ಬೇಸಿಗೆಯಲ್ಲಿ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಹವಾಮಾನದಲ್ಲಿ ಮದುವೆಯಾಗುತ್ತಿದ್ದರೆ ಹೊಳೆಯುವ ತ್ವಚೆ ಪಡೆಯಲು ಈ ಉಪಾಯಗಳು ನಿಮಗೆ ನೆರವಾಗುತ್ತವೆ…..!

ಮದುವೆಯ ದಿನ ಯಾರಿಗಾದರೂ ಅತ್ಯಂತ ವಿಶೇಷ ದಿನವಾಗಿರುತ್ತದೆ. ಈ ಸಂದರ್ಭದಲ್ಲಿ ಪ್ರತಿ ವಧು ಸುಂದರವಾಗಿ ಕಾಣಲು ಬಯಸುತ್ತಾಳೆ. ಮದುವೆಯ ಫೋಟೋಗಳು ಮತ್ತು ನೆನಪುಗಳು ಸದಾ ಇರುತ್ತವೆ. ಆದ್ದರಿಂದಲೇ ಮದುವೆ ಬಟ್ಟೆಗಳು ಹಾಗೂ ಛತ್ರವನ್ನು ಮೊದಲೇ ನಿರ್ಧರಿಸಲಾಗುತ್ತದೆ. ಇವೆಲ್ಲದರ ಮಧ್ಯೆ ನಿಮ್ಮ ತ್ವಚೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದೀರಾ?

ತ್ವಚೆ ಸ್ವಚ್ಛವಾಗಿರುವುದು ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಜನರ ದೃಷ್ಟಿಯಲ್ಲಿ ವ್ಯಕ್ತಿತ್ವನ್ನು ಹೊಳೆಯುವಂತೆ ಮಾಡಲು ಸಹಾಯಕವಾಗುತ್ತದೆ. ಶರೀರದ ರೂಪುರೇಷೆಗಳನ್ನು ಅಲಂಕರಿಸುವುದು (ಬಾಡಿ ಕಾಂಟೂರಿಂಗ್‌), ತ್ವಜೆಯ ಹೊಳಪು (ಸ್ಕಿನ್‌ ಲೈಟ್ನಿಂಗ್‌) ಮತ್ತು ನವೀಕರಣ (ಸ್ಕಿನ್‌ ರಿಜುವಿನೇಶನ್‌), ಕಲೆ ತೆಗೆಯುವುದು (ಸ್ಕಾರ್ಸ್ ರಿಮೂವಿಂಗ್‌), ಮುಖವನ್ನು ಆಕರ್ಷಕಗೊಳಿಸುವುದು (ಫೇಸ್‌ ಲಿಫ್ಟಿಂಗ್‌) ಲೇಸರ್‌ ಚಿಕಿತ್ಸೆ, ಡರ್ಮಲ್ ಫಿಲ್ಲರ್ಸ್ ನಂತಹ ವಿಭಿನ್ನ ಚಿಕಿತ್ಸೆಗಳು ನಿಮ್ಮ ತ್ವಚೆ ಹಾಗೂ ಶರೀರದಲ್ಲಿ ಮತ್ತೆ ಜೀವ ತುಂಬುತ್ತವೆ.

ಈ ಚಿಕಿತ್ಸೆಗಳಿಂದ ಅತ್ಯಂತ ದೊಡ್ಡ ಲಾಭವೆಂದರೆ, ಅವು ಮೊಡವೆಗಳು, ಕೂದಲು ಉದುರುವುದು, ಬ್ಲ್ಯಾಕ್‌ಹೆಡ್ಸ್, ಪಿಗ್ಮೆಂಟೇಶನ್‌, ಸುಕ್ಕುಗಳು ಮತ್ತು ಕಲೆಗಳನ್ನು ತಡೆಯುತ್ತವೆ. ಈ ಫೇಶಿಯಲ್ ಚಿಕಿತ್ಸೆ ಕಳೆದುಹೋಗಿದ್ದ ಮುಖದ ಕಾಂತಿಯನ್ನು ವಾಪಸ್‌ ತರುತ್ತದೆ.

ಒಂದು ಬ್ರೈಡಲ್ ಪ್ಯಾಕೇಜ್‌ ನಿಮ್ಮ ತ್ವಚೆಯ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲಿ ಮದುವೆಯ ಸಂದರ್ಭದಲ್ಲಿ ನಿಮ್ಮ ತ್ವಚೆಯ ಸೌಂದರ್ಯಕ್ಕೆ ಬೇಕಾದುದೆಲ್ಲ ಇರುತ್ತದೆ.

