಬಹುದು. ಯಾವುದೇ ಸಮಸ್ಯೆ ಇದ್ದರೂ ಅದನ್ನು ನನ್ನ ಬಳಿ ವಿವರವಾಗಿ ಚರ್ಚಿಸಿ ಪರಿಹಾರ, ಸಲಹೆ ಪಡೆಯುತ್ತಾನೆ. ಅವನ ವಿದ್ಯಾಭ್ಯಾಸದ ಬಗ್ಗೆ ನಾನೇ ಎಲ್ಲಾ ಗೈಡ್ ಮಾಡ್ತೀನಿ. ಅವನ ತಂದೆ ಸಹ ಇನ್ನಿತರ ಎಲ್ಲಾ ವಿಷಯಗಳಿಗೂ ಮಾರ್ಗದರ್ಶನ ಕೊಡುತ್ತಾರೆ. ಖ್ಯಾತ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆಯಲ್ಲಿರುವ ಅವರಿಗೆ ಬಿಡುವು ಕಡಿಮೆ. ಒಟ್ಟಾರೆ ಮಗನ ವ್ಯಕ್ತಿತ್ವ ವಿಕಾಸಕ್ಕೆ ಇಬ್ಬರ ಸಹಕಾರ ಇದೆ.
ನಿಮ್ಮ ಮಗನ ಜೊತೆ ಯಾವುದಾದರೂ ಒಂದು ಮರೆಯಲಾಗದ ಸನ್ನಿವೇಶದ ಕುರಿತು ಹಂಚಿಕೊಳ್ಳಲು ಬಯಸುವಿರಾ?
ಓ ಖಂಡಿತಾ. ಅವನ ಕುರಿತು ಹೇಳಬೇಕೆಂದರೆ ಡ್ರಾಯಿಂಗ್ ಅವನ ಅಚ್ಚುಮೆಚ್ಚಿನ ಹವ್ಯಾಸ. ಯಾವುದೇ ವಿಶೇಷ ಕ್ಲಾಸಸ್‌ಗೆ ಹೋಗದೆ, ತಾನೇ ಶ್ರದ್ಧೆವಹಿಸಿ ಎಲ್ಲವನ್ನೂ ಕಲಿಯುತ್ತಾನೆ. ಹೀಗಾಗಿ ಅವನು ಅಚ್ಚುಕಟ್ಟಾಗಿ ರಂಗೋಲಿ ಬಿಡುವುದನ್ನೂ ಅಭ್ಯಾಸ ಮಾಡಿಕೊಂಡಿದ್ದಾನೆ. ಹಬ್ಬದ ವಿಶೇಷ ಸಂದರ್ಭದಲ್ಲಿ ತಾನೇ ಅಚ್ಚುಕಟ್ಟಾಗಿ ರಂಗೋಲಿ ಬಿಡಿಸುತ್ತಾನೆ. ನನ್ನ ಗೆಳತಿಯರಂತೂ ಗಂಡುಮಗ ಈ ಕಾಲದಲ್ಲಿ ಹೀಗೆ ತಾಯಿಗೆ ನೆರವಾಗುತ್ತಾ ರಂಗೋಲಿ ಬಿಡಿಸುವುದೆಂದರೆ….! ಎಂದು ಆಶ್ಚರ್ಯಪಡುತ್ತಾರೆ. ಮುಖ್ಯವಾಗಿ ಅವನಿಗೆ ಕಾರ್ ಕ್ರೇಜ್ ಹೆಚ್ಚು. ನಾನಾ ಬಗೆಯ ಕಾರುಗಳನ್ನು ಗಮನಿಸಿಕೊಂಡು ಅದರ ಹಾಗೆಯೇ ಡ್ರಾಯಿಂಗ್ ಬಿಡಿಸಿ, ಪೇಂಟ್ ಮಾಡುತ್ತಾನೆ. ಅದು ಅಪ್ಪಟ ಫೋಟೋ ತರಹವೇ ಕಾಣಿಸುತ್ತದೆ, ಎಂದರೆ ಉತ್ಪ್ರೇಕ್ಷೆ ಎಂದು ಭಾವಿಸಬಾರದು.
ಇನ್ನೊಮ್ಮೆ ಹೀಗಾಯ್ತು. ನಾವು ಒಮ್ಮೆ ಮಡಿಕೇರಿಗೆ ಹೋಗಿದ್ದಾಗ ಅಲ್ಲಿ ಆನೆ ಸಫಾರಿಗೆ ಹೋಗಿದ್ದೆವು. ಆಗ ಇದ್ದಕ್ಕಿದ್ದಂತೆ 2-3 ಆನೆಗಳ ಹಿಂಡಿನ ಮಧ್ಯೆ ನಾವಿಬ್ಬರೇ ಉಳಿಯುವಂತಾಯ್ತು, ನಮ್ಮವರು ಯಾವುದೋ ಕಾರಣಕ್ಕೆ ದೂರ ಇದ್ದರು. ಆಗಂತೂ ನನಗೆ ಜಂಘಾಬಲವೇ ಉಡುಗಿದಂತಾಗಿತ್ತು. ಅವನು ಸಮಯಸ್ಛೂತಿಯಿಂದ ನನಗೆ ಧೈರ್ಯ ಹೇಳಿ, ನನ್ನ ಕೈ ಹಿಡಿದು ಹೇಗೆ ಕರೆತಂದ ಎಂದು ನೆನಸಿಕೊಂಡರೆ ನನಗೆ ಈಗಲೂ ಮೈ ಜುಮ್ ಎನ್ನುತ್ತದೆ.
ನೀವು ಮಾಡುವ ಅಡುಗೆಯಲ್ಲಿ ನಿಮ್ಮ ಮಗ ಇಷ್ಟಪಟ್ಟು ತಿನ್ನು ತಿಂಡಿತಿನಿಸು…..
ಓ…. ಅದು ಯಾಕೆ ಕೇಳ್ತೀರಿ? ಅವನಿಗೆ ಸಾಂಪ್ರದಾಯಿಕ ಅಡುಗೆಗಳಿಗಿಂತ ನಾನು ರುಚಿಯಾಗಿ ತಯಾರಿಸುವ ಸ್ನ್ಯಾಕ್ಸ್ ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಹೊರಗಡೆ ಈಟ್ ಔಟ್ ಅಂದ್ರೆ ಅಂಥ ವಿಶೇಷ ಆಸಕ್ತಿ ಏನೂ ಇಲ್ಲ. ಮುಖ್ಯವಾಗಿ ಆಗಾಗ ಆಲೂ ಪರೋಟ, ಬಟಾಣಿ ಆಲೂ ಸವೋಸಾ ಮಾಡಿಕೊಡಮ್ಮ ಅಂತಾನೆ. ಮನೆಯಲ್ಲಿ ತಯಾರಿಸುವ ಈ ತಿಂಡಿಗಳ ಮುಂದೆ ಯಾವ ಹೋಟೆಲ್ ಮೆನು ಬೇಡ ಅಂತಾನೆ. ಒಟ್ಟಾರೆ ಅಮ್ಮನ ಕೈ ತಿಂಡಿಗಳು ಅವನಿಗೆ ಅಚ್ಚುಮೆಚ್ಚು!
– ಬಿ.ಆರ್. ಸುಮನಾ, ಮೈಸೂರು