ಡಾ. ನರೇಶ್‌ ಪ್ರಕಾರ, ನೀವು ಸ್ಕಿನ್‌ ಟ್ರೀಟ್‌ಮೆಂಟ್‌ನ ಪ್ಲ್ಯಾನ್‌ ಮಾಡುತ್ತಿದ್ದರೆ ಆ ವಿಶೇಷ ಸಂದರ್ಭಕ್ಕೆ 6 ತಿಂಗಳು ಮೊದಲಿನಿಂದಲೇ ತಯಾರಿ ಆರಂಭಿಸಬೇಕು. ನಮ್ಮಲ್ಲಿ ಹೆಚ್ಚಿನ ವಧುಗಳು ಮೆಸೋಥೆರಪಿ, ಫುಲ್ ಬಾಡಿ ಪಾಲಿಶಿಂಗ್‌, ನಾನ್‌ ಸರ್ಜಿಕಲ್ ನೋಸ್‌ ಕರೆಕ್ಷನ್‌, ಹೈಡ್ರಾಫೇಶಿಯಲ್ ಇತ್ಯಾದಿಗಳಿಗೆ ಬರುತ್ತಾರೆ. ಅವನ್ನು `ಸೆಲೆಬ್ರಿಟಿ ಟ್ರೀಟ್‌ಮೆಂಟ್‌’ ಎಂದೂ ಕರೆಯುತ್ತಾರೆ.

5 ಸಮ್ಮರ್‌ ಸ್ಕಿನ್‌ ಪ್ರಾಬ್ಲಮ್ಸ್

ಮದುವೆಯ ಸಿದ್ಧತೆಗಾಗಿ ನೀವು ಫಿಲ್ಲರ್ಸ್‌ ಮತ್ತು ಬೊಟಾಕ್ಸ್ ಬಗ್ಗೆ ಯೋಚಿಸುತ್ತಿದ್ದರೆ ಅವನ್ನು ಸಮಯವಿದ್ದಾಗ ಮುಂಚೆಯೇ ಮಾಡಿಸಿಕೊಳ್ಳಬೇಕು. ಬೊಟಾಕ್ಸ್ ನ ಪ್ರಕ್ರಿಯೆ ಪೂರ್ತಿಯಾಗಲು 3-4 ತಿಂಗಳ ಸಮಯ ಬೇಕು. ಸುಕ್ಕುಗಳನ್ನು ತೆಗೆಯಲು ಇದು ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಇದು ನಿಮ್ಮ ಮುಖದ ಮಾಂಸಖಂಡಗಳನ್ನು ನುಣುಪಾಗಿಸಿ ಅವುಗಳಲ್ಲಿ ಜೀವ ತುಂಬುತ್ತದೆ.

ಒಂದುವೇಳೆ ನಿಮ್ಮ ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಅವುಗಳ ಚಿಕಿತ್ಸೆಗೆ ಯಾರಾದರೂ ತ್ವಚಾ ರೋಗ ತಜ್ಞರಿಂದ ಸಲಹೆ ಪಡೆಯಿರಿ. ಲೇಸರ್‌ ಚಿಕಿತ್ಸೆ, ಫೋಟೋ ಫೇಶಿಯಲ್ಸ್, ಪ್ಯಾಡ್ಸ್ ಮತ್ತು ಕ್ರೀಂನಂತಹ ಉತ್ಪನ್ನಗಳು ತ್ವಚೆಯಲ್ಲಿ ಹೊಳಪು ತರುತ್ತವೆ.

ಒಂದು ವೇಳೆ ನಿಮ್ಮ ಮುಖ ಹಾಗೂ ಶರೀರದಲ್ಲಿ ಹೆಚ್ಚು ಕೂದಲಿದ್ದರೆ ಹಾಗೂ ನೀವು ಲೇಸರ್‌ ಹೇರ್‌ ರಿಮೂವರ್‌ ಚಿಕಿತ್ಸೆ ಮಾಡಿಸಲು ಇಚ್ಛಿಸುತ್ತಿದ್ದರೆ, ಅದನ್ನು ಮದುವೆಗೆ 6 ತಿಂಗಳ ಮೊದಲು ಮಾಡಿಸುವ ಅಗತ್ಯವಿದೆ. ಪರಿಸ್ಥಿತಿಗೆ ಅನುಗುಣವಾಗಿ ಇದರ ಚಿಕಿತ್ಸೆಗೆ ಹಲವಾರು ಬಾರಿ ಹೋಗಬೇಕು.

beauty

ಬಾಡಿ ಕಾಂಟೂರಿಂಗ್‌ನಲ್ಲಿ ನಿಮ್ಮ ಶರೀರದ ತೂಕ ಮತ್ತು ಕೊಬ್ಬನ್ನು ಕಡಿಮೆ ಮಾಡಿ ಶರೀರವನ್ನು ಸುಂದರವಾಗಿ ಮಾಡುತ್ತಾರೆ. ಅದಕ್ಕಾಗಿ ನೀವು 3-4 ತಿಂಗಳ ಮೊದಲೇ ಯೋಜನೆ ಮಾಡಿ.

ದಿನ ತ್ವಚೆಯನ್ನು ಸ್ವಚ್ಚಗೊಳಿಸಿ ಎಕ್ಸ್ ಫೋಲಿಯೇಟ್‌ ಮತ್ತು ಮಾಯಿಶ್ಚರೈಸ್‌ ಮಾಡಿ. ಇಂದು ಎಲ್ಲ ರೀತಿಯ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಅದರಿಂದ ನಮ್ಮ ತ್ವಚೆ ತನ್ನ ಪ್ರಾಕೃತಿಕ ಹೊಳಪನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಪ್ರೀ ಬ್ರೈಡಲ್ ಪ್ರಕ್ರಿಯೆ ವಾಸ್ತವದಲ್ಲಿ ಬಹಳ ಅಗತ್ಯವಾಗಿದೆ.

ಪ್ರೀ ಬ್ರೈಡಲ್ ಪ್ರಕ್ರಿಯೆ ಅಂದರೇನು?

ಇದು ಮೂಲರೂಪದಲ್ಲಿ ಮದುವೆಗೆ ಮೊದಲು ಮಾಡಿಸುವ ತ್ವಚೆಯ ಸಂಪೂರ್ಣ ರಕ್ಷಣೆಯ ಪ್ರಕ್ರಿಯೆಯಾಗಿದೆ. ಇದನ್ನು 1 ಇಡೀ ದಿನ ಸ್ಪಾನಲ್ಲಿ ಕಳೆದು ಅಥವಾ 4 ತಿಂಗಳ ಸಂಪೂರ್ಣ ದಿನಚರಿಯನ್ನು ನಮ್ಮದಾಗಿಸಿಕೊಂಡು ಮಾಡಲಾಗುತ್ತದೆ. ಒಂದು ವೇಳೆ ನೀವು ಮದುವೆಗೆ ಕೆಲವು ದಿನಗಳ ಮೊದಲು ಇವೆಲ್ಲವನ್ನೂ 1 ದಿನದಲ್ಲಿ ಮುಗಿಸುವಂತಿದ್ದರೆ ಈ ಪ್ರಕ್ರಿಯೆಗಳಿವೆ :

ಮೆನಿಕ್ಯೂರ್‌, ಪೆಡಿಕ್ಯೂರ್‌, ಫೇಶಿಯಲ್, ವ್ಯಾಕ್ಸಿಂಗ್‌, ಥ್ರೆಡಿಂಗ್‌, ಹೇರ್‌ ಸ್ಪಾ, ಬಾಡಿ ಪಾಲಿಶ್‌, ಬಾಡಿ ಮಾಲಿಶ್‌. ಇವೆಲ್ಲವುಗಳ ನಂತರ ಸಾಧ್ಯವಾದರೆ ನೀವು ಪ್ರೀ ಬ್ರೈಡಲ್ ಬಾಥ್‌ ಕೂಡ ಆರಿಸಿಕೊಳ್ಳಬಹುದು. ಅದರಲ್ಲಿ ಗುಲಾಬಿ ಹೂವಿನ ದಳಗಳನ್ನು ಉಯೋಗಿಸಬಹುದು.

ಅದಲ್ಲದೆ, ಒಂದು ವೇಳೆ ನೀವು 2, 3 ಅಥವಾ 4 ತಿಂಗಳಿನ ಪ್ರೀ ಬ್ರೈಡಲ್ ನ ಸಂಪೂರ್ಣ ಪ್ರಕ್ರಿಯೆ ಮಾಡಿಸುತ್ತಿದ್ದರೆ ಪ್ರತಿ ತಿಂಗಳೂ ಕೆಳಗಿನ ಪ್ರಕ್ರಿಯೆಗಳನ್ನು ಮಾಡಿಸುತ್ತಿರಬೇಕು.

ಮೆನಿಕ್ಯೂರ್‌, ಪೆಡಿಕ್ಯೂರ್‌, ಫೇಶಿಯಲ್ (ತ್ವಚೆಯ ಸ್ಥಿತಿಗೆ ತಕ್ಕಂತೆ), ವ್ಯಾಕ್ಸಿಂಗ್‌, ಹೇರ್‌ ಕೇರ್‌.

ಒಂದುವೇಳೆ ಇವೆಲ್ಲ ಪ್ರಕ್ರಿಯೆಗಳು ನಿಮ್ಮ ಬಜೆಟ್‌ ಮೀರುತ್ತದೆ ಎಂದರೆ ಮದುವೆಗೆ ಮುಂಚೆ ಕನಿಷ್ಠ 1 ಬಾರಿ ಪ್ರೀ ಬ್ರೈಡಲ್ ಅಗತ್ಯವಾಗಿ ಮಾಡಿಸಿ.

ಕಂಗಳ ಕಾಡಿಸದೆ ಕಾಪಾಡಿಕೊಳ್ಳಿ

ಪ್ರಾಕೃತಿಕ ಹೊಳಪು ಹೀಗೆ ತನ್ನಿ :

ಸ್ಟೆಪ್‌ 1 ದಿನ 2 ಲೀಟರ್‌ ನೀರು ಕುಡಿಯಿರಿ : ಇದು ಶರೀರದಿಂದ ವಿಷಯುಕ್ತ ಅಂಶಗಳನ್ನು ಹೊರಹಾಕುತ್ತದೆ.

ಸ್ಟೆಪ್‌ 2 ದಿನ ಎಳನೀರು ಕುಡಿಯಿರಿ : ಇದರಿಂದ ನಿಮ್ಮ ತ್ವಚೆ ಒಳಗಿನಿಂದಲೇ ಹೊಳೆಯುತ್ತದೆ. ನಿಮ್ಮ ತ್ವಚೆಯನ್ನು ಆರೋಗ್ಯವಾಗಿಡಲು ಇದು ಒಳ್ಳೆಯ ಅಭ್ಯಾಸ. ದಿನ 1 ಎಳನೀರು ಖರೀದಿಸುವುದು ಸಾಧ್ಯವಿಲ್ಲದಿದ್ದರೆ ವಾರಕ್ಕೆರಡು ಬಾರಿಯಾದರೂ ಕುಡಿಯಿರಿ.

ಸ್ಟೆಪ್‌ 3 ಮಲ್ಟಿ ವಿಟಮಿನ್‌ ಟ್ಯಾಬ್ಲೆಟ್ಸ್ ತೆಗೆದುಕೊಳ್ಳಿ : ಯಾವುದೇ ಔಷಧ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಆದರೆ ಮದುವೆಗೆ ಕೆಲವು ತಿಂಗಳು ಮೊದಲು ಮಲ್ಟಿ ವಿಟಮಿನ್‌ ಟ್ಯಾಬ್ಲೆಟ್ಸ್ ತೆಗೆದುಕೊಂಡರೆ ಶರೀರಕ್ಕೆ ಕಾಂತಿ ಕೊಡುತ್ತದೆ.

ಸ್ಟೆಪ್‌ 4 ನಿಯಮಿತ ವ್ಯಾಯಾಮ ಮತ್ತು ಪೌಷ್ಟಿಕ ಆಹಾರ : ಜಂಕ್‌ ಫುಡ್‌ ಬಿಟ್ಟುಬಿಡಿ. ವ್ಯಾಯಾಮ ಶರೀರದಿಂದ ವಿಷಯುಕ್ತ ಪದಾರ್ಥಗಳನ್ನು ಹೊರಹಾಕುತ್ತದೆ. ಅದರ ನೇರ ಪ್ರಭಾವ ತ್ವಚೆಯ ಮೇಲೆ ಬೀಳುತ್ತದೆ.

ಸ್ಟೆಪ್‌ 5 ಖುಷಿಯಾಗಿರಿ : ಆರೋಗ್ಯಕರ ದೇಹವಿದ್ದರೂ ಅದರೊಂದಿಗೆ ಮನಸ್ಸು ಖುಷಿಯಾಗಿಲ್ಲದಿದ್ದರೆ ಅದು ಎಂದೂ ಸುಂದರ ಮುಖದ ದ್ಯೋತಕವಾಗಿರುವುದಿಲ್ಲ. ವ್ಯಾಯಾಮ ಮಾಡುವುದರಿಂದ ನಿಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಏಕೆಂದರೆ ಖುಷಿಯಾಗಿಡುವ ಎಲ್ಲ ಹಾರ್ವೋನುಗಳೂ ವ್ಯಾಯಾಮ ಮಾಡುವಾಗ ಮುಕ್ತವಾಗುತ್ತವೆ. ನೀವು ಒಳಗಿನಿಂದ ಚೆನ್ನಾಗಿದ್ದೀರೆಂದು ಅನ್ನಿಸಬೇಕಾದರೆ ಬೇರೆ ಪ್ರಯತ್ನಗಳನ್ನೂ ಮಾಡುತ್ತಿರಬೇಕು. ನೀವು ಮದುವೆ ಆಗುತ್ತಿರುವುದರಿಂದ ಹೀಗೆ ಮಾಡುವುದು ಇನ್ನೂ ಅಗತ್ಯ.

ತ್ವಚೆಯ ರಕ್ಷಣೆಗೆ ಇತರ ಉಪಾಯಗಳು

ಮುಖವನ್ನು ದಿನಕ್ಕೆರಡು ಬಾರಿ ಸ್ವಚ್ಛಗೊಳಿಸಿ : ರಾತ್ರಿ  ಮಲಗುವ ಮೊದಲು ಮುಖವನ್ನು ಅಗತ್ಯವಾಗಿ ತೊಳೆಯಿರಿ. ಮೇಕಪ್‌ನೊಂದಿಗೆ ಮಲಗುವುದು ಹಾನಿಕಾರಕ. ಮೇಕಪ್‌ನ್ನು ಚೆನ್ನಾಗಿ ತೊಳೆದು ತೆಗೆದುಹಾಕಿ. ಕೆಲವು ಮೇಕಪ್‌ಗಳು ತ್ವಚೆಯ ಮೇಲೆ ತೈಲೀಯ ಅಂಶಗಳನ್ನು ಬಿಡುತ್ತವೆ. ಅವನ್ನು ಎಷ್ಟು ಬಾರಿ ತೊಳೆದರೂ ಸ್ವಚ್ಛವಾಗುವುದಿಲ್ಲ.

ಮಾಯಿಶ್ಚರೈಸರ್‌ ಉಪಯೋಗಿಸಿ : ಒಬ್ಬ ವಧು ದಿನ 2 ಬಾರಿ ಮಾಯಿಶ್ಚರೈಸರ್‌ ಉಪಯೋಗಿಸಬೇಕು. ಅದರಿಂದ ಅವಳ ಮೇಕಪ್‌ ಮದುವೆಯ ದಿನದವರೆಗೆ ಚೆನ್ನಾಗಿರುತ್ತದೆ. ಇದು ಸಣ್ಣ ಭಾಗಗಳಲ್ಲಿ ಬೆರೆಯುವುದಿಲ್ಲ. ಸಹಜವಾಗಿ ಹರಡಿಕೊಳ್ಳುತ್ತದೆ ಹಾಗೂ ಯಾವುದೇ ಪದರವನ್ನು ಮಾಡುವುದಿಲ್ಲ. 1 ತಿಂಗಳವರೆಗೆ ಹೀಗೆಯೇ ಮಾಡಿ.

ಸನ್‌ಸ್ಕ್ರೀನ್‌ ಲೋಶನ್‌ ತತ್ಪರತೆಯಿಂದ ಹಚ್ಚಿ : ಬಿಸಿಲಿನಲ್ಲಿ ಹೊರಗೆ ಹೋಗುವ ಮೊದಲು ಸನ್‌ಸ್ಕ್ರೀನ್‌ ಲೋಶನ್‌ನ್ನು ಅಗತ್ಯವಾಗಿ ಉಪಯೋಗಿಸಿ. 30 ರಿಂದ 50 ಎಸ್‌ಪಿಎಫ್‌ನ ಪ್ರಮಾಣ ಸಾಕಷ್ಟಾಗುತ್ತದೆ. ನೀವು ಹೆಚ್ಚು ಕಾಲ ಬಿಸಿಲಿನಲ್ಲಿ ಇರಬೇಕಾಗಿದ್ದಲ್ಲಿ ಪ್ರತಿ 2 ಗಂಟೆಗೊಮ್ಮೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

ಪ್ರತಿ ವಾರ ಡಿವೈನ್ ಚಿಕಿತ್ಸೆ ತೆಗೆದುಕೊಳ್ಳಿ : ವಾರಕ್ಕೊಮ್ಮೆ ಮನೆಯಲ್ಲಿಯೇ ಮುಖಕ್ಕೆ ಫೇಸ್‌ಪ್ಯಾಕ್‌ ಹಚ್ಚಿ. ತೈಲೀಯ ತ್ವಚೆಗಾಗಿ ಮುಲ್ತಾನಿ ಮಿಟ್ಟಿಯ ಫೇಸ್‌ಪ್ಯಾಕ್‌ ಮತ್ತು ಶುಷ್ಕ ತ್ವಚೆಗೆ ಜೇನುತುಪ್ಪ ಆಧಾರಿತ ಪ್ಯಾಕ್‌ ಉಪಯೋಗಿಸಿ.

ತ್ವಚೆಯ ತಜ್ಞರೊಂದಿಗೆ ಸಮಾಲೋಚಿಸಿ : ಒಂದು ವೇಳೆ ನೀವು ಮೊಡವೆಗಳು ಅಥವಾ ತ್ವಚೆಯ ಬಣ್ಣದಲ್ಲಿ ಬದಲಾವಣೆ ಇತ್ಯಾದಿ ಸಮಸ್ಯೆ ಎದುರಿಸುತ್ತಿದ್ದರೆ ಮದುವೆಗೆ 3 ತಿಂಗಳು ಮೊದಲು ತ್ವಚೆಯ ತಜ್ಞರನ್ನು ಸಂಪರ್ಕಿಸಿ.

ಫೇಶಿಯಲ್ ನ ಸಹಾಯ ಪಡೆಯಿರಿ : ನಿಮ್ಮ ತ್ವಚೆಯ ತಜ್ಞರು ಇದನ್ನು ಬೇಡವೆನ್ನುವವರೆಗೆ ನೀವು ಕೆಲವು ಫೇಶಿಯಲ್ ಗಳನ್ನು ಮಾಡಿಸಿಕೊಳ್ಳಬೇಕು. ಮದುವೆಗೆ ಮೊದಲು 2-3 ಫೇಶಿಯಲ್ ಸಾಕು. ಫೇಶಿಯಲ್ ನ್ನು ಮದುವೆಯ ಮೊದಲ ಕಾರ್ಯಕ್ರಮಕ್ಕೆ ಕನಿಷ್ಠ 48 ಗಂಟೆಗಳ ಮೊದಲು ಮಾಡಿಸಿಕೊಳ್ಳಬೇಕು. ಒಂದುವೇಳೆ ನೀವು ಮೊದಲ ಬಾರಿ ಫೇಶಿಯಲ್ ಮಾಡಿಸಿಕೊಳ್ಳುತ್ತಿದ್ದರೆ, ಮದುವೆಗೆ 1 ತಿಂಗಳ ಮೊದಲಿಗೆ ಬದಲು 2-3 ತಿಂಗಳು ಮೊದಲು ಮಾಡಿಸಿ. ಏಕೆಂದರೆ ಅದು ನಿಮ್ಮ ತ್ವಚೆಗೆ ಒಳ್ಳೆಯದೋ ಇಲ್ಲವೋ ತಿಳಿಯಬೇಕು.

ಕಡೆಯ 30 ದಿನಗಳಲ್ಲಿ ಹೊಸದನ್ನು ಪ್ರಯತ್ನಿಸಬೇಡಿ : ಮದುವೆ ತೀರ ಹತ್ತಿರವಿರುವಾಗ ಯಾವುದಾದರೂ ಹೊಸ ಉತ್ಪನ್ನವನ್ನು ಪ್ರಯತ್ನಿಸುವುದು ಸರಿಯಲ್ಲ. ಆರೋಗ್ಯಕರ ದಿನಚರಿ, ಆರೋಗ್ಯಕರ ಆಹಾರ ಮತ್ತು 8 ಗಂಟೆಗಳ ನಿದ್ದೆ ನಿಮಗೆ ಅತ್ಯಗತ್ಯ.

– ಪಿ. ಸುಕನ್ಯಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